Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 16 March 2007 03:03 PM

ಹೊಸ ನಾಳೆಯ ನಿರೀಕ್ಷೆಯಲ್ಲಿ...

* ಹರೀಶ್ ಕೆ.ಆದೂರು

ನೋಡ ನೋಡುತ್ತಿದ್ದಂತೆಯೇ ಹೊಸವರ್ಷಕ್ಕೆ ಪಾದಾರ್ಪಣೆ...ಅದು ನಮಗರಿವಿಲ್ಲದಂತೆಯೇ..! ಇಡೀ ಜೀವಕೋಟಿಯೇ ನಿದ್ರೆಯಲ್ಲಿರುವಾಗ ಕಾಲ ಜಾರಿ ಹೋಗಿರುತ್ತದೆ... ಹೊಸ ವರುಷಕ್ಕೆ ಪಾದಸ್ಪರ್ಷವಾಗಿರುತ್ತದೆ. ಎಲ್ಲವೂ ಆ ಕತ್ತಲೆಯೊಳು ಮುಗಿದಿರುತ್ತದೆ. ಬೆಳಕು ಹರಿಯುವ ವೇಳೆಗೆ ಹೊಸತನದ ಹೊಸವರುಷದ ಆಗಮನ. ಒಂದು ಅಂತ್ಯದ ಬೆನ್ನಲ್ಲೇ ಆದಿಯ ಆರಂಭ. ಅಂತ್ಯವಾದೊಡನೆಯೇ ಹೊಸ ಹುಟ್ಟು. ನಿದ್ರೆಯ ಮಂಪರಿನೊಳಗೆಯೇ ಈ ಬದಲಾವಣೆ... ನಮ್ಮ ನಿದ್ದೆ ಮುಂದುವರಿದಿರುತ್ತದೆ... ಈ ಎಲ್ಲಾ ಬದಲಾವಣೆಯ ನಡುವೆಯೇ! ಆ ಕ್ಷಣದಲ್ಲಿ ಅದೊಂದು ಊಹಿಸಲಸದಳವಾದ ಬದಲಾವಣೆ. ನಾವಿನ್ನೂ ಯೋಚಿಸದ, ಯೋಚನೆಗೂ ನಿಲುಕದ ಬದಲಾವಣೆ.

`ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ...
ಹೊಸ ವರುಷಕೆ..ಹೊಸ ಹರುಷವ
ಹೊಸತು ಹೊಸತು ತರುತಿದೆ...'
ಎಂಬ ಕವಿವಾಣಿಯಂತೆ !.

ಯುಗಾದಿ. ಇದು ಒಂದು ಹಬ್ಬವಲ್ಲ... ಹೊಸ ನಾಳೆಯ ನಿರೀಕ್ಷೆಯ ಕ್ಷಣ. ನಾಳೆಯ ಆಸೆಗಳು ನಮ್ಮೆಲ್ಲರ ಮನದಲ್ಲಿ ಪುಟಿದೇಳುವ ಸುಸಂದರ್ಭ. ಹೊಸ ನಾಳೆಗೆ ಹೊಸ ಹೊಸ ಆಸೆಗಳು... ಹೊಸತನದ ಬೊಗಸೆತುಂಬಿದ ಕಾತರದ ನಿರೀಕ್ಷೆಯೊಂದಿಗೆ...ನಾವಿರುತ್ತೇವೆ.

ಅರಿವಿಲ್ಲದಂತೆಯೇ ಬೆಳಕು ಹರಿದು ಕತ್ತಲೆ ಮತ್ತೆ ಆವರಿಸುತ್ತದೆ. ಆ ಸಮಯದಲ್ಲಿ ಒಂದು ದಿನ ಕಳೆದು ಹೋಗಿರುತ್ತದೆ; ಹಲವು ವಿಚಾರಗಳನ್ನು ಘಟನೆಗಳೊಂದಿಗೆ... ಜೊತೆ ಜೊತೆಗೆ ಆಯಸ್ಸಿನ ಒಂದೊಂದು ದಿನವೂ ಮುಗಿಯುತ್ತಾ ಎರಡಕ್ಷರದ ಸಾವು ಮೆಲ್ಲನೆ ಸನಿಹವಾಗುತ್ತಾ ಸಾಗಿಬರುತ್ತಿದೆ...

ಹೊಸ ವರುಷದ ಆಗಮನವಾಗುತ್ತಿದ್ದಂತೆಯೇ ಜೀವನದ ಒಂದು ವರ್ಷ ಸಂದಿರುತ್ತದೆ...ಎಲ್ಲವೂ ಕಾಲಯಾತ್ರೆಯ ಮಹಿಮೆ... ಎಂತಹ ವಿಪರ್ಯಾಸ!

ಹಳೆವರುಷದ ಕೊನೆಯಾಗಿ ಮತ್ತೆ ಯುಗಾದಿ ಬಂದಿದೆ... ಬೇವು ಬೆಲ್ಲಗಳ ಸಂಗಮದಂತೆ ಈ ಜೀವನ ಸಾಗಲಿ ಎಂಬ ಆಶಯವ ಹೊತ್ತು ತಂದಿದೆ. ಇದೀಗ ನಮ್ಮ ಮುಂದಿದೆ.

ಯುಗಾದಿ ಬಂತೆಂದರೆ ಕೇವಲ ಹೊಸ ಉಡುಗೆ ತೊಟ್ಟು, ಬೇವು ಬೆಲ್ಲಗಳ ಮೆದ್ದು ಸಂಭ್ರಮಿಸುವುದಷ್ಟೇ ಎಂಬಂತಾಗಿದೆ. ಅದು ಬದಲಾಗಬೇಕಾಗಿದೆ. ಹೊಸ ಆದರ್ಶಗಳು, ಹೊಸ ಜೀವನೋತ್ಸಾಹ, ಹೊಸ ಮೌಲ್ಯಗಳ ಉಗಮವಾಗಬೇಕಾಗಿದೆ. ಇದು ಇಂದಿನ ವೇಗದ ಯುಗಕ್ಕೆ ಅತೀ ಅವಶ್ಯಕವಾಗಿದೆ. ಮನುಷ್ಯ ಯಾಂತ್ರಿಕ ಯುಗದಿಂದ ಕೊಂಚ ಹೊರಬರಬೇಕಾಗಿದೆ. ಉದಾತ್ತ ಮೌಲ್ಯಗಳ ಬಗ್ಗೆ, ಜೀವನಾದರ್ಶಗಳ ಬಗ್ಗೆ, ಸನಾತನ ಸಂಸ್ಕೃತಿಯ ಬಗ್ಗೆ, ಸತ್ಕರ್ಮ, ಸತ್ ಚಿಂತನೆಗಳ ಬಗ್ಗೆ ಗಮನ ಹರಿಸಬೇಕಾಗಿದೆ. ಹೊಸ ವರುಷದಲ್ಲಿ ಹೊಸ ತನದ, ಹೊಸ ಮೌಲ್ಯಗಳ ಕ್ರೋಢೀಕರಣದ ಪಣ ತೊಡಬೇಕಾಗಿದೆ. ಈ ಕಾರ್ಯ ಸಮಾಜಕ್ಕೆ ಅತೀ ಅವಶ್ಯವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಇಂದು ಯುಗಾದಿಯ ಆಚರಣೆ ಆಗಬೇಕಾಗಿದೆ.

ಸಂದುಹೋದ ವರುಷದ ಮರುವಿಮರ್ಶೆಯಾಗಬೇಕಾಗಿದೆ. ಅಲ್ಲಾದ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸುವ, ಚಿಂತನೆಗೆ ಒರೆ ಹಚ್ಚುವ ಸುಸಂದರ್ಭ ಈ ಯುಗಾದಿ ಎಂಬ ಸ್ಪಷ್ಟ ಕಲ್ಪನೆ ಮನದಲ್ಲಿ ಮೂಡಬೇಕಾಗಿದೆ. ಇಂತಹ ಸಂಕಲ್ಪ ನಮ್ಮ ನಿಮ್ಮೆಲ್ಲರ ಮನದಲ್ಲಿ ಮೂಡಲಿ.. ಹೊಸ ವರುಷ ಹೊಸ ಹರುಷವನ್ನು ತರಲಿ...

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com