ಆಧುನಿಕ ಕನ್ನಡ ಸಾಹಿತ್ಯದಲ್ಲಿ ದೇಸೀಯ ಸಂಸ್ಕೃತಿಯ
ಸತ್ವವನ್ನು ಶಕ್ತಿಶಾಲಿಯಾಗಿ ಬರವಣಿಗೆಗೆ ತಂದಿರುವ ಕಂಬಾರರು
ಒಟ್ಟು ೨೨ ನಾಟಕಗಳು, ೮ ಕವನ ಸಂಕಲನಗಳು ಮತ್ತು ೪
ಕಾದಂಬರಿಗಳನ್ನು ರಚಿಸಿದ್ದಾರೆ. ಅಲ್ಲದೆ ಚಕೋರಿ ಎಂಬ ಮಹಾಕಾವ್ಯ, ಜಾನಪದ,
ರಂಗಭೂಮಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ೧೪ ಸಂಶೋಧನಾ
ಕೃತಿಗಳನ್ನೂ ರಚಿಸಿದ್ದಾರೆ. ಹಂಪಿಯ ಕನ್ನಡ ವಿ.ವಿ.ಯ ಸ್ಥಾಪಕ
ಕುಲಪತಿಗಳಾಗಿ ಕರ್ತವ್ಯ ನಿರ್ವಹಿಸಿದ ಕಂಬಾರರು ಪ್ರಸ್ತುತ ವಿಧಾನಪರಿಷತ್
ಸದಸ್ಯರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷತೆ, ನವದೆಹಲಿಯ
ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷತೆ, ಕರ್ನಾಟಕ ಜಾನಪದ ಮತ್ತು
ಯಕ್ಷಗಾನ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇಂದ್ರ ಸಂಗೀತ
ಮತ್ತು ನಾಟಕ ಅಕಾಡೆಮಿ, ರಂಗಾಯಣಗಳ ಸದಸ್ಯತ್ವದ
ಗೌರವಗಳು ಇವರಿಗೆ ಸಂದಿವೆ. ಚಿಕಾಗೋ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ,
ಜಪಾನ್ ಮುಂತಾದೆಡೆಗಳ ಕೆಲವು ವಿ.ವಿ.ಗಳಲ್ಲಿ ಜಾನಪದ ಮತ್ತು
ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಕಂಬಾರರಿಗೆ ಕರ್ನಾಟಕ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ
ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಆಶಾನ್ ಪ್ರಶಸ್ತಿ, ಕೇಂದ್ರ ಸಂಗೀತ
ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ,
ಪದ್ಮಶ್ರೀ, ಕಬೀರ್ ಸಮ್ಮಾನ್ ಮುಂತಾದ ಪ್ರತಿಷ್ಠಿತ ಗೌರವ ಸಂದಿವೆ.
ಇವರ ಅನೇಕ ಕೃತಿಗಳು ಹಿಂದಿ, ಇಂಗ್ಲೀಷ್ ಸಹಿತ
ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕೆಲವು ಕೃತಿಗಳು ಚಲನಚಿತ್ರ,
ಕಿರುಚಿತ್ರ ಮತ್ತು ಟಿವಿ ಧಾರಾವಾಹಿಗಳಾಗಿ ಜನಪ್ರಿಯತೆ ಗಳಿಸಿವೆ.