ಚಿಲುಮೆ
ಡಾ. ಮೊಗಳ್ಳಿ ಗಣೇಶ್
ಕಗ್ಗತ್ತಲು ಕುಣಿಯುತ್ತಿತ್ತು.
ಕಾರ್ಮೋಡಗಳು ಕವಿಯುತ್ತಿದ್ದವು. ಅನಾದಿಕಾಲದ ಗಾಳಿಯೂ
ಕ್ರೂರವಾಗಿ ಬೀಸುತ್ತಿತ್ತು. ಗಿಡಮರಗಳು ಚಡಪಡಿಸುತ್ತಿದ್ದವು. ಆ
ರೈಲು ನಿಲ್ದಾಣದ ದೀಪಗಳು ದಟ್ಟವಾದ ಕತ್ತಲೆಯ ಬಾಯಲ್ಲಿ ಮಿಸುಕಾಡುತ್ತಿದ್ದವು.
ಕಾಡಿನ ಯಾವುದೋ ಮಧ್ಯದಲ್ಲಿ ಕಣಿವೆಗೆ ಹೊಂದಿಕೊಂಡಂತೆ
ಒಂಟಿಯಾಗಿದ್ದ ರೈಲುನಿಲ್ದಾಣವು ನಿಗೂಢತೆಯನ್ನೆ ಹೊದ್ದುಕೊಂಡು ಮಲಗಿತ್ತು.
ಬ್ರಿಟಿಷರ ಕಾಲದ ರೈಲು ನಿಲ್ದಾಣವದು. ಒಂದು ಕಾಲಕ್ಕೆ ಪಶ್ಚಿಮ
ಘಟ್ಟಗಳ ಸಂಪತ್ತನ್ನು ಹಗಲೂ ರಾತ್ರಿ ನಿರಂತರವಾಗಿ ಸಾಗಿಸಲು
ಕೊಂಡಿಯಾಗಿದ್ದ ತಾಣವಾಗಿತ್ತು. ಈಗ ಆ ರೈಲು ನಿಲ್ದಾಣ ಮುಪ್ಪಿಡಿದು
ಕೂತಿತ್ತು. ಅದಕ್ಕೆ ಅಂತಹ ಯಾವ ಅದ್ದೂರಿ ಆಡಂಬರವಿರಲಿಲ್ಲ. ಎಷ್ಟೇ
ಆಗಲಿ ಕಳ್ಳದಾರಿಯದು. ರಾತ್ರಿಯಲ್ಲಿ ಮಾತ್ರವೇ ಆ ರೈಲು ನಿಲ್ದಾಣದ
ಹಳ್ಳಿಗಳಿಗೆ ಜೀವ ಬರುತಿದ್ದುದು. ಹಗಲಿನ ಯಾವುದೊ ಹೊತ್ತಲ್ಲಿ
ಗೂಡ್ಸ್ ಗಾಡಿಯೊಂದು ಮೂರು ಬಾರಿ ಗತಕಾಲದ ನೆನಪಿನಲ್ಲಿ
ಒಡಾಡುವುದುಂಟು. ರೈಲು ನಿಲ್ದಾಣವೆಂದರೆ ಸ್ಟೇಷನ್ ಮಾಸ್ತರು ತನ್ನ
ಸಹಾಯಕರೊಡನೆ ಬಂದು ಹೋಗುವ ರೈಲುಗಳಿಗೆ ಸಿಗ್ನಲ್
ಕೊಡುವುದು ಮಾತ್ರವಾಗಿತ್ತು. ಅಪರೂಪಕ್ಕೆ ಜನ
ಕಾಣಿಸಿಕೊಳ್ಳುತ್ತಿದ್ದರು. ಅಂತಹ ಕಣಿವೆ ದಾರಿಯ ರೈಲು ನಿಲ್ದಾಣವು
ಯಾವತ್ತೂ ಭಯ ಹುಟ್ಟಿಸುತ್ತಿತ್ತು. ಬ್ರಿಟಿಷರ ಕಾಲದಲ್ಲಿ, ಇದೇ ನಿಲ್ದಾಣದಲ್ಲಿ
ಅನೇಕರು ರೈಲಿಗೆ ಸಿಕ್ಕಿಸತ್ತು, ಕಾಡುದೆವ್ವಗಳಾಗಿದ್ದಾರೆಂದು
ಹೇಳಲಾಗುತ್ತಿತ್ತು. ರಾತ್ರೋರಾತ್ರಿ ಬಂದು ಮಾಯವಾಗುವ
ರೈಲುಗಳು ಏನನ್ನು ಹಾಗೆ ಸಾಗಿಸುತ್ತವೆ ಎಂಬುದರ ಬಗೆಗೂ ಅನೇಕ
ಕತೆಗಳಿದ್ದವು.
ಬೆಟ್ಟಗಳ ಕಣಿವೆ ದಾರಿಯನ್ನು ಹಾವಿನಂತೆ
ಯಾವುದೊ ಒಂದು ರೈಲು ಸುತ್ತಿಕೊಂಡು ಆಗಾಗ ವಿಕಾರವಾಗಿ
ಕೂಗಿಕೊಂಡು ದೂರದಿಂದ ಬರುತ್ತಿರುವ ಸದ್ದು ಕೇಳಿಸುತ್ತಿತ್ತು. ಆಕಾಶದ
ಮೂಲೆಯಲ್ಲಿ ಮಿಂಚುಗಳು ಕಣ್ಣು ಮಿಟುಕಿಸುತ್ತಿದ್ದವು. ಮಳೆ
ಮೋಡಗಳು ಬೆಟ್ಟಗಳನ್ನು ಮುತ್ತಿಕ್ಕಿ ಕಣಿವೆಯ ಕಡೆಗೆ
ಜಾರುತ್ತಿದ್ದವು. ರೈಲಿನ ಸದ್ದು ಕಣಿವೆಗಳಲ್ಲಿ ಪ್ರತಿಧ್ವನಿಸುತ್ತ
ಕಡಿದಾದ ಪರ್ವತ ಶ್ರೇಣಿಯ ಅಂಚಿನ ದಾರಿಯು ಕಂಪಿಸುತ್ತಿತ್ತು. ಆ
ರೈಲಿನಲ್ಲಿ ತಾಯಿಯೊಬ್ಬಳು ತನ್ನ ಮೂರು ಮಕ್ಕಳನ್ನೂ
ತಬ್ಬಿಕೊಂಡು ಬೋಗಿಯ ಮೂಲೆಯಲ್ಲಿ ಹೊರಗಿನ ಕಾರ್ಗತ್ತಲನ್ನೇ
ದಿಟ್ಟಿಸಿ ನೋಡುತ್ತಿದ್ದಳು. ಕತ್ತಲು ರೈಲಿಗಿಂತಲೂ ವೇಗವಾಗಿ ರೆಕ್ಕೆ
ಬೀಸಿಕೊಂಡು ಅವಳನ್ನೇ ಹಿಂಬಾಲಿಸುತ್ತ ಬರುತ್ತಿತ್ತು. ಅವಳ ಮೂರು
ಮಕ್ಕಳಲ್ಲಿ ಮೊದಲನೆಯವಳು ಎಂಟು ವರ್ಷದವಳು. ಎರಡನೆಯ
ಮಗು ನಾಲ್ಕು ವರ್ಷದ ಗಂಡುಮಗು. ಮೂರನೆಯದು ಇನ್ನೂ
ಕೈಗೂಸು; ಹಾಲಿಗಾಗಿ ಹಾತೊರೆದು ತಾಯ ಮೊಲೆಯನ್ನೇ
ಕಚ್ಚಿಕೊಂಡು ಅವಳ ಕಿಬ್ಬೊಟ್ಟೆಗೆ ಆತುಕೊಂಡಿರುವಂತದು. ಆ ತಾಯಿಗೂ
ಮಕ್ಕಳಿಗೂ ಒಂದು ಆಕಸ್ಮಿಕ ಕೊಂಡಿಯಂತಿದ್ದ ಮನುಷ್ಯ ಅವರ ಪಕ್ಕದಲ್ಲೇ
ಕೂತಿದ್ದ. ಲೆಕ್ಕದಲ್ಲಿ ಆ ಹೆಂಗಸಿಗೆ ಆತ ಗಂಡುಮಗುವಿಗೆ ತಂದೆ.
ರೈಲು ಭೋರ್ಗರೆದು ಕೂಗು ಹಾಕುತ್ತಿತ್ತು. ಅದರ ಕೂಗಿನಲ್ಲಿ ಹಾಲಿಗಾಗಿ
ಹಂಬಲಿಸುತ್ತಿದ್ದ ಮಗುವಿನ ಸದ್ದು ಕರಗಿ ಹೋಗಿತ್ತು. ಉಳಿದ ಇಬ್ಬರು
ಮ್ಕಕಳು ರೈಲಿನ ಅಲುಗಾಟಕ್ಕೆ ನಿದ್ದೆಯನ್ನು ಹೊಂದಿಸಿಕೊಂಡಿದ್ದರು.
ಅವಳ ಗಂಡ ಕಿಟಕಿಯಲ್ಲಿ ಮುಖವಿಟ್ಟು ತಾವು ಇಳಿದುಕೊಳ್ಳಬೇಕಿರುವ
ನಿಲ್ದಾಣವನ್ನೆ ಹುಡುಕುತ್ತಿದ್ದ. ಆ ಹೆಂಗಸಿಗೆ ಅತ್ತು ಅತ್ತು ಸುಸ್ತಾಗಿತ್ತು.
ಗಂಟಲಲ್ಲಿ ಮಾತುಗಳು ಸಿಕ್ಕಿಕೊಂಡಿದ್ದವು. ಆತ ಮತ್ತೆ ಮತ್ತೆ ಬೀಡಿ ಸೇದುತ್ತ,
ಅಗಾಗ ಕೆಮ್ಮುತ್ತ, ಕ್ಯಾಕರಿಸಿ ಉಗಿಯುತ್ತ ಏನನ್ನೊ ಲೆಕ್ಕ ಹಾಕುತ್ತಿದ್ದ.
ರೈಲು ತಿರುವು ದಾರಿಯಲ್ಲಿ ವೇಗ ಇಳಿದು,
ಯಾವುದೊ ನಿಲ್ದಾಣದಲ್ಲಿ ನಿಲ್ಲಿಸಿ, ಸಿಗ್ನಲ್‌ಗಾಗಿ ಕಾದು ಕರ್ಕಶವಾಗಿ
ಕೂಗುತ್ತ ಮುಂದೆ ಸಾಗುತ್ತಿತ್ತು. ಅಂತಹ ಅಲುಗಾಟದ ನಿದ್ದೆಯಲ್ಲೂ ನಾಲ್ಕು
ವರ್ಷದ ಹುಡುಗನ ಕನಸಿನಲ್ಲಿ ಅಸಂಖ್ಯಾತ ಚಿಟ್ಟೆಗಳು ಕಾಮನ
ಬಿಲ್ಲಿನಂತೆ ಆಕಾಶದಲ್ಲಿ ಹಾರಾಡುತ್ತಿದ್ದವು. ಅವನ್ನು ಹಿಡಿಯಲು ಆತ
ತಾಯ ಸೀರೆಯನ್ನೇ ರೆಕ್ಕೆಯತೆ ಕಟ್ಟಿಕೊಂಡು ಮೇಲೆ ಹಾರಿ ಹೋಗುತ್ತಿದ್ದ.
ಆ ಚಿಟ್ಟೆಗಳೂ ಒಮ್ಮೆಗೇ ಅವನ ಮೈತುಂಬ ಕೂತಂತೆ ಮಾಡಿ; ಹಿಡಿಯಲು
ಕೈ ಇಟ್ಟಂತೆಯೇ ಅವು ಮಾಯವಾಗಿ ಮತ್ತೆಲ್ಲೊ ಕಾಣಿಸಿಕೊಂಡು ಬಾ
ಬಾ ಬಾ ಎಂದು ಕರೆಯುತ್ತಾ ತಮ್ಮ ಬಣ್ಣದ ರೆಕ್ಕೆಗಳಿಂದ ಹುಡುಗನ
ಮೈತುಂಬ ಬಣ್ಣ ಸವರುತ್ತ; ಅವನನ್ನೇ ಹೊತ್ತುಕೊಂಡು ಹಾರಾಡಿ,
ಕೊನೆಗೆ ತಮ್ಮ ರೆಕ್ಕೆಯ ಒಂದೊಂದು ಚೂರನ್ನು ಸೇರಿಸಿ ಅವನ
ಕಂಕುಳಿಗೆ ಅಂಟಿಸಿ ರೆಕ್ಕೆಯಾಗಿಸಿ ಬಾನಂಗಳದಲಿ ಹಿಡಿಯುವಾಟ
ಆಡಿಸುತ್ತಿದ್ದವು. ಕನಸಿನಲ್ಲೇ ಆತ, `ಅಮ್ಮಾ ಬಂದು ಬಿಡಮ್ಮಾ, ಪಾಪೂನ್ನೂ
ಅಕ್ಕನನ್ನೂ ಕರಕೊಂಡು ಮೇಲಕ್ಕೆ ಹಾರಿ ಬಂದುಬಿಡಮ್ಮಾ'. ಈ
ಚಿಟ್ಟೆಗಳ ಜೊತೆ ಕಾಮನ ಬಿಲ್ಲ ಮೇಲೆ ಕೂತು ಆಟ ಆಡೋಣ ಬಂದುಬಿಡಮ್ಮಾ
ಎಂದು ಕೂಗುತ್ತಿದ್ದ.
ರೈಲು ರಭಸವಾಗಿ ಮುನ್ನುಗುತ್ತಿತ್ತು. ಹಸುಗೂಸು
ತಾಯನ್ನ ಕಚ್ಚಿಕೊಂಡೇ ನಿದ್ದೆಯಲ್ಲೂ ದುಃಖಳಿಸುತ್ತಿತ್ತು. ದಿಗಂತದಲ್ಲಿ
ಬೆಳಕಿನ ನೃತ್ಯವಾಡುತ್ತಿದ್ದ ಮಿಂಚು ರೈಲಿನ ಕಿಟಕಿಯಲ್ಲಿ ಬಂದು ಕ್ಷಣ
ಇಣುಕಿ ನೋಡಿ ಮಾಯವಾಗುತ್ತಿತ್ತು. ಭೋರೆಂದು ಬಿರುಗಾಳಿ ರೈಲನ್ನೇ
ತಡೆಯುವಂತೆ ನುಗ್ಗಿ ಬರುತ್ತಿತ್ತು. ಅದರ ರಭಸಕ್ಕೆ ಕಿಟಕಿಯ
ಗಾಜುಗಳು ಚೂರಾಗುತ್ತವೆಯೆನೊ ಎಂದು ಆ ಹೆಂಗಸು ಮಕ್ಕಳನ್ನು
ಮತ್ತಷ್ಟು ಅಪ್ಪಿಕೊಂಡು ಕೂತಳು. ಆಕೆಯ ಗಂಡನಾದ ಆ ಮನುಷ್ಯನನ್ನೆ
ಆ ಕತ್ತಲೆಯಲ್ಲಿ ಬೀಡಿಯ ಕೆಂಪು ಬೆಳಕಿನಲ್ಲಿಯೇ ದಿಟ್ಟಿಸಿದಳು.
ಗಂಡನ ಆಕೃತಿಯು ಭಯ ಹುಟ್ಟಿಸುವಂತ್ತಿತ್ತು. ಹೆಂಡತಿ
ಮಕ್ಕಳನ್ನು ಕಟ್ಟಿಕೊಂಡು ಆತ ಕಳೆದ ರಾತ್ರಿ ಇದೇ ರೈಲು ಹತ್ತಿ ಹೊರಟಾಗ
ತಾವು ಯಾವ ಊರಿಗೆ ಹೋಗುವುದಿದೆ ಎಂಬುದನ್ನೂ ಹೇಳಿರಲಿಲ್ಲ. ಆದರೆ,
ಹೊಸಬದುಕನ್ನು ಹುಡುಕುವೆನೆಂದು ನಂಬಿಸಿ ಕರೆದುಕೊಂಡು ಎಲ್ಲಿಗೊ
ಹೊರಟಿದ್ದ. ಎಲ್ಲಿಗೆ ಎಂಬುದು ಬಹುಶಃ ಆತನಿಗೂ ಖಚಿತವಿರಲಾರದು. ಬದುಕಿನಲ್ಲಿ
ಆ ಹೆಂಗಸು ಅನೇಕ ಹೊಡೆತಗಳನ್ನು ತಿಂದು ನಲುಗಿಹೋಗಿದ್ದಳು.
ಗುಡುಗು ಮಿಂಚುಗಳು ಹೊರಗೆ ಆಕಾಶದಲ್ಲಿ
ಯುದ್ಧ ಹೂಡಿದ್ದವು. ಎಂಟು ವರ್ಷದ ಮಗಳು ಅಪ್ಪ ತಮ್ಮನ್ನು ಹೊರಗೆ
ಕರೆದುಕೊಂಡು ಹೋಗುತ್ತಿದ್ದಾನೆಂದು ಕಲ್ಪಿಸುತ್ತಿದ್ದಳು. ಅಲ್ಲಿ ಅಪ್ಪನದೇ
ಒಂದು ತೋಟವಿದೆಯಂತೆ, ಆ ತೋಟದಲ್ಲಿ ಎಷ್ಟು ಹೂವುಗಳನ್ನೂ
ಕೊಯ್ದರೂ ಅವು ಎಂದೆಂದೂ ಮುಗಿಯುವುದೇ ಇಲ್ಲವಂತೆ, ಅಲ್ಲೇ
ತೋಟದ ಒಳಗೇ ಒಂದು ಚೆಂದದ ಚಿಲುಮೆ ಇದೆಯಂತೆ, ಆ ಚಿಲುಮೆಯ
ನೀರು ಕುಡಿಯಲು ನೂರಾರು ಹಕ್ಕಿಗಳು ಬರುತ್ತವಂತೆ, ಅಲ್ಲದೆ
ಕಲ್ಲು ನೀರು ಕರಗುವ ಹೊತ್ತಿನಲ್ಲಿ ದೇವಲೋಕದ ಪ್ರಾಣಿ-ಪಕ್ಷಿಗಳು
ಬಂದು ಈಜಾಡಿ ಹೋಗುತ್ತವಂತೆ, ಅಂತಹ ತೋಟದಲ್ಲಿ ಉಯ್ಯಾಲೆ
ಕಟ್ಟಿಕೊಂಡು ಹಸಿವಾದಾಗ ಮರದ ಹಣ್ಣುಗಳ ತಿಂದುಕೊಂಡು
ಯಾವಾಗಲೂ ಆಡುತ್ತಲೇ ಇರಬಹುದೆಂದು ಸ್ವರ್ಗವನ್ನೇ
ಕಟ್ಟಿಕೊಳ್ಳುತ್ತಿದ್ದಳು.
ಆಕಾಶ ಅವಳ ಕಲ್ಪನೆಯನ್ನು ಕಂಡು
ಗಹಗಹಿಸಿ ನಗುತ್ತಿತ್ತು. ಹೆಪ್ಪುಗಟ್ಟಿದ ಮೋಡಗಳು ಡಿಕ್ಕಿ
ಹೊಡೆದುಕೊಳ್ಳಲು ನುಗ್ಗಿ ಬರುತ್ತಿದ್ದವು. ಆಕಾಶವೇ ತೂತಾದಂತೆ
ಮಳೆ ಸುರಿಯತೊಡಗಿತು. ಹೆಂಗಸು ಗಂಡ ಎಂಬ ಆ ಪ್ರಾಣಿಯನ್ನು
ಹತ್ತಿರಕ್ಕೆ ಕರೆದಳು. ಆತ ಬೀಡಿ ಸೇದುವುದರಲ್ಲೇ ಉರಿದು ಹೋಗುತ್ತಿದ್ದ.
ಮದವೇರಿ ಮಳೆ ಧೋ ಎಂದು ನರ್ತಿಸತೊಡಗಿ ಮಿಂಚು
ಗುಡುಗುಗಳ ತಾಳ ಮೇಳದಲ್ಲಿ ಬೊಬ್ಬಿರಿಯತೊಡಗಿತು. ಆ ಮಳೆಗೆ
ಹೆದರಿದಂತೆ ರೈಲು ಇದ್ದಕ್ಕಿದ್ದಂತೆ ಸುರಂಗ ಮಾರ್ಗದಲ್ಲಿ
ನುಸುಳಿತು. ಗವ್ ಎಂದು ಕಿವಿಗಳು ಬಂದಾದವು. ಭೂಗರ್ಭದಲ್ಲಿ
ಕಳೆದು ಹೋಗುತ್ತಿರುವಂತೆ ಭಾಸವಾಗಿ ಮತ್ತಷ್ಟು ಭೀತಿ ಹೆಂಗಸಿನ
ಮೇಲೆ ಸವಾರಿ ಮಾಡಿತು.
ಇನ್ನೂ ಎಷ್ಟು ದೂರವಿದೆಯೊ ತಂದೆಯ ಊರು;
ರೈಲು ಇಳಿದ ಕುಡಲೆ ಹತ್ತು ಹೆಜ್ಜೆ ಹಾಕಿದ ಮೇಲೆ ತಂದೆಯ ಊರು
ಸಿಕ್ಕಿಬಿಡುತ್ತದೆ; ಆಗ ಅಲ್ಲಿ ತಾನು ಎಂದೆಂದೂ ಮುಗಿಯದ ಚಿಲುಮೆಯ
ನೀರಲ್ಲಿ ಹಕ್ಕಿಗಳ ಜೊತೆ ಆಟ ಆಡಬೇಕೆಂದು ಮಗಳು ಆತುರ
ಪಡುತ್ತಿದ್ದಳು.
ಸುರಂಗ ದಾರಿಯನ್ನು ದಾಟಿ ರೈಲು ಈಗ ಪ್ರಪಾತಕ್ಕೆ
ಅಂಟಿಕೊಂಡಿದ್ದ ಕಡಿದಾದ ಪರ್ವತದ ಕಿರುದಾರಿಯಲ್ಲಿ ನಿಧಾನವಾಗಿ ಚಲಿಸುತ್ತಿತ್ತು.
ಮಳೆ ಸುರಿಯುತ್ತಲೇ ಇತ್ತು. ಸಿಡಿಲು ಆ ಬೋಗಿಯ ಒಳಕ್ಕೆ ನುಗ್ಗಿ ಬರಲು
ಹೊಂಚು ಹಾಕುತ್ತಿತ್ತು. ಅದರ ದಟ್ಟವಾದ ಕಣ್ಣು ಕೋರೈಸುವ
ಬೆಳಕಿನಲ್ಲಿ ಮಹಾಮಳೆಯ ದರ್ಶನವಾಗಿ ಆ ಹೆಂಗಸು
ನಡುಗುತ್ತಿದ್ದಳು. ಅವಳ ಗಂಡ ಕಪ್ಪು ಚಿರತೆಯಂತೆ ಬೋಗಿಯ
ಒಳಗೆ ಅತ್ತಿಂದಿತ್ತ ಹೆಜ್ಜೆ ಹಾಕುತ್ತಿದ್ದ. ಈ ಮಳೆ ನಿಲ್ಲಲಾರದು ಎಂಬ ಶಂಕೆ
ಅವನಲ್ಲಿ ಮೂಡಿತು. ಬದುಕಿಗಾಗಿ ಮಾಡಬಹುದಾದ ಎಲ್ಲ ಒಳ್ಳೆಯ ಮತ್ತು
ಕೆಟ್ಟ ಯತ್ನಗಳನ್ನೂ ಆತ ಮುಗಿಸಿ ಹತಾಶನಾಗಿ ಕ್ರೂರವಾಗಿ
ಹೆಂಡತಿಮಕ್ಕಳನ್ನು ದೂರಕ್ಕೆ ಕರೆದುಕೊಂಡು ಹೋಗಬೇಕೆಂದು
ನಿರ್ಧರಿಸಿದ್ದ. ಕೈಗೂಸು ಎಚ್ಚರವಾಗಿ ದಿಗಿಲಿನಿಂದ ಕೂಗಿಕೊಳ್ಳುತ್ತಿತ್ತು.
ಕತ್ತಲು ಆ ಕೊಬ್ಬಿದ ಮಳೆಯ ಜೊತೆ ಸರಸವಾಡುತ್ತಿತ್ತು. ಹೆಂಗಸು;
ಈ ಗಂಡ ಎಂಬ ಪ್ರಾಣಿಯ ಜೊತೆ ಸರಸಕ್ಕೆ ಸಿಲುಕಿ ಲಗ್ನ ಮಾಡಿಕೊಂಡು
ಈಗ ದಿಕ್ಕಿಲ್ಲದೆ ಎಲ್ಲಿಗೊ ಹೋಗುತ್ತಿದ್ದೇವಲ್ಲಾ ಎಂದು ದುಃಖಿಸುತ್ತಾ
ಕುಸಿದು ಹೋಗುತ್ತಿದ್ದಳು. ಮಳೆ ಅವಳನ್ನು ಹಂಗಿಸುವಂತೆ
ಧಾರಾಕಾರವಾಗಿ ಸುರಿಯುತ್ತಲೇ ಇತ್ತು. ನಿದ್ದೆಯಿಂದ ಬೆಚ್ಚಿ ಎದ್ದು
ಕುಳಿತು ಹುಡುಗ ಚಿಟ್ಟೇ ಚಿಟ್ಟೇ ಎಂದು ಬಡಬಡಿಸುತ್ತಿದ್ದ. ಮಿಂಚು
ಆರ್ಭಟದಿಂದ ನರ್ತಿಸುತಲೇ ಮಳೆಯ ಜೊತೆ ಗುದ್ದಾಡಲು
ಅಣಿಗೊಳ್ಳುತ್ತಿತ್ತು.
ರೈಲು ಮಳೆ ಮುಂದೆ ಸೋತವರಂತೆ
ತೆವಳುತ್ತಿತ್ತು. ಬೆಳಕು ಮೂಡಲು ಇನ್ನೂ ಸಾಕಷ್ಟು ಸಮಯವಿತ್ತು.
ಆ ರೈಲು ನಿಲ್ದಾಣ ಬಂದೇ ಬಿಟ್ಟಿತು. ಹೆಂಡತಿಮಕ್ಕಳನ್ನು ಗಡಿಬಿಡಿಯಲ್ಲಿ
ಎಬ್ಬಿಸಿ `ಇಳಿಯಿರಿ ಇಳಿಯಿರಿ' ಎಂದು ಆತ ಕೂಗಾಡಿದ. ಮಳೆಯ ಅಬ್ಬರದಲ್ಲಿ
ಅವನ ಕುಗೂ ಸಾಲದಾಯಿತು. ಹೆಂಡತಿಯ ಕಂಕುಳನ್ನೇ ಹಿಡಿದು
ಎಳೆದ. ಮಕ್ಕಳನ್ನು ಎತ್ತಿ ಬೋಗಿಯಿಂದ ಹೊರಗೆ ಎಸದೇ ಬಿಡುವಂತೆ
ಗದ್ದಲವೆಬ್ಬಿಸಿದ. ಹೆಂಡತಿಮಕ್ಕಳನ್ನು ಹಿಡಿದುಕೊಂಡನು. ರೈಲು
ಕರ್ಕಶವಾಗಿ ಕೂಗಿಕೊಳ್ಳುತ್ತ ನಿಂತುಕೊಂಡಿತು. ಅತ ಹಳೆಯ
ಟ್ರಂಕೊಂದರ ಸಮೇತ ಒಂದೆರಡು ಬುತ್ತಿಗಳನ್ನು ಹೊತ್ತುಕೊಂಡು
ಆತುರವಾಗಿ ಕೆಳಕ್ಕಿಳಿದ. ಅವರು ಕೆಳಗಿಳಿಯಲೆಂದೇ ಕಾದಿದ್ದಂತೆ
ಗುಡುಗು ಸಿಡಿಲು ಕೇಕೆ ಹಾಕಿದವು. ನಿರ್ಜನವಾದ ಅಂತಹ ಕ್ರೂರ
ಮಳೆಯ ರಾತ್ರಿಯಲ್ಲಿ ಆ ರೈಲು ನಿಲ್ದಾಣದ ಅವರಿಗೆ ಯಾವ
ಆಸರೆಯೂ ಇರಲಿಲ್ಲ. ಹಾಗೆ ಬಂದು ಇಳಿಸಿದ ರೈಲು ದೇಹವನ್ನು ತ್ಯಜಿಸಿ
ಉಸಿರು ಹೊರಟು ಹೋದಂತೆ ಮಾಯವಾಗಿಬಿಟ್ಟಿತು. ಸ್ಟೇಷನ್ ಮಾಸ್ತರರು
ಒಳ ಸೇರಿಕೊಂಡಿದ್ದರು. ಭಯಾನಕವಾಗಿ ಇಡೀ ಭೂಮಿಯೇ ನಡುಗುವಂತೆ
ಗುಡುಗು ಅಪ್ಪಳಿಸಿತು. ಹೆಂಗಸು ಕೈಗೂಸನ್ನು ತೋಯ್ದುಹೋದ
ಹರಕುಸೀರೆ ಸೆರಗಲ್ಲಿ ರಕ್ಷಿಸಲು ಹೆಣಗಾಡುತ್ತಿದ್ದಳು. ಕೈಗೂಸಿನ
ಅಳುವನ್ನು ಮಳೆಯು ನುಂಗಿಕೊಂಡಿತ್ತು. ಆಕೆಯ ಗಂಡ ನಿಲ್ದಾಣದ
ಒಂದು ಮೂಲೆಗೆ ಅರನ್ನು ಕರೆದುಕೊಂಡು ಬಂದು ಕೂರಿಸಿದ.ಆ
ಬಿರುಗಾಳಿಯ ಮಳೆಗೆ ರೈಲು ನಿಲ್ದಾಣದ ಚಾವಣಿಗಳು ಕಿತ್ತುಕೊಂಡು ಹೋಗಿದ್ದವು.ನಿಲ್ದಾಣದ
ಕಟ್ಟಡದ ಮೇಲೆ ಬಿರುಗಾಳಿಯು ಕುಸ್ತಿ ಮಾಡುತ್ತಿತ್ತು. ಚಾವಣಿಯನ್ನು
ಕಳೆದುಕೊಂಡು ಬ್ರಿಟಿಷರ ಕಾಲದ ಆ ಮೋಟುಗೋಡೆಗಳು ಶಕ್ತಿ ಮೀರಿ ಹೋರಾಡುತ್ತಿದ್ದವು.
ಮಳೆಯಲ್ಲಿ ತೋಯ್ದು ಗಡಗಡ ನಡುಗುವ
ಮಕ್ಕಳನ್ನು ತನ್ನ ಹೊಟ್ಟೆಯೊಳಗಿನ ಕರುಳಿಗೆ ನುಲಿದುಕೊಳ್ಳುವಂತೆ
ಆ ಹೆಂಗಸು ತಾನು ನಡುಗುವ ಉಸಿರಾಟದಲ್ಲೇ ದೇವರಲ್ಲಿ
ಬೇಡಿಕೊಳ್ಳುತ್ತಿದ್ದಳು. ಅವಳ ಗಂಡ ಮಳೆಯನ್ನೇ ದಿಟ್ಟಿಸುತ್ತಿದ್ದವನು
ಹೆಂಡತಿಗೆ ಏನನ್ನೋ ಹೇಳುತ್ತಿದ್ದನಾದರೂ ಅದು ಕೇಳಿಸುತ್ತಿರಲಿಲ್ಲ.
ಆತನ ಮಾತನ್ನು ಗುಡುಗು ವಸಃಹಾಕುತ್ತಿತ್ತು. ಚಟೀರ್ ಎಂದು ಮಿಂಚು
ಆರ್ಭಟಿಸಿದ ಕೂಡಲೇ ಮಕ್ಕಳು ಕಿರುಚಿಕೊಂಡವು. ಭೂಮಿ ನಡುಗುತ್ತಿದೆ
ಎನಿಸಿತು. ನಿಲ್ದಾಣದ ಆಚೆಗಿನ ಕಣಿವೆಯಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿರುವ
ಶಬ್ದವು ಮಳೆಯ ಜೊತೆಗೆ ಸೇರಿಕೊಂಡಿತ್ತು. ಮಿಂಚಿನ ಬೆಳಕಿನಲ್ಲಿ
ಅವರು ಒಬ್ಬರನೊಬ್ಬರು ನೋಡಿಕೊಂಡು ಸತ್ತರೆ ಒಂದೇ ಕಡೆ ಒಂದೇ
ಸಿಡಿಲಿಗೆ ಸಿಲುಕಿ ಸಾಯೋಣ ಎಂಬಂತೆ ತಾಯ ತೆಕ್ಕೆಯಲ್ಲಿ
ತತ್ತರಿಸುತ್ತಿದ್ದರು. ಕೈಗೂಸು ನೆನೆಯದಿರಲಿ ಎಂದು ಆಕೆಯ
ಹೊಟ್ಟೆಯೊಳಕ್ಕೆ ಬೆಸೆದುಕೊಂಡಂತೆ ಮಗುವನ್ನು ಬಗ್ಗಿ
ಒತ್ತಿಕೊಂಡಿದ್ದರೆ, ಆ ಹುಡುಗನು ಅವಳ ಅಕ್ಕನೂ ತಾಯಂತೆಯೇ ಮಗುವನ್ನು
ಕಾಪಾಡಲು ಯತ್ನಿಸುತ್ತಿದ್ದರು.
ಒಂದು ಕ್ಷಣ ಮಳೆ ತಗ್ಗಿದಂತೆ ಕಂಡಿತು.
ಅವಳ ಗಂಡ ಎದ್ದು ನಿಂತ. ಅವನ ತಲೆಯೊಳಗೆ ಏನೇನು
ಕುಣಿಯುತ್ತಿತ್ತೋ ಆಕೆಗೆ ತಿಳಿಯುವಂತಿರಲಿಲ್ಲ. ಇನ್ನೇನೂ ಬೆಳಕು ಹರಿಯುತ್ತದೆ;
ಊರಿಗೆ ಕರೆದುಕೊಂಡು ಹೋಗುತ್ತೇನೆ. ಇನ್ನು ಭಯವಿಲ್ಲ. ಇಲ್ಲೇ ಸ್ವಲ್ಪ
ದೂರದಲ್ಲೇ ನನಗೆ ತುಂಬಾ ಆಪ್ತರೊಬ್ಬರು ಇದ್ದಾರೆ. ಕಷ್ಟ ಕಾಲದಲ್ಲಿ
ಅವರು ಆಗುವಂತವರು. ಅವರ ಬಳಿ ಹೋಗಿ ಒಂದಿಷ್ಟು ದುಡ್ಡು ಪಡೆದು
ಬರುತ್ತೇನೆ. ಹಾಗೆಯೇ ಅವರ ಎತ್ತಿನ ಗಾಡಿಯನ್ನು ಕಟ್ಟಿಕೊಂಡು ಬರುತ್ತೇನೆ.
ಇಂತಹ ಮಳೆಯಲ್ಲಿ ದುರ್ಗಮವಾದ ದಾರಿಯಲ್ಲಿ ಹಳ್ಳಿಗೆ ಹೀಗೆ
ಮಕ್ಕಳನ್ನು ಕಟ್ಟಿಕೊಂಡು ಹೋಗುವುದು ಸಾಧ್ಯವೇ ಇಲ್ಲ.
ಬೆಳಕರಿಯುವುದರಲ್ಲಿ ಹಿಂತಿರುಗಿ ಬಂದು ಬಿಡುತ್ತೇನೆ.ಭಯ ಪಡಬೇಡ;
ಮಕ್ಕಳ ಕಡೆ ಜೋಪಾನ ಬೇಗ ಹಿಂತಿರುಗಿ ಬರುವೆಎಂದು ಹೇಳಿ ಆತ
ಮಳೆಯಲ್ಲೇ ನಿಲ್ದಾಣದ ತಿರುವಿನಲ್ಲಿ ಕರಗಿಹೋದದ್ದನ್ನು ಹೆಂಡತಿಯು
ಯಾವ ಪ್ರತಿಕ್ರಿಯೆಯೂ ಇಲ್ಲದೆ ನೋಡುತ್ತಿದ್ದಳು. ತೆಳು ಮಿಂಚೊಂದು
ಆತ ದಿಕ್ಕಿಲ್ಲದೆ ಹೋಗುತ್ತಿರುವುದನ್ನು ಆಕೆಗೆ ತೋರುತ್ತಿತ್ತು.
ಮಗಳು ಅಪ್ಪನನ್ನೇ ಆ ಮಿಂಚಿನ ಬೆಳಕಲ್ಲಿ ಕಣ್ಣಿಗೆ ತುಂಬಿಕೊಂಡು
ಚೆಂದದ ಚಿಲುಮೆಯ ಹೂದೋಟವನ್ನು ನೆನೆದು ಅಪ್ಪ ಬೇಗ ಎತ್ತಿನ ಬಂಡಿಯನ್ನು
ಕಟ್ಟಿಕೊಂಡು ಬಂದು ಬಿಡಲಿ ಎಂದು ಚಳಿಯನ್ನು ನುಂಗಿಕೊಳ್ಳುತ್ತ
ತಾಯ ಕೈಯನ್ನು ಹಿಡಿದುಕೊಳ್ಳುತ್ತಿದ್ದಳು.
ನಿರ್ದಯವಾದ ಮಳೆ ಮತ್ತೆ
ಫೂತ್ಕರಿಸಿಕೊಂಡು ಬರುತ್ತಿತ್ತು. ಜೊತೆಯಲ್ಲೇ ಮಿಂಚು
ಗುಡುಗುಗಳು ಪೈಪೋಟಿಯಲ್ಲಿ ಕಾದಾಡುತ್ತಿದ್ದವು ಕಣಿವೆಯಲ್ಲಿ ಪ್ರವಾಹ
ಹುಚ್ಚೆದ್ದು ಹೋಗುತ್ತಿತ್ತು. ರೈಲು ನಿಲ್ದಾಣ ಮಳೆಯ ದಾಳಿಗೆ
ಸಿಲುಕಿತ್ತು. ನೀರು ಕುಡಿದ ಹಳೆಯ ಗೋಡೆಗಳು ಇನ್ನೇನು ಬೀಳುವ
ಸ್ಥಿತಿಯಲ್ಲಿದ್ದವು. ನಿಲ್ದಾಣದ ಎಲ್ಲ ಕತೆಗಳನ್ನೂ ಕಂಡಿದ್ದ ಬ್ರಿಟಿಷರ
ಕಾಲದ ಹೆಮ್ಮೆರವೊಂದು ಬುಡಮೇಲಾಗಿ ಬಿದ್ದಿತ್ತು. ಮಳೆ ಕೇಕೆ ಹಾಕುತ್ತಲೇ
ಇತ್ತು. ಆ ಬಡಪಾಯಿ ಹೆಂಗಸು ಎಂದೆಂದೂ ಅಂತಹ ಮಳೆಯನ್ನೇ
ಕಂಡಿರಲಿಲ್ಲ. ಮಕ್ಕಳನ್ನು ಹೇಗೆ ಉಳಿಸಿಕೊಳ್ಳಲಿ ಎಂದು
ಕಂಗಾಲಾಗಿದ್ದಳು. ಇನ್ನೇನೊ ಬರಸಿಡಿಲ ಬಾಯಿಗೆ ಸಿಕ್ಕಿ ಉರಿದುಹೋದೊ
ಎಂಬಂತೆ ಮಿಂಚು ಅವರ ಹತ್ತಿರವೇ ಬಂದು ಹೋಗಿತ್ತು. ನಿಲ್ದಾಣವೆಲ್ಲ ನೀರಿನಿಂದ
ತುಂಬಿಹೋಗಿತ್ತು. ಆಸರೆಗಾಗಿ ಹೋಗೋಣ ಎಂದರೆ ಆ ಗಾಡಾಂಧಕಾರದ
ಮಳೆ ಬಿಟ್ಟುಕೊಡುತ್ತಿರಲಿಲ್ಲ. ಆ ಕತ್ತಲೆಯೇ ಮಳೆಯಂತೆ ಸುರಿಯುತ್ತಿತ್ತು.
ಅಂತಹ ಮಳೆಯ ಬರ್ಬರತೆಯಲ್ಲೂ ಹುಡುಗ ಚಿಟ್ಟೆಯ ಕನಸನ್ನು
ಪುನರ್ ಕಲ್ಪಿಸಿಕೊಳ್ಳುತ್ತಿದ್ದ. ಹೀಗೆ ಸುರಿವ ಮಳೆಯಲ್ಲಿ ಚಿಟ್ಟೆಗಳು
ಆಕಾಶದ ಯಾವ ಮರೆಯಲ್ಲಿ ಬಚ್ಚಿಟ್ಟುಕೊಂಡಿರುತ್ತವೆ ಎಂದು
ಕೇಳಬೇಕೆಂದುಕೊಂಡ. ಕುತೂಹಲವನ್ನು ತಡೆದುಕೊಂಡು ತಾಯ
ಬೆನ್ನನ್ನೆ ಕಚ್ಚಿಕೊಂಡು ಕೂತ್ತಿದ್ದ. ಮತ್ತೆ ಮತ್ತೆ ಮಳೆ
ಘರ್ಜಿಸುತ್ತಿತ್ತು. ಮಳೆಗೆ ಹೆದರಿಯೊ ಏನೋ ಸೂರ್ಯ ಇನ್ನೂ ಮೂಡದೆ
ಕತ್ತಲೆಯೇ ತಾಂಡವವಾಡುತ್ತಿತ್ತು.
ಇನ್ನೇನೊ ಬಂದು ಬಿಡುತ್ತೇನೆಂದು ಹೋದ
ಆಕೆಯ ಗಂಡ ಎಷ್ಟು ಹೊತ್ತಾದರೂ ಹಿಂತಿರುಗಲಿಲ್ಲ. ಮಗಳು
ಬಿರುಗಾಳಿ ಮಳೆಯ ಬೊಬ್ಬಿರಿತದಲ್ಲೂ ತಂದೆಯು ಎತ್ತಿನ ಬಂಡಿಯನ್ನು
ಕಟ್ಟಿಕೊಂಡು ವೇಗವಾಗಿ ಓಡಿಸಿಕೊಂಡು ಬರುತ್ತಿದ್ದಾನೆಂದು
ಲೆಕ್ಕಿಸುತ್ತಿದ್ದಳು.
ಕೈಗೂಸು ಚಳಿ ಮಳೆ ಮಿಂಚು ಗುಡುಗುಗಳ
ಆರ್ಭಟಕ್ಕೆ ಹೆದರಿಯೊ ಅಥವಾ ತಾಯ ಕರುಳ ಸಂಕಟವನ್ನು
ಅರ್ಥಮಾಡಿಕೊಂಡೊ ತಣ್ಣಗೆ ತೆಪ್ಪಗೆ ಕಿಬ್ಬೊಟ್ಟೆಗೆ ಅಂಟಿಕೊಂಡಿತ್ತು.
ಗಂಡ ಯಾವಾಗ ಬರುವನೊ ಎಂದು ಆಕೆ ಚಡಪಡಿಸಿದಳು. ಮಳೆ ಬಿಟ್ಟು
ಬಿಟ್ಟು ಬರುತ್ತಿತ್ತು. ಇದ್ದಕ್ಕಿಂದ್ದಂತೆ ಆವೇಶದಿಂದ ಆ ಬಡಪಾಯಿಗಳ ಮೇಲೆ
ಎರುಗುತ್ತಿತ್ತು. ಸುರಿಯಲಿ; ಜಗತ್ತಿನ ಎಲ್ಲ ದೇಶವೂ ಆಕಾಶದ ಎಲ್ಲ
ಆಕ್ರೋಶವು ನನ್ನ ಮೇಲೂ ನನ್ನ ಮಕ್ಕಳ ಮೇಲೂ ಮಳೆಯಾಗಿ ಸುರಿಯಲಿ
ಎಂಬಂತೆ ಆಕೆಯ ಗಂಡ ಬರುವ ದಾರಿಯನ್ನು ಕಾಯತೊಡಗಿದಳು. ಮುಗಿಯದ
ರಾತ್ರಿಯು ಹಗಲನ್ನೇ ನುಂಗಿದೆ ಎನಿಸುತ್ತಿತ್ತು. ಹುಡುಗ ಚಳಿಯನ್ನು
ತಡೆಯಲಾರದೆ ನಡುಗುತ್ತಿದ್ದ. ಎಷ್ಟೋ ವರ್ಷಗಳು ಉರುಳಿದಂತೆ
ಆದ ಮೇಲೆ ಮಬ್ಬು ಬೆಳಕು ಕಾಣಿಸಿಕೊಂಡಿತು. ಹುಡುಗಿ ಸಂಭ್ರಮದಿಂದ
ಚಳಿಯನ್ನೂ ಲೆಕ್ಕಿಸದೆ ಕುಣಿದಾಡಿದಳು. ದೇಹವನ್ನು ಬಸಿಯುವಂತೆ
ಕೈಗೂಸು ತಾಯ ಎದೆ ಚೀಪುತ್ತಿತ್ತು. ಕಣಿವೆಯಲ್ಲಿ ಕೆನ್ನೀರು
ಧುಮ್ಮಿಕ್ಕಿ ಹರಿಯುತ್ತಿತ್ತು. ರೈಲು ನಿಲ್ದಾಣದ ಕಟ್ಟಡದ ಒಂದು ಭಾಗದ
ಗೋಡೆಯು ಕುಸಿದು ಬಿದ್ದಿತ್ತು. ಸ್ಟೇಷನ್ ಮಾಸ್ತರ ಒಂದಿಬ್ಬರು ಹಮಾಲಿಗಳ
ಜೊತೆ ಅಪಾಯದಿಂದ ಪಾರಗಿದ್ದರು. ಇನ್ನು ಮೂರು ನಾಲ್ಕು ದಿನಗಳ
ತನಕ ಆ ದಾರಿಯಲ್ಲಿ ಯಾವ ರೈಲೂ ಸಂಚರಿಸುವಂತಿರಲಿಲ್ಲ. ಕಡಿದಾದ
ಬೆಟ್ಟಗಳ ಮಣ್ಣು ಕುಸಿದು ರೈಲು ಹಳಿ ಮುಚ್ಚಿ ಹೋಗಿದೆ ಎಂಬ ಸುದ್ಧಿ
ತಲುಪಿತ್ತು.
ಮಳೆಯ ವ್ಯಾಘ್ರತೆ ಒಂದಿಷ್ಟು ಮೆತ್ತಗಾಗಿದ್ದರೂ
ಜಿಟಿಜಿಟಿಯಾಗಿ ಸುರಿಯುತ್ತಲೇ ಇತ್ತು. ಹುಡುಗ ನಿಲ್ದಾಣದಲ್ಲಿ ಹರಿಯುತ್ತಿದ್ದ
ನೀರಿನಲ್ಲಿ ಆಡುತ್ತಿದ್ದ. ಹೆಂಗಸು ತನ್ನ ನಿಸ್ತೇಜವಾದ ಕಣ್ಣುಗಳಲ್ಲೇ
ಗಂಡನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದಳು. ಬಿಸಿಲ ಮುಖವೇ ಇರಲಿಲ್ಲ.
ಹಮಾಲರಲ್ಲೊಬ್ಬ ಅವರನ್ನು ಕಂಡು ಬೆರಗಾಗಿ ಇಂತಹ ರಾಕ್ಷಸ
ಮಳೆಯಲ್ಲಿ ಇವರು ಎಲ್ಲಿಂದ ಬಂದರು? ಯಾವ ರೈಲಿಂದ ಇಳಿದರು?
ಎಂದು ಊಹಿಸುತ್ತಿದ್ದ. ಹೆಂಗಸಿನ ಕಡೆ ವಾರೆನೋಟ ಬೀರಿ ನಗಾಡಿದ, ಸಂಪರ್ಕಜಾಲವೇ
ತುಂಡಾಗಿದ್ದರಿಂದ ಸ್ಟೇಷನ್ ಮಾಸ್ತರು ತುಂಬ ದುಗುಡದಲ್ಲಿದ್ದ. ಮತ್ತೊಬ್ಬ
ನೌಕರ ಯಮಭಯಂಕರ ಮೀಸೆ ಬಿಟ್ಟುಕೊಂಡಿದ್ದವನು ತನ್ನ ದಪ್ಪ
ಹೊಟ್ಟೆಯನ್ನು ಸವರಿಕೊಂಡು ಬಂದು ಹಳ್ಳಿಗಳ ಮೇಲೆ ನೀರು ಹೇಗೆ
ಕೊಚ್ಚಿಕೊಂಡು ಹೋಗಿದೆ ಎಂದು ಲೆಕ್ಕ ಹಾಕುತ್ತಿದ್ದ. ನಿಲ್ದಾಣವನ್ನು
ಬೆಳಸಿಕೊಂಡು ಹೋಗುವ ಕಾಲು ದಾರಿಯ ಕಡೆಯೇ ಹುಡುಗಿ ನೋಡುತ್ತ
ಅಪ್ಪ ಇನ್ನೂ ಯಾಕೆ ಬಂದಿಲ್ಲವೆಂದು ಬೇಸರ ಪಡುತ್ತಿದ್ದಳು. ಹುಡುಗನನ್ನು
ಹತ್ತಿರಕ್ಕೆ ಕರೆದುಕೊಂಡು ರೇಗಾಡಿ; ಅಲ್ಲೆಲ್ಲ ನೀರಲ್ಲಿ
ಓಡಾಡಬೇಡವೆಂದು ತಾಯಿ ಎಚ್ಚರಿಸಿದಳು. ಮತ್ತೆ ಮಳೆ ಬೇಟೆ
ನಾಯಿಗಳಂತೆ ಓಡಿ ಬಂತು. ಅಷ್ಟರಲ್ಲಿ ಆ ಹೆಂಗಸು ಆ ಜಾಗವನ್ನು ಬಿಟ್ಟು
ಲಗೇಜು ಕೊಠಡಿಯ ಪಕ್ಕಕ್ಕೆ ಬಂದು ಸೇರಿಕೊಂಡಳು. ಸ್ಟೇಷನ್ ಮಾಸ್ತರು
ತನ್ನ ನೌಕರರ ಜೊತೆಗೆ ರೂಮು ಸೇರಿ ಬಾಗಿಲು ಹಾಕಿಕೊಂಡರು.
ಕಾರ್ಮೋಡಗಳು ಕವಿದು ಕತ್ತಲು ಆವರಿಸಿ ಮಳೆಯ ತೆರೆಯ ಮುಚ್ಚಿಕೊಂಡು
ಭೂಮಿಯೇ ಕರಗಿ ಹೋಗುವಂತೆ ಇಡೀ ವಾತಾವರಣವೂ ಮಿಂಚು
ಗುಡುಗುಗಳ ಆರ್ಭಟದಲ್ಲಿ ಮುಳುಗಿಹೋಯಿತು. ಯಾರ ಮಾತೂ
ಯಾರಿಗೂ ಕೇಳಿಸುತ್ತಿರಲಿಲ್ಲ. ಮಳೆಯೊಂದನ್ನು ಬಿಟ್ಟರೆ ಈ ಜಗತ್ತಿನಲ್ಲಿ
ಏನೂ ಇಲ್ಲ ಎಂಬಂತಾಗಿ ಆದಿಕಾಲದ ಮಳೆಯೇ ಪ್ರಳಯದ ಅವತಾರವಾಗಿ
ಬಂದಿದೆ ಎನಿಸುತ್ತಿತ್ತು. ಚಂಡಮಾರುತವೇ ಅಲ್ಲೆಲ್ಲ ಅಪ್ಪಳಿಸಿ
ಅಬ್ಬರಿಸತೊಡಗಿತು. ಕೈಗೂಸು ಇನ್ನೂ ಜೀವಂತವಾಗಿತ್ತು. ತಾಯ ಕಣ್ಣಲ್ಲಿ
ದುಃಖ ಮಳೆಯಂತೆ ಸುರಿಯುತ್ತಲೇ ಇತ್ತು. ಆ ಹುಡುಗಿ ತಾಯನ್ನು
ಸಂತೈಸಲು ಮಾತುಗಳು ಸಿಗದೆ ತಡವರಿಸಿ ತಾನೂ ಅಳುತ್ತಿದ್ದಳು. ಹುಡುಗ
ಸಪ್ಪಗೆ ಏನೂ ಗಂಟೆಯ ಸದ್ದಾದಂತೆ ಹುಡುಗಿಯ ಕಿವಿಗೆ ಕೇಳಿಸಿತು.
ಆಕೆ ಎದ್ದು ಬಂದು ಮಳೆಯ ತೆರೆಯನ್ನು ಸರಿಸಿ ನೋಡುವಂತೆ
ತೋಯುತ್ತ ಅತ್ತಿತ್ತ ಹುಡುಕಿದಳು. ತಂದೆಯೇ ಎತ್ತಿನ ಬಂಡಿ
ಕಟ್ಟಿಕೊಂಡು ಬಂದಿರಬೇಕೆಂದು ಆಕೆ ಭ್ರಮಿಸಿದ್ದಳು. ಯಾವ
ಸುಳಿವೂ ಕಾಣಲಿಲ್ಲ. ನಿರಾಶೆಯಿಂದ ಹಿಂತಿರುಗಿ ಬಂದು ಕೂತ ಹುಡುಗಿ ಏನನ್ನೊ
ಹೇಳಿದಳಾದರೂ ಮಳೆಯ ಸದ್ದಿನಲ್ಲಿ ಏನೂ ತಾಯಿಯ ಕಿವಿಗೆ
ಕೇಳಿಸಲಿಲ್ಲ. ಆಕೆ ವಿಶ್ವಾಸವನ್ನೆ ಕಳೆದುಕೊಳ್ಳುತ್ತಿದ್ದಳು. ಗಂಡನಾದ
ಆ ಪ್ರಾಣಿಯು ಎಂದೂ ವಿಶ್ವಾಸಕ್ಕೆ ಅರ್ಹನಲ್ಲ ಎಂದುಕೊಳ್ಳವಂತೆಯೇ
ಮತ್ತೆ ಅದೇ ಭಾವದಲ್ಲಿ ಮನದೊಳಗೇ ಧೋ ಎಂಬತೆಯೇ ರೋಧಿಸತೊಡಗಿದಳು.
ಒಂದಿಷ್ಟು ನೆಮ್ಮದಿಗಾಗಿ, ಒಂದು ಸೂರಿಗಾಗಿ, ಒಂದೇ ಒಂದಿಷ್ಟು ಸುಖಕ್ಕಾಗಿ
ಗಂಡನನ್ನು ಕಟ್ಟಿಕೊಂಡು ಊರೂರು ಸುತ್ತಿ ನೆಲೆಸಿಗದೆ; ಗಂಡನಾದವನು
ಸರಿದಾರಿಗೆ ಬರದೆ ಆಕೆಯು ರೋಸಿಹೋಗಿದ್ದಳು. ಕೊನೆಗಾದರೂ ಇವನು
ತನ್ನ ತಾತನ ಕಾಲದ ಊರಿಗೆ ಕರೆದುಕೊಂಡು ಹೋಗಿ ಮಕ್ಕಳಿಗಾದರೂ
ಏನನ್ನಾದರೂ ದಾರಿ ಮಾಡುತ್ತಾನೆಂದು ನಂಬಿದ್ದೆಲ್ಲ ಮಳೆಯ ನೀರಿನಲ್ಲಿ
ಕೊಚ್ಚಿಹೋಗಿತ್ತು. ಅವನು ಕೈ ಹಾಕಿದ್ದೆಲ್ಲ ವಿಫಲವಾಗುತ್ತಿತ್ತು. ಅನಾಥನು
ಅನಾಥರನ್ನೆ ಆಯ್ದುಕೊಳ್ಳುವಂತೆ ಅವರು ಒಬ್ಬರನ್ನೊಬ್ಬರು ಆಶ್ರಯಿಸಿ
ಮದುವೆ ಆಗಿ ಮೂರು ಮಕ್ಕಳ ಹಡೆದು ದಣಿದುಹೋಗಿದ್ದರು. ಸಂಸಾರದ
ಹೊರೆ ಅವನಿಗೆ ಹೆಣಬಾರವಾಗಿತ್ತು.
ಸ್ಟೇಷನ್ ಮಾಸ್ತರು ಒಳಗೆ ಬೆಚ್ಚಗಿದ್ದರು.
ಆದರೂ ಮಳೆ ಅವರನ್ನು ಹೆದರಿಸದೆ ಬಿಟ್ಟಿರಲಿಲ್ಲ. ಹಮಾಲನೊಬ್ಬ ಆ ಹೆಂಗಸನ್ನು
ಒಳಕ್ಕೆ ಕರೆದುಕೊಳ್ಳೋಣವೇ ಎಂದ. ಸ್ಟೇಷನ್ ಮಾಸ್ತರು ಬೇಡವೆಂದರು.
ಯಮಭಯಂಕರ ಮೀಸೆಯ ನೌಕರ ಅವಳ ಬಗ್ಗೆಯೇ
ಆಲೋಚಿಸುತ್ತಿದ್ದ. ಹುಚ್ಚು ಮಳೆ ಹೆಂಗಸನ್ನು ಎಳೆದಾಡುತ್ತಿತ್ತು.
ಕೈಗೂಸು ಮಿಸುಕಾಡುತ್ತಿತ್ತು. ಮಳೆಯ ನಿರಂತರ ತೆರೆ ಸುತ್ತೆಲ್ಲವನ್ನು
ಕುರುಡಾಗಿಸಿತ್ತು. ಅದು ಮಧ್ಯಾಹ್ನವೋ, ಸಂಜೆಯೊ, ಮುಂಜಾವೊ
ಎಂಬ ಯಾವ ವ್ಯತ್ಯಾಸವೂ ಮಳೆಯ ಲೀಲೆಯಲ್ಲಿ ಕಾಣದಾಗಿತ್ತು.
ಕಾಲಾತೀತ ಧಾರೆಯಲ್ಲಿ ಮಳೆಯು ಮಿಂಚು ಗುಡುಗುಗಳ ರೆಕ್ಕೆ
ಕಟ್ಟಿಕೊಂಡು ಆಕಾಶದಗಲವೂ ಹಾರಾಡುತ್ತಿತ್ತು. ನೋಡುತ್ತಿರುವಂತೆಯೇ
ಕತ್ತಲು ಕಾಳಿಂಗ ಸರ್ಪದಂತೆ ಬಂದು ಆ ಹೆಂಗಸಿನ ತಲೆ ಸವರಿಕೊಂಡು
ಹೋಯಿತು. ಮಗಳು ಅಪ್ಪನ ದಾರಿ ಕಾದು ಸುಸ್ತಾಗಿ ಆ ಅಪ್ಪನಿಗೆ
ದಾರಿಯಲ್ಲಿ ಏನಾಯಿತೊ ಎಂದು ತಾಯನ್ನು ಕೇಳುತ್ತಲೇ ಇದ್ದಳು.
ತಾಯಿ ಎಲ್ಲವನ್ನೂ ಮೌನ ಕಂಬನಿಯೇ ಉತ್ತರವೆಂಬಂತೆ ಒದ್ದೆಯಾದ
ಕಣ್ಣುಗಳಲ್ಲಿ ಮಳೆಯನ್ನೇ ದಿಟ್ಟಿಸುತ್ತಿದ್ದಳು. ಮೂರು
ದಿನಗಳಿಂದಲೂ ಅವರು ಏನನ್ನೂ ತಿಂದಿರಲಿಲ್ಲ. ಹಸಿವಿನಿಂದ ಮಳೆಯ ನೀರನ್ನೇ
ಹುಡುಗ ಕುಡಿಯುತ್ತಿದ್ದ. ಕಣಿವೆಯಲ್ಲಿ ಭೋರ್ಗರೆವ ಪ್ರವಾಹ
ಏರುತ್ತಿತ್ತು. ಬೆಟ್ಟಗಳನ್ನೇ ಕೊರೆಯುತ್ತ ಎದುರಿಗೆ ಸಿಕ್ಕಿದ್ದನ್ನೆಲ್ಲ ನುಂಗುತ್ತ
ಹೊಳೆಯ ಕೆನ್ನೀರು ಕೇಕೆ ಹಾಕುತ್ತಿತ್ತು.
ಆ ಹೆಂಗಸು ಗಾಢವಾಗಿ ಏನನ್ನೋ
ನಿರ್ಧರಿಸುತ್ತಿದ್ದಳು. ಕತ್ತಲೆಯಲ್ಲಿ ಅವಳ ಮುಂದೆ ಅಸ್ಪಷ್ಟವಾಗಿ
ಯಾರೊ ಸುಳಿದಾಡಿದಂತಾಯಿತು. ಬ್ಯಾಟರಿಯ ಬೆಳಕು ಅವಳ ಮುಖದ
ಮೇಲೆ ಬಿದ್ದು ಬೆಚ್ಚಿದಳು. ಮಕ್ಕಳನ್ನು ಮತ್ತೂ ಹತ್ತಿರಕ್ಕೆ
ಎಳೆದುಕೊಂಡಳು. ಭಯಾನಕವಾದ ಮಳೆಗತ್ತಲು
ಕೋರೆಹಲ್ಲುಗಳಿಂದ ನೆತ್ತರ ತೊಟ್ಟಿಕ್ಕಿಸುತ್ತ ಅವಳ ಮುಂದೆ
ಕುಣಿಯುತ್ತಿತ್ತು. ಗಂಡ ಹಿಂತಿರುಗಿ ಬರಲಾರನೆಂಬ ಅನುಮಾನ ಮತ್ತೆ
ಬಲಗೊಂಡಿತು. ಹಾಗೆ ರೈಲಿನಲ್ಲಿ ಅಹೋ ರಾತ್ರಿ ಕರೆದುಕೊಂಡು ಬಂದು
ಇಲ್ಲಿ ಕೆಳಗಿಳಿಸಿದ ಪರಿಯಲ್ಲೇ ಆಕೆ ಯಾವುದೊ ಸಂಶಯದ ವಾಸನೆಯನ್ನು
ಕಂಡಿದ್ದಳಾದರೂ ಆ ಬಿರುಗಾಳಿಯ ಮಳೆಯಲ್ಲಿ ಏನನ್ನೂ
ಮಾಡದವಳಾಗಿದ್ದಳು. ಬ್ಯಾಟರಿಯ ಬೆಳಕು ಮಾಯಾವಾಗಿತ್ತು.
ಮಗಳು ಅಪ್ಪನೇ ಬಂದನೆಂದು `ಅಪ್ಪಾ ನಾವು ಇಲ್ಲದ್ದೇವೆ ಎಂದು
ಕೂಗಿಕೊಂಡಿದ್ದಳು. ಅವರಪ್ಪ ನಾಪತ್ತೆಯಾಗಿದ್ದ. ಆ ಹುಚ್ಚು ಸಿಡಿಲು
ಗುಡುಗಿನ ಮಳೆಯ ಕಣಿವೆ ದಾರಿಯಲ್ಲಿ ಎಲ್ಲ ಜಾರಿ ಪ್ರವಾಹದಲ್ಲಿ
ಅಂತಹ ಕತ್ತಲೆಯ ಬಾಯಲ್ಲಿ ಮುಳುಗಿ ಹೋದವು ಎಂದು ಅವನ ಹೆಂಡತಿದುಃಖಿಸಲಿಕ್ಕೂ
ಆಗದೆ ಕತ್ತಲೆಯ ಕಣ್ಣುಗಳಿಂದ ಇರಿಯುವಂತೆ ದಿಟ್ಟಿಸುತ್ತಿದ್ದಳು.
ಮಳೆಗೆ ಯಾರೂ ಹೇಳುವವರು,ಕೇಳುವವರು ಇರಲಿಲ್ಲ.
ಅದರಿಚ್ಚೆಯಲಿ ಅದು ಕೆನೆಯುತ್ತಿತ್ತು. ಕಾದು ಕಾದು ರಾತ್ರಿ ಮುಗಿದು
ಹಗಲು ಬರುತ್ತಿದೆ ಎಂದು ಮಕ್ಕಳು ಲೆಕ್ಕಿಸಿದ್ದೆಲ್ಲ
ತಲೆಕೆಳಗಾಗುತ್ತಿತ್ತು. ಸ್ಟೇಷನ್ ಮಾಸ್ತರು ಹೇಗೊ ಸಂಪರ್ಕಜಾಲಕ್ಕೆ
ಒಳಪಟ್ಟಿದ್ದರು. ಬಯಲು ಸೀಮೆಯ ಕಡೆಯಿಂದ ಬರುವ ಗೂಡ್ಸ್ ಗಾಡಿ
ಎಲ್ಲೊ ದಾರಿ ಮಧ್ಯದಲ್ಲೇ ನಿಂತಿದೆ ಎಂಬ ಸುದ್ಧಿ ಬಂದಿತ್ತು. ಅದರ
ಜೊತೆಗೆ ಸಂಪರ್ಕ ಸಾಧಿಸಲು ಸ್ಟೇಷನ್ ಮಾಸ್ತರು
ತಲೆಕೆಡಿಸಿಕೊಂಟಿದ್ದರು.ಹಮಾಲ ಆ ಹೆಂಗಸರನ್ನು ಕರೆತರುತ್ತೇನೆ
ಎಂದು ಒತ್ತಾಯಿಸುತ್ತಿದ್ದ. ಸ್ಟೇಷನ್ ಮಾಸ್ತರು ಸಂಚಾರ ಸಂಪರ್ಕಗಳ
ಬಗ್ಗೆ ಲೆಕ್ಕಿಸುತ್ತಿದ್ದರು. ಮಳೆಯ ಹುಚ್ಚು ಆವೇಶ ಕ್ಷಣದಿಂದ
ಕ್ಷಣಕ್ಕೆ ಏರುತ್ತಿತ್ತು. ಆಕಾಶದ ಹೊಟ್ಟೆಯೇ ಹೊಡೆದು ಹೋದಂತೆ
ಗುಡುಗು ಅಪ್ಪಳಿಸಿತು. ಯಮಭಯಂಕರ ಮೀಸೆಯ ನೌಕರ ಮೀಸೆ
ಕುಡಿಯನ್ನು ನಾಲಗೆಯಿಂದ ಎಳೆದುಕೊಳ್ಳುತ್ತ ಹಲ್ಲುಗಳಿಂದ
ಕುರುಕುತ್ತ ಏನೇನನ್ನೊ ಅಂದಾಜು ಮಾಡುತ್ತಿದ್ದ. ಆ ನಡುವೆ ಪಕ್ಕದ
ಕೊಠಡಿಯ ಗೋಡೆಯು ಕುಸಿದಂತೆ ಸದ್ದಾಯಿತು. ಮತ್ತೆ ಬ್ಯಾಟರಿಯ
ಬೆಳಕು ಅಲ್ಲೆಲ್ಲ ಓಡಾಡಿ ಮಳೆಗೆ ಹೆದರಿ ಕಣ್ಣು ಮುಚ್ಚಿಕೊಂಡಿತು.
ಕಳೆದೆರಡು ದಿನಗಳ ಹಿಂದೆ ರೈಲಿನಲ್ಲಿ ತಾಯ ತೊಡೆ ಮೇಲೆ
ತಲೆಯಿಟ್ಟು ಮಲಗಿ ಚಿಟ್ಟೆಯ ಕನಸು ಕಾಣುತ್ತಿದ್ದ ಹುಡುಗ ಮತ್ತದೇ
ಕನಸು ಬಂದು ಆ ಚಿಟ್ಟೆಗಳು ನಮ್ಮನ್ನೆಲ್ಲ ಹೊತ್ತುಕೊಂಡು ಎಲ್ಲಿಗಾದರೂ
ದೂರ ಮರೆಗೆ ಕಾಮನಬಿಲ್ಲ ಸೂರಿನೆಡೆಗೆ ಕರೆದುಕೊಂಡು ಹೋಗಲಿ
ಎಂದು ಕಲ್ಪಿಸುತ್ತಿದ್ದ.ಮತ್ತೆ ಹಮಾಲ ಮಳೆಯನ್ನು ಲೆಕ್ಕಿಸದೆ ಆ
ಹೆಂಗಸಿನ ಬಳಿಗೆ ಬಂದು ಕೈ ಹಿಡಿದುಕೊಂಡು ಅಲ್ಲಿ ಇನ್ನೊಂದು
ಕೊಠಡಿಯ ಮರೆಗೆ ಹೋಗೋಣ ಬಾ ಎಂದು ಎಳೆಯುತ್ತಿದ್ದ.
ಕೈಗೂಸು ಅರೆ ಜೀವದಿಂದ ಉಸಿರಾಡುತ್ತಿತ್ತು. ಹೆಣ್ಣುಮಗಳು ಹಮಾಲನ
ಕಬ್ಬಿಣದ ಕೈಗಳನ್ನು ತನ್ನ ಎಳೆಯ ತೋಯ್ದು ತಣ್ಣಗಾಗಿ ನರೂಡಿಕೊಂಡ
ಬೆರಳುಗಳಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಳು. ದಪ್ಪ ಮೀಸೆಯ
ನೌಕರ ಅವರೆಡೆಗೆ ಬ್ಯಾಟರಿ ಬಿಟ್ಟು ಕೂಗಿದಂತಾಯಿತು. ಹಮಾಲ ಆಮೇಲೆ
ಬರುವೆ ಎಂದು ಹೇಳಿ ಹೊರಟು ಹೋದ. ಸ್ಟೇಷನ್ ಮಾಸ್ತರು ಸಂಪರ್ಕದ
ತೊಡಕಿನಿಂದ ತಲೆಕೆಟ್ಟು ಕೋಪದಿಂದ ರೇಗಾಡುತ್ತಿದ್ದರು.
ಸೀಳಿಕೊಂಡಿರುವ ಆಕಾಶದ ಹೊಟ್ಟೆಯನ್ನು ಹೊಲೆಯುವಂತೆ ಮಿಂಚು
ಮೂಡಿ ಮಾಯಾವಾಗುತ್ತಿತ್ತು. ದಿಗಂತಗಳು ಗುಡುಗಿನ ಪ್ರತಿಧ್ವನಿಗಳು
ಮೊಳಗುತ್ತಲೇ ಇದ್ದವು. ಹಸಿವೂ ಕೂಡ ಅವರನ್ನೀಗ ಹಿಂಡುತ್ತಿತ್ತು
ಮಳೆಯ ಕತ್ತಲೆಯಲ್ಲಿ ಕರಗಿಹೋದ ಗಂಡ ಹಿಂತಿರುಗಲಿಲ್ಲ. ಕಾದು
ಕಾದು ಕಾವಳದಲ್ಲಿ ಹೆಂಗಸು ಕುದಿಯುತ್ತಿದ್ದಳು.
ಮಳೆಯ ಆ ರಾತ್ರಿಯೂ ಕಳೆದು ಹೋಯಿತು.
ಮಧ್ಯಾಹ್ನದ ವೇಳೆಗೆ ಮಳೆ ಬಿಡುವು ಕೊಟ್ಟಿತ್ತು. ಸ್ಟೇಷನ್ ಮಾಸ್ತರು
ಒಂದಿಷ್ಟು ಸಮಾಧಾನದಿಂದಿದ್ದರು. ಕಣಿವೆ ದಾರಿಯ ರೈಲು ಹಳಿಗಳ
ದುರಸ್ತಿ ಕಾರ್ಯವು ದಂಡಿನವರಿಂದ ಸಮರೋಪಾದಿಯಲ್ಲಿ ಸಾಗಿತ್ತು.
ಹುಡುಗ ರೈಲು ನಿಲ್ದಾಣದಲ್ಲಿ ಓಡಾಡುತ್ತಿದ್ದ. ತಾಯನ್ನು ಮಗಳು ಏನೇನನ್ನೊ
ಕೇಳುತ್ತಿದ್ದರು ಆಕೆಯೂ ಕಲ್ಲಿನಂತೆ ಕುಳಿತಿದ್ದಳು. ಅಪ್ಪ ಖಂಡಿತ ಬರುತ್ತಾರೆ
ಅಮ್ಮ; ಅಲ್ಲೀ ಒಂದು ಉದ್ದದ ತಿರುವುಗಳ ಬಂಡಿಯ ದಾರಿ ಕಾಣಿಸುತ್ತಿದೆ.
ಅಪ್ಪ ಆ ದಾರಿಯಲ್ಲೇ ಬರುತ್ತಾರೆಕಣಮ್ಮಾಎಂದು ವಿಶ್ವಾಸದಿಂದ
ನುಡಿಯುತ್ತಿದ್ದಳು. ಹಮಾಲ ಬಂದು ಹೆಂಗಸಿನ ಮುಂದೆ ಏನೊ ಆಮಿಷ
ತೊರುತ್ತಿದ್ದ. ಇನ್ನೆರಡು ದಿನಗಳಾದ ಮೇಲೆ ರೈಲುಗಳು
ಓಡಾಡುತ್ತವೆಂದು ಸ್ಟೇಷನ್ ಮಾಸ್ತರು ಹೇಳುತ್ತಿದ್ದರು. ತಾವು
ಇಂತಹ ಮಳೆಯಲ್ಲಿ ಬದುಕಿದ್ದೇ ಒಂದು ಪವಾಡ ಎಂದು
ದೈವಭಕ್ತರಾಗಿದ್ದ ಸ್ಟೇಷನ್ ಮಾಸ್ತರು ಮತ್ತೆ ಮತ್ತೆ ದೇವರನ್ನು
ಸ್ಮರಿಸಿಕೊಳ್ಳುತ್ತಿದ್ದರು. ಆ ಹುಡುಗಿ ಕಾಲುದಾರಿಯ ಒಂದಷ್ಟು
ದೂರಹೋಗಿ ಬಂದು; ಅಮ್ಮ ನಾವೇ ಅಪ್ಪನ ಊರನ್ನು ಹುಡುಕಿಕೊಂಡು
ಹೋಗೋಣ ನಡೆಯಮ್ಮಾ ಎನ್ನುತ್ತಿದ್ದಳು. ಆ ನಿಷ್ಪಾಪಿ ಹೆಂಗಸಿಗೆ
ಗಂಡನಾದವನ ಊರು ಯಾವುದೆಂದು ಗೊತ್ತಿರಲಿಲ್ಲ. ಅಲ್ಲೆಲ್ಲೊ ತನ್ನ
ಊರು ಇದೆ ಎಂದು ಕರೆದುಕೊಂಡು ಬಂದುಬಿಟ್ಟು ಕಣ್ಮರೆಯಾಗಿದ್ದ.
ಅಂತಹ ನಿತ್ರಾಣ ಸ್ಥಿತಿಯಲ್ಲಿ ದಿಕ್ಕಿಲ್ಲದ ಕಾಡಲ್ಲಿ ಗಂಡನ ನೆಲೆ ಹುಡುಕುವುದನ್ನು
ಕ್ರೂರವಾದ ಭ್ರಮೆಯೆನಿಸಿತ್ತು.
ದುರಾಸೆಯಲ್ಲಿ ಹಮಾಲ ಪೀಡಿಸುತ್ತಲೆ ಇದ್ದ.
ದಪ್ಪ ಮೀಸೆಯವನು ಏನನ್ನೊ ಹೇಳುತ್ತಿದ್ದ. ಸ್ಟೇಷನ್ ಮಾಸ್ತರಿಗೆ
ಹೆಂಗಸಿನ ಕಡೆ ಗಮನವೆ ಇರಲಿಲ್ಲ. ಹಳ್ಳಿಗಳ ಮೇಲೆ ರೈಲು
ಒಡಾಡುವಂತಾದರೆ ಸಾಕೆಂದು ಆ ಬಗ್ಗೆಯೇ ಸಂಪರ್ಕವ್ಯವಸ್ಥೆಯ
ಜೊತೆಗೆ ಹುಡುಕಾಡುತ್ತಿದ್ದ.
ಯಮಭಯಂಕರವಾಗಿದ್ದ ಮೀಸೆಯವನು
ಹೆಂಗಸಿನ ಬಳಿ ಬಂದು ಮೀಸೆ ತುದಿಯಲ್ಲೆ ಮುಗ್ದವಾಗಿ ನಕ್ಕು ಐದಾರು
ಬನ್ನುಗಳನ್ನು ಕೈಗಿತ್ತ. ಹೆಂಗಸು ಒಂದು ಕಣ್ಣಲ್ಲಿ ಆಸೆ ಮತ್ತೊಂದು
ಕಣ್ಣಲ್ಲಿ ಭಯ ತುಂಬಿಕೊಂಡು ಬನ್ನುಗಳನ್ನು ಪಡೆದು ತಿನ್ನಲು
ಮಕ್ಕಳಿಗೆ ಕೊಟ್ಟಳು. ಗಬಗಬನೆ ಒಂದೇ ಉಸಿರಿಗೆ ಅವು ಬಾಯಿಗೆಸೆದುಕೊಂಡವು.
ಮೂರು ದಿನಗಳಿಂದಲೂ ಒದ್ದೆಯಾಗಿದ್ದ ಅವರ
ಮೈ ಚರ್ಮವು ಬಿಸಿಲಿಗೆ ಒಣಗುತ್ತಿತ್ತು ಹಸುಗೂಸು ತಾಯ ಎದೆ ಚೀಪಿ
ಹಾಲಿಲ್ಲದೆ ಅಳುತ್ತಿತ್ತು. ಆಕಾಶದಲ್ಲಿ ಮೋಡಗಳು ಕಾಯುತ್ತಿದ್ದವು.
ಇಡೀ ಕಣಿವೆಯು ಹಗಲಿನಲಲಿ ಹಸಿರು ಸಿರಿಯಿಂದ ಕೋರೈಸುತ್ತಿತ್ತು ಹಮಾಲ
ಬಂದು ನಗಾಡುತ್ತಿದ್ದ. ಎಲೆ ಅಡಿಕೆ ಹೊಗೆಸೊಪ್ಪಿನಿಂದ ಅವನ ಹಲ್ಲುಗಳು
ಕರೆಗಟ್ಟಿ ವಿಕಾರವಾಗಿದ್ದವು. ಎಷ್ಟೋ ಕಾಲದಿಂದ ಹೆಣ್ಣು ಕಾಣದ ಪಶುವಿನಂತೆ
ಆ ಹೆಂಗಸಿನ ಮುಂದೆ ವರ್ತಿಸುತ್ತಿದ್ದ. ಎರಡು ದಿನಗಳಿಂದಲೂ ಅವನ
ಕಾಟವನ್ನು ಸಹಿಸಿಕೊಂಡಿದ್ದಳು. ಮುಂದೆಲ್ಲಿಗೆ ಚಾಚಿಕೊಂಡು ಅವಳನ್ನೇ
ಹೆಬ್ಬಾವಿನಂತೆ ನುಂಗುತ್ತಿತ್ತು. ಈ ರಾತ್ರಿ ರೈಲು ನಿಲ್ದಾಣಕ್ಕೆ ಬರುತ್ತದೆ.
ನಾನು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ; ಬಂದುಬಿಡು ಎಂದು
ಹಮಾಲ ಒತ್ತಾಯಿಸುತ್ತಿದ್ದ. ಮಗಳು ಅಪ್ಪ ಬರುತ್ತಾನೆ ಎಂದು ಕಾದು
ಬಸವಳಿದು ಅವಳ ಪುಟ್ಟ ಕಣ್ಣುಗಳಲ್ಲಿ ಕಣಬನಿಯು
ತುಳುಕುತ್ತಿತ್ತು. ಹೊಟ್ಟೆ ಹಸಿವಾಗುತ್ತಿದೆಯಮ್ಮಾಎಂದು ಹುಡುಗ
ಹೊಟ್ಟೆ ಹಿಡಿದುಕೊಂಡು ಕೂತಿದ್ದ. ಗುಡುಗು ಮಿಂಚುಗಳು ಆಕಾಶದ
ಯಾವುದೊ ಮರೆಯಲ್ಲಿ ನಿದ್ದೆ ಮಾಡುತ್ತಿದ್ದವು.
ಕಾಲ ನಿರ್ದಯವಾಗಿ ಗಾಳಿಯ ಜೊತೆ ತೇಲಿ ಹೋಗುತ್ತಿತ್ತು.
ಮತ್ತದೇ ರಾತ್ರಿ ಮಾಯದ ರೆಕ್ಕೆ ಬೀಸಿಕೊಂಡು ಬರುತ್ತಿತ್ತು.
ಕತ್ತಲು ಮಾಟಗಾತಿಯಂತೆ ನಗಾಡುತ್ತಿತ್ತು. ಹಮಾಲ ಹುಮ್ಮಸ್ಸಿನಲ್ಲಿದ್ದ.
ದಪ್ಪ ಮೀಸೆಯ ನೌಕರ ಸಪ್ಪಗೆ ಮುರುಕು ಟೇಬಲಿಗೆ ತಲೆಯಿಟ್ಟು
ತುಕ್ಕು ಹಿಡಿಯುತ್ತಿರುವ ಕಬ್ಬಿಣದ ಚೇರಿನ ಮೇಲೆ ಕೂತಿದ್ದ. ಸ್ಟೇಷನ್
ಮಾಸ್ತರು ಅನುಮಾನದಿಂದ ಮತ್ತೆ ಮಳೆ ಹಿಂದಿನ ರಾತ್ರಿಗಳಂತೆ ಬಂದು
ಏನೇನು ಆವಾಂತರಗಳನ್ನು ಸೃಷ್ಟಿಸುವುದೊ ಎಂದು ಆಕಾಶದ ಕಡೆ ನೋಡುತ್ತಿದ್ದರು.
ಮೋಡಗಳು ನಿಗೂಢವಾಗಿ ಮತ್ತೆ ಹೆಪ್ಪುಗಟ್ಟುತ್ತಿದ್ದವು. ಮಕ್ಕಳು
ತಾಯ ತೆಕ್ಕೆಯಲ್ಲಿ ಕೂತಿದ್ದವು. ಕೋಳಿಮರಿಗಳನ್ನು ರೆಕ್ಕೆ ಮರೆಯಲ್ಲಿ
ಬಚ್ಚಿಟ್ಟುಕೊಳ್ಳುವಂತೆ ತಾಯಿ ಚಡಪಡಿಸುತ್ತಿದ್ದಲು. ದಿಗಂತಗಳಲಿ
ಗುಡುಗು ಸಿಡಿಲುಗಳು ಎಚ್ಚರಗೊಂಡಿದ್ದವು. ಬಿರುಗಾಳಿ ಆಕಾಶದಲ್ಲಿ ಸುತ್ತಿಕೊಂಡು
ಬರುತ್ತಿತ್ತು. ಹಮಾಲ ಉದ್ರೇಕದಿಂದ ಹೆಂಗಸಿನ ಕೈಹಿಡಿದು ಬಲವಂತಪಡಿಸುತ್ತಿದ್ದ.
ಮಕ್ಕಳು ಅಸಹಾಯಕತೆಯಲ್ಲಿ ಹಮಾಲನ ವಿಕಾರ ರೂಪಕ್ಕೆ ಹೆದರಿ
ತಾಯ ಹಿಂದಿಂದೆಯೇ ಸುತ್ತುತ್ತಿದ್ದವು. ದಪ್ಪ ಮೀಸೆಯವನು ಹಮಾಲನನ್ನು
ಕೂಗಿಕೊಂಡ. ಹೆಂಗಸು ಇಲ್ಲಿಂದ ಈಗ ಎಲ್ಲಿಗೆ ಹೋಗುವುದೆಂದು
ತಿಳಿಯದೆ ದುಃಖಿಸುತ್ತಿದ್ದಳು. ಅಮ್ಮಾ ಆ ಬಂಡಿ ದಾರಿಯಲ್ಲಿ ಎಲ್ಲಿಗಾದರೂ
ಹೊರಡೋಣ ನಡೆಯಮ್ಮಾ ಎಂದು ಮಗಳು ಹೇಳುವುದಕ್ಕೂ ಆಲಿಕಲ್ಲು
ಮಳೆ ಸುರಿಯುವಯದಕ್ಕೂ ಒಂದಾಯಿತು.
ಮಿಂಚು ಗುಡುಗುಗಳು ಬೊಬ್ಬರಿಯುತ್ತ
ಕಣಿವೆಗೆ ಬಂದಿಳಿದವು. ಆ ಹೆಂಗಸಿಗೆ ಬೇರೆ ಯಾವ ದಾರಿಯೂ ಕಾಣಲಿಲ್ಲ.
ರೈಲು ಬರುತ್ತಿರುವ ಸದ್ದು ಅವಳನ್ನು ಕೂಗಿಕೊಂಡಿತು. ಮಕ್ಕಳನ್ನು
ಮತ್ತೂ ಎಳೆದುಕೊಂಡಳು. ಉದ್ವೇಗದಿಂದ ಕುದಿಯುತ್ತಿದ್ದಳು.
ದೇಹವೆಲ್ಲ ಅಂತಹ ಮಳೆಯಲ್ಲೂ ಬೆವರುತ್ತಿತ್ತು. `ಅಮ್ಮಾ ಈಗ
ಚಿಟ್ಟೆಗಳು ಏನು ಮಾಡುತಿರುತ್ತ್ತವಮ್ಮಾ' ಎಂದು ಹುಡುಗ
ಕೇಳುತ್ತಿದ್ದ. ಕೈಗೂಸು ಎದೆ ಚೀಪುತ್ತಿತ್ತು. ಮಗಳು ತಾಯ ಸೆರಗನ್ನೆ
ಹಿಡಿದುಕೊಂಡಿದ್ದಳು. ರೈಲು ಆರ್ಭಟಿಸಿ ಕೂಗುತ್ತಿತ್ತು. ಹಮಾಲನ
ರಾಕ್ಷಸ ಹಲ್ಲುಗಳು ಹೆಂಗಸಿನ ಮೈಯನ್ನು ಬಗೆಯುವಂತೆ ಹಾತೊರೆಯುತ್ತಿದ್ದವು.
ಆಕೆ ಮೂರು ಮಕ್ಕಳನ್ನು ಬಲವಾಗಿ ಹಿಡಿದುಕೊಂಡು ಹೊರಕ್ಕೆ
ಬಂದಳು. ಬನ್ನಿ ಬನ್ನಿ; ಈ ರೈಲು ಹತ್ತಿಬಿಡೋಣ ಎಂದು ಮಕ್ಕಳನ್ನು
ಎಳೆದುಕೊಂಡೇ ದೌಡಾಯಿಸಿದಳು. ಮಗಳು, ಅಪ್ಪ ಬರಬೇಕಲ್ಲವೇನಮ್ಮಾ
ಎನ್ನುತ್ತಿದ್ದಳು. ತಾಯಿ ರೈಲು ನುಗ್ಗಿ ಬರುತ್ತಿರುವ ದಾರಿಯ ಮೇಲೆ ಆ
ರೈಲಿಗೆ ಡಿಕ್ಕಿ ಹೊಡೆಯುವಂತೆ ತನ್ನೆಲ್ಲ ಆಕ್ರೋಶವನ್ನೂ ಅದರ ಮೇಲೆ
ಬಡಿಯುವಂತೆ ನುಗ್ಗಿಯೇಬಿಟ್ಟಳು. ರೈಲು ನಿರ್ದಯವಾಗಿ ದಾಟಿಕೊಂಡು
ಹೋಯಿತು. ಮಗಳು ತಾಯ ಹಿಡಿತವನ್ನು ಕಿತ್ತುಕೊಂಡು ಪಕ್ಕಕ್ಕೆ
ಹಾರಿಬಿದ್ದಿದ್ದಳು. ಕೈಗೂಸಿನ ಸಮೇತ ನಾಲ್ಕು ವರ್ಷದ ಹುಡುಗನ
ಜೊತೆಗೇ ಆ ಹೆಂಗಸು ಛಿದ್ರವಾಗಿ ರೈಲು ಹಳಿಗೆ ಅಂಟಿಕೊಂಡಿದ್ದಳು.
ಮಗಳು ದಿಕ್ಕೆಟ್ಟು ಕಗ್ಗತ್ತಲ ಮಳೆಯಲ್ಲಿ ಮಿಂಚು
ತೋರುವ ಬೆಳಕಿನಲ್ಲಿ ಬಂಡಿದಾರಿಯನ್ನು ಹಿಡಿದು ಓಡತೊಡಗಿದ್ದಳು.
ಅವಳನ್ನು ಅಟ್ಟಿಸಿಕೊಂಡು ಬರುವಂತೆ ಮಳೆಗಾಳಿಯು
ದಾಳಿಯಿಡುತ್ತಿತ್ತು. ಗುಬ್ಬಿಮರಿಯಂತೆ ಯಾವುದೊ ಹೆಮ್ಮರದ ಪೊಟರೆಯಲಿ
ಸೇರಿ ರಾತ್ರಿ ಕಳೆದಳು. ಮಾಯಾದಿ ಹಗಲು ಕಣಿವೆಯಲ್ಲಿ
ಸುಳಿದಾಡುತ್ತಿತ್ತು. ಪುಟ್ಟ ಹುಡುಗಿ ದಿಟ್ಟತನದಲ್ಲಿ ಪೊಟರೆಯಿಂದ ಹೊರ
ಬಂದು ಆ ಕಣಿವೆಯ ಬಂಡಿದಾರಿಯಲ್ಲೇ ಸಾಗಿ ಅಲ್ಲೆಲ್ಲ ಅಪ್ಪನ
ಚಿಲುಮೆಯ ತೋಟವನ್ನು ಹುಡುಕಾಡತೊಡಗಿದಳು. ಬೆಟ್ಟಗುಡ್ಡಗಳ
ಹತ್ತಿ ಇಳಿದಳು. ಅಪ್ಪ ಇಲ್ಲೇ ಎಲ್ಲೋ ಇರುವನೆಂದು ಅಪ್ಪಾ ಅಪ್ಪಾ
ಎಂದು ಕೂಗಿಕೊಂಡಳು. ಅಲ್ಲೆಲ್ಲ ದಟ್ಟವಾಗಿದ್ದ ಹಣ್ಣಿನ ಹೂವಿನ ಚೆಲುವಿನ
ಗಿಡಮರಗಳು ಅವಳ ದನಿಗೆ ಸ್ಪಂದಿಸಿದವು. ಅವಳ ಕೂಗು
ಕಣಿವೆಯಲ್ಲಿ ಪ್ರತಿಧ್ವನಿಸಿತು. ಇಲ್ಲಿದ್ದೇನೆ ಬಾ ಮಗಳೇ ಎಂದು
ಯಾರೋ; ಭಾಗಶಃ ಆ ಗಿಡಮರಗಳೇ ಇರಬೇಕು;
ಕರೆದಂತಾಯಿತು. ಹುಡುಗಿ ಎತ್ತರದ ಆ ಬೆಟ್ವವನ್ನು ಹತ್ತಿದಳು. ಬೆರಗಾಗಿ
ನಿಂತಳು. ಬಣ್ಣ ಬಣ್ಣದ ಹೂ ಚಿಟ್ಟೆಗಳು ಅಲ್ಲಿ ನಲಿಯುತ್ತಿದ್ದವು.
ಚಿಲುಮೆಯ ಬುಗ್ಗೆ ಅವಳನ್ನು ಹತ್ತಿರಕ್ಕೆ ಕರೆದುಕೊಂಡಿತು.