|
ಕೋರ್ಟ್‌ನಿಂದ ಮಹಿಳೆಗೆ ಪರಿಹಾರ
ದೊರೆಯದು - ಗೌರಿ ಲಂಕೇಶ್
ಶಬರಿಮಲೆ ಪ್ರಕರಣದ
ಬಗ್ಗೆ ಗೌರಿಲಂಕೇಶ್ ಅಭಿಪ್ರಾಯ
ನಟಿ ಜಯಮಾಲ ಶಬರಿಮಲೆ
ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿರುವ ಬಗೆಗಿನ ಗಲಾಟೆ ಶಬರಿಮಲೆ ದೇವಸ್ಥಾನ ಶುದ್ಧೀಕರಣದೊಂದಿಗೆ
ತಣ್ಣಗಾದರೂ ವಿಷಯ ಅಲ್ಲಿಗೆ ಮುಕ್ತಾಯವಾದಂತಿಲ್ಲ. ಯಾಕೆಂದರೆ ಇಡೀ ಪ್ರಕರಣ
ಮಹಿಳೆಯರಿಗೆ ಕೆಲವು ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಣೆ ಎಂಬ ಪರಿಕಲ್ಪನೆ
ಕುರಿತಾಗಿದೆ. ೨೧ನೇ ಶತಮಾನದಲ್ಲಿಯೂ ಮಹಿಳೆಯೊಬ್ಬಳು ದೇವಸ್ಥಾನ
ಪ್ರವೇಶಿಸಬಾರದು ಎಂದು ನಿಷೇಧಿಸುವುದು ಒಂದು ವಿಪರ್‍ಯಾಸ.
ಈ ವಿಷಯವಾಗಿ ಕಾನೂನಿನ
ನೆರವಿನೊಂದಿಗೆ ನ್ಯಾಯವಾದಿ ರವಿಪ್ರಕಾಶ್ ಗುಪ್ತ ಅವರ ಮೂಲಕ ಮಹಿಳಾವಾದಿಗಳು ಸುಪ್ರೀಂ
ಕೋರ್ಟ್ ಮೊರೆ ಹೋಗಿದ್ದಾರೆ. ಮಹಿಳಾ ಸದಸ್ಯರು ದೇವಾಲಯ ಪ್ರವೇಶಿಸುವುದನ್ನು
ನಿಷೇಧಿಸಿದಲ್ಲಿ ಅದು ಸಂವಿಧಾನದ ೧೪ನೇ ವಿಧಿಯನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ
ಎಲ್ಲ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂದು
ಮಹಿಳಾವಾದಿಗಳು ಆಗ್ರಹಿಸಿದ್ದಾರೆ.
ಆದರೆ ಈ ಬಗ್ಗೆ
ಮಹಿಳಾವಾದಿ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್ ಅವರನ್ನು ಮಾತನಾಡಿಸಿದಾಗ,
ಕೋರ್ಟ್ ಮೊರೆ ಹೋಗುವುದರಿಂದ ಮಹಿಳೆಯರಿಗೆ ನ್ಯಾಯ ಸಿಗುತ್ತದೆ ಎಂಬುದರಲ್ಲಿ
ತಮಗೆ ನಂಬಿಕೆ ಇಲ್ಲ ಎಂದು ಅವರು ಹೇಳಿದ್ದಾರೆ.
`ಕೇರಳದಲ್ಲಿ
ಕಮ್ಯುನಿಸ್ಟ್ ಸರಕಾರ ಇದೆ. ಕಮ್ಯುನಿಸಂ ಅನುಯಾಯಿಗಳು ತಮ್ಮ ತೆರೆದ ನಿಲುವಿನಿಂದಾಗಿ
ಮಹಿಳೆಯರಿಗೆ ಶಬರಿಮಲೆಯಲ್ಲಿ ಪ್ರವೇಶ ಕಲ್ಪಿಸಲು ಅವಕಾಶ ಮಾಡಿಕೊಡಬಹುದು.
ಆದರೆ ವೈಯಕ್ತಿಕವಾಗಿ ನಾನು ದೇವರನ್ನು ನಂಬಲ್ಲ. ಕುವೆಂಪು ಹೇಳಿದಂತೆ ಗುಡಿಗೋಪುರಗಳನ್ನು
ಬಿಟ್ಟು ಹೊರಬನ್ನಿ ಎಂಬ ಮಾತು ಎಂದಿಗೂ ಸತ್ಯ. ಒಟ್ಟಿನಲ್ಲಿ ಶಬರಿಮಲೆ ಪ್ರಕರಣದ ಹಿನ್ನೆಲೆಯಲ್ಲಿ
ಕ್ರಾಂತಿ ಆಗುತ್ತೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ' ಎಂಬುದು ಗೌರಿ ಅಭಿಪ್ರಾಯ.
ಕೇರಳ ಸರಕಾರ
ಏನು ಹೇಳುತ್ತದೆ ?
ಈ ನಡುವೆ ಕೇರಳ
ಸರಕಾರದ ದೇವಸ್ವಂ ಮಂತ್ರಿ ಜಿ. ಸುಧಾಕರನ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.
ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಳಕ್ಕೆ ಪ್ರವೇಶ ನೀಡುವುದರ
ಬಗ್ಗೆ ಸಮ್ಮತಿ ಇದೆ ಎಂದಿರುವ ಸುಧಾಕರನ್ ಅದೇ ಹೊತ್ತಿಗೆ ಎಲ್ಲ ಸಮಸ್ಯೆಯನ್ನೂ
ಕೋರ್ಟ್ ಮೇಲೆ ಹೇರಿ ನುಣುಚಿಕೊಂಡಿದ್ದಾರೆ. `ಸರಕಾರ ಕೋರ್ಟ್ ಆದೇಶದಂತೆ ನಡೆಯಬೇಕಾಗಿದೆ.
ಮಹಿಳೆಯರಿಗೆ ಪ್ರವೇಶ ನಿಷೇಧಿಸುವ ದೇವಸ್ಥಾನ ಶಬರಿಮಲೆಯೊಂದೇ ಅಲ್ಲ, ಪುರುಷ
ಪ್ರಧಾನ್ಯ ಇರುವ ಇತರ ದೇವಸ್ಥಾನಗಳಲ್ಲೂ ಮಹಿಳೆಯರಿಗೆ ಪ್ರವೇಶ
ದೊರೆಯಬೇಕು. ಹಿಂದೆಯೆಲ್ಲಾ ಕೇರಳಿಯರು ಹಳೆಯ ಸಂಪ್ರದಾಯ,
ಆಚಾರಗಳನ್ನು ಬದಲಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಅಂತಹ ಪ್ರಯತ್ನದಿಂದಲೇ
ಕೆಳಜಾತಿಯವರಿಗೆ ದೇವಾಲಯ ಪ್ರವೇಶ ದೊರೆಯುವಂತಾಯಿತು. ಈಗಲೂ ಕೂಡ
ಮಹಿಳಾ ಸಂಘಟನೆಗಳು ಪ್ರಬಲವಾಗಿ ಸರಕಾರವನ್ನು ಆಗ್ರಹಪಡಿಸಿದರೆ ನಮ್ಮ ಸಿಪಿಎಂ ಪಕ್ಷದ
ವತಿಯಿಂದ ಅಗತ್ಯ ಸಹಾಯವನ್ನು ಒದಗಿಸಲು ಸಿದ್ಧ ಎಂದು ಕಮ್ಯುನಿಸ್ಟ್ ಮುಖಂಡ ಸುಧಾಕರನ್
ಹೇಳಿದ್ದಾರೆ.
ನೀವೇನಂತೀರಿ ? |