|
ಹಿಂದೀ ವಿಶೇಷಣ, ಇಂಗ್ಲಿಷ್ ನಾಮಪದ
ಇಂದು ಮಾಧ್ಯಮಗಳಲ್ಲಿ ಬಳಸುವ ಭಾಷೆ ಅತ್ಯಂತ
ಅಪಾಯಕಾರಿಯಾಗಿದೆ. ಈ ಮಾತು ಸ್ಪಷ್ಟವಾಗಬೇಕಾದರೆ
ಬೆಂಗಳೂರಿನ ಎಫ್.ಎಂ ರೇಡಿಯೋ ಕೇಳಬೇಕು. ಹಿಂದೀ
ವಿಶೇಷಣಗಳು, ಇಂಗ್ಲಿಷ್ ನಾಮಪದ, ಕನ್ನಡ ಕ್ರಿಯಾಪದ! ಈ ಭಾಷೆ
ಇಂಗ್ಲಿಷೋ? ಕನ್ನಡವೋ? ಅಥವಾ ಇನ್ಯಾವುದೋ ಭಾಷೆಯೋ ಎಂಬ
ಸಂದೇಹ ಉಂಟಾಗುತ್ತದೆ. ಕನ್ನಡದ ಹೆಸರಲ್ಲಿ ಇನ್ಯಾವುದೋ
ಅಂತಾರಾಷ್ಟ್ರೀಯ ಭಾಷೆಯನ್ನು ಬಳಸಾಗುತ್ತಿದೆ ಎಂದು ಕಂಬಾರರು
ವಿಷಾಧ ವ್ಯಕ್ತಪಡಿಸಿದರು.
* ಹರೀಶ್ ಕೆ. ಆದೂರು
ಜಾಗತೀಕರಣದ ಶಾಪದಿಂದಾಗಿ ನಮ್ಮ ಭಾಷೆಯನ್ನು ಉಳಿಸಲು
ಸಾಧ್ಯವಿಲ್ಲ. ಇದು ಕೇವಲ ಕವಿಗಳು ಮತ್ತು ಬರಹಗಾರರಿಂದ ಆಗುವ
ಕೆಲಸವೂ ಅಲ್ಲ. ಬರಹಗಾರರು ಮಾಡಬಹುದಾದ್ದು ಏನೆಂದರೆ ಈ
ವಿಚಾರದ ಬಗೆಗಿನ ಅರಿವನ್ನು ಜಾಗೃತಗೊಳಿಸುವುದು. ಇದೇ ಕಾಲದಲ್ಲಿ
ವ್ಯಕ್ತಿಗಳು ಮತ್ತು ಸಮಾಜಗಳೂ ಈ ಆಯ್ಕೆಯನ್ನು
ಮಾಡಬೇಕಾಗಿದೆ. ಜಾಗೃತ ಮಾನವತಾವಾದ-ಮತ್ತು ಜಾಗತೀಕರಣ,
ಸಂಸ್ಕೃತಿ-ವಾಣಿಜ್ಯ, ಬದುಕು ಮತ್ತು ಸಾವು ಇವೆರಡು ಮಾತ್ರ
ಇಂದು ಸಮಾಜದ ಆಯ್ಕೆಗುಳಿದಿದೆ. ಹೀಗೆನ್ನುತ್ತಾರೆ ಡಾ.ಚಂದ್ರಶೇಖರ
ಕಂಬಾರ.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ವತಿಯಿಂದ ಮೂಡಬಿದ್ರೆಯ
ಸುಂದರಿ ಆನಂದ ಆಳ್ವ ಕ್ಯಾಂಪಸ್ಸಿನಲ್ಲಿ ಆಯೋಜಿಸಲಾದ ಮೂರು
ದಿನಗಳ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ
`ಆಳ್ವಾಸ್ ನುಡಿಸಿರಿ-೨೦೦೬' ಇದರ ಅಧ್ಯಕ್ಷ ಪೀಠದಿಂದ ಕಂಬಾರರು ಈ
ದಿಟ್ಟ ನುಡಿಗಳನ್ನಾಡಿದರು.
ದೇಸೀ ಚಿಂತನೆಯೊಂದಿಗೆ, ಪ್ರಚಲಿತ ವಿದ್ಯಮಾನಗಳು, ಕನ್ನಡದ
ಮನಸ್ಸು, ರಾಜಧಾನಿಯಲ್ಲಿ ಕನ್ನಡದ ಅವಗಣನೆ, ಸರಕಾರದ
ನಿರ್ಧಾರಗಳ ಬಗ್ಗೆ ಸಂಪೂರ್ಣ ಭಾಷಣದುದ್ದಕ್ಕೂ ಎಳೆ ಎಳೆಯಾಗಿ
ಬಿಡಿಸಿಟ್ಟರು.
ಜಾಗತೀಕರಣದ ಆಗಮನದೊಂದಿಗೆ ಹೊಸ ಶತಮಾನ ಶುರುವಾಗಿದೆ.
ಜಾಗತೀಕರಣ ಬೇಕೇ?, ಬೇಡವೇ? ಅಂತ ಚರ್ಚೆ ಮಾಡುವ
ಆಯ್ಕೆಯೂ ನಮಗುಳಿದಿಲ್ಲ. ಅದನ್ನು ಎದುರಿಸುವುದು ಹೇಗೆ
ಎಂಬುದೇ ದೊಡ್ಡ ಸವಾಲಾಗಿದೆ ಎಂದು ಕಂಬಾರರು ವಿಷಾಧಿಸಿದರು.
ರೈತನ ಮೇಟಿಯ ಸುತ್ತ ಬೆಳೆದ ಸಂಸ್ಕೃತಿ ನಮ್ಮದು. ಇವತ್ತು
ಜಾಗತೀಕರಣದ ಮೊದಲೇಟು ಬಿದ್ದದ್ದೇ ಈ ರೈತನಿಗೆ. ಮೇಟಿಯೇ
ಇಲ್ಲದಿದ್ದರೆ ಜಾನಪದವೂ ಇಲ್ಲ, ಸಂಸ್ಕೃತಿಯೂ ಇಲ್ಲ. ಈ ವಿಚಾರವನ್ನು
ಅರ್ಥೈಸುವ ಕಾರ್ಯ ಆಗಬೇಕಾಗಿದೆ ಎಂದರು.
ಆರ್ಥಿಕ ಪ್ರಗತಿಯ ದೃಷ್ಠಿಯಲ್ಲಿ ಜಾಗತೀಕರಣ ತೀವ್ರಗತಿಯಲ್ಲಿ
ಆವರಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಇಡೀ ಪ್ರಪಂಚವೇ
ವಿಶ್ವಗ್ರಾಮವಾಗಿ ಪರಿವರ್ತನೆ ಹೊಂದಿದರೆ ಅಚ್ಚರಿಯಿಲ್ಲ. ಪ್ರಗತಿ ಮತ್ತು
ಬದಲಾವಣೆ ಇಂದಿನ ಜೀವನ ಸೂತ್ರವಾಗಿದೆ. ನಮ್ಮ ದೇಶಕ್ಕೆ ಬ್ರಿಟಿಷರ
ಆಗಮನವಾದಾಗಲೇ ಹೊಸ ಹೊಸ ತಂತ್ರಜ್ಞಾನವನ್ನು ಹೇರಳವಾಗಿ
ತಂದುಕೊಂಡೆವು. ನಮ್ಮ ರಾಜಕಾರಣ, ನ್ಯಾಯಾಂಗ ವ್ಯವಸ್ಥೆ,
ವಿಶ್ವವಿದ್ಯಾಲಯ, ಆಸ್ಪತ್ರೆ ಇವೆಲ್ಲವೂ ಪಶ್ಚಿಮದ ಮಾದರಿಯಲ್ಲಿಯೇ
ಬ್ರಿಟಿಷರ ಕಾಲದಿಂದಲೇ ಬಂದಿದ್ದವು. ಇದೀಗ ನಮ್ಮದು ಎಂದು ಉಳಿದದ್ದು
ಕೇವಲ ಧರ್ಮ ಮತ್ತು ಸಂಸ್ಕೃತಿ ಎರಡೇ ಆಗಿದೆ. ಈಗಿನ
ಜಾಗತೀಕರಣದಿಂದ ಅವೆರಡರ ಮೇಲೂ ಅದರಲ್ಲೂ ಸಂಸ್ಕೃತಿಯ
ಮೇಲೆ ಧಾಳಿ ಆರಂಭವಾಗಿದೆ ಎಂದವರು ಕಳಕಳಿ ವ್ಯಕ್ತಪಡಿಸಿದರು.
ಓದುವ ಹವ್ಯಾಸ ಕಡಿಮೆಯಾಗಿದೆ: ಭಾಷೆಯ ಬೆಳವಣಿಗೆಯೆಂದರೆ
ಒಂದು ದೇಶದ ಸಂಸ್ಕೃತಿಯ ಬೆಳವಣಿಗೆಯಾಗಿದೆ ಎಂದು
ವ್ಯಾಖ್ಯಾನಿಸಿದ ಕಂಬಾರರು, ಸ್ವಾತಂತ್ರ್ಯ ಬಂದಮೇಲೆ ದೇಶದ
ಸಂಸ್ಕೃತಿ ರಭಸದಿಂದ ಹೊಸದಾಗಿ ರೂಪುಗೊಳ್ಳತೊಡಗಿತು. ಈಗ
ಜಾಗತೀಕರಣದಿಂದಾಗಿ ಮತ್ತೆ ಗೊಂದಲ ಶುರುವಾಗಿದೆ. ಸಾಹಿತಿಗಳಲ್ಲೇ
ಓದುವ ಮತ್ತು ಬರೆಯುವ ಉತ್ಸಾಹ ಕಡಿಮೆಯಾಗಿದೆ ಎಂದು
ಕಂಬಾರ ಖೇದ ವ್ಯಕ್ತಪಡಿಸಿದರು. ದೃಶ್ಯ ಮಾಧ್ಯಮ ಅನೇಕ
ಪ್ರಲೋಭನೆಗಳನ್ನು ಒಡ್ಡುತ್ತಿವೆ. ಟಿ.ವಿ ಇಲ್ಲದ ಮನೆ ದರಿದ್ರ
ಮನೆಯೆಂದು ಮಕ್ಕಳು ಆರೋಪಿಸುವಂತಾಗಿದೆ. ಪರಂಪರೆಗೂ
ವ್ಯಕ್ತಿಗೂ ಇದ್ದಂತಹ ಸಂಬಂಧ ಈಗ ಕಡಿದು ಹೋಗುತ್ತಿದೆ ಎಂದರು.
ಜಾಗತೀಕರಣವು ನಮ್ಮ ಮೇಲೆ ಹೇರುತ್ತಿರುವ ಒತ್ತಡಗಳಿಂದಾಗಿ
ನಮ್ಮ ಸಾಹಿತ್ಯ ಉಳಿದುಕೊಳ್ಳುವ ಏಕೈಕ ಮಾರ್ಗವೆಂದರೆ ಇಂಗ್ಲಿಷಿಗೆ
ಅನುವಾದಗೊಳ್ಳುವುದೊಂದೇ ಆಗಿದೆಯೆಂಬ ಮಾತನ್ನು ಅನೇಕರು
ಹೇಳುತ್ತಾರೆಂದು ಉಲ್ಲೇಖಿಸಿದ ಕಂಬಾರರು, ನಮ್ಮ ಭಾಷೆಯಲ್ಲಿ
ಅಭಿವ್ಯಕ್ತವಾದ ಲೋಕಜ್ಞಾನ, ಲೋಕಾನುಭವಗಳನ್ನು
ಪೂರ್ತಿಯಾಗಿ ಅನುವಾದಿಸುವುದ ಸಾಧ್ಯವೇ ಎಂದು ಪ್ರಶ್ನಿಸಿದರು.
ಈಗಿನ ಇಂಗ್ಲಿಷ್ ಭಾಷೆಯಂತೂ ನ್ಯೂಯಾರ್ಕಿನ ಸಿಟಿ ಮಾರ್ಕೆಟಿನ
ಭಾಷೆಯಂತೆ ಯಾವುದೇ ಸಂಸ್ಕೃತಿಯನ್ನು ಬಿಂಬಿಸದ ಅನಾಗರಿಕ
ಭಾಷೆಯಾಗಿದೆ ಎಂದು ನೇರನುಡಿಗಳನ್ನಾಡಿದರು.
ನೆನಪುಗಳನ್ನಾಗಲೀ, ಕನಸುಗಳನ್ನಾಗಲೀ ಹಿಡಿದಿಡಲಾಗದ ದರಿದ್ರ
ಭಾಷೆ ಎಂದ ಕಂಬಾರರು, ಅದರ ರಭಸದಲ್ಲಿ ನಮ್ಮ ಭಾಷೆಗಳು
ಮಾತ್ರವಲ್ಲ, ಆಳವಾದ ನಮ್ಮ ನೆನಪುಗಳು, ಭರವಸೆಗಳು,
ಕನಸುಗಳು, ತುಮುಲ ತಕರಾರುಗಳು, ಹೀಗೆ ನಮ್ಮ ಬಾಳಿನ
ಅನುಭವಗಳೆಲ್ಲ ಅವಸಾನವಾಗುವ ಅಂಚಿನಲ್ಲಿದೆ ಎಂದು ಕಳವಳ
ವ್ಯಕ್ತಪಡಿಸಿದರು.
ಸಾಹಿತ್ಯ ಬೆಳೆಯಬೇಕಾದರೆ ನಮ್ಮ ಭಾಷೆ ಉಳಿಯಬೇಕು. ಇಂತಹ
ಹತಾಶ ಸನ್ನಿವೇಶದಲ್ಲಿ ಈ ಸಮ್ಮೇಳನಗಳು ನಡೆಯುತ್ತಿವೆ
ಎಂದರು.
ಸರಕಾರಕ್ಕೆ ನಿಜವಾಗಿಯೂ ಕನ್ನಡ ನಾಡು ನುಡಿ, ಜನತೆಯ ಹಿತಕ್ಕೆ
ಬದ್ಧವಾಗಿದ್ದರೆ ಕೂಡಲೇ ಬಹುಮಾಧ್ಯಮವನ್ನು
ನಿಯಂತ್ರಿಸಬೇಕು. ಇದು ಕೇಂದ್ರ ಸರಕಾರಕ್ಕೆ ಸೇರಿದ
ಜವಾಬ್ದಾರಿಯೆಂದು ಕೈಕಟ್ಟಿ ಕೂರಬಾರದಂದು
ನೇರಮಾತುಗಳನ್ನಾಡಿದರು.
ತಮಿಳಿಗೆ ಡಬ್ಬಾಗಿಯೇ ಬರುವಂತೆ ಕರ್ನಾಟಕ ಸರಕಾರವೂ
ಇಂಥದೊಂದು ನಿಯಮ ಮಾಡಿ ಜಾರಿಗೆ ತರಬೇಕೆಂದು
ಸರಕಾರವನ್ನು ಒತ್ತಾಯಿಸಿದ್ದಾರೆ.
ಸರಕಾರದ ಅಡ್ಡಗಾಲು: ಪ್ರಪಂಚದ ಎಲ್ಲ ಜ್ಞಾನವೂ ಕನ್ನಡದ
ಮೂಲಕವೇ ಕನ್ನಡಿಗರಿಗೆ ಸಿಗುವಂತಾಗಬೇಕು. ಇದಕ್ಕೆ ಕಂಪ್ಯೂಟರ್
ಶಾಸ್ತ್ರದ ಬೆಳವಣಿಗೆಯಿಂದಷ್ಟೇ ಸಾಧ್ಯ ಎಂದ ಕಂಬಾರರು,
ಸರಕಾರವೇ ಇದಕ್ಕೆ ಅಡ್ಡಕಾಲು ಹಾಕುತ್ತಿದೆ ಎಂದು ಆರೋಪಿಸಿದರು.
ಸಿಲಿಕಾನ್ ಸಿಟಿಯೆಂದು ಹೆಸರುವಾಸಿಯಾದ ಬೆಂಗಳೂರಿನಲ್ಲಿಯೇ
ಕನ್ನಡದ ಕಂಪ್ಯೂಟರ್ ತಜ್ಞರಿಲ್ಲ. ಇದ್ದ ಇಪ್ಪತ್ತೇಳು ಜನ
ತಜ್ಞರನ್ನು ಸರಕಾರಿ ಅಧಿಕಾರಿಗಳೇ ಪಾರದರ್ಶಕತೆಯ ನೆಪಹೇಳಿ
ಬೇರೆನಾಡುಗಳಿಗೆ ಓಡಿಸಿಬಿಟ್ಟಿದ್ದಾರೆ. ಕನ್ನಡಿಗರು ಹೆಮ್ಮೆಪಡುವ
ವಿಪ್ರೋ, ಇನ್ಫೋಸಿಸ್ ಸಂಸ್ಥೆಗಳು ಕನ್ನಡದ ನೆಲ-ಜಲ
ಸಂಪನ್ಮೂಲಗಳನ್ನು ಬಳಸಿಯೂ ಕನ್ನಡ ಕಂಪ್ಯೂಟರ್ ಬೆಳವಣಿಗೆಗೆ
ಬಿಡಿಗಾಸಿನ ಸಹಾಯ ಮಾಡಿಲ್ಲ. ಇಬ್ಬರೂ ವಿದೇಶೀಯರ ಸೇವೆಗಾಗಿ,
ಇಂಗ್ಲಿಷ್ ಭಾಷೆಯ ಬೆಳವಣಿಗೆಗಾಗಿ ಟೊಂಕಕಟ್ಟಿ ನಿಂತಿದ್ದಾರೆ.
ಇನ್ಫೋಸಿಸ್ ನಾರಾಯಣ ಮೂರ್ತಿಗಳಂತೂ ಶಾಲೆಗಳಲಿ ಇಂಗ್ಲಿಷ್
ಮಾಧ್ಯಮ ಆರಂಭಿಸಿರೆಂದು ಅಪ್ಪಣೆ ನೀಡಿದ್ದಾರೆಂದು ತೀವ್ರ ವಾಗ್ಧಾಳಿ
ಹರಿಸಿದರು.
ಅದ್ಭುತಕಲೆ: ಸ್ವತಂತ್ರವಾದ ರಂಗಶೈಲಿಯನ್ನು ಹೊಂದಿರುವ
ನಮ್ಮ ದೇಶದ ಉತ್ಕೃಷ್ಟ ರಂಗಭೂಮಿ ಯಕ್ಷಗಾನವಾಗಿದೆ.
ಯಕ್ಷಗಾನವೆಂಬುದು ರೂಪಕದಂತೆ ರಸಾನುಭವವನ್ನೂ ನೀಡಬಲ್ಲ
ಸ್ವತಂತ್ರಕಲೆಯೂ ಆಗಿದೆ. ರೂಪಕದ ಇಂಥಹ ಪೂರಕ
ಬೆಳವಣಿಗೆಯುಳ್ಳ ಉದಾಹರಣೆಗಳು ಜಗತ್ತಿನ ಯಾವ
ರಂಗಭೂಮಿಯಲ್ಲೂ ಕಾಣಸಿಗದು ಎಂಬುದು ಕಂಬಾರರ
ಅಭಿಪ್ರಾಯವಾಗಿದೆ.
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|