|
ನುಡಿಸಿರಿ ಸಮಾಪನ - ಕನ್ನಡ ಮನಸ್ಸುಗಳಿಗೆ ನಮನ
ವರದಿ : ಶ್ರೀನಿಧಿ.ಡಿ.ಎಸ್
ಆಳ್ವಾಸ್ ನುಡಿಸಿರಿ ೨೦೦೬, ಇಂದಿಲ್ಲಿ ಯಶಸ್ವಿಯಾಗಿ ಸಮಾಪನಗೊಂಡಿತು.
`ಕನ್ನಡ ಮನಸ್ಸು- ಪ್ರಚಲಿತ ಪ್ರಶ್ನೆಗಳು' ಎಂಬ ಪರಿಕಲ್ಪನೆಯ
ಸಮ್ಮೇಳನ ಇದು. ೩ ದಿನಗಳ ಸಾಹಿತ್ಯ ಜಾತ್ರೆಗೆ ಭಾರವಾರ
ಮನಸ್ಸಿಂದ ವಿದಾಯ ಹೇಳುವ ಸಂದರ್ಭ.
ವಿದ್ಯಾಗಿರಿಗೆ ಮೂರು ದಿನಗಳಿಂದ ಪರಕಾಯ ಪ್ರವೇಶವಾಗಿತ್ತು. ರಾಜ್
ಕುಮಾರ್ ನಗರವಾಗಿ ಬದಲಾಗಿದ್ದ ಈ ಸ್ಥಳ, ಕನ್ನಡ ಸಾಹಿತ್ಯ
ಪ್ರೇಮಿಗಳನ್ನ ಹೊಸದೊಂದು ಆಯಾಮದೊಳಗೆ ಕರೆದೊಯ್ದಿತ್ತು.
ಎಲ್ಲಿ ನೋಡಿದರೂ ಕನ್ನಡದ ಮನಸ್ಸುಗಳೇ ತುಂಬಿದ್ದ ಈ ಕನ್ನಡ
ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ತನ್ನ ಆಶಯವನ್ನ
ಈಡೇರಿಸಿಕೊಳ್ಳುವುದರಲ್ಲಿ ಖಂಡಿತಾ ಯಶಸ್ವಿಯಾಯಿತೆನ್ನಬಹುದು.
ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯ ಈ ನುಡಿ ಜಾತ್ರೆ, ಕನ್ನಡ
ನಾಡಿನ ಮೂಲೆ ಮೂಲೆಯಿಂದಲೂ ಜನರನ್ನ ಸೆಳೆದಿದೆ. ದೂರದ
ಗುಲ್ಬರ್ಗದಿಂದ ಹಿಡಿದು ನೆರೆಯ ಕಾಸರಗೋಡಿನವರೆಗೆ ಎಷ್ಟೊ ಜನ
ಹೊರನಾಡ ಕನ್ನಡಿಗರ ಪಾಲ್ಗೊಳ್ಳುವಿಕೆಯೂ ಜೊತೆಗಿದೆ.
ಪ್ರತಿದಿನ ಇಲ್ಲಿ ಕನ್ನಡ ದೇವಿಯ ಪೂಜೆ ಜರುಗಿದೆ, ಸಾಹಿತ್ಯವೇ
ಅರ್ಚನೆ, ಕನ್ನಡ ಭಾವಗೀತೆಗಳೇ ಮಂತ್ರಸ್ತೋತ್ರ!
ಡಾ|ಎಂ.ಮೋಹನ ಆಳ್ವರ ಧೀರ್ಘ ಶಕ್ತಿಯ ಫಲವಾದ ಈ ನುಡಿಸಿರಿ,
ಎಲ್ಲೆಡೆಗೆ ಕನ್ನಡ ಡಿಂಡಿಮದ ನಾದಹೊಮ್ಮಲು ತನ್ನಿಂದ ಯಥಾಸಾಧ್ಯ
ಸಹಕಾರವನ್ನ ಖಂಡಿತಾ ನೀಡಿದೆ.
ಕನ್ನಡದ ಹೆಸರಾಂತ ಸಾಹಿತಿಗಳು ಆಗಮಿಸಿ, ನುಡಿಸಿರಿಯ ಜೊತೆ ಸಾಥ್
ನೀಡಿದ್ದಾರೆ. ಯಾವುದೋ ಒಂದು ಸಂಸ್ಥೆ ಈ ಕಾರ್ಯಕ್ರಮ
ನಡೆಸುತ್ತಿದೆ ಅಂತ ಅಸಡ್ದೆ ತೋರಿಲ್ಲ, ಅವರುಗಳ ಸಹೃದಯತೆಗೆ
ಧನ್ಯ. ಆಳ್ವಾಸ್‌ನ ವಿದ್ಯಾರ್ಥಿಗಳು ದಿನ- ರಾತ್ರಿ ದುಡಿದಿದ್ದಾರೆ,
ಇದಕ್ಕೇನು ಅವರುಗಳಿಗೆ ಮಾರ್ಕು ದೊರಕುವುದಿಲ್ಲ!
ಅಧ್ಯಾಪಕರುಗಳಿಗೆ ಹೆಚ್ಚಿನ ಸಂಬಳವೇನು ಇಲ್ಲ!.
ಎಲ್ಲರು ತಮ್ಮ ಮನಸ್ಸು ತುಂಬ ಬೊಗಸೆಯಷ್ಟಾದರೂ ಕನ್ನಡ
ಪ್ರೀತಿ ತುಂಬಿಕೊಂಡು ಇಲ್ಲಿಗೆ ಬಂದಿದ್ದರು, ಮತ್ತು ಆ ಪ್ರೀತಿ ಈಗ
ಇಮ್ಮಡಿಯಾಗಿರುತ್ತದೆ. ವಿಧ ವಿಧದ ಕನ್ನಡ ಸಂಸ್ಕೃತಿಯ
ದರ್ಶನ ಇಲ್ಲಿಗೆ ಬಂದವರಿಗಾಗಿರುತ್ತದೆ ಮತ್ತು ಈ ಸಂಸ್ಕೃತಿಯ
ಬಿಂಬವನ್ನ ಹೊತ್ತು ತಮ್ಮ ಊರುಗಳಿಗೆ ಮರಳಿ ತೆರಳುವವರು,
ಅದನ್ನ ತಮ್ಮ ಮನೆ ಮನಗಳಲ್ಲಿ ಪ್ರತಿಷ್ಠಾಪನೆ ಮಾಡಿದರೆ,
ನುಡಿಸಿರಿಗೆ ಕೃತಜ್ಞತೆ ಹೇಳಿದಂತೆ.
ನುಡಿಸಿರಿ ಮುಗಿಸಿ ಬಸ್ಸು ಹತ್ತುವ ಸಾಹಿತ್ಯ ರಸಿಕರ ಕಿವಿಗಳಲ್ಲಿ
ಚೆಂಡೆಯ, ಡೋಲಿನ ದನಿ ಅನುರಣಿಸುತ್ತವೆ. ಬ್ಯಾಗಿನೊಳಗಡೆ
ಮುಕ್ಕಾಗದ ಹೊಸ ಪುಸ್ತಕಗಳು ಬೆಚ್ಚಗೆ ಕೂತಿರುತ್ತವೆ.
ಯಾವುದೋ ಸಾಹಿತಿಯ ಬಳಿ ಹಾಕಿಸಿಕೊಂಡ ಹಸ್ತಾಕ್ಷರದ ಖುಷಿ, ಮತ್ತೆ
ಸಿಕ್ಕ ಹಳೆಯ ಗೆಳೆಯರ ನೆನಪು ಜೊತೆಗಿರುತ್ತವೆ.
ನಾಳಿನಿಂದ ಮತ್ತೆ ವಿದ್ಯಾಗಿರಿ ಈ ಸ್ಥಳ. ಪುಸ್ತಕಗಳ ಘಮಲಿದ್ದ
ಕೋಣೆಗಳಲ್ಲಿ ಮತ್ತೆ ಸೀಮೇಸುಣ್ಣದ ಹುಡಿ ತುಂಬಿಕೊಳ್ಳುತ್ತದೆ,
ನಾಡಿನೆಲ್ಲಪತ್ರಿಕೆಗಳ ವರದಿ ಮಾಡಲು ಸಹಕರಿಸುತ್ತಿದ್ದ ಮಾಧ್ಯಮ
ಕೇಂದ್ರ, ಕಂಪ್ಯೂಟರ್ ಲ್ಯಾಬಾಗಿ ಬದಲಾಗುತ್ತದೆ. ನಿತ್ಯ ಅನ್ನದಾನ
ನಡೆಯುತ್ತಿದ್ದ ನೇತ್ರಾವತಿ ಮೊದಲಾದ ಹಾಸ್ಟೆಲುಗಳಲ್ಲಿ
ಹುಡುಗಿಯರ ಕಲರವ ತುಂಬಿಕೊಳ್ಳುತ್ತದೆ. ಮೋಹನ ಆಳ್ವರ
ಸಂಗ್ರಹದ ಗಣಪರು ಮತ್ತೆ ಒಳ ಹೋಗಿ ಕೂರುತ್ತಾರೆ.
ಚಿತ್ತಾರದ ಗೂಡುದೀಪಗಳು ಮಡಚಿಕೊಂಡು ಒಳಗಡೆ ಕೂತು ಮತ್ತೆ
ಮುಂದಿನ ನುಡಿಸಿರಿಯ ಬಣ್ಣ ಬಣ್ಣದ ಬೆಳಕಿಗೆ ಕಾಯಲಾರಂಭಿಸುತ್ತವೆ,
ನಮ್ಮಂತೆ, ನಿಮ್ಮಂತೆ...
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|