|
ಮಳೆಯೊಂದು
ಮಹಾಕಾವ್ಯ
ಲಕ್ಷ್ಮಿಕಾಂತ್,
ಬಸ್ರಿಕಟ್ಟೆ
yekantha@yahoo.com
ಮಳೆ
ಕೇವಲ ನೀರಲ್ಲ. ಅದೊಂದು ನೆನಪುಗಳ ಕಣಜ. ನಿನ್ನೆಯ ಕಹಿ ನೆನಪುಗಳನ್ನು
ತೊಳೆದು, ನಾಳೆಯ ಹೊಸ ಕನಸುಗಳಿಗೆ ಇಬ್ಬನಿಯ ಗೂಡು ಕಟ್ಟುವ ಅಮೂರ್ತ ಭಾವ.
ಮಳೆಯೊಂದಿಗೆ ಹುಟ್ಟದ ಹಾಡುಗಳಿಲ್ಲ, ಅರಳದ ಮೊಗ್ಗುಗಳಿಲ್ಲ. ಚಿಗುರದ ನೆನಪುಗಳಿಲ್ಲ.
ಹೌದು, ಮಳೆ ಒಂದು ಮಹಾ ಕಾವ್ಯ.
ಕಾಲ ಯಾರಿಗೂ ಕಾಯೋದಿಲ್ಲವಂತೆ. ಹಾಗೆಯೇ ಮಳೆಯೂ ಕೂಡಾ. ಅಡಿಯಿಂದ ಮುಡಿವರೆಗೆ
ಮೈತುಂಬಾ ನೆಂದ ಮೇಲೆಯೇ ಮಳೆಯೊಂದಿಗಿನ ಅನುಭವ
ಮೊಳಕೆಯೊಡೆಯುವುದು. ಚಳಿ ಬಿಟ್ಟು ಮಳೆಯಲ್ಲಿ ನೆನೆಯಲು ಯಾರಿಗೆ ತಾನೇ ಮನಸಾದೀತು?
ಆದರೂ ಒಂದೊಮ್ಮೆ ಚಳಿ ಬಿಟ್ಟು ಪೂರ್ತಿ ನೆನೆದು ಬಿಡಿ. ನೊಂದ ಮನಸ್ಸಿನಲ್ಲಿ ಹೆಪ್ಪುಗಟ್ಟಿರುವ
ನೋವೆಂಬ ಕೊಳೆ ಹೇಳ ಹೆಸರಿಲ್ಲದಂತೆ ತೊಳೆದು ಹೋಗುತ್ತದೆ.

ಉಟ್ಟ ಬಟ್ಟೆ ಎಲ್ಲಾ ಮೈಗಂಟಿಕೊಂಡು ಕೈ ಎದೆಗಪ್ಪಿಕೊಂಡು ನಡುಗುತ್ತಿರುವಾಗಲೇ
ನಿಮ್ಮಲೆಂದು
ಅನನ್ಯ ರಾಗ ಹೊರಹೊಮ್ಮೊದು. ಪದಗಳಲ್ಲಿ ಅದನ್ನು ಎಷ್ಟೂಂತ ತಾನೇ ವರ್ಣಿಸಲು ಸಾಧ್ಯ.
ಅದನ್ನು ಅನುಭವಿಸಿಯೇ ನೋಡಬೇಕು.
ಒಂದು ವೇಳೆ ಮಳೆಯೇ ಇಲ್ಲದಿದ್ದರೆ? ಒಮ್ಮೆ ಊಹಿಸಿಕೊಳ್ಳಿ. ಸುಟ್ಟು ಕರಗಲಾದ ಭೂಮಿ,
ಕಂಗಾಲಾದ ಕವಿಗಳು, ಎಲ್ಲೆಲ್ಲೂ ಬರಡು. ಆಗ
?ಹಸಿರು?
ಅನ್ನೋ ಪದಕ್ಕೆ ಅರ್ಥವೆಲ್ಲಿರುತ್ತಿತ್ತು?
ನೆನಪಿಸಿಕೊಳ್ಳಿ; ನೀವು ನಿಮ್ಮಷ್ಟಕ್ಕೇ ಹಾಡತೊಡಗಿರುತ್ತೀರಿ. ಅಂತಹ ವಿಶೇಷ ಶಾರೀರವಿರುವ
ವ್ಯಕ್ತಿಯಾಗಿಲ್ಲದಿರಬಹುದು. ಆದರೆ ಮಳೆಯಲ್ಲಿ ನೆಂದು ಹದಗೊಂಡಿರುವ ಹೊತ್ತು ಹೊಮ್ಮುವ
ಆ ಹಾಡಿದೆಯಲ್ಲ, ಅದರಲ್ಲಿ ನಿಮಗೆ ನೀವೇ ಸಾಟಿ. ಗಗನಂ ಗಗನಾಕಾರಂ... ಸಾಗರಂ ಸಾಗರೋಪಮಂ...
ಅನ್ನುತ್ತಾರಲ್ಲ, ಹಾಗೆ. ಒಂದನೇ ಇಯತ್ತೆಯಲ್ಲಿ ಕಲಿತಿದ್ದ ಹಾಡುಗಳೆಲ್ಲ ತನ್ನಿಂತಾನಾಗಿಯೇ
ಅರಳಿಕೊಳ್ಳುತ್ತಾ ಹೋಗುತ್ತವೆ.
ಮೊಣಕಾಲವರೆಗೆ ಚಡ್ಡಿ ಹಾಕಿಕೊಂಡು ಹೆಮ್ಮರ ಗಾತ್ರದ ಛತ್ರಿ ಹಿಡಿದು ರಸ್ತೆಯಲ್ಲಿ ಹರಿಯುತ್ತಿದ್ದ
ಕೆಂಪು ಬಣ್ಣದ ಮಳೆ ನೀರಿನ ಹಿಂದೆಯೇ ಓಡಾಡಿದ ನೆನಪು ಈಗಲೂ ಕಾಡುತ್ತಿವೆ. ಕೆಂಪು ಬಿಳಿ
ಯುನಿಫಾರ್ಮಿನ ಮೇಲೆ ರಾಚಿರುವ ಕೆಸರಿನ ಗುರುತು, ಅಮ್ಮನ ಬೈಗುಳ, ವಾರಗಟ್ಟಲೆ
ಬೆನ್ನು ಬಿಡದ ಶೀತ ಜ್ವರ. ಎಲ್ಲವೂ ಮಳೆಯ ಹಾಗೆ. ಸರ್ವಕಾಲಕ್ಕೂ ಪ್ರಸ್ತುತ.
ಪಾರ್ಕೊಂದರ ಮೂಲೆಯಲ್ಲಿ ಮಳೆಯಿಂದ ತಪ್ಪಿಸಿಕೊಳ್ಳಲು ಕಪ್ಪು ಜರ್ಕೀನು ಹೊದ್ದುಕೊಂಡು
ನಿಂತುಕೊಳ್ಳಲು ಜಾಗ ಹುಡುಕುವ ಯುವ ಪ್ರೇಮಿಗಳಿಗೆ ಮಳೆ ಒಂದು
?ಸುಂದರ
ನೆಪ?.
ಒಂದರ್ಥದಲ್ಲಿ ಪ್ರೀತಿ ಹುಟ್ಟೋದೇ ಅಲ್ಲಿಂದ. ಎರಡು ಬೆಚ್ಚಗಿನ ಮನಸ್ಸುಗಳ ನಡುವೆ
ತಣ್ಣನೆಯ ಪ್ರೀತಿ ಹುಟ್ಟಿ ಹೊಸ ಅರ್ಥ ಪಡೆದುಕೊಳ್ಳುತ್ತದೆ.
ಮೇಜರ್ ಕ್ಲಾಸಿನಲ್ಲಿ ಶೇಕ್ಸ್‌ಪಿಯರ್ ಕಾದಂಬರಿ ಕೇಳುತ್ತಿರುವಾಗಲೇ ಕಣ್ಣು ಕಿಟಕಿಯಿಂದಾಚೆಗೆ
ಯಾರನ್ನೋ ಹುಡುಕುತ್ತಿರುತ್ತದೆ. ತಪ್ಪು ತಿಳಿಯಬೇಡಿ. ಹೊರಗೆ ಯಮಗಾತ್ರದಲ್ಲಿ
ಮಳೆ ಸುರಿದರೆ ಪಾಠ ಕೇಳಿಸುವುದಿಲ್ಲ. ಮೇಡಂ ಕ್ಲಾಸ್ ಬಿಟ್ಟು ಬಿಡುತ್ತಾರೆ. ಆವಾಗಲೇ ನೋಡಿ
ಛತ್ರಿ ಮರೆತು ಬಂದಿರುತ್ತೇವೆ. ಗ್ರಹಚಾರ ?
ಯಾರ್‍ಯಾರದ್ದೋ ಛತ್ರಿಯಲ್ಲಿ ಅರ್ಧಂಬರ್ಧ ನೆನೆಯುತ್ತಾ ಹಾಸ್ಟೆಲ್ ಸೇರುವುದೇ
ಒಂದು ಮಜಾ.
ಹೌದು ಮಳೆ ಒಂದು ಮಹಾ ಕಾವ್ಯ. ಹೀಗೆ ಮಳೆಯೊಂದಿಗಿನ ನೆನಪುಗಳನ್ನು
ಕೆದಕುತ್ತಾ ಹೋದಂತೆಲ್ಲಾ ನೆನಪಿನ ಜೋಳಿಗೆ ತುಂಬಿ ಬಿಡುತ್ತದೆ. ಮತ್ತೆ ಬಾನು
ಕಪ್ಪಿಡುತ್ತದೆ. ಇಳೆ ತುಂಬಾ ಮಳೆ ಮಳೆ... |