Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 24 September 2006 12:18 PM

ರಂಗು ರಂಗಾಗಿ ಆರಂಭಗೊಂಡ ಮೈಸೂರು ದಸರಾ

ಶ್ರೀನಿಧಿ ಓಡಿಲ್ನಾಳ

haninidhi@yahoo.com

ಚಿತ್ರ ಕೃಪೆ : ಈ ಸಂಜೆ

ಇಡೀ ಮೈಸೂರು ದಸರಾ ಉತ್ಸವದ ಗುಂಗಿನಲ್ಲಿ ತೇಲಾಡುತ್ತಿದೆ. ಮಾಯಾ ನಗರಿಗೊಂದು ಸುತ್ತು ಹಾಕಿದಾಗ ಥೇಟ್ ಮದುವೆ ಮನೆಯ ವಾತಾವರಣದಂತೆ ಭಾಸವಾಗುತ್ತಿದೆ. ೨೩ ರಂದು ಚಾಮುಂಡಿಬೆಟ್ಟದಲ್ಲಿ ಸುಂದರ ಮುಂಜಾನೆಯ ಆಹ್ಲಾದಕರ ವಾತಾವರಣದಲ್ಲಿ ಶುಭ ತುಲಾ ಲಗ್ನದಲ್ಲಿ ಹಿರಿಯ ಸಾಹಿತಿ, ಗಾಂಧೀವಾದಿ, ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ. ನಾರಾಯಣರವರು ಚಾಮುಂಡೇಶ್ವರಿ ದೇವಿಗೆ ಬೆಳಗ್ಗೆ ೮-೧೫ಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವರ್ಗ-ವರ್ಣರಹಿತ ಸಮಾಜ ನಿರ್ಮಾಣಕ್ಕೆ ಈ ದಸರಾ ಮಹೋತ್ಸವ ಅಡಿಪಾಯವಾಗಬೇಕು ಎಂದು ಹೇಳಿದರು. ಅಲ್ಲದೆ, ದಸರಾ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯದ ಸಮ್ಮಿಲನ ಒಂದೆಡೆಯಾದರೆ, ಇನ್ನೊಂದೆಡೆ ಇದು ಮಹಿಳೆಯರ ಸಬಲೀಕರಣದ ಸಂಕೇತವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಉಪಮುಖ್ಯಮಂತ್ರಿ ಯಡಿಯೂರಪ್ಪ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಟಿ. ಜಯಕುಮಾರ್, ಸಚಿವ ರಾಮಚಂದ್ರ ಗೌಡ, ಸಂಸದರಾದ ಸಿ.ಎಚ್. ವಿಜಯಶಂಕರ್, ಎಂ.ಶಿವಣ್ಣ ಮತ್ತು ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು. ದಸರಾ ಚಾಲನೆ ವೇಳೆ ವೀರಗಾಸೆ, ಡೊಳ್ಳು ಕುಣಿತ, ಪೂಜಾಕುಣಿತ, ಜನಪದ ಕಲಾ ತಂಡಗಳ ಆಕರ್ಷಕ ನೃತ್ಯ ಇನ್ನಿತರ ಕಲಾಮೇಳಗಳು ಸಾಥ್ ನೀಡಿದವು. ಇಡೀ ಮೈಸೂರು ನಗರವು ದೀಪಾಲಂಕಾರದಿಂದ ಸಿಂಗಾರಗೊಂಡಿದೆ. ನಗರದ ಪಾರಂಪರಿಕ ಕಟ್ಟಡಗಳಿಗೆ ಆಕರ್ಷಕ ಬಣ್ಣ ಬಣ್ಣದ ಮೆರುಗಿನ ಜೊತೆಗೆ ರಂಗುರಂಗಿನ ದೀಪಗಳ ಸಾಲು ನಗರವನ್ನು ಅಲಂಕರಿಸಿವೆ.

ಮೈಸೂರು ದಸರಾ ಪ್ರಯುಕ್ತ ಇದೇ ಪ್ರಪ್ರಥಮ ಬಾರಿಗೆ ಚಾಮುಂಡಿ ಬೆಟ್ಟದಲ್ಲಿ ಇಂದು ಸಂಜೆ ನಡೆದ ಬಾಣ ಬಿರುಸಿನ ಪ್ರದರ್ಶನ ನೆರೆದಿದ್ದ ವೀಕ್ಷಕರ ಮನಸೂರೆ ಮಾಡಿತು. ಕರ್ನಾಟಕ ಮಲ್ಟಿ ಪ್ಲೆಕ್ಸ್ ಥಿಯೇಟರ್ ಪ್ರಾಯೋಜಕತ್ವದಲ್ಲಿ ನಡೆದ ಈ ಪ್ರದರ್ಶನ ಒಂಭತ್ತು ಗಂಟೆಗೆ ಅರಮನೆ ದೀಪಗಳನ್ನು ಆರಿಸಿದ ಮೇಲೆ ಸುಮಾರು ನಲುವತ್ತೈದು ನಿಮಿಷಗಳ ಕಾಲ ಆಕಾಶದೆತ್ತರದಲ್ಲಿ ಬಣ್ಣ ಬಣ್ಣದ ಸಿಡಿಮದ್ದಿನ ಪ್ರದರ್ಶನವನ್ನು ನೋಡಿದ ನೆರೆದಿದ್ದ ಅಪಾರ ಜನರು ಖುಷಿಯಲ್ಲಿ ಮಿಂದುಹೋದರು.

ಮೈಸೂರು ದಸರಾದ ಅತೀ ಮುಖ್ಯ ಆಕರ್ಷಣೆಯಲ್ಲೊಂದಾದ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಇಂದು ಸಂಜೆ ರಾಜ್ಯ ಪ್ರವಾಸೋದ್ಯಮ ಮತ್ತು ಜವಳಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಬಿ. ಶ್ರೀರಾಮುಲು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಡಿ.ಟಿ.ಜಯಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸೆಲ್ವಕುಮಾರ್, ಸಂಸದ ಶಿವಣ್ಣ, ಹಾಗೂ ಅನೇಕ ಶಾಸಕರು ಉಪಸ್ಥಿತರಿದ್ದರು.

ಈ ಬಾರಿಯ ವಸ್ತು ಪ್ರದರ್ಶನದಲ್ಲಿ ಒಟ್ಟು ೨೨೮ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಖಾಸಗಿಯವರಿಗೆ ಒಟ್ಟು ೨೦೩ ಮಳಿಗೆಗಳನ್ನು ಬಿಟ್ಟುಕೊಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಇಷ್ಟರವರೆಗೆ ಯಾವೊಂದು ಮಳಿಗೆಗಳು ಆರಂಭಗೊಳ್ಳದೇ ಇರುವುದು ಪ್ರಶ್ನೆಗೆ ಗ್ರಾಸವಾಗಿದೆ.

ದಸರಾ ಪ್ರಯುಕ್ತ ಸತತ ಎಂಟು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವವನ್ನು ಕಲಾಮಂದಿರದಲ್ಲಿ ಖ್ಯಾತ ಚಲನಚಿತ್ರ ನಟ ಡಾ||ವಿಷ್ಣುವರ್ಧನ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಮೈಸೂರು ದಸರಾ ಮಹೋvವದಲ್ಲಿ ನನಗೆ ಭಾಗವಹಿಸಲು ಅವಕಾಶ ಸಿಕ್ಕಿರುವುದು ನನ್ನ ಸುಕೃತ ಎಂದು ಹೇಳಿದರು. ತಮ್ಮ ನೆಚ್ಚಿನ ನಟ, ನಟಿಯರನ್ನು ನೋಡಬೇಕೆಂಬ ತವಕದಿಂದಿದ್ದ ಸಾವಿರಾರು ಅಭಿಮಾನಿಗಳಿಂದ ಇಡೀ ಕಲಾಮಂದಿರ ತುಂಬಿ ತುಳುಕುತ್ತಿತ್ತು, ಈ ಸಂದರ್ಭದಲ್ಲಿ ಭಾಗವಹಿಸಿದ ಚಲನಚಿತ್ರ ನಟರನ್ನು ಮತ್ತು ನಟಿಯರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಟಿ.ಜಯಕುಮಾರ್ ಮತ್ತು ಎಂ.ಪಿ.ಪ್ರಕಾಶ್ ಸನ್ಮಾನಿಸಿದರು. ನಟರಾದ ದೊಡ್ಡಣ್ಣ, ಕೆ.ಎಸ್ ಅಶ್ವತ್, ಶಿವರಾಂ, ವಿಜಯ ರಾಘವೇಂದ್ರ, ಅನಿರುದ್ಧ, ಹಿರಿಯ ಹಾಸ್ಯನಟ ರತ್ನಾಕರ್, ರಮೇಶ್ ಭಟ್, ಸುಂದರ್‌ರಾಜ್ ನಟಿಯರಾದ ಭಾರತಿ ವಿಷ್ಣುವರ್ಧನ್, ಜಯಂತಿ, ಶ್ರುತಿ, ಪ್ರಮೀಳಾ ಜೋಷಾಯ್, ನಿರ್ದೇಶಕರಾದ ನಾಗಾಭರಣ, ಪಿ.ಶೇಷಾದ್ರಿ, ಸಂಗೀತ ನಿರ್ದೇಶಕ ಹಂಸಲೇಖ, ಬಾಲನಿರ್ದೇಶಕ ಮಾ|ಕಿಶನ್, ನಿರ್ಮಾಪಕರಾದ ಕೆ.ಮಂಜು, ಚನ್ನೇಗೌಡ ಮುಂತಾದ ಕಲಾವಿದರು ಭಾಗವಹಿಸಿದ್ದರು.

ಅರಮನೆ ಮುಂಭಾಗ ಏರ್ಪಾಡಾಗಿದ್ದ `ಕನ್ನಡ ಗೀತ ಗಾಯನ' ಸಾಂಸ್ಕೃತಿಕ ರಸಸಂಜೆಯಲ್ಲಿ ಅನೇಕ ಸಂಗೀತ ರಸಿಕರು ಗೀತೆಗಳನ್ನು ಕೇಳಿ ಪುಳಕಿತರಾದರು. ಝಗಮಗಿಸುವ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಅರಮನೆ ಆವರಣದಲ್ಲಿ ಸುಗಮ ಸಂಗೀತ ದಿಗ್ಗಜ ಸಿ.ಅಶ್ವತ್ ಮತ್ತು ಸಂಗಡಿಗರು ಕುವೆಂಪು ಅವರ ನಾಡಗೀತೆ `ಜೈ ಭಾರತ ಜನನಿಯ ತನುಜಾತೆ' ಗೀತೆ ಹಾಡುವುದರ ಮೂಲಕ ಆರಂಭಿಸಿದರು. ನಂತರ ಡಿ.ಎಸ್. ಕರ್ಕಿಯವರ `ಹಚ್ಚೇವು ಕನ್ನಡದ ದೀಪ', ಬೇಂದ್ರೆಯವರ `ಶ್ರಾವಣ ಬಂತು ನಾಡಿಗೆ ಬಂತು ಕಾಡಿಗೆ... ಬಂತು ನಾಡಿಗೆ... ಬಂತು ಬೀಡಿಗೆ ಗೀತೆ ಅಶ್ವತ್‌ರವರ ಸುಮಧುರ ಕಂಠದಿಂದ ಮೊಳಗಿತು.

ರತ್ನಮಾಲಾ ಪ್ರಕಾಶ್ ಕೆ.ಎಸ್.ನರಸಿಂಹ ಸ್ವಾಮಿಯವರ `ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು' ಎಂಬ ಗೀತೆಯನ್ನು ಹಾಡಿ ರಂಜಿಸಿದರು. ಅನೇಕ ಸುಮಧುರ ಗೀತೆಗಳನ್ನು ಹಾಡಿದ ವೈ.ಕೆ. ಮುದ್ದುಕೃಷ್ಣ, ಪಿಚ್ಚಳ್ಳಿ ಶ್ರೀನಿವಾಸ್, ಅಪ್ಪಗೆರೆ ತಿಮ್ಮರಾಜು, ನಿತ್ಯೋತ್ಸವ ಪ್ರತಿಭೆಗಳಾದ ಲಕ್ಷ್ಮೀನಾಗರಾಜ್, ಮಾಧವಿ, ಕವಿತಾ ಮಠಪತಿ, ಸಾಲೀಹಮಜೀದ್, ಅಂಕಿತಾ ಪೈ, ಚಿಂತನ್, ತನ್ಮಯಿ ಕೃಷ್ಣಮೂರ್ತಿ ಇವರುಗಳು ಪೇಕ್ಷಕರನ್ನು ತನ್ಮಯರನ್ನಾಗಿ ಮಾಡಿದರು.

ಅರಮನೆ ಮುಂಭಾಗ ಅನೇಕ ಜನರು ಸಂಗೀತ ರಸಸಂಜೆಗೆ ಜಮಾಯಿಸಿದ್ದರಿಂದ ಪುರಭವನ, ವೀಣೆಶೇಷಣ್ಣ ಭವನದಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಪುರಭವನ ಆವರಣದಲ್ಲಿ ಏರ್ಪಡಿಸಲಾಗಿದ್ದ ಆಹಾರ ಮೇಳಕ್ಕೆ ಜನರು ಕಿಕ್ಕಿರಿದು ತುಂಬಿಕೊಂಡಿಕೊಂಡಿದ್ದರು.

ದಸರಾ ಉತ್ಸವದ ಅಂಗವಾಗಿ ರಂಗಾಯಣ ಮತ್ತು ದಸರಾ ಉತ್ಸವ ಸಮಿತಿ ಸಂಯುಕ್ತವಾಗಿ ಏರ್ಪಡಿಸಿರುವ ನವರಾತ್ರಿ ರಂಗೋತ್ಸವಕ್ಕೆ ಸಂಶೋಧಕ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ನಟ ಕೆ.ಎಸ್.ಅಶ್ವತ್ ವಹಿಸಿದ್ದರು.

ಖಾಸಗಿ ದರ್ಬಾರು

ಅರಮನೆಯೊಳಗೆ ರಾಜವಂಶಸ್ಥರು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ `ಖಾಸಗಿ ದರ್ಬಾರು' ಹಾಗೂ ಪೂಜಾ ವಿಧಿ ವಿಧಾನಗಳಿಗೆ ಶನಿವಾರ ಚಾಲನೆ ದೊರೆಯಿತು. ಅಮೂಲ್ಯ ರತ್ನ ಖಚಿತ ಸಿಂಹಾಸನವನ್ನು ಅಲಂಕರಿಸಿ ಪೂಜಾಕ್ರಿಯೆಯನ್ನು ರಾಜಪುರೋಹಿತರು ಆರಂಭಿಸಿದ ನಂತರ ಒಡೆಯರು ಕಂಕಣ ತೊಟ್ಟು ಸಿಂಹಾಸನಕ್ಕೆ ಪೂಜೆ ಸಲ್ಲಿಸುವುದರ ಮೂಲಕ ೯ ದಿನಗಳ ಕಾಲ ನಡೆಯುವ ಈ ಖಾಸಗಿ ದರ್ಬಾರಿಗೆ ಚಾಲನೆ ದೊರೆತಂತಾಗಿದೆ.

ಒಡೆಯರು ಚಿನ್ನ ಲೇಪಿತ ವಸ್ತ್ರ ಹಾಗೂ ಪೇಟ ಧರಿಸಿ ಆಯುಧ ಪೂಜೆಯವರೆಗೆ (ಅ.೧) ಪ್ರತಿದಿನ ಸಂಜೆ ವೇಳೆ ೪೫ ನಿಮಿಷಗಳ ಕಾಲ ಸಿಂಹಾಸನದಲ್ಲಿ ಆಸೀನರಾಗುವರು.

ಇವಿಷ್ಟೇ ಅಲ್ಲದೆ, ಫಲಪುಷ್ಪ ಪ್ರದರ್ಶನ, ಕುಸ್ತಿ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮವೂ ನಡೆಯಿತು. ಒಂಭತ್ತು ದಿನಗಳ ಕಾಲ ನಡೆಯುವ ಈ ದಸರಾ ಮಹೋತ್ಸವಕ್ಕೆ ದೇಶದ ನಾನಾ ಮೂಲೆಗಳಿಂದ ಪ್ರವಾಸಿಗರ ದಂಡು ಇದೀಗ ಮೈಸೂರಿನತ್ತ ಬರತೊಡಗಿದೆ.

 

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com