|
ಆಗಸ್ಟ್
17ರಂದು
ಪತ್ರಿಕೆಯ ಬಿಡುಗಡೆ ಸಮಾರಂಭ
ಆತ್ಮೀಯರೆ,
ಕನ್ನಡದಲ್ಲಿ
ಪ್ರಚಲಿತ ವಿದ್ಯಮಾನಗಳನ್ನು ಆಧರಿಸಿದ ವಸ್ತುನಿಷ್ಠ ವರದಿಗಾರಿಕೆಯ, ಅತ್ಯುತ್ತಮ
ಗುಣಮಟ್ಟದ ಮುದ್ರಣದ, ಜನಪರ
ವಾರಪತ್ರಿಕೆಯನ್ನು ಹೊರತರಬೇಕೆಂಬ ಯೋಜನೆ ಹಾಕಿಕೊಂಡು
5
ವಾರಗಳ ಕಾಲ ಬೆಂಗಳೂರಿಗೆ ಹೋದದ್ದು ಏನಾಯಿತು ಎಂದು ಹೇಳಲು ಇದು ಸಮಯ.
ಅಂದುಕೊಂಡದ್ದು ಐದು ವಾರಗಳು. ಅಲ್ಲಿ ಕಳೆಯಬೇಕಾಗಿ ಬಂದದ್ದು
7
ವಾರಗಳು. ಐದು ವರ್ಷಗಳ ಹಿಂದೆ ನನಗೇ ಗೊತ್ತಿಲ್ಲದೆ ನಡೆದ ಒಂದು ಪಿತೂರಿ(?), ವಂಚನೆ
ಈಗ ನಾನು ಬೆಂಗಳೂರಿನಲ್ಲಿ ಎರಡು ವಾರ ಹೆಚ್ಚಿಗೆ ಕಳೆಯುವಂತೆ ಮಾಡಿದ್ದಲ್ಲದೆ, ಮುಂಬಯಿಗೆ
ಒಂದು ಬಾರಿ ಹೆಚ್ಚಿಗೆ, ಚೆನ್ನೈಗೂ ಒಂದು ಬಾರಿ ಹೋಗುವಂತೆ ಮಾಡಿತು. ಸಮಯ,
ದುಡ್ಡು, ಅನಗತ್ಯ ಪ್ರವಾಸದ ಜೊತೆಗೆ ಮನಸ್ಸಿನ ಒಂದು ಪ್ರಮುಖ ಕ್ರಿಯಾಶೀಲ ಭಾಗವನ್ನು
ಸುಮಾರು
4
ವಾರಗಳ ಯಾವಾಗಲೂ ಆಕ್ರಮಿಸಿಕೊಂಡು, ನನ್ನ ಹಲವಾರು ನಂಬಿಕೆಗಳನ್ನು ಬುಡಮೇಲು
ಮಾಡಿತು. ಕೆಲವೊಮ್ಮೆ, ಮೂರು ವರ್ಷದ ಹಿಂದೇನಾದರೂ ಇದೇ ಸಂಗತಿ ಹೊರಗೆ ಬಂದಿದ್ದರೆ
ನನ್ನ ಜೀವನ ಎಲ್ಲಿ ಯಾವಾಗ ಏನೇನು ತಿರುವು ತೆಗೆದುಕೊಳ್ಳುತ್ತಿತ್ತು ಎನ್ನುವುದರ
ಕಲ್ಪನೆ ಬೆಂಗಳೂರಿನ ಆಷಾಡದ ರಾತ್ರಿಗಳಲ್ಲೂ ಬೆವರುವ ಹಾಗೆ ಮಾಡಿಬಿಟ್ಟಿತ್ತು.
ಈ
ವೈಯಕ್ತಿಕ ವಿಷಯ ಇಲ್ಲಿ ಹೇಳಿಯೂ ಹೇಳದಂತೆ ಹೇಳುವುದಕ್ಕೆ ಕಾರಣವಿದೆ. ಸಿಲಿಕಾನ್
ಕಣಿವೆಯ ನನ್ನ ಆತ್ಮೀಯ ಮಿತ್ರರಲ್ಲೊಬ್ಬರಾದ ಮಧುಕಾಂತ್, ತಾವು ಎಲ್ಲೋ ಓದಿದ
ಮಾತನ್ನು ಆಗಾಗ ನನಗೆ ಹೇಳುತ್ತಿದ್ದರು:
"From
the moment of commitment, nature conspires to help you."
ಏನೋ ಒಂದನ್ನು ಮಾಡಲು ಹೋದಾಗ ಸಹಜವಾಗಿ ಎದುರಾಗುವ ಎಡರುತೊಡರುಗಳನ್ನು
ಮತ್ತೊಂದು ದಡದಿಂದ, ಮತ್ತೊಂದು ಸಮಯದಲ್ಲಿ ಗುಣಾತ್ಮಕವಾಗಿ ಕಂಡಾಗ ಉದಿಸುವ
ಪರಮ ಆಶಾವಾದದ ಮಾತಿದು. ವಾರಪತ್ರಿಕೆಯ ವಿಷಯದಲ್ಲಂತೂ ಇದು ನನಗಾದ
ವೈಯಕ್ತಿಕ ದರ್ಶನ. ಪತ್ರಿಕೆಗೆ ಸಂಬಂಧಿಸಿದಂತೆ ಎಷ್ಟೋ ವಿಷಯಗಳನ್ನು ನಾನು
ಅರ್ಥ ಮಾಡಿಕೊಳ್ಳಲೇಬೇಕಿತ್ತು ಹಾಗು ಅಲ್ಲಿರಲೇಬೇಕಿತ್ತು. ಬಹುಪಾಲು ಸಾಧಕ
ಬಾಧಕಗಳು, ಪತ್ರಿಕೋದ್ಯಮ ಜಗತ್ತಿನ ವಾಸ್ತವದ ಅರಿವು, ಹೆಚ್ಚಿಗೆ ಇರಬೇಕಾಗಿ ಬಂದ
ಆ ಎರಡು ವಾರಗಳಲ್ಲಿ ಆಯಿತು. ಹಾಗಾಗಿಯೇ ಇದನ್ನು ಒಳ್ಳೆಯ ಕಾರಣಕ್ಕಾದ ಪಿತೂರಿ
ಇರಬಹುದೆ ಎಂದು ಭಾವಿಸುವಂತಾಗಿದ್ದು.
ನಿಮಗೆಲ್ಲ
ಈಗಾಗಲೇ / ಗೊತ್ತಿದೆ; ವಾರಪತ್ರಿಕೆಯ ಸಂಪಾದಕರಾಗಿ ಎರಡು ದಶಕಗಳಿಗೂ ಮೀರಿದ
ಅನುಭವ ಇರುವ ಪತ್ರಕರ್ತ ಸತ್ಯಮೂರ್ತಿ ಆನಂದೂರುರವರು ನಿಯೋಜಿತರಾಗಿದ್ದಾರೆ.
ಸತ್ಯಮೂರ್ತಿಯವರು
ಆಗುಂಬೆಯ ಬಳಿಯ ಆನಂದೂರಿನವರು. ೮೦ರ ದಶಕದಲ್ಲಿ `ಲಂಕೇಶ್ ಪತ್ರಿಕೆ'ಯಲ್ಲಿ ಸುಮಾರು
ಹತ್ತು ವರ್ಷಗಳ ಅನುಭವದ ನಂತರ, `ಈ ವಾರ ಕರ್ನಾಟಕ'ಎಂಬ ವಾರಪತ್ರಿಕೆಯನ್ನು
ತಮ್ಮದೇ ಸಂಪಾದಕತ್ವದಲ್ಲಿ
1994ರಲ್ಲಿ
ಆರಂಭಿಸಿ ನಿಭಾಯಿಸಿದ ಅನುಭವ ಅವರದು. ಹಾಗೆಯೇ `ಜನವಾಹಿನಿ' ಮತ್ತು `ಸೂರ್‍ಯೋದಯ'
ದಿನಪತ್ರಿಕೆಗಳಲ್ಲಿ ಸಹಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಟೀವಿ ಮಾಧ್ಯಮದಲ್ಲಿಯೂ
ಕೆಲಸ ಮಾಡಿರುವ ಸತ್ಯಮೂರ್ತಿಯವರು, ಡಾಕ್ಯುಮೆಂಟರಿ ಚಿತ್ರಗಳು, ಹಲವು
ಧಾರಾವಾಹಿ ಮತ್ತು ಚಲನಚಿತ್ರಗಳಿಗೆ ಸಂಭಾಷಣೆಗಳನ್ನೂ ಬರೆದಿದ್ದಾರೆ. ರಾಜ್ಯ ಚಲನಚಿತ್ರ
ಪ್ರಶಸ್ತಿ ಸಮಿತಿಯ ಜ್ಯೂರಿಯಾಗಿಯೂ ಕೆಲಸ ಮಾಡಿದ್ದಾರೆ.
ಸತ್ಯಮೂರ್ತಿಯವರ ನೇತೃತ್ವದಲ್ಲಿ ನಮ್ಮ ಪತ್ರಿಕೆಯ ಸಂಪಾದಕ ಸಮಿತಿ, ಹಲವಾರು
ವಾರಗಳ ಸಿದ್ಧತೆಯ ನಂತರ, ಪತ್ರಿಕೆಯ ಬಿಡುಗಡೆಯ ದಿನಾಂಕವನ್ನು ನಿರ್ಧರಿಸಿದೆ.
ಹೌದು, ಇನ್ನು ಪತ್ರಿಕೆ ಕರ್ನಾಟಕದಾದ್ಯಂತ ಕೆಲವೇ ದಿನಗಳಲ್ಲಿ ಪ್ರತಿವಾರ ದೊರಕಲಿದೆ.
ಆಗಸ್ಟ್ 17ರಂದು,
ಬೆಂಗಳೂರಿನಲ್ಲಿ ಬಿಡುಗಡೆ ಸಮಾರಂಭ. ಮಿಕ್ಕ ವಿವರಗಳು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದೇವೆ.
ಪತ್ರಿಕೆ ಪುಸ್ತಕ
ಆಕಾರದಲ್ಲಿ, ಅಂದರೆ ಸುಧಾ-ತರಂಗದ ಆಕಾರದಲ್ಲಿ ಬರಲಿದೆ. ಒಟ್ಟು ಪುಟಗಳು
64.
ಎಲ್ಲಾ ಪುಟಗಳೂ ಬಹುವರ್ಣದಲ್ಲಿಯೇ ಇರುತ್ತವೆ. ಆಷ್ಟೇ ಮುಖ್ಯವಾದ ವಿಷಯ
ಎಂದರೆ, ಎಲ್ಲಾ ಪುಟಗಳು ಉತ್ತಮ ಗುಣಮಟ್ಟದ ಗ್ಲೇಜ್‌ಡ್ ಕಾಗದದಿಂದ ಕೂಡಿರುತ್ತವೆ.
ಮುಖಪುಟ ಬೆಲೆ ರೂ.
10.
ಅಸಲಿ ವಿಷಯ ಏನೆಂದರೆ, ಒಂದು ಪ್ರತಿಗೆ ಬೀಳುವ ಮುದ್ರಣದ ಖರ್ಚು ಓದುಗರು ನೀಡುವ
ಮುಖಪುಟ ಬೆಲೆಗಿಂತ ಜಾಸ್ತಿ ಮತ್ತು ಏಜೆಂಟರು ಕಮಿಷನ್ ಕಳೆದು ನಮಗೆ ನೀಡುವ ಬೆಲೆಗಿಂತ
ಬಹುಪಾಲು ಜಾಸ್ತಿ! ಈ ಖರ್ಚಿನಲ್ಲಿ ಸಂಪಾದಕ ಮಂಡಳಿ ಮತ್ತು ಪತ್ರಿಕೆಯ ಇತರೆ ಖರ್ಚು ಸೇರಿಲ್ಲ.
ಹಾಗಾದರೆ ಪತ್ರಿಕೆ
ಸ್ವಾವಲಂಬಿಯಾಗುವುದು ಹೇಗೆ? ಅದನ್ನು ಜಾಹೀರಾತಿನಿಂದಲೇ ಸಾಧಿಸಬೇಕು. ಸದ್ಯಕ್ಕೆ
ಕನ್ನಡಲ್ಲಿ ಜಾಹೀರಾತು ನಂಬಿಕೊಂಡು ಬದುಕುತ್ತಿರುವ ವಾರಪತ್ರಿಕೆ ಯಾವುದೂ ಇಲ್ಲ
ಎಂದೇ ಹೇಳಬೇಕು. ವಾರಪತ್ರಿಕೆಗಳ ಮುಖಪುಟ ಬೆಲೆಗಿಂತ ಅವಕ್ಕೆ ಬೀಳುವ ಖರ್ಚು ಸ್ವಲ್ಪ
ಕಡಿಮೆ. ಸ್ವಲ್ಪ ಕಡಿಮೆ ಎಂದು ಏಕೆ ಹೇಳಿದೆನೆಂದರೆ, ಯಾರೂ ಅನವಶ್ಯಕವಾಗಿ
ಓದುಗರ ಸುಲಿಗೆ ಮಾಡುತ್ತಿಲ್ಲ. ಆದ್ದರಿಂದ ಜಾಹೀರಾತು ಇಲ್ಲದಿದ್ದರೂ, ಮುದ್ರಣದ
ವಿಷಯದಲ್ಲಿ ಅಲ್ಪಸ್ವಲ್ಪ ರಾಜಿ ಮಾಡಿಕೊಂಡ ಕಾರಣವಾಗಿ ಅವರಿಗೆ ಖರ್ಚು ಗಿಟ್ಟುತ್ತಿದೆ. ಪ್ರಸಾರ
ಜಾಸ್ತಿಯಾದಷ್ಟೂ ಅವುಗಳ ಖರ್ಚು ಕಮ್ಮಿಯಾಗಿ ಲಾಭಾಂಶ ಹೆಚ್ಚುತ್ತದೆ. ಆದರೆ, ಮುದ್ರಣದ
ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂಬ ಒಂದೇ ಕಾರಣಕ್ಕೆ `ವಿಕ್ರಾಂತ ಕರ್ನಾಟಕ'ಕ್ಕೆ
ಜಾಹೀರಾತು ಬಹಳ ಮುಖ್ಯವಾಗಿಬಿಡುತ್ತದೆ. ಹಾಗಾಗಿ ಪ್ರಾರಂಭದ ಹಲವು ಸಂಚಿಕೆಗಳಿಗೆ ಸ್ನೇಹಿತರಿಂದ,
ಹಿತೈಷಿಗಳಿಂದ, ಪರಿಚಿತರಿಂದ, ಬೆಂಬಲಿಗರಿಂದ, ಶುಭ ಹಾರೈಕೆ ಜಾಹೀರಾತುಗಳನ್ನೂ ಪತ್ರಿಕೆ
ಸ್ವೀಕರಿಸುತ್ತದೆ. ನಮಗೆ ಈಗಾಗಲೆ/ಬೆಂಗಳೂರಿನ ಮತ್ತು ಇಲ್ಲಿ ಅಮೇರಿಕದಲ್ಲಿನ
ಬಳಗದಲ್ಲಿ ವೈಯಕ್ತಿಕ ನೆಲೆಯಲ್ಲಿ ಸಿಕ್ಕಿರುವ ಮತ್ತು ಸಿಗುತ್ತಿರುವ ಬೆಂಬಲ ನಿಜಕ್ಕೂ
ನನ್ನನ್ನು ಭಾವಪರವಶನನ್ನಾಗಿ ಮಾಡುತ್ತಿದೆ. ನಿಮ್ಮೆಲ್ಲರ ಹಾರೈಕೆ, ಬೆಂಬಲ, ಪ್ರೋತ್ಸಾಹವೂ
ಪತ್ರಿಕೆಗೆ ಅಪರಿಮಿತವಾಗಿ ಇರಲಿ ಎಂದು ಇದೇ ಸಮಯದಲ್ಲಿ ಕೇಳಿಕೊಳ್ಳುತ್ತೇನೆ.
ನಂತರ, ಮುಂದೇನು?
ಒಂದು ಉತ್ತಮ ಗುಣಮಟ್ಟದ ಇಂಗ್ಲಿಷ್ ವಾರಪತ್ರಿಕೆಗೆ ವಾಣಿಜ್ಯ ಸಂಬಂಧಿ ಜಾಹೀರಾತು
ಸಿಗುವುದಾದರೆ, ಕನ್ನಡ ವಾರಪತ್ರಿಕೆಗೆ ಯಾಕೆ ಸಿಗುವುದಿಲ್ಲ ಎನ್ನುವ ಮೂಲಭೂತ ಪ್ರಶ್ನೆ
ನಮ್ಮದು. ಸಿಗುವಂತೆ ಮಾಡಲು ಏನೇನು ಮಾಡಬೇಕೋ ಅವೆಲ್ಲವನ್ನೂ, ಓದುಗರ
ಕಾಳಜಿಗೆ, ನಂಬಿಕೆ ಅಪಚಾರವಾಗದಂತೆ, ನಮ್ಮ ಪ್ರಾಮಾಣಿಕತೆಯಲ್ಲಿ ಎಂದಿಗೂ
ರಾಜಿಯಾಗದಂತೆ ಸಾಧಿಸಬೇಕು ಎನ್ನುವುದು ಸದ್ಯದ ತೀರ್ಮಾನ. ಪತ್ರಿಕೆಯ
ಬಳಗದ ಎಲ್ಲರಿಗೂ ಇದರ ಬಗ್ಗೆ ವಿಶ್ವಾಸವಿದೆ.
ಇನ್ನು ಅಂತರ್ಜಾಲ
ತಾಣದ ಬಗ್ಗೆ.
www.vikrantakarnataka.com
ಅನ್ನು ಒಂದು
ಉತ್ತಮ ಜಾಲತಾಣವಾಗಿ ರೂಪಿಸುವ ಪ್ರಯತ್ನಗಳು ಮತ್ತು ಪ್ರಾರಂಭದ ತಾಂತ್ರಿಕ
ಸಿದ್ಧತೆಗಳು ನಡೆಯುತ್ತಿವೆ. ನಾನು ಸ್ವತಃ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗಿ,
ಕನ್ನಡದಲ್ಲಿ, ಕರ್ನಾಟಕದ ಆಗುಹೋಗುಗಳಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ಸುದ್ಧಿ
ಕೊಡುವ ಒಂದು ಜಾಲತಾಣ ವಾರಪತ್ರಿಕೆಗೆ ಪೂರಕವಾಗಿ ರೂಪಿಸಬೇಕು ಎಂದು ಇದನ್ನು
ಆರಂಭಿಸಿರುವುದು. ಕನ್ನಡ ಜನಪ್ರಿಯ ತಾಣಗಳಲ್ಲೊಂದಾದ
www.thatskannada.comನಲ್ಲಿ
ಸೇವೆ ಸಲ್ಲಿಸಿದ ಅನುಭವ ಇರುವ ರಾಜಲಕ್ಷ್ಮೀ ಕೋಡಿಬೆಟ್ಟುರವರು
ಅಂತರ್ಜಾಲ ತಾಣದ ವ್ಯವಸ್ಥಾಪಕ ಸಂಪಾದಕಿ. ನಮ್ಮ ಜಾಲತಾಣದ ಬಗ್ಗೆ ಯಾವುದೇ
ಅನಿಸಿಕೆ,
feedback
ಆಗಲಿ ಇದ್ದಲ್ಲಿ
ದಯವಿಟ್ಟು ಅವರಿಗೆ
rajalakshmi@vikrantakarnataka.com
ಗೆ
ದಯವಿಟ್ಟು ಇ-ಮೇಯ್ಲ್ ಮಾಡಿ. ಹಾಗೆಯೇ ನಿಮ್ಮ ಬರಹಗಳನ್ನು
ರಾಜಲಕ್ಷ್ಮೀಯವರ ಇ-ಮೇಯ್ಲ್‌ಗೆ ಅಥವಾ
feedback@vikrantakarnataka.com
ಗೆ
ಕಳುಹಿಸಿಕೊಟ್ಟು ಪತ್ರಿಕೆಯ ಬರಹಗಾರರ ಬಳಗದಲ್ಲಿ ತಾವೂ ಒಬ್ಬರಾಗಬೇಕೆಂದು
ತಮ್ಮಲ್ಲೊಂದು ಮನವಿ. ಹಾಗೂ, ನಿಮ್ಮ ಪರಿಚಿತ ಬಳಗದಲ್ಲಿ ಜಾಲತಾಣವನ್ನು ದಯವಿಟ್ಟು
ಪರಿಚಯಿಸಿ. ಜಾಲತಾಣವನ್ನು ಸಹ ಆಗಸ್ಟ್
17ರಂದು
ಔಪಚಾರಿಕವಾಗಿ ಉದ್ಘಾಟಿಸಲಾಗುವುದು.
ಕಳೆದೆರಡು
ತಿಂಗಳಿನಲ್ಲಿ ಅನೇಕ ಘಟನೆಗಳಾದವು. ಆದರೆ ಪತ್ರಿಕೆಯನ್ನು ಹೊರತರುವ
ವಿಷಯದಲ್ಲಿ ಎರಡನೆ ಯೋಚನೆ ಬರಲೇ ಇಲ್ಲ. ಇದಕ್ಕೆ ಮೂಲ ಕಾರಣ ಪತ್ರಿಕೆಯ ಪ್ರಕಾಶಕರು
ಮತ್ತು ಮಾಲೀಕರಾದ ನನ್ನ ಪ್ರೀತಿಯ ಅಣ್ಣ ಬಿ.ಕೆ. ಸುರೇಶ್. ಅವರು ತಮ್ಮೆಲ್ಲ
ಇತರ ಲಾಭದಾಯಕ ಕಾರ್ಯಗಳನ್ನು, ಆಸಕ್ತಿ, ಹವ್ಯಾಸಗಳನ್ನೆಲ್ಲ ಬದಲಿಸಿಕೊಂಡು ಹಗಲು
ರಾತ್ರಿ ಇದಕ್ಕೇ ತೊಡಗಿಸಿಕೊಂಡುಬಿಟ್ಟಿದ್ದಾರೆ. ಅವರೊಬ್ಬ ಸೂಕ್ಷ್ಮಮನಸ್ಸಿನ,
ದೈತ್ಯದುಡಿಮೆಯ, ನೇರ ನಡೆನುಡಿಯ, ವಾಸ್ತವಪ್ರಜ್ಞೆಯ ಮನುಷ್ಯ. ಈ
ರಂಗದ ನಡಾವಳಿಗಳನ್ನೆಲ್ಲ ಶೀಘ್ರಸಮಯದಲ್ಲಿ ತಿಳಿದುಕೊಳ್ಳುತ್ತಿದ್ದಾರೆ. ಜೊತೆಗೆ
ಆತ್ಮೀಯ ಮಿತ್ರರಾದ ಆನಂದ್‌ರವರು ಸಹ ಅವರ ಜೊತೆಯಲ್ಲಿ ಎರಡು ತಿಂಗಳಿನಿಂದಲೂ
ಅನೇಕ ರೀತಿಯಲ್ಲಿ ದುಡಿಯುತ್ತಿದ್ದಾರೆ.
ಈಗ ಸುಮಾರು
15
ಜನ ಪೂರ್ಣಾವಧಿ ಉದ್ಯೋಗಿಗಳು ಪತ್ರಿಕೆಗೆ ದುಡಿಯುತ್ತಿದ್ದಾರೆ. ಬಹುಶಃ ಇಷ್ಟು ಮಟ್ಟದ
ಹೂಡಿಕೆ ಮತ್ತು ಯೋಜನೆ ಕನ್ನಡದ ಯಾವ ವಾರಪತ್ರಿಕೆಗೂ ಆಗಿರಲಾರದು ಎನ್ನುವುದು
ನನ್ನ ಅನಿಸಿಕೆ. ಅಷ್ಟೆಲ್ಲವೂ ಈ ಮಟ್ಟದ ಪತ್ರಿಕೆಗೆ ಬೇಕು. ಹಾಗೂ ಈ ಸಂಸ್ಥೆಯನ್ನು ಈ
ಕಾರ್ಯರಂಗದಲ್ಲಿ ಉತ್ತಮ ಮಟ್ಟದ, ಯಾವುದೇ ಇಂಗ್ಲಿಷ್ ಪತ್ರಿಕೆಗೆ ಕಮ್ಮಿ ಇರದ
ರೀತಿಯ ವೃತ್ತಿಪರ ಸಂಸ್ಥೆಯಾಗಿ ಬೆಳೆಸಬೇಕು ಎನ್ನುವುದು ನಮ್ಮೆಲ್ಲರ ದೃಢನಿರ್ಧಾರ.
ಅದನ್ನು ಸಾಕಾರ ಮಾಡುವಲ್ಲಿ ನಮ್ಮೆಲ್ಲರ ದುಡಿಮೆ ಮತ್ತು ಚಿಂತನೆ ಹಗಲು ರಾತ್ರಿ
ಇರುತ್ತದೆ.
ಪತ್ರಿಕೆಯ
ಬಿಡುಗಡೆಯ ದಿನಾಂಕದ ಜೊತೆಗೆ ಹೇಳಲೇಬೇಕಾದ ಕೆಲವನ್ನು ಹೇಳಲೆಂದು ಈ ಲೇಖನ.
ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರಗಳನ್ನು (ಜಾಹೀರಾತು
ದರ, ವಾರ್ಷಿಕ ಚಂದಾ ದರ, ಇತ್ಯಾದಿ..) ವಿವರವಾಗಿ ಬರೆಯುತ್ತೇನೆ. ಅಲ್ಲಿಯವರೆಗೆ, ನಮಸ್ಕಾರ.
ರವಿ ಕೃಷ್ಣಾ ರೆಡ್ಡಿ.
ಜುಲೈ
24, 2006.
(ದೂರವಾಣಿ:
1-408-956-1061) |