|
ಬೇಲೂರು ನಾಯಕರ `ಯಗಚಿ' ನಾಣ್ಯ ಪತ್ತೆ
* ಹರೀಶ್ ಕೆ.ಆದೂರು
ಮಂಗಳೂರು: ಅತ್ಯಪೂರ್ವವಾದ ಬೇಲೂರು ನಾಯಕರ ನಾಣ್ಯವೊಂದು
ಇದೀಗ ಪತ್ತೆಯಾಗಿದೆ. ಜೀವನದಿ `ಯಗಚಿ' ಹೆಸರನ್ನೊಳಗೊಂಡ ಈ
ನಾಣ್ಯ, ಕರ್ನಾಟಕದ ನಾಣ್ಯ ಇತಿಹಾಸದಲ್ಲೇ ಅಪರೂಪ ಮತ್ತು ಏಕೈಕ
ಉದಾಹರಣೆ.
ಬೇಲೂರಿನ ನಾಯಕ
ವಂಶಸ್ಥರು ಆ ನಾಡನ್ನು ಸಮೃದ್ಧಿಗೊಳಿಸಿದ `ಯಗಚಿ' ನದಿಯ ಹೆಸರಿನಲ್ಲಿ
ನಾಣ್ಯ ಮುದ್ರಿಸಿದ್ದಾರೆ. ತನ್ಮೂಲಕ ನದಿಯೊಂದಕ್ಕೆ ಕೃತಜ್ಞತೆಯನ್ನು
ಸಲ್ಲಿಸಿದ್ದಾರೆ. ಅಂತಹ ಅತ್ಯಪೂರ್ವ ನಾಣ್ಯ ಇದೀಗ ಖ್ಯಾತ ನಾಣ್ಯ ಸಂಗ್ರಾಹಕ,
ಸಂಶೋಧಕ ಎಂ.ನಿತ್ಯಾನಂದ ಪೈ ಸಂಗ್ರಹದಲ್ಲಿದೆ. ಈ ನಾಣ್ಯ ಬೇಲೂರಿನಲ್ಲಿ
ದೊರಕಿದ್ದು, ಆ ಹಿನ್ನಲೆಯಲ್ಲಿ ಬೇಲೂರು ನಾಯಕರೇ ಇದನ್ನು
ಟಂಕಿಸಿರಬಹುದೆಂದು ಹೇಳಲಾಗಿದೆ. ಬೇಲೂರು ನಾಯಕರನ್ನು ಬಲಂನಾಯಕರು,
ಐಗೂರು ನಾಯಕರು, ಹೊಳೆನರಸೀಪುರ ಪ್ರಭುಗಳೆಂದೂ
ಕರೆಯಲಾಗುತ್ತದೆ.

ಬೇಲೂರು ನಾಯಕರ
`ಯಗಚಿ' ತಾಮ್ರ ನಾಣ್ಯ. ಎಡಬದಿಗೆ ಮುಖಮಾಡಿ ನಿಂತ ಬಸವನ ಚಿತ್ರ
ಹಾಗೂ `ಯಗಚಿ' ಎಂಬ ಕನ್ನಡ ಲಿಪಿಯನ್ನೂ ಕಾಣಬಹುದು.
ವೃತ್ತಾಕಾರದ
ತಾಮ್ರದ ನಾಣ್ಯ ಇದಾಗಿದ್ದು, ೧.೨ ಸೆಂಟೀಮೀಟರ್ ವ್ಯಾಸವನ್ನೊಳಗೊಂಡಿದೆ.
೧.೧೨೦ ಗ್ರಾಂ ತೂಕ ಹೊಂದಿದೆ. ಮುಂಬದಿಯಲ್ಲಿ ಎಡಬದಿಗೆ ಮುಖಮಾಡಿ ನಿಂತಿರುವ
ಬಸವನ ಚಿತ್ರವಿದ್ದು, ಬಸವನ ಚಿತ್ರ ನಾಣ್ಯದ ಗಾತ್ರಕ್ಕಿಂತಲೂ ತುಸು
ದೊಡ್ಡದಾಗಿರುವುದರಿಂದ ಬಸವನ ಮುಖದ ಭಾಗ ನಾಣ್ಯವನ್ನು
ಟಂಕಿಸುವಾಗ ಮೂಡಿಬಂದಿಲ್ಲ. ಹಿಂಬದಿಯಲ್ಲಿ ಎರಡು ಸಮಾನಾಂತರ
ಗೆರೆಗಳ ಮಧ್ಯೆ `ಯಗಚಿ' ಎಂದು ೧೫-೧೬ನೇ ಶತಮಾನದ ವಿಜಯನಗರ
ಕಾಲದ ಕನ್ನಡ ಲಿಪಿಯಲ್ಲಿ ಮೂಡಿಸಲಾಗಿದೆ. ಸಮಾನಾಂತರ ಗೆರೆಯ
ಹೊರಬದಿಯಲ್ಲಿ ಚುಕ್ಕೆಗಳ ಸಾಲು ಕಂಡು ಬರುತ್ತದೆ.
ಈ ನಾಣ್ಯವನ್ನು
ಬೇಲೂರ ಯಾವ ನಾಯಕರು ಟಂಕಿಸಿದ್ದಾರೆಂದು ಹೇಳಲು ಕಷ್ಟ.
ಕೆಲವೊಂದು ಊಹೆಗಳ ಪ್ರಕಾರ ಕರ್ನಾಟಕದ ಸಾಮಂತರು ತಮ್ಮ
ಪ್ರಭುಗಳ ನಾಣ್ಯಗಳ ಮಾದರಿಯಲ್ಲಿಯೇ ನಾಣ್ಯಗಳನ್ನು ಮುದ್ರಿಸಿದ
ಉದಾಹರಣೆಗಳು ಚಾಳುಕ್ಯರ ಕಾಲದಲ್ಲಿ ಕಾಣಸಿಗುತ್ತದೆ.
ವಿಜಯನಗರ
ಸಾಮ್ರಾಜ್ಯದ ನಾಣ್ಯಗಳು ಅವುಗಳ ವೈವಿಧ್ಯತೆಯಿಂದ ದೇವ,
ದೇವತೆಗಳ ಚಿತ್ರಗಳಿಂದ, ಧಾರ್ಮಿಕ ಚಿಹ್ನೆಗಳಿಂದ, ಸುಂದರ
ಬರಹಗಳಿಂದ, ಕಲಾತ್ಮಕತೆ, ತಾಂತ್ರಿಕ ಮೇಲ್ಮೈಗಳಿಂದ ಜನಮನ್ನಣೆ
ಪಡೆದಿತ್ತು. ಇವೆಲ್ಲವುಗಳನ್ನು ನೋಡುವಾಗ `ಯಗಚಿ' ಹೆಸರಿನ ಈ
ನಾಣ್ಯವೂ, ಅದರ ಹಿಂಭಾಗದಲ್ಲಿರುವ ವಿನ್ಯಾಸವು ವಿಜಯನಗರದ
ಅಚ್ಯುತರಾಯನ ತಾಮ್ರದ ನಾಣ್ಯವನ್ನೇ ಹೋಲುತ್ತದೆ.
ಯಗಚಿ ನದಿ
ಸಮೃದ್ಧವಾಗಿ ತುಂಬಿ ಹರಿಯುತ್ತಿದ್ದ ಹಿನ್ನಲೆಯಲ್ಲಿ ಹೊಯ್ಸಳರು
ತಮ್ಮ ಸಾಮ್ರಾಜ್ಯದ ರಾಜಧಾನಿಯನ್ನು ಶಶಕಪುರದಿಂದ ಬೇಲೂರಿಗೆ
ವರ್ಗಾಯಿಸಿದರು. ಬೇಲೂರಿನ ಸಮಗ್ರ ಅಭಿವೃದ್ಧಿಗೆ `ಯಗಚಿ' ಪೂರಕ
ಕಾರಣವಾಯಿತು. ಇದಕ್ಕಾಗಿಯೇ ಈ ನದಿಯ ಬಗ್ಗೆ ಭಕ್ತಿ,
ಕೃತಜ್ಞತೆಗಳೆರಡೂ ಹೊಯ್ಸಳರಿಗಿತ್ತು.
ಯಗಚಿ ನದಿಯು
ಬದರಿ ಎಂಬ ಹೆಸರಿನಲ್ಲೂ ಪ್ರಸಿದ್ಧಿ. ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿಯಲ್ಲಿ
ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು, ಬೇಲೂರು ತಾಲೂಕಿನ ನಿರಿಘಟ್ಟ ಎಂಬಲ್ಲಿ
ಹಾಸನ ಜಿಲ್ಲೆ ಪ್ರವೇಶಿಸುತ್ತದೆ. ಅಲ್ಲಿಂದ ಗೊರೂರು ಗ್ರಾಮದ ಸನಿಹ
ಹೇಮಾವತಿ ನದಿಯನ್ನು ಸೇರಿಕೊಳ್ಳುತ್ತದೆ. ಈ ನದಿಯ ಉದ್ದ ೭೫
ಕಿಲೋ ಮೀಟರ್. ವಾಟೆ ಹೊಳೆ ಮತ್ತು ಬೀರಂಬೆಹಳ್ಳ ಯಗಚಿಯ ಉಪ
ನದಿಗಳು. ಈ ನದಿಯಿಂದಲೇ ಬೇಲೂರು, ಹಾಸನ ಪಟ್ಟಣಗಳಿಗೆ
ಕುಡಿಯುವ ನೀರು ಸರಬರಾಜಾಗುತ್ತದೆ.
|