ಚೀನಾದಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ೪೦,೦೦೦ ಡಾಲರ್
ಬೀಜಿಂಗ್: ಚೀನಾದಲ್ಲಿ ಕ್ರಿಕೆಟ್ ಅಭಿವೃದ್ಧಿ ಪಡಿಸಲು
೪೦,೦೦೦ ಡಾಲರ್ ನೀಡಲಾಗಿದೆ ಎಂದು ಎಸಿಸಿಯ ಮುಖ್ಯ ನಿರ್ವಾಹಕ ಸೈಯದ್
ಅಶ್ರಫುಲ್ ಹಕ್ ಹೇಳಿದ್ದಾರೆ.
ಕ್ರಿಕೆಟ್ ಆಡದ ದೇಶಗಳಲ್ಲಿ ಕ್ರಿಕೆಟ್ ಆಟದ ಬಗ್ಗೆ
ಪ್ರಚಾರ ಮಾಡಲು ಐಸಿಸಿ ಸಂಸ್ಥೆಯ ಮುಖ್ಯ ನಿರ್ವಾಹಕ ಮಾಲ್ಕಂ
ಸ್ಪೀಡ್ ಹಾಗೂ ಎಸಿಸಿ ಮುಖ್ಯ ನಿರ್ವಾಹಕ ಅಶ್ರಫುಲ್ ಹಕ್ ಚೀನಾ ದೇಶದ
ಪ್ರವಾಸದಲ್ಲಿದ್ದಾರೆ. ಚೀನಾದಲ್ಲಿ ಕ್ರಿಕೆಟ್ ಅಭಿವೃದ್ಧಿಯಾದರೆ ಹೆಚ್ಚಿನ ಪ್ರಚಾರ
ದೊರೆಯುತ್ತದೆ ಮತ್ತು ಒಲಂಪಿಕ್ ಕ್ರೀಡೆಗಳಲ್ಲೂ ಸೇರ್ಪಡೆಯಾಗುವ
ಸಾಧ್ಯತೆ ಇರುತ್ತದೆ.
ಚೀನಾ ದೇಶಕ್ಕೆ ಕೊಟ್ಟ ಹಣದ ಅರ್ಧ ಮೊತ್ತವನ್ನು
ಏಷ್ಯನ್ ಕ್ರಿಕೆಟ್ ಮಂಡಳಿ ಭರಿಸುತ್ತಿದೆ. ಉಳಿದರ್ಧವನ್ನು ಅಂತರರಾಷ್ಟ್ರೀಯ
ಕ್ರಿಕೆಟ್ ಮಂಡಳಿಯು ನೀಡಲಿದೆ.
ಚೀನಾದಲ್ಲಿ ಶಾಲಾಮಟ್ಟದಿಂದ ಕ್ರಿಕೆಟ್‌ಅನ್ನು
ಬೆಳಸಲಾಗುವುದು. ಶೀಘ್ರವಾಗಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪೂರ್ಣ
ಪ್ರಮಾಣದಲ್ಲಿ ಬೆಳವಣಿಗೆ ಕಾಣಲು ಹತ್ತು ವರ್ಷವಾದರೂ ಬೇಕಾಗುತ್ತದೆ
ಎಂದು ಮಾಲ್ಕಂ ಸ್ಪೀಡ್ ಹೇಳಿದ್ದಾರೆ.