ಈ-ಕವಿಯ ಉತ್ಸಾಹಿ
ಯುವಕರಿಂದ ಡಾ.ರಾಜ್‌ಗೆ ಗೀತನಮನ ಜೊತೆಯಲ್ಲಿ ಹಿರಿಯ ನಟ ಕೆ.ಎಸ್.ಅಶ್ವತ್ಥ್‌ಗೆ
ಸನ್ಮಾನ ಕಾರ್‍ಯಕ್ರಮ ಆ. ೬ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.
ಕಾರ್‍ಯಕ್ರಮ
ಆರಂಭಕ್ಕೆ ಮುನ್ನ ಡಾ.ರಾಜ್‌ಕುಮಾರ್ ತಮ್ಮ ಕುಟುಂಬದವರನ್ನು ಪರಿಚಯಿಸಿರುವ
ಅಪರೂಪದ ಕೆಲ ವೀಡಿಯೋ ತುಣುಕುಗಳು ಪರದೆಯಮೇಲೆ ಬಿತ್ತರಗೊಳ್ಳುತ್ತಿತ್ತು.
ಅದು ಆರಂಭವಾದದ್ದು `ನಾನೇ ರಾಜಕುಮಾರ ಕನ್ನಡ ನಾಡಿನ.........' ಈ ಗೀತೆಯಿಂದ. ರಾಜ್ ಕುಮಾರ್ ಚಿತ್ರ ಪರದೆ ಮೇಲೆ ಬಂದ ಕೂಡಲೇ ಅಲ್ಲಿದ್ದ ಅಭಿಮಾನಿಗಳಿಂದ
ಕರತಾಡನ. ನಂತರ ಔಪಚಾರಿಕ ಕಾರ್‍ಯಕ್ರಮ ಆರಂಭವಾಯಿತು.

ಕಾರ್ಯಕ್ರಮದ
ಉದ್ಘಾಟನೆಯಾದದ್ದು `ಹಚ್ಚೇವು ಕನ್ನಡದ ದೀಪ' ಗೀತೆಯ ಮೂಲಕ. ಮೊದಲು
ಡಾ.ರಾಜ್ ಬಗ್ಗೆ ಮಾತನಾಡಿದವರು - ರಾಘವೇಂದ್ರ ರಾಜ್‌ಕುಮಾರ್, ಕೆ.ಸಿ.ಎನ್.ಗೌಡ,
ಶ್ರೀನಿವಾಸ.ಜಿ.ಕಣ್ಣಪ್ಪ, ಹಿರಿಯ ನಟರಾದ ಕೆ.ಎಸ್.ಅಶ್ವಥ್, ನಲ್ಲೂರು ಪ್ರಸಾದ್ ಮತ್ತು
ರವಿ ಬೆಳೆಗೆರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಚಂದ್ರಶೇಖರ ಕಂಬಾರರು
ವಹಿಸಿಕೊಂಡಿದ್ದರು.
ರಾಘವೇಂದ್ರ
ರಾಜ್‌ಕುಮಾರ್ ಮಾತನಾಡಿ, ತಮ್ಮ ತಂದೆಯ ಬಗ್ಗೆ ಹಲವಾರು ಕಾರ್ಯಕ್ರಮದಲ್ಲಿ
ಹೇಳುತ್ತಾ ಬಂದಿದ್ದೇನೆ, ಮುಂದೆಯೂ ಹೇಳುತ್ತಾ ಹೋಗುತ್ತೇನೆ. ಏಕೆಂದರೆ ಅವರ ಬಗ್ಗೆ
ಎಷ್ಟು ಹೇಳಿದರೂ ಮುಗಿಯದು, ರಾಜ್ ಕುಮಾರ್ ಹಿರಿಯರಲ್ಲದೇ ತಮಗಿಂತ
ಕಿರಿಯರನ್ನೂ ಹೆಚ್ಚು ಗೌರವಿಸುತ್ತಿದ್ದರು. ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದ್ದನ್ನು
ಮಾಡಬೇಡ ಎಂದು ರಾಜ್ ಆಗಾಗ ಹೇಳುತ್ತಿದ್ದರು ಎಂದರು.

ನಿರ್ಮಾಪಕ ಕೆಸಿಎನ್
ಗೌಡರು ಮಾತನಾಡಿ ಕೆಸಿಎನ್ ರಾಜ್ ಕುಮಾರ್‌ರವರ ಅತಿ ಹೆಚ್ಚಿನ ಚಿತ್ರಗಳ ಹಕ್ಕುಗಳು
ನನ್ನ ಬಳಿ ಇರುವುದು ನನ್ನ ಅದೃಷ್ಟ ಎಂದರು. ಯಾರಿಗೂ ಸಿಗದ ಪ್ರೇಮ ಪೂರ್ಣ
ಗೌರವವು ರಾಜ್‌ಕುಮಾರ್‌ಗೆ ಸಿಕ್ಕಿವೆ. ಅವರು ದೈಹಿಕವಾಗಿ ದೂರವಾಗಿದ್ದಾರೆಯೇ ಹೊರತು
ಅಭಿಮಾನಿಗಳ ಮನಸ್ಸಿನಿಂದ ದೂರವಾಗಿಲ್ಲ ಎಂದರು.
ಅಷ್ಟೇ ಅಲ್ಲದೇ
ರಾಜ್‌ರವರ ಹಳೆಯ ಚಿತ್ರಗಳನ್ನು ಡಿಜಿಟೈಜ್ ಮಾಡಿ ಕನ್ನಡ ಜನಕ್ಕೆ ಅರ್ಪಿಸುವ ಭರವಸೆಯನ್ನೂ
ನೀಡಿದರು.
ಶ್ರೀನಿವಾಸ ಜಿ.ಕಪ್ಪಣ್ಣ
ಮಾತನಾಡಿ, ರಾಜ್‌ಕುಮಾರ್ ಊಟದ ಶೈಲಿಯ ಬಗ್ಗೆ ತಿಳಿಸಿ, ಕನ್ನಡವನ್ನು ಹೇಗೆ ಮಾತನಾಡಬೇಕೆಂದು
ರಾಜ್‌ರವರನ್ನು ನೋಡಿ ಕಲಿಯಬೇಕೆಂದರು.

ರಾಜ್‌ಕುಮಾರ
ಚಿತ್ರಗಳಲ್ಲಿ ಹೆಚ್ಚು ಪೋಷಕ ಪಾತ್ರಗಳನ್ನು ನಿರ್ವಹಿಸಿದ ಹಿರಿಯ ನಟ ಕೆ.ಎಸ್.ಅಶ್ವಥ್ ಬಗ್ಗೆ
ಈ ಕವಿಯ ಪದಾಧಿಕಾರಿಯಾಗಿರುವ ಸಂಪಿಗೆ ಶ್ರೀನಿವಾಸ್ ಮಾತನಾಡಿ, ಅವರಿಗೆ ಈ ಕವಿ
ಬಳಗದಿಂದ ಭಿನ್ನವತ್ತಳೆ ಹಾಗೂ ಐವತ್ತು ಸಾವಿರ ರೂಗಳ ಚೆಕ್ ನೀಡಿ ಗೌರವಿಸಿದರು.
ಅಶ್ವತ್ಥ ತಾವು
ಡಾ.ರಾಜ್ ಜೊತೆ ೮೩ ಚಿತ್ರಗಳಲ್ಲಿ ಅಭಿನಯಿಸಿರುವುದನ್ನು ಸ್ಮರಿಸಿಕೊಂಡರು. ಮತ್ಯಾವ ನಟನ
ಜೊತೆಯೂ ಇಷ್ಟು ಚಿತ್ರಗಳಲ್ಲಿ ಅಭಿನಯಿಸಿಲ್ಲ ಎಂದು ಹೆಮ್ಮೆಯಿಂದ ನುಡಿದರು.

ಮೈಸೂರಿನಲ್ಲಿ ನಡೆಯುತ್ತಿದ್ದ
ಚಿತ್ರೀಕರಣದಲ್ಲಿ ರಾಜ್‌ಕುಮಾರ್‌ರವರೇ ಭಟ್ಟರನ್ನಿಡಿಸಿ ಊಟವನ್ನು ಸಿದ್ಧಗೊಳಿಸಿ ಎಲ್ಲರ
ಜೊತೆಯಲ್ಲಿ ಕುಳಿತು ಊಟ ಮಾಡಿದ್ದರು. ಆಗ ರಾಜ್‌ರವರು ನೋಡಪ್ಪ ಅಶ್ವಥ್‌ರಿಗೆ ಚೆನ್ನಾಗಿ
ಬಡಿಸಿ ಎಂದಿದ್ದನ್ನು ಇಲ್ಲಿ ಸ್ಮರಿಸಿದರು. ಜೊತೆಯಲ್ಲಿ ಊಟ ಮಾಡುವವರಿಗೆ ಚೆನ್ನಾಗಿ ಬಡಿಸಬೇಕು
ಅನ್ನೋದು ರಾಜಣ್ಣನವರ ಗುಣ ಎಂದು ಭಾವೋದ್ವೇಗದಿಂದ ಕಣ್ಣೀರು ಹಾಕಿದರು. ಕೆಲದಿನಗಳ
ನಂತರ ಪಾರ್ವತಮ್ಮ ರಾಜ್‌ಕುಮಾರ್ ಬಂದು `ಹಾಲು ಜೇನು' ಚಿತ್ರದ ಬೆಳ್ಳಿಹಬ್ಬಕ್ಕೆ
ಅಧ್ಯಕ್ಷತೆ ವಹಿಸಬೇಕು ಎಂದು ಕರೆದಾಗ ಎಲ್ಲಿಲ್ಲದ ಸಂತೋಷ ನನ್ನದಾಗಿತ್ತು. ನಂತರ
ಡಾ.ರಾಜ್‌ಕುಮಾರ್ ಪ್ರಶಸ್ತಿಯನ್ನು ನನಗೆ ಕೊಡಬೇಕು ಎಂದ ಸರ್ಕಾರ ಘೋಷಿಸಿದಾಗಲೂ
ದೇವೇಗೌಡರು ನಮ್ಮೂರ ಹುಡುಗ ಎಂದು ಗೌರವಿಸಿದರು. ಯಾವುದೋ ಒಂದು ಸಮಾರಂಭದಲ್ಲಿ
ಕೆ.ಎಸ್.ಅಶ್ವತ್ಥ್‌ರವರಿಂದ ಕಲಿಯೋದು ಬಹಳ ಇದೆ ಎಂದು ರಾಜ್‌ಕುಮಾರ್‌ರವರು ನುಡಿದದ್ದನ್ನು
ಬಲು ಹಿಂಜರಿಕೆಯಿಂದಲೇ ನುಡಿದು ಅಶ್ವತ್ಥ್ ತಮ್ಮ ಮಾತನ್ನು ಮುಗಿಸಿದರು.

ಬಹುತೇಕ ಚಿತ್ರನಟರು
ಕೆಲವು ಚಿತ್ರಗಳಲ್ಲಿ ಮಿಂಚಿದ ತಕ್ಷಣವೇ ಕೈಯೆತ್ತಿ ತಾವು ಮೇಲು ಎಂದು
ತೋರಿಸಿಕೊಳ್ಳುತ್ತಾರೆ, ಆದರೆ ರಾಜಣ್ಣ ಎಂದಿಗೂ ಹಾಗೆ ಮಾಡಿಲ್ಲ. ರಾಜ್‌ಕುಮಾರ್ ಮಗುವಿನಂತೆ.
ಆ ಮಗುವಿನ ನೆನಪು ನಮ್ಮನ್ನು ಎಂದಿಗೂ ಕಾಡುತ್ತಿರುತ್ತದೆ ಎಂದವರು ಹಾಯ್
ಬೆಂಗಳೂರು ಪತ್ರಿಕೆಯ ರವಿಬೆಳಗೆರೆ. ಅಶ್ವತ್ಥ ಅವರನ್ನು ಮತ್ತೊಮ್ಮೆ ಸನ್ಮಾನಿಸುವ
ಆಸೆ ತಮಗಿದೆ ಎಂದು ಬೆಳಗೆರೆ ಈ ಸಂದರ್ಭದಲ್ಲಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ
ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರರು ಮಾತನಾಡಿ ರಾಜ್‌ಕುಮಾರ್ ಬಾಳಿದ ಹಾಗೆ
ಬಾಳುವಂತೆ ರಾಜ್ ಅಭಿಮಾನಿಗಳಿಗೆ ಕರೆ ನೀಡಿದರು. ಕಾರ್‍ಯಕ್ರಮದಲ್ಲಿ ರಾಜ್ ಅಭಿನಯದ
ಕೆಲಚಿತ್ರಗಳ ತುಣುಕುಗಳನ್ನು ಪ್ರದರ್ಶಿಸಲಾಯಿತು. ನಂತರ ರಾಜ್ ಗೀತನಮನದೊಂದಿಗೆ
ಕಾರ್‍ಯಕ್ರಮ ಮುಕ್ತಾಯವಾಯಿತು.