Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಹೀಗಿದ್ದರು ನಮ್ಮ ತಂದೆ : ಕೆ. ವಿ. ಅಕ್ಷರ

  • ಬಿ.ಎನ್.ವಿದ್ಯಾರಣ್ಯ

ಬೆಂಗಳೂರಿನ ಸಂವಾದ ಟ್ರಸ್ಟ್‌ನ ರೂವಾರಿ ಜಿ. ಶ್ರೀನಿವಾಸ ವೈದ್ಯ ನಿವೃತ್ತ ಬ್ಯಾಂಕ್ ಅಧಿಕಾರಿಯಾದ ಇವರು ಸಾಹಿತಿ. ಇವರ ಅನೇಕ ನಾಟಕ, ಕಥೆ ಹಾಗೂ ಹಾಸ್ಯ ಲೇಖನಗಳು ಜನಪ್ರಿಯವಾಗಿವೆ.

 

ಸಂವಾದ ಟ್ರಸ್ಟ್ ಬೆಂಗಳೂರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಅವುಗಳ ಪೈಕಿ `ಹೀಗಿದ್ದರು ನಮ್ಮ ತಂದೆ' ಎಂಬ ಸರಣಿಯೂ ಒಂದು. ಈ ಕಾರ್‍ಯಕ್ರಮದಲ್ಲಿ ಕನ್ನಡ ಸಾರಸ್ವತ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಅವರ ಮಕ್ಕಳು ಸ್ಮರಿಸಿಕೊಳ್ಳುತ್ತಾರೆ. ಈ ಹಿಂದೆ ದ. ರಾ. ಬೇಂದ್ರೆ , ವಿ. ಕೃ. ಗೋಕಾಕ್, ಶ್ರೀರಂಗ, ಕುವೆಂಪು ಇಂತಹವರ ಬಗ್ಗೆ ಕಾರ್‍ಯಕ್ರಮಗಳು ಬಹಳ ಚೆನ್ನಾಗಿ ನಡೆದವು. ಖ್ಯಾತ ವ್ಯಕ್ತಿಯೊಬ್ಬರು ಒಬ್ಬ ಅಪ್ಪನಾಗಿ ಕುಟುಂಬದ ಸದಸ್ಯನಾಗಿ, ವೈಯಕ್ತಿಕ ಜೀವನದಲ್ಲಿ ಹೀಗಿದ್ದರು ಎಂಬುದನ್ನು ಅರಿಯಲು ಇಂತಹ ಕಾರ್‍ಯಕ್ರಮಗಳಿಗೆ ಜನರು ಕಿಕ್ಕಿರಿದು ತುಂಬಿರುತ್ತಾರೆ.

 

೩೦- ೭-೦೬ ರ ಭಾನುವಾರ ಬೆಂಗಳೂರಲ್ಲಿ ನಡೆದ ಈ ಸರಣಯ ಕಾರ್‍ಯಕ್ರಮ ಕೆ. ವಿ. ಸುಬ್ಬಣ್ಣನವರ ನೆನಪಿಗೆ ಮೀಸಲಾಗಿತ್ತು. ಕೆ. ವಿ. ಅಕ್ಷರ ತಮ್ಮ ತಂದೆಯ ಬಗ್ಗೆ ಮಾತನಾಡಿದರು.

 

ಅಕ್ಷರ ಅವರ ಮಾತುಗಳು ಬಹಳ ಆಸಕ್ತಿದಾಯಕ ಹಾಗೂ ವಿಷಯ ಮಂಡನೆಯಲ್ಲಿ ಹೊಸತನದ ಹೊಳಪನ್ನು ನೀಡಿದವು. ತಮ್ಮ ಬಗ್ಗೆ ಮತ್ತು ತಮ್ಮ ಆಪ್ತರ ಬಗ್ಗೆ ಮಾತನಾಡುವುದೇ ಕಷ್ಟ ಎಂದು ಅಕ್ಷರ ಮಾತುಗಳನ್ನು ಸುಲಲಿತವಾಗಿ ಆರಂಭಿಸಿದರು.

 

ಮೊದಲಿಗೆ ತನ್ನ ಅಪ್ಪನನ್ನು ಯಾವ ರೀತಿಯಲ್ಲಿ ನೋಡುತ್ತೇನೆ ಎಂದವರು ಎರಡು ಕಥೆಗಳ ಮೂಲಕ ಹೇಳಿದರು. ಮೊದಲನೆಯ ಕಥೆ ಶ್ರೀನಿವಾಸ ವೈದ್ಯರ ಶ್ರದ್ಧಾ. ಈ ಕಥೆಯಲ್ಲಿ ತನ್ನ ಊರಿನಿಂದ ದೂರದಲ್ಲಿ ಇರುವ ಯುವಕನೊಬ್ಬ ನೆನಪುಗಳ ಮೂಲಕ ಅಪ್ಪನ      ಸನಿಹದಲ್ಲಿರುತ್ತಾರೆ. ಕಥೆಯ ನಿರೂಪಕ ಆ ಕಥೆಯ ನಾಯಕನೂ ಆಗಿರುತ್ತಾನೆ. ಆತನ ಕಥೆಯಲ್ಲಿನ ತನ್ನ ಅಪ್ಪನನ್ನು ನೋಡುವುದು ಮೊದಲಿಗೆ ತನ್ನ ತಾಯಿಯ ಮುಖಾಂತರ. ನಂತರ ಕಥೆ ಬೆಳೆಯುತ್ತದೆ. ತನ್ನ ಮತ್ತು ಅಪ್ಪನ ಸಂಬಂಧದ ನೆನಪುಗಳು ಅವನನ್ನು ಉತ್ಕಟವಾಗಿ ಕಾಡುತ್ತವೆ. ಒಂದು ರೀತಿಯಲ್ಲಿ emotions recalled in tranquility (ವರ್ಡ್ಸ್‌ವರ್ತ್) ಎಂಬ ಆಂಗ್ಲ ಕವಿಯೊಬ್ಬ ಹೇಳಿದ ಹಾಗೆ. ಕನ್ನಡದ ಬಹುತೇಕ ಎಲ್ಲಾ ಕೃತಿಗಳಲ್ಲಿ ಅಪ್ಪನನ್ನು ನೋಡುವುದು ಹೀಗೇ. ಅಂದರೆ ಅಪ್ಪ ದೈಹಿಕವಾಗಿ ದೂರವಾಗಿದ್ದು ಮಾನಸಿಕವಾಗಿ ಹತ್ತಿರವಾಗಿರುತ್ತಾರೆ. ಮಗ ವರ್ತಮಾನದಲ್ಲಿದ್ದರೆ ಅಪ್ಪ ಭೂತಕಾಲದಲ್ಲಿರುತ್ತಾರೆ. ಇದು ಅಪ್ಪನನ್ನು ಕಾಣುವ ಒಂದು ಮಾದರಿ.

 

ಎರಡನೇ ಕಥೆ ಸ್ವಲ್ಪ ವಿಚಿತ್ರವಾದದ್ದು. ಇದೊಂದು ಬಂಗಾಳಿ ಕಥೆ. ಕಥೆಯಲ್ಲಿ ಓರ್ವ ಶ್ರೀಮಂತ ವ್ಯಾಪಾರಿ ಇರುತ್ತಾನೆ. ಆತ ಬಹಳ ಚೆನ್ನಾಗಿ ವ್ಯಾಪಾರ ಮಾಡಿ ಹಣ ಸಂಪಾದಿಸುತ್ತಾನೆ. ಅವನ ಮಗ ಸ್ವಲ್ಪ ಉಡಾಳ. ಅಪ್ಪ ಸಂಪಾದಿಸಿದ ಹಣವನ್ನು ಖರ್ಚು ಮಾಡಿಕೊಂಡು ನೆಮ್ಮದಿಯಾಗಿರುತ್ತಾನೆ. ಒಂದು ದಿನ ರಾತ್ರಿ ಅವನು ಆಕಸ್ಮಿಕವಾಗಿ ತನ್ನ ಅಪ್ಪನ ಕೋಣೆಗೆ ಹೋಗುತ್ತಾನೆ. ಅಲ್ಲಿ ಒಂದು ವಿಚಿತ್ರ ದೃಶ್ಯ ಕಾಣಿಸುತ್ತದೆ. ಅಪ್ಪ ಬರೀ ಚಡ್ಡಿ ಧರಿಸಿ ನಿಂತಿರುತ್ತಾನೆ. ತನ್ನ ಮೈಕೈಗೆಲ್ಲಾ ಎಣ್ಣೆ ಬಳಿದುಕೊಂಡಿದ್ದಾನೆ. ಮಗನನ್ನು ನೋಡಿದ ಅಪ್ಪ, ಆತನನ್ನು ತನ್ನೊಂದಿಗೆ ಬರಲು ಹೇಳಿದ. ಇಬ್ಬರೂ ಕತ್ತಲಲ್ಲಿ ನಡೆದು ಹೆದ್ದಾರಿಯನ್ನು ಸೇರಿದರು. ಅಲ್ಲಿ ಸ್ವಲ್ಪ ಹೊತ್ತಿಗೆ ಶ್ರೀಮಂತರು ಕೂತಿದ್ದ ಗಾಡಿ ಬಂತು. ಅಪ್ಪ ಅದನ್ನು ತಡೆಗಟ್ಟಿ ಕೈಯಲ್ಲಿದ್ದ ಲಾಠಿ ಝಳಪಿಸಿದ. ಮುಂದಿನ ಅರ್ಧ ಗಂಟೆಯಲ್ಲಿ ಅವರ ನಗ ನಾಣ್ಯಗಳನ್ನು ಲೂಟಿ ಮಾಡಿದ.

 

ಬೆಳಕು ಹರಿಯುವುದರೊಳಗೆ ಅಪಾರ ಧನದೊಂದಿಗೆ ಅಪ್ಪ-ಮಗ ಮನೆ ಸೇರಿದರು.

ಸಮಾಜದಲ್ಲಿ ಗಣ್ಯ ಎನಿಸಿಕೊಂಡ ತನ್ನಪ್ಪನ ಇನ್ನೊಂದು ಮುಖವನ್ನು ನೋಡಿ ಮಗ ತಬ್ಬಿಬ್ಬಾಗಿದ್ದ. ಅವನ ಬಾಯಿಯಿಂದ ಯಾವುದೇ ಮಾತು ಹೊರಬರಲಿಲ್ಲ. ತನ್ನನ್ನೇ ದಿಟ್ಟಿಸುತ್ತಿದ್ದ ಮಗನನ್ನು ನೋಡಿ ಅಪ್ಪ ಹೇಳಿದ. `ಮಗೂ..... ಇದು ನಮ್ಮ ಕುಲ ಕಸುಬು, ನೀನು ಬೇಕಾದರೆ ಮುಂದುವರೆಸಬಹುದು, ಇಲ್ಲದಿದ್ದರೆ ಬಿಟ್ಟು ಬಿಡು, ನಿನ್ನಿಷ್ಟ'

 

ಈ ಕಥೆಯಲ್ಲಿ ಅಪ್ಪ , ಮಗ ಇಬ್ಬರೂ ಸಮಕಾಲಿನರೇ. ಇಬ್ಬರೂ ಒಟ್ಟಿಗೆ ಇದ್ದಾರೆ. ಆದರೆ ಮಗ-ಅಪ್ಪ ಇಬ್ಬರಿಗೂ ತಿಳಿಯದ ಹೊಸ ಸಂಗತಿ ಧುತ್ತನೆ ಇಬ್ಬರ ನಡುವೆ ಉದ್ಭವವಾಗುತ್ತದೆ. ಅದು ಯಾವುದೇ ಘರ್ಷಣೆಗೆ ಕೇಂದ್ರವಾಗದೆ, ಅನುಸಂಧಾನದ ಆರಂಭವಾಗುತ್ತದೆ.

 

ಬಹುಶ: ಈ ಕಥೆ ನನ್ನ ಮತ್ತು ನಮ್ಮಪ್ಪನ ನಡುವಿನ ಸಂಬಂಧದ ಒಂದು ರೂಪಕ ಅನ್ನಿಸುತ್ತದೆ. ನನ್ನ ಮತು ಅಪ್ಪನ ಸಂಬಂಧಗಳನ್ನು ಹೇಳುವ ಮೂಲಕ ನನ್ನಪ್ಪ ಹೇಗಿದ್ದರು ಎಂದು ನಾನು ಕೇಳಬಹುದೇನೋ ನಿಜಕ್ಕೂ ಒಂದು ವ್ಯಕ್ತಿ ಎಂದರೆ ಅವನು ಮಾತ್ರವಲ್ಲ ಅವನೆಂದರೆ ಅವನ ಸುತ್ತಲಿನ ಸಮಾಜ, ಸ್ನೇಹಿತರು, ಕುಟುಂಬದವರು ಇತ್ಯಾದಿ ಎಲ್ಲಾ ಸೇರಿರುತ್ತದೆ. ಆ ದೃಷ್ಟಿಯಿಂದಲೇ ನಾನು ಅಪ್ಪನನ್ನು ನೋಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು ಅಕ್ಷರ.

 

ತಮ್ಮ ತಂದೆಯನ್ನು ತಮ್ಮ ಜೀವನದ ಮೂರು ಘಟ್ಟಗಳಲ್ಲಿ ನೋಡಿದ್ದಾಗಿಯೂ ಅವುಗಳಲ್ಲಿ ಮೊದಲಿನದು ತನ್ನ ಬಾಲ್ಯ ಎಂದರು. ಅಕ್ಷರ ಶಾಲೆಗೆ ಹೋಗಿದ್ದೇ ೭ನೇ ತರಗತಿಯಿಂದ. ಅಲ್ಲಿಯ ತನಕ ಸುಬ್ಬಣ್ಣ ಅವರನ್ನು ಶಾಲೆಗೆ ಹೋಗು ಎನ್ನಲೂ ಇಲ್ಲ. ಆ ಹಂತದಲ್ಲಿ ತಾನು ಅಪ್ಪನಿಂದ ಬಂದಿದ್ದನ್ನು ಸಾಧ್ಯವಾದಷ್ಟು ಕಲಿಯುವ ಪ್ರಯತ್ನ ಮಾಡಿದೆ. ನನಗೆ ಸಂಸ್ಕೃತ ಕಲಿಸಲು ಶಿರಸಿಯಿಂದ ಭಟ್ಟರೊಬ್ಬರು ಬಂದಿದ್ದರು. ಪಿಟೀಲು ಕಲಿಸಲು ಗುರುಗಳೊಬ್ಬರು ಬಂದಿದ್ದರು. ಹೀಗೆ ಅಪ್ಪಯ್ಯ ತನಗೆ ಅನ್ನಿಸಿದ್ದ ಅಷ್ಟಿಷ್ಟನ್ನು ನನ್ನತ್ತ ಒಗಾಯಿಸುತ್ತಿದ್ದರು. ನನಗೆ ದಕ್ಕಿದ್ದನ್ನು ನಾನು ಉಳಿಸಿಕೊಳ್ಳುತ್ತಿದ್ದೆ. ಇದು ಹೈಸ್ಕೂಲಲ್ಲಿ ಮುಂದುವರೆಯಿತು. ಎರಡನೇ ಹಂತ ಕಾಲೇಜು. ಆಗ ನಾನು ಮಾರ್ಕ್ಸ್‌ನನ್ನು ಓದುತ್ತಿದ್ದೆ. ನಮ್ಮಪ್ಪ ನೀನಾಸಂ ಆರಂಭಿಸಿ ಒಂದಷ್ಟು ಚಟುವಟಿಕೆ ಮಾಡುತ್ತಿದ್ದರು. ಆಗ ನನಗೆ ನಮ್ಮಪ್ಪನ ಬಗ್ಗೆ ಭಾರೀ ಅಸಹನೆ ಅನ್ನಿಸುತ್ತಿತ್ತು. ನಾವು ಜಮೀನುದಾರರು, ನಾವು ಯಾಕೆ ನಾಟಕ ಇತ್ಯಾದಿ ಮಾಡಬೇಕು? ನಾವು ನಾಟಕ ಮಾಡುವುದರಿಂದ ನಮ್ಮೂರಿನ ಕೂಲಿವರ್ಗದ ಜನರಿಗೆ ಏನು ಪ್ರಯೋಜನ? ಅವರಿಗೆ ಮೊದಲಿಗೆ ಹೊಟ್ಟೆಗೆ ಬೇಕು, ನಾಟಕ ಬೇಡ ಅನ್ನಿಸುತ್ತಿತ್ತು ಒಮ್ಮೆ ನೀನಾಸಂನಲ್ಲಿ `ಸಂಗ್ಯಾಬಾಳ್ಯಾ' ಮೂಡುತ್ತಿತ್ತು. ಆಗ ಅಪ್ಪನಿಗೆ ಮೇಲಿನ ಮಾತನ್ನು ಹೇಳಿದ್ದೆ. ಅವರು ನಕ್ಕು ಸುಮ್ಮನಾಗಿಬಿಟ್ರು.

 

ಸ್ವಲ್ಪ ದಿವಸಗಳ ನಂತರ ನಮ್ಮ ರಂಗ ಮಂದಿರದ ಮುಂದೆ ರಸ್ತೆಗೆ ಟಾರು ಹಾಕುವ ಕೆಲಸ ಆರಂಭವಾಯಿತು. ಅಲ್ಲಿ ಕೂಲಿ ಕೆಲಸ ಮಾಡುವವರು ಟೆಂಟುಗಳಲ್ಲಿ ತಂಗಿದ್ದರು. ಒಂದು ದಿನ ರಾತ್ರಿ ಅವರ ಟೆಂಟುಗಳ ಮಧ್ಯದಿಂದ `ಸಂಗ್ಯಾ-ಬಾಳ್ಯಾ'ದ ಹಾಡುಗಳು ತೇಲಿಬಂದವು. ನಾವೆಲ್ಲರೂ ಅಲ್ಲಿಗೆ ಹೋದೆವು. ಬಹಳ ಸಂಕೋಚದಿಂದಲೇ ಅವರು ನಮ್ಮೆದುರು `ಸಂಗ್ಯಾ-ಬಾಳ್ಯಾ' ನಾಟಕ ಆಡಿದರು.

 

ಹೊಟ್ಟೆಗೆ ಸರಿಯಾಗಿ ತಿನ್ನಲು ಇಲ್ಲದಿದ್ದರೂ ಅವರಿಗೆ ಹಾಡು ನಾಟಕ ಮಾಡಲೇಬೇಕೆಂಬ ತುರ್ತು ಏಕೆ ಹುಟ್ಟಿತು? ಈ ಪ್ರಶ್ನೆ ನನ್ನನ್ನು ಬಹಳ ಕಾಡಿತು. ಕಲೆ ಮತ್ತು ಅದರ ಅಗತ್ಯಗಳ ಬಗೆಗಿನ ಗ್ರಹಿಕೆಗಳನ್ನೇ ಇದು ಬುಡಮೇಲು ಮಾಡಿತು.

 

ಮೂರನೇ ಹಂತ ನಾನು ಎನ್‌ಎಸ್‌ಡಿ ಮತ್ತು ವಿದೇಶಕ್ಕೆ ಹೋಗಿ ಓದು ಮುಗಿಸಿ ಬಂದ ನಂತರದ್ದು. ಈ ಹಂತದಲ್ಲಿ ನಾನು ಅವರನ್ನು ಪ್ರಭಾವಿಸಿದ್ದೇ, ಅವರು ನನ್ನನ್ನು ಪ್ರಭಾವಿಸಿದ್ದೇ ಗೊತ್ತಾಗುತ್ತಿರಲಿಲ್ಲ. ನಮ್ಮ ನಡುವೆ ಮಾತಿಗಿಂತಲೂ ಮೌನದಲ್ಲೇ ಅನೇಕ ವಿಚಾರಗಳು ಸಂವಹನ ಆಗುತ್ತಿದ್ದವು. ನಮ್ಮ ಅಜ್ಜನ ಮನೆಯವರು ಸ್ವಲ್ಪ ಮಾತು ಕಮ್ಮಿ. ಅವರು `ಬಾಳೆಕಾಯಿ ತರುತ್ತೇನೆ' ಎಂದು ಹೇಳಿ ಹೋಗುತ್ತಿರಲಿಲ್ಲ. ಕೈಯಲ್ಲಿ ಕುಡುಗೋಲು ಹಿಡಿದು ಹೊರಗೆ ಹೊರಟರೆ ಬಾಳೆಕಾಯಿ ತರುತ್ತಾರೆ ಎಂದೇ ಅರ್ಥ. ನಮ್ಮ ಅಜ್ಜಿ ಕಡೆಯವರು ಹಾಗಲ್ಲ, ತುಂಬಾ ವರ್ಬಲ್. ನಮ್ಮಜ್ಜಿ ಮನೆಯಲ್ಲಿರುವ ನನಗೇ ದೀರ್ಘ ಪತ್ರ ಬರೀತಿದ್ರು.

 

ನಮ್ಮಪ್ಪ ಯಾವುದೇ ಪ್ಲ್ಯಾನಿಂಗ್ ಇಲ್ಲದಾತ ಎಂದು ನನಗೆ ಅನೇಕ ಬಾರಿ ಕಿರಿಕಿರಿ ಅನ್ನಿಸುತ್ತಿದ್ದು ಅವರು ಇಂದಿನದನ್ನು ತೀವ್ರವಾಗಿ ಆಲೋಚಿಸಿದಷ್ಟು ನಾಡಿದ್ದಿನದನ್ನು ಆಲೋಚಿಸುತ್ತಿರಲಿಲ್ಲ. ಈಗ ನನಗೆ ಅನ್ನಿಸುತ್ತಿದೆ ಅದು ಅವರ ಉದ್ದೇಶ ಪೂರ್ವಕ ಕ್ರಮ ಎಂದು. ರಾಜಕಾರಣಿಗಳ ಜೊತೆ ಅಪ್ಪಯ್ಯನಿಗೆ ಬಹಳ ಸಖ್ಯ. ಆದರೆ ರಾಜಕಾರಣಿಗಳು ಅಧಿಕಾರದಲ್ಲಿರುವಾಗ ಅವರಿಂದ ದೂರವೇ ಉಳಿಯುತ್ತಿದ್ದರು. ಕೊನೆಗಾಲದಲ್ಲಿ ಅವರು ಬಹಳ ಹೆಚ್ಚಾಗಿ ಓದುತ್ತಿದ್ದದ್ದು ತತ್ವಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಎಂದು ಅಕ್ಷರ ಹೇಳಿದರು.

 

ಅಕ್ಷರ ಅವರ ಈ ಸುಧೀರ್ಘ ಭಾಷಣವನ್ನು ಸಭಿಕರು ತದೇಕ ಚಿತ್ತರಾಗಿ ಆಲಿಸಿದರು. ಚಂದ್ರಶೇಖರ ಕಂಬಾರ, ಜಯಂತ ಕಾಯ್ಕಿಣಿ, ವಿವೇಕ ಶಾನುಭಾಗ ಮುಂತಾದ ಸಾಹಿತಿಗಳು ಉಪಸ್ಥಿತರಿದ್ದರು. ಕೆ.ಶ್ರೀನಿವಾಸ್, ಜಿ.ಕೆ.ಗೋವಿಂದರಾವ್ ತಮ್ಮ ಅನಿಸಿಕೆಗಳನ್ನು ಹೇಳಿದರು. ಕಾರ್ಯಕ್ರಮದ ರುವಾರಿ ಶ್ರೀನಿವಾಸ ವೈದ್ಯ ಅವರ ಅಚ್ಚುಕಟ್ಟುತನ ಕಾರ್ಯಕ್ರಮದ ಉದ್ದಕ್ಕೂ ಎದ್ದುಕುಣಿಸುವಂತಿತ್ತು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com