|
ರಾಜಧಾನಿ ಬೇರೆಡೆಯಲ್ಲಾಗಲಿ : ಪಾಟೀಲ ಪುಟ್ಟಪ್ಪ
ವರದಿ : ಹರೀಶ್ ಕೆ. ಆದೂರು
ಕರ್ನಾಟಕದ ರಾಜಧಾನಿ ಬೆಂಗಳೂರು ಬಿಟ್ಟು ಬೇರೆ ಆಗಲೇಬೇಕಾಗಿದೆ.
ರಾಜಧಾನಿಯಾಗಲು ದೊಡ್ಡ ನಗರವಾಗಿರಬೇಕೆಂಬ ಭ್ರಮೆ ಬೇಕಾಗಿಲ್ಲ
ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ನೇರ
ನುಡಿಗಳನ್ನಾಡಿದರು.
ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ-೨೦೦೬ರ ಕೊನೆಯಗೋಷ್ಠಿ `ಸುವರ್ಣ
ಕರ್ನಾಟಕ ಚಿಂತನೆ'ಯಲ್ಲಿ ನನ್ನ ಕನಸಿನ ಕರ್ನಾಟಕದ ಬಗ್ಗೆ
ಭಾವನಾತ್ಮಕ, ಭಾವೋದ್ವೇಗದಿಂದ ಪಾಪು ನಿರರ್ಗಳವಾಗಿ ಮಾತಿನ
ಲಹರಿಯನ್ನೇ ಹರಿಸಿದರು. ತನ್ಮೂಲಕ ಭವ್ಯ ಕರ್ನಾಟಕದ
ಪರಿಕಲ್ಪನೆಯನ್ನು ಮುಂದಿರಿಸಿದರು.
ಬೆಂಗಳೂರಿನಲ್ಲಿ ವಿಧಾನ ಸೌಧವಿದೆ. ಬೇರೆ ಪರ್ಯಾಯ
ಕಟ್ಟಡಗಳಿವೆ ಅದೆಲ್ಲಾ ಸರಿ. ಆದರೆ ಅದೊಂದು ಮೂಲೆಯಲ್ಲಿದೆ ಎಂಬ
ಅಂಶವಂತೂ ಸ್ಪಷ್ಟ. ಜನರಿಗಾಗಿ ಕಚೇರಿಗಳಿವೆ. ಕಚೇರಿಗಳಿಗಾಗಿ ಜನರಿಲ್ಲ
ಎಂಬ ಅಂಶವನ್ನು ಸ್ಪಷ್ಟವಾಗಿ ತಿಳಿಯುವ ಅವಶ್ಯಕತೆ ಇದೆ ಎಂದವರು
ಮತ್ತೊಮ್ಮೆ ಸರಕಾರಕ್ಕೆ ಎಚ್ಚರಿಕೆ ನೀಡಿದರು.
೫೦ವರ್ಷಗಳ ಇತಿಹಾಸವನ್ನೇ ಮರೆತಿದ್ದೇವೆಂದ ಪಾಟೀಲ
ಪುಟ್ಟಪ್ಪನವರು ಕರ್ನಾಟಕದ ಸಾಧ್ಯತೆಗಳ ಬಗ್ಗೆ ಸರಕಾರ
ತಿಳಿಯಬೇಕಾಗಿದೆ. ವಿಧಾನ ಸೌಧದಲ್ಲಿ ಕುಳಿತವರಿಗೆ ಕರ್ನಾಟಕದ
ಸಮಗ್ರತೆಯ ಅರಿವಿಲ್ಲ ಎಂಬುದು ಖೇದಕರ. ಕರ್ನಾಟಕದ
ಸಾಧ್ಯತೆಗಳ ಬಗ್ಗೆ ಸರಕಾರ ಸಂಪೂರ್ಣವಾಗಿ ಅರಿಯಬೇಕಾಗಿದೆ
ಎಂದರು.
ರಾಜಧಾನಿಯಲ್ಲಿರುವವರು ಇಡೀ ರಾಜ್ಯ ಎಂಬ ಕಲ್ಪನೆಯನ್ನಿರಿಸಿದ್ದೇ
ಆದಲ್ಲಿ ಕರ್ನಾಟಕ ನಂಬರ್ ವನ್ ರಾಜ್ಯವಾಗುವುದರಲ್ಲಿ ಸಂದೇಹವೇ
ಇಲ್ಲ. ಇಲ್ಲಿ ಉತ್ತಮ ನೆಲ, ಜಲ, ಜನರಿದ್ದಾರೆ. ಸಮಗ್ರತೆಯ ಬಗ್ಗೆ
ನೋಡದಿರುವುದೇ ಕರ್ನಾಟಕದ ದೊಡ್ಡ ತೊಂದರೆಯಾಗಿದೆ
ಎಂದವರು ವಿಷಾಧಿಸಿದರು.
ಉದ್ಧಿಮೆ, ಉದ್ಯೋಗ, ಬೌದ್ಧಿಕ ಕಸರತ್ತಿನಲ್ಲಿ ಕರ್ನಾಟಕ ಯಾರಿಗೂ
ಕಡಿಮೆಯಿಲ್ಲ ಇದನ್ನು ಅರಿಯುವ ಕಾರ್ಯ ಆಗಬೇಕಾಗಿದೆ ಎಂದರು.
ಇಂದು ಪತ್ರಿಕಾವೃತ್ತಿ ಎಂಬುದಿಲ್ಲ. ಬದಲಾಗಿ ಪತ್ರಿಕೋದ್ಯಮ ಇಂದಿದೆ.
ಸಮೂಹ ಹಿತಕ್ಕಿಂತ ಒಡೆಯನ ಹಿತವೇ ಜಾಸ್ತಿಯಾಗಿದೆ. ಪತ್ರಿಕೆಗಳ
ನಡುವೆ ವೃತ್ತಿ ಸಮರ, ಕನ್ನಡದ ಬಗ್ಗೆ ತಾತ್ಸಾರ ಮನೋಭಾವ
ಹೆಚ್ಚತೊಡಗಿದೆ ಎಂದು ಸಮೂಹ ಮಾಧ್ಯಮ ಒಲವು ನಿಲುವು
ವಿಚಾರದಲ್ಲಿ ಪ್ರಬಂಧ ಮಂಡಿಸಿದ ಬಿ.ಎಂ ಹನೀಫ್ ಅಭಿಪ್ರಾಯಿಸಿದರು.
ಅನಾರೋಗ್ಯಕರ ಪೈಪೋಟಿ ಕನ್ನಡದ ಪತ್ರಿಕೋದ್ಯಮದಲ್ಲಿ
ಕಾಣಸಿಗುತ್ತಿದೆ ಎಂದ ಅವರು ಏನನ್ನು ಕೊಡುತ್ತೀರಿ ಎಂಬುದಕ್ಕಿಂತ ಹೇಗೆ
ಕೊಡುತ್ತೀರಿ ಎಂಬುದು ಇಂದು ಮುಖ್ಯವಾಗಿದೆ ಎಂದವರು ವಿಷಾಧಿಸಿದರು.
ಇಂಟರ್ ನೆಟ್, ವೆಬ್ ಪತ್ರಿಕೋದ್ಯಮ ಇಂದು ಮುಂಚೂಣಿಯಲ್ಲಿದೆ
ಎಂದ ಹನೀಫ್, ಖಾಸಗೀ ಟಿ.ವಿ ಚಾನೆಲ್‌ಗಳು ಪೊಳ್ಳು ಸಾಹಿತ್ಯಕ್ಕೆ
ಹೆಚ್ಚಿನ ಒತ್ತು ನೀಡುತ್ತಿದೆ ಎಂದವರು ವಿಷಾಧಿಸಿದರು.
ಡಾ.ಟಿ. ವಿಜಯ ಪೂಣಚ್ಚ ಆಂದೋಲನಗಳು ರೂಪಿಸಿದ ಕರ್ನಾಟಕ ಎಂಬ
ಪ್ರಬಂಧ ಮಂಡಿಸಿದರು. ಡಾ.ಚಂದ್ರಶೇಖರ ಕಂಬಾರ, ಡಾ.ಎಂ
ಮೋಹನ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|