|
ಬಾಗಿಲಿಂದಾಚೆ, ಪೋಗದಿರೆಲೋ ರಂಗ

ವಸುಧೇಂದ್ರ,
ಬೆಂಗಳೂರು
email
:
vas123u@rocketmail.com
ಬಳ್ಳಾರಿಯ ಬಸ್ ನಿಲ್ದಾಣದಲ್ಲಿ ಸಂಡೂರಿನ ಬಸ್ಸಿನ ಮೂರನೇ ಸೀಟಿನಲ್ಲಿ ಅಜ್ಜಿಯ ಪಕ್ಕ
ಕಿಟಕಿಯ ಕಡೆ ಕುಳಿತ ಪುಟ್ಟನ ಪುಟ್ಟ ಬಲಗೈಯನ್ನು ಬಸ್ಸಿನ ಕೆಳಗೆ ನಿಂತಿದ್ದ
ಅವರಮ್ಮ ಹಿಡಿದುಕೊಂಡು ಕಣ್ಣಲ್ಲಿ ನೀರು ತುಂಬಿಕೊಂಡು "ಪುಟ್ಟ ಹುಷಾರು" ಎಂದು
ಗದ್ಗದಿತರಾಗಿ ಹೇಳಿದಾಗ ಪುಟ್ಟ ಒಳಗೊಳಗೇ ಖುಷಿಯಿಂದ ಉಬ್ಬಿ ಹೋಗುತ್ತಿದ್ದ. ಆದರೆ ಹಾಗಂತ
ಮುಖದಲ್ಲಿ ತೋರಿಸಿ ಬಿಟ್ಟರೆ ಮತ್ತೆಲ್ಲಿ ಸಿಟ್ಟಾಗುತ್ತಾಳೋ ಎಂದು ಅಂಜಿ ಸಪ್ಪೆ ಮೋರೆ ಹಾಕಿಕೊಂಡು
ಅವರಮ್ಮ ಹೇಳಿದ್ದಕ್ಕೆಲ್ಲಾ ತಲೆಯಲ್ಲಾಡಿಸುತ್ತಿದ್ದ. ಮತ್ತೆ ಬಸ್ಸು ಹೊರಡುವುದರಲ್ಲಿಯೇ
ಮನಸ್ಸು ಬದಲಾಯಿಸಿ ತನ್ನಮ್ಮ ಎಲ್ಲಿ ತನ್ನನ್ನು ಬಸ್ಸಿನಿಂದಿಳಿಸಿ ಮನೆಗೆ ಕರೆದುಕೊಂಡು ಹೋಗಿ
ಬಿಡುತ್ತಾಳೋ ಎಂಬ ಅಳುಕೂ ಇದ್ದರಿಂದ ಎಡಗೈಯಿಂದ ಅಜ್ಜಿಯ ಕೈಯನ್ನು ಗಟ್ಟಿಯಾಗಿ
ಹಿಡಿದುಕೊಂಡಿದ್ದ. ಇನ್ನೂ ಯಾಕೆ ಬಸ್ಸು ಬಿಡ್ತಾ ಇಲ್ಲ ಅಂತ ತಿರುತಿರುಗಿ ಡ್ರೈವರ್ ಸೀಟಿನ
ಕಡೆಗೆ ನೋಡುತ್ತಿದ್ದ.
"ಬಾವಿ ಹತ್ತಿರ ಹೋಗ್ಬೇಡ" ಅವರಮ್ಮ ಹೇಳಿದಳು. ತಲೆಯಲ್ಲಾಡಿಸಿದ.
"ಕೋತಿ
ತಂಟೆಗೆ ಹೋಗ್ಬೇಡ" ತಲೆಯಲ್ಲಾಡಿಸಿದ. ಅವರಮ್ಮ ಏನೇ ಹೇಳಿದರೂ ಅದಕ್ಕೆಲ್ಲಾ
ತಲೆಯಲ್ಲಾಡಿಸಲು ತಯಾರಾಗಿದ್ದ. ಅವರಮ್ಮ ಇನ್ನೂ ಏನೇನೋ ಎಚ್ಚರಿಕೆಗಳನ್ನು
ಹೇಳಲು ಸಿದ್ಧಳಿದ್ದಳು. ಆದರೆ ಪುಟ್ಟನ ಪುಣ್ಯವೆಂದೇ ಹೇಳಬೇಕು. ಡ್ರೈವರ್ ತನ್ನದೇ
ಬಸ್ಸೆಂಬಂತೆ ಅಧಿಕಾರದಿಂದ ಹತ್ತಿ "ಪಂವ್ ಪಂವ್" ಎಂದು ಶಬ್ಧ ಮಾಡಿ ಬಸ್ಸನ್ನು ಚಾಲೂ ಮಾಡಿಯೇ
ಬಿಟ್ಟ. ಪುಟ್ಟ ಅಮ್ಮನ ಹಿಡಿತದಿಂದ ಸರ್ರನೆ ಕೈ ಬಿಡಿಸಿಕೊಂಡ. ಬಸ್ಸು ನಿಧಾನಕ್ಕೆ ಚಲಿಸಲಾರಂಭಿಸಿತು.
ಅದರ ಜೊತೆಯೇ ಓಡು ನಡಿಗೆಯಲ್ಲಿ ಬಂದ ಅವನಮ್ಮ "ಅತ್ತೆ, ಹುಷಾರಾಗಿ ನೋಡ್ಕೊಳ್ರಿ.
ಕಡ್ಲಿಬ್ಯಾಳಿ ಅಡಿಗೆ ಮಾಡ್ಬೇಡ್ರಿ. ಅವನಿಗೆ ತಡೆಯಲ್ಲ, ವಾಯಿ ಮಾಡುತ್ತೆ. ಐಸ್‌ಕ್ರೀಂ
ಕೇಳಿದ್ರೆ ಕೊಡಿಸ್ಬೇಡ್ರಿ, ನೆಗಡಿ ಆಗ್ತದೆ. ನಾನು ಮುಂದಿನವಾರ ಬರ್ತೀನಿ..." ಹೇಳುತ್ತಲೇ
ಇದ್ದರು. ಬಸ್ಸು ತನ್ನ ವೇಗವನ್ನು ಹೆಚ್ಚಿಸಿ ರಾಯಲ್ ಸರ್ಕಲ್ಲನ್ನು ದಾಟಿ ಅವನಮ್ಮನ
ಮುಖ ಕಾಣದಾಗಿದ್ದೇ ಪುಟ್ಟನಿಗೆ ಇನ್ನು ತನ್ನನ್ಯಾರೂ ಬಸ್ಸಿನಿಂದ ಕೆಳಗಿಳಿಸುವುದಿಲ್ಲವೆಂಬ
ಧೈರ್ಯ ಮೂಡಿ, ಗಟ್ಟಿಯಾಗಿ ಹಿಡಿದುಕೊಂಡಿದ್ದ ಅಜ್ಜಿಯ ಕೈಯನ್ನು ಬಿಟ್ಟು ಒಮ್ಮೆ
ಜೋರಾಗಿ ಚಪ್ಪಾಳೆ ಹೊಡೆದು `ಅಜ್ಜಿ' ಎಂದು ಸಂತೋಷದಿಂದ ಕೂಗಿದ.
ಮಧ್ಯವಾರ್ಷಿಕ
ಪರೀಕ್ಷೆ ಮುಗಿದ ದಿನವೇ ಪುಟ್ಟನ ಅಜ್ಜಿ ಸಂಡೂರಿನಿಂದ ಬಂದಾಗ, ಪುಟ್ಟ ಉಬ್ಬಿ ಹೋಗಿದ್ದ. "ಅಜ್ಜಿ...
ಅಜ್ಜಿ..." ಅಂತ ಅವಳ ಹಿಂದೆಯೇ ಸುತ್ತಿದ್ದ. ಅವಳ ಕೈ ಹಿಡಿದುಕೊಂಡು ರಾಯರ ಮಠಕ್ಕೆ
ಕರೆದುಕೊಂಡು ಹೋಗಿದ್ದ. ಅವಳ ಪಕ್ಕವೇ ಊಟಕ್ಕೆ ಕುಳಿತುಕೊಂಡಿದ್ದ. ಅವಳ ಪಕ್ಕವೇ
ಕಥೆ ಕೇಳುತ್ತಾ ಮಲಗಿಕೊಂಡಿದ್ದ. ಅಜ್ಜಿ ಊರಿಗೆ ಹೊರಡುವ ಹಿಂದಿನ ದಿನ ಸಂಜೆ ಮೆತ್ತಗೆ `ಅಜ್ಜಿ'
ಎಂದು ಕರೆದು "ನಾನೂ ಸಂಡೂರಿಗೆ ಬರ್ತೀನಿ..." ಅಂತ ರಾಗವೆಳೆದು ಮುದ್ದು ಮುದ್ದಾಗಿ
ಬೇಡಿಕೆಯನ್ನು ಮುಂದಿಟ್ಟಿದ್ದ. ಅಜ್ಜಿ ಹಿಂದು-ಮುಂದು ಯೋಚಿಸದೆ "ಬೇಡಪ್ಪಾ, ಬೇಡ.
ನಿಮ್ಮಮ್ಮ ನಿನ್ನ ಬಿಟ್ಟರಂಗಿಲ್ಲ" ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿ ಬಿಟ್ಟಿದ್ದರು. ಪುಟ್ಟನಿಗೆ
ತಣ್ಣೀರೆರಚಿದಂತಾಗಿತ್ತು. ಆದರೂ ನಿರಾಶೆ ಹೊಂದದೆ ಮತ್ತೊಂದು ಕಲ್ಲು ಒಗೆದಿದ್ದ. "ನೀ
ಹೇಳಿದ್ರೆ ಒಪ್ಗೊಳ್ತಾಳಜ್ಜಿ. ಅಷ್ಟಕ್ಕೂ ನಾನೀಗ ದೊಡ್ಡವನಾಗೀನಿ, ಎಂಟನೇ ಕ್ಲಾಸು ಗೊತ್ತಾ? ಹೈಸ್ಕೂಲ್ನಾಗೆ
ಪ್ಯಾಂಟ್ ಹಾಕ್ಕೊಂಡೇ ಹೋಗ್ಬೇಕು, ಚಡ್ಡಿ ಹಾಕಂಗಿಲ್ಲ" ಎಂದು ಎದೆಯುಬ್ಬಿಸಿ ಹೇಳಿದ. "ಆಹಾಹಾ,
ಬಾರೀ ಮೀಸೆ ಬಂದ ಗಂಡಸು ನೋಡು" ಅಂತ ಅವನಜ್ಜಿ ಗಲ್ಲವನ್ನು ಹಿಂಡಿ "ಕೇಳಿ ನೋಡ್ತೀನಪ್ಪ,
ಗ್ಯಾರಂಟಿ ಇಲ್ಲ" ಅಂತ ಭರವಸೆಯನ್ನು ಕೊಟ್ಟಿದ್ದರು. ಅನಂತರ ಅರ್ಧ ಗಂಟೆಗೊಮ್ಮೆ
ಅಜ್ಜಿಯ ಹತ್ತಿರ ಹೋಗಿ ಮೆತ್ತಗೆ "ಕೇಳಿದೇನಜ್ಜಿ" ಎಂದು ಎಚ್ಚರಿಸಿದ್ದ. ಅಜ್ಜಿ ರೋಸಿ ಹೋಗಿ
"ನೀ ಸ್ವಲ್ಪ ಸುಮ್ನಿರ್ತೀಯ, ನಾನೆಲ್ಲಾ ಕೇಳ್ತೀನಿ" ಎಂದು ಗದರಿಸಿದ್ದರು.
ರಾತ್ರಿ ಊಟಕ್ಕೆ ಕೂಡುವ ಸಮಯದಲ್ಲಿ ಅಜ್ಜಿ ವಿಷಯವನ್ನು ಪ್ರಸ್ತಾಪಿಸಿದಾಗ ಪುಟ್ಟನ
ಅಮ್ಮ ಖಡಾ ಖಂಡಿತವಾಗಿ "ನಾನು ಜೊತೆಗಿಲ್ಲದೆ ಅವನು ಎಲ್ಲಿಗೂ ಹೋಗಂಗಿಲ್ಲ" ಎಂದು
ನಿರಾಕರಿಸಿಬಿಟ್ಟರು. ಪುಟ್ಟ ಊಟ ಮಾಡಂಗಿಲ್ಲ ಅಂತ ಉಪವಾಸ ಸತ್ಯಾಗ್ರಹ ಮಾಡಿದ. ಅವನ ಅಪ್ಪನೂ
"ಇರ್ಲಿ ಕಳಿಸಿಕೊಡೆ, ಸಂಡೂರೇನು ಮಹಾದೂರ? ಒಂದು ತಾಸಿನ ಹಾದಿ" ಎಂದರು. ಅಜ್ಜಿಯೂ
"ಮುಂದಿನ ವಾರಾನೇ ಕುಮಾರಸ್ವಾಮಿ ಜಾತ್ರೆ. ಗಂಡು ಹುಡುಗ, ದೇವರ ದರ್ಶನ ಮಾಡ್ತಾನೇಳು"
ಅಂತ ಹೊಸದೊಂದು ಪಾಯಿಂಟ್ ಹಾಕಿದರು. ಪುಟ್ಟನ ಗೆಳೆಯನ ತಾಯಿಯೊಬ್ಬರು ರಾತ್ರಿ
ಹಾಲಿಗೆ ಹೆಪ್ಪು ಕೇಳಲು ಬಂದವರು "ನಮ್ಮ ರಾಜುನ್ನ ಬೊಂಬಾಯಿಗೇ ಕಳುಸೀವಿ, ಸಂಡೂರಿಗೆ
ಕಳುಸ್ಲಿಕ್ಕೆ ಯಾಕ್ರಿ ಅಂಜಿಕಿ? ರಜಾ ಅದೆ. ಹುಡುಗ ನಾಲ್ಕು ದಿನ ಆಡ್ಕೊಂಡು ಬರ್ಲೇಳ್ರಿ"
ಎಂದು ಹೇಳಿದರು. ಅಂತೂ ಒಲ್ಲದ ಮನಸ್ಸಿನಿಂದ ಪುಟ್ಟನ ಅಮ್ಮ ಒಪ್ಪಿಕೊಂಡಿದ್ದರು.
ಬಸ್ಸು
ಬಳ್ಳಾರಿಯಿಂದ ದೂರ ದೂರ ಹೋದಂತೆಲ್ಲಾ ಪುಟ್ಟನಿಗೆ ಯಾವುದೋ ರಾಕ್ಷಸ ಗುಹೆಯಿಂದ
ತಪ್ಪಿಸಿಕೊಂಡು ಬಂದಂತೆ ಖುಷಿಯಾಗುತ್ತಿತ್ತು. ಭರ್ರನೆ ಕಿಟಕಿಯಿಂದ ಒಳ ನುಗ್ಗಿದ ಗಾಳಿ
ಅವನ ತಲೆಯ ಕೂದಲನ್ನೆಲ್ಲಾ ಹಾರಾಡಿಸಿದಾಗ ತಾನೊಬ್ಬ ಸಿನಿಮಾ ನಟನೆಂದು ಅನ್ನಿಸಿತು.
ಬಳ್ಳಾರಿಯ ಜಾಲಿಯ ಮರಗಳು ಸಂಡೂರಿನ ಬಸ್ಸಿನ ವೇಗಕ್ಕೆ ಓಡಲಾರದೆ ಹಿಂದೆ ಹಿಂದೆ
ಬೀಳತೊಡಗಿದವು. ಪುಟ್ಟ ಕುಳಿತಲ್ಲಿಯೇ ಯಾವುದೋ ಹಾಡನ್ನು ಗುನುಗುಟ್ಟುತ್ತಾ
ಕುಣಿಯಲಾರಂಭಿಸಿದ.
ಅಪರೂಪಕ್ಕೆ ಬಸ್ಸು ಖಾಲಿಯಿತ್ತು. ಪುಟ್ಟ ಡ್ರೈವರ್ ಬಳಿ ಹೋದ. ಅಂತಹ ದೊಡ್ಡ ಬಸ್ಸನ್ನು
ಒಂದು ಕೈಯಿಂದ ಸಿಗರೇಟು ಸೇದುತ್ತಾ, ಮತ್ತೊಂದು ಕೈಯಿಂದ ಮಾತ್ರ ಸ್ಟೀರಿಂಗ್ ಹಿಡಿದು
ನಡೆಸುವ ಡ್ರೈವರ್ ಮಹಾನ್ ವ್ಯಕ್ತಿಯಂತೆ ಕಾಣುತ್ತಿದ್ದ. ಪುಟ್ಟನಿಗೆ ಅವನನ್ನು ಮುಟ್ಟಬೇಕೆಂಬ
ಆಸೆಯಾಯ್ತು. ಮೆತ್ತಗೆ ತನ್ನ ಪುಟ್ಟ ಕೈಯಿಂದ ಅವನನ್ನು ಮುಟ್ಟಿದ. ಡ್ರೈವರ್
"ಏನೋ ಮರಿ" ಅಂತ ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಕೇಳಿ ಕಣ್ಣು ಹೊಡೆದ. ಇವನಿಗೆ ಹೆದರಿಕೆಯಾಗಿ
ಹಿಂದಕ್ಕೆ ಬಂದು ತನ್ನ ಸೀಟಿನಲ್ಲಿ ಕುಳಿತುಬಿಟ್ಟ. ಡ್ರೈವರ್ ಮೇಲೆ ಕೋಪ ಬಂತು. ತನ್ನನ್ನೇನು
ಹೆಣ್ಣು ಹುಡುಗಿ ಅಂತ ತಿಳ್ಕೊಂಡಾನಾ, ಕಣ್ಣು ಹೊಡಿತಾನೆ. ಕೈಯಲ್ಲಿ ಪಿಸ್ತೂಲ್ ಇದ್ದಿದ್ರೆ ಶೂಟ್
ಮಾಡಿ ಬಿಡ್ತಿದ್ದೆ ಅಂತ ಮನಸ್ಸಿನಲ್ಲಿಯೇ ಬೈದುಕೊಂಡ.
ಅಜ್ಜಿ ಸಂಡೂರಿಗೆ ಒಂದೂವರೆ ಟಿಕೆಟ್ ತೆಗೆದುಕೊಂಡಾಗ ಕಂಡೆಕ್ಟರ್ "ಈ ಹುಡುಗಂಗೆ ಇನ್ನೂ
ಹದಿಮೂರು ವರ್ಷ ಆಗಿಲ್ಲೇನಜ್ಜಿ?" ಎಂದು ಕೇಳಿದಾಗ ಪುಟ್ಟ "ಓ, ಅಯ್ತು. ಹೋದ್ವಾರಾನೇ
ನನ್ನ ಹುಟ್ಟಿದ ಹಬ್ಬ ಆಯ್ತು" ಅಂತ ಹೇಳಿಬಿಟ್ಟ. ಬಸ್ಸಿನಲ್ಲಿದ್ದವರೆಲ್ಲಾ ಅವನ ಮಾತಿಗೆ ನಕ್ಕುಬಿಟ್ಟಾಗ
ಹಾಗನ್ನಬಾರದಿತ್ತೇನೋ ಅಂತ ಗಲಿಬಿಲಿಯಾಯ್ತು. ಅಜ್ಜಿ ಬೇರೆ ದಾರಿಯಿಲ್ಲದೆ ಅವನಿಗೂ ಫುಲ್
ಟಿಕೆಟ್ ತೆಗೆದುಕೊಂಡು "ತಲೆಹರಟೆ ರಂಡೆಗಂಡ, ನಿನ್ನನ್ಯಾರೋ ವಯಸ್ಸು
ಕೇಳಿದ್ದು" ಅಂತ ತಲೆಗೊಂದು ಮೊಟಕಿದರು.
`ಕುಡುತಿನಿ'
ಬಂದಾಗ "ಸೋಡಾ, ಸೋಡಾ" ಎನ್ನುತ್ತಾ ಸೋಡಾ ಮಾರುವ ಹುಡುಗರು
ಕೂಗಲಾರಂಭಿಸಿದರು. ಸೋಡಾ ಬಾಟಲಿನಲ್ಲಿನ ನೀಲಿ ಗೋಲಿ ಪುಟ್ಟನಿಗೆ ತುಂಬಾ ಸುಂದರವಾಗಿ
ಕಂಡಿತು. "ಅಜ್ಜಿ ಸೋಡಾ" ಅಂತ ಕೇಳಿದ್ದಕ್ಕೆ ಅಜ್ಜಿ "ತೊಗೋ..." ಅಂತ ೫೦ ಪೈಸೆ
ಕೊಟ್ಟುಬಿಟ್ಟರು! ಬರೀ ಬಿಳಿಬಣ್ಣದ ಸೋಡಾ ಯಾವುದೇ ರೀತಿಯಿಂದಲೂ ಆಕರ್ಷಕವಾಗಿ ಕಾಣಲಿಲ್ಲವಾದ್ದರಿಂದ
ಕೆಂಪು ಬಣ್ಣದ ಸೋಡಾ ತೆಗೆದುಕೊಂಡ. ಸೋಡಾ ಕುಡಿದಾದ ಮೇಲೆ ಅದರಲ್ಲಿನ ಗೋಲಿಯನ್ನು
ಹೊರ ತೆಗೆಯಲು ಪ್ರಯತ್ನ ಪಟ್ಟ, ಸಾಧ್ಯವಾಗಲಿಲ್ಲ. ಅಷ್ಟರಲ್ಲಿಯೇ ಅವನಿಗಿಂತಲೂ
ಚಿಕ್ಕ ವಯಸ್ಸಿನ ಸೋಡಾ ಮಾರುವ ಹುಡುಗ ಬಾಟಲಿಯನ್ನು ಹಿಂದಕ್ಕೆ
ತೆಗೆದುಕೊಂಡು ಹಣಕ್ಕಾಗಿ ಕೈ ಚಾಚಿದ. ಪುಟ್ಟಗೆ ಅವನು ತನಗಿಂತ ಚಿಕ್ಕವನಿದ್ದಾನೆಂಬ
ಧೈರ್ಯ ಮೂಡಿ "೫೦ ಪೈಸೆ ಸೋಡಾಕ್ಕೆ ದುಬಾರಿಯಾಯ್ತು" ಅಂತ ಹೇಳಿದ್ದಕ್ಕೆ ಆ ಹುಡುಗ
"ಹಂಗಾರೆ ೪೫ ಪೈಸೆ ಕೊಡು" ಅಂತ ಹೇಳಿ ೫ ಪೈಸೆ ವಾಪಾಸ್ ಕೊಟ್ಟುಬಿಟ್ಟ! ಪುಟ್ಟನಿಗೆ ಮೈ
ಜುಂ ಅಂತು. ಅವನ ಜೀವನದಲ್ಲಿ ಇದು ಪ್ರಪ್ರಥಮ ವ್ಯಾಪಾರವಾಗಿತ್ತು. ಅದೂ ಐದು ಪೈಸೆ
ಲಾಭ! ಮತ್ತೆ ಬಳ್ಳಾರಿಗೆ ವಾಪಾಸ್ಸಾಗುವಾಗ ೪೦ ಪೈಸೆಗೆ ಚೌಕಾಸಿ ಮಾಡಿ ಸೋಡಾ
ಕುಡಿಯಬೇಕೆಂದು ನಿಶ್ಚಯಿಸಿದ.
ತಾರಾನಗರ ದಾಟಿದ ಮೇಲೆ `ನಾರಿ ಹಳ್ಳ' ಬಂತು. ಎಲ್ಲೆಲ್ಲೂ ನೀರು! ಪುಟ್ಟ ಬಿಟ್ಟ ಕಣ್ಣಿಂದ
ನೋಡಿದ. ನೀರಿನ ಮಧ್ಯದಲ್ಲಿನ ಚಿಕ್ಕ ಚಿಕ್ಕ ಗುಡ್ಡಗಳು ಸ್ನಾನ ಮಾಡುತ್ತಿರುವ
ರಾಕ್ಷಸನ ತಲೆಯಂತೆ ಕಾಣುತ್ತಿದ್ದವು. ನೀರು ಗುಡ್ಡಕ್ಕೆ ಹೊಡೆದಾಗ ಅದು ಹೆದರಿಕೊಂಡು
ಎರಡು ಭಾಗವಾಗಿ ಆಚೆ ಈಚೆ ಸರಿದಾಗ ಅದರ ಮಧ್ಯದಿಂದ ನೀರು ರಾಜಾರೋಷವಾಗಿ ನುಗ್ಗಿಕೊಂಡು
ಬಂದಿತ್ತು. "ಸಮುದ್ರ ಏನಜ್ಜಿ?" ಎಂದು ಕೇಳಿದ. "ಥೂ ನಿನ್ನ, ಹಳ್ಳಾನೋ" ಎಂದ ಅಜ್ಜಿ
"ಬಳ್ಳಾರಿ ಹುಡುಗರಿಗೆ ಸಮುದ್ರ ಅಂದ್ರೆ ಹೆಂಗೆ ಗೊತ್ತಾಗ್ಬೇಕು" ಅಂತ ಪಕ್ಕದ
ಹೆಂಗಸಿಗೆ ಹೇಳಿದರು. ಹಳ್ಳದ ದಂಡೆಯ ಮೇಲಿದ್ದ ಗಂಡಿ ಹನುಮಪ್ಪನ ಗುಡಿ
ಕಂಡಾಗ ಅಜ್ಜಿ ಕೈ ಮುಗಿದು, ಪುಟ್ಟನಿಗೂ ಕೈ ಮುಗಿಯಲು ಹೇಳಿದರು. ಅವನ ಅನ್ನಮುಹೂರ್ತವನ್ನು
ಅಲ್ಲಿಯೇ ಮಾಡಿದ್ದು ಎಂದು ಹೇಳಿದಾಗ ಪುಟ್ಟ ತಿರುತಿರುಗಿ ಆ ದೇವಸ್ಥಾನವನ್ನು ನೋಡಿದ.
ಮನೆಗೆ
ಬಂದ ತಕ್ಷಣ ಪುಟ್ಟ ಹಿತ್ತಲಿನ ಬಾವಿಯನ್ನು ನೋಡಲು ಓಡಿದ. ಅಜ್ಜಿ "ಬಾವಿ ಹತ್ತಿರ ಹೋದರೆ
ನಿಮ್ಮಮ್ಮ ಬೈಯ್ತಾಳೋ" ಎನ್ನುತ್ತಲೇ ಅವನ ಹಿಂದೆ ಬಂದರಾದರೂ ಅವರೂ ಅವನ
ಜೊತೆಯಲ್ಲಿ ಬಾವಿ ನೋಡಲಾರಂಭಿಸಿದರು. ಹತ್ತಾಳುದ್ದದ ಆಳವಾದ ಭಾವಿ. ಸದ್ದು ಮಾಡಬೇಡವೆಂದು
ಪುಟ್ಟನಿಗೆ ಹೇಳಿ "ಕೂರ್ಮ" ಎಂದು ಮೆತ್ತಗೆ ಕೂಗಿದರು. ಆಮೆಯೊಂದು ನೀರಿನಾಳದಿಂದ ಮೇಲಕ್ಕೆ
ಬಂದು ತೇಲಲಾರಂಭಿಸಿತು. ಪುಟ್ಟನಿಗೆ ಕಣ್ಣಲ್ಲಿ ನೀರು ಬರುವಷ್ಟು ಖುಷಿಯಾಯ್ತು. ಪುಟ್ಟ
ಕೂಡಾ "ಕೂರ್ಮ" ಅಂದ. ತಕ್ಷಣ ಹೆದರಿಕೊಂಡ ಆಮೆ ನೀರಿನೊಳಕ್ಕೆ ಮಾಯವಾಯಿತು.
ಅಜ್ಜಿ "ನಿನ್ನ ಧ್ವನಿ ಅದಕ್ಕೆ ಹೊಸದು. ಒಂದೆರಡು ದಿನಕ್ಕೆ ಅಭ್ಯಾಸವಾದ ಮೇಲೆ ನಿನ್ನ ಮಾತು
ಕೇಳುತ್ತೆ" ಎಂದು ಹೇಳಿದರು. ಪುಟ್ಟ ಊರಿಗೆ ಹೋಗುವುದರೊಳಗೆ ಕೂರ್ಮ ತನ್ನ ಮಾತನ್ನು
ಕೇಳುವಂತೆ ಮಾಡಬೇಕೆಂದು ನಿರ್ಧರಿಸಿದ. ಬಾವಿಯ ಪಕ್ಕದಲ್ಲಿದ್ದ ದಾಳಿಂಬೆ ಗಿಡದಲ್ಲಿ ಬಿಟ್ಟಿದ್ದ
ಕಾಯನ್ನು ತೋರಿಸಿದ ಅಜ್ಜಿ, ಅದು ಆ ಗಿಡದಲ್ಲಿ ಬಿಡುತ್ತಿರುವ ಮೊದಲ ಕಾಯಿಯೆಂದೂ, ಇನ್ನೆರಡು
ದಿನದಲ್ಲಿ ಅದು ಹಣ್ಣಾಗುತ್ತದೆಂದೂ, ಅದನ್ನು ಪುಟ್ಟನಿಗಾಗಿಯೇ ಕಾಯ್ದಿರಿಸಿರುವುದಾಗಿಯೂ
ಹೇಳಿದರು. ಪುಟ್ಟ ನಾಳೆಯಿಂದ ಅಜ್ಜನ ಪೂಜೆಗೆ ತುಳಸಿ ಮತ್ತು ಮಲ್ಲಿಗೆ ಬಳ್ಳಿಯಿಂದ ಹೂವನ್ನು
ತಾನೇ ಹರಿಯುವುದಾಗಿ ಅಜ್ಜಿಯನ್ನು ಒಪ್ಪಿಸಿದ.
ಅಷ್ಟರಲ್ಲಿ ಮನೆ ಕೆಲಸದಾಳು ಅಂಬಮ್ಮ ಹಾಗೂ ಅವಳ ಮಗ ತಾಯಣ್ಣ ಬಂದರು. "ಚಿಕ್ಕ
ಸ್ವಾಮೇರು ಬಂದಾರೆ" ಎಂದು ಅಂಬಮ್ಮ ಅವನ ಗಲ್ಲವನ್ನು ಸವರಿ ಲಟಿಗೆ ಮುರಿದು "ಬೋ
ಬೆಳ್ದುಬಿಟ್ಟಾರೆ" ಎಂದಳು. ಪುಟ್ಟ ಅವಳೆಷ್ಟು ಒಳ್ಳೆಯವಳು ಅಂದುಕೊಂಡ. ಅಜ್ಜಿ "ನಿನ್ನ
ಮಗ ತಾಯಣ್ಣಂದೇ ವಯಸ್ಸಲ್ಲೇನೆ? ಇವನು ಎರಡು ತಿಂಗಳು ದೊಡ್ಡವನು, ಅಷ್ಟೆ"
ಎಂದರು. ಅಜ್ಜಿ ತಾಯಣ್ಣನಿಗೆ ಬಳ್ಳಾರಿಯಿಂದ ತಂದಿದ್ದ ಪುಟ್ಟನ ಹಳೆಯ ಅಂಗಿ ಬಟ್ಟೆಗಳನ್ನು
ಕೊಟ್ಟರು. ತಾಯಣ್ಣನಿಗೆ ಖುಷಿಯಾಯಿತಾದರೂ, ಪುಟ್ಟನ ಮುಂದೇ ಅಜ್ಜಿ ಅವನ
ಬಟ್ಟೆಗಳನ್ನು ತನಗೆ ಕೊಡಬಾರದಿತ್ತೆಂದನಿಸಿತು.
ಅಜ್ಜಿ-ಅಂಬಮ್ಮ ಏನೇನೋ ವಿಷಯಗಳನ್ನು ಮಾತನಾಡಲಾರಂಭಿಸಿದಾಗ ಪುಟ್ಟನಿಗೆ ಬೇಜಾರಾಯಿತು.
"ಅಜ್ಜಿ ಕೋತಿ ನೋಡ್ಲಿಕ್ಕೆ ಹೋಗ್ತೀನಿ" ಅಂದ. ಅಜ್ಜಿ "ನೀನೊಬ್ನೇ ಹೋಗ್ಬೇಡ. ತಾಯಣ್ಣನನ್ನು
ಜೊತೆಯಲ್ಲಿ ಕರೆದುಕೊಂಡು ಹೋಗು" ಎಂದು ಹೇಳಿದರು. ಬರಿಗೈಲಿ ಕೋತಿನ್ನ ನೋಡೋದಕ್ಕೆ
ಹೋಗೋದಾದರೂ ಹೇಗೆ? "ಏನಾದ್ರೂ ಕೊಡಜ್ಜಿ" ಅಂದ. ಅಜ್ಜಿ ಕೋತಿಗಳಿಗಾಗಿ ಶೇಂಗಾವನ್ನೂ,
ಪುಟ್ಟನಿಗೆ ತಿನ್ನಲು ಒಂದೆರಡು ಸಜ್ಜಿಗೆ ಉಂಡೆ ಹಾಗೂ ಕೋಡುಬಳೆಗಳನ್ನು ಕೊಟ್ಟರು. ಪುಟ್ಟ
ತಾಯಣ್ಣನೊಡನೆ ಬೇವಿನ ಮರದ ಕಡೆಗೆ ಓಡಲಾರಂಭಿಸಿದ.
ಅರ್ಧ ದಾರಿ ಹೋಗುವುದರೊಳಗೆ ತಾಯಣ್ಣನ ಮನೆ ಬಂತು. "ಒಂದ್ ರವಷ್ಟು ತಡ್ಕಾ,
ಈಗ ಬರ್ತೀನಿ" ಅಂತ ತಾಯಣ್ಣ ತನ್ನ ಮನೆಯೊಳಗೆ ಓಡಿದ. ತಾಯಣ್ಣನಿಗೆ ಪುಟ್ಟನ
ಗರಿಮುರಿಯಾದ ಅಂಗಿ-ಚಡ್ಡಿಗಳನ್ನು ನೋಡಿದ ಮೇಲೆ ತನ್ನ ಹರಕು ಬನಿಯನ್ನು,
ಕೊಳಕು ಚಡ್ಡಿ ತುಂಬಾ ಹೀನಾಯವಾಗಿ ಕಾಣಲಾರಂಭಿಸಿತು. ತನ್ನಮ್ಮ ಕೊಡಿಸಿದ್ದ ಹೊಸ
ಅಂಗಿಯನ್ನು ಹಾಕಿಕೊಂಡು ಬಂದ. ಗಟ್ಟಿ ಹಳದಿ ಬಣ್ಣದ ಅಂಗಿಯಲ್ಲಿ, ಕೆಂಪು, ನೀಲಿ, ಹಸಿರು
ಬಣ್ಣದ ಅಂಗೈಯಗಲದ ಹೂಗಳಿದ್ದು ಪೀರ್ಲು ಹಬ್ಬದ ಹುಲಿಯನ್ನು ಜ್ಞಾಪಿಸುತ್ತಿತ್ತು. ಆ
ಅಂಗಿಗೆ ಎರಡು ಜೋಬುಗಳಿದ್ದವು.
ಪುಟ್ಟನಿಗೆ
ತಾಯಣ್ಣನ ಅಂಗಿ ತುಂಬಾ ಚೆನ್ನಾಗಿದೆಯೆನ್ನಿಸಿತು. ತಾಯಣ್ಣ ಆ ಅಂಗಿಯನ್ನು ಪೀರ್ಲು ಹಬ್ಬಕ್ಕೆ
ಅವನಮ್ಮ ಕೊಟ್ಟ ೨೦ ರೂಪಾಯಿಗೆ ತಾನೇ ಸಂತೆಯಲ್ಲಿ ತಂದಿದ್ದೆಂದು ಹೇಳಿದಾಗ ಪುಟ್ಟನಿಗೆ
ತುಂಬಾ ಆಶ್ಚರ್ಯವಾಯ್ತು. ಪುಟ್ಟ ಎಂದೂ ತನ್ನ ಬಟ್ಟೆಗಳನ್ನು ಆಯ್ಕೆ ಮಾಡುವಂತಿರಲಿಲ್ಲ.
ಅವನು ಆಯ್ಕೆ ಮಾಡುವ ಬಟ್ಟೆಗಳು ಗಂಭೀರವಾಗಿರುವದಿಲ್ಲವೆಂದು ಅವನಮ್ಮನೇ
ಎಲ್ಲಾ ಬಟ್ಟೆಗಳನ್ನು ಅಂಗಡಿಗೆ ಹೋಗಿ ತಂದು ಬಿಡುತ್ತಿದ್ದರು. ಪುಟ್ಟನೊಬ್ಬನಿಗೇ ಅಲ್ಲ,
ಅವರಪ್ಪನಿಗೂ ಅವರೇ ಬಟ್ಟೆ ತರುತ್ತಿದ್ದರು. ಪುಟ್ಟನಿಗೆ ತಾಯಣ್ಣ ತುಂಬಾ
ಅದೃಷ್ಟವಂತ ಎಂದು ಅಸೂಯೆಯಾಯ್ತು. ಈ ವಾರದ ಸಂತೆಯಲ್ಲಿ ಅಜ್ಜಿಯನ್ನು
ಕೇಳಿ ತಾನೂ ಅಂತಹುದೇ ಒಂದು ಅಂಗಿಯನ್ನು ಕೊಳ್ಳಬೇಕೆಂದು ಕೊಂಡ. ಹೇಗೂ ಬೇಡ
ಅನ್ನಲು ಅಮ್ಮ ಇಲ್ಲ.
ಹಳೆಯ ಪಾಳು ಬಿದ್ದ ಪೊಲೀಸ್ ಠಾಣೆಯಲ್ಲಿ ಒಂದು ದೊಡ್ಡ ಬೇವಿನ ಮರವಿದೆ. ಇದರಲ್ಲಿ
ನೂರಾರು ಕೋತಿಗಳು ಸಂಸಾರ ಮಾಡಿಕೊಂಡಿವೆ. ಯಾರೋ ಪುಣ್ಯಾತ್ಮರು ಹಂಪಿಯಲ್ಲಿ
ಪ್ರವಾಸಿಗರಿಗೆ ಈ ಕೋತಿಗಳು ತುಂಬಾ ತೊಂದರೆ ಕೊಡುತ್ತವೆಂದು ರಾತ್ರೋ ರಾತ್ರಿ ಸಂಡೂರಿಗೆ
ತಂದು ಬಿಟ್ಟಿದ್ದರು. ತಮ್ಮ ಕಪಿ ಚೇಷ್ಟೆಗಳಿಂದ ಮಕ್ಕಳಿಗೆ ಸ್ನೇಹಿತರಾಗಿಯೂ, ಹಿರಿಯರ
ಸಿಟ್ಟಿಗೆ ಮೂಲವಾಗಿಯೂ ಇವು ಅಲ್ಲಿ ಬೀಡುಬಿಟ್ಟಿವೆ. ಊರ ಹೆಂಗಸರು ಮಾಳಿಗೆ ಮೇಲೆ ಹರವಿದ
ಹಪ್ಪಳ ಸಂಡಿಗೆಗಳನ್ನು ತಿಂದೋ, ಊರ ಜನ ನೀರು ಹಾಕಿ ಬೆಳೆಸಿದ ಗಿಡದಲ್ಲಿನ
ಹಣ್ಣುಗಳನ್ನು ಭಕ್ಷಿಸಿಯೋ, ತರಕಾರಿ ಮಾರುವವರು ಕೊಟ್ಟ ಕೊಳೆತ ತರಕಾರಿಗಳನ್ನು
ತಿಂದೋ ಜೀವನ ಸಾಗಿಸುತ್ತವೆ.
ಸಣ್ಣ
ಕೋತಿ ಮರಿಯೊಂದು ಮರದ ಟೊಂಗೆಗೆ ನೇತಾಡುತ್ತಿತ್ತು. ಅದರ ಮುಖ
ಆಲೂಗಡ್ಡೆಯಷ್ಟು ಚಿಕ್ಕದಾಗಿತ್ತು. ಪುಟಾಣಿ ಕವಡೆಗಳಂತಿದ್ದ ಅದರ ಕಿವಿಗಳು, ಚಿಕ್ಕ
ಬಾಲ, ಜೋಳದ ಹಣ್ಣಿನಂತೆ ಪಿಳಿ ಪಿಳಿ ಬಿಡುವ ಕಣ್ಣುಗಳನ್ನು ನೋಡಿದ ಪುಟ್ಟನಿಗೆ ಅದನ್ನು
ಮುದ್ದು ಮಾಡಬೇಕೆನ್ನಿಸಿತು. ಅದಕ್ಕೆ ಹತ್ತಿರದಲ್ಲಿ ಒಂದೆರಡು ಶೇಂಗಾ ಒಗೆದ. ಆದರೆ
ಅದು ತೆಗೆದುಕೊಳ್ಳುವುದಕ್ಕೆ ಮುಂಚೆಯೇ ದೊಡ್ಡ ಕೋತಿಯೊಂದು ಎಲ್ಲಿಂದಲೋ ನೆಗೆದು
ಬಂದು ಅದನ್ನು `ಗಪ್' ಎಂದು ತಿಂದು ಬಿಟ್ಟಿತು. ಮತ್ತೆರಡು ಶೇಂಗಾ ಒಗೆದ, ಅದನ್ನೂ
ದೊಡ್ಡ ಕೋತಿ ತಿಂದು ಬಿಟ್ಟಿತು. ಪುಟ್ಟನಿಗೆ ಸಿಟ್ಟು ಬಂತು. "ನಿಂಗಲ್ಲ ಹೋಗೋ, ಸಣ್ಣ
ಕೋತಿಗೊಂದೇ ನಾನು ಶೇಂಗಾ ಕೊಡೋದು. ಹೋಗಾಚೆ" ಎಂದು ದೊಡ್ಡ ಕೋತಿಗೆ ಗದರಿಸಿ
ಹೇಳಿದ. ಅದು `ಗುರ್' ಎಂದಿತು. `ಹಂಗಾರೆ ನಾ ಶೇಂಗಾನೇ ಒಗೆಯಂಗಿಲ್ಲ' ಅಂತ ಎಲ್ಲಾ ಶೇಂಗಾವನ್ನು
ಜೋಬಿನಲ್ಲಿ ತುರುಕಿದ. ದೊಡ್ಡ ಕೋತಿಗೆ ಗೊತ್ತಾಗುವುದಿಲ್ಲವೆ? ಅದು ಪುಟ್ಟನ ಬಳಿಯೇ
ಬರಲಾರಂಭಿಸಿತು. ಪುಟ್ಟನಿಗೆ ಜೀವ ಹೋದಷ್ಟು ಭಯವಾಗಿ "ಅಮ್ಮಾ.." ಎಂದು ಕಿರುಚಿದ.
ಆದರೆ ಅಷ್ಟರಲ್ಲಿಯೇ ಅಲ್ಲೇ ನಿಂತಿದ್ದ ತಾಯಣ್ಣ ಜೇಬಿನಿಂದ ಕ್ಯಾಟರ್‌ಬಿಲ್ಲನ್ನು ತೆಗೆದು
ಕಲ್ಲನ್ನು ಕೋತಿಗೆ ಗುರಿಯಿಟ್ಟು ಹೊಡೆದ. ಕೋತಿಗಳು ಕ್ಯಾಟರಬಿಲ್ಲನ್ನು ನೋಡಿದ್ದೇ `ಕೀಚ್'
`ಕೀಚ್' ಎಂದು ಸದ್ದು ಮಾಡುತ್ತಾ ಓಡಿ ಹೋದವು. ಪುಟ್ಟ ಗಡ ಗಡ ನಡುಗುತ್ತಾ
ತಾಯಣ್ಣನ ಹಿಂದೆ ಬಚ್ಚಿಟ್ಟುಕೊಂಡ. "ಏನೂ ಆಗಾಕಿಲ್ಲ, ಹೆದರ್ಕಾಬ್ಯಾಡ. ಕ್ಯಾಟರ್‌ಬಿಲ್ ಇದ್ರೆ ಮಂಗಣ್ಣ
ಸಮೀಪ ಬರಾಕಿಲ್ಲ" ಎಂದು ತಾಯಣ್ಣ ಧೈರ್ಯ ಹೇಳಿದ. ಪುಟ್ಟನಿಗೆ ತಾಯಣ್ಣ ತುಂಬಾ ಶಕ್ತಿವಂತನಂತೆ
ಕಂಡುಬಂದ. ಅವನು ಹತ್ತಿರವಿಲ್ಲದಿದ್ದರೆ ಕೋತಿ ನನ್ನೇನು ಮಾಡ್ಬಿಡ್ತಿತ್ತೋ? ತನ್ನನ್ನು
ರಕ್ಷಿಸಿದ ಅವನಿಗೆ ತಾನೂ ಏನಾದರೂ ಸಹಾಯ ಮಾಡಬೇಕೆನ್ನಿಸಿತು. ಅಜ್ಜಿ ಕೊಟ್ಟ ಸಜ್ಜಿಗೆ
ಉಂಡಿ, ಕೋಡುಬಳೆಯಲ್ಲಿ ಚೂರು ಅವನಿಗೂ ಕೊಟ್ಟ. ತಾಯಣ್ಣ ಖುಷಿಯಿಂದ ಗಪಗಪನೆ
ತಿಂದು ಬಿಟ್ಟ. ಅವನ ಜೋಬಿನಿಂದ ಇಣುಕಿ ಹಾಕುತ್ತಿದ್ದ ಕ್ಯಾಟರ್‌ಬಿಲ್ ಮಹಾ ಆಯುಧದಂತೆ ಪುಟ್ಟನಿಗೆ
ಗೋಚರಿಸಿತು. ತಾನೂ ಅಂತಹದೊಂದು ಆಯುಧವನ್ನು ಮಾಡಿಕೊಳ್ಳಲೇ ಬೇಕು. ಆಗ
ಕೋತಿಗಳು ತನ್ನನ್ನೇನೂ ಮಾಡಲಾರವು ಎಂದೆನ್ನಿಸಿಬಿಟ್ಟಿತು.
`ಕ್ಯಾಟರ್‌ಬಿಲ್
ಎಲ್ಲಿ ಸಿಕ್ತಾವೆ?
`ನಾನೇ ಮಾಡ್ಕಂಡಿದ್ದು
`ನಂಗೂ
ಒಂದು ಮಾಡ್ಕೊಡ್ತೀಯಾ?
`ಹೂಂ.
ಆದ್ರೆ ನಿನ್ನ ತಾವ ಕವಲು ಕಟಿಗಿ ಐತಾ?
`ಅದೆಲ್ಲಿ
ಸಿಗ್ತದೆ?
`ನರಸಿಂಹಸ್ವಾಮಿ ಗುಡಿತಾವ
`ಹಂಗಾರೆ
ಅಲ್ಲಿಗ್ಹೋಗೋಣ್ವಾ? ಪುಟ್ಟ ಆಸೆಯಿಂದ
ಕೇಳಿದ.
ತಾಯಣ್ಣ ಅನುಮಾನಿಸಿದ. ಊರಿಂದ ನಾಲ್ಕು ಮೈಲಿ ದೂರ. ಆದರೂ ಪುಟ್ಟ ಉಂಡಿ, ಕೋಡುಬಳೆ
ಕೊಟ್ಟಿದ್ದಾನೆ. ಇಲ್ಲ ಅನ್ನೋಕಾಗುತ್ತದೆಯೆ?
`ಹೂಂ,
ಆದರೆ ದೂರ ಐತೆ
`ಬಡಾನ
ಬರೋಣ ಪುಟ್ಟನಿಗೆ ಹುರುಪು.
`ನಿನ್ತಾವ ರೊಕ್ಕ ಅದಾವ? ತಾಯಣ್ಣ
ಅನುಮಾನಿಸುತ್ತಲೇ ಕೇಳಿದ.
`ಯಾಕೆ?
`ಸೈಕಲ್‌ನಾಗೆ
ಹೋಗ್ಬೋದು
`ನಂಗೆ
ಸೈಕಲ್ ಹೊಡೀಲಿಕ್ಕೆ ಬರಂಗಿಲ್ಲ
`ನಂಗೆ
ಬರ್ತದೆ. ಡಬ್ಬಲ್‌ನಾಗೇ ಹೋಗೋಣ
ಪುಟ್ಟ
ಒಪ್ಪಿಕೊಂಡ. ಇಸ್ಮಾಯಿಲ್ ಅಂಗಡಿಯಲ್ಲಿ ಬಾಡಿಗೆಗೆ ಸೈಕಲ್ ತೆಗೆದುಕೊಳ್ಳುವಾಗ ಪುಟ್ಟನಿಗೆ
ತಾನು ಚೌಕಾಸಿ ಮಾಡಿ ತಾಯಣ್ಣನಿಗೆ ತೋರಿಸಿಕೊಡಬೇಕೆಂದೆನಿಸಿತು. ಮತ್ತೊಮ್ಮೆ `ತುಂಬಾ
ದುಬಾರಿಯಾಯ್ತಲ್ರೀ ಅಂದ. ಆದರೆ
ಇಸ್ಮಾಯಿಲ್ `ನಮ್ಮ ಅಂಗಡೀನಾಗೆ ಎಲ್ಲಾ ಫಿಕ್ಸೆಡ್ ಪ್ರೈಜ್. ಚೌಕಾಸಿ ಮಾಡಂಗಿಲ್ಲ. ಬೇಕಿದ್ರೆ
ತೊಗೊಳ್ರೀ, ಬೇಡಾದ್ರೆ ಬಿಡ್ರಿ ಎಂದು ಬಿಟ್ಟ. ಪುಟ್ಟನಿಗೆ
ದುಬಾರಿ ಎಂದು ಹೇಳಲೇ ಬಾರದಾಗಿತ್ತೆಂದೆನಿಸಿಬಿಟ್ಟಿತು. ಊರಲ್ಲಿರುವುದು ಒಂದೇ ಸೈಕಲ್
ಶಾಪಾದ್ದರಿಂದ ಬೇರೆ ಮಾತಾಡದೆ ಚಿಕ್ಕ ಸೈಕಲ್ಲೊಂದನ್ನು ತೆಗೆದುಕೊಂಡು
ನರಸಿಂಹಸ್ವಾಮಿ ಗುಡಿಯ ಕಡೆ ಡಬ್ಬಲ್‌ನಲ್ಲಿ ಹೊರಟರು.
ಪುಟ್ಟನನ್ನು
ರಾಡ್ ಮೇಲೆ ಕೂಡಿಸಿಕೊಂಡು ತಾಯಣ್ಣ ಸೈಕಲ್ ತುಳಿಯಲಾರಂಭಿಸಿದ. ಪುಟ್ಟನಿಗೆ ಆಶ್ಚರ್ಯವಾಯ್ತು.
ಮೈನ್ಸ್ ಲಾರಿಗಳು, ಕೆಂಪು ಬಸ್ಸುಗಳು ದೆವ್ವದಂತೆ ಎದುರಿಗೆ ಬರುತ್ತಿದ್ದರೂ ಅವನಿಗೆ ಹೆದರಿಕೆಯಾಗುವುದಿಲ್ಲವೆ?
`ನೀನೆಷ್ಟನೇ ಕ್ಲಾಸು? ಪುಟ್ಟ ಅನುಮಾನ
ಪರಿಹರಿಸಿಕೊಳ್ಳಲು ಕೇಳಿದ.
`ಎಂಟನೇ
ಕ್ಲಾಸು, ನೀನು? ತಾಯಣ್ಣ ಕೇಳಿದಾಗ
ಪುಟ್ಟನಿಗೆ ತಾನೂ ಎಂಟನೇ ಕ್ಲಾಸೆಂದು ಹೇಳಿಕೊಳ್ಳಲು ಸಂಕೋಚವಾಯ್ತು. `ಆರನೇ
ಕ್ಲಾಸು ಎಂದು ಸುಳ್ಳು ಹೇಳಿದ.
ಧರ್ಮಾಪುರವನ್ನು ದಾಟುವದರಲ್ಲಿ ತಾಯಣ್ಣನಿಗೆ ಆಯಾಸವಾಯ್ತು. ಆದರೆ ಹಾಗೆಂದು
ಹೇಳದೆ ಸೈಕಲ್ ನಿಲ್ಲಿಸಿ `ಉಚ್ಚೆ ಹೊಯ್ಬೇಕು
ಎಂದು ಹುಣಸೇ ಮರದ ಹಿಂದೆ ಹೋದ. ಪುಟ್ಟನಿಗೆ ಏನೂ ಮಾಡಲು ತೋಚದ ಕಾರಣ
`ನಾನೂ ಉಚ್ಚೆಹೊಯ್ತೀನಿ ಅಂತ ಮರದ ಹಿಂದೋಡಿದ.
ಮೈಕೈಯೆಲ್ಲಾ ಅಲ್ಲಾಡಿಸುತ್ತಾ, ತನ್ನ ಬುಲ್ಲಿಮರಿಯನ್ನು ಮೇಲೆ ಕೆಳಗೆ ಮಾಡುತ್ತಾ
ತನ್ನ ಉಚ್ಚೆಯಿಂದ ವಿಚಿತ್ರ ಚಿತ್ರವನ್ನು ಭೂಮಿಯ ಮೇಲೆ ಮೂಡಿಸಿ `ತಾಯಣ್ಣ, ಹೂವ
ಬಿಡಿಸೀನಿ ನೋಡು ಎಂದು ತೋರಿಸಿದ. ತಾಯಣ್ಣ
ನೋಡಿ `ಬೇಸೈತೆ ಅಂದ. ತಾನೂ
ಯಾವುದಾದರೂ ಚಿತ್ರವನ್ನು ಬಿಡಿಸಬೇಕಿತ್ತು ಅಂತ ಅವನಿಗೆ ಅಸೂಯೆಯಾಯ್ತು.
ಪುಟ್ಟ
ತಲೆಯೆತ್ತಿ ನೋಡುತ್ತಾನೆ, ಹುಣಸೆ ಮರದ ತುಂಬಾ ಗೊಂಚಲು ಗೊಂಚಲು ಕಾಯಿಗಳು!
ಪೂರ್ತಿ ಕಾಯಿಯೂ ಅಲ್ಲದ, ಹಣ್ಣೂ ಅಲ್ಲದ ದೋರೆಗಾಯಿಗಳು. `ತಾಯಣ್ಣ ಅಲ್ನೋಡೋ,
ಎಷ್ಟೊಂದು ಹುಣಸೇ ಕಾಯಿಗಳು
ಎಂದು ಕೂಗಿದ. ತಾಯಣ್ಣನಿಗೆ ಅದು ಅಂತಹ ಆಶ್ಚರ್ಯಕರ ವಿಷಯವಲ್ಲ.
ರಸ್ತೆಯುದ್ದಕ್ಕೂ ಹಂದರದಂತೆ ಹುಣಸೆ ಮರಗಳಿವೆ. ಸಾಮಾನ್ಯವಾಗಿ ಎಲ್ಲಾ
ಗಿಡಗಳಲ್ಲೂ ರಾಶಿ ರಾಶಿ ಕಾಯಿ ಬಿಡುತ್ತವೆ. ಆದರೆ ಹಾಗೆಂದು ಪುಟ್ಟನಿಗೆ ಹೇಳದೆ,
ಕಲ್ಲೊಂದನ್ನು ತೆಗೆದುಕೊಂಡು ಬೀಸಿ ಒಗೆದ. ಹುಣಸೇ ಕಾಯಿಯೊಂದು ಕೆಳಗೆ ಬಿತ್ತು. ಪುಟ್ಟನಿಗೂ
ಕಲ್ಲು ಒಗೆದು ಹುಣಸೆಕಾಯಿ ಬೀಳಿಸಬೇಕೆಂಬ ಆಸೆಯಾಯ್ತು. ಅವನೂ ಕಲ್ಲು ತೂರಿದ.
ಅದು ಅರ್ಧ ದೂರವೂ ಹೋಗಲಿಲ್ಲ. `ಹಂಗಲ್ಲ, ತೆಗೆದು ಹೊಡೀಬೇಕು. ಇಕಾ, ಹಿಂಗೆ
ಅಂತ ತಾಯಣ್ಣ ಮತ್ತೊಂದು ಕಲ್ಲನ್ನು ತೂರಿ ಒಗೆದ. ಇನ್ನೊಂದು ಹುಣಸೇ ಕಾಯಿ ಬಿತ್ತು.
ಪುಟ್ಟ ಮತ್ತೊಮ್ಮ್ಮೆ ಪ್ರಯತ್ನಿಸಿದ. ಊಹೂಂ! ಹುಣಸೇಕಾಯಿಗೆ ತಾಕಲಿಲ್ಲ. `ನಿಮ್ಮೂರ್ನಾಗೆ
ಮೈಚೆಂಡು, ಲಗೋರಿ ಆಟ ಆಡಕಿಲ್ವಾ? ನಿಂಗೆ ಕಲ್ಲು ಹೊಡೆಯಾಕೆ ಬರಾಕಿಲ್ಲ?
ತಾಯಣ್ಣ ಕೇಳಿದ. ಪುಟ್ಟ ಮುಖ ಸಪ್ಪಗೆ ಮಾಡಿಕೊಂಡು `ನಮ್ಮಮ್ಮ ಹೊರಗಾಡ್ಲಿಕ್ಕೆ ಹೋದ್ರೆ
ಬೈಯ್ತಾಳೆ. ಮನೆಯಾಗೆ ಕೂತ್ಗೊಂಡು ಓದಿ ರ್‍ಯಾಂಕ್ ಬರ್ಬೇಕು ಅಂತ ಹೇಳ್ತಾಳೆ
ಎಂದ. `ಹೌದಾ? ಇದು ತಾಯಣ್ಣನಿಗೆ ಆಶ್ಚರ್ಯದ
ವಿಷಯ. `ನಿಮ್ಮಮ್ಮ ಏನೂ ಹೇಳಲ್ವಾ? ಪುಟ್ಟ
ಕೇಳಿದ. `ಸಂಜೆನಾಕೆ ನಮ್ಮವ್ವ ಮಂದಿ ಮನಿ ಮುಸುರಿ ತಿಕ್ಲಿಕ್ಕೆ ಹೋಗ್ತಾಳೆ. ಯಾರೂ
ಏನೂ ಅನ್ನಂಗಿಲ್ಲ
ಪುಟ್ಟ
ಮತ್ತೆರಡು ಕಲ್ಲು ತೂರಿ ವಿಫಲನಾದ ಮೇಲೆ ತಾಯಣ್ಣ ಅವನನ್ನು ಮತ್ತೊಂದು ಹುಣಸೇ
ಮರದ ಬಳಿ ಕರೆದುಕೊಂಡು ಹೋದ. ಅಲ್ಲಿದ್ದ ಹುಣಸೇ ಮರದ ಕೊಂಬೆ ನೆಲದ ತನಕ
ಬಾಗಿತ್ತು. ಹುಣಸೇಕಾಯಿಗಳು ಕೈಗೇ ಸಿಗುವಂತಿದ್ದವು. ಪುಟ್ಟ ಖುಷಿಯಿಂದ ಹತ್ತಾರು
ಕಾಯಿಗಳನ್ನು ಕಿತ್ತಿದ. ತಾಯಣ್ಣ ಜಾಸ್ತಿ ಕಾಯಿ ಕಿತ್ತಿದರೆ ಮರದಲ್ಲಿನ ಬ್ರಹ್ಮ ರಾಕ್ಷಸ
ಶಾಪ ಕೊಡುತ್ತಾನೆಂದು ಹೇಳಿದ ಮೇಲೆ ನಿಲ್ಲಿಸಿ ಬಿಟ್ಟ.
ಪುಟ್ಟನಿಗೆ
ಜೋಬಿನಲ್ಲಿದ್ದ ಹುಣಸೇಕಾಯಿಯೊಂದನ್ನು ತಿನ್ನ ಬೇಕೆಂದು ಆಸೆಯಾಯ್ತು. ಆದರೆ
ಅದರ ಹಿಂದೆಯೇ ಅವು ತಾನು ಕಲ್ಲು ತೂರಿ ಕೆಳಗೆ ಬೀಳಿಸಿದ್ದಲ್ಲವೆಂದೂ, ಕೈಗೆ ಸಿಗುವ
ಕೊಂಬೆಯಿಂದ ಕಿತ್ತಿದ್ದೆಂದೂ ಅನ್ನಿಸಿಬಿಟ್ಟು ತಿನ್ನಲು ಮನಸ್ಸಾಗಲಿಲ್ಲ. ಎಲ್ಲಾ ಕಾಯಿಗಳನ್ನೂ ಜೋಬಿನಿಂದ
ತೆಗೆದು ಬಿಸಾಕಿಬಿಟ್ಟ.
`ತಾಯಣ್ಣ,
ನಂಗೂ ಕಲ್ಲು ಹೊಡೆಯೋದು ಕಲಿಸಿಕೊಡ್ತೀಯ?
`ಓಹ್,
ಅದರಾಗೇನೈತೆ ಕಷ್ಟ. ಇಕೋ ಹಿಂಗೆ
ತಾಯಣ್ಣ ಕಲ್ಲೊಂದನ್ನು ತೂರಿದ. ಪುಟ್ಟನೂ ಅದೇ ರೀತಿ ಹತ್ತಾರು ಕಲ್ಲುಗಳನ್ನು
ತೂರಿದ. ಅದರಲ್ಲೊಂದು ಕಲ್ಲು ಅವನು ಗುರಿಯಿಟ್ಟಿದ್ದ ಹುಣಸೆಕಾಯಿಗಿಂತಲೂ ಸ್ವಲ್ಪ
ದೂರದಲ್ಲಿದ್ದ ಮತ್ತೊಂದು ಹುಣಸೇಕಾಯಿಗೆ ತಾಕಿ ಅದು ಬಿದ್ದು ಬಿಟ್ಟಿತು. ಪುಟ್ಟ ಕುಣಿದಾಡಿ
ಬಿಟ್ಟ. ನಾಳೆ ಇಲ್ಲಿಗೆ ಮತ್ತೊಮ್ಮೆ ಬರುವುದೆಂದೂ, ಆಗ ಇನ್ನಷ್ಟು ಕಲ್ಲುಗಳನ್ನು
ತೂರಿದರೆ ಪುಟ್ಟನಿಗೆ ಕಲ್ಲು ಹೊಡೆಯುವುದು ಖಂಡಿತಾ ಬರುತ್ತದೆಂದೂ ಇಬ್ಬರೂ
ನಿರ್ಧರಿಸಿದರು.
ಅವರಿಬ್ಬರೂ ಮತ್ತೆ ಸೈಕಲ್‌ಮೇಲೆ ಗುಡಿಯ ತನಕ ಹೋಗುವಾಗ ಸಾಕಷ್ಟು ಮಾತನಾಡಿದರು.
ಪುಟ್ಟ ತಮ್ಮ ಊರಿನಲ್ಲಿ ರಾಜ್‌ಕುಮಾರ್ ಸಿನಿಮಾ ಮೊದಲನೇ ದಿನವೇ ಬಿಡುಗಡೆಯಾಗುತ್ತದೆಂದೂ,
ತಮ್ಮ ಮನೆಯ ಹಿಂದೆ ನಿಂತರೆ ರೈಲು ಹೋಗುವುದು ಕಾಣಬಹುದೆಂದೂ ಹೇಳಿದ.
ತಾಯಣ್ಣ ಸಂಡೂರಿನ ಯಾವ ಯಾವ ಮಸೀದಿಗಳಲ್ಲಿ ಯಾವ ಯಾವ ಪೀರ್ಲು
ದೇವರು ಕೂಡುತ್ತಾರೆಂದೂ, ತಮ್ಮ ಮನೆಯ ದನವೊಂದನ್ನು ಹುಲಿಯೊಂದು ತಿಂದಿದ್ದನ್ನೂ
ಹೇಳಿದ.
ದೇವಸ್ಥಾನಕ್ಕೆ ಬಂದ ಮೇಲೆ ಒಂದು ಸಮಸ್ಯೆ ಉದ್ಭವಿಸಿತು. ಇಸ್ಮಾಯಿಲ್ ಅಂಗಡಿಯ
ಲಡಕಾಸಿ ಸೈಕಲ್‌ಗೆ ಬೀಗವಿರಲಿಲ್ಲ. ಸ್ಥಳ ನಿರ್ಜನವಾಗಿದ್ದರೂ, ಇವರು ಬೆಟ್ಟ ಹತ್ತಿ ದೇವರ
ದರ್ಶನ ಮಾಡಿ ಬರುವದರೊಳಗೆ ಯಾರಾದರೂ ಬಂದು ಸೈಕಲ್ ತೆಗೆದುಕೊಂಡು ಹೋದರೆ?
ಒಬ್ಬರನ್ನು ಸೈಕಲ್ ಕಾಯಲು ನಿಲ್ಲಿಸಿ ಮತ್ತೊಬ್ಬರು ದೇವರ ದರ್ಶನ ತೆಗೆದುಕೊಂಡು
ಬರುವುದರಲ್ಲಿ ಯಾವ ಖುಷಿಯೂ ಇಲ್ಲ. ಕಡೆಗೆ ಅವರಿಬ್ಬರೂ ಒಂದು ನಿರ್ಧಾರಕ್ಕೆ ಬಂದರು.
ಅಲ್ಲೇ ಬೇವಿನ ಗಿಡದ ಬುಡದಲ್ಲಿ ಅನಾಥನಾಗಿ ನಿಂತಿರುವ ಚಿಕ್ಕ ಹನುಮಪ್ಪನ ಗುಡಿಯ ಮುಂದೆ
ಸೈಕಲ್ ನಿಲ್ಲಿಸಿ, ಅದರ ಸೀಟಿನ ಮೇಲೆ ಇಬ್ಬರೂ ಬಲಗೈಯನ್ನಿಟ್ಟು `ಈ ಸೈಕಲ್
ಯಾರಾದರೂ ಮುಟ್ಟಿದರೆ ನರಸಿಂಹಸ್ವಾಮಿ ಮೇಲಾಣೆ. ಹನುಮಪ್ಪ ನೀನೇ ಸಾಕ್ಷಿ
ಎಂದು ಹೇಳಿ, ಯಾವುದೇ ಯೋಚನೆಯಿಲ್ಲದೆ ಬೆಟ್ಟ ಹತ್ತಲಾರಂಭಿಸಿದರು.
ದೇವಸ್ಥಾನ ತಣ್ಣಗಿತ್ತು. ಕುಳಿತಾಗ ಕಾಲು, ತೊಡೆಗಳಿಗೆ ತಣ್ಣನೆಯ ನೆಲ ತಾಕಿ `ಹಾಯ್'
ಎನ್ನುವಂತಾಯ್ತು. ಪುಟ್ಟ ಎರಡೂ ಅಂಗೈಗಳನ್ನು ನೆಲಕ್ಕೆ ಒತ್ತಿ ಹಿಡಿದು, ಅವನ್ನು ತಂಪು
ಮಾಡಿಕೊಂಡು ಆ ಅಂಗೈಗಳನ್ನು ಎರಡೂ ಗಲ್ಲಕ್ಕೆ ಇಟ್ಟುಕೊಂಡು, ಅವೂ ತಣ್ಣಗಾದಾಗ
ಕಣ್ಣು ಮುಚ್ಚಿ ಖುಷಿಯಿಂದ `ಅಬ್ಬಾ' ಎಂದ. ಗುಡಿಯಲ್ಲಿ ಮತ್ತೊಂದು ಸಂತೋಷ ಕೊಡುವ
ಸಂಗತಿಯಿತ್ತು. ಕಳೆದ ಸಲ ಪುಟ್ಟ ಅಲ್ಲಿಗೆ ಅವರ ಅಪ್ಪ-ಅಮ್ಮನ ಜೊತೆ ಬಂದಾಗ ಅವನ
ಕೈಗೆ ಗಂಟೆ ಎಟುಕುತ್ತಿರಲಿಲ್ಲ. ಅವರಪ್ಪ ಅವನನ್ನು ಮೇಲಕ್ಕೆತ್ತಿ ಗಂಟೆ ಬಾರಿಸಲು ಸಹಾಯ
ಮಾಡಿದ್ದರು. ಆದರೆ ಈಗ ಪುಟ್ಟ ಸ್ವಲ್ಪ ಎಗರಿದರೂ ಸಾಕು, ಗಂಟೆ `ಡಣ್' ಎನ್ನುತ್ತಿತ್ತು!
ಕುಣಿದು ಕುಣಿದು ಕಾಲಲ್ಲಿ ನೋವು ಬರುವವರೆಗೆ ಪುಟ್ಟ ಗಂಟೆ ಬಾರಿಸಿದ.
ಗರ್ಭಗುಡಿಯಲ್ಲಿ ಪೂಜಾರಪ್ಪನ ಬದಲಿಗೆ ಅವನ ಚಿಕ್ಕ ಮಗನಿದ್ದ, ಇವರದೇ
ವಯಸ್ಸಿನವ. ಬಂದವರು ಸಣ್ಣ ಹುಡುಗರೆಂದು ಮಂಗಳಾರತಿ ಮಾಡಲಿಲ್ಲ. ಆದರೆ ಪುಟ್ಟ
ಹಾಗೆಂದರೆ ಕೇಳುತ್ತಾನೆಯೆ? ಗಂಟೆ ಹೊಡೆಯಲು ಬರುವ ದೊಡ್ಡ ಮನುಷ್ಯ ಬಂದರೂ
ಮಂಗಳಾರತಿ ಮಾಡುವುದಿಲ್ಲವೆಂದರೆ ಯಾವ ನ್ಯಾಯ?
`ಮಂಗಳಾರತಿ ಮಾಡ್ರಿ ಸ್ವಲ್ಪ
ಜೋರಾಗಿಯೇ ಹೇಳಿದ.
`ಯಾರಾದ್ರೂ
ದೊಡ್ಡವರು ಬರ್ಲಿ, ಆವಾಗ ಮಾಡ್ತೀನಿ
ಪೂಜಾರಪ್ಪನ ಮಗನ ನಿರಾಕರಣೆ.
`ನಾವೂ
ದಕ್ಷಿಣೆ ಹಾಕ್ತೀವ್ರಿ, ಮಂಗಳಾರತಿ ಮಾಡ್ರಿ
ದಕ್ಷಿಣೆಯನ್ನು ಹಾಕುತ್ತಾನೆಂದ ಮೇಲೆ ಪುಟ್ಟ ದೊಡ್ಡ ವ್ಯಕ್ತಿಯೇ ಸರಿ. ಪೂಜಾರಪ್ಪನ
ಮಗ ಮಂಗಳಾರತಿ ಮಾಡಲು ಒಪ್ಪಿಕೊಂಡ. ಆದರೂ ಪುಟ್ಟ ದಕ್ಷಿಣೆ ಹಾಕುವುದರ ಬಗ್ಗೆ
ಅನುಮಾನವಿದ್ದರಿಂದ ಐದು ಬತ್ತಿಗಳನ್ನಿಡದೆ ಒಂದೇ ಬತ್ತಿಯಿಟ್ಟು ಗಂಟೆ ಬಾರಿಸುತ್ತಾ
ಮಂಗಳಾರತಿ ಮಾಡಿದ. ಪುಟ್ಟ ಜೇಬನ್ನು ಮುಟ್ಟಿ ನೋಡಿಕೊಂಡ. ನಾಲ್ಕಾಣೆ ಬಿಲ್ಲೆ ಇತ್ತು.
ದಕ್ಷಿಣೆ ಹಾಕಲು ನಾಲ್ಕಾಣೆ ತುಂಬಾ ಜಾಸ್ತಿಯೆನ್ನಿಸಿತು. ಆದರೆ ಹಾಗಂತ ಹಾಕದೇ ಇದ್ದರೆ ಪೂಜಾರಪ್ಪನ
ಮಗ ಜಗಳ ತೆಗೆಯುತ್ತಾನೆ. ಚಿಲ್ಲರೆ ಇದೆಯಾ ಎಂದು ಕೇಳಿದರೆ ಪೂಜಾರಪ್ಪನ ಮಗ
ಹಿಂದು ಮುಂದು ಯೋಚಿಸದೆ ಇಲ್ಲವೆಂದು ಬಿಟ್ಟ. ಪುಟ್ಟನಿಗೆ ಫಜೀತಿಗಿಟ್ಟುಕೊಂಡಿತು.
ಕಡೆಗೊಂದು ಉಪಾಯವನ್ನು ಯೋಚಿಸಿದ. ನಾಲ್ಕಾಣೆಯನ್ನು ಮಂಗಳಾರತಿಯ
ತಟ್ಟೆಯಲ್ಲಿ ಹಾಕಿ, ನಾಳೆಯೂ ತಾವಿಬ್ಬರು ಗುಡಿಗೆ ಬರುವುದಾಗಿಯೂ ಆಗ ಯಾವುದೇ
ದಕ್ಷಿಣೆಯಿಲ್ಲದಂತೆ ಮಂಗಳಾರತಿ ಮಾಡಬೇಕೆಂದು ಪೂಜಾರಪ್ಪನ ಮಗನನ್ನು ಒಪ್ಪಿಸಿದ.
ನರಸಿಂಹ ಸ್ವಾಮಿ ದೇವಾಲಯವು ಗುಡ್ಡಕ್ಕೆ ಅಂಟಿಕೊಂಡಿದೆ. ಆದ್ದರಿಂದ ದೇವಾಲಯಕ್ಕೆ ಪ್ರದಕ್ಷಿಣೆ
ಹಾಕುವುದೆಂದರೆ ಗುಡ್ಡವನ್ನು ಮತ್ತಷ್ಟು ಮೇಲಕ್ಕೆ ಹತ್ತಿ ಮತ್ತೆ ಕೆಳಕ್ಕಿಳಿಯ ಬೇಕು.
ಪುಟ್ಟ-ತಾಯಣ್ಣ ಇಬ್ಬರೂ ಪ್ರದಕ್ಷಿಣೆ ಹಾಕಲೆಂದು ಗುಡ್ಡವನ್ನು ಹತ್ತಿ ಬಂದಾಗ, ಕಣ್ಣಿಗೆ
ರಾಚುವಷ್ಟು ಎಲ್ಲೆಲ್ಲಿಯೂ ಹಸುರನ್ನು ಕಂಡು ಪುಟ್ಟ ಹಿಗ್ಗಿ ಹೋದ. ಗುಡ್ಡದ ಬುಡದಲ್ಲಿ
ಹರಿಯುತ್ತಿದ್ದ ಹಳ್ಳ ಕಾಣದಿದ್ದರೂ ಅದರ ಹರಿಯುವ ಝುಳು ಝುಳು ನಾದ
ಕೇಳುತ್ತಿತ್ತು. ಹತ್ತಾರು ಗುಡ್ಡಗಳು ಹಸಿರ ಹೊದಿಕೆಯನ್ನು ಹೊದ್ದು ನಿಂತಿದ್ದವು.
ಅವುಗಳ ಮೇಲೆ ಮೋಡಗಳ ನೆರಳು ಬಿದ್ದು ಅರ್ಧ ಭಾಗ ದಟ್ಟ ಹಸಿರಾಗಿಯೂ,
ಉಳಿದರ್ಧ ಭಾಗ ಫಳ ಫಳನೆ ಹೊಳೆಯುವ ತಿಳಿ ಹಸಿರ ಬಣ್ಣದಲ್ಲೂ ಕಾಣುತ್ತಿತ್ತು.
ತಾಯಣ್ಣ ದೂರದಲ್ಲಿದ್ದ ಗುಡ್ಡದ ಬುಡದಲ್ಲಿಯ ಹಸಿರನ್ನು ತೋರು ಬೆರಳಿನಿಂದ
ತೋರಿಸಿ ಅದು ಪುಟ್ಟನ ಅಜ್ಜನ ಹೊಲವೆಂದು ಹೇಳಿದ. ಅಲ್ಲಿ ಹತ್ತಾರು ಸುಣ್ಣದ
ಚುಕ್ಕೆಗಳಂತೆ ಕಾಣುತ್ತಿರುವುದು ಮನುಷ್ಯರೆಂದೂ, ಅದರಲ್ಲಿ ಒಂದು ಚುಕ್ಕೆ ತನ್ನ
ಅಮ್ಮನೆಂದೂ ಹೇಳಿದ . ಅವರೆಲ್ಲಾ ಹೊಲದಲ್ಲಿ ಕೆಲಸ ಮಾಡುತ್ತಿರುವುದಾಗಿಯೂ, ಅವರಿಗೆ
ತಾವಿಬ್ಬರೂ ಚುಕ್ಕೆಗಳಾಗಿ ಕಾಣುತ್ತೇವೆಂದು ಹೇಳಿದಾಗ ಪುಟ್ಟ `ಹೌದಾ?' ಎಂದು ಆಶ್ಚರ್ಯ
ಸೂಚಿಸಿದ.
ಅಷ್ಟೇನೂ ದೂರದಲ್ಲಿಲ್ಲದ ಕಾರಣ ಹನುಮಪ್ಪನ ಗುಡಿಯ ಮುಂದೆ ನಿಲ್ಲಿಸಿದ ಸೈಕಲ್ ಸ್ಪಷ್ಟವಾಗಿ
ಗೊಂಬೆಯಂತೆ ಕಾಣುತ್ತಿತ್ತು. ಆದರೆ ಅದರ ಮೇಲೆ ಚಿಕ್ಕದಾಗಿ ಬೂದಿ ಬಣ್ಣದ ವಸ್ತುವೇನೆಂದು
ತಿಳಿಯದೆ ಪುಟ್ಟ ಅದೇನೆಂದು ಕೇಳಿದಾಗ, ತಾಯಣ್ಣ ದೃಷ್ಟಿಸಿ ನೋಡಿ `ಅಯ್ ಮಂಗಣ್ಣ.
ನಾ ಹೇಳ್ಲಿಲ್ವಾ , ಹನುಮಪ್ಪ ಸೈಕಲ್ ಕಾಯ್ತಾನಂತ?
ಅಂತ ಕೂಗಿದಾಗ ಪುಟ್ಟನಿಗೂ ಹೌದೆನ್ನಿಸಿತು.
ಅವರೀಗ ಅರ್ಧ ಪ್ರದಕ್ಷಿಣೆಯನ್ನು ಮುಗಿಸಿ, ಗುಡಿಯ ಗೋಪುರದ ತುದಿಯಲ್ಲಿದ್ದರು.
ಅಲ್ಲಿ ಚಿಕ್ಕ ಚಿಕ್ಕ ಕಲ್ಲುಗಳಿಂದ ಸಣ್ಣ ಸಣ್ಣ ಮನೆಗಳನ್ನು ಭಕ್ತಾದಿಗಳು ಕಟ್ಟಿದ್ದರು.
ತಾಯಣ್ಣ ಆ ರೀತಿ ಕಲ್ಲುಗಳಿಂದ ಮನೆ ಕಟ್ಟಿದರೆ ದೇವರು ನಿಜಕ್ಕೂ ದೊಡ್ಡವರಾದ ಮೇಲೆ
ಮನೆಯೊಂದನ್ನು ಕೊಡುತ್ತಾನೆಂದು ಹೇಳಿ, ಪುಟ್ಟನಿಗೂ ಮನೆಯೊಂದನ್ನು ಕಟ್ಟಲು
ಹೇಳಿದ. ಪುಟ್ಟ ಮನೆ ಕಟ್ಟಲು ಪ್ರಾರಂಭಿಸಿದನಾದರೂ ದೊಡ್ಡವನಾದ ಮೇಲೆ ದೇವರು ಮನೆಯೊಂದನ್ನು
ಕೊಡುವದಕ್ಕಿಂತ ಬಸ್ಸೊಂದನ್ನು ಕೊಟ್ಟರೆ ಭೇಷಿರುತ್ತದೆಂದು ಕಲ್ಲುಗಳಿಂದ ಬಸ್ಸೊಂದನ್ನು
ಮಾಡಿದ. ತಾನು ದೊಡ್ಡವನಾದ ಮೇಲೆ ಆ ಬಸ್ಸಿನಲ್ಲಿ ಡ್ರೈವರ್ ಆಗಿ, ಸಿಗರೇಟು ಸೇದುತ್ತಾ
ಒಂದೇ ಕೈಯಲ್ಲಿ ಬಸ್ಸು ಬಿಡುತ್ತೀನೆಂದು ಕನಸು ಕಟ್ಟಿದ. ಆದರೆ ತಾಯಣ್ಣ ಮನೆಯೊಂದನ್ನು
ಕಟ್ಟಿದ್ದ. ಚಿಕ್ಕ ಚಿಕ್ಕ ಕಲ್ಲುಗಳಿಂದ ನಾಲ್ಕು ಗೋಡೆಗಳನ್ನು ಮಾಡಿದ್ದನಾದರೂ ಆ ನಾಲ್ಕೂ
ಗೋಡೆಗಳ ಮೇಲೆ ಅಳತೆ ಮೀರಿದ ಅಗಲವಾದ ದೊಡ್ಡ ಕಲ್ಲನ್ನು ಇಟ್ಟಿದ್ದ. ಪುಟ್ಟ ಅಷ್ಟು
ದೊಡ್ಡ ಕಲ್ಲನ್ನೇಕೆ ಇಟ್ಟಿದ್ದೀಯೆಂದು ಕೇಳಿದಾಗ, ಅವನು ಈಗಿರುವ ತನ್ನ ಮನೆಯು
ಮಳೆಗಾಲದಲ್ಲಿ ತುಂಬಾ ಸೋರುತ್ತದೆಂದೂ, ರಾತ್ರಿ ಮಲಗಿದಾಗ ಮಳೆ ಬಂದರೆ ಅವನಮ್ಮ
ಹೊಡೆದು ಎಬ್ಬಿಸಿ ಕೂಡಿಸುತ್ತಾಳೆಂದು, ಆದ್ದರಿಂದ ಮುಂದೆ ದೇವರು ಕೊಡುವ ಮನೆ
ಮಳೆ ಬಂದಾಗ ಸೋರದಂತಿರಲೆಂದು ಅಷ್ಟು ದೊಡ್ಡ ಕಲ್ಲನ್ನಿಟ್ಟಿರುವುದಾಗಿ ಹೇಳಿದ. ಹಾಗೆ
ನೋಡಿದರೆ ಪುಟ್ಟ ಕಟ್ಟಿದ ಬಸ್ಸಿಗೂ, ತಾಯಣ್ಣನ ಮನೆಗೂ ಅಂತಹ ವ್ಯತ್ಯಾಸ ಕಾಣುತ್ತಿರಲಿಲ್ಲ.
ಗುಡಿಯಿಂದಿಳಿದು ಬಂದ ಅವರಿಬ್ಬರೂ ಹಳ್ಳಕ್ಕೆ ಹೋದರು. ಕಪ್ಪು ಗುಡ್ಡವೊಂದನ್ನು ಬಿಸ್ಕಟ್
ಎಂಬಂತೆ `ಫಳ್' ಎಂದು ಮುರಿದು ಎರಡು ಭಾಗಗಳನ್ನು ಸರಿಸಿಟ್ಟು ಅದರ ಮಧ್ಯದಿಂದ
ಹಳ್ಳ ಹರಿದು ಬಂದಿತ್ತು. ಭೀಮ, ದ್ರೌಪದಿಯು ಬಾಯಾರಿಕೆ ಎಂದು ನೀರಿಗಾಗಿ ಕೇಳಿದಾಗ,
ತನ್ನ ಗದೆಯಿಂದ ಈ ಗುಡ್ಡವನ್ನು ಒಡೆದನೆಂದು ತಾಯಣ್ಣ ಹೇಳಿದ. ಗುಡ್ಡವನ್ನು ಆ
ರೀತಿಯಾಗಿ ಎರಡು ಹೋಳು ಮಾಡಿದಾಗ ಉದುರಿದ ಚೂರುಗಳಂತೆ ಹಳ್ಳದಲ್ಲಿ ಅಲ್ಲಲ್ಲಿ
ದೊಡ್ಡ ಕಲ್ಲು ಬಂಡೆಗಳಿದ್ದವು. ಅದೇ ತಾನೆ ಮುಗಿದ ಮಳೆಗಾಲದಲ್ಲಿ ಸಾಕಷ್ಟು
ಮಳೆಯಾದ್ದರಿಂದ ಹಳ್ಳದಲ್ಲಿ ನೀರಿತ್ತು. ನಿರ್ಜನವಾದ ಆ ಪ್ರದೇಶದಲ್ಲಿ ಹಳ್ಳದ ನೀರು
ಬಂಡೆಗಳಿಗೆ ಬಡಿದಾಗ ಉಂಟಾಗುವ ಸದ್ದು, ಹಕ್ಕಿಗಳ ಚಿಲಿಪಿಲಿ, ಆಗೊಮ್ಮೆ ಈಗೊಮ್ಮೆ `ಕೀಚ್
ಕೀಚ್' ಎನ್ನುವ ಕೋತಿಗಳ ಕೂಗು ಒಂದು ಭಯಾನಕ ವಾತಾವರಣವನ್ನು
ಮೂಡಿಸಿದ್ದವು.
ಪುಟ್ಟ
ಬಣ್ಣ ಬಣ್ಣದ ಕಲ್ಲುಗಳನ್ನು ಆಯ್ದುಕೊಂಡ. ಅವರಿಬ್ಬರೂ ಸೇರಿ ವರತೆಯನ್ನು ತೋಡಿ
ಅದರಲ್ಲಿ ತಿಳಿಗೊಂಡ ನೀರನ್ನು ಕುಡಿದು ಹಿರಿ ಹಿರಿ ಹಿಗ್ಗಿದರು. ಪುಳಕ್ಕನೆ ಕಂಡಂತಾಗಿ ಮಾಯವಾಗಿ
ಬಿಡುವ ಮೀನುಗಳನ್ನು ಹಿಡಿಯಲು ನೀರಿನಲ್ಲಿ ಓಡಾಡಿದರು. ಚಪ್ಪಟೆ ಕಲ್ಲನ್ನು ನೀರಿನ ಮೇಲ್ಮೈಯನ್ನು
ಸವರಿ ಹೋಗುವಂತೆ ಒಗೆದು ಅದು ನೀರಿನ ಮೇಲೆ ಎಗರಿ ಎಗರಿ ಹೋಗುವುದನ್ನು
ಕಂಡು ಆನಂದಿಸಿದರು. ಗುಡ್ಡಕ್ಕೆ ಜೋತು ಬಿದ್ದಿರುವ ಜೇನುಗೂಡುಗಳನ್ನು
ತಲೆಯೆತ್ತಿ ಬಿಟ್ಟ ಕಣ್ಣಿಂದ ನೋಡಿದರು.
ಗುಡ್ಡದ ಒಂದು ಹೋಳಲ್ಲಿ ಗುಹೆಯಿತ್ತು. ಅವರಿಬ್ಬರೂ ಅದರ ದ್ವಾರದ ಮುಂದೆ ನಿಂತಾಗ
ಬರೀ ಕತ್ತಲೆ ಕಂಡು, ಒಳಗೇನಿದೆಯೆಂಬುದೂ ಕಾಣದಾದಾಗ ಪುಟ್ಟನಿಗೆ ಹೆದರಿಕೆಯಾಯ್ತು.
ಆದರೆ ಅಂತಹ ಯಾವುದೇ ಹೆದರಿಕೆಯಲ್ಲದ ತಾಯಣ್ಣ `ಯವ್ವಾ...' ಎಂದು ಬಾಯಿಗೆ
ಎರಡೂ ಕೈಯನ್ನಿಟ್ಟು ಕೂಗಿದ. ಗುಹೆಯೂ `ಯವ್ವಾ...' ಎಂದು ಮಾರುತ್ತರ
ಕೊಟ್ಟಿತು. ಪುಟ್ಟನಿಗೆ ಸ್ವಲ್ಪ ಧೈರ್ಯ ಮೂಡಿ `ಅಜ್ಜಿ...' ಅಂದ. ಯಾವುದೇ ಬೇಧ ಭಾವವಿಲ್ಲದೆ
ಗುಹೆ `ಅಜ್ಜಿ....' ಎಂದಿತು. `ಕೂರ್ಮ...' ಎಂದ ಪುಟ್ಟ. `ಕೂರ್ಮ...' ಎಂದಿತು ಗುಹೆ.
`ಕೋತಿ...' ಎಂದ. `ಕೋತಿ...' ಅಂತು. ಪುಟ್ಟನಿಗೆ ಇನ್ನೂ ಏನೇನೋ ಕೂಗಬೇಕೆನ್ನಿಸಿತು.
ಆದರೆ ತಾಯಣ್ಣ ಪಿಸುದನಿಯಲ್ಲಿ ಆ ರೀತಿ ಹೆಚ್ಚು ಕೂಗಬೇಡವೆಂದೂ, ಆ ಗುಹೆಯಲ್ಲಿ ಹುಲಿಯೊಂದು
ನಿದ್ದೆ ಮಾಡುತ್ತಿದೆಯೆಂದೂ, ನಾವು ತುಂಬಾ ಕೂಗಾಡಿದರೆ ಅದು ನಿದ್ದೆಯಿಂದೆದ್ದು ಹೊರಬಂದು
ತಮ್ಮಿಬ್ಬರನ್ನೂ ತಿಂದು ಬಿಡುತ್ತದೆಂದು ಹೇಳಿದ. ಪುಟ್ಟನಿಗೆ ಮತ್ತೆ ಹೆದರಿಕೆಯಾಯ್ತು.
ನಿನ್ನ ಹತ್ತಿರ ಕ್ಯಾಟರ್‌ಬಿಲ್ಲದಲ್ಲ, ಅದರಿಂದ ಹೊಡದ್ರೆ ಹುಲಿ ಓಡಿ ಹೋಗಲ್ವಾ? ಎಂದು ಕೇಳಿದ.
ತಾಯಣ್ಣನಿಗೆ ಏನೆಂದು ಉತ್ತರ ಹೇಳಬೇಕೆಂದು ತಿಳಿಯಲಿಲ್ಲ. `ಇಲ್ಲ' ಎಂದು ಬಿಟ್ಟರೆ ತನ್ನ
ಕ್ಯಾಟರ್‌ಬಿಲ್‌ಗೆ ಪುಟ್ಟನ ಕಣ್ಣಲ್ಲಿ ಮಹತ್ವವೇ ಹೋಗಿ ಬಿಟ್ಟು ತಾನೂ ನಗಣ್ಯನಾಗಿ ಬಿಡುತ್ತೇನೆ.
`ಹೌದು' ಎನ್ನಲೂ ಸಂಕೋಚ. ತಮ್ಮ ಮನೆಯ ದನವನ್ನೇ ಕೊಂದು ತಿಂದ ಹುಲಿಗೆ
ಕ್ಯಾಟರ್‌ಬಿಲ್ಲಿಂದ ಹೊಡೆಯೋದೆಂದರೇನರ್ಥ? ಕಡೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ `ಹೂಂ,
ಹೆದರ್ಕೊಳ್ತೈತೆ. ಆದ್ರೆ ಅದು ನರಸಿಂಹ ಸ್ವಾಮಿ ದೇವರ ಹುಲಿ. ಅದಕ್ಕೆ ಹೊಡದ್ರೆ
ದೇವರಿಗೆ ಸಿಟ್ಟು ಬರ್ತೈತೆ ಎಂದು ಹೇಳಿ
ಪುಟ್ಟನನ್ನು ಸುಮ್ಮನಾಗಿಸಿದ.
ಅವರಿಬ್ಬರೂ ಮನೆಗೆ ಹಿಂದಿರುಗುವುದು ಎಂದು ನಿರ್ಧರಿಸಿ ಹನುಮಪ್ಪನ ಗುಡಿಯ ಮುಂದೆ
ಬಂದಾಗ ಅವರಿಬ್ಬರಿಗೂ ತಾವು ನರಸಿಂಹಸ್ವಾಮಿಗೆ ಬಂದ ಉದ್ದೇಶವೇ ಮರೆತು ಹೋಗಿತ್ತು.
ಕ್ಯಾಟರ್‌ಬಿಲ್ಲಿನ ಕವಲು ಕಟಗಿಯ ಮಾತನ್ನು ಅವರಲ್ಲಿ ಯಾರೂ ಎತ್ತಲಿಲ್ಲ. ಮನೆಗೆ ಹೋದ
ಮೇಲೆ ಯಾರಾದರೂ ಅದನ್ನು ತಿಳಿಸಿದ್ದರೂ ಅದಕ್ಕವರಿಬ್ಬರೂ ತಲೆ
ಕೆಡಿಸಿಕೊಳ್ಳುತ್ತಿರಲಿಲ್ಲ.
ಹನುಮಪ್ಪ ಅಷ್ಟು ಹೊತ್ತು ಸೈಕಲ್ಲನ್ನು ಯಾರೂ ತೆಗೆದುಕೊಂಡು ಹೋಗದಂತೆ ಕಾಪಾಡಿದ್ದರಿಂದ
ನಾಲ್ಕು ಹುಣಸೇ ಕಾಯಿ, ಎರಡು ಸೀತಾಫಲ ಹಾಗೂ ಒಂದು ಬೆಳವಲ ಕಾಯಿಯನ್ನು ಅವನ ಮುಂದಿಟ್ಟು
`ತಿನ್ನು' ಎಂದು ಹೇಳಿದರು. ಸೈಕಲ್ ತೆಗೆದುಕೊಂಡು ಮನೆಗೆ ಹೊರಡಲು
ಆಣಿಯಾದರು.
ಭೈರಪ್ಪನ
ಗುಡಿಯ ಹತ್ತಿರ ಬಂದಾಗ, ಅಲ್ಲಿದ್ದ ಬಯಲನ್ನು ನೋಡಿ, ಪುಟ್ಟ ಕೇಳಲೋ ಬೇಡವೋ
ಎಂಬ ಸಂಕೋಚದಿಂದ `ತಾಯಣ್ಣ, ನಂಗೂ ಸೈಕಲ್ ಕಲಿಸಿಕೊಡ್ತೀಯಾ?
ಎಂದು ಮೆತ್ತಗೆ ಕೇಳಿದ. ತಾನು ಸೈಕಲ್ ಕಲಿಯಲು ಅರ್ಹನೋ, ಅಲ್ಲವೋ ಎಂಬ ಅನುಮಾನವಿತ್ತು.
ಆದರೆ ತಾಯಣ್ಣ ಅಂತಹ ಯಾವುದೇ ಅನುಮಾನವಿಲ್ಲದೆ `ಓಹ್, ಹತ್ತು' ಎಂದು ಪುಟ್ಟನನ್ನು
ಸೈಕಲ್ ಮೇಲೆ ಕೂಡಿಸಿಬಿಟ್ಟ. ಪುಟ್ಟನಿಗೆ ಸೈಕಲ್ ತನಗಿಂತಲೂ ತುಂಬಾ ದೊಡ್ಡದಿದೆಯೆನ್ನಿಸಿಬಿಟ್ಟಿತು.
ತಾಯಣ್ಣನನ್ನು ಸೈಕಲ್ ಕಲಿಸಿಕೊಡೆಂದು ಕೇಳಲೇಬಾರದಿತ್ತು ಎಂದುಕೊಂಡ. ಅವನು
ಬಹುಶಃ `ನಾಳೆ ಕಲಿಸಿಕೊಡ್ತೀನಿ', `ಆಮೇಲಕ್ಕೆ ಕಲಿಸಿ ಕೊಡ್ತೀನಿ' ಅಂತ ಹೇಳುತ್ತಾನೆನ್ನುವ
ಧೈರ್ಯದ ಮೇಲೆ ಆ ರೀತಿ ಕೇಳಿದ್ದ. ಆದರೆ ಹಾಗಂತ ಕೇಳಿದ ತಕ್ಷಣ `ಸೈಕಲ್ ಹತ್ತು'
ಎಂದು ಹೇಳುತ್ತಾನೆಂದು ಮೊದಲೇ ತಿಳಿದಿದ್ದರೆ ಅಂತಹ ಪ್ರಶ್ನೆಯನ್ನು ಕೇಳುವ ತಪ್ಪು
ಮಾಡುತ್ತಿರಲಿಲ್ಲ.
ಹತ್ತಿ
ಕುಳಿತ ಪುಟ್ಟನಿಗೆ ತಾನು ಸೈಕಲ್ ಹಿಡಿದುಕೊಂಡಿದ್ದೇನೆಂಬುದಕ್ಕಿಂತಲೂ ಅದೇ ತನ್ನನ್ನು ಹಿಡಿದುಕೊಂಡಿದೆ
ಎನ್ನಿಸಿತು. ಈ ಕಡೆ ವಾಲಿದಂತೆ, ಇಲ್ಲ ಆ ಕಡೆ ವಾಲಿದಂತಾದಾಗ ಬಿಗುಮಾನ, ಸಂಕೋಚಗಳನ್ನು
ದೂರ ತಳ್ಳಿ `ತಾಯಣ್ಣ, ಗಟ್ಟಿ ಹಿಡ್ಕೋ, ಬೀಳ್ತೀನಿ' ಅಂತ ಕೂಗಿಕೊಂಡ. ಹಿಂದೆ ಸೈಕಲನ್ನು
ಗಟ್ಟಿಯಾಗಿಯೇ ಹಿಡಿದುಕೊಂಡಿದ್ದ ತಾಯಣ್ಣ `ಏನೂ ಆಗಂಗಿಲ್ಲ, ನೀ ಪೆಡ್ಲು ತುಳಿ' ಅಂದ.
ಹಾಳಾದ್ದು ತಾಯಣ್ಣನ ಮುಖವೂ ಕಾಣುವುದಿಲ್ಲ, ಧ್ವನಿಯಷ್ಟೇ ಕೇಳಿಸುತ್ತಿದೆ. ಹಿಂತಿರುಗಿ
ನೋಡುವಂತೆಯೂ ಇಲ್ಲ. ಅವನು ಸೈಕಲ್ ಹಿಡಿದುಕೊಂಡಿದ್ದಾನೆಂದು ಯಾವ ಗ್ಯಾರಂಟಿ?
ಆದರೆ ಒಂದಷ್ಟು ದೂರ ಹೋಗುವುದರಲ್ಲಿ ಪುಟ್ಟನಿಗೆ ಸೈಕಲ್ ತನ್ನ ಮಾತನ್ನು ಸ್ವಲ್ಪ
ಸ್ವಲ್ಪ ಕೇಳುತ್ತಿದೆಯೆನ್ನಿಸಿತು. ಅದೇ ಸಮಯಕ್ಕೆ ತಾಯಣ್ಣ ಸೈಕಲ್ಲನ್ನು ಬಿಟ್ಟು ಬಿಟ್ಟ.
ಪುಟ್ಟನಿಗೆ ಭಾರವಾಗಿದ್ದ ಸೈಕಲ್ ತುಂಬಾ ಹಗುರವಾದಂತಾಗಿ ಎದೆ ಢಬ ಢಬ
ಹೊಡೆದುಕೊಳ್ಳಲಾರಂಭಿಸಿತು. `ತಾಯಣ್ಣ' ಎಂದು ಜೋರಾಗಿ ಕೂಗಿದ. `ನೀನು ಹಂಗೇ ಪೆಡಲ್
ತುಳಿ' ಎಂದು ತಾಯಣ್ಣನ ಧ್ವನಿ ಕೇಳಿತಾದರೂ ಅದು ದೂರದಿಂದ ಬಂದಂತಿತ್ತು. ಪುಟ್ಟನಿಗೆ
ಸೈಕಲ್ ತನ್ನನ್ನು ಎಲ್ಲಿಗೆ ಎಳೆದುಕೊಂಡು ಹೋಗಿಬಿಡುತ್ತದೋ ಎಂದು
ಭಯವಾಗಲಾರಂಭಿಸಿತು. ಅದನ್ನು ನಿಲ್ಲಿಸಲೂ ತನಗೆ ಗೊತ್ತಿಲ್ಲ. ತನಗಿಷ್ಟು ಭಯವಾಗುತ್ತಿದ್ದರೂ
ಯಾವುದೇ ಮುಲಾಜಿಲ್ಲದಂತೆ ಸೈಕಲ್ ತನಗೆ ತೋಚಿದ ಕಡೆ ವೇಗವಾಗಿ
ಹೋಗಲಾರಂಭಿಸಿತು. ಈಗ `ತಾಯಣ್ಣ' ಎಂದು ಕೂಗಿದರೂ ಉತ್ತರವಿಲ್ಲ. ಪುಟ್ಟನಿಗೆ ತಾನು
ಖಂಡಿತಾ ಸತ್ತು ಹೋಗುತ್ತೇನೆ ಅನ್ನಿಸಿಬಿಟ್ಟಿತು. `ನರಸಿಂಹ ಸ್ವಾಮಿ, ನರಸಿಂಹ ಸ್ವಾಮಿ'
ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡ. ಸೈಕಲ್ ಬಯಲಿನಲ್ಲಿ ಉಳಿಯದೆ ಹತ್ತಿರದಲ್ಲಿದ್ದ
ಹೊಲದ ದಿಕ್ಕಿಗೆ ಓಡಲಾರಂಭಿಸಿತು. ಪುಟ್ಟ `ಅಯ್ಯೋ...' ಎಂದು ಕಿರುಚಿದ. ಸೈಕಲ್ಲು ಅವನನ್ನು
ಬೀಳಿಸಿಬಿಟ್ಟಿತು. ಮೊಣಕೈ ಹಾಗೂ ಮೊಣಕಾಲು ತೆರೆದು ರಕ್ತ ಒಸರಲಾರಂಭಿಸಿತು.
ದೂರದಲ್ಲಿ ತಾಯಣ್ಣ ಓಡಿ ಬರುತ್ತಿದ್ದ. ಅಂದರೆ ಅಷ್ಟು ದೂರದಿಂದ ತಾನೊಬ್ಬನೇ ಸೈಕಲ್
ತುಳಿದುಕೊಂಡು ಬಂದೆನೆ? ಆ ನೋವಿನಲ್ಲೂ ಪುಟ್ಟನಿಗೆ ಮೈ ಜುಂ ಅಂತು. ತಾಯಣ್ಣ ಹತ್ತಿರ
ಬಂದವನೇ ಅವನ ರಕ್ತ ಒಸರುತ್ತಿದ್ದ ಭಾಗಗಳಿಗೆ ಹುಡಿ ಮಣ್ಣು ತಿಕ್ಕಿ ನಾಳೆಗೆಲ್ಲಾ
ವಾಸಿಯಾಗುತ್ತದೆಂದು ಧೈರ್ಯ ಕೊಟ್ಟ. `ಭಾಳ ನೋಯ್ತೈತಾ?' ಎಂದು ಕೇಳಿದ.
`ಲಬೋ ಲಬೋ' ಎಂದು ಹೊಡೆದುಕೊಳ್ಳುವಷ್ಟು ನೋಯುತ್ತಿತ್ತು. ಪುಟ್ಟ `ಇಲ್ಲ,
ಒಂಚೂರೂ ನೋಯ್ತಾ ಇಲ್ಲ' ಅಂತ ಹೇಳಿ ಬಿಟ್ಟ! ನಾಳೇನೂ ಸೈಕಲ್ ಹೊಡೆದರೆ ಪುಟ್ಟನಿಗೆ
ಖಂಡಿತಾ ಸವಾರಿ ಬರುತ್ತದೆಂದು ತಾಯಣ್ಣ ಹೇಳಿದಾಗ ಪುಟ್ಟನಿಗೆ ನಿಜಕ್ಕೂ ನೋವು ಮರೆತುಹೋಗಿತ್ತು.
ಮನೆಗೆ
ಹೋಗುವಾಗ ಸೈಕಲ್ ತಳ್ಳಿಕೊಂಡೇ ಹೋದರು. ಪುಟ್ಟನೇ ಸೈಕಲ್ ಹಿಡಿದುಕೊಂಡು ಹೊಸ
ಮನುಷ್ಯನಂತೆ ಸಂಭ್ರಮ ಪಡುತ್ತಿದ್ದ. ತನಗೆ ಸೈಕಲ್ ಕಲಿಯಲು ಸಹಾಯ ಮಾಡಿದ
ತಾಯಣ್ಣನ ಮೇಲೆ ಸ್ನೇಹ ಭಾವ ಮೂಡಿತ್ತು. ಅಂತಹವನಿಗೆ ತಾನು ಆರನೇ ಕ್ಲಾಸ್
ಎಂದು ಸುಳ್ಳು ಹೇಳಿದ್ದು ತುಂಬಾ ದೊಡ್ಡ ಅಪರಾಧವೆನ್ನಿಸಲಾರಂಭಿಸಿತು. ಅವನಿಗೆ ತಾನು
ಮೋಸ ಮಾಡುತ್ತಿರುವಂತೆ ಭಾಸವಾಯ್ತು. `ಒಂದು ಮಾತು ಹೇಳ್ತೀನಿ...' ಎಂದು
ಪ್ರಾರಂಭಿಸಿ, ತಾನು ಎಂಟನೇ ಕ್ಲಾಸೆಂದೂ, ತಾಯಣ್ಣ ತಿಳಿದುಕೊಂಡಂತೆ ಆರನೇ ಕ್ಲಾಸ್
ಅಲ್ಲವೆಂದೂ, ತನಗಿನ್ನೂ ಸೈಕಲ್ ತುಳಿಯಲು ಬರುವುದಿಲ್ಲವೆಂದರೆ ನೀನು ನಗುತ್ತೀಯೆಂದು
ಹೆದರಿ ಆ ರೀತಿ ಸುಳ್ಳು ಹೇಳಿದ್ದೆಂದು ಹೇಳಿಬಿಟ್ಟ. ಆದರೆ ತಾಯಣ್ಣನಿಗೆ ಪುಟ್ಟ ಯಾವ
ಕ್ಲಾಸ್ ಎಂದು ಹೇಳಿದ್ದು ನೆನಪೇ ಇರಲಿಲ್ಲವಾದ್ದರಿಂದ ಪಿಳಿ ಪಿಳಿ ಕಣ್ಣು ಬಿಟ್ಟ. ಅವನ ಮೌನವನ್ನು
ನೋಡಿ ಪುಟ್ಟನಿಗೆ ಅವನು ತನ್ನ ಮಾತನ್ನು ನಂಬುತ್ತಿಲ್ಲವೆಂದು ಅನುಮಾಯವಾಯ್ತು.
`ಬೇಕಾದ್ರೆ ಕನ್ನಡ ಪುಸ್ತಕದ ನಾಲ್ಕನೇ ಪದ್ಯ ಹೇಳ್ತೀನಿ ನೋಡು...' ಎಂದು ಹೇಳಿ
ಕುಮಾರವ್ಯಾಸನ ಆಭಿಮನ್ಯುವಿನ ಪರಾಕ್ರಮ ಪದ್ಯವಾದ `ಬವರವಾದರೆ ಹರನ
ವದನಕೆ ಬೆವರ ....' ಎಂದು ಪಟಪಟನೆ ಹೇಳಿಬಿಟ್ಟ. ತಾಯಣ್ಣ ದಂಗು ಬಡಿದು ಹೋದ.
ಹಳೆಗನ್ನಡ ಪದ್ಯಗಳನ್ನು ಕನ್ನಡ ಮಾಸ್ತರರು ಮಾತ್ರ ಕಂಠ ಪಾಟ ಮಾಡಬೇಕೆಂದು
ಭಾವಿಸಿದ್ದ ತಾಯಣ್ಣನಿಗೆ ಪುಟ್ಟ ಈ ರೀತಿ ಪಟಪಟನೆ ಹೇಳಿದ್ದು ಅವನ ಬಗ್ಗೆ ತುಂಬಾ ಹೆಮ್ಮೆಯನ್ನು
ಉಂಟು ಮಾಡಿತು. ಪುಟ್ಟ ಸುಳ್ಳು ಹೇಳಿದ್ದಕ್ಕೆ ತಾನೇನೂ ಬೇಜಾರು ಮಾಡಿಕೊಂಡಿಲ್ಲವೆಂದೂ,
ಅಷ್ಟಕ್ಕೂ ಅವನ ಸ್ಕೂಲಲ್ಲೂ ಎಷ್ಟೋ ಹುಡುಗರಿಗೆ ಸೈಕಲ್ ಬರುವುದಿಲ್ಲವೆಂದು ಹೇಳಿದ.
ಸೈಕಲ್ಲನ್ನು
ಇಸ್ಮಾಯಿಲ್ ಅಂಗಡಿಯಲ್ಲಿ ಕೊಟ್ಟು, ತಾಯಣ್ಣ ದರ್ಗಾದ ಬಳಿ ತಮ್ಮ ಮನೆಯ ದಾರಿ ಹಿಡಿದಾಗ
ಪುಟ್ಟ `ಹಂಗಾರೆ ನಾಳೇನೂ ನಂಗೆ ಸೈಕಲ್ ಕಲಿಸಿಕೊಡ್ತೀಯಾ?
ಎಂದು ಕೇಳಿದ.
`ಓಹ್
ಎಂದ ತಾಯಣ್ಣ ಸ್ವಲ್ಪ ತಡೆದು "ಆದ್ರೆ ನಾನು ಕೇಳಿದ್ದು ಕೊಡ್ತೀಯಾ?" ಎಂದ.
`ಏನು?
`ಮುಂಜಾನೆ
ಕೊಟ್ಯಲ್ಲ - ಉಂಡಿ, ಕೋಡುಬಳಿ. ಮತ್ತೊಂದೀಸು ಕೊಡ್ತೀಯಾ?
`ಓಹ್,
ಗ್ಯಾರಂಟಿ. ಸಾಯಂಕಾಲ ನಮ್ಮನಿಗೆ ಬಾ. ಅಜ್ಜಿ ರಾಯರ ಮಠಕ್ಕೆ ಹೋಗಿರ್ತಾಳೆ. ಯಾರೂ
ಮನ್ಯಾಗೆ ಇರಂಗಿಲ್ಲ ಎಂದು ಪುಟ್ಟ ಆಶ್ವಾಸನೆಯನ್ನು
ಕೊಟ್ಟ.
ಪುಟ್ಟನೊಬ್ಬನೇ
ಅಜ್ಜಿಯ ಮನೆಯ ಕಡೆ ಹೆಜ್ಜೆ ಹಾಕಲಾರಂಭಿಸಿದಾಗ ನಾಳೆ ಏನೆಲ್ಲಾ ಕೆಲಸವಿದೆ ಎಂದನ್ನಿಸಿತು.
ಕೂರ್ಮನಿಗೆ ಮಾತು ಕಲಿಸಬೇಕು, ಕಲ್ಲು ಹೊಡೆದು ಹುಣಸೇ ಕಾಯಿ ಬೀಳಿಸುವುದನ್ನು
ಕಲಿಯಬೇಕು, ಸೈಕಲ್ ಸವಾರಿ ನಾಳೆಗೆ ಬಂದೇ ಬಿಡ್ತದಂತೆ... ಒಂದೆ, ಎರಡೆ?
ಪುಟ್ಟ
ಮನೆಯಲ್ಲಿ ಕಾಲಿಡುತ್ತಿದ್ದಂತೆಯೇ ಅವರಮ್ಮ ನುಗ್ಗಿ ಬಂದು ಅವನನ್ನು ಗಟ್ಟಿಯಾಗಿ
ತಬ್ಬಿಕೊಂಡು `ಪುಟ್ಟಾ, ಪುಟ್ಟಾ... ಎಲ್ಲಿಗ್ಹೋಗಿದ್ದೋ...ಎಷ್ಟೊಂದು ಹೆದರಿಸಿ ಬಿಟ್ಯಲ್ಲೋ...
ಅತ್ತೆ, ಪುಟ್ಟಾ ಬಂದಾನೋಡ್ರಿ' ಎಂದು ಒಂದೇ ಸಮನೆ ಗದ್ಗದಿತ ಕಂಠದಲ್ಲಿ ಬಡಬಡಿಸುತ್ತಾ
ಪುಟ್ಟನ ಮುಖಕ್ಕೆಲ್ಲಾ ಮುತ್ತು ಕೊಡಲಾರಂಭಿಸಿದರು. ಪುಟ್ಟಗೆ ಬಳ್ಳಾರಿಯಲ್ಲಿದ್ದ
ಅಮ್ಮ ಇಲ್ಲಿಗೆ ಹೇಗೆ ಬಂದ್ಲು? ಅಂತ ಆಶ್ಚರ್ಯವಾಗಿತ್ತು. ಅಡಿಗೆ ಮನೆಯಿಂದ ಹೊರಬಂದ
ಅಜ್ಜಿ `ನಾನಾಗ್ಲೆ ಹೇಳಿದ್ರೆ ನೀನು ಕೇಳ್ಲಿಲ್ಲ. ಎಲ್ಲೋ ಆಡ್ಲಿಕ್ಕೆ ಹೊಗಿರ್ತಾನೆ, ಬಂದೇ ಬರ್ತಾನಂದ್ರೂ
ಅಷ್ಟೊಂದು ಗಾಬರಿ ಬೀಳ್ತಿ. ಸಂಡೂರೇನು ಬಳ್ಳಾರೀನಾ? ಹುಡುಗರು ಕಳೆದು ಹೋಗ್ತವೆ ಅನ್ಲಿಕ್ಕೆ?
ಇರೋದೇ ನಾಲ್ಕು ಓಣಿ
`ನಿಮಗೇನು ಗೊತ್ತಾಗುತ್ತೆ ಅತ್ತೆ, ಎಂಥಾ ದುಸ್ವಪ್ನ ಬಿದ್ದಿತ್ತು ಅಂತೀರ? ಅದೂ ಮಧ್ಯಾಹ್ನ
ಮಲಗಿಕೊಂಡಾಗ. ಮನೆ ಬಾವಿಯೊಳಗೆ ಪುಟ್ಟ ಬಿದ್ದು ಸ.... ಈಗ್ಲೂ ನೆನಸ್ಕೊಂಡರೆ ಮೈ
ಥರಥರ ನಡುಗ್ತದೆ. ಉಟ್ಟ ಸೀರಿ ಮೇಲೆ ಹೊರಟು ಬಂದೀನಿ. ಪುಟ್ಟಾನ ಮುಖ ನೋಡೋ
ತನಕ ನಂಗೆ ಜೀವದಾಗೆ ಜೀವ ಇರ್ಲಿಲ್ಲ. ಇರೋವ್ನು ನಂಗೆ ಒಬ್ಬ. ಅವನಿಗೆ ಏನಾದ್ರೂ ಆದ್ರೆ
ನಂಗೆ ಸಹಿಸ್ಲಿಕ್ಕೆ ಆಗಲ್ಲ ಅತ್ತೆ, ನಾನು ಜೀವ ಸಹಿತ ಉಳಿಯಂಗಿಲ್ಲ
ಮತ್ತೊಮ್ಮೆ ಪುಟ್ಟನನ್ನು ತಬ್ಬಿಕೊಂಡು `ಹೋ' ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ಈ
ಬಾರಿ ಅವನ ಗಾಯಕ್ಕೆ ತಾಕಿದ್ದರಿಂದ `ಹಾ...' ಎಂದ. ಅವನಮ್ಮ ಆ ಗಾಯಗಳನ್ನು ನೋಡಿದ್ದೇ
ಹೌಹಾರಿಬಿಟ್ಟರು. `ಎಲ್ಲಿ ಬಿದ್ದೋ, ರಕ್ತ ಬಂದದಲ್ಲೋ...ನೋವಾಗ್ತದೇನೋ ರಾಜ? ಎಂಥಾ
ಗಾಯ ಮಾಡ್ಕೊಂಡೀಯಲ್ಲೋ... ಎಂದು
ಹೇಳಿ ಆ ಗಾಯವನ್ನೆಲ್ಲಾ ನೀರಿನಿಂದ ತೊಳೆದು, ಟಿಂಚರ್ ಹಚ್ಚಿ ಬ್ಯಾಂಡೇಜ್ ಕಟ್ಟಿದರು. ಅವನ
ಕೈಯಿಂದಲೇ ದೇವರ ದೀಪವೊಂದನ್ನು ಹಚ್ಚಿಸಿ, ತಿರುಪತಿ ತಿಮ್ಮಪ್ಪನಿಗೆ ಮುಡುಪೊಂದನ್ನು
ಕಟ್ಟಿ ದೇವರಿಗೆ ಅಡ್ಡ ಬೀಳಿಸಿದರು.
ಸಾಯಂಕಾಲದೊಳಗೆ ಪುಟ್ಟನ ಬಟ್ಟೆಗಳೆಲ್ಲಾ ಪ್ಯಾಕ್ ಆದವು. ಅವನಮ್ಮ ಪುಟ್ಟನನ್ನು
ಕರೆದುಕೊಂಡು ಏಳು ಗಂಟೆಯ ಬಸ್ಸಿಗೆ ಹೊರಡುವುದೆಂದು ನಿರ್ಧರಿಸಿ ಬಿಟ್ಟಳು. ಪುಟ್ಟ
`ಅಜ್ಜಿ ನಾ ಹೋಗಂಗಿಲ್ಲ, ಇಲ್ಲೇ ಇರ್ತೀನಿ
ಅಂತ ಹಠ ಹಿಡಿದ. ಆದರೆ ಈ ಬಾರಿ ಅವನಮ್ಮ ಅವನ ಹಠಕ್ಕೆ ಸೊಪ್ಪು ಹಾಕಲಿಲ್ಲ. ಪುಟ್ಟನಿಲ್ಲದೆ
ಅವರ ಜೀವ ಅರೆಗಳಿಗೆಯೂ ನಿಲ್ಲುವುದಿಲ್ಲವೆಂದೂ, ಅವರಿದ್ದಲ್ಲಿಯೇ ಅವನಿರಬೇಕೆಂದು
ಹೇಳಿಬಿಟ್ಟರು. ಮುಂದಿನವಾರ ಬೇಕಾದರೆ ತಾವೇ ಅವನನ್ನು ಸಂಡೂರಿಗೆ ಕರೆದುಕೊಂಡು
ಬರುವುದಾಗಿ ಹೇಳಿದರು.
ಸಾಯಂಕಾಲ
ಬಸ್‌ನಿಲ್ದಾಣಕ್ಕೆ ಹೊರಡುವ ಮುಂಚೆ ಪುಟ್ಟನಿಗೆ `ಕೂರ್ಮ'ನನ್ನೊಮ್ಮೆ ನೋಡಬೇಕೆಂದು
ಆಸೆಯಾಯ್ತು. ಆದರೆ ಹಿಂದೆಯೇ ಅದರ ಮೇಲೂ ಸಿಟ್ಟು ಬಂದು ಸುಮ್ಮನಾಗಿ ಬಿಟ್ಟ.
ಇವರು ಮನೆಯಿಂದ ಹೊರಡುವ ವೇಳೆಗೆ ಸರಿಯಾಗಿ ತಲ ಬಾಗಿಲಿನಲ್ಲಿ ತಾಯಣ್ಣ
ಕಾಣಿಸಿಕೊಂಡ. ಉಂಡಿ, ಕೋಡುಬಳೆಗಳ ಆಸೆಯನ್ನು ಕಣ್ಣಲ್ಲಿ ತುಂಬಿಕೊಂಡು ಬಂದ
ತಾಯಣ್ಣ ಬ್ಯಾಂಡೇಜ್ ಕಟ್ಟಿಕೊಂಡು ಅವರಮ್ಮನ ಜೊತೆ ಹೊರಟು ನಿಂತ ಪುಟ್ಟನನ್ನು ನೋಡಿ
ಏನೂ ಮಾತನಾಡಲು ತೋಚದೆ ಸುಮ್ಮನೆ ನಿಂತು ಬಿಟ್ಟ. ಆದರೆ ಅವನು ಬಂದ ಉದ್ದೇಶ
ತಿಳಿದಿದ್ದ ಪುಟ್ಟ, ತಾನೇನೂ ಮಾಡಲು ಸಾಧ್ಯವಿಲ್ಲವೆಂಬ ಅಸಹಾಯಕತೆಯಿಂದ ತಾಯಣ್ಣನ್ನ
ಕಣ್ಣಲಿ ಕಣ್ಣಿಟ್ಟು ನೋಡಲೂ ಸಾಧ್ಯವಾಗದೆ ತಲೆ ತಗ್ಗಿಸಿಬಿಟ್ಟ. ಅವನಿಗೆ ಉಂಡಿ
ಕೋಡುಬಳೆಯನ್ನೂ ಕೊಡಲೂ ತನ್ನಿಂದ ಶಕ್ಯವಿಲ್ಲವೆಂದು ಪುಟ್ಟನಿಗೆ ಅಳು ಬಂದಂತಾಯ್ತು.
ಆದರೆ ತಾನು ಅಳುವುದಿಲ್ಲವೆಂದು ನಿರ್ಧರಿಸಿ ತುಟಿ ಬಿಗಿ ಹಿಡಿದ. ತಾಯಣ್ಣನನ್ನು ನೋಡಿದ ಪುಟ್ಟನ
ಅಮ್ಮ "ಹೇಳಿ ಕಳಿಸ್ದಂಗೆ ಬಂದಿ ನೋಡು. ಅಲ್ಲಿ ಜೋಳದ ಚೀಲ ಅದೆ. ಹೊತ್ತುಕೊಂಡು ಬಸ್‌ಸ್ಟಾಂಡ್‌ಗೆ
ಬಾ. ೧೫ ಕೆ.ಜಿ. ಅದೆ, ಭಾರ ಇಲ್ಲ" ಎಂದು ಅಪ್ಪಣೆ ಕೊಟ್ಟರು. ತಾಯಣ್ಣ ಮರು ಮಾತಾಡದೆ
ಜೋಳದ ಚೀಲವನ್ನು ತಲೆಯ ಮೇಲಿಟ್ಟುಕೊಂಡು ಬಸ್‌ನಿಲ್ದಾಣದ ಕಡೆ ಹೆಜ್ಜೆ ಹಾಕಿದ. ಪುಟ್ಟ
ತಾನೂ ಸೂಟ್‌ಕೇಸ್ ಹಿಡಿದುಕೊಂಡು ಬರುತ್ತೀನೆಂದಾಗ, ಅವರಮ್ಮ ಅದು ತುಂಬಾ ಭಾರವಾಗಿದೆಯೆಂದೂ,
ಬೇಕಿದ್ದರೆ ವಾಟರ್ ಬಾಟಲ್ ಹಿಡಿದುಕೊಂಡು ಬರಬೇಕೆಂದು ಹೇಳಿದರು. ಪುಟ್ಟ ಏನೂ ಬೇಡ
ಅಂದು ಬಿಟ್ಟ.
ಬಸ್ಸು
ಯಾವತ್ತಿನಂತೆ ಗಿಜಿಗುಟ್ಟುತ್ತಿತ್ತು. ಕಾಲಿಡಲೂ ಸಾಧ್ಯವಿರಲಿಲ್ಲ. `ಗಂಟು ಹೊತ್ತುಕೊಂಡು ಮುಂಚೇನೇ
ಬಂದ್ಯಲ್ಲೋ, ಒಂದು ಸೀಟ್ ಹಿಡೀಲಿಕ್ಕೆ ಆಗ್ಲಿಲ್ವಾ?
ಎಂದು ಪುಟ್ಟನ ಅಮ್ಮ ತಾಯಣ್ಣನನ್ನು ಹಂಗಿಸಿದರು. ಇದೇ ಕಡೆಯ ಬಸ್ಸಾದರಿಂದ ಬೇರೆ
ಬಸ್ಸಿಗೆ ಕಾಯುವಂತಿರಲೂ ಇಲ್ಲ. ಬಸ್ಸಿನಲ್ಲಿ ಕುಳಿತವರ ಮುಂದೆಲ್ಲಾ ತಮಗೆ ಸೀಟಿರದಿದ್ದರೂ
ಪರವಾಯಿಲ್ಲ, ತಮ್ಮ ಪುಟ್ಟನಿಗೆ ಸ್ವಲ್ಪ ಜಾಗ ಮಾಡಿಕೊಡಿ, ಮೈ ಕೈಯೆಲ್ಲಾ ಗಾಯ ಮಾಡ್ಕೊಂಡು
ಸುಸ್ತಾಗ್ಯಾನೆ, ಅವನ ಕೈಲೆ ಬಳ್ಳಾರಿ ತನಕ ನಿಂತ್ಗೊಂಡು ಬರ್ಲಿಕ್ಕೆ ಆಗಲ್ಲ, ಸಣ್ಣವನು
ಎಂದು ಹೃದಯ ಕರಗುವಂತೆ ಗೋಗರೆದರು. ಯಾರೋ ಇಬ್ಬರು ದಪ್ಪ ಹೆಂಗಸರು
ಆಚೆ ಈಚೆ ಜರುಗಿ ಅಂಗೈಗಲ ಜಾಗ ಮಾಡಿಕೊಟ್ಟರು. ಪುಟ್ಟ ಕೂಡಲ್ಲ, ನಿಂತೇ ಬರ್ತೀನಿ ಎಂದು
ನಿರಾಕರಿಸಿದ. ಫುಲ್ ಟಿಕೇಟ್ ತೆಗೆದುಕೊಂಡು ಪ್ರಯಾಣ ಮಾಡುವ ಗಂಡು
ಅಂಗೈಯಗಲದ ಜಾಗದಲ್ಲಿ, ಅದೂ ಇಬ್ಬರು ದಪ್ಪನೆಯ ಹೆಂಗಸರ ಮಧ್ಯೆ ಕುಂಡಿ ತುದಿಯಲ್ಲಿ
ಕೂಡುವುದೆಂದರೇನು? ಆದರೆ ಅವನಮ್ಮ `ಹಠ ಮಾಡಿ ಹೊಟ್ಟೆ ಉರಿಸ್ಬೇಡೋ, ರಾತ್ರಿ ನೀ
ಕಾಲು ನೋವಂತ ಅತ್ರೆ ನಾನೇನ್ ಮಾಡ್ಲಿ
ಎಂದು ಅವರೇ ಅವನ ಕೈ ಹಿಡಿದು ಸೀಟಿನ ಮೇಲೆ ಕೂಡಿಸಿಬಿಟ್ಟರು.
ಪುಟ್ಟನಿಗೆ
ಅವಮಾನವಾಗಿತ್ತು. ಆದರೂ ಅವನೇನೂ ಮಾಡುವಂತಿರಲಿಲ್ಲ. ಬಸ್ಸಿನ ಕಿಟಕಿಯಿಂದ ಹೊರನೋಡೋಣವೆಂದರೆ
ಅಲ್ಲಿ ತಾಯಣ್ಣ ನಿಂತಿದ್ದಾನೆಂಬ ಭಾವನೆಯಿಂದ ತಲೆ ತಗ್ಗಿಸಿದವನು ಮೇಲೆತ್ತಲಿಲ್ಲ. ಪುಟ್ಟನ
ಅಮ್ಮ ಕಿಟಕಿಯಲ್ಲಿ ತಲೆ ತೂರಿಸಿ ತಾಯಣ್ಣನಿಗೆ ದುಡ್ಡು ಕೊಡಲು ಹೋದರು. ತಾಯಣ್ಣ ಬೇಡವೆಂದು
ತಲೆಯಲ್ಲಾಡಿಸಿ ಓಡಿ ಹೋದ. "ಹೊಟ್ಟಿಗೆ ಕೂಳಿಲ್ಲದಿದ್ದರೂ ಧಿಮಾಕ್ ನೋಡು
ಎಂದು ಬೈದುಕೊಂಡರು.
ಬಸ್ಸು
ಬಳ್ಳಾರಿಯ ಕಡೆಗೆ ಸಾಗಿತು. ಸಂಡೂರಿನ ಹಚ್ಚ ಹಸುರು ಮರ-ಗಿಡ-ಬೆಟ್ಟಗಳು ಹಿಂದೆ ಹಿಂದೆ
ಸರಿದು, ಬಳ್ಳಾರಿಯ ಜಾಲಿಯ ಮುಳ್ಳಿನ ಗಿಡಗಳು ಹತ್ತಿರವಾಗಲಾರಂಭಿಸಿದವು. ಪುಟ್ಟನಿಗೆ
ನಾರಿಹಳ್ಳವನ್ನು ನೋಡಬೇಕೆನಿಸಲಿಲ್ಲ, ಗಂಡಿ ಹನುಮಪ್ಪಗೆ ಕೈ ಮುಗಿಯಬೇಕೆನಿಸಲಿಲ್ಲ,
ಕುಡುತಿನಿಯಲ್ಲಿ ಸೋಡಾವನ್ನು ಚೌಕಾಸಿ ಮಾಡಿ ಕೊಳ್ಳಬೇಕೆನಿಸಲಿಲ್ಲ. ಮನೆಗೆ ಬಂದವನೆ
ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ. ಅವರಮ್ಮ, ಪುಟ್ಟ ಗಾಯ ಮಾಡಿಕೊಂಡಿದ್ದನ್ನು
ಅಪ್ಪನ ಮುಂದೆ ಹೃದಯವೇ ಕರಗುವಂತೆ ವರ್ಣರಂಜಿತವಾಗಿ ವಿವರಿಸಿದರು.
ರಾತ್ರಿ ಪುಟ್ಟ ತನಗೆ ಊಟ ಬೇಡವೆಂದು ಹೇಳಿದ. ಅವರಮ್ಮ ರಾತ್ರಿಯ ಹೊತ್ತು ಹಸಿ ಹೊಟ್ಟೆಯಲ್ಲಿ
ಮಲಗಬಾರದೆಂದೂ, ಸ್ವಲ್ಪಾದರೂ ಬಾಯಿ ಎಂಜಲು ಮಾಡಬೇಕೆಂದು ಹೇಳಿ ಅವನನ್ನು
ತಟ್ಟೆಯ ಮುಂದೆ ಕೂರಿಸಿದರು. ಬರೀ ಸ್ವಲ್ಪ ಮೊಸರನ್ನ ಉಣ್ಣು ಸಾಕು, ಬೇರೆ ಏನೂ ಬೇಡ
ಎಂದು ಅವನ ತಲೆ ಸವರಿ ಸಮಾಧಾನ ಮಾಡಿದರು.
ಅನ್ನ ಹಾಕಿ ಮೊಸರನ್ನ ಹಾಕುವಾಗ ಅದರ ವಾಸನೆಯಿಂದಲೇ ಮೊಸರು
ಹುಳಿಗೊಡ್ಡಾಗಿದೆಯೆಂದು ಗೊತ್ತಾಯಿತು. ಬಳ್ಳಾರಿಯ ಬಿಸಿಲಿಗೆ ಮೊಸರು ಹುಳಿಯಾಗದೆ
ಸಿಹಿಯಿದ್ದೀತೆ?
"ಹಂಗೇ
ಉಣ್ಬೇಡ, ಮೊಸರು ಹುಳಿ ಅದೆ. ಹಾಲು ಹಾಕ್ತೀನಿ" ಎಂದು ಹೇಳಿ ಅಡುಗೆ ಮನೆಗೆ ಹೋದರು.
"ನಂಗೆ
ಹುಳಿ ಮೊಸರೇ ಇಷ್ಟ, ಹಾಲು ಹಾಕ್ಬೇಡ" ಪುಟ್ಟ ಕಿರುಚಿದ.
ಅವರಮ್ಮ ಅವನ ಮಾತಿಗೆ ಹೆಚ್ಚು ಗಮನ ಕೊಡಲಿಲ್ಲ. ಮಗ ಹುಳಿ ಮೊಸರನ್ನು
ತಿಂದರೆ ತಾಯಿ ಕರುಳು ಹೇಗೆ ತಾನೇ ಸಹಿಸೀತು? ಹಾಲನ್ನು ತಂದೇ ಬಿಟ್ಟರು. "ನಂಗೆ ಹಾಲು
ಬೇಡ" ಎಂದು ಪುಟ್ಟ ಕೈ ಅಡ್ಡ ಹಿಡಿದ. "ಯಾಕೋ ಹಾಲು ಬೇಡ ಅಂತಾನೆ, ಬಿಟ್ಟು ಬಿಡೆ"
ಎಂದು ಪುಟ್ಟನ ಅಪ್ಪನೂ ಅವನ ಪರ ವಹಿಸಿದರು. "ನೀವು ಸುಮ್ನಿರ್ರಿ. ಎಲ್ಲಾದಕ್ಕೂ ತಲೆ
ಹಾಕ್ಬೇಡಿ. ಹುಳಿ ಮೊಸರು ಉಂಡು ರಾತ್ರಿಯೆಲ್ಲಾ ಅವನು ಕೆಮ್ತಾ ಕೂತ್ರೆ ನೀವಾ ಇಲ್ಲಾ
ನಾನಾ ಒದ್ದಾಡೋದು?" ಎಂದು ಗಂಡನ ಬಾಯಿ ಮುಚ್ಚಿಸಿ ಪುಟ್ಟನ ಚಿಕ್ಕ ಕೈಯನ್ನು ಸಲೀಸಾಗಿ
ಸರಿಸಿ ಹಾಲು ಸುರಿದು ತಾವೇ ಮೊಸರನ್ನವನ್ನು ಕಲಿಸಿಟ್ಟು `ತಿನ್ನು' ಎಂದರು.
ಪುಟ್ಟನಿಗೆ
ಮೈಯೆಲ್ಲಾ ಉರಿದು ಹೋಯ್ತು. ತಟ್ಟೆಯಲ್ಲಿದ್ದ ಮೊಸರನ್ನವನ್ನು ತನ್ನ ಪುಟ್ಟ
ಕೈಯಲ್ಲಿ ತೆಗೆದುಕೊಂಡು ಅವರಮ್ಮನ ಮುಖಕ್ಕೆ ಬೀಸಿ ಒಗೆದ. ಅಮ್ಮ-ಅಪ್ಪ ಇಬ್ಬರೂ ದಿಗ್ಭ್ರಮೆಯಿಂದ
ಪುಟ್ಟನ ಈ ಹೊಸ ಅವತಾರವನ್ನು ನೋಡಿದರು. ಮೊಸರನ್ನ ಒಸೆದ ನಂತರ ಅವರಮ್ಮನ
ಮುಖವನ್ನು ನೋಡಿದ ಪುಟ್ಟನಿಗೆ ಖಂಡಿತಾ ತನ್ನನ್ನು ಹೊಡೆಯುತ್ತಾಳೆಂದು ಭಯಗೊಂಡು
ಥರಥರನೆ ನಡುಗಲಾರಂಭಿಸಿದ.
೨೧ನೇ ಮಾರ್ಚ್ ೧೯೯೮ |