|
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಯಶಸ್ವೀ ತೃತೀಯ ವರ್ಷದ ನುಡಿಸಿರಿ ಕಾರ್ಯಕ್ರಮಕ್ಕೆ ವೇದಿಕೆ
ಸಜ್ಜಾಗುತ್ತಿದ್ದು, `ಕನ್ನಡ ಮನಸ್ಸು- ಪ್ರಚಲಿತ ಪ್ರಶ್ನೆಗಳು'
ಪರಿಕಲ್ಪನೆಯಲ್ಲಿ ಸಂಪೂರ್ಣ ಮೂರುದಿನಗಳ ಕಾಲ ಸಮ್ಮೇಳನ
ಮೂಡಿಬರಲಿದೆ. ಸಮ್ಮೇಳನದ ಸಾರಥ್ಯವನ್ನು ಡಾ.ಚಂದ್ರಶೇಖರ
ಕಂಬಾರ ವಹಿಸಲಿದ್ದಾರೆ. ಈ ಕಾರ್ಯಕ್ರಮದ ಸಂಪೂರ್ಣ
ವರದಿಯನ್ನು ಪತ್ರಕರ್ತರಾದ ಹರೀಶ್ ಕೆ. ಆದೂರು ಮತ್ತು
ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಲೆ ಹಾಕಿ ಕಳಿಸಲಿದ್ದಾರೆ.
-ಹರೀಶ್ ಕೆ.ಆದೂರು
ಕಲೆ ಸಾಹಿತ್ಯ ಸಂಸ್ಕೃತಿಯ ನೆಲವೀಡಾಗಿ, ಅಗ್ರಗಣ್ಯ ಸಾಹಿತಿಗಳಿಗೆ
ಸಾಹಿತ್ಯದ ಸ್ಪೂರ್ತಿ ನೀಡಿದ್ದ ಜೈನಕಾಶಿಯೆಂದೇ ಪ್ರಸಿದ್ಧಿ ಪಡೆದ
ಮೂಡಬಿದ್ರೆಯಲ್ಲಿ ಕನ್ನಡದ ಆರಾಧನೆಯಾಗುತ್ತಿದೆ. ಕಲ್ಲು
ಕಲ್ಲುಗಳಲ್ಲೂ ಗತ ಇತಿಹಾಸದ ಸೆಲೆಯನ್ನು ಕಾಣುವ ಈ
ಪುಣ್ಯಭೂಮಿಯಲ್ಲಿ ಮತ್ತೊಮ್ಮೆ ಕನ್ನಡಾಂಬೆಗೆ ಆರತಿ
ಬೆಳಗಲಾಗುತ್ತಿದೆ. ಸುವರ್ಣ ಕರ್ನಾಟಕದ ಸಂಭ್ರಮದ
ಶುಭಾವಸರದಲ್ಲಿ ನಾಡು ನುಡಿಯ ರಾಷ್ಟ್ರೀಯ ಸಾಹಿತ್ಯ
ಸಮ್ಮೇಳನ ಹೊಸತೊಂದು ಚಿಂತನೆಗೆ ದಾರಿದೀವಿಗೆಯಾಗುತ್ತಿದೆ.
ಇದಕ್ಕೆಲ್ಲಾ ಕಾರಣ ಮೂಡಬಿದ್ರೆಗೇ ಒಂದು ರೂಪುಕೊಟ್ಟ,
ಮೂಡಬಿದ್ರೆಯ ಶಿಲ್ಪಿ ಡಾ.ಎಂ. ಮೋಹನ ಆಳ್ವ.
`ಹೇಮಕೂಟದ ಮೇಲೆ ಕನ್ನಡದ ಬಾವುಟ...' ಎಂಬ ಕನ್ನಡದ
ಕವಿವರ್ಯರ ಹಾಡಿನ ಪ್ರೇರಣೆಯಿಂದ ಮೂಡಬಿದ್ರೆಯ `ವಿದ್ಯಾಗಿರಿ'ಯ
ಮೇಲೆ ಕನ್ನಡದ ಬಾವುಟ ರಾರಾಜಿಸಲಾರಂಭಿಸಿದೆ.
`ಆಳ್ವಾಸ್ ನುಡಿಸಿರಿ' ಎಂಬ ಕನ್ನಡದ ನಾಡು ನುಡಿಯ ಸಮ್ಮೇಳನದ
ಮೂಲಕ ಶಿಕ್ಷಣ ಸಂಸ್ಥೆಯೊಂದು ಸಾಹಿತ್ಯಿಕ ಚಟುವಟಿಕೆಯನ್ನು
ರಾಷ್ಟ್ರಮಟ್ಟದಲ್ಲಿ ಆಯೋಜಿಸಿ, ಹೊಸ ಶಕೆಗೆ ನಾಂದಿ ಹಾಡಿದೆ. ಆಳ್ವಾಸ್
ಎಜುಕೇಷನ್ ಫೌಂಡೇಶನ್ ತನ್ನ ದಶಮಾನೋತ್ಸವದ
ಶುಭಾವಸರದಲ್ಲಿ ಇಂತಹ ಸಾಹಿತ್ಯ ಕಾರ್ಯಕ್ರಮವನ್ನು
ನಿರಂತರವಾಗಿ ನಡೆಸುವ ಕೈಂಕರ್ಯವನ್ನು ಮಾಡುತ್ತಿದೆ.
ಯಶಸ್ವೀ ತೃತೀಯ ವರ್ಷದ ನುಡಿಸಿರಿ ಕಾರ್ಯಕ್ರಮಕ್ಕೆ ವೇದಿಕೆ
ಸಜ್ಜಾಗುತ್ತಿದ್ದು,
`ಕನ್ನಡ ಮನಸ್ಸು- ಪ್ರಚಲಿತ ಪ್ರಶ್ನೆಗಳು'
ಪರಿಕಲ್ಪನೆಯಲ್ಲಿ ಸಂಪೂರ್ಣ ಮೂರುದಿನಗಳ ಕಾಲ ಸಮ್ಮೇಳನ
ಮೂಡಿಬರಲಿದೆ. ಮೂರು ದಿನಗಳ ಕಾಲ ಮೂಡಬಿದ್ರೆಯ ಪುಟ್ಟ
ಪ್ರದೇಶದಲ್ಲಿ ರಾಜ್ಯ- ಅಂತಾರಾಜ್ಯಗಳಲ್ಲಿದ್ದ ಕನ್ನಡದ ಸಹಸ್ರಾರು
ಮನಸ್ಸುಗಳು ಒಂದುಗೂಡಿ ವಿಷಯ ವಿಮರ್ಶೆ ನಡೆಸಿ
ಸಮ್ಮೇಳನವನ್ನು ವಿಭಿನ್ನ ವೈಶಿಷ್ಟ್ಯ ಪೂರ್ಣವಾಗಿ
ಕೊಂಡೊಯ್ಯಲಿದ್ದಾರೆ. ಸಮ್ಮೇಳನದ ಸಾರಥ್ಯವನ್ನು
ಡಾ.ಚಂದ್ರಶೇಖರ ಕಂಬಾರ ವಹಿಸಲಿದ್ದಾರೆ.
ಮಹಾಕವಿ ರತ್ನಾಕರ ವರ್ಣಿಯ ತವರೂರಾದ ಮೂಡಬಿದ್ರೆ ಅನಾದಿ
ಕಾಲದಿಂದಲೂ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ
ಬಂದಿದೆ. ಐತಿಹಾಸಿಕ ಪ್ರಸಿದ್ಧಿಯ ಸಾವಿರ ಕಂಬ ಬಸದಿ, ಹದಿನೆಂಟು
ಬಸದಿ-ದೇಗುಲ-ಕೆರೆಗಳಿಂದ ಜಗತ್ ವಿಖ್ಯಾತಿಗಳಿಸಿದ ಈ ನಾಡು ಇದೀಗ
ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನ ಛಾಪನ್ನು ಮತ್ತಷ್ಟು
ಗಟ್ಟಿಯಾಗಿ ಮೂಡಿಸುತ್ತಿದೆ.
ಸಾಹಿತ್ಯ ಸಮ್ಮೇಳನಗಳು ನೈಜ ಅರ್ಥ ಕಳಕೊಂಡು ಕೆಲವೇ ಕೆಲವು
ಮಂದಿ ಅವಕಾಶ ವಾದಿಗಳ ಪಾಲಾಗುತ್ತಿರುವುದನ್ನು ತಪ್ಪಿಸಿ ಹೊಸ
ಕಲ್ಪನೆಗಳ ಮೂಲಕ ಸಮ್ಮೇಳನಕ್ಕೆ ಸಾರ್ಥಕ್ಯವನ್ನು ನೀಡುವ
ಸದುದ್ದೇಶದಿಂದ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ
ಡಾ.ಎಂ. ಮೋಹನ ಆಳ್ವ ೨೦೦೪ರಲ್ಲಿ ತನ್ನದೇ ಸ್ವಂತ ಖರ್ಚಿನಲ್ಲಿ
ನುಡಿಸಿರಿಯೆಂಬ ರಾಷ್ಟ್ರೀಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ
ಆಯೋಜಿಸಲಾರಂಭಿಸಿದರು. ಸಂಪೂರ್ಣ ಸಮ್ಮೇಳನ ಯಾವುದೇ
ರೀತಿಯ ಆಡಂಬರವಿಲ್ಲದೆ, ನೈಜ ಸಾಹಿತ್ಯಾಸಕ್ತರ ಕೂಡುವಿಕೆಯಿಂದ
ಅಮೂಲ್ಯ ಚರ್ಚೆಗಳೊಂದಿಗೆ ಯಶಸ್ವಿಯಾಗಿ ನಡೆಸುವುದು ಅವರ
ಕನಸು. ಇದು ಕಳೆದೆರಡು ಸಮ್ಮೇಳನಗಳಲ್ಲಿ
ಯಶಸ್ವಿಯಾಗಿದೆ.

`ನುಡಿದಂತೆ ನಡೆ' ಎಂಬ ಮಾತಿನಂತೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.
ಆಳ್ವರು ಕೇವಲ ಸಾಹಿತ್ಯ ಬೆಳೆಯಬೇಕೆಂದು ವೇದಿಕೆಯೇರಿ ಭಾಷಣ
ಬಿಗಿಯದೆ ಇದನ್ನು ಮಾಡಿ ತೋರಿಸಿದ್ದಾರೆ. ಇದರಲ್ಲಿ ಯಶಸ್ಸನ್ನೂ
ಗಳಿಸಿದ್ದಾರೆ. ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ
ಅದ್ಧೂರಿಯ ಸಾಹಿತ್ಯ ಸಮ್ಮೇಳನಗಳು ಗೊಂದಲದ ಗೂಡಾಗಿ
ಪರಿಣಮಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನುಡಿಸಿರಿಯಂತಹ
ಭಾವಪೂರ್ಣ, ಅರ್ಥಪೂರ್ಣ ಸಮ್ಮೇಳನಗಳು, ಮುದುಡಿದ್ದ
ಕನ್ನಡಾಭಿಮಾನಿಗಳ ಹೃದಯದಲ್ಲಿ ಹೊಸತೊಂದು ಭಾವಗಾನದ
ಲಹರಿಯನ್ನು ಹೊರಹೊಮ್ಮಿಸುತ್ತದೆ.
ಪ್ರಥಮ ಸಮ್ಮೇಳನವು `ಕನ್ನಡ ಮನಸ್ಸು: ಸಾಹಿತ್ಯಕ -
ಸಾಂಸ್ಕೃತಿಕ ಸವಾಲುಗಳು' ಎಂಬ ಪರಿಕಲ್ಪನೆಯಲ್ಲಿ ಮೂಡಿಬಂದಿದ್ದು
ಪ್ರಥಮ ಸಮ್ಮೇಳನದ ಅಧ್ಯಕ್ಷತೆಯ ಸೌಭಾಗ್ಯ ಬಂಡಾಯ ಸಾಹಿತಿ
ಬರಗೂರು ರಾಮಚಂದ್ರಪ್ಪನವರಿಗೊಲಿದಿತ್ತು. ದ್ವಿತೀಯ ವರ್ಷ `
ಕನ್ನಡ ಮನಸ್ಸು ಬೌದ್ಧಿಕ ಸ್ವಾತಂತ್ರ್ಯ
ಅಭಿವ್ಯಕ್ತಿ'ಪರಿಕಲ್ಪನೆಯಲ್ಲಿ ಸಮೇಳನ ನಡೆದಿದ್ದು, ಸಾರಥ್ಯವನ್ನು
ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ವಹಿಸಿದ್ದರು.
ಪ್ರಥಮ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ ಬರಗೂರು
ರಾಮಚಂದ್ರಪ್ಪನವರು ಜಿಲ್ಲೆಯಲ್ಲಿ ಬಂಡಾಯ ಸಾಹಿತ್ಯದ ಬಾವುಟ
ಹಾರಿಸಿದ್ದರು. ಆದರೆ ದ್ವಿತೀಯ ಸಮ್ಮೇಳನದಲ್ಲಿ ಬಂಡಾಯಕ್ಕೆ
ಪ್ರತಿಯಾಗಿ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್ ಭೈರಪ್ಪ ಸಾಹಿತ್ಯ
ಸಮ್ಮೇಳನದ ಸಾರಥ್ಯ ವಹಿಸಿದ್ದು ಅರ್ಥಪೂರ್ಣ ಸಾಹಿತ್ಯ
ಧಾರೆಯನ್ನು ಪಸರಿಸಿದ್ದರು.
ಹೊಸತೊಂದು ಪರಂಪರೆ: ಇತರ ಸಾಹಿತ್ಯ ಸಮ್ಮೇಳನಗಳಲ್ಲಿದ್ದಂತೆ
ಅಧ್ಯಕ್ಷರ ಭಾಷಣವನ್ನು ಉದ್ಘಾಟನಾ ಸಮಾರಂಭದೊಂದಿಗೆ
ವಿಲೀನಗೊಳಿಸದೆ, ನುಡಿಸಿರಿಯಲ್ಲಿ ಅಧ್ಯಕ್ಷ ಭಾಷಣಕ್ಕೆ ವಿಶೇಷವಾದ
ಅವಧಿಯೊಂದನ್ನು ಮೀಸಲಿಡಲಾಗಿದೆ.
ಕವಿ ಸಮಯ, ಕವಿ ನಮನ ಎಂಬ ಹೊಸತೊಂದು ಅಂಶವನ್ನು
ಸಮ್ಮೇಳನದಲ್ಲಿ ರೂಪಿಸಲಾಗಿದೆ.
ಕವಿಗೋಷ್ಠಿಗಾಗಿ ಒಂದು ಅವಧಿ ಮೀಸಲಿಡುವ ಬದಲಾಗಿ ಪ್ರತಿಯೊಂದು
ಗೋಷ್ಠಿಗಳ ನಂತರ ೧೫ ನಿಮಿಷಗಳ ಕಾಲಾವಧಿಯಲ್ಲಿ ನಾಡಿನ ಖ್ಯಾತ
ಕವಿಗಳು ತಮ್ಮ ಕವನವನ್ನು ವಾಚಿಸಿ, ಅದಕ್ಕೆ ಸ್ಫೂರ್ತಿ ಯಾದ
ಅಂಶಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ನಂತರ ನಾಡಿನ ಖ್ಯಾತ
ಗಾಯಕರು ಕವಿಗಳ ಹಾಡುಗಳನ್ನು ಹಾಡಲಿದ್ದಾರೆ.
ಮೂರುದಿನಗಳ ಕಾಲ ನಡೆಯಲಿರುವ ಸಮ್ಮೇಳನವು ಬೆಳಗ್ಗೆ
೮.೩೦ಕ್ಕೆ ಪ್ರಾರಂಭವಾಗಿ ಸಂಜೆ ೫ಗಂಟೆಗೆ ಮುಕ್ತಾಯಗೊಳ್ಳಲಿದೆ.
ಪ್ರತಿದಿನ ಸಂಜೆ ೬ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆ
ವೇದಿಕೆಯಲ್ಲಿ ನಡೆಯಲಿದೆ.
ನಿಮಿಷ ನಿಮಿಷಕ್ಕೂ ಇಲ್ಲಿ ಪ್ರಾಧಾನ್ಯತೆ ಇದೆ. ಪ್ರತಿಯೊಂದು
ಗೋಷ್ಠಿಗಳೂ ಸರಿಯಾದ ಸಮಯಕ್ಕೆ ಆರಂಭಗೊಂಡು, ನಿಗಧಿತ
ಸಮಯದೊಳಗೆ ಮುಗಿಯುತ್ತದೆ. ಹೀಗಾಗಿ ಪ್ರೇಕ್ಷಕ ವರ್ಗಕ್ಕೆ
ಕಿರಿಕಿರಿ, ಇರಿಸು ಮುರಿಸಾಗುವ ಸಂಭವವೇ ಇಲ್ಲ. ಅಂತೂ ಆಳ್ವಾಸ್
ನುಡಿಸಿರಿ ಒಂದು ಮಾದರಿ ಸಮ್ಮೇಳನವಾಗಿ ಮೂಡಿಬರುತ್ತಿದೆ ಎಂಬುದು
ಅಷ್ಟೇ ಸತ್ಯ, ಮುಖ್ಯವೂ.
ಪೂರಕ ಮಾಹಿತಿ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|