ಕ್ಯಾಲಿಫೋರ್ನಿಯಾದತ್ತ ಪಯಣ
ಮಿಂಚು, ನ್ಯೂಜೆರ್ಸಿ
suma_shamasundar@yahoo.com
ಇದು ಎಲ್ಲರೂ ನನ್ನ ಗೇಲಿ ಮಾಡಿದಕ್ಕೆ ಹೋದ
ಪ್ರವಾಸ ಅನ್ನಬಹುದು... ಪ್ರತಿ ಸಾರಿ ನಾನು ಅಮೇರಿಕಾ ಬಗ್ಗೆ ಮಾತಾಡಿದಾಗಲೂ
`ನೀನು ಬಿಡು ಇಡಿ ಅಮೇರಿಕ ಸುತ್ತೋಕ್ಕೆ ಬಂದಿದ್ಯಾ' ಅಂತ ಇದ್ರು..
ಇದು ಪೂರ್ವದಿಂದ ಪಡುವಣಕ್ಕೆ ಹೋದ ಪ್ರವಾಸ.
ಈ ಬಾರಿ ಹೋದದ್ದು`ಕ್ಯಾಲಿಫೊರ್ನಿಯಾ'
ರಾಜ್ಯಕ್ಕೆ. ಅಲ್ಲಿಗೆ ಹೋಗಲು ಎಲ್ಲಾ ಸಿದ್ದತೆಗಳು ನಡೆದವು. ಹಾಗೆ ಬಂತು
ಸೆಪ್ಟೆಂಬರ್ ೧ರ ಶುಕ್ರವಾರ ಸಂಜೆ. ಹೊರಟಿದ್ದು ಈ ಪ್ರವಾಸಕ್ಕೆ
`ಕಾಂಟಿನೆಂಟಲ್ ಏರ್' ನಲ್ಲಿ ಭಾರಿ ಚಂದ ಇತ್ತು ವಿಮಾನ. ಕೊನೆ ಬಾರಿ
ನಾನು ವಿಮಾನದಲ್ಲಿ ಹೋಗಿದ್ದು ನಮ್ಮ ಏರ್-ಇಂಡಿಯಾದಲ್ಲಿ. ಅಲ್ಲಿನ
ಗಗನ ಸಖಿಯರು ಇನ್ನೂ ಐ-ಎಸ್-ಟಿ(ಇಂಡಿಯನ್ ಸ್ಟ್ರೇಚಬಲ್ ಟೈಮ್)
ನಲ್ಲೇ ಕೆಲಸ ಮಾಡುತ್ತಾರೆ. ನೀರು ಕೇಳಿ ನೋಡಿ ಇದರ ಅರ್ಥ
ತಿಳಿಯುತ್ತೆ!!!!! ಹಾಗೆ ನೋಡಿದರೆ ಈ ಸಾರಿ ೬ ತಾಸುಗಳ ಪ್ರಯಾಣಕ್ಕೆ
ಸಿಕ್ಕ ಶುಶ್ರೂಷೆ ತುಂಬಾ ಚಂದ ಇತ್ತು.
ರಾತ್ರಿ ೮ ಘಂಟೆಗೆ ತಲುಪಿದ್ದು ಸಾನ್-ಡಿಯಾಗೊ
ವಿಮಾನ ನಿಲ್ದಾಣಕ್ಕೆ. ಅಲ್ಲಿಂದ ಅಲ್ಲೇ ಪಕ್ಕದಲ್ಲಿ ಇದ್ದ ಶೆರಾಟನ್ ಮರಿನದಲ್ಲಿ
ತಂಗಳು ಬಸ್‌ನಲ್ಲಿ ಪ್ರಯಾಣ. ಎತ್ತ ನೋಡಿದರೂ ನಗರದ ಬಹು-ಮಹಡಿ
ಕಟ್ಟಡಗಳು. ಇದು ಒಂದು ದ್ವೀಪದಲ್ಲಿ ಇದ್ದ ಕಾರಣ ಸುತ್ತ-ಮುತ್ತ
ನೀರು ಹಾಗೂ ಸಣ್ಣ-ಸಣ್ಣ ದೋಣಿಗಳು ನೋಡಲು ಅದ್ಭುತ. ಆ ದಿನ
ರಾತ್ರಿ ಊಟಕ್ಕೆ ಅಂತ ಹೊರಗೆ ಹೋದರೆ, ಅಲ್ಲಿ ಹತ್ತಿರದಲ್ಲಿ ಆಪತ್ಭಾಂದವ
ಮೆಕ್-ಡಿ ಸಹ ಇರ್ಲಿಲ್ಲ. ಹಾಗೆ ಹೋಗಿ ಹುಡುಕಿ-ಹುಡುಕಿ ತಿನ್ನಲು ಒಂದು
ಜಾಗ ಎಂದು ಅಲ್ಲೇ ಕಂಡ ಟಿ-ಜಿ-ಐ ರ್ಫೈಡೇಸ್‌ಗೆ ಹೋದರೆ ಅಲ್ಲಿ ತಿನ್ನೋಕ್ಕೆ
ಆಗದಂತ ಏನೋ ತಿಂಡಿ. ಹೀಗೆ ಮೊದಲನೆ ದಿನ ಕಳೆಯಿತು.
ಮರು ದಿನ ಹೊರಟ್ಟಿದ್ದು ಸಾನ್-ಡಿಯಾಗೊ
`ವೈಲ್ಡ್-ಅನಿಮಲ್ ಪಾರ್ಕ್?ಗೆ.
ಅಲ್ಲಿಗೆ ನಮ್ಮ ಮನೆಯಿಂದ ೨೦ನಿಮಿಷಗಳ ಪ್ರಯಾಣ ಅಂತ ಬಿಟ್ಟಿದ್ದು,
ಹೋಗಿ ಸೇರುವಷ್ಟರಲ್ಲಿ ಒಂದೂವರೆ ತಾಸಾಯಿತು! ಆದ್ರೆ ಹೋಗೋ
ದಾರಿಯಲ್ಲಿ ಆಹಾ ಎಂತ ಪ್ರಕೃತಿ ಹೆಜ್ಜೆ-ಹೆಜ್ಜೆಯಲ್ಲೂ ನಮ್ಮ ಭಾರತದ
ನೆನಪು ಮಾವಿನ ಮರ, ಸೀಬೆ ಮರ ಕೊನೆಗೆ ದಾಳಿಂಬೆ ಮರದ
ಜೊತೆ ಬಾಳೆ ಕೂಡಾ, ಆ ಬದಿ ಈ ಬದಿ ಎಲ್ಲೆಡೆ ಕಿತ್ತಳೆ ಮರ ..
ದಾರಿ ಹುಡುಕಿ-ಹುಡುಕಿ ಸುಸ್ತು ಆಗಿ ಕೊನೆಗೆ
ಅಲ್ಲೇ ದಾರಿ ಪಕ್ಕದಲ್ಲಿ ಇದ್ದ ಅಂಗಡಿ ಒಂದರಲ್ಲಿ ಕೆಲವು ಹಣ್ಣುಗಳನ್ನ
ಕೊಳ್ಳಲು ಹೋದೆವು ಅಲ್ಲಿ ನೋಡಿದರೆ ಹಣ್ಣುಗಳ ರಾಜನ ದರ್ಶನ! ನೋಡಿದ
ಮೇಲೆ ಬಿಡೋದು ಹೇಗೆ? ಸರಿ, ಕಿತ್ತಳೆ, ಮಾವಿನ ಹಣ್ಣು ಕೊನೆಗೆ ನಿಂಬೆ
ಹಣ್ಣು ಸಹ ಖರೀದಿಸಿದೆ. ಇದರ ಪಕ್ಕದಲ್ಲೇ ಮೊದಲ ಬಾರಿಗೆ ಆಸ್ಟ್ರಿಚ್ ಮೊಟ್ಟೆ
ಸಹ ನೋಡಿದೆ..
ಒಳಗೆ ಹೋದರೆ ಎಲ್ಲಿ ನೋಡಿದರೂ ಪಕ್ಷಿಗಳು
ನೆಲದ ಮೇಲೆ, ಮರದ ಮೇಲೆ ಎಲ್ಲೆಲ್ಲೂ. ಅವುಗಳ ಮಧ್ಯ ನಡೆಯೊದ್ರಲ್ಲಿ
ಇದ್ದ ಸಂತೋಷ ವಿಶ್ವ ವಿಖ್ಯಾತ ಸಾನ್-ಡಿಯಾಗೊ ಜೂ ಗೆ ಹೋಗಿದ್ರು
ಖಂಡಿತ ಸಿಗುತ್ತಿರಲಿಲ್ಲ. ಇವೆಲ್ಲ ಆಫ್ರಿಕಾ ಪಕ್ಷಿಗಳಂತೆ. ಅಲ್ಲಿಂದ ಮುಂದಕ್ಕೆ
ಹೋದರೆ ಬಣ್ಣಬಣ್ಣದ ಕೊಕ್ಕರೆಗಳು. ಹಾಗೆ ಮುಂದೆ ನಡೆಯುತ್ತಿದ್ದ
ಹಾಗೆ ಕಂಡಿದ್ದು ನಮ್ಮ ಭಾಂದವರು. ಅವರ ಒಂದು ಆಟ ನೋಡಿ ಮುಂದೆ
ಸಾಗಿದ ಹಾಗೆ ಕಂಡಿದ್ದು ಜಿಂಕೆಗಳ ಗುಂಪು ಅದರ ಮಧ್ಯೆ ನಿಲ್ಲುವ
ಅವಕಾಶ. ನನಗೆ ಭಯ ಪ್ರಾಣಿಗಳನ್ನ ಕಂಡರೆ ಭಯ
ಆದ್ದರಿಂದ ದೂರದಿಂದಲೇ ಆನಂದಿಸಿದೆ. ಅಲ್ಲಿಂದ ಮುಂದೆ ನಮ್ಮ ಆದಿಮಾನವರು.
ಅವರಂತೂ ನಮ್ಮನ್ನು ಎಷ್ಟು ಹೋಲುತ್ತಾರೆ ಅನ್ನೋದಕ್ಕಿಂತ ನಾವು
ಅವ್ರನ್ನ ತುಂಬಾನೇ ಹೋಲುತ್ತಿವಿ ಅನ್ನೋದು ಸೂಕ್ತ. ನೋಡಿ ತುಂಬಾ
ವರ್ಷಗಳೇ ಕಳೆದಿದ್ದವು. ಇದೇ ಖುಷಿಯಿಂದ ಮುಂದೆ ಹೋಗಿ ಪಾರ್ಕ್ ಸುತ್ತಾ
ಕರೆದೊಯ್ಯುವ ಉಗಿಬಂಡಿಗೆ ಹತ್ತಿ, ಅಲ್ಲಿಂದ ಆಫ್ರಿಕಾದ ಆನೆ, ನಮ್ಮ ಭಾರತದ
ನೀರಾನೆ, ಹೀಗೆ ಎಲ್ಲಾ ದೇಶದ ಪ್ರಾಣಿಗಳ ನಿಜವಾದ ವಾಸಸ್ಥಾನದ ಹಾಗೆ
ಸೃಷ್ಟಿಸಿ ಅಲ್ಲಿ ಆ ದೇಶದ ಪ್ರಾಣಿಗಳನ್ನ ಬಿಟ್ಟಿರುವುದು ನಿಜವಾಗಿಯು ಆ
ದೇಶಕ್ಕೆ ಹೋಗಿರೋ ಅಂತ ಭಾವನೆ ಬರುತ್ತೆ.
ಇಲ್ಲಿಂದ ನಮ್ಮ ಮುಂದಿನ ಪ್ರಯಾಣ ಹೊರಟಿದ್ದು
ಸೂರ್ಯಾಸ್ತ ನೋಡಲು `ಕೊರೊನಡೋ?
ಎಂಬ ಜಾಗಕ್ಕೆ , ಇದು ಒಂದು ದ್ವೀಪ ಆಗಿದ್ದರಿಂದ ಅಲ್ಲಿಗೆ ಹೋಗಲು
ಇರೋ ಸೇತುವೆ ಅಲ್ಲಿನ ಒಂದು ವಿಶೇಷತೆ, ಆ ಸೇತುವೆ ಮೇಲೆ ಹೋಗೋವಾಗ
ಕಾಣೋದೆ ನಮ್ಮ ಸಾನ್-ಡಿಯಾಗೊ ಸ್ಕೈಲೈನ್, ಅದನ್ನು ದಾಟಿದರೆ ನೇರವಾಗಿ
ಸಮುದ್ರದ ಅಂಚಿಗೆ ಕರೆದೊಯ್ಯಿತು, ಆದ್ರೆ ಅಂದು ಮೋಡಕವಿದ ಆಕಾಶ.
ಸೂರ್ಯಾಸ್ತ ಕಾಣಲೇ ಇಲ್ಲ, ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದುರುಗಿ
ಹೋಗುತ್ತಿರುವಾಗ ಟ್ಯೂಬ್‌ಲೈಟ್ ತರ ಫ್ಲಾಶ್ ಆಯ್ತು ಇಂದಾದರೂ
ಒಳ್ಳೆ ಊಟ ಮಾಡ್ಬೇಕು ಅನ್ನಿಸಿತು. ಸರಿ ಅಲ್ಲಿಂದ ಮತ್ತೆ ಹಿಂದಿನ
ರಾತ್ರಿಯ ಹಾಗೆ ಹುಡುಕಾಟ ಶುರುವಾಯಿತು... ಈ ಸಾರಿ ಎಲ್ಲಾದರು ಸರಿ
ಊಟ ಅಂತ ಸಿಕ್ಕಿದರೆ ಸಾಕು ಎನ್ನುತ್ತಿದ್ದ ಹಾಗೆ ಕಂಡಿದ್ದು ನಮ್ಮ ಭಾರತದ
ಒಂದು ಹೋಟೆಲ್ಲು. ತಡ ಮಾಡದೆ ಒಳಗೆ ಹೋದರೆ, ಇದ್ದವರೆ
ಎಣಿಸುವಷ್ಟು ಜನ. ಹೇಗಿರತ್ತೊ ಅನ್ನೋ ಭಯದಿಂದ ಬಯಸಿದನ್ನ
ಹೇಳಿದ್ದು ತಿಂದಿದ್ದು ಎಲ್ಲಾ ಆಯ್ತು. ಆ ದಿನ ಸ್ವಲ್ಪ ಆರಾಮವಾಗಿತ್ತು.
ಮರು ದಿನ ಹೊರ್ಟಿದ್ದು ಲಾಸ್ ಏಂಜಲೀಸ್ ನಗರ
ವೀಕ್ಷಣೆಗೆ. ಅಲ್ಲಿ ದಾರಿಯಲ್ಲೇ ಇದ್ದ ಡಿಸ್ನಿ ನೋಡಬೇಕು ಅಂತ
ಇತ್ತು. ಸರಿ ನಮ್ಮ ಮನೆ ಇಂದ ೨ ಘಂಟೆ ಅಂದುಕೊಂಡಿದ್ದು ಮತ್ತೇ
ಜಾಸ್ತಿ ಹೊತ್ತು ಆಯ್ತು. ಅಲ್ಲಿಗೆ ತಲುಪುವ ಅಷ್ಟ್ರಲ್ಲಿ ನಮ್ಮ ಕಥೆ
ಡಿಸ್ನಿ ಶೋ ಗಿಂತ ದೊಡ್ಡದಾಗಿತ್ತು. ಅಂದು ಅಲ್ಲಿ ೩೦-೩೫ ಡಿಗ್ರಿ.ಸೆ. ಇತ್ತು .
ಒಳಗೆ ಹೋಗೋ ಆಸೆಯನ್ನು ಆಗ್ಲೆ ಕಳೆದುಕೊಂಡು ಟಿಕೆಟ್ ಇಲ್ಲದೆ
ಎಲ್ಲಿವರೆಗೂ ಬಿಡುತ್ತಾರೋ ಅಲ್ಲಿವರೆಗೂ ಹೋಗೋಣ ಎಂದು ನಿರ್ಧರಿಸಿ ಆ
ಮಟ-ಮಟ ೧೨ಘಂಟೆ ಬಿಸಿಲಲ್ಲಿ ನಡೆದೆವು. ಹತ್ತಿರ ಹೋದಮೇಲೇ
ತಿಳಿಯಿತು ಈ ವರ್ಷ ಡಿಸ್ನಿಯ ೫೦ನೇ ವರ್ಷ ಅಂತ. ಸರಿ ಅಲ್ಲಿ ನಮ್ಮ ಸೋತ
ಮುಖಗಳ ಭಾವಚಿತ್ರಗಳನ್ನ ತೆಗೆದುಕೊಂಡು, `ಯುನಿವರ್ಸಲ್ ಸ್ಟೂಡಿಯೋಸ್'
ಕಡೆಗೆ ಪ್ರಯಾಣ ಬೆಳೆಸಿದ್ವಿ.
ಇಲ್ಲಿಂದ ೩೦ ನಿಮಿಷ ಅಂತ ಹೊರಟಿದ್ದು ಮತ್ತೆ
ನಮ್ಮ ಪ್ರಯಾಣ ೧:೩೦ ನಿಮಿಷ ಆಯ್ತು. ಕೊನೆಗೂ ತಲುಪಿದ್ವಿ ಅಂತ ನೋಡಿದ್ರೇ
ಮಧ್ಯಾಹ್ನ ೩ ಘಂಟೆಯಲ್ಲೂ ಆಂಜನೇಯನ ಬಾಲದ ಹಾಗೆ ಇದ್ದ ವಾಹನಗಳ
ಕ್ಯು ನೋಡಿ ಸುಸ್ತು ಹೊಡೆದ್ವಿ. ಸರಿ, ಅಲ್ಲಿಂದ ಹಿಂದಿರುಗಿ ಬರುವಾಗ ಮತ್ತೊಂದು
ಅದ್ಭುತವಾದ ಡೌನ್-ಟೌನ್ ನೋಡೋ ಆಸೆ. ಸರಿ ಹೇಗಿದ್ರೂ ಎಲ್ಲರೂ ಎಲ್-ಎ
ಡೌನ್-ಟೌನ್ ಸ್ವಲ್ಪ ಭಯ ಹುಟ್ಟಿಸೋ ಅಂತದ್ದು ಅಂತಾರೆ. ಅಲ್ಲಿ ಹೋದರೆ
ಬ್ರಾಡ್-ವೇ ಅನ್ನೋ ಅಲ್ಲಿನ ಪ್ರಮುಖ ರಸ್ತೆ ನೋಡಿದರೆ ನಮ್ಮ
ಕಣ್ಣುಗಳನ್ನು ನಾವೇ ನಂಬದ ಹಾಗೆ ಆಯಿತು ಕೆಲವು ನಿಮಿಷಗಳು.
ಅಲ್ಲಿ ಕಂಡದ್ದು ಅಂತದ್ದು. ಏನು ಅಂದ್ರೆ ನಮ್ಮ ಬೆಂಗಳೂರಿನ
ಮೇಜೆಸ್ಟಿಕ್, ಚಿಕ್ಕಪೇಟೆಯಂತೆ ಒಂದು ಮಾರುಕಟ್ಟೆ, ಬರ್ಮಾ ಬಜಾರ್
ಅಂತ ಬಜಾರ್‌ಗಳು. ಇಲ್ಲಿ ಬನ್ನಿ-ಇಲ್ಲಿ ಬನ್ನಿ ಅಂತ ಕರೆಯುವ ಅಂಗಡಿ
ಕೆಲಸದವರು.. ಹೀಗೆ ಹೆಜ್ಜೆ-ಹೆಜ್ಜೆಯಲ್ಲು ನಮ್ಮ ಬೆಂಗಳೂರಿನ
ನೆನಪು. ಹೀಗಿರುವಾಗ ಅಲ್ಲಿ ಮಿಸ್ಸ್ ಆಗಿದ್ದು ನಮ್ಮ ಕನ್ನಡ ಮಾತ್ರ
ಅದರ ಬದಲಿಗೆ ಇದ್ದದ್ದು ಸ್ಪಾನಿಷ್. ನಮ್ಮ ಜನರನ್ನು ಹೊಲುವ ಇವರ
ಮಧ್ಯೆ ಇದ್ದ ಅನುಭವ ಮರೆಯಲಾರದಂತಹುದು.
ಅಲ್ಲಿಂದ ಮತ್ತೇ ಶುರುವಾಗಿದ್ದು ನಮ್ಮ ಊಟದ
ಬಗ್ಗೆ ಚಿಂತೆ. ಸರಿ ಈ ಬಾರಿ ಬೇರೆಡೆ ತಿನ್ನುವ ಬಯಕೆಯಿಂದ ದೊಡ್ಡ ಬೋರ್ಡ್
ನೋಡಿ ಬಿದ್ದದ್ದು ಹಳ್ಳಕ್ಕೆ `ಗ್ರೇಟ್ ಇಂಡಿಯ?
ಅನ್ನೋ ಹೆಸರು ಕೇಳಿ, ಮನೆಯಲ್ಲಿ ತಿನ್ನುವ ಆಸೆಯಿಂದ ಬುತ್ತಿ
ಕಟ್ಟಿಸಿಕೊಂಡು ಹೊರೆಟೆವು. ಸರಿ ಮನೆ ಕಡೆ ಪ್ರಯಾಣ ಬೆಳೆಸಿದ್ದು,
ಆ ದಿನ ನಮ್ಮ ಮನೆ ಸುತ್ತಾ-ಮುತ್ತಾ ಸ್ವಲ್ಪ ನಡೆದಾಡಿ ನಂತರ ಬಂದು
ಬುತ್ತಿ ತೆಗೆದಾಗ ತಿಳಿದಿದ್ದು ನಮಗೆ ಹಾಕಿದ್ದು ಮಾಮೂಲಿನ ಟೋಪಿ ಅಲ್ಲ
ಮಖ್-ಮಲ್ ಟೋಪಿ ಅಂತ. ಹೆಸರಿಂದ ಹೊಟ್ಟೆ ತುಂಬಿಸಿ ಕೊಂಡು ಊಟ
ಇಲ್ಲದ ಗತಿಗೆ ಮತ್ತೇ. ಕೋಪ ಹಾಗೂ ಹಸಿವು ಎರಡರ ಮಧ್ಯೆ ನಿದ್ದೆ.
ಈ ರೀತಿ ಎಲ್ಲಾ ಭಾವನೆಗಳು ಒಟ್ಟಿಗೆ ಮೂಡಿ ಕೊನೆಗೆ ಹಾಸಿಗೆಗೆ. ನೀರಿಗೆ
ಆದ್ಯತೆ ನೀಡಿ ನಂತರ ಹಾಸಿಗೆ ಹಿಡಿಯುವುದು ಕ್ಷೇಮವೆನಿಸಿತು.
