|
ವೈವಿಧ್ಯಮಯ ಸೂಪುಗಳು
ಮೊಳಕೆ ಬರಿಸಿದ ಹೆಸರುಕಾಳಿನ ಸೂಪ್
ಒಂದು ಕಪ್ ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ಚೆನ್ನಾಗಿ
ತೊಳೆದು, ಹದವಾಗಿ ಮೃದುವಾಗುವವರೆಗೆ ಬೇಯಿಸಿ. ನಂತರ
ತರಿತರಿಯಾಗಿ ಕಿವುಚಬೇಕು. ಒಂದು ದಪ್ಪತಳದ ಪಾತ್ರೆಯಲ್ಲಿ ೩
ಚಮಚ ಬೆಣ್ಣೆ ತೆಗೆದುಕೊಂಡು ಬಿಸಿಮಾಡಿ ಅದರಲ್ಲಿ ಹೆಸರು ಕಾಳಿನ
ಪೇಸ್ಟನ್ನು ಸೇರಿಸಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ೩
ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಉಪ್ಪು,
ಸಕ್ಕರೆ, ಮೆಣಸಿನ ಕಾಳಿನ ಪುಡಿಯನ್ನು ಸೇರಿಸಬೇಕು. ಬೆಂಕಿ ಆರಿಸಿದ
ನಂತರ ೩ ಚಮಚ ನಿಂಬೆ ಹಣ್ಣಿನ ರಸ ಬೆರೆಸಬೇಕು. ಬಡಿಸುವ
ಸಮಯದಲ್ಲಿ ತಾಜಾ ಹಾಲಿನ ಕೆನೆ ಸೇರಿಸಿ, ಚೆನ್ನಾಗಿ ಕಲಸಿ ಸವಿಯಲು
ಕೊಡಿ. ಇದು ದೇಹಕ್ಕೆ ತಂಪು, ಬಾಯಿಹುಣ್ಣು, ಎದೆ ಉರಿ ನಿವಾರಿಸುತ್ತದೆ.
***
ಈರುಳ್ಳಿ-ಬೆಳ್ಳುಳ್ಳಿ-ಹಸಿಶುಂಠಿ ಸೂಪ್
೨ ಈರುಳ್ಳಿ (ಬಿಳಿಯದಾದರೆ ಒಳ್ಳೆಯದು). ೧೦ ಬೆಳ್ಳುಳ್ಳಿ
ಎಸಳುಗಳು, ಒಂದು ಇಂಚು ಉದ್ದದ ಹಸಿಶುಂಠಿ- ಇವನ್ನು
ಸಿಪ್ಪೆತೆಗೆದು ಚೆನ್ನಾಗಿ ಸಣ್ಣಸಣ್ಣ ಚೂರುಗಳಾಗಿ ಕತ್ತರಿಸಬೇಕು.
ಇದನ್ನು ಒಂದು ಗುಂಡಗಿನ ಕಾವಲಿಗೆ ಸೇರಿಸಿ, ೩ ಚಮಚ ತುಪ್ಪದಲ್ಲಿ
ಹುರಿಯಬೇಕು. ಜೊತೆಗೆ ೧/೨ ಚಮಚ ಅರಸಿನ ಪುಡಿಯನ್ನು
ಹುರಿಯಬೇಕು. ಎಲ್ಲವನ್ನೂ ಮಿಕ್ಸರಿನಲ್ಲಿ ತರಿತರಿಯಾಗಿ ರುಬ್ಬಿ
ತೆಗೆಯಬೇಕು. ಕಾವಲಿಗೆ ಹಾಕಿ ಸೂಪಿನ ಹದಕ್ಕೆ ಬರುವಷ್ಟು ನೀರು
ಸೇರಿಸಿ ಕುದಿಸಬೇಕು. ೧೦ ಚಮಚ ಹಾಲು, ಉಪ್ಪು, ಸಕ್ಕರೆ,
ಕಾಳುಮೆಣಸಿನ ಪುಡಿ ಬೆರೆಸಿ, ಬಿಸಿ ಇರುವಾಗಲೇ ಸಿಪ್ ಮಾಡಬೇಕು.
ಇದು ನೆಗಡಿ, ಗಂಟಲು ನೋವು, ಕೆಮ್ಮಿಗೆ ಒಳ್ಳೆಯದು.
***
ಸೌತೆಕಾಯಿ ಸೂಪ್
ಒಂದು ಎಳತಾದ, ತಾಜಾ ಮುಳ್ಳು ಸೌತೆಕಾಯಿಯ ಸಿಪ್ಪೆ ತೆಗೆದು,
ತುರಿಮಣೆಯಲ್ಲಿ ತುರಿಯಬೇಕು. ೩ ಚಮಚ ತುರಿಯನ್ನು ಬೇರೆ
ತೆಗೆದಿಟ್ಟು ಉಳಿದುದನ್ನು ಮಿಕ್ಸರಿನಲ್ಲಿ ರುಬ್ಬಬೇಕು; ಬೇಕಾಗುವಷ್ಟು
ನೀರು ಸೇರಿಸಿ, ಸೋಸಬೇಕು. ನಂತರ ೨ ಚಮಚ ನಿಂಬೆರಸ, ೨
ಚಮಚ ಜೇನುತುಪ್ಪ, ಉಪ್ಪು, ಬೆಲ್ಲ, ಕಾಳುಮೆಣಸಿನ ಪುಡಿ,
ತೆಗೆದಿಟ್ಟ ತುರಿ ಸೇರಿಸಿ ಕದಡಿ ಸೇವಿಸಬೇಕು. ಇದು ತಂಪು ಮತ್ತು
ಉರಿ ಮೂತ್ರ ಶಮನಕಾರಿ. ಇದನ್ನು ಬೇಕಿದ್ದರೆ ಬಿಸಿಮಾಡಿಯೂ
ಬಳಸಬಹುದು. ಆದರೆ ಜೇನುತುಪ್ಪ ಸೇರಿಸಕೂಡದು. ಇದು ತುಂಬಾ
ತಂಪು. ಉರಿ ಮೂತ್ರ ತಡೆಗಳಿಗೆ ರಾಮಬಾಣ ಕಣ್ಣುಉರಿ ನಿವಾರಿಸುತ್ತದೆ.
***
ಕ್ಯಾರೆಟ್, ಬೀಟ್‌ರೂಟ್, ಕಾಲಿಫ್ಲವರ್ ಇವುಗಳ (ಪ್ರತ್ಯೇಕ) ಸೂಪ್
ಮೇಲಿನ ಯಾವುದೇ ಒಂದು ತರಕಾರಿಯನ್ನು ತೊಳೆದು, ಸಿಪ್ಪೆ
ತೆಗೆದ ನಂತರ ಸಣ್ಣ ಹೋಳುಗಳಾಗಿ ಕತ್ತರಿಸಿ, ಹದವಾಗಿ ಬೇಯಿಸಿಡಿ.
ಒಂದು ಈರುಳ್ಳಿ, ೬ ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆತೆಗೆದು
ಚಿಕ್ಕಚೂರುಗಳನ್ನಾಗಿ ಹೆಚ್ಚಿ ಇಡಿ. ಇವೆಲ್ಲವನ್ನೂ ಒಂದು ಗುಂಡಗಿನ
ಕಾವಲಿಗೆ ಸೇರಿಸಿ, ೩ ಚಮಚ ಬೆಣ್ಣೆಯಲ್ಲಿ ಬಾಡಿಸಬೇಕು. ನಂತರ
೧/೫ ಭಾಗ ತೆಗೆದಿಟ್ಟು ಉಳಿದುದನ್ನು ಮಿಕ್ಸರಿನಲ್ಲಿ ತಿರುವಬೇಕು. ಈ
ಪೇಸ್ಟನ್ನು ಪುನಃ ಕಾವಲಿಗೆ ಸೇರಿಸಿ ಸಾಕಾಗುವಷ್ಟು ನೀರು ಬೆರೆಸಿ
ಕುದಿಸಬೇಕು. ತೆಗೆದಿರಿಸಿದ ೧/೫ ಭಾಗದ ತರಕಾರಿಯನ್ನು ಸೇರಿಸಿ
ಕುದಿಸಬೇಕು. ೪ ಚಮಚ ಹಾಲು, ಉಪ್ಪು, ಸಕ್ಕರೆ, ಕಾಳು ಮೆಣಸಿನ
ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಬೆರೆಸಬೇಕು. ಬೆಂಕಿ ಆರಿಸಿದ
ನಂತರ ೨ ಚಮಚ ನಿಂಬೆಹಣ್ಣಿನ ರಸ ಸೇರಿಸಬೇಕು. ಬಡಿಸುವ
ವೇಳೆಗೆ ಹುರಿದ ಬ್ರೆಡ್ ತುಂಡುಗಳನ್ನು, ತಾಜಾ ಹಾಲಿನ
ಕೆನೆಯನ್ನು ಬೆರೆಸಿ ಕದಡಬೇಕು. ಪುದೀನಾ, ತುಳಸಿ ಎಲೆಗಳಿಂದ
ಸಿಂಗರಿಸಿ ಸವಿಯಲು ಕೊಡಬೇಕು. ಇದೇ ರೀತಿ ಪಾಲಕ್ ಸೂಪ್
ತಯಾರಿಸಬಹುದು. ಇವು ಕಡಿಮೆ ಕ್ಯಾಲೋರಿ, ಹೆಚ್ಚು ಜೀವಸತ್ವ
ಹೊಂದಿವೆ. ಡಯಟಿಂಗ್ ಮಾಡುವವರಿಗೆ ಶ್ರೇಷ್ಠ.
ಮಿಶ್ರತರಕಾರಿ ಸೂಪ್
೧ ಕ್ಯಾರೆಟ್, ೨ ಟಮೋಟೋ, ೧ ಆಲೂಗಡ್ಡೆ, ೫೦ ಗ್ರಾಂ ಗಡ್ಡೆ ಕೋಸು ಈ
ತರಕಾರಿಗಳನ್ನು ತೊಳೆದು, ಸಿಪ್ಪೆತೆಗೆದು ಚಿಕ್ಕಹೋಳುಗಳಾಗಿ
ಹೆಚ್ಚಿಡಿ. ೪ ಚಮಚ ತೊಗರಿಬೇಳೆಯನ್ನು ತೊಳೆದು ತರಕಾರಿ
ಹೋಳುಗಳೊಂದಿಗೆ ಕುಕ್ಕರಿನಲ್ಲಿ ನೀರಿಟ್ಟು ಹದವಾಗಿ ಬೇಯಿಸಬೇಕು.
ನಂತರ ಎಲ್ಲವನ್ನೂ ಮಿಕ್ಸರಿನಲ್ಲಿ ತಿರುವಬೇಕು. ಒಂದು ಗುಂಡಗಿನ
ಕಾವಲಿಯಲ್ಲಿ ೬ ಚಮಚ ಬೆಣ್ಣೆ, ಬಿಸಿ ಮಾಡಿ ಅದಕ್ಕೆ ೩ ಚಮಚ
ಕಾರ್ನ್‌ಪ್ಲೋರ್ ಸೇರಿಸಿ ೨ ನಿಮಿಷ ಹುರಿಯಬೇಕು. ಆಮೇಲೆ ೧/೨ ಲೋಟ
ಹಾಲು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಬೇಕು. ರುಬ್ಬಿದ ತರಕಾರಿ ಪೇಸ್ಟ್
ಸೇರಿಸಿ, ಬೇಕಾಗುವಷ್ಟು ನೀರು ಬೆರೆಸಿ, ಉಪ್ಪು, ಪುಡಿ ಮೆಣಸು
ಸೇರಿಸಿ ಕುದಿಸಬೇಕು. ಒಲೆಯಿಂದ ಕೆಳಗಿಳಿಸಿದ ನಂತರ ೫೦ ಗ್ರಾಂ
ಮಸೆದ ಪನ್ನೀರ್ ಬೆರೆಸಿ, ಬಿಸಿಯಾಗಿರುವಾಗಲೇ ಬಡಿಸಿ. ಇದು ಹೆಚ್ಚಿನ
ವಿಟಮಿನ್ಸ್ ಹೊಂದಿದೆ, ಶಕ್ತಿಕಾರಕ.
ಇನ್ನಷ್ಟು
ಚಟ್ನಿ
ಪುಡಿ
ಹುಳಿ
ಪುಡಿ
ಸಾರಿನ
ಪುಡಿ
ಹಸಿಕೊಬ್ಬರಿ ಚಟ್ನಿ
ಕಡಲೆಬೇಳೆ ಚಟ್ನಿ
|