Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಬಿಳಿಯ ಚಾದರ

ಡಾ. ಗುರುಪ್ರಸಾದ್ ಕಾಗಿನೆಲೆ ಬರೆದ ಹೊಸ ಕಾದಂಬರಿಯ ಒಂದಷ್ಟು ಪುಟಗಳು

 ಕನ್ನಡ ಸಾಹಿತ್ಯವಲಯದಲ್ಲ ಸಣ್ಣ ಕತೆಗಾರರದೇ ಸುದ್ದಿ ಅಂದುಕೊಳ್ಳುತ್ತಿರುವಾಗಲೇ ಅಲ್ಲಿ ಮುಂಬಯಿಯಲ್ಲಿ ಯಶವಂತ ಚಿತ್ತಾಲರು ಕಾದಂಬರಿ ಬರೆಯುತ್ತಿದ್ದಾರೆ ಎಂಬ ಸುದ್ದಿ ಬಂತು. ಮತ್ತೆ ಭೈರಪ್ಪ ಕೂಡ ಬರೀತಿದ್ದಾರೆ. ವಿವೇಕ್ ಶಾನುಭೋಗ್ ಸದ್ದಿಲ್ಲದೇ ಕಾದಂಬರಿ ಬರೆದು ಮುಗಿಸಿದ್ದಾರೆ. ಇನ್ನೇನು ಬಿಡುಗಡೆಗಾಗಿ ಕಾಯುತ್ತಿದೆ. ಅಶೋಕ್ ಹೆಗಡೆ ಬರೆದು ಮುಗಿಸಿದ್ದಾಗಿದೆ. ಇಲ್ಲಿ ಇಷ್ಟೆಲ್ಲ ಕಾದಂಬರಿಗಳ ಸದ್ದಾಗುತ್ತಿರುವಾಗಲೇ ಅತ್ತ  ಎನ್‌ಆರ್‌ಐ ಕಥೆಗಾರ, ಡಾ. ಗುರುಪ್ರಸಾದ್ ಕಾಗಿನೆಲೆ ಕಾದಂಬರಿ ಬರೆದು ಬಿಟ್ಟಿದ್ದಾರೆ. ಈ ಬಾರಿಯ ದೇಶಕಾಲದ ಕಾದಂಬರಿಯ ಪುಟಗಳಲ್ಲಿ ಕಾಗಿನೆಲೆ ಅವರ `ಬಿಳಿಯ ಚಾದರದ ಪುಟಗಳನ್ನು ಆಯ್ದು ಪ್ರಕಟಿಸಿದ್ದಾರೆ. ಅವೇ ಪುಟಗಳು ನಿಮ್ಮ ಓದಿಗಾಗಿ :

 

ಡಾ. ಗುರುಪ್ರಸಾದ ಕಾಗಿನೆಲೆ,

gkaginele@hotmail.com

 

ಇಷ್ಟರ ನಡುವೆ ಲಕ್ಕಿ ಅಲಿ ಕೈ ಮುರಿದು ಕೊಂಡಿದ್ದ.  `ಅಮೆರಿಕಾ ಸಾಯಬೇಕು' `ಜೀಹಾದ್‌ಗೆ ಜಯ' ಅನ್ನೋ ದಿನಂಪ್ರತಿ ಘೋಷಣೆಗಳ ನಡುವೆ ನಿಮ್ನನಗರದ ಯಾವುದೋ ಪಾರ್ಕಿಂಗ್ ಲಾಟಿನಲ್ಲಿ ಈತ ಓಡಾಡುತ್ತಾ ಓಲಾಡುತ್ತಿದ್ದಾಗ ಅವನನ್ನು ನೋಡಿದ ಅತಿ ಜಾಗರೂಕ ಹೊಸ ಪೊಲೀಸೊಬ್ಬ ಹಿಂದಿನಿಂದ `ಫ್ರೀಜ್' ಎಂದು ಅಲಿಯನ್ನು ಕೆಳಗೆ ಬೀಳಿಸಿದಾಗ ಕೈ ಮುರಿದಿತ್ತಂತೆ.  ನಂತರ ಸುತ್ತುವರಿದ ಪಳಗಿದ ಪೊಲೀಸರು `ಓ ಇದು ಅಲಿಯಾ' ಎಂದು ತಣ್ಣಗಾದರಂತೆ.  ನಂತರ ಆ ಹೊಸಾ ರಿಕ್ರೂಟಿಗೆ ಅಲಿಯ ಪರಿಚಯ ಮಾಡಿಕೊಟ್ಟು ಇವನ ಕಥೆಯನ್ನೆಲ್ಲಾ ಹೇಳಿ ಇವನ ಘೋಷಣೆಗಳು `ಮರಣ'ದಿಂದ `ಜೀಹಾದ್'ಗೆ, ರಕ್ತದ ಆಲ್ಕೋಹಾಲಿನ ಮಟ್ಟ ಏರಿದಂತೆ ಹೇಗೆ ಬದಲಾಗುತ್ತಾ ಹೋಗುತ್ತದೆ ಎಂದು ವಿವರಿಸಿದ್ದರು.  ಮಾರನೆಯ ದಿನ ಅಲಿ ತಣ್ಣಗಾದ ಮೇಲೆ ಆ ಹೊಸ ಪೊಲೀಸು ಹೋಗಿ ಕ್ಷಮೆಯಾಚಿಸಿದ್ದ.  ಯಾಕೆಂದು ಗೊತ್ತಾಗದೇ ಅಲಿ `ಸರಿಸರಿ' ಎಂದಿದ್ದ.  ಆ ಕ್ಷಣದ ಆತನ ತುರ್ತು ಯೋಚನೆ ಕೈಗೆ ಪಟ್ಟಿ ಕಟ್ಟಿಸಿಕೊಂಡಿದ್ದರೂ ಬಿಯರಿನ ಕ್ಯಾನನ್ನು ಹಿಡಿಯಲಾದೀತೇ, ಅನ್ನುವುದು ಗೊತ್ತಾದ ಮೇಲೆ ಆ ಹೊಸಾ ಪೊಲೀಸಿನ ಮನಸ್ಸಿನ ಯಾವುದೋ ಮೂಲೆಯಲ್ಲಿದ್ದ `ಈತ ಭಯೋತ್ಪಾದಕನಿದ್ದರೂ ಇರಬಹುದು' ಅನ್ನುವ ಯೋಚನೆ ಹಾರಿಹೋಗಿತ್ತು.

 

ಅಲಿಯ ಕೈಗೆ ಪಟ್ಟಿ ಕಟ್ಟುತ್ತಾ ಅಖ್ತರ್ ಹೇಳಿದ `ಬಡ್‌ಲೈಟು ಮತ್ತು ಮಿಲ್ಲರ್ ಲೈಟುಗಳಿಂದ ಅಮೆರಿಕಾ ವಿರುದ್ಧ ನೀನು ಮಾಡಿದ ಸಮರ ಸಾಕು.  ನಿನ್ನ ಯುದ್ಧ ಮುಗಿಯುವ ಹೊತ್ತಿಗೆ ನಿನ್ನ ಲಿವರ್ ಕರಕಲಾಗುತ್ತೆ' ಎಂದು.  ಅದನ್ನು ಕೇಳಿ ಅಲಿ `ನಿಮ್ಮಂತ ಕಾಫಿರರಿರೋದಕ್ಕೆ ನಮ್ಮ ಧರ್ಮಯುದ್ಧ ಸಾಗುತ್ತಿಲ್ಲ.  ಈ ಸಾಗರದಾಚೆಯ ಭೂಮಿಯ ಮೇಲೆ ನಿಂತ ಎಲ್ಲರೂ ನಮ್ಮ ಶತ್ರುಗಳು.  ನೀನು ನಮ್ಮ ಶತ್ರುಗಳನ್ನು ಉಳಿಸುತ್ತಿದ್ದೀಯ.  ಬಾ ನಮ್ಮ ಜೊತೆ ಯುದ್ಧಕ್ಕೆ' ಎಂದು ಮುರಿದ ಕೈಯನ್ನು ಸೊಟಗಾಯಿಸಿದನಂತೆ.  ಕೇಳಿ, ಅದನ್ನು ಇನ್ನೊಬ್ಬರಿಗೆ ಹೇಳಿ ನಕ್ಕಿದ್ದ, ಅಖ್ತರ್.

 

ನಲವತ್ನಾಲ್ಕರ ಉಳಕೊಂಡವನ ಪೇಪರ್‌ವರ್ಕನ್ನೆಲ್ಲಾ ಮುಗಿಸಿ ನಂತರ ಮನೆಗೆ ಹೋಗುವ ಮುನ್ನ ನಾಳೆ ಮಾಡಬೇಕಾದ ಕೆಲಸವನ್ನೆಲ್ಲಾ ಪಟ್ಟಿ ಮಾಡಿಕೊಂಡಿದ್ದ, ಶ್ರೀಧರ.  ಶ್ರೀಧರನ ಕೈಕೆಳಗೆ ಈಗ ಆರು ಜನ ರೋಗಿಗಳಿದ್ದರು.  ಘೂಗೆಯ ಲೆಕ್ಕದಂತೆ ಏನು ಮಾಡಿದರೂ ಸಾಯದವರು ನಾಲ್ಕು ಜನ, ಸಾಯಬಹುದಾದವನು ಒಬ್ಬ, ಗ್ಯಾರಂಟಿ ಸಾಯುವವ ಇನ್ನೊಬ್ಬ.  ಏನು ಮಾಡಿದರೂ ಸಾಯದವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲು ಶ್ರೀಧರ ಮಾಡುತ್ತಿದ್ದ ಶತಪ್ರಯತ್ನ ಕೆಲವೊಮ್ಮೆ ಏನೂ ಉಪಯೋಗಕ್ಕೆ ಬರುತ್ತಿರಲಿಲ್ಲ.  ಏನು ಮಾಡಿದರೂ ಗುಣವಾಗದ ಕಾಯಿಲೆಗಳಿದ್ದವರು ಪಾಳಯದ ಜಗಲಿಗೆ ಬಂದು ಏನೇನು ಹೇಳಿದರೆ, ಆಸ್ಪತ್ರೆಗೆ ಭರ್ತಿಯಾಗಬಹುದು ಎನ್ನುವುದನ್ನು ಬಹಳ ಚೆನ್ನಾಗಿ ತಿಳಕೊಂಡಿದ್ದರು.  ಒಮ್ಮೆ ತನ್ನ ಸುಪರ್ದಿನಲ್ಲಿದ್ದ ತನ್ನ ರೋಗಿಗಳ ವಿವರಗಳನ್ನು ಒಮ್ಮೆ ನೋಡಿದ.

 

೧. ಮಿಸ್ಟರ್ ವಿಯಂಸ್ - ಎಂಬತ್ನಾಲ್ಕು ವರ್ಷ.  ಕಳೆದ ನಲವತ್ತು ವರ್ಷಗಳಿಂದ ಸಕ್ಕರೆ ಖಾಯಿಲೆಯಿದೆ.  ಎರಡು ಬಾರಿ ಹೃದಯಾಘಾತ; ಎರಡು ಬಾರಿ ಬೈಪಾಸ್.  ಈಗ ಪಾಳಯಕ್ಕೆ ಭರ್ತಿಯಾಗಿರುವುದು ರಕ್ತದಲ್ಲಿನ ಸಕ್ಕರೆಯಂಶ ಸಿಕ್ಕಾಪಟ್ಟೆ ಹೆಚ್ಚಾಗಿರುವುದರಿಂದ.  ಭರ್ತಿಯಾಗಿ ಹದಿನೈದು ದಿನವಾದ ಮೇಲೆಯೂ ಮನೆಗೆ ಹೋಗಲಾಗಿಲ್ಲ.  ಕಾರಣ, ಮನೆಗೆ ಹೋಗಬೇಕಾದರೆ, ಯಾರಿಗೂ ಗೊತ್ತಿಲ್ಲದ ಕಾರಣಗಳಿಂದ ಆತನ ರಕ್ತದಲ್ಲಿ ಸಕ್ಕರೆ ನಾನೂರಕ್ಕೇರುತ್ತದೆ.

 

೨. ಮಿಸ್ಟರ್ ಬೆನೆಡಿಕ್ಟ್ - ವಯಸ್ಸು ಅರವತ್ನಾಲ್ಕು: ಪ್ಯಾರನಾಯ್ಡ್ ಸ್ಕಿಜೋಪ್ಫ್ರೀನಿಯ ಬರೀ ನೀರು ಕುಡಿದು ಕುಡಿದು ದೇಹದಲ್ಲಿನ ಸೋಡಿಯಂ ಲವಣದಂಶ ತೀರ ಕಡಿಮೆಯಾಗಿ ಮೈಯೆಲ್ಲ ಅದುರಿ, ಇವನ ಸೇವೆಗೆಂದು ಭರ್ತಿಯಾಗಿದ್ದಾನೆ.  ರಕ್ತದಲ್ಲಿನ ಸೋಡಿಯಂ ಸರಿಯಾಗುವವರಗೆ ಸೈಕಿಯಾಟ್ರಿಯವರು ತಮ್ಮ ಸೇವೆಯ ಸುಪರ್ದಿನ ಮಿತಿಯಲ್ಲಿ ಈತ ಬರುವುದಿಲ್ಲವೆಂದು ತಕರಾರು ಮಾಡುತ್ತಿರುವುದರಿಂದ ಈತ ಇನ್ನೂ ಶ್ರೀಧರನ ಸೇವೆಯನ್ನೇ ಪಡೆಯುತ್ತಿದ್ದಾನೆ.  ಆ ಸೋಡಿಯಂ ಏನು ಮಾಡಿದರೂ ಜಾಸ್ತಿಯಾಗುತ್ತಿಲ್ಲ.  ಕಾರಣ, ಘೂಗೆಯ ಪ್ರಕಾರ ಈತ ಟಾಯ್ಲೆಟ್ಟಿನಿಂದ ಕದ್ದು ನೀರು ಕುಡಿಯುತ್ತಾನೆ.

 

೩. ಮಿಸ್ಟರ್ ವೆಬರ್ - ವಿಯೆಟ್ನಾಂ ಯುದ್ಧವೀರ.  ಈ ಯುದ್ಧವೀರರಿಗೆಂದೇ ಇರುವ ವೆಟರನ್‌ಪಾಳ್ಯದಲ್ಲಿ ಭರ್ತಿಯಾಗದೇ ಈ ಆಸ್ಪತ್ರೆಗೆ ಯಾಕೆ ಭರ್ತಿಯಾಗಿದ್ದಾನೆ ಅನ್ನುವುದು ಶ್ರೀಧರನಾದಿಯಾಗಿ ಘೂಗೆಯ ತನಕ ಯಾರಿಗೂ ಗೊತ್ತಿಲ್ಲ.  ಕೇಳಲು ಹೋದ ಶ್ರೀಧರನಿಗೆ ಮಿಸ್ಟರ್ ವೆಬರ್ ಕೇಳಿದ್ದು ಎರಡು ಪ್ರಶ್ನೆ- ಒಂದು, ನೀನು ಅಮೆರಿಕದ ಪ್ರಜೆಯಾ? ಎರಡು, ನೀನು ಯುದ್ಧವೀರನಾ? - ಎರಡೂ ಪ್ರಶ್ನೆಗೂ ಶ್ರೀಧರನ ಉತ್ತರ `ಇಲ್ಲ' ಸರಿ ಮಿಸ್ಟರ್ ವೆಬರ್ ಹೇಳಿದ್ದು- ನಾನು ಎರಡೂ ಹೌದು.  ಹಾಗಾಗಿ ನಿನಗೆ ನನ್ನನ್ನು ಪಾಳಯದಿಂದ ಹೊರಗೆ ಕಳುಹಿಸುವ ಹಕ್ಕು ಖಂಡಿತಾ ಇಲ್ಲ.

 

೪. ಮಿಸೆಸ್ ವೆಬರ್ - ಗಂಡ ಆಸ್ಪತ್ರೆಗೆ ಹೋಗುತ್ತಾನೆಂದಾಗ ಸೂಟ್‌ಕೇಸ್ ಜೋಡಿಸಲು ಹೋಗಿ ಬಿದ್ದು ತೊಡೆಯ ಮೂಳೆ ಮುರಿದುಕೊಂಡಾಕೆ.  ಆಕೆಗಿದ್ದ ನಾನಾ ಖಾಯಿಲೆಗಳನ್ನು ಒಂದು ನಿಯತ್ತಿಗೆ ತರುವ ತನಕ ಆಪರೇಷನ್ ಮಾಡೋಕೆ ಆಗೋದಿಲ್ಲ ಅಂತ ಮೂಳೆ, ಕೀಲು ತಜ್ಞರು ಕೈ ತೊಳಕೊಂಡಿದ್ದಾರೆ.  ಈಕೆ ನೇರವಾಗಿ ಇವನ ವಾರ್ಡಿಗೆ ಬಂದು ಭರ್ತಿಯಾಗಿದ್ದಳು.  ಆಪರೇಶನ್‌ಗೆ ಅವಳನ್ನು ಸಿದ್ಧಪಡಿಸಲು ಶ್ರೀಧರ ಶತಾಯಗತಾಯ ಹೆಣಗುತ್ತಿದ್ದ.

 

ಘೂಗೆಯ ವಿವರಣೆಯ ಪ್ರಕಾರ ಇವರುಗಳು ಸಾಯದವರು. ಏನು ಮಾಡಿದರೂ ಇವರುಗಳು ಪಾಳಯ ಬಿಟ್ಟು ಹೋಗುವುದಿಲ್ಲ.  ಹೋದರೂ ಮತ್ತೆ ಬಂದು ಏನಾದರೂ ಇನ್ನೊಂದು ಕಾರಣದಿಂದ ಮತ್ತೆ ಭರ್ತಿಯಾಗುತ್ತಾರೆ.

 

೫. ಇನ್ನು ಸಾಯಬುಹುದಾದವ ಜಿಮ್ಮಿ ನಾರ್ಟನ್ ; ವಯಸ್ಸು ಮೂವತ್ತೇಳು.  ಪಾಳಯದ ಜಗುಲಿಯ ಮೇಲೆ ಎದೆನೋವೆಂದು ಕುಸಿದು ಬಿದ್ದವ.  ನಿಂತ ಹೃದಯವನ್ನು ಒಂದಿಷ್ಟು ವಿದ್ಯುಚ್ಛಕ್ತಿಯಿಂದ ಮತ್ತೆ ಬಡಿದೆಬ್ಬಿಸಿ ನಾಲ್ಕೈದು ಔಷಧಿಗಳಿಂದ ಜೀವ ಹಿಡಿದುಕೊಂಡು ಐಸಿಯುನಲ್ಲಿದ್ದವ ಈಗ ಶ್ರೀಧರನ ಸುಪರ್ದಿಯಲ್ಲಿದ್ದಾನೆ.  ಎಡ ವೆಂಟ್ರಿಕಲ್ಲಿನ ಮಾಂಸಖಂಡಗಳು ದುರ್ಬಲವಾಗಿ ಮೂರನೇ ಒಂದು ಭಾಗದಷ್ಟು ಮಾತ್ರ ಶಕ್ತಿಯುತವಾಗಿವೆ.  ಬಡಿದಷ್ಟೇ ಸಿಕ್ಕದ್ದು ಎಂದು ಖುಷಿಪಟ್ಟುಕೊಂಡಿದ್ದಾನೆ.  ನಾಳೆ ನಾಡಿದ್ದರಲ್ಲಿ ಬದುಕಿದ್ದರೆ ಮನೆಗೆ ಹೋಗುತ್ತಾನೆ.

 

೬. ಗ್ಯಾರಂಟಿ ಸಾಯುವವ- ನಲವತ್ನಾಲ್ಕರ ಅಬ್ರಹಾಂ.  ಎಂತದೋ ಕೆಟ್ಟ ಖಾಯಿಲೆ ಆತನಿಗೆ. ಮೈಯಿನ ರಕ್ತವೆಲ್ಲಾ ಹೆಪ್ಪುಗಟ್ಟಿ ಎಲ್ಲೆಲ್ಲೂ ರಕ್ತದುಂಡೆಗಳನ್ನು ಗುಂಡು ಹೊಡೆದಂತೆ ಹೊಡೆಯುತ್ತಾನೆ.  ಒಂದೆರಡು ಶ್ವಾಸಕೋಶದಲ್ಲಿ ಸೇರಿ ಬದುಕಲೋ ಬೇಡವೋ ಅಂತ ಇನ್ನೂ ಬದುಕಿದ್ದಾನೆ.  ಈ ರಕ್ತದುಂಡೆಗಳನ್ನು ಕರಗಿಸಲು ಹೋದರೆ, ಎಲ್ಲೆಲ್ಲಿಯೂ ರಕ್ತಸ್ರಾವ.  ನೂಲಿನೆಳೆಯ ಮೇಲೆ ಜೀಕಬೇಕಾದ ಪ್ರಸಂಗ.

 

ಘೂಗೆಯ ನಂಬಿಕೆಯನ್ನು ಹೇಗಾದರೂ ಮಾಡಿ ಸುಳ್ಳು ಮಾಡಬೇಕೆಂದು ಮೊದಲ ನಾಲ್ಕು ಮಂದಿಯನ್ನು ಏನಾದರೂ ಮಾಡಿ ಮನೆಗೆ ಕಳಿಸಬೇಕೆಂದು ಬಹಳ ಪ್ರಯತ್ನ ಮಾಡಿದ್ದ, ಶ್ರೀಧರ.  ಪಾಳಯದ ಡಿಸ್‌ಚಾರ್ಜ್ ಪ್ಲಾನರುಗಳೆಂಬ ಮನೆಗಟ್ಟುವ ಗೃಹಲಕ್ಷ್ಮಿಯರ ಸಹಾಯವನ್ನೂ ಪಡೆದಿದ್ದ.

 

`ಯಾವುದೇ ರೋಗಿಗಳ ಕಾಯಿಲೆಯೂ ವಾಸಿಯಾಗಿದೆ ಅನ್ನುವ ಯಾವ ಪುರಾವೆಯೂ ಇಲ್ಲವಲ್ಲ?' ಎಂದು ಕೇಳಿದ್ದಳು ಒಬ್ಬ ಗೃಹಲಕ್ಷ್ಮಿ.

 

`ಯಾರಿಗೂ ಖಾಯಿಲೆ ವಾಸಿಯಾಗೋದಿಲ್ಲ.  ಎಲ್ಲವೂ ಒಂದು ಹತೋಟಿಯಲ್ಲಿದೆ.  ಬರೀ ಮಾತ್ರೆ ತೆಗೆದುಕೊಳ್ಳೋಕೆ ಪಾಳಯದಲ್ಲಿ ಯಾಕಿರಬೇಕು?  ಮತ್ತೆ ಈ ರೀತಿ ಮಲಗಿದ್ದರೆ ಆಸ್ಪತ್ರೆಗೆ ದುಡ್ಡು ಕಟ್ಟುವವರು ಯಾರು.  ಸರ್ಕಾರಿ ವಿಮೆ ಇಂತಿಷ್ಟೇ ಅಂತಲ್ಲವಾ ಕಟ್ಟೋದು ಪ್ರತಿ ರೋಗಿಗೆ?'

 

`ಪ್ರತಿ ಹಾಸಿಗೆಗೆ ಎಪ್ಪತ್ತೈದು ಡಾಲರ್ ಸರ್ಕಾರ ಕೊಡುತ್ತಿರುವ ತನಕ ಅದರ ಖರ್ಚು ಅಲ್ಲೇ ಕಳೆಯುತ್ತದೆ ಎಂದು ನಾನು ಹೇಳುವುದಿಲ್ಲ.  ಈ ಪಾಳಯ ಬದುಕಿದೆ, ಉಸಿರಾಡುತ್ತಿದೆ ಅಂತ ದೊಡ್ಡ ಮೀನುಗಳಿಗೆ ತೋರಿಸೋಕ್ಕೆ ಪಾಳಯ ಭರ್ತಿಯಾಗಿರಬೇಕು.  ಯೋಚನೆ ಮಾಡಬೇಡ.  ಪಾಳಯದ ವ್ಯವಹಾರ ಚೆನ್ನಾಗಿಯೇ ನಡೆದಿದೆ.  ನೀನು ನಿನ್ನ ಕೆಲ್ಸ ಮಾಡ್ಕೊಂಡು ಹೋಗು' ಎಂದು ಗೃಹಲಕ್ಷ್ಮಿಯರೂ ಝಾಡಿಸಿಬಿಟ್ಟಿದ್ದರು.

 

ಬೇರೆ ದಾರಿಯಿಲ್ಲದೆ ಎಲ್ಲರ ಲವಣಗಳು, ರಕ್ತದಕಣಗಳು ಈ ದಿನ ಹೇಗಿವೆ ಎಂದು ನೋಡಲು ಪಾಳಯದ ಪ್ರಯೋಗಾಲಯದವರನ್ನೂ ಕೆಲಸಕ್ಕೆ ಹಚ್ಚಿದ.

 

ಎಲ್ಲರೂ ಹೆಚ್ಚಿದ ತಮ್ಮ ಕೆಲಸದ ಭದ್ರತೆಯಿಂದಾಗಿ ಪರಸ್ಪರ ತಬ್ಬಿಕೊಂಡರು.

 

ಆದರೆ, ಶ್ರೀಧರನಿಗೆ ಆಶ್ಚರ್ಯ ತರುವ ವಿಷಯವೇನೆಂದರೆ, ಅಖ್ತರನ ರೋಗಿಗಳು ಯಾರೂ ಹೆಚ್ಚುದಿನ ಪಾಳಯದಲ್ಲಿ ಉಳಿಯುತ್ತಿರಲಿಲ್ಲ.  ದಾಖಲೆಯಲ್ಲಿ ಇಷ್ಟೆಲ್ಲಾ ಖಾಯಿಲೆಗಳಿಂದ ಆಸ್ಪತ್ರೆಗೆ ಭರ್ತಿಯಾದವರು ಬಂದ ಮೂರೇ ದಿನಗಳಲ್ಲಿ ಮನೆಗೆ ಹೋಗಲು ಸಿದ್ಧರಾಗಿರುತ್ತಿದರು.  ರಕ್ತದೊತ್ತಡ, ಸಕ್ಕರೆ, ತಲೆತಿರುಗು, ಮಂಡಿನೋವು ಎಲ್ಲವೂ ಒಮ್ಮೆಲೇ ಹತೋಟಿಗೆ ಬಂದಿರುತ್ತಿತ್ತು.  ಅದು ಹೇಗೆಂದು ಶ್ರೀಧರನಿಗೆ ಅರ್ಥವೇ ಆಗುತ್ತಿರಲಿಲ್ಲ.  ಗೃಹಲಕ್ಷ್ಮಿಯರ ಜೊತೆಗೆ ಅಖ್ತರ್ ನಗುನಗುತ್ತಾ ಮಾತನಾಡುತ್ತಿದ್ದಾಗ ಏನೋ ಒಂದು ಸಣ್ಣ ಅನುಮಾನ.  ಘೂಗೆ ಇದನ್ನು ಪುಷ್ಟೀಕರಿಸುವಂತೆ `ಆ ಅಖ್ತರ್ ಬೋಳಿಮಗ, ಆ ಲಕ್ಷ್ಮಿಯರನ್ನ ಎಲ್ಲೋ ಕರಕೊಂಡು ಹೋಗ್ತಾನನ್ನಿಸುತ್ತೆ.  ಇಲ್ಲಾದರೆ, ಅವನ ಎಲ್ಲಾ ರೋಗಿಗಳೂ ಅದು ಹೇಗೆ ಅಷ್ಟು ಬೇಗ ಮನೆಗೆ ಹೋಗ್ತಾರೆ' ಅಂದಿದ್ದ.  ಇತ್ತ ಅಖ್ತರ್, ಮೂರುಬಾರಿ `ಅತಿ ಎಫಿಷಿಯೆಂಟ್ ಇಂಟರ್ನ್' ಎಂದು ಪೀಟ್ಜಾ ಪರ್ಣಕುಟಿಯ ಕೂಪನ್ ಪಡೆದಿದ್ದ.

 

ಘೂಗೆ ಮೂರನೇ ಬಾರಿ ಬೆನ್ನು ತಟ್ಟಿ `ಭಲೇ, ಮಗನೇ, ದೊಡ್ಡವನಾದ ಮೇಲೆ ಏನಾಗಬೇಕೆಂದಿದ್ದೀಯ' ಎಂದು ಕೇಳಿದ್ದ.

 

`ಪ್ಲಾಸ್ಟಿಕ್ ಸರ್ಜನ್' ಎಂದ ಅಖ್ತರ್.

 

`ಹಾಗಾದರೆ ನಮ್ಮ ವಿಭಾಗದಲ್ಲೇಕೆ ಇಂಟರ್ನ್‌ಶಿಪ್ ಮಾಡುತ್ತಿದ್ದೀಯ?' ಕೇಳಿದ, ಘೂಗೆ.

 

`ಅಲ್ಲಿ ಸಿಗಲಿಲ್ಲ.  ಅದಕ್ಕೆ ಮುಂದಿನ ವರ್ಷಕ್ಕೆ ಮತ್ತೆ ಅರ್ಜಿ ಹಾಕುತ್ತಿದ್ದೇನೆ'. ಅಂದ.

 

`ಹಂಗಂದರೆ, ಹಾಲಿವುಡ್ ಧನ್ವಂತ್ರಿಯಾಗ್ತೀಯ, ನೀನು.  ಅಂಡುಗೆಲಸ, ಮೊಲೆಗೆಲಸ, ಮೂಗುಗೆಲಸ... ಭಲೆ ಮಗನೆ!'

 

`ಹೌದು, ಈ ಇನ್ಶೂರೆನ್ಸ್ ಕಂಪೆನಿಗಳ ಕಾಟ ಇರೊದಿಲ್ಲ.  ಯಾರದೋ ಅಂಡು ಇಳಿಸಿದರೆ, ಮೊಲೆ ಬೆಳೆಸಿದರೆ, ಮೂಗು ನೇರ ಮಾಡಿದರೆ ಕೇಳಿದಷ್ಟು ಕೊಡೋ ಬೆಳ್ಳಿಚುಕ್ಕಿ ರೋಗಿಗಳಿರುತ್ತಾರೆ.  ಮತ್ತಿನ್ನೊಂದು, ಯಾವ ಎಮರ್ಜೆನ್ಸಿನೂ ಇರೋದಿಲ್ಲ.'

 

`ಹಂಗೆ ಹೇಳಬೇಡಪ್ಪಾ.  ಆಸ್ಕರ್ ಪ್ರಶಸ್ತಿ ತೆಗೆದುಕೊಳ್ಳೊದಕ್ಕೆ ಮುಂಚೆ ಯಾರೋ ಒಬ್ಬ ಬೆಳ್ಳಿಚುಕ್ಕಿಯ ಒಂದು ನಕಲೀ ಮೊಲೆ ಇದ್ದಕ್ಕಿದ್ದಂತೆ ಫಟ್ಟೆಂದರೆ ತಕ್ಷಣಕ್ಕೆ ಸಿಲಿಕಾನ್ ಚುಚ್ಚೋದಕ್ಕೆ ರೆಡಿಯಾಗಿರ್ಬೆಕಲ್ಲ' ಅಂದು ನಕ್ಕ ಘೂಗೆ.

 

`ಹ್‌ಮ್... ಹಾಲಿವುಡ್ ಬೆಳ್ಳಿಚುಕ್ಕಿ' ಎಂದು ನಕ್ಕ, ಅಖ್ತರ್.

 

`ಯಾರೋ ಹೇಳಿದ್ದರಂತೆ.  ಸೂಳೆ ಗರತಿ ಅಲ್ಲ, ಪ್ಲಾಸ್ಟಿಕ್ ಸರ್ಜನ್ ಧನ್ವಂತ್ರಿಯಲ್ಲ ಅಂತ.  ಸ್ವಲ್ಪ ಯೋಚನೆ ಮಾಡು.  ನೀನು ಬುದ್ಧಿವಂತ ಇದೀಯ.  ನಿಜವಾದ ರೋಗಿಗಳನ್ನ ಉಳಿಸೋಕೆ ಪ್ರಯತ್ನಪಡು.  ಮುದುಕಿಯರನ್ನು ಸುಂದರಿ ಮಾಡೋ ಆ ಕೆಲಸವನ್ನು ಬೇರೆ ಯಾರಾದರೂ ಮಾಡಲಿ' ಎಂದ ಘೂಗೆ.

 

`ನಿಜವಾದ ರೋಗಿಗಳನ್ನು ಉಳಿಸೋಕೆ ಇದ್ದಾರೆ, ನಿನ್ನಂತಹ ದೇಸೀ ಧನ್ವಂತ್ರಿಯವರು.  ನಾನು ಪ್ಲಾಸ್ಟಿಕ್ ಸರ್ಜರಿಯೇ ಮಾಡೋದು.  ನೀನು ಏನಾದರೂ ಹೇಳಿಕೋ.  ದಿನದ ಕೊನೆಯಲ್ಲಿ ಹಾಲಿವುಡ್‌ನಲ್ಲಿ ಸುಂದರಿಯರಿಗೆ ಜಾರುತ್ತಾ ಇರೋ ಕಣ್ಣುರೆಪ್ಪೆಗಳಿಗೆ ಬೋಟಾಕ್ಸ್ ಕೊಟ್ಟುಕೊಳ್ಳುತ್ತಾ, ರಾತ್ರಿ ಕುಡಿದು ಬಿದ್ದಿರೋ ಅಲಿಯಂತವರಿಗೆ ಬೆಳಗಿನ ತನಕ ಹೊಲಿಗೆ ಹಾಕ್ತಾ ನೀನು ಕೂತಿರ್ತೀಯ.  ಇನ್ನೊಂದಿಷ್ಟು ಮಿಸೆಸ್ ಬೆನೆಟ್‌ಗಳು, ಬೇಬಿ ಬೂಮರ್ ತಳಿಯಿಂದ ದೊಡ್ಡವರಾಗಿ ಮುಕುಳಿಯ ತುಂಬಾ ಹೊಲಸನ್ನಿಟ್ಟುಕೊಂಡು ನಿನ್ನ ಬೆಟ್ಟನ್ನೇ ಎದುರು ನೋಡುತ್ತಾ ಇರ್ತಾರೆ' ಎಂದು ನಕ್ಕ.

 

ಘೂಗೆಯೂ ನಕ್ಕ.

 

ಶ್ರೀಧರ ಸುಮ್ಮನಿದ್ದ.

 

ಶ್ರೀಧರನಿಗೆ ಬರುಬರುತ್ತಾ ಘೂಗೆ ವಿಕ್ಷಿಪ್ತನೆನಿಸಿದ್ದ.  ರೋಗದ ಬಗ್ಗೆ, ರೋಗಿಗಳ ಬಗ್ಗೆ ಮತ್ತು ಪಾಳಯದ ಬಗ್ಗೆ ಅವನದೇ ಆದ ಸಿನಿಕತನವಿದ್ದರೂ, ಅವನ ವಾದದಲ್ಲಿ ಸತ್ಯವಿಲ್ಲ ಎಂದು ಹೇಳಲಾಗುತ್ತಿರಲಿಲ್ಲ.  ಗುರುಕುಲದಲ್ಲಿ ಕಲಿತ ವಿದ್ಯೆಗೂ, ಈ ಪಾಳಯದ ಅಪ್ರೆಂಟಿಸ್ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ನಿಧಾನವಾಗಿ ತಿಳಿಯುವುದಕ್ಕೆ ಆರಂಭಿಸಿದ್ದ.

 

ಭೆಟ್ಟಿಯ ಫೋನು ಇನ್ನೂ ಬಂದಿರಲಿಲ್ಲ.  ಅಂದು ರಾತ್ರಿ ಶ್ರೀಧರ ಬೆಟ್ಟಿಯ ಮನೆಗೆ ಹೋಗಬೇಕಾಗಿತ್ತು.  ಘೂಗೆಗೆ ರಾತ್ರಿ ಮನೆಗೆ ಬರಲಾಗುವುದಿಲ್ಲ ಅನ್ನುವುದಕ್ಕೆ ಏನೋ ಕಾರಣ ಕೊಟ್ಟಿದ್ದು ಇದೇ ಕಾರಣಕ್ಕೆ.  ಶ್ರೀಧರ ಬೆಟ್ಟಿಯನ್ನು `ನೋಡುತ್ತಿದ್ದುದು' ಕಳೆದೆರಡು ತಿಂಗಳಿಂದ.  ಬೆಟ್ಟಿ ಪಾಳಯದಲ್ಲಿ ಮುಂದಿನ ಜಗಲಿಯಲ್ಲಿ ಸ್ವಾಗತಕಾರಿಣಿ ಎನ್ನುವ ಅರ್ಥ ಹುಟ್ಟಿಸಬಲ್ಲ ನರ್ಸು.  ಪಾಳಯಕ್ಕೆ ಬರುವ ರೋಗಿಗಳನ್ನು ಅಲ್ಲೇ ನಿಲ್ಲಿಸಿ ಅವರವರ ಕಾಯಿಲೆಯ ತೀವ್ರತೆಗನುಸಾರವಾಗಿ ಅವರುಗಳನ್ನು ಎಲ್ಲೆಲ್ಲಿ ಕಳಿಸಬೇಕೋ ಅಲ್ಲಲ್ಲಿ ಕಳಿಸುವಾಕೆ.  ಹಿಂದೆ ಗುರುಕುಲದ ಓಪಿಡಿಯ ಮುಂದೆ ಜಾಲರಿ ಹಿಟಕಿಯ ಹಿಂದೆ ಕೂತ ಓಬಳೇಶು, ದಿನದಲ್ಲಿ ಎಂಟುನೂರು ರೋಗಿಗಳನ್ನು ಎಲ್ಲೆಲ್ಲಿಗೆ ಬೇಕೋ ಅಲ್ಲಿಗೆ ಯಾವುದೇ ಅಡೆತಡೆಯಿಲ್ಲದೇ ಕಳಿಸುತ್ತಿದ್ದ.  ಅವನಿಗಿದ್ದ ಬಿರುದು `ಚೀಟಿ ಬರೆಯುವವ'.  ಕಣ್ಣು ಮುಚ್ಚಿಕೊಂಡೇ ರೋಗಿಗಳನ್ನು ಬಲಗಡೆ, ಎಡಗಡೆ, ಮೇಲೆ, ಕೆಳಗೆ, ಸ್ವರ್ಗಕ್ಕೆ, ನರಕಕ್ಕೆ ಕಳುಹಿಸುತ್ತಿದ್ದ.  ಎದೆನೋವೆಂದರೆ ಜನರಲ್ ಮೆಡಿಸಿನ್.  ಹೊಟ್ಟೆನೋವೆಂದರೆ ಸರ್ಜರಿ, ಗಂಟಲು ನೋವೆಂದರೆ ಕಿವಿ-ಮೂಗು-ಗಂಟಲು, ತುರಿಕೆಯೆಂದರೆ ಚರ್ಮ, ಹೀಗೆ ಎಲ್ಲಾ ವಿಭಾಗದ ಸೀಲುಗಳನ್ನು ಹಿಡಿದುಕೊಂಡು ಸಿನೆಮಾ ಟಾಕೀಸಿನ ಮುಂದೆ ಟಿಕೀಟಿಗೆ ನುಗ್ಗುವ ಜನರಿಗೆ ಟಿಕೀಟನ್ನು ಹಂಚುವಂತೆ ಸೀಲೊತ್ತಿ ಹಂಚುತ್ತಿದ್ದ.  ಅದೇ ಕೆಲಸಕ್ಕೆ ಇಲ್ಲಿ ಪಾಳಯದ ನರ್ಸೊಬ್ಬಳು ಬೇಕಾಗಿದ್ದಳು.  ಅವಳಿಗಿದ್ದ ಬಿರುದು `Triage nurse''. ಪಾಳಯಕ್ಕೆ ಬರುವ ಜನರ ಸಂಖ್ಯೆ ಎಷ್ಟಿತ್ತೆಂದರೆ, ಇಲ್ಲಿ ಗಂಟಲು ನೋವೆಂದರೆ, ಜಗಲಿಯ ಹಾಸಿಗೆ ಮೇಲೆ ಮಲಗಲು ಗಂಟಲು ನೋವು + ನೂರನಾಕು ಡಿಗ್ರಿ ಜ್ವರ ಇರಬೇಕಾಗಿತ್ತು.  ಬರೀ ಗಂಟಲು ನೋವಿದ್ದು, ದೇಹದ ಉಷ್ಣತೆ ಸರಿಯಾಗಿದ್ದರೆ, ಹೊರಗೆ ಖುರ್ಚಿಯ ಮೇಲೆ ಗಂಟೆಗಟ್ಟಲೆ ಕಾಯಬೇಕಾಗಿತ್ತು.  ಬೆಟ್ಟಿಯಾಗಲೀ ಅಥವಾ ಇನ್ಯಾರಾಗಲೀ, ಪಾಳಯದ ಮುಂದೆಯೇ ಯಾರಾದರೂ ತಲೆಗೆ ಬೇಸ್‌ಬಾಲಿನ ಬ್ಯಾಟಿನಿಂದ ಹೊಡೆದರೂ ಅವನನ್ನು ಒಳಗೆ ತಂದು ಮಲಗಿಸಬೇಕೆಂದರೆ ಆತ ಪೂರಾ ಜ್ಞಾನ ಕಳೆದುಕೊಂಡಿರಬೇಕಿತ್ತು.  ಅಥವಾ ಮಿದುಳಿನ ಒಂದೇ ಒಂದು ತುಂಡು ಹೊರಬಂದು ಅತ ಅದುರುತ್ತಿರಬೇಕಿತ್ತು. ತಲೆಗೆ ಹೊಡೆತ ಬಿದ್ದು, ಬರೀ ಊತ ಇದ್ದು ಆತ ಮಾತಾಡುತ್ತಾ ಇದ್ದಲ್ಲಿ ಆತ ಖುರ್ಚಿಯಲ್ಲಿ ಕೂತಿರುತ್ತಿದ್ದ. ಬಹಳಷ್ಟು ಮಂದಿ ತುರಿಕೆ, ಗಂದೆಯೆಂದು ಪಾಳಯಕ್ಕೆ ಬಂದವರು, ಜಗಲಿಯ ಮೇಲೆ ಗಂಟೆಗಟ್ಟಲೆ ಕೂತು, ಕೆರೆದು ಕೆರೆದು ಸಾಕಾಗಿ, ಕೊನೆಗೆ ಧನ್ವಂತ್ರಿಯನ್ನು ನೋಡುವ ಅವಕಾಶ ಸಿಕ್ಕಾಗ, ಧನ್ಯರಾಗಿ ಮೈಮೇಲಿನ ಗಂದೆಗಳನ್ನು ತೋರಿಸಬೇಕೆಂದು ಬಟ್ಟೆ ಬಿಚ್ಚಿದಾಗ ಗಂದೆಗಳೆಲ್ಲಾ ಮಾಯವಾಗಿ ಉಭಯತ್ರಯರೂ ಕಕ್ಕಾಬಿಕ್ಕಿಯಾಗುವ ಪರಿಸ್ಥಿತಿ ಬಂದಿರುತ್ತಿತ್ತು.

 

ಜಗಲಿಗೆ ನಿತ್ಯ ಬರುವ ರೋಗಿಗಳು, ಒಳಗೆ ಹಾಸಿಗೆಯ ಮೇಲೆ ಮಲಗಿಸುವ ವ್ಯವಸ್ಥೆಯ ದೌರ್ಬಲ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ದರು.  ಮನೆಯಲ್ಲಿ ಒಬ್ಬನೇ ಇದ್ದು ಬೇಸರವಾಗಿ,  ದಿನಕ್ಕೆ ಮೂರುಗಂಟೆ ಪಾಳಯದಲ್ಲಿ ಹೊತ್ತುಕಳೆಯಲು ಬರುವ ಫ್ರಾಂಕ್ಲಿನ್ ಜಗಲಿಗೆ ಬಂದು `ಅಯ್ಯೋ, ಎದೆ ನೋವು' ಅನ್ನುತ್ತಿದ್ದ ಇಲ್ಲವೇ `ಇವತ್ತು ನನ್ನನ್ನು ನಾನೇ ಕೊಂದುಕೊಳ್ಳಬೇಕೆಂದಿದ್ದೇನೆ' ಎಂದುಬಿಟ್ಟರೆ ಕನಿಷ್ಟ ಜಗಲಿಯ ಮೇಲಿನ ಹಾಸಿಗೆಯಂತೂ ಗ್ಯಾರಂಟಿ.  ನಂತರ ಮೆಡಿಕಲ್ ವಿದ್ಯಾರ್ಥಿಯಾದಿಯಾಗಿ, ಹೃದಯರೋಗ ತಜ್ಞರ ತನಕ ಅಥವಾ ಸೈಕಿಯಾಟ್ರಿಸ್ಟ್ ತನಕ ಅಥವಾ ಆ ವಿಭಾಗದ ಕೌನ್ಸೆಲರ್ ತನಕ, ಆಯಾ ರೋಗಲಕ್ಷಣಕ್ಕನುಸಾರವಾಗಿ ಬಂದು ನೋಡಲು ಕನಿಷ್ಟ ಮೂರು ನಾಲ್ಕು ಗಂಟೆಯಂತೂ ಕರೆದು ಬಯ್ದು, ಬಯ್ಯಿಸಿಕೊಂಡರೆ ವಾರಕ್ಕೆರಡು ದಿನ ಆತನಿಗೆ ಸುಸೂತ್ರವಾಗಿ ಸಮಯ ಕಳೆದು ಹೋಗುತ್ತಿತ್ತು.

 

ಹೀಗೆ ಸಮಯ ಕಳೆಯುವುದಕ್ಕೆ ಪಾಳಯಕ್ಕೆ, ಪಾಳಯದ ಜಗಲಿಗೆ ರೋಗಿಗಳೆಂದು ಬರುವಂತಹ ಫ್ರಾಂಕ್ಲಿನ್ನನಂಥವರ ವಿಷಯ ಶ್ರೀಧರನಿಗೆ ಹೊಸದು.  ಇಂತಹ ಜಿಜ್ಞಾಸೆಯುಳ್ಳ ವಿಷಯವನ್ನು ಘೂಗೆ ಬಿಟ್ಟರೆ ಬೆಟ್ಟಿಯೇ ಆತನಿಗೆ ಸರಿಯಾಗಿ ವಿವರಿಸುತ್ತಿದ್ದಾಕೆ.  ಹೀಗಾಗಿಯೇ ಬೆಟ್ಟಿಯ ಪರಿಚಯ ಆತನಿಗಾಗಿದ್ದು.  ತಮ್ಮ ಪಾಡಿಗೆ ತಾನು ಒಂದು ದಿನ ಕೆಲಸ ಮಾಡಿಕೊಂಡಿದ್ದಾಗ ಇದ್ದಕ್ಕಿದ್ದ ಹಾಗೆ ಫ್ರಾಂಕ್ಲಿನ್ ಜಗಲಿಗೆ ಬಂದಿದ್ದ.  ಆತ ಹೊರಗೆ ಬೆಟ್ಟಿಯ ಹತ್ತಿರ ಏನೆಂದಿದ್ದನೋ ಅಥವಾ ಒಳಗೆ ಬಂದಮೇಲೆ ಮನಸ್ಸು ಬದಲಾಯಿಸಿದ್ದನೋ, ಒಟ್ಟು ಬೆಟ್ಟಿ ಬರೆದ ಚೀಟಿಯ ಮೇಲೆ `ಆತ್ಮಹತ್ಯಾ ಪ್ರಯತ್ನ/ಯೋಚನೆ' ಎಂದು ಬರೆದಿದ್ದಳು.  ಒಳಗೆ ಬಂದಮೇಲೆ ಅವನಿಗೆ ಅಂಥಹ ತೀವ್ರತರವಾದ ದೈಹಿಕ ಖಾಯಿಲೆಗಳು ಯಾವುದೂ ಇಲ್ಲವೆಂದು, ಆತ ಸೈಕಿಯಾಟ್ರಿ ವಾರ್ಡಿಗೆ ನೇರವಾಗಿ ಭರ್ತಿಯಾಗಬಹುದೆಂದೂ, ಶ್ರೀಧರನಾದಿಯಾಗಿ ಇತರ ಧನ್ವಂತ್ರಿಗಳು ನಿರ್ಧರಿಸಿ, ಸೈಕಿಯಾಟ್ರಿಸ್ಟ್‌ಗಳು ಪರೀಕ್ಷಿಸಲಿ ಎಂದು ಸೈಕಿಯಾಟ್ರಿಯ ರೆಸಿಂಡೆಂಟನ್ನು ಕರೆಸಿದಾಗ, ಆತ ಬಂದವನೇ `ಫ್ರಾಕ್ಲಿನ್ನನಿಗಿರುವುದು ಎದೆನೋವು' ಎಂದು ಕೈ ಝಾಡಿಸಿ ಹೋಗಿದ್ದ.

 

ಫ್ರಾಂಕ್ಲಿನ್ ಆ ಸೈಕಿಯಾಟ್ರಿ ರೆಸಿಡೆಂಟಿಗೆ ಏನು ಹೇಳಿದ್ದನೋ ಶ್ರೀಧರನಿಗೆ ಅರ್ಥವಾಗಲಿಲ್ಲ.  ಆದರೆ, ಅವನಿಗೆ ಪ್ರಕಾಂಡ ಕೋಪ ಬಂದಿತ್ತು.  ಆದರೆ, ತನ್ನ ಕೋಪ ತೀರಿಸಿಕೊಳ್ಳಲು ಈ ಸರಪಳಿಯಲ್ಲಿ ತನಗಿಂತ ಕೆಳಗೆ ಯಾರೂ ಇಲ್ಲದಿರುವುದನ್ನು ತಿಳಿದಿದ್ದ ಶ್ರೀಧರ ಸೀದಾ ಹೋಗಿ ಬೆಟ್ಟಿಯನ್ನೇ ಬಯ್ದು ಬಂದಿದ್ದ.  `ಎದೆನೋವಿಗೂ, ತಲೆಕೆಟ್ಟಿರುವುದಕ್ಕೂ ವ್ಯತ್ಯಾಸ ಗೊತ್ತಿಲ್ಲದ ಮೇಲೆ ಈ ಜಗಲಿಯ ಹೊರಗೆ ನಿಲ್ಲುವುದಕ್ಕೆ ಯಾವ ಅರ್ಹತೆಯೂ ಇಲ್ಲ' ಎಂದು ಗದರಿಕೊಂಡಿದ್ದ.  ಬೆಟ್ಟಿ ಸುಮ್ಮನೆ ನಕ್ಕಿದ್ದಳು.  ನಂತರ ಶೀಧರನೇ `ರೋಗಿ ಯಾವತ್ತೂ ನಿಜವನ್ನೇ ಹೇಳೋದು, ಅದು ನಿನಗೆ ಗೊತ್ತಿದೆ ಅಂತ ನಾ ತಿಳಕೋಬಹುದಾ? ಯಾಕೆಂದರೆ, ಅವ ಫ್ರಾಂಕ್ಲಿನ್ ಸೈಕಿಯಾಟ್ರಿಗೆ ಅಡ್ಮಿಟ್ ಆದಮೇಲೆ ಹೃದಯಾಘಾತವಾಗಿದ್ದರೆ ಅದಕ್ಕೆ ಯಾರು ಹೊಣೆ?' ಎಂದು ಕೂಗಾಡಿದ್ದ.  ಬೆಟ್ಟಿ `ಅಯ್ಯಾ, ಧನ್ವಂತ್ರಿ, ನಾನು ಬಡಪಾಯಿ ನರ್ಸು.  ಎಲ್ಲಿಯೂ ಸಲ್ಲದವಳೆಂದು ಇಲ್ಲಿ ಬೀದಿ ಮೇಲೆ ತಂದು ಬಿಟ್ಟಿದ್ದಾರೆ.  ಆತ ನನಗೆ ಆಸ್ಪತ್ರೆಯ ಜಗಲಿಯ ಮೇಲೆ ಬಂದು ಹೇಳಿದ್ದು, ಆತ್ಮಹತ್ಯೆ ಪ್ರಯತ್ನ ಮಾಡಬೇಕೆಂದಿದ್ದೇನೆ, ಅಂತ.  ಈತ ಜಗಲಿಯಿಂದ ಪಾಳಯದ ಒಳಗೆ ಹೇಗೆ ಬರಬೇಕೆಂದು ತಿಳಕೊಂಡಿದ್ದಾನೆ.  ಎದೆನೋವು ಅಂತಾನೆ, ಇಲ್ಲ ಯಾರನ್ನಾದರೂ ಕೊಲ್ಲಬೇಕು ಅಂತಲೋ, ತನ್ನನ್ನು ತಾನೇ ಕೊಂದುಕೊಳ್ಳಬೇಕು ಅಂತಲೋ ಇದ್ದೇನೆ ಅಂದು ಬಿಟ್ಟರೆ, ನೀವುಗಳು ಸೀದಾ ಒಳಗೆ ಸೇರಿಸ್ತೀರಿ ಅಂತ ಅವನಿಗೆ ಗೊತ್ತು.  ನೀನು ಏನೇ ಮಾಡಿದರೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.  ಇಲ್ಲಿ, ನನ್ನ ದಾಖಲೆಗಳ ಪ್ರಕಾರ ಆತ ಹೇಳಿದ್ದು ಹಾಗೆ.  ನನ್ನ ಮೇಲೆ ಹಾರಾಡ್ತೀಯಲ್ಲ, ನೀನು ದೊಡ್ಡ ಧನ್ವಂತ್ರಿ.  ನೀವು ಯಾಕೆ ಆತನ ಜೊತೆ ಸರಿಯಾಗಿ ಮಾತಾಡದೇ, ಅವನಿಗೆ ಎದೆನೋವು ಇದೆಯೋ ಇಲ್ಲವೋ ಪೂರಾ ಗ್ಯಾರಂಟಿ ಮಾಡಿಕೊಳ್ಳದೇ ಸೈಕಿಯಾಟ್ರಿಯವರನ್ನು ಕರೆಸಿದ್ದೆ.  ನಿನಗೆ ನಿನ್ನ ರೋಗಿಗಳನ್ನು ಸರಿಯಾಗಿ ನೋಡುವುದ ಹೇಗೆ ಅಂತ ನಾನು ಕಲಿಸಬೇಕಾ' ಅಂತ ಗದರಿಕೊಂಡಳು.

 

ಶ್ರೀಧರ ಹೋಗಿ ಫ್ರಾಂಕ್ಲಿನ್‌ನನ್ನು `ನಿಜ ಹೇಳು, ನಿನಗೆ ನಿನ್ನನ್ನು ಕೊಂದುಕೊಳ್ಳಬೇಕೆನ್ನಿಸಿದೆಯೋ ಅಥವಾ ಎದೆನೋವೋ?' ಎಂದು ಕೇಳಿದಾಗ, ಆತ `ಎದೆ ನೋಯುತ್ತಿರೋದರಿಂದ ಆತ್ಮಹತ್ಯೆ ಮಾಡಿಕೊಳ್ಳಬೇನಿಸಿದೆ' ಎಂದಿದ್ದ.  ಶ್ರೀಧರ ಮರುಮಾತಾಡದೇ ಬೆಟ್ಟಿಯ ಬಳಿಹೋಗಿ ಸಾರಿ ಹೇಳಿ ಬಂದಿದ್ದ.

 

ಆ `ಸಾರಿ'ಯ ನಂತರ ಭೇಟಿಯಾದದ್ದು ನಿಮ್ನನಗರದ ಇಟಾಲಿಯನ್ ರೆಸ್ಟುರೆಂಟಿನಲ್ಲಿ.  ಇಂಡಿಯಾದ ಹೊರಗಿನ ಊಟವೆಂದರೆ, ಗೋಬಿ ಮಂಚೂರಿ ಮತ್ತು ಚೌಮೀನುಗಳು ಮಾತ್ರ ಎಂದು ತಿಳಿದಿದ್ದ ಶ್ರೀಧರನಿಗೆ ಅಮೆರಿಕಾಕ್ಕೆ ಬಂದಮೇಲೆ ಪೀಟ್ಜಾ ಮತ್ತು ಲಸಾನಿಯಾಗಳ ಪರಿಚಯವಾಗಿತ್ತು.  ಬೆಟ್ಟಿಯಂತಹ ಹುಡುಗಿಯೊಬ್ಬಳು ತಮ್ಮ ಜಗಳವನ್ನು ಸ್ವಾಂತನಗೊಳಿಸುವ ನೆಪದಲ್ಲಿ ಮೊದಲ ಬಾರಿಗೆ ಊಟಕ್ಕೆ ಹೊರಗೆ ಕರೆದಾಗ, ಇಲ್ಲದ ಗೊಂದಲ ಬೇಡವೆಂದು ಇಟಲಿಯ ಊಟವನ್ನೇ ಮಾಡೋಣವೆಂದು ನಿರ್ಧರಿಸಿದ್ದ.  ಘೂಗೆಯ ಸಲಹೆಯ ಮೇರೆಗೆ ಇದ್ದ ಒಂದೇ ಒಂದು ಸೂಟನ್ನು ಘಮಘಮವೆನ್ನಿಸುವಂತೆ ಪರಿಮಳ ಬೀರಿಸಿಕೊಂಡು ಹೊರಟಿದ್ದ.

 

ಶ್ರೀಧರನಿಗೆ ಆಶ್ಚರ್ಯವಾಗಿತ್ತು.  ಒಂದು ರೋಗಿಯ ಎರಡು ರೋಗಲಕ್ಷಣಗಳ ಜಿಜ್ಞಾಸೆ ಒಂದು ಸಂಬಂಧಕ್ಕೆ ಮತ್ತು ತನ್ನ ಮೊದಲ ಡೇಟ್‌ಗೆ ನಾಂದಿ ಹಾಡಬಹುದೆಂದು ಆತ ಎಣಿಸಿರಲಿಲ್ಲ.  ಹೌದು, ಇದು ಶ್ರೀಧರನ ಮೊದಲ ಡೇಟು.  ಗುರುಕುಲದ ಗಲಾಟೆಯಲ್ಲಿ, ಪಾಳಯದ ಕೆಲಸದ ಅಮಲಿನಲ್ಲಿ ತನಗಿಂಥ ಅವಶ್ಯಕತೆಗಳಿದ್ದಾವೆ ಎಂದು ಶ್ರೀಧರನಿಗನಿಸಿದ್ದು ಘೂಗೆಯನ್ನು ನೋಡಿದ ಮೇಲೆಯೇ.  ಆದರೆ, ಅದು ಸಾಕಾರ ಪಡೆಯುತ್ತಿದ್ದುದು, ಈಗಲೇ.  ಫ್ರಾಂಕ್ಲಿನ್, ಬೆಟ್ಟಿಯ ಬಳಿ ಜಗಲಿಯಲ್ಲಿ ಎದೆನೋವಿದೆಯೆಂದು ಹೇಳದಿದ್ದುದಕ್ಕಾಗಿ ಆತನಿಗೆ ಧನ್ಯವಾದಗಳನ್ನು ಹೇಳಬೇಕೆಂದುಕೊಂಡ.  ಹಿಂದೆ ಗುರುಕುಲದ ಜಗಲಿಯ ಮೇಲೆ ಇಂಥ ಎಷ್ಟು ತಪ್ಪುಗಳಿಗೆ ಹೋಗಿ ಓಬಳೇಶನನ್ನು ಬಯ್ದು ಬಂದಿದ್ದೆ, ಎಂದು ಲೆಕ್ಕ ಹಾಕಿದ.  ಪ್ರತಿ ತಪ್ಪಿಗೆ ಬೆಟ್ಟಿಯ ಜತೆ ಒಂದು ಊಟ ಮಾಡಬಹುದಾದರೆ, ಓಬಳೇಶು ತನಗೆ ಜೀವನವಿಡೀ ಊಟ ಹಾಕಬೇಕಿತ್ತು, ಎಂದುಕೊಂಡ.  ಮತ್ತೆ ಸುಮ್ಮನೇ ಒಬ್ಬನೇ ನಕ್ಕ.

 

ಇಟಲಿಯ ಊಟ ಬರೀ ಊಟಕ್ಕೇ ನಿಲ್ಲಲಿಲ್ಲ.  `ಊಟ ಜೀರ್ಣವಾಗುವ ತನಕ ಬೇಕಾದರೆ ನನ್ನ ಅಪಾರ್ಟ್‌ಮೆಂಟಿನಲ್ಲೇ ಇರಬಹುದು' ಎಂದು ಬೆಟ್ಟಿ ಕರೆದಿದ್ದಳು.  ಶ್ರೀಧರನಿಗೆ ಊಟ ಜೀರ್ಣವಾಗಬೇಕಾದರೆ, ಬೆಟ್ಟಿಯ ಮನೆಗೆ ಏಕೆ ಹೋಗಬೇಕೆಂದು ಗೊತ್ತಾಗಲಿಲ್ಲ.  ಆದರೆ, ಹಾಗೆ ಕರೆದಾಗ ಹೋಗದಿರುವುದು ಸಭ್ಯತೆಯಲ್ಲ ಎಂದು ಅರಿಯುವಷ್ಟು ಬೆಳೆದಿದ್ದೇನೆ ಅಂತ ಅಂದುಕೊಂಡಿದ್ದ.

 

ಊಟವನ್ನು ಜೀರ್ಣಮಾಡಿಸುವ ಬೆಟ್ಟಿಯ ಈ ಹೊಸ ಪರಿಕಲ್ಪನೆ ಶ್ರೀಧರನಿಗೆ ಬಲುಬೇಗ ತುಂಬಾ ಇಷ್ಟವಾಗಿತ್ತು.  ಈಗ ತಾನೆ ಊಟ ಮುಗಿಸಿದ್ದರೂ ಎರಡೂ ಗ್ಲಾಸಿಗೆ ವೈನನ್ನು ಬಗ್ಗಿಸಿಕೊಂಡು ಬಂದಳು, ಬೆಟ್ಟಿ.  ಶ್ರೀಧರನಿಗೆ ಊಟವಾದಮೇಲೆ ಆಲ್ಕೋಹಾಲೋ, ಊಟಕ್ಕೆ ಮುಂಚೆ ಆಲ್ಕೋಹಾಲೋ ಎಂದು ಮತ್ತೆ ಗೊಂದಲ ಶುರುವಾಗಿತ್ತು.  ನೋಡನೋಡುತ್ತಿದ್ದಂತೆಯೇ ಶ್ರೀಧರನನ್ನು ಮೈಮೇಲೆ ಎಳಕೊಂಡಳು, ಬೆಟ್ಟಿ.  ಅವನ ಎರಡೂ ಕೈಗಳನ್ನು ತೆಗೆದುಕೊಂಡು ತನ್ನ ಎರಡೂ ದುಂಡಾದ ಮೊಲೆಗಳ ಮೇಲಿಟ್ಟುಕೊಂಡು ಸರ್ರನೆ ಜಾರಿದಳು.  ಗಿಲ್ಲೆಂದಳು, ಗಿಲ್ಲಿದಳು, ಮೆಲ್ಲಗೆ ಕಚ್ಚಿದಳು.  ಇಟಲಿ, ವೈನು, ಊಟ ನಂತರ ಜೀರ್ಣ ಮಾಡಿಸಲು ಅಪಾರ್ಟ್ಮೆಂಟ್, ಮೈಮೇಲೆಲ್ಲಾ ಹರಿದಾಡುವ ಬೆಟ್ಟಿಯ ಮೂಗು.  ಇದ್ದಕ್ಕಿದ್ದಂತೆ ಹುಟ್ಟುಡುಗೆಯಲ್ಲಿ ನಿಂತಿರುವ ಬೆಟ್ಟಿ.  ಪಾಳಯದ ಹೊರಗೆ, ಸ್ಟೆತೋಸ್ಕೋಪಿಲ್ಲದ ಕೈಗಳಿಂದ ಹೆಣ್ಣಿನ ಅಂಗಗಳ ಸ್ಪರ್ಶ ಆಗುತ್ತಿದ್ದುದ್ದು ಶ್ರೀಧರನಿಗೆ ಇದೇ ಮೊದಲು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com