Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 14 October 2006 04:01 PM

ಎತ್ತ ಸಾಗುತ್ತಿದೆ ಇಂದಿನವರ ನೈತಿಕತೆ?!

ಹೀಗೆ ಜೀವನ ಮಾಡುವ ಹಾಗಿದ್ದರೆ ಮಾನವನಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸವಾದರೂ ಏನು? ಮಾನವ ಸಂಯಮದಿಂದ ವರ್ತಿಸುವವದರಿಂದಲೇ ಅವನಿಗೆ ಪ್ರಾಣಿಗಳಿಗಿಂತ ಹೆಚ್ಚಿನ ಸ್ಥಾನ ಸಿಕ್ಕಿರಬಹುದಲ್ಲವೇ? ಇದರ ಅವಶ್ಯಕತೆ ಮಾನವನಿಗೆ ಇದೆಯೇ? ಹೀಗೆ ಜೀವಿಸುವವರು ತಮ್ಮ ಮಕ್ಕಳಿಗೆ ಯಾವ ತರಹ ಸಂಸ್ಕೃತಿಯನ್ನು ಧಾರೆ ಎರೆಯಬಲ್ಲರು?
 

T.V Srinivasತಳುಕು ಶ್ರೀನಿವಾಸ್

ಮುಂಬಯಿ

tvsrinivas41@gmail.com

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ|
ತ್ರೈತಸ್ತುನಪೂಜ್ಯಂತೇ ಸರ್ವಸ್ತತ್ರಫಲಃ ಕ್ರಿಯಾಃ||
ಎಲ್ಲಿ ಹೆಂಗಸರು ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ಸುಪ್ರಸನ್ನರಾಗಿರುವರು
ಎಲ್ಲಿ ಅವರನ್ನು ಪೂಜಿಸಲ್ಪಡುವುದಿಲ್ಲವೋ ಅಲ್ಲಿ ಯಾವ ಧರ್ಮ ಕಾರ್ಯಗಳೂ ಫಲಿಸದು
(ಮನುಸ್ಮೃತಿ)

   ನಮ್ಮ ಜೀವನದಲ್ಲಿ ನಮ್ಮೊಂದಿಗೆ ಒಡನಾಟಕ್ಕೆ ಬಂದು ಹೋಗುವವರು ಹಲವಾರು ಮಂದಿ. ಕೆಲವು ಜನರುಗಳ ಜೀವನ ಚರ್ಯೆ, ವ್ಯವಹಾರ ನೋಡಲು ಮನಸ್ಸು ಅಲ್ಲೋಲ ಕಲ್ಲೋಲವಾಗುವುದು. ಅದು ಏಕೆ ಹಾಗಾಗುವುದು? ಇದರ ಬಗ್ಗೆ ನನ್ನ ಮನವನ್ನು ನಾನು ಮಥಿಸಿದಾಗ ಹೊರಬಂದ ಕೆಲವು ಅಂಶಗಳನ್ನು ನಿಮ್ಮ ಮುಂದಿಡುತ್ತಿರುವೆ. ನಿಮ್ಮ ಪ್ರತಿಕ್ರಿಯೆ ಏನೇ ಇರಲಿ, ನನ್ನ ಮನಸ್ಸಿನಲ್ಲಿರುವ ತಾಕಲಾಟವನ್ನಂತೂ ಹೊರಹಾಕಲೇಬೇಕಿದೆ, ಹಾಕುತ್ತಿರುವೆ.
 

   ಮೊದಲಿನಿಂದಲೂ ನಾನೊಬ್ಬ ಸೂಕ್ಷ್ಮಜೀವಿ. ನನ್ನ ಸುತ್ತ ಮುತ್ತಲಿನಲಿರುವವರ ಕೆಲವು ವಿಷಯ / ವರ್ತನೆಗಳನ್ನು ಗಮನಿಸಿರದ ಕಾರಣ (ಹಾಗೆ ಈಗನ್ನಿಸುತ್ತಿದೆ) ಮತ್ತು ಈಗ ಕಣ್ಣಿಗೆ ಕಂಡ ತಕ್ಷಣ ನನ್ನ ಮನಸ್ಸು ಬಹಳವಾಗಿ ವಿಚಲಿತವಾಗಿದೆ. ಇಂತಹ ವಿಷಯಗಳು ಸರ್ವೇಸಾಮಾನ್ಯ ಎಂದು ನೀವನ್ನುವಿರಾ? ಏನೋ ನಿಮಗೆ ಹಾಗನ್ನಿಸಿರಬಹುದು, ಆದರೆ ನಾನು ಕಾಣುತ್ತಿರುವುದೇ ಈಗ. ನನಗೆ ಹಾಗನ್ನಿಸುತ್ತಿಲ್ಲ. ಇಂತಹದ್ದನ್ನೆಲ್ಲಾ ಈ ಪಾಪಿ ಕಣ್ಣುಗಳು ಇನ್ನೂ ನೋಡಬೇಕೇ? ಅಲ್ರೀ ಏನಾಯ್ತೂಂತ ಹೀಗಾಡ್ತಿದ್ದೀರ ಅಂತೀರಾ? ನೋಡಿ, ಕೇಳಿ ಹೇಳುವೆ.

   ಕೆಲವು ದಿನಗಳ ಹಿಂದೆ ನನ್ನ ಮಿತ್ರರೊಬ್ಬರ ಬ್ಲಾಗು ನೋಡಿ, ಅವರ ಲೇಖನದ ಬಗ್ಗೆ ಪ್ರತಿಕ್ರಿಯಿಸಿದೆ. ಅಲ್ಲಿಯೇ ಇನ್ನೊಬ್ಬರು ತಮ್ಮ Do you call this Modernityಪ್ರತಿಕ್ರಿಯೆಯನ್ನು ನೀಡಿದ್ದರು. ಕುತೂಹಲ ತಾಳಲಾರದೇ ಅವರ ಬ್ಲಾಗಿಗೆ ಭೇಟಿ ನೀಡಿದೆ. ಅದೊಂದು ಹೆಣ್ಣುಮಗಳು ಬರೆಯುತ್ತಿರುವ ಬ್ಲಾಗು. ಕಣ್ಣಿಗೆ ಕಂಡ ಮೊದಲ ಲೇಖನ ಹೀಗಿತ್ತು. ಆಕೆ ಒಮ್ಮೆ ಟಿವಿ ಶೋಗೆ ಯಾವುದೋ ಊರಿಗೆ ಹೋಗಿದ್ದಳಂತೆ. ಜೊತೆಯಲ್ಲಿ ಯಾರೂ ಇರಲಿಲ್ಲ. ಆ ಸ್ಥಳವನ್ನು ಸೇರಿದಾಗ ರಾತ್ರಿಯಾಗಿತ್ತು. ಅಲ್ಲಿಯೇ ಒಂದು ದೊಡ್ಡ ಕೊಠಡಿಯಲ್ಲಿ ಮಲಗಲು ಅವಕಾಶ ಮಾಡಿಕೊಟ್ಟಿದ್ದರು. ಮಧ್ಯ ರಾತ್ರಿ ಎಚ್ಚರವಾದಾಗ ಇನ್ನೊಬ್ಬ ಗಂಡು ಹುಡುಗ ಅದೇ ಸ್ಥಳಕ್ಕೆ ಮಲಗಲು ಬಂದನಂತೆ ... ಹೀಗೆ ಒಂದು ರಾತ್ರಿ ಮತ್ತು ಒಂದು ದಿನದ ಅನುಭವವನ್ನು ತೋಡಿಕೊಂಡು, ಈಗ ಮದುವೆಯಾಗಿರುವುದರಿಂದ ಮತ್ತೆ ಆ ಹುಡುಗನ ಬಗ್ಗೆ ಯೋಚಿಸಲಾಗುತ್ತಿಲ್ಲ, ಎಂದೆಲ್ಲಾ ಬರೆದಿದ್ದರು. ಆದರೆ ಇನ್ನಿತರ ಪ್ರತಿಕ್ರಿಯೆಗಳಲ್ಲಿ ಕೆಲವರು ನೀನು ಮತ್ತೆ ಆ ಹುಡುಗನನ್ನು ಹುಡುಕು. ಒಂದೇ ದಿನದಲ್ಲಿ ಅಷ್ಟು ಅನ್ಯೋನ್ಯವಾದವನು ಎಂದ ಮೇಲೆ, ನಿನ್ನ ಗಂಡನಿಗಿಂತ ಅವನಿಂದಲೇ ನಿನಗೆ ಹೆಚ್ಚಿನ ಪ್ರೀತಿ ಸಿಗುವುದು, ಎಂದೂ ಬರೆದಿದ್ದರು. ಅದಕ್ಕವಳು ನನಗೆ ಅವನ ಬಗ್ಗೆ ಮತ್ತೆ ವಿಷಯಗಳು ತಿಳಿಯಲಿಲ್ಲ ಎಂದು ಹೇಳಿಕೊಂಡಿದ್ದಳು. ನಾನು ಪ್ರತಿಕ್ರಿಯಿಸಲಿಲ್ಲ. ಇವರು ಯಾರೋ ನನಗೆ ತಿಳಿಯದವರಾದ್ದರಿಂದ, ಈ ಲೇಖನವನ್ನು ಒಂದು ಚಿತ್ರವನ್ನು ನೋಡಿದಂತೆ ಎಂದು ಸುಮ್ಮನಾಗಿದ್ದೆ.

   ಮೊದಲೊಮ್ಮೆ ನನ್ನ ಹಿರಿಯ ಸ್ನೇಹಿತರೊಬ್ಬರು ತಮ್ಮ ಮಗಳ ಮದುವೆ ನಿಷ್ಕರ್ಷೆ ಆದುದರ ಬಗ್ಗೆ ಹೇಳಿದ್ದರು. ಒಳ್ಳೆಯದಾಗಲಿ ಎಂದಷ್ಟೇ ಹೇಳಿದ್ದೆ. ಒಂದು ವಾರದ ಬಳಿಕ ಅವರು ಬಹಳ ಚಿಂತೆಯಲ್ಲಿರುವಂತೆ ಕಾಣಿಸಿತು. ಏಕೆ, ಏನಾಯ್ತು ಎಂದು ಕೇಳಿದ್ದೆ. ಅದಕ್ಕವರು ಹೇಳಿದ್ದು ಹೀಗಿದೆ.
ಅವರ ಮಗಳು ತಂತ್ರಾಂಶ ಅಭಿಯಂತೆಯಾಗಿ ಒಂದು ಹೆಸರಾಂತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಮೆರಿಕೆಯಲ್ಲಿ ವಾಸವಾಗಿದ್ದಳು. ಆಕೆಯ ಜೊತೆಗೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೋರ್ವ ತರುಣ ಸ್ವಲ್ಪ ದಿನಗಳಲ್ಲಿಯೇ ಅವಳ ಮನೆಯಲ್ಲಿಯೇ ಇರಲಾರಂಭಿಸಿದನು. ಮುಂದೆ ಅವರೀರ್ವರಲ್ಲಿ ಪ್ರೇಮಾಂಕುರಿಸಿ, ಮದುವೆಯಾಗುವುವೆಂದು ತಮ್ಮ ತಮ್ಮ ತಂದೆ ತಾಯಿಯರುಗಳಿಗೆ ಹೇಳಿದ್ದರು. ಅದಕ್ಕೆ ಒಪ್ಪಿಗೆಯನ್ನೂ ಪಡೆದಿದ್ದರು. ಆ ಹುಡುಗ ಉತ್ತಮ ಸಂಸ್ಕೃತಿಯುಳ್ಳ ಮನೆತನದಿಂದ ಬಂದವನು. ಅವರ ಮೂಲ ಸ್ಥಳ ತಿರುಪತಿ. ನನ್ನ ಹಿರಿಯ ಸ್ನೇಹಿತರು ಪಶ್ಚಿಮ ಬಂಗಾಳದವರು. ಅವರೂ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಂತಹವರು. ಒಳ್ಳೆಯ ಮನೆಯ ಹುಡುಗಿಗೆ ಅಂತಹದ್ದೇ ಮನೆತನದ ಹುಡುಗ ಸಿಕ್ಕಿದ್ದು ಮತ್ತು ಇಬ್ಬರೂ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದುದು ಎಲ್ಲರಿಗೂ ಸಂತೋಷವನ್ನಿತ್ತಿತ್ತು. ನನ್ನ ಸ್ನೇಹಿತರು ಮದುವೆ ಸಮಾರಂಭವನ್ನು ಪೂರೈಸಲು ದೂರದ ಕಲ್ಕತ್ತೆಯಲ್ಲಿ ಎಲ್ಲ ಸಿದ್ಧತೆಗಳನ್ನು ನಡೆಸಲುದ್ಯುಕ್ತವಾಗಿದ್ದರು. ಮದುವೆಗೆ ಒಂದು ವಾರ ಇರುವಾಗ ಹುಡುಗಿ ಅಮೆರಿಕೆಯಿಂದ ಫೋನಾಯಿಸಿ, ಹುಡುಗನ ತಂದೆ ತಾಯಿಗಳ ಹೇಳಿಕೆಯಂತೆ ಮದುವೆಯನ್ನು ತಿರುಪತಿಯಲ್ಲಿಯೇ ಮಾಡಬೇಕೆಂದೂ, ಅದಕ್ಕೆ ಎಲ್ಲ ಸಿದ್ಧತೆಗಳನ್ನೂ ಅವರೇ ಮಾಡುವರೆಂದೂ ತಿಳಿಸಿದ್ದಳು. ಅದಕ್ಕೂ ನನ್ನ ಸ್ನೇಹಿತರು ಒಮ್ಮತವನ್ನು ಸೂಚಿಸಿದ್ದರು. ಮದುವೆಗೆ ಮೂರು ದಿನಗಳಿರುವಾಗ ಆಕೆ ಮುಂಬಯಿಗೆ ಬಂದು ತನ್ನ ತಂದೆಯ ಮುಂದೆ ಹೇಳುತ್ತಾಳಂತೆ, `ಹುಡುಗ ಪ್ರತಿದಿನವೂ ಬೆಳಗ್ಗೆ ದೇವರ ಭಾವಚಿತ್ರಕ್ಕೆ ಪೂಜೆ ಮಾಡುತ್ತಾನೆ, ಶುದ್ಧ ಶಾಕಾಹಾರಿ, ಮೊಸರನ್ನವನ್ನಂತೂ ಪ್ರತಿನಿತ್ಯ ತಿನ್ನಲೇಬೇಕು, ನನಗಾದರೋ ಪ್ರತಿದಿನವೂ ಮಾಂಸಾಹಾರವನ್ನು ತಿನ್ನಲೇಬೇಕು, ಜೊತೆಗೆ ವಾರಕ್ಕೊಮ್ಮೆಯಾದರೂ ಕುಡಿತ ಇರಲೇಬೇಕು. ಈ ವಿಷಯದಲ್ಲಿ ಅವನು ಹೊಂದಿಕೆಯಾಗುತ್ತಿಲ್ಲ. ಹೀಗೇ ಮುಂದುವರೆದರೆ, ನಾನು ಅವನನ್ನು ವಿಚ್ಛೇದಿಸಬೇಕಾಗಬಹುದು. ಮುಂಚಿತವಾಗಿಯೇ ಈ ವಿಷಯವನ್ನು ನಿಮ್ಮ ಮುಂದೆ ಅರುಹುತ್ತಿರುವೆ'.


   ಈ ವಿಷಯವಾಗಿ ನನ್ನ ಸ್ನೇಹಿತರು ಬಹಳ ಚಿಂತಿತರಾಗಿ, ಮಗಳ ಮುಂದಿನ ಗತಿಯೇನು ಎಂದು ನನ್ನನ್ನು ಕೇಳಿದರು. ನಾನೇನು ತಾನೆ ಹೇಳಬಲ್ಲೆ. ಗುರುದೇವರಲ್ಲಿ ನಂಬಿಕೆ ಇಡಿ, ಯಾರೂ ತನ್ನವರಲ್ಲ, ಈ ಆತ್ಮಕ್ಕೂ ಈ ದೇಹಕ್ಕೂ ಸಂಬಂಧವನ್ನು ದೂರ ಮಾಡುವ ನಿಟ್ಟಿನಲ್ಲಿ ಯೋಚಿಸೋಣವೆಂದು ಹೇಳಿದ್ದು, ಅವರಿಗೆ ಗೊಡ್ಡು ಒಣ ವೇದಾಂತ ಎಂದೆನಿಸಿತು. ಅದು ಹೇಗೋ ಮದುವೆಯಾಯಿತು. ಅಲ್ಲ, ಆ ಹುಡುಗಿಗೆ ಮದುವೆಗೆ ಮುಂಚೆಯೇ ವಿಚ್ಛೇದನದ ಬಗ್ಗೆ ಯೋಚನೆಯೇ? ಸ್ವಲ್ಪ ದಿನಗಳಲ್ಲಿ ಆ ಹುಡುಗ ಅಮೆರಿಕೆಯಲ್ಲಿಯೇ ತಳ ಊರಿದ, ಆ ಹುಡುಗಿ ಅದೇ ಕಂಪನಿಯಲ್ಲಿದ್ದು ಬೆಂಗಳೂರಿಗೆ ವರ್ಗವಾಗಿ ಬಂದು ಒಬ್ಬಳೇ ವಾಸಿಸುತ್ತಿದ್ದಾಳೆ. ಈಗ ನನ್ನ ಸ್ನೇಹಿತರು ಬೇರೆ ಊರಿಗೆ ವರ್ಗವಾಗಿ ಹೋಗಿರುವುದರಿಂದ, ಮಗಳ ಸಂಸಾರ ಹೇಗಿರುವದೋ ತಿಳಿಯದು. ಈತ ನನಗೆ ತಿಳಿದವರಾದ್ದರಿಂದ, ಅವರ ಮಗಳ ಭವಿಷ್ಯದ ಬಗ್ಗೆ ಮತ್ತೆ ಮುಂದೆ ಅವಳಿಂದ ಅವಳ ಮಕ್ಕಳಿಗೆ ಎಂತಹ ಸಂಸ್ಕೃತಿಯನ್ನು ಒದಗಿಸಬಹುದು ಎಂದು ಯೋಚಿಸಿ ಸ್ವಲ್ಪ ತಳಮಳಕ್ಕೊಳಗಾಗಿದ್ದೆ.

   ಅದೇ ಸಮಯದಲ್ಲಿ, ಒಂದು ಸಮುದಾಯದಲ್ಲಿ ಕಾಲಹರಣಕ್ಕಾಗಿ ಅದು ಇದು ಬರೆಯುತ್ತಿದ್ದೆ. ಅಂತಹ ಒಂದು ಸಮಯದಲ್ಲಿ ನನಗೊಬ್ಬಾಕೆ ಪರಿಚಯವಾಯಿತು. ಅವರೂ ಅಮೆರಿಕೆಯಲ್ಲಿ ಓದುತ್ತಿದ್ದು, ಅವರ ಪತಿ ಅಲ್ಲಿ ಕೆಲಸ ಮಾಡುತ್ತಿದ್ದರು. ಆಗೀಗ ಪತ್ರ ವಿನಿಮಯವೂ ಆಗುತ್ತಿತ್ತು. ಒಮ್ಮೆ ಆಕೆಯ ಪತ್ರದಲ್ಲಿನ ಧಾಟಿ ಸ್ವಲ್ಪ ವಿಚಿತ್ರವೆನ್ನಿಸುವಂತಿತ್ತು. ಅವರು ಚಾಟು ಡಬ್ಬಿಗೆ ಬಂದಾಗ ತಿಳಿದದ್ದೇನೆಂದರೆ, ಅಂದು ಆಕೆ ಮದ್ಯಪಾನ ಮಾಡಿ ಯಾವುದೋ ಜ್ಞಾನದಲ್ಲಿ ನನಗೆ ಪತ್ರ ಬರೆದಿದ್ದರಂತೆ. ಇದರ ಬಗ್ಗೆ ಕ್ಷಮಾಪಣೆ ಕೇಳಿದ್ದರು. ಅದೇ ಊರಿನಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ಕನ್ನಡಿಗರ ಮಿತ್ರರದ್ದೂ ಪರಿಚಯವಾಗಿತ್ತು. ಅವರಿಗೆ ನಾನು ಕೇಳಿದ್ದೆ. `ಅಮೆರಿಕೆ ಅಥವಾ ಪರದೇಶದಲ್ಲಿ ಮದ್ಯಪಾನದ ಅವಶ್ಯಕತೆ ಇದೆಯೇ? ಅಲ್ಲೆಲ್ಲಾ ಹವಾಮಾನ ವ್ಯತಿರೇಕಕ್ಕೆ ಹೋಗುವುದರಿಂದ, ಮದ್ಯಪಾನದ ಸೇವನೆ ಅವಶ್ಯವೆನ್ನುವರಲ್ಲಾ? ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?' ಎಂದು ಕೇಳಿದ್ದಕ್ಕೆ, ಉತ್ತರವಾಗಿ ಅವರು ಹೇಳಿದುದಿಷ್ಟೇ. ಇದೆಲ್ಲಾ ಕುಂಟು ನೆಪಗಳು. ಎಲ್ಲಿಯೂ ಮದ್ಯಪಾನದ ಅವಶ್ಯಕತೆ ಇಲ್ಲ. ಇಲ್ಲೆಲ್ಲಾ ಮನೆಗಳು ಹವಾನಿಯಂತ್ರಿತವಾಗಿರುತ್ತವೆ. ಮತ್ತೆ ಆಕೆಯೊಂದಿಗೆ ಈ ವಿಷಯವನ್ನು ಚರ್ಚಿಸಲುದ್ಯುಕ್ತನಾದಾಗ, ಅವಳು ತನ್ನ ನಿಲುವೇ ಸರಿ ಎಂಬ ಧಾಟಿಯಲ್ಲಿದ್ದಳು. ಅವಳಿನ್ನೂ ಚಿಕ್ಕವಳು, ಬದುಕನ್ನು ಇನ್ನೂ ಸರಿಯಾಗಿ ಅರಿಯದವಳು, ಎಂದು ಎರಡು ಮಾತು ಹೇಳ ಹೋದವನಿಗೆ ಮುಖದ ಮೇಲೆ ಹೊಡೆದಂತಾಗಿತ್ತು. ಅಂದೇ ಕೊನೆಯಾಯಿತು, ಆಕೆಯೊಂದಿಗೆ ನಾನು ಮತ್ತೆ ಸಂಪರ್ಕವಿರಿಸಿಕೊಳ್ಳಲೇ ಇಲ್ಲ. ಆಕೆಯಿಂದ ಬಂದ ಪತ್ರಗಳೆಲ್ಲವನ್ನೂ ಕ.ಬು.ಗೆ ಎಸೆದಿರುವೆ.

   ಸ್ವಲ್ಪ ದಿನಗಳ ಬಳಿಕ ಇನ್ನೊಂದು ಸಮುದಾಯದಲ್ಲಿ ಅವರಿವರುಗಳ ಮಾಹಿತಿಯ ಬಗ್ಗೆ ಕಣ್ಣಾಡಿಸುತ್ತಿದ್ದಾಗ, ನನಗೆ ಆಗ ತಾನೆ ಪರಿಚಯವಾಗಿದ್ದ ಒಬ್ಬರ ಬಗ್ಗೆ ನೋಡಿದೆ. ಅಲ್ಲಿಂದ ಮುಂದಕ್ಕೆ ಅವರ ಸ್ನೇಹಿತರುಗಳ ಬಗ್ಗೆ ನೋಡುತ್ತಿದ್ದಾಗ ಒಬ್ಬ ಹೆಣ್ಣುಮಗಳ ಮಾಹಿತಿಯೂ ಕಣ್ಣಿಗೆ ಬಿದ್ದಿತು. ಆಗೀಗ ಅವರೆಲ್ಲರೂ ಒಟ್ಟಿಗೇ ಕುಳಿತು ಕುಡಿಯುವರಂತೆ. ಹಾಗೆಯೇ ಮುಂದೆ ಅವರ ಬ್ಲಾಗಿನ ಬಗ್ಗೆ ಕಣ್ಣಾಡಿಸಿದೆ. ಅದರಲ್ಲಿಯೂ ಧೂಮಪಾನ, ಕುಡಿತ, ಅಶ್ಲೀಲದ ಬಗ್ಗೆ ಬರೆದಿದ್ದರು. ಮದುವೆ ಆದರೂ ಗಂಡ ತನಗೆ ಬಾಳಿನಲ್ಲಿ ಹಿತ ಬಯಸಲು ಮಾತ್ರ ಬೇಕು, ತಾನೇನೇ ಮಾಡಿದರೂ ಸಹಿಸಿಕೊಂಡಿರಬೇಕು ಎಂದು ಬರೆದಿದ್ದರು. ಅವರ ಸ್ನೇಹಿತರು ಸ್ನೇಹಿತೆಯರ ಬಗ್ಗೆಯೂ ಇರುವ ಮಾಹಿತಿಯನ್ನು ನೋಡಿದೆ. ಅದರಲ್ಲಿ ಕೆಲವರು ಮದುವೆಯಾದವರೂ ಆಗಿದ್ದರು. ಅವರೂ ಮುಕ್ತ ಜೀವನದ ಬಗ್ಗೆ, ಕುಡಿತ, ಧೂಮಪಾನದ ಚಟವಿರುವುದಾಗಿ ಬರೆದುಕೊಂಡಿದ್ದಾರೆ.


   ಹೀಗೆ ಜೀವನ ಮಾಡುವ ಹಾಗಿದ್ದರೆ ಮಾನವನಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸವಾದರೂ ಏನು? ಮಾನವ ಸಂಯಮದಿಂದ ವರ್ತಿಸುವವದರಿಂದಲೇ ಅವನಿಗೆ ಪ್ರಾಣಿಗಳಿಗಿಂತ ಹೆಚ್ಚಿನ ಸ್ಥಾನ ಸಿಕ್ಕಿರಬಹುದಲ್ಲವೇ? ಇದರ ಅವಶ್ಯಕತೆ ಮಾನವನಿಗೆ ಇದೆಯೇ? ಹೀಗೆ ಜೀವಿಸುವವರು ತಮ್ಮ ಮಕ್ಕಳಿಗೆ ಯಾವ ತರಹ ಸಂಸ್ಕೃತಿಯನ್ನು ಧಾರೆ ಎರೆಯಬಲ್ಲರು? ಹಣ ಕೈನಲ್ಲಿದ್ದು ಮಾಡಲು ಕೆಲಸವಿಲ್ಲದೇ ಇದ್ದಾಗ ಹೀಗೆ ದುಶ್ಚಟಗಳಿಗೆ ದಾಸರಾಗುವರೇ? ಜೀವಿತಕ್ಕೆ ಅವಶ್ಯಕತೆ ಇರುವುದಕ್ಕಿಂತ ಹೆಚ್ಚಿನ ಹಣ ಕೈಗೆ ಬಂದರೆ ಹೀಗೆ ಮಾಡಬೇಕೆಂದು ನಿಯಮವಿದೆಯೇ? ಮುಂದಿನ ಹತ್ತು ವರ್ಷಗಳಲ್ಲಿ ಅವರ ಜೀವನ ಶೈಲಿ ಹೇಗಿರಬಹುದೆಂದು ಅವರು ಚಿಂತಿಸಿಹರೇ? ಈ ಜಗತ್ತಿನಲ್ಲಿ ನಮ್ಮ ಧ್ಯೇಯವಾದರೂ ಏನು? ಬದುಕನ್ನು ಒಂದೆಡೆ ನಿಲ್ಲಿಸಬಾರದೆಂದು ಬರುವೆವು, ಬಂದು ಇನ್ನೊಂದು ಜೀವಕ್ಕೆ ಬದುಕನ್ನು ನೀಡುವೆವು, ಕಾಣದಂತೆ ಮಾಯವಾಗುವೆವು. ಹಾಗೆ ಇನ್ನೊಂದು ಜೀವಕ್ಕೆ ಬದುಕನ್ನು ನೀಡುವಾಗ, ಅದರಲ್ಲಿ ಒಳಿತು ಕೆಡುಕಗಳ ಬಗ್ಗೆ ತಿಳಿವು ಮೂಡಿಸುವುದು ಕರ್ತವ್ಯವಲ್ಲವೇ? ಮುಂದೆ ಮಗು ಅಡ್ಡ ಹಾದಿ ಹಿಡಿದಾಗ ನೊಂದು ಬೆಂದರೇನು ಪ್ರಯೋಜನ.

   ಹುಹ್! ಇದೆಲ್ಲಾ ನನಗೇತಕೆ? ನನ್ನ ಕೈನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಪಕ್ಕದವನು ಧೂಮಪಾನ ಮಾಡಿದರೂ ಸಹಿಸಲಾರದವನು ನಾನೊಬ್ಬ ನಿರುಪಯೋಗಿ ಎಂದು ಸುಮ್ಮನೆ ಮೂಲೆಯಲ್ಲಿ ಕುಳಿತುಕೊಳ್ಳುವುದೇ ಲೇಸು. ಆದರೆ ನಮಗೆ ಹತ್ತಿರವಾದವರು ಹೀಗೆ ಮಾಡಿದರೆ ಹೇಗೆ ಪ್ರತಿಕ್ರಿಯಿಸಬೇಕು. ನನಗೆ ಹತ್ತಿರವಾಗುತ್ತಿರುವ ಸ್ನೇಹಿತರೆಲ್ಲರೂ ಹೀಗೇ ನನಗೆ ದೂರವಾಗುತ್ತಿರುವರೇ? ಮುಂದೊಂದು ದಿನ ನನ್ನ ಮಕ್ಕಳೂ ಇಂತಹ ಸ್ಥಿತಿಯಲ್ಲಿರುವುದನ್ನು ನಾನು ನೋಡಬೇಕೇ? ಇದೊಂದು ವಿಷಯ ನನ್ನ ತಲೆಯೊಳಗೆ ಕೊರೆಯುತ್ತಿದೆ. ಯಾರಾದರೂ ಉಪಾಯ ತಿಳಿಸುವಿರಾ? ಆಗದವನು ಮಡಗಿದಂತಿರು ಎಂದು ಸುಮ್ಮನಿರುವುದು ಲೇಸಲ್ಲವೇ? ಈ ಜಗತ್ತನ್ನು ತಿದ್ದಲಾಗುವುದೇ? ಬೇಕಿದ್ದರೆ ನಾನು ಅವರಂತಾಗಬಹುದು ಇಲ್ಲದಿದ್ದರೆ ನನಗೆ ಬೇಕಿದ್ದಂತೆ ನಾನಿರಬಹುದು. ಇದೊಂದೇ ಸಮಜಾಯಿಷಿ ಹೇಳಿಕೊಂಡು ಜೀವಿತವನ್ನು ಕಳೆಯಬೇಕು. ನೀವೇನಂತೀರಿ?

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com