ಓದುಗರ ಪತ್ರಗಳು
ಪತ್ರಿಕೆಗೆ ತನ್ನದೇ
ಆದ ರಾಜಕೀಯ ನಿಲುವು ಅಗತ್ಯ
ಮಾನ್ಯರೆ,
`ವಿಕ್ರಾಂತ ಕರ್ನಾಟಕ' ವಾರಪತ್ರಿಕೆಗೆ ನೀವು ಗೌರವ ಸಂಪಾದಕರಾಗಿ
ನೇಮಕಗೊಂಡಿರುವುದು ನಮಗೆಲ್ಲ ಸಂತೋಷ ತರುವ ಸಂಗತಿಯಾಗಿದೆ.
ಪತ್ರಿಕೋದ್ಯಮದಲ್ಲಿ ನಿಮ್ಮ ವಿಶಿಷ್ಟ ಬರಹಗಳು ಮತ್ತು ನೀವು ಬಳಸುವ ಭಾಷೆ,
ಓದುಗರ ಮನಸೂರೆಗೊಂಡಿವೆ.
ನಿಮ್ಮ ಪ್ರಬುದ್ಧ ಬರಹಗಳು ಹೆಚ್ಚುಹೆಚ್ಚು ವಿಕ್ರಾಂತ ಕರ್ನಾಟಕದಲ್ಲಿ ಮೂಡಿ ಬರಲಿ ಎಂದು
ಆಶಿಸುತ್ತೇನೆ.
- ಜಿ.ಪಿ. ಮೂರ್ತಿ
ಮಂಡ್ಯ
*
ಸಂಪಾದಕರಿಗೆ,
ನಿಮ್ಮ ಪತ್ರಿಕೆ
ಪ್ರಾರಂಭವಾದಾಗಿನಿಂದ ನಾನು ಓದುತ್ತಿದ್ದೇನೆ. ತುಂಬಾ ಇಷ್ಟವಾಗಿದೆ. ಇಂಗ್ಲಿಷ್‌ನ ವೀಕ್
ಪತ್ರಿಕೆಗೆ ಹೋಲಿಸುತ್ತಿದ್ದೆನು. ಮತ್ತು ಹಲವಾರು ಜನರನ್ನು ಪತ್ರಿಕೆಗೆ
ಓದುಗರನ್ನಾಗಿಸಲು ಉತ್ತೇಜಿಸಿದ್ದೆನು. ಆದರೆ ಬರುಬರುತ್ತಾ ಪತ್ರಿಕೆಯ ಬಳಗಕ್ಕೆ
ಬಳಗವೇ ಬದಲಾಗುತ್ತಾ ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಮೊದಲು ಸತ್ಯಮೂರ್ತಿ
ಆನಂದೂರು ಈಗ ರವೀಂದ್ರ ರೇಷ್ಮೆ. ಹೀಗೆ `ಲಂಕೇಶ್ ಪತ್ರಿಕೆ'ಯವರು `ವಿಕ್ರಾಂತ
ಕರ್ನಾಟಕ'ಕ್ಕೆ ನುಸುಳುತ್ತಿದ್ದಾರೆ. ಪರಿಣಾಮ ಸ್ಪಷ್ಟವಾದದ್ದು. ಮೊದಲ ವಾರವೇ
ಪೇಜಾವರ ಶ್ರೀಗಳ ವಿರುದ್ಧ ಲೇಖನ ಪ್ರಕಟವಾಗಿದೆ. ಯಥಾ ಪ್ರಕಾರ `ಲಂಕೇಶ್
ಪತ್ರಿಕೆಯ'ಯ ಮತ್ತೊಂದು ರೂಪವಾಗುವುದರತ್ತ `ವಿಕ' ಸಾಗಿದೆ. ದಯವಿಟ್ಟು
ಬಿ.ಕೆ.ಶಿ, ಜಿ.ಕೆ. ಗೋವಿಂದರಾವ್, ಯು.ಆರ್. ಅನಂತಮೂರ್ತಿಯವರನ್ನು ಸಹಾ ಪತ್ರಿಕಾ
ಬಳಗಕ್ಕೆ ಸೇರಿಸಿಕೊಂಡರೆ ಪತ್ರಿಕೆಯ ಹೆಸರು ಸಹಾ ಬದಲಿಸಿ `ಬುದ್ಧಿಜೀವಿ ಕರ್ನಾಟಕ'
ಎಂದು ಇಡಬಹುದು. ನಾವು ಮೊದಲಿನಿಂದ ಬಂದಂತಹ ಪತ್ರಿಕೆಯನ್ನು ಆಶಿಸುತ್ತೇವೆ.
ಆದರೆ ಲಂಕೇಶ್ ಬಳಗದ ಜನರ ಪತ್ರಿಕೆಯನ್ನಲ್ಲ. ಬರುಬರುತ್ತಾ ಪತ್ರಿಕೆ ತನ್ನತನ
ಕಳೆದುಕೊಳ್ಳುವ ಲಕ್ಷಣ ಕಾಣಿಸುತ್ತಿದೆ. ಬೇಕಿದ್ದರೆ ಓದುಗರಿಂದ ಅಭಿಪ್ರಾಯ ಕೇಳಿರಿ.
ನಿಮ್ಮ ಓದುಗ ಮಿತ್ರ.
- ಎಸ್.ಎಲ್.ವಿ. ಅನಿಲಕುಮಾರ್
ಮುದಗಲ್
*
`ವಿಕ್ರಾಂತ ಕರ್ನಾಟಕ'
ವಾರಪತ್ರಿಕೆಯ ಕೆಲವು ಸಂಚಿಕೆಗಳನ್ನು ಓದಿರುವೆ. ಬಣ್ಣದ ಚಿತ್ರಗಳ ಭರಾಟೆಯಲ್ಲಿ
ಸಾಹಿತ್ಯ ಸೊರಗಿತ್ತು. ಪತ್ರಿಕೆಯನ್ನು ರೂಪಿಸುವುದರಲ್ಲಿ ತಮಗೆ ಅನುಭವವಿದೆ. ಎಲ್ಲ
ದೃಷ್ಟಿಕೋನಗಳು ಅಂತಿಮವಾಗಿ ರಾಜಕೀಯವಾಗಿರುತ್ತವೆ. ಪತ್ರಿಕೆಗೂ ಒಂದು ರಾಜಕೀಯ
ನಿಲುವು ಇರಬೇಕೆಂದು ನಮಗೆಲ್ಲ ಗೊತ್ತು. `ವಿಕ್ರಾಂತ ಕರ್ನಾಟಕದ ಉದ್ದೇಶ ಏನು
ಅಂತ ಮೊದಲ ಸಂಚಿಕೆಗಳಿಂದ ಅರಿಯುವುದು ಕಷ್ಟವಾಯಿತು. ತಾವು ರೂಪಿಸಿರುವ
ಸಂಚಿಕೆಗಳು ಖಂಡಿತ ಆರೋಗ್ಯಕರವಾಗಿರುತ್ತವೆಂದು ಭಾವಿಸುವೆ.
ಕರ್ನಾಟಕದಲ್ಲಿ
ಆತ್ಮಹತ್ಯೆ ಮಾಡಿಕೊಂಡ ರೈತರ ಸಮಗ್ರ ವರದಿಯೊಂದು ಪ್ರಕಟಿಸಿರಿ.
ಜಾಗತೀಕರಣದಿಂದ ಬಲಿಯಾಗಿರುವ ಕ್ಷೇತ್ರಗಳ ಸ್ಥಿತಿಯನ್ನು ಜನರಿಗೆ ತಿಳಿಸಬೇಕು.
ಉತ್ತರ ಕರ್ನಾಟಕದ ಅನೇಕ ತಾಲೂಕುಗಳಲ್ಲಿ `ಸುವರ್ಣ ಕರ್ನಾಟಕ ವರ್ಷಾಚರಣೆ'ಯ
ಅರಿವೇ ಇಲ್ಲ.
ಬೆಂಗಳೂರಿನ
ಅಧಿಕಾರಸ್ಥರಲ್ಲಿದೆ.
- ಅಮರೇಶ ನುಗಡೋಣಿ
*
ಸಂಪಾದಕರಿಗೆ,
`ವಿಕ್ರಾಂತ ಕರ್ನಾಟಕ' ಚೆನ್ನಾಗಿ ಮೂಡಿಬರುತ್ತಿದೆ. ಈ ನಡುವೆ ನೀವು
ಅನಿವಾರ್ಯವಾಗಿ ಮಾಡಿಕೊಂಡ ಬದಲಾವಣೆಗಳನ್ನು ಕೂಡ ಗಮನಿಸಿದ್ದೇನೆ. ನಿಜ...
`ಆಹಾ'ಕ್ಕಿಂತ `ಆಹಾರ' ಮುಖ್ಯ. `ಹಾರ' ಕ್ಕಿಂತ `ಆಹಾರ' ಅಗತ್ಯ. `ವಾಸ್ತವ'ದ ಸವಾಲು,
ಸೆಣಸಾಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಿಮ್ಮಲ್ಲಿದೆ. ಶುಭಕಾಮನೆಗಳು.
- ಆರೂರು ಲಕ್ಷ್ಮಣಶೇಟ್
ಹುಬ್ಬಳ್ಳಿ
`ವಿಕ್ರಾಂತ ಕರ್ನಾಟಕ' ಪತ್ರಿಕೆಯ
ಡಿಸೆಂಬರ್ ೧೫ರ ಸಂಚಿಕೆಯಲ್ಲಿ ಪ್ರಕಟವಾದ ಸತ್ಯಮೂರ್ತಿ ಆನಂದೂರು ಅವರ ಕಥೆ
`ಯಾರದೋ ಕೊಲೆ ಇನ್ಯಾರಿಗೋ ಹಣ', ಒಂದು ಅಪೂರ್ವವಾದ ಸಾಂದರ್ಭಿಕ ಕಥೆ.
ಇದೊಂದು ಹೊಸತನದ ವಸ್ತುವನ್ನು ಆಯ್ದುಕೊಂಡು ಬರೆದ ಕಥೆಯೂ
ಹೌದು!
ಸಣ್ಣಕಥೆಗೆ ವಸ್ತು ನಮ್ಮ ಬದುಕಿನ ವಠಾರದಲ್ಲೇ ಇರುವುದು ಇಲ್ಲಿ ಗಮನಾರ್ಹ.
ಆದರೆ ಅದನ್ನು ಕಾಣುವ ಅಂತರ್ ದೃಷ್ಟಿ ಕಥೆಗಾರನಿಗಿದ್ದರೆ ಕಥೆಗಳು ನಮ್ಮ
ಜೀವನಕ್ಕೇ ಸಂಬಂಧಿಸಿರುವುದನ್ನು ಗುರುತಿಸಿ ವಿಷಯದ ಆಯ್ಕೆ ಸುಲಭಸಾಧ್ಯ
ಎಂಬುದಕ್ಕೂ ಈ ಕಥೆ ಸಾಕ್ಷಿರೂಪದಲ್ಲಿದೆ.
ನೈತಿಕ ಮತ್ತು ಅನೈತಿಕ ಅನ್ನುವುದು ನಾವು ಪ್ರಕಟಪಡಿಸುವ ಗಾಂಧಿವಾದದ ಅಹಿಂಸಾ
ನೀತಿಗೆ ಸಂಬಂಧಿಸಿದ್ದೋ? ಅಲ್ಲಾ, ದಾವೂದ್ ಮಾದರಿಯ ಹಿಂಸೆಗೆ ಸಹವರ್ತಿಯಾದುದೋ?
ಇದು ಅರ್ಥವಾಗದ ಪ್ರಶ್ನೆ. ಈ ದ್ವಂದ್ವ ನಡವಳಿಕೆಯನ್ನೇ ಪ್ರಶ್ನಿಸುತ್ತಲೂ ಇದ್ದೇವೆ.
ಉತ್ತರ ಹುಡುಕುತ್ತಲೂ ಇದ್ದೇವೆ.
ಆದರೆ ಮನುಷ್ಯ ಬದುಕುತ್ತಿರುವುದು ಮಾತ್ರ ಆತ್ಮ ವಂಚನೆಯಲ್ಲಿ
ಎನ್ನುವ ಸತ್ಯವನ್ನೂ ಈ ಕಥೆ, ಸ್ಪಷ್ಟವಾಗಿ ವ್ಯಕ್ತಪಡಿಸುವಲ್ಲಿ ಗೆದ್ದಿದೆ.
ಇವೆಲ್ಲ ಕಾರಣದಿಂದ ಮತ್ತು ಪ್ರಸ್ತುತದಲ್ಲಿ ನಾವೆಲ್ಲಾ ಬದುಕುವ ವಿಕಟ
ಸ್ವರೂಪವನ್ನೇ ಎತ್ತಿ ತೋರಿಸುವ ಈ ಕಥೆಯನ್ನು ಓದುಗರಿಗೊಪ್ಪಿಸಿದ ಸತ್ಯಮೂರ್ತಿ
ಆನಂದೂರು ಅವರಿಗೆ ಎರಡು ಮೆಚ್ಚುಗೆಯ ಮಾತುಗಳನ್ನು ಒಪ್ಪಿಸಬೇಕಾದುದು
ಓದುಗನಾದ ನನ್ನ ಕರ್ತವ್ಯವೆಂದೇ ತಿಳಿದು ಇದಿಷ್ಟು ಬರೆದಿರುತ್ತೇನೆ.
`ವಿಕ್ರಾಂತ ಕರ್ನಾಟಕ' ಪತ್ರಿಕಾ ಕ್ಷೇತ್ರದಲ್ಲಿ ಒಂದು ವಿಭಿನ್ನ ಛಾಪು
ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂಬುದನ್ನು ನಾನು ಗಮನಿಸಿರುವೆ. ಜನಶಿಕ್ಷಣಕ್ಕೆ
ಪೂರಕವಾದ ಆದರ್ಶವನ್ನು `ವಿಕ್ರಾಂತ ಕರ್ನಾಟಕ' ಗಮನಿಸಿದೆ ಎಂಬುದೂ ನನ್ನ ಅನಿಸಿಕೆ.
- ಕೆ.ಜೆ. ಶೆಟ್ಟಿ
ಕಡಂದಲೆ
*
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಸತ್ಯಮೂರ್ತಿಯವರಿಗೆ ಪ್ರೀತಿಪೂರ್ವಕ ಪ್ರಣಾಮಗಳು...
ತಮ್ಮ ಆರೋಗ್ಯಕರ ಆಲೋಚನೆಯಲ್ಲಿ ಅರಳಿದ `ವಿಕ್ರಾಂತ ಕರ್ನಾಟಕ' ಪತ್ರಿಕೆ
ಪ್ರಥಮ ಸಂಚಿಕೆಯಲ್ಲೇ ಗೆದ್ದುಬಿಟ್ಟಿತು. ಈ ಕಾರಣಕ್ಕೆ ಪ್ರತಿವಾರ ನಮ್ಮ ಮನೆಯ
ಪ್ರೀತಿಯ ಅತಿಥಿ ಎಂದೇಳಲು ಖುಷಿ ಎನಿಸಿದೆ.
ಪ್ರತಿಪುಟಗಳು ಪಳ್ಳೆಂದು ಹೊಳೆಯುವುದರ ಜತೆಗೆ ವೈವಿಧ್ಯಮಯವಾಗಿ
ಸಕಾರಾತ್ಮಕವಾಗಿ ಮನಸೆಳೆಯುವ ವಿಷಯಗಳು ರಂಜಿಸಿ ಚಿಂತನೆಗೀಡು
ಮಾಡುವುದರಲ್ಲಿ ಯಶ ಸಾಧಿಸುತ್ತಿದೆ.
ಹೀಗಾಗಿ ವಿಕ್ರಾಂತ ಕರ್ನಾಟಕವನ್ನು ಕಾತುರದಿಂದ ಕಾಯುವ ಲಕ್ಷಾಂತರ ಓದುಗರಲ್ಲಿ
ನಾನು ಮೊದಲಿಗ ಎಂದರೆ ಅತಿಶಯವಲ್ಲ. ಉತ್ತಮ ಗುಣ ಮಟ್ಟದ ಜನಪರ ಕಾಳಜಿಯ
ಚಿಂತನಶೀಲ ಪತ್ರಿಕೆಯನ್ನು ನಮ್ಮ ನಾಡಿನ ಓದುಗರು ಕೈಬಿಟ್ಟಿಲ್ಲ ಎಂಬುದಕ್ಕೆ ನೀವು
ಕಾಣುತ್ತಿರುವ ಯಶಸ್ಸೇ ನೇರ ಸಾಕ್ಷಿ!
- ಸಿದ್ದಾಪುರ ಶಿವಕುಮಾರ್
ಚಳ್ಳಕೆರೆ
*
ಸಂಪಾದಕರಿಗೆ ನಮಸ್ಕಾರ.
ವಿಕ್ರಾಂತ ಕರ್ನಾಟಕಕ್ಕೆ ಶುಭಾಕಾಂಕ್ಷೆಗಳು. ಜೊತೆಗೆ ಅದನ್ನು ಸಮರ್ಥವಾಗಿ
ಮುನ್ನಡೆಸುತ್ತಿರುವ ಹೊಣೆಹೊತ್ತ ನಿಮಗೂ.
ವಾರದಿಂದ ವಾರಕ್ಕೆ ವಿಭಿನ್ನವಾಗಿ ಹೊರಬರುತ್ತಿರುವ ಸಂಚಿಕೆಗಳು ಮನಕ್ಕೆ ಮುದ
ನೀಡುವುದರೊಂದಿಗೆ, ಜ್ಞಾನ-ವೈಚಾರಿಕತೆಗಳನ್ನೂ ಬೆಳೆಸಲು ಸಹಕರಿಸುವಂತಿವೆ.
ಆದರೂ, ಇಂದಿನ ಯಾಂತ್ರಿಕತೆಯ ಬದುಕಿನಲ್ಲಿ, ಆರೋಗ್ಯದಿಂದಿರಲು `ಲಾಫ್ಟರ್
ಕ್ಲಬ್'ಗಳು ಅಲ್ಲಲ್ಲಿ ತಲೆ ಎತ್ತಿರುವ ಪರಿಸ್ಥಿತಿಯಲ್ಲಿ ಹಾಸ್ಯರಸಕ್ಕೆ ತುಸು ಹೆಚ್ಚಿನ
ಸ್ಥಾನ ಬೇಕಿತ್ತೆನಿಸುವುದಿಲ್ಲವೇ? ವ್ಯಂಗ್ಯಚಿತ್ರ, ನಗೆಹನಿ, ವಿನೋದ ಪ್ರಬಂಧಗಳೂ
ಬರಲೆಂದು ನಮ್ರಳಾಗಿ ಆಶಿಸುತ್ತೇನೆ.
ಕುಟುಂಬದ ಎಲ್ಲ ಸದಸ್ಯರಿಗೂ ರುಚಿಸುವ ಅಡುಗೆ! ಸರಳ ಭಾಷೆಯ ಬೊಳುವಾರರ
`ಪಾಪುಗಾಂಧಿ...'ಯಂತೂ ವಿಶಿಷ್ಟ!
ಉತ್ತಮ ಪತ್ರಿಕೆಯೊಂದನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
- ಟಿ.ಎಸ್. ಅಂಬುಜಾ
ಉಡುಪಿ
*
ಮಾನ್ಯರೆ,
`ವಿಕ್ರಾಂತ ಕರ್ನಾಟಕ'ದ ದಸರಾ ಸಂಚಿಕೆಯನ್ನು ಕೊಂಡು ಓದಿದೆ. ಪತ್ರಿಕೆ ಹಿಡಿಸಿತು.
ಮುದ್ರಣ ಸುಂದರವಾಗಿದೆ. ರಾಜ ಮಹಾರಾಜರ ಕಾಲದಲ್ಲಿ ದಸರಾ ಆಚರಣೆ ಹೇಗಿತ್ತು.
ಜನ-ಸಾಮಾನ್ಯರ ಕಾಲದಲ್ಲಿ ಹೇಗಿದೆ. ರಾಜಕೀಯವಾಗಿ ಪುಢಾರಿಗಳು ಇದನ್ನು ಹೇಗೆ
ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸವಿಸ್ತಾರವಾಗಿ, ಮಾರ್ಮಿಕವಾಗಿ ಹಲವು ಲೇಖಕರು
ಬರೆದಿದ್ದಾರೆ. ಮೆಚ್ಚುಗೆಯಾಯಿತು. ಇಂತಹ ಒಂದು ಪತ್ರಿಕೆಯ ಅವಶ್ಯಕತೆ
ಬಹಳವಿತ್ತು. ತಾವು ಮಾಡಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸುದ್ದಿ ವಿಶ್ಲೇಷಣೆ
ನಿಷ್ಪಕ್ಷವಾಗಿರಲಿ. ಶುಭವಾಗಲಿ ಎಂದು ಹಾರೈಸುತ್ತೇನೆ.
- ಕೇಶವ ಉಮರ್ಜಿ
ಜಮಖಂಡಿ
*
ಸತ್ಯಮೂರ್ತಿ ಆನಂದೂರು ಅವರಿಗೆ,
ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ೨-೩ ಸಂಚಿಕೆಗಳು ತಲುಪಿವೆ. ಓದಿದೆ.
ಕೃತಜ್ಞನಾಗಿದ್ದೇನೆ.
ಪತ್ರಿಕೆ ಪ್ರಾರಂಭವಾಗುವ ಮುನ್ನ ನೀವು ಅಭಿಪ್ರಾಯ ಕೇಳಿ ಬರೆದಿದ್ದಕ್ಕೆ ನಾನು
ಉತ್ತರಿಸಿದ್ದೆ. ಆ ಪತ್ರ ನಿಮಗೆ ಮುಟ್ಟಿದೆಯೋ ಇಲ್ಲವೋ ಗೊತ್ತಾಗಲಿಲ್ಲ.
ಪತ್ರಿಕೆಯಲ್ಲಿ
ವಿವಿಧತೆ ಇದೆ. ಎಲ್ಲರಿಗೂ ಆಕರ್ಷಕ ಆಗುವ ಹಾಗೆ ಬೇರೆ ಬೇರೆ ಕ್ಷೇತ್ರಗಳಿಗೆ
ಸಂಬಂಧಿಸಿದಂತೆ ಬರೆದ ಪುಟ್ಟಪುಟ್ಟ ಲೇಖನಗಳು ಚುರುಕಾಗಿ ಹೊಸತನವನ್ನು
ತೋರುತ್ತಿವೆ. ಆದುದರಿಂದಲೇ ಯಥಾ ಪ್ರಕಾರ ಪತ್ರಿಕೆಗಳ ಬದಲಾಗಿ ಇದು ಬೇರೆ
ತರಹ ಇದೆ ಎಂದು ಖಂಡಿತ ಹೇಳಬಹುದಾಗಿದೆ. ಸಂಪಾದಕೀಯಗಳು, ಅತಿಥಿ ಅಂಕಣಗಳು
ಪ್ರಸ್ತುತವಾಗಿದ್ದು ರಾಜಕೀಯ ಸಾಮಾಜಿಕ ಜೀವನಕ್ಕೆ ಸ್ಪಂದಿಸುತ್ತ ಕೃತಕೃತ್ಯವಾಗಿವೆ.
ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಎರಡು ಮಾತು; ಅನೇಕ ಪುಸ್ತಕ
ಬಿಡುಗಡೆ-ಪ್ರಶಸ್ತಿ ಸಮಾರಂಭಗಳು ಇಂದಿನ ಕಾಲದಲ್ಲಿ ನಡೆಯುತ್ತಿವೆ. ಅಲ್ಲಿಗೆ ನಿಮ್ಮ
ಪ್ರತಿನಿಧಿಗಳನ್ನು ಕಳಿಸಿ, ಸಮಾರಂಭದ ವರದಿಯ ಜತೆಗೆ ಪುಸ್ತಕದ
ಪರಿಚಯವನ್ನು ಮಾಡಿಸಿ ಒಂದು ಬಗೆಯ
featureನ್ನು
ಬರೆಸಬಹುದು. ಹಿರಿಯ ತಲೆಮಾರಿನ ಕವಿ/ಕತೆಗಾರರ ಕೃತಿಯನ್ನು ಇವತ್ತಿನ
ತಲೆಮಾರಿಗೆ ಉದಾಹರಣೆಯ ಮೂಲಕ ಪರಿಚಯಿಸಬಹುದು. ಕನ್ನಡ ಸಾಹಿತಿಯಾಗಿ ಈ
ಮಾತನ್ನು ಹೇಳಿದೆ.
ಯಾರನ್ನೇ ಆಗಲಿ, ತುಂಬ ಪ್ರಶಂಸಿಸಲೂ ಬೇಡಿ, ತುಂಬ ನಿಂದಿಸಲೂ ಬೇಡಿ ಹಾಗೆ
ಮಾಡಿದಾಗ ಪತ್ರಿಕೆ ಪೀತ ಪತ್ರಿಕೆ ಆಗುತ್ತದೆ. ಅಂಥ ಸಂದರ್ಭಗಳನ್ನು ನಾವು
ನೋಡಿದ್ದೇವೆ. ಮುಂದುವರಿಯಿರಿ, ಅಭಿನಂದನೆಗಳು.
- ದೇಶಕುಲಕರ್ಣಿ
ಬೆಂಗಳೂರು.
ಪ್ರಬುದ್ಧತೆಯತ್ತ `ವಿಕ್ರಾಂತ ಕರ್ನಾಟಕ'
ಮಾನ್ಯರೆ,
ಪ್ರಥಮ ಸಂಚಿಕೆಯಿಂದಲೂ `ವಿಕ್ರಾಂತ ಕರ್ನಾಟಕ' ವನ್ನು
ಗಮನಿಸುತ್ತಿರುವ ನನಗೆ ಪತ್ರಿಕೆ ಸಂಚಿಕೆಯಿಂದ ಸಂಚಿಕೆಗೆ ಹೆಚ್ಚು
ಪ್ರಬುದ್ಧಗೊಳ್ಳುತ್ತ ಸಾಗಿರುವುದನ್ನು ಕಂಡು ಅತೀವ
ಸಂತಸವಾಗುತ್ತದೆ. ಕೇವಲ ಹೊಸರುಚಿ, ಮೆಹಂದಿ, ಪ್ರವಾಸಿ ತಾಣಗಳ
ಪರಿಚಯದಲ್ಲೇ ಪುಟ ತುಂಬಿಸಿ ಕಳಿಸುತ್ತಿದ್ದ ಕನ್ನಡದ ಸಾಪ್ತಾಹಿಕ,
ಮಾಸಿಕಗಳ ನಡುವೆ ವೈಚಾರಿಕ, ಸಾಂಸ್ಕೃತಿಕ, ಸಾಮಾಜಿಕ
ಅಂಶಗಳನ್ನು ವಿಶೇಷ ರೀತಿಯಲ್ಲಿ ರೂಪುಗೊಳ್ಳುತ್ತಿರುವ `ವಿಕ್ರಾಂತ
ಕರ್ನಾಟಕ' ಎಲ್ಲಾ ಬಗೆಯ ಓದುಗರನ್ನು ತಲುಪಬೇಕಿದೆ- ಪತ್ರಿಕೆಯ
ಆಕರ್ಷಣೆ ನೋಡಿದರೆ ಅದು ಖಂಡಿತವಾಗಿಯೂ ಎಲ್ಲರನ್ನೂ ತಲುಪುತ್ತದೆ
ಎನ್ನುವ ಆಶಯ ನನ್ನದು.
- ಮಂಜುನಾಥ್ ಲತಾ
*
ಮಾನ್ಯರೆ,
`ವಿಕ್ರಾಂತ ಕರ್ನಾಟಕ'ದ ಸಂಚಿಕೆಗಳನ್ನು ತುಂಬಾ ಕುತೂಹಲದಿಂದ ಓದಿ
ಖುಷಿಪಟ್ಟಿದ್ದೇನೆ. ಹೊಸ ಬಗೆಯ ಸಾಪ್ತಾಹಿಕವೊಂದು ಕನ್ನಡ ನೆಲದ
ತೊಟ್ಟಿಲಲ್ಲಿ ಅರಳಿಕೊಳ್ಳುತ್ತಿರುವುದು ಆನಂದದ ಸಂಗತಿ.
ವಿಚಾರಗಳನ್ನು ನೇರವಾಗಿ, ಸರಳವಾಗಿ ಹೇಳುವ ನಿಮ್ಮ ಪರಿ
ಅನನ್ಯವಾದುದು. ಈ ಕೆಚ್ಚು, ಕಾವು, ಹೊಸನೋಟ, ಹುರುಪಿನ ಓಟ
ಸದಾ ಇರಲಿ. ಅನುಭವಿಗಳಾದ ನಿಮಗೆ ಸವಾಲು, ಸಂಕಟ, ಸಮಸ್ಯೆ,
ಸಾಹಸಗಳ ಅರಿವು ಇದ್ದೇ ಇದೆ. ಅವರಿವರ ಕಿವಿಮಾತು ಬುದ್ಧಿಮಾತು
ಬೇಕಾಗಿಲ್ಲ. ಯಾಕೆಂದರೆ- ಸೋತಾಗ ಯಾರಿಗೆ ಯಾರೂ ಇಲ್ಲ!
ಮುನ್ನುಗ್ಗಿ, ಮನ ಅರಳಿಸಿ, ಜನಕೋಟಿಯ ವಿಶ್ವಾಸ ಗೆಲ್ಲಿ. ಲೇಖಕ
ಬಳಗ, ವಾಚಕ ವೃಂದ, ಅಕ್ಷರ ಪ್ರೇಮಿಗಳ ಅಕ್ಕರೆ, ಸಾಹಿತ್ಯ
ಪ್ರೇಮಿಗಳ ಸೇವಂತಿ ಘಮಲು, ಚಿಂತನಶೀಲರ ಚೈತನ್ಯ ಚಿರಾಪುಂಜಿ,
ನೆಲದ ಮಕ್ಕಳ ನಲ್ಮೆಯ ನೈವೇದ್ಯ ಕ್ರಮೇಣ ವೃದ್ಧಿಸುವುದು
ಶತಃಸಿದ್ಧ. ಹೈಟೆಕ್ ಕಾಲದಲ್ಲಿ ಹತ್ತು ರೂಪಾಯಿ ಹೊರೆಯಲ್ಲ. ನಿಮ್ಮ
ತಂಡದ ಪರಿಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಶುಭವಾಗಲಿ.
- ಆರೂರು ಲಕ್ಷ್ಮಣ್ ಶೇಟ್
ಹುಬ್ಬಳ್ಳಿ
*
ಮಾನ್ಯರೆ,
ತಾವು ವಿಶ್ವಾಸವಿರಿಸಿ ಕಳುಹಿಸಿದ `ವಿಕ್ರಾಂತ ಕರ್ನಾಟಕ' ಪತ್ರಿಕೆಯ
ಬಿಡುಗಡೆ ಸಂಚಿಕೆ ಕೈಸೇರಿತು; ಕೃತಜ್ಞತೆಗಳು.
ಪತ್ರಿಕೆಯ ಶೀರೋನಾಮೆಗೆ ತಕ್ಕಂತೆ ಉತ್ತಮ ಲೇಖನಾದಿಗಳು
ಆಕರ್ಷಕವಾಗಿ ಪ್ರಕಟವಾಗಿವೆ. ಇಷ್ಟು ಆಕರ್ಷಕ ರೀತಿಯ ಮುದ್ರಣ
ಲೇಖನ ಚಿತ್ರಗಳಿಂದ ಕೂಡಿದ ಪತ್ರಿಕೆ ಪ್ರಾರಂಭಿಸಿದ ನಿಮಗೆ
ಶ್ರೇಯಸ್ಸು ಬಯಸುತ್ತೇನೆ. ವಿಕ್ರಾಂತ ಕರ್ನಾಟಕ
ಚಿರಾಯುವಾಗಲೆಂದು ಪ್ರಾರ್ಥನೆ.
- ಕಯ್ಯಾರ ಕಿಞಿಣ್ಣ ರೈ
ಪೆಂಡಾಲ
*
ಮಾನ್ಯರೆ,
೫ ನೆಯ ಸಂಚಿಕೆ ಉತ್ತಮವಾಗಿ ಬಂದಿದೆ. ನಗರ ಸಂಚಾರಿಯಾದ ನಾನು
ಈ ವಾರ ಅತಿಹೆಚ್ಚು ಬಸ್ ಪ್ರಯಾಣಿಕರ ಬಳಿ ಈ ಪುಸ್ತಕ ಕಂಡೆ.
ಟಿವಿಯಲ್ಲಿ ಕ್ರೈಂ ಬಗ್ಗೆ ಬರುವ ಧಾರಾವಾಹಿಗಳು ಇವೆ. ಈ
ಪತ್ರಿಕೆಯಲ್ಲಿ ಕ್ರೈಂ ಬಗ್ಗೆ ವೈಭವೀಕರಣ ಲೇಖನಗಳು ಬೇಡ.
ಇದಕ್ಕಾಗಿ ಹಲವು ಕ್ರೈಂ ಪತ್ರಿಕೆಗಳಿವೆ. ಉತ್ತಮ ಲೇಖನಗಳು ಬರಲಿ.
ದಿ ವೀಕ್, ಇಂಡಿಯಾ ಟುಡೇಗಳು ೧-೩-೫ ವರ್ಷಗಳ ಚಂದಾವನ್ನು
ರಿಯಾಯಿತಿ ದರದಲ್ಲಿ ಪಡೆದಾಗ ನಮ್ಮ ಕನ್ನಡ ಪತ್ರಿಕೆಗಳು ಏಕೆ ಈ
ರೀತಿ ರಿಯಾಯಿತಿ ನೀಡುತ್ತಿಲ್ಲವೆಂಬ ನನ್ನ ಕೊರಗಿಗೆ ಈ ಪತ್ರಿಕೆ ಉತ್ತರ
ನೀಡಿದೆ. ಇದು ಕನ್ನಡದ ಸಾಪ್ತಾಹಿಕಗಳಲ್ಲಿ ಹೊಸದು. ಇದರ ಲಾಭ
ಕನ್ನಡಿಗರೆಲ್ಲ ಪಡೆಯಲಿ.
- ಎನ್. ಗೋಪಾಲರಾವ್
ಬೆಂಗಳೂರು
*
ಮಾನ್ಯರೆ,
ಅಬ್ಬಬ್ಬಾ ಅಲ್ಪ ಕಾಲದಲ್ಲಿಯೇ ಕನ್ನಡ ಪತ್ರಿಕಾರಂಗದಲ್ಲಿ ಕ್ರಾಂತಿಯ
ಅಲೆ ಎಬ್ಬಿಸಿದ ವಿಕ್ರಾಂತದ ವಿಕ್ರಮವನ್ನು ಹೊಗಳಿದಷ್ಟು
ಉಳಿಯುತ್ತದೆ. ಸುಧಾ, ತರಂಗ, ಕರ್ಮವೀರ, ಮಂಗಳಗಳನ್ನು
ನಾನು ಓದುವುದನ್ನು ನಿಲ್ಲಿಸಿ ಬಹಳ ಕಾಲವಾಯಿತು. ದಯವಿಟ್ಟು
ವಿಕ್ರಾಂತದಲ್ಲಿ ಗತಕಾಲದ ಬೇಡಿಕೆಯಾದ ಕತೆ ಕವನ
ಕಾದಂಬರಿಗಳನ್ನು ಹಾಕಬೇಡಿ! ಸದರಿ ಹಳಸಲು ಕೆಲಸ ಮಾಡಲು
ಸಾಕಷ್ಟು ಬೇರೆ ಪತ್ರಿಕೆಗಳಿವೆ! ಹೊಸ ಸೆನ್ಸೇಶನ್ ವಿಕ್ರಾಂತದಲ್ಲಿ
ಮಾತ್ರ ಬರಲಿ. ಆಧುನಿಕ ಕಾಲದ ಬೇಡಿಕೆಗಳಾದ ಗಾಸಿಪ್, ಗ್ಲಾಮರ್,
ರೂಮರ್, ವಿಮರ್ಶೆ, ವಿಶ್ಲೇಷಣೆ, ಸಂಶೋಧನೆ, ತನಿಖಾವರದಿ,
ಪ್ರವಾಸ ಕಥನ, ಹಾಸ್ಯ, ನಗೆ ಲೇಖನಗಳು, ಕಾರ್ಟೂನ್‌ಗಳು ಹೆಚ್ಚಾಗಿ
ಮೂಡಿ ಬರಲಿ. ಸುದ್ದಿಸ್ವಾರಸ್ಯದ ಮಸಾಲ ಮಿರ್ಚಿಗಳಿಂದ ಮಿಂಚಿ
ವಿಕ್ರಾಂತದ್ದು ತ್ರಿವಿಕ್ರಮನ ಹೆಜ್ಜೆಯಾಗಲಿ!
- ಮಾಧವಾಚಾರ್ಯ
ಹಿರಿಯಡ್ಕ
*
ಮಾನ್ಯರೆ,
ತಾವು ಬರೆದ ಪತ್ರಕ್ಕಾಗಿ ಜುಲೈ ೩೧ಕ್ಕೆ ಉತ್ತರವನ್ನು ತಮಗೆ
ಬರೆದೆ. ಇಷ್ಟು ಬೇಗ ಪತ್ರಿಕೆ ಹೊರಬರುತ್ತದೆಂದು ಭಾವಿಸಿರಲಿಲ್ಲ!
ಇನ್ನೂ ಒಂದಿಷ್ಟು ಕಾಲ ಹಿಡಿಯಬಹುದು ಅಂದುಕೊಂಡಿದ್ದೆ. ಆದರೆ ಇಂದು
ನಾನು `ವಿಕ್ರಾಂತ ಕರ್ನಾಟಕ'ವನ್ನು ಮಾರ್ಕೆಟ್ಟಿನಲ್ಲಿ ಕಂಡು
ಕುತೂಹಲಗೊಂಡೆ!
೭ನೇ ಸಂಚಿಕೆ ನೋಡಿ ತುಂಬ ಸಂತೋಷವಾಯಿತು. ಇದು ಪ್ರಯೋಗಶೀಲ
ಪತ್ರಿಕೆಯೆಂದಾಗಲಿ, ಹೊಸ ಪತ್ರಿಕೆಯೆಂದಾಗಲಿ ಏನೂ ಅನ್ನಿಸಲಿಲ್ಲ.
ನಿರಂತರ ಬರುತ್ತಿರುವ ಪತ್ರಿಕೆಯಂತೆಯೇ ಬಂದಿದೆ. ಸಕಲ
ದೃಷ್ಟಿಯಲ್ಲಿ ಆಪ್ಯಾಯವಾಗಿದೆ. ಅತ್ಯಂತ ಆಕರ್ಷಕವಾಗಿದೆ. ತುಂಬ
ಚೆಂದವಾದ ಕಾಗದವನ್ನು ಬಳಸಲಾಗಿದೆ. ಇದಕ್ಕಿಂತಲೂ ಹೆಚ್ಚಾಗಿ
ನಾವಿನ್ಯಕ್ಕೆ ತೆರೆದುಕೊಂಡಲ್ಲಿ ಇನ್ನೂ ಆಕರ್ಷಕವಾಗುವುದರಲ್ಲಿ
ಮತ್ತು ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗುವುದರಲ್ಲಿ ಬಹಳ
ದಿನ ಬೇಕಾಗಿಲ್ಲ. ತುಂಬ ಸಂತೋಷ, ಅಭಿನಂದನೆಗಳು.
- ಅರ್ಜುನ ತಾ. ಕೋರಟಕರ
ಜಮಖಂಡಿ
*
ಮಾನ್ಯ ಸಂಪಾದಕರಿಗೆ,
ಅನೇಕ ವಿವಿಧ ವಿಚಾರಗಳನ್ನೊಳಗೊಂಡ ವಿಕ್ರಾಂತ ಕರ್ನಾಟಕ ಪತ್ರಿಕೆ
ಚೆನ್ನಾಗಿ ಮೂಡಿಬರುತ್ತಿದೆ. ತಮಗೆ ಅಭಿನಂದನೆಗಳು. ತಮ್ಮ
ಪತ್ರಿಕೆಯಲ್ಲಿ ಹಾಸ್ಯ ಮತ್ತು ಉತ್ತಮ ವ್ಯಂಗ್ಯ ಚಿತ್ರಗಳಿಗೂ
ಪ್ರಾಧಾನ್ಯತೆ ನೀಡಬೇಕೆಂದು ನನ್ನ ವಿನಂತಿ.
- ಬಿ.ವಿ. ಪಾಂಡುರಂಗರಾವ್
ಬೆಂಗಳೂರು
*
ಆತ್ಮೀಯ ರವಿಯವರೆ,
ನಿಮ್ಮ ಭೈರಪ್ಪನವರ ಭೈರಿಗೆ ಲೇಖನದಲ್ಲಿ,
"ಈಗಿನ ಪ್ರಪಂಚವನ್ನೇ ನೋಡಿ. ಯಾವಾಗಲೂ ಸುಳ್ಳಿಗೇ ಜಯ" ಎಂಬ
ಭೈರಪ್ಪನವರ ಹೇಳಿಕೆಗೆ ಏಕೆ ಇಂತಹ ಜೀವವಿರೋಧಿ ನಿರಾಶವಾದ?
ಎಂದು ಟೀಕಿಸಿದ್ದೀರಿ.
ಅದೇ, "ಗೃಹ ಖಾತೆ ಎಂಬುದಿದೆಯೆ?" ಲೇಖನದಲ್ಲಿ
"ನಮ್ಮ ಮಕ್ಕಳು ಮುಂದಕ್ಕೂ ನಿರಾಂತಕವಾಗಿ ಬದುಕುವ ಆಸೆ
ಇದೆಯೆ?", "ಕರ್ನಾಟಕದಲ್ಲಿ ಕಾನೂನು, ನ್ಯಾಯ, ನೈತಿಕತೆ ಸತ್ತಿದೆ!",
"ಕಾಲ ನಿಜವಾಗಿಯೂ ಕೆಟ್ಟಿದೆ" ಮುಂತಾದ ವಾಕ್ಯಗಳಲ್ಲಿ ನಿರಾಶವಾದವನ್ನು
ನೀವು ತೋರ್ಪಡಿಸಿದ್ದೀರಿ!
ಮೇಲ್ನೋಟಕ್ಕೆ ಇದೆಂತಹ ವಿರೋಧಾಭಾಸ
ಅನ್ನಿಸಿದರೂ ಇದು ಸುಸಂಸ್ಕೃತ ಭಾವಜೀವಿಯೊಬ್ಬ ಸಹನೆ
ಕಳೆದುಕೊಂಡು ಆಡಿದ ಮಾತುಗಳೇ ಆಗಿವೆ. ಹೀಗೆ ಬರೆದೆ ಅಂತ
ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. "ವಿಕ್ರಾಂತ ಕರ್ನಾಟಕ" ಪತ್ರಿಕೆ
ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಎಲ್ಲಾ ಕನ್ನಡಿಗರು ಈ ಪತ್ರಿಕೆಗೆ
ಚಂದಾದಾರರಾಗಿ ಪ್ರೋತ್ಸಾಹಿಸಲಿ ಎಂದು ನನ್ನ ಹಾರೈಕೆ.
- ಶೇಷಾದ್ರಿ ವಾಸು
`ಬರಹ' ತಂತ್ರಾಂಶದ ನಿರ್ಮಾತೃ
ಅಮೆರಿಕಾ
*
ಮಾನ್ಯರೆ,
ವಿಕ್ರಾಂತ ಕರ್ನಾಟಕ ವಾರ ಪತ್ರಿಕೆಯು ವಿನೂತನ
ವಿಶಿಷ್ಟ ಪತ್ರಿಕೆಯಾಗಿದೆ. ಇಂಥ ಒಂದು ಪತ್ರಿಕೆ ಕನ್ನಡಕ್ಕೆ ಬಹಳ
ಅಗತ್ಯವಾಗಿತ್ತು. ಕನ್ನಡ ಭಾಷೆ ಸಂಸ್ಕೃತಿಗಳ ಪ್ರಸಾರದೊಡನೆ ಪ್ರಸಕ್ತ
ರಾಜಕೀಯ ವಿದ್ಯಮಾನಗಳ ವಸ್ತುನಿಷ್ಠ ಆಕರ್ಷಕ ಸುಂದರ
ವಿಕ್ರಾಂತ ಕರ್ನಾಟಕವು ಹಾಗೂ ಕರ್ನಾಟತನವು ಸದಾ ವಿಕ್ರಾಂತವಾಗಿ
ಕೆಚ್ಚೆದೆಯುಳ್ಳದ್ದಾಗಿ ವೈವಿಧ್ಯಮಯವಾಗಿ ಹೊರಹೊಮ್ಮಲಿ ಎಂದು
ಆಶಿಸುತ್ತೇನೆ.
- ವಿದ್ವಾನ್ ಎಂ. ಆರ್. ದತ್ತಾತ್ರೇಯ
ಶಿವಮೊಗ್ಗ
*
ಸತ್ಯಮೂರ್ತಿಯವರಿಗೆ ಪ್ರೀತಿಪೂರ್ವಕ ವಂದನೆಗಳು.
ತಮ್ಮ ವಾರಪತ್ರಿಕೆ `ವಿಕ್ರಾಂತ ಕರ್ನಾಟಕ'ವನ್ನು
ನೋಡಿ ಸಂತೋಷವಾಯಿತು. ಉತ್ತಮ ಗುಣಮಟ್ಟದ ವಾರಪತ್ರಿಕೆಯಾಗಿ
ಹೊರಬರುತ್ತಿದೆ. ಅದಕ್ಕಾಗಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು.
ಕನ್ನಡದ, ಕನ್ನಡಿಗರ, ಕರ್ನಾಟಕ ಹಿತರಕ್ಷಣೆಯೇ
ತಮ್ಮ ಪ್ರಮುಖ ಧ್ಯೇಯವಾಗಿರಲೆಂದು ಆಶಿಸುತ್ತೇನೆ.
- ದೊ.ಅ. ಅಶೋಕ
ಬೆಂಗಳೂರು.
`ವಿಕ್ರಾಂತ ಕರ್ನಾಟಕ' ಈಗ ನನ್ನ ಬೌದ್ಧಿಕ
ಸಂಗಾತಿ!
ಮಾನ್ಯರೇ,
ವಿಕ್ರಾಂತ ಕರ್ನಾಟಕ
ವಾರ ಪತ್ರಿಕೆಯು ಕನ್ನಡ ನಾಡಿನ ಅತ್ಯಂತ ಸುಂದರ ಮಾಸಪತ್ರಿಕೆ. ಶ್ರೀ ಸತ್ಯಮೂರ್ತಿ
ಆನಂದೂರು ಅವರ ಸಂಪಾದಕತ್ವದಲ್ಲಿ - `ಹೊನ್ನರಾಶಿಯಲ್ಲ-ಬೊಗಸೆ ಪ್ರೀತಿ' ಎಂಬಂಥ ಸಮಕಾಲೀನ
ಸಾಹಿತ್ಯ ಮತ್ತು ಕಲೆ, ರಾಜಕೀಯ ಮತ್ತು, ಸಾಮಾಜಿಕ, ಕ್ರೀಡೆ ಮತ್ತು ವಿನೋದ,
ಜಾಗತಿಕ ಮತ್ತು ಪ್ರಾಂತೀಯ ಅದ್ಭುತ ಮತ್ತು ವಿಸ್ಮಯದ ಆಗುಹೋಗುಗಳನ್ನು
ಕುರಿತಂತೆ ತಿಳಿಯಾಗಿ ತಿಳಿವಳಿಕೆಗೆ ಮುಟ್ಟಿಸಬಲ್ಲ ಶೈಲಿಯ ಮೂಲಕ, ಮನಮೋಹಕ
ಛಾಯಾ ಚಿತ್ರಗಳ ಸಮೇತ, ಕುಳಿತಲ್ಲೇ ಆತ್ಮೀಯವಾಗಿ ಅರ್ಥೈಸಿಕೊಳ್ಳಲು ಸಹಾಯಕ್ಕೆ
ಬರುವಂಥ ಈ ವಾರಪತ್ರಿಕೆ ಎಲ್ಲರ ಮನೆಯಲ್ಲಿ ಎಲ್ಲ ಕಾರ್ಯಾಗಾರಗಳಲ್ಲಿ ಶಾಲೆ
ಕಾಲೇಜುಗಳಲ್ಲಿ ವಾಚನಾಲಯಗಳಲ್ಲಿ ಎಲ್ಲರ ಮನೋವಿಕಾಸಕ್ಕೆ ಉಲ್ಲಾಸಕ್ಕೆ ಎಲ್ಲ
ಮಹಿಳೆಯರ ಮಹನೀಯರ ತರುಣ ತರುಣಿಯರ ಕೈಯಲ್ಲಿ ಇರಬೇಕಾದ ವಾರಪತ್ರಿಕೆ
ಈ `ವಿಕ್ರಾಂತ ಕರ್ನಾಟಕ'.
-ಡಾ. ಎಲ್. ಬಸವರಾಜು
ಮೈಸೂರು.
*
ಸಂಪಾದಕರೆ,
ವಿನೂತನ ಪ್ರಯೋಗವಾಗಿರುವ
`ವಿಕ್ರಾಂತ ಕರ್ನಾಟಕ' ವಾರಪತ್ರಿಕೆ ಬರುತ್ತಿರುವ ವಿಷಯ ಬೆಂಗಳೂರಿನ ನನ್ನ
ಗೆಳೆಯನಿಂದ ತಿಳಿಯಿತು. ಆತನೇ ಒಂದೆರಡು ಸಂಚಿಕೆಗಳನ್ನು ಕೊಂಡು ನನಗೆ ಪೋಸ್ಟ್
ಮಾಡಿದ್ದಾನೆ. ನಾನೂ ಓದಿ ನೋಡಿದೆ. ನನ್ನ ಮನಸ್ಸಿಗಂತೂ ತುಂಬಾ ಹಿಡಿಸಿದೆ.
ದಯವಿಟ್ಟು ನಿಮ್ಮ ಪತ್ರಿಕೆ ನಮ್ಮ ಮನೆಯ
ಪತ್ರಿಕೆಯಾಗಿಸಿಕೊಳ್ಳಲು ನಾವಿರುವ ಕಡೂರಿನಲ್ಲಿ ಸಿಗುವಂತೆ ಮಾಡಿ. ಇಲ್ಲಿ ಯಾವ ಪೇಪರ್
ಅಂಗಡಿಗಳಲ್ಲೂ ಸಿಗುತ್ತಿಲ್ಲ.
- ಜಯಶ್ರೀ
ಕಡೂರು.
*
ಮಾನ್ಯರೆ,
ಥಳಥಳಿಸುವ ೬೪
ಪುಟಗಳ ವರ್ಣರಂಜಿತ ವಾರಪತ್ರಿಕೆ `ವಿಕ್ರಾಂಕ ಕರ್ನಾಟಕ'ದ ಮೊದಲ ಸಂಚಿಕೆಯಿಂದ ತಪ್ಪದೇ
ಓದುತ್ತಿದ್ದೇನೆ. ಪ್ರತಿವಾರದ ನನ್ನ ಬೌದ್ಧಿಕ ಸಂಗತಿಯಾಗಿಬಿಟ್ಟಿದೆ. ಪ್ರತಿ ಶುಕ್ರವಾರ ಮಾರುಕಟ್ಟೆಯಲ್ಲಿ
`ವಿಕ್ರಾಂತ ಕರ್ನಾಟಕ' ಬೇಗ ಖರೀದಿಸದಿದ್ದರೆ ಏನೋ ಚಡಪಡಿಕೆ ಶುರುವಾಗುತ್ತದೆ. ಎಲ್ಲಿ
ಮಿಸ್ ಮಾಡಿಕೊಳ್ಳುತ್ತೇನೋ ಎನಿಸುತ್ತದೆ. ರಿಯಲಿ ಸೂಪರ್.
- ಚಂದ್ರು
ಬೆಂಗಳೂರು.
*
ಮಾನ್ಯರೇ,
`ಐಶ್ವರ್ಯ' ಮುಖಪುಟದೊಂದಿಗೆ
ಬಂದ `ವಿಕ್ರಾಂತ ಕರ್ನಾಟಕ' ಸಂಚಿಕೆ ಕನ್ನಡ ಚಿತ್ರರಂಗದ ಹೊಸ ಪ್ರಯೋಗಗಳನ್ನು
ಮನವರಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿನೆಮಾ, ರಾಜಕೀಯ, ಸಾಹಿತ್ಯ,
ಕ್ರೀಡೆ, ಕಲೆ, ರಂಗಭೂಮಿ ಇತ್ಯಾದಿ ವೈವಿಧ್ಯಮಯ ವಿಷಯಗಳೊಂದಿಗೆ ವಿ.ಕ. ಸಂಚಿಕೆಯಿಂದ
ಸಂಚಿಕೆಗೆ ಸಮೃದ್ಧಿಗೊಳ್ಳುತ್ತಿದೆ. ಆದರೂ ಅಂಕಣ ಮತ್ತು ಧಾರಾವಾಹಿಯ ಕೊರತೆ ನಮ್ಮನ್ನು
ಕಾಡುತ್ತಿರುವುದು ಹೌದು.
- ಸುನೀಲ್
ಮೂಲ್ಕಿ.
*
ಮಾನ್ಯರೆ,
ವಿಷಯದ ಆಯ್ಕೆ
ಹಾಗೂ ವಸ್ತುನಿಷ್ಠತೆ ವಿಚಾರದಲ್ಲಿ ವಿಕ್ರಾಂತ ಕರ್ನಾಟಕ ನಿಜಕ್ಕೂ ವಿಶಿಷ್ಟವಾಗಿದೆ. ಹೊಸ ಪತ್ರಿಕೆ
ಅಂದ ಮೇಲೆ ಓದುಗರ ನಿರೀಕ್ಷೆಗಳೂ ಹೊಸದಾಗಿರುತ್ತವೆ. ಕನ್ನಡದಲ್ಲಿ ಇಂತಹದೊಂದು
ಸುದ್ದಿಗೆ ಸಂಬಂಧಿಸಿದ ಪತ್ರಿಕೆಯ ನಿರೀಕ್ಷೆಯಿತ್ತು. `ವಿಕ್ರಾಂತ' ಅದನ್ನು ಪೂರ್ಣಗೊಳಿಸಿದೆ.
ಸಂಚಿಕೆಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಪತ್ರಿಕೆಯ ಜವಾಬ್ದಾರಿಯೂ ಹೆಚ್ಚುತ್ತದೆ.
ವಿಕ್ರಾಂತ ಹೀಗೆಯೇ ಮೂಡಿ ಬರಲಿ. ಎಂದಿಗೂ ಮೌಲ್ಯ ಕಳೆದುಕೊಳ್ಳದಿರಲಿ.
- ಕೆ. ಶರತ್
ಮಂಗಳೂರು.
ಇನ್ನಷ್ಟು
ಮನೆಮಂದಿಯೆಲ್ಲ ಓದಬಹುದಾದ ಸದಭಿರುಚಿಯ
ಪತ್ರಿಕೆ
ನಿಮ್ಮ ಬರಹ, ಅನಿಸಿಕೆ ಮತ್ತು ಪ್ರಶ್ನೆಗಳಿಗೆ ಸದಾ
ಸ್ವಾಗತ
ವೆಬ್‌ಸೈಟ್ ಕುರಿತು ಅಬ್ದುಲ್ ರಶೀದ್ ಮತ್ತು ಶೇಖರ್‌ಪೂರ್ಣ
ನಮ್ಮ ವೆಬ್‌ಸೈಟ್ ಕುರಿತು ಹಿರಿಯರ ಸಲಹೆ ಸೂಚನೆ
ಓದುಗರ ಪತ್ರಗಳು, ಹಾರೈಕೆ-ಸಲಹೆಗಳು
ನಮ್ಮ ವೆಬ್‌ಸೈಟ್ ಕುರಿತು ಹಿರಿಯರ ಸಲಹೆ ಸೂಚನೆ
ಜಯಮಾಲಮ್ಮಂಗೆ ಮಾಡಲು ಬೇರೆ ಕೆಲಸ ಇಲ್ವಾ?
ರೊಕ್ಕಸ್ಥರ ಅಕ್ಕ ಸಮ್ಮೇಳನವಿದು
AKKAನಿಗೊಂದು
ಪತ್ರ...
ಮ್ಯಾಗಜೀನ್ ಕದ್ದುಕೊಂಡು ಹೋದ್ರಪ್ಪಾ
ಓದುಗರ ಪತ್ರಗಳು, ಹಾರೈಕೆ-ಸಲಹೆಗಳು
ವಿಕ್ರಾಂತ ಪ್ರಕಾಶನಕ್ಕೆ ಓದುಗರ ಶುಭಾಶಯಗಳು, ಸಲಹೆಗಳ