Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 31 December 2006 02:49 AM

ಏರ್‍ಪೋರ್ಟೋ ಬಸ್‌ಸ್ಟ್ಯಾಂಡೋ?

ಮುಂಬಯಿಯ ವಿಮಾನ ನಿಲ್ದಾಣಕ್ಕೂ ಮತ್ತು ಬೆಂಗಳೂರಿನ ಕೈಲಾಸ ಅಯ್ಯೋ ಸಾರಿ ಕಲಾಸಿಪಾಳ್ಯಕ್ಕೂ ಏನು ಸಂಬಂಧ? ತಡೀರಿ, ಅದನ್ನೇ ಕಲ್ಪಿಸ್ತಿದ್ದೀನಿ.

 

T.V Srinivasತಳುಕು ಶ್ರೀನಿವಾಸ್

ಮುಂಬಯಿ

tvsrinivas41@gmail.com

 

ಕಳೆದವಾರ ಚೆನ್ನೈಗೆ ಹೋಗುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಮುಂಬಯಿಯಲ್ಲಿ ಸಾಮಾನ್ಯವಾಗಿ ಪ್ರಯಾಣಿಕರು ಎದುರಿಸುವ ಸಮಸ್ಯೆ ಎಂದರೆ, ಬಸ್, ಟ್ಯಾಕ್ಸಿ, ಆಟೋಗಳಲ್ಲಿ ಹೋಗುವಾಗಿ ಎದುರಾಗುವ ಟ್ರಾಫಿಕ್ ಜಾಮ್ ಅಥವಾ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಸುವಾಗ ಎದುರಿಸುವ, ಜನಸಂದಣಿ. ಅದೇ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಸರತಿಯ ಸಾಲಿನಂತೆ ಒಂದರ ಹಿಂದೊಂದರಂತೆ ಸಮಯಕ್ಕೆ ಸರಿಯಾಗಿ ಹೊರಡುವುವು. ತಡವಾಗಿ ಹೊರಡುವ ಸನ್ನಿವೇಶ ಬಹಳ ಬಹಳ ಕಡಿಮೆ. ಆದರೆ ಅಂದು ನಾನು ಎದುರಿಸಿದ್ದು ಒಂದು ವೈಪರಿತ್ಯದ ಸನ್ನಿವೇಶವನ್ನು. ಅದರ ಬಗ್ಗೆ ಒಂದೆರಡು ಮಾತುಗಳಲ್ಲಿ ತಿಳಿಸಹೊರಟಿರುವೆ. ನಿಮಗೆ ಬೇರೆ ಕೆಲಸವಿಲ್ಲದಿದ್ದರೆ, ಓದುವ ತಾಳ್ಮೆ ಇದ್ದರೆ ಒಮ್ಮೆ ಓದಿ ನೋಡಿ.
 

ಕಲಾಸಿಪಾಳ್ಯದ ಖಾಸಗೀ ಬಸ್ ನಿಲ್ದಾಣ ನೀವೆಲ್ಲರೂ ನೋಡಿದ್ದೀರಲ್ಲವೇ? ಅಲ್ಲಿ ಸುಲಭವಾಗಿ ಓಡಾಡಬಲ್ಲವರು ಒಲಂಪಿಕ್ ಸ್ಪರ್ಧೆಗಳಲ್ಲಿ ಹೈಜಂಪ್, ಲಾಂಗ್‌ಜಂಪ್, ಟ್ರಿಪಲ್ ಜಂಪುಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರಲ್ಲಿ ಸಂಶಯವೇ ಇಲ್ಲ. ಅಲ್ಲಿ ಮೋರಿಗಳೇ ಇಲ್ಲ! ಹಾ ಹಾ ಹಾ - ಇಡೀ ಬಸ್ ನಿಲ್ದಾಣವೇ ಒಂದು ದೊಡ್ಡ ಮೋರಿ ಇದ್ದ ಹಾಗಿರುವಾಗ ಪ್ರತ್ಯೇಕ ಮೋರಿ ಮಾಡುವುದಕ್ಕೆ ಖರ್ಚಿನ್ಯಾಕೆ ಅಂತ ನಗರ ಪಾಲಿಕರ ಚಿಂತನೆ. ಎಲ್ಲ ಕಡೆಯೂ ಗಂಗೆ, ಕಾವೇರಿ, ಜಮುನೆಯರು ಹರಿಯುತ್ತಿರುವರು, ಅದೂ ಜೀವನದಿಗಳಂತೆ. ಕಿವಿಗಡಚಿಕ್ಕುವ ವಾಹನಗಳ ಹಾರನ್ನುಗಳು. ಹೊಸದಾಗಿ ಬರುವವರಿಗೆ ಹುಚ್ಚು ಹಿಡಿಯದಿದ್ದರೆ, ಅವರು ಕಿವುಡರೆಂಬುದು ಖಾತ್ರಿ ಮತ್ತು ಇಲ್ಲಿಯೇ ಹುಟ್ಟಿ ಬೆಳೆದವರಿಗೆ ಇದು ಮಾಮೂಲು. ಒಂದು ಕ್ಷಣ ಹಾರನ್ನಿನ ಶಬ್ದ ಕೇಳಿಸದಿದ್ದರೆ ಅವರಿಗೆ ಹುಚ್ಚು ಹಿಡಿಯುವುದಂತೆ. ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಅರ್ಧ ಕಿಲೋಮೀಟರ್ ದೂರ ಕೂಡ ಇಲ್ಲ. ಅದನ್ನು ದಾಟಲು ಗಂಟೆಗಟ್ಟಲೆ ಹಾದಿ ಸವೆಸಬೇಕು. ಅದು ಹಾಗಿರಲಿ, ನಾನು ಹೇಳ ಹೊರಟಿರುವುದು, ನಮ್ಮೂರಿನ ಕೈಲಾಸಪಾಳ್ಯದ ಬಗ್ಗೆ ಅಲ್ಲ. ನಮ್ಮ ಕಲಾಸಿಪಾಳ್ಯದ ಬಗ್ಗೆ ಈ ಹಿಂದೆ ಬರೆದಿದ್ದ ಒಂದು ಕವನ ಹೀಗಿದೆ.

ನೋಡಬನ್ನೀ ಅಣ್ಣೋರೇ ಅಕ್ಕೋರೇ
ಎಲ್ಲೂ ನೋಡಲಾಗದ ನೋಡಿರದ
ಕೈಲಾಸ ವೈಕುಂಠ ದೇವ ಲೋಕ
ಮೂರು ಲೋಕಗಳನ್ನೆಲಾ ಒಂದೇ ಕಡೆ ಒಮ್ಮೆಲೇ
ನೋಡುವ ಸೌಭಾಗ್ಯ ನಿಮ್ಮದಾಗಲಿ
ಬನ್ನಿ ನಮ್ಮ ಕೈಲಾಸಪಾಳ್ಯಕ್ಕೆ

ಇದಿರುವುದು ನನ್ನೂರ ಹೃದಯದಲಿ
ಎಲ್ಲ ಖಾಸಗೀ ಬಸ್ಸುಗಳ ಸೌಲಭ್ಯದ ತಾಣ
ಮೂಗಿರದವರಿಗೂ ಮೂಗು ಮುಚ್ಚಿಸುವ ದುರ್ಗಂಧದ ನಾಡು
ಸೊಳ್ಳೆ ಹಂದಿ ನಾಯಿ ಕತ್ತೆ ಕೋತಿಗಳ ನೆಲೆವೀಡು

ಮೊದಲಿಗೇ ನಿಮ್ಮ ಮೂಗಿಗೆ ಬಡಿವುದು
ಘೌಸಿಯಾ ಹೊಟೆಲ್ಲಿನ ಅಮಲೇರಿಸುವ ವಾಸನೆ
ಪ್ರದೀಪ ಸಿನೆಮಾದಲ್ಲಿನ ಅಶ್ಲೀಲ ಭಿತ್ತಿಪತ್ರ
ಹಾದಿಯುದ್ದಕ್ಕೂ ಕಾಣುವ ಸ್ನಾನದ ಮನೆಗಳು
೨೪ ತಾಸುಗಳು ಸೇವೆಯನೀಯುವ ಪಿಕ್‌ಪಾಕೆಟಿಗರು
ದನಿ ಏರಿಸಿದರೆ ಸೇವೆಗೆ ಬಂದಾರು ದಾಂಡಿಗರು

ರಸ್ತೆಯ ಬದಿಯಲ್ಲೇ ಹವಾನಿಯಂತ್ರಿತ
ಛಾವಣಿ, ಗೋಡೆ ರಹಿತ, ಕಡಿಮೆ ಖರ್ಚಿನ ಸಲೂನು
ಸುಲಭ ಖರ್ಚಿನಲಿ ಆಗುವುದು ನಿಮ್ಮ ವಾಚಿನ ರಿಪೇರಿ, ಬಫ್ಫಿಂಗ್
ಒಂದೆಡೆ ಕೈ ತೋರಿಸಿ ಇನ್ನೊಂದೆಡೆ ಓಡಿಸುವ ಸೈಕಲಿಗರು
ಸುಂಡಿಲಿಯಂತೆ ಮಧ್ಯೆ ತೂರಿ ಬರುವ ಮುಗ್ಗಾಲಿಗಳು
ಎಲ್ಲೆಂದರಲಿ ನಿಂತಿರುವ ಖಾಸಗೀ ಬಸ್ಸುಗಳು

ರಸ್ತೆ ಬದಿಯಲೇ ಅಡುಗೆ ಮಾಡುತಿರುವ
ಮಸಾಲೆ ಅರೆಯುತಿರುವ ಅತ್ತೆ-ಸೊಸೆ, ಅಮ್ಮ-ಮಗಳು
ಚಡ್ಡಿಯಿರದೆ ಸದಾ ಆರೋಗ್ಯದ ಮಕ್ಕಳು ನೂರಾರು
ಕುಕ್ಕರಗಾಲಿನಲಿ ಕೂತು ಬೀಡಿ ಎಳೆಯುತಿಹ ಯಜಮಾನರು
ಕಣ್‌ಸನ್ನೆಯಲೇ ಚಕ್ಕಂದ ಆಡುವ ಯುವಕ-ಯುವತಿಯರು

ಬನ್ನಿ ಅಣ್ಣೋರೇ ಅಕ್ಕೋರೇ ನೋಡಿ ಬನ್ನಿ ನಮ್ಮ ಕೈಲಾಸಪಾಳ್ಯ
 

ನಿಮಗೀಗ ಒಂದು ಸಂಶಯ ಬಂದಿರಬಹುದು, ಮುಂಬಯಿಯ ವಿಮಾನ ನಿಲ್ದಾಣಕ್ಕೂ ಮತ್ತು ಬೆಂಗಳೂರಿನ ಕೈಲಾಸ ಅಯ್ಯೋ ಸಾರಿ ಕಲಾಸಿಪಾಳ್ಯಕ್ಕೂ ಏನು ಸಂಬಂಧ? ತಡೀರಿ, ಅದನ್ನೇ ಕಲ್ಪಿಸ್ತಿದ್ದೀನಿ. ಮೇಲೆ ಹೇಳಿದಂತೆ ಹೇಗೆ ಕಲಾಸಿಪಾಳ್ಯ ಜನನಿಬಿಡತೆ, ಗದ್ದಲ, ಹುಲುಸಾದ ಹೊಲಸಿನಿಂದ ಕೂಡಿದೆ ಎಂದು ಎನಿಸುವುದೋ ಅದರಂತೆಯೇ ಮುಂಬಯಿಯ ವಿಮಾನ ನಿಲ್ದಾಣವೂ ಕೂಡಾ. ಹೊಲಸು ಮಾತ್ರ ಅಷ್ಟಿಲ್ಲ, ಆದರೆ ಜನನಿಬಿಡತೆ, ಗದ್ದಲ ಗೊಂದಲಗಳಂತೂ ಕಂಡು ಬರುವುದು. ಅದೇ ಮುಂಬಯಿ ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಬೆಂಗಳೂರು ವಿಮಾನ ನಿಲ್ದಾಣ ಬಹಳ ಚಿಕ್ಕದು. ವಿಮಾನಗಳ ಓಡಾಟ, ಜನನಿಬಿಡತೆಗಳನ್ನು ಹೋಲಿಸಲೇ ಆಗುವುದಿಲ್ಲ. ಬೆಂಗಳೂರಿನಲ್ಲಿ ಎಷ್ಟೋ ಜನಗಳು ಈಗಲೂ ವಿಮಾನವನ್ನು ನೋಡೇ ಇಲ್ಲವೇನೋ ಎಂಬಂತೆ ವೀಕ್ಷಿಸಲು ಹೋಗುವರು. ಗ್ಯಾಲರಿಯಲಿ ನಿಂತು ನೋಡಲು ಅದಕ್ಕಾಗಿ ಟಿಕೆಟ್ ತೆಗೆದುಕೊಳ್ಳುವರು.
 

ಈಗ ಪ್ರಸ್ತುತ ವಿಷಯಕ್ಕೆ ಬರುವೆ. ಅಂದು ಚೆನ್ನೈಗೆ ಹೋಗಬೇಕಿತ್ತು. ತರಾತುರಿಯ ನಿರ್ಧಾರವಾದ್ದರಿಂದ ಏಜೆಂಟರಿಗೆ ಫೋನ್ ಮೂಲಕ ತಿಳಿಸಿ ಟಿಕೆಟ್ ತರಿಸಿದ್ದರು. ಟಿಕೆಟ್ ಒಳಗೊಂಡ ಕವರಿನ ಮೇಲೆ ಸಂಜೆ ೫ಕ್ಕೆ ವಿಮಾನ ಹೊರಡುವುದೆಂದೂ, ೩ ಘಂಟೆಗೆ ವಿಮಾನ ನಿಲ್ದಾಣದಲ್ಲಿ ಇರಬೇಕೆಂದು ನಮೂದಿಸಿದ್ದರು. ಮಧ್ಯಾಹ್ನ ಒಂದು ಘಂಟೆಯವರೆವಿಗೆ ಕೆಲಸದಲ್ಲಿಯೇ ತಲ್ಲೀನನಾಗಿದ್ದೆ. ನಂತರ ಏಕೋ ಟಿಕೆಟನ್ನು ಒಮ್ಮೆ ನೋಡಬೇಕೆಂದೆನಿಸಿ, ಕವರನ್ನು ತೆರೆದು ನೋಡಿದರೆ, ಎದೆ ಧಸಕ್ಕೆಂದಿತು. ಮಧ್ಯಾಹ್ನ ೩.೨೦ಕ್ಕೆ ವಿಮಾನ ಹೊರಡುವುದೆಂದೂ, ಒಂದು ಘಂಟೆಗೆ ಅಲ್ಲಿರಬೇಕೆಂದೂ ಅದರಲ್ಲಿ ನಮೂದಿಸಲಾಗಿತ್ತು. ಟಿಕೆಟ್ ತರಿಸಿದವರ ಗಮನಕ್ಕೆ ತಕ್ಷಣವೇ ಈ ವಿಷಯವನ್ನು ಅರುಹಿದೆ. ಅವರು ಏಜೆಂಟರಿಗೆ ದೂರವಾಣಿ ಕರೆ ಮಾಡಿ, ಈ ಟಿಕೆಟನ್ನು ಸಂಜೆ ೫ರ ವಿಮಾನಕ್ಕೆ ಬದಲಿಸಬೇಕೆಂದು ಹೇಳಿದರು. ಅದನ್ನು ನಿಖರ ಪಡಿಸಲು ಅದ್ಯಾವುದೋ ಒಂದು ಸಂಖ್ಯೆಯನ್ನು ಅವರೇ ಟಿಕೇಟಿನ ಮೇಲೆ ನಮೂದಿಸಿದರು. ಮುಂಬಯಿಯ ಟ್ರಾಫಿಕ್ ಜಾಮ್ ಬಗ್ಗೆ ಗೊತ್ತಿದ್ದ ನಾನು ತಕ್ಷಣವೇ ವಿಮಾನ ನಿಲ್ದಾಣಕ್ಕೆ ಹೊರಟೆ. ಅಲ್ಲಿಂದಲೇ ಟ್ಯಾಕ್ಸಿಯಲ್ಲಿ ಹೊರಟರೆ ವಿಮಾನ ನಿಲ್ದಾಣ ಸೇರಲು ಕನಿಷ್ಟ ಪಕ್ಷ ಮೂರು ತಾಸಾದರೂ ತೆಗೆದುಕೊಳ್ಳುವುದು. ಬೆಳಗ್ಗೆ ಎಂಟರಿಂದ ಸಂಜೆಯ ಹತ್ತು ಘಂಟೆಯವರೆಗೆ ಎಲ್ಲೆಲ್ಲಿಯೂ ಟ್ರಾಫಿಕ್ ಜಾಮ್ ಇರುವುದು ಸರ್ವೇ ಸಾಮಾನ್ಯ.
 

ಚರ್ಚ್‌ಗೇಟಿನವರೆವಿಗೆ ಬಸ್ಸಿನಲ್ಲಿ ಅಥವಾ ಟ್ಯಾಕ್ಸಿಯಲ್ಲಿ ಬಂದು ಅಲ್ಲಿಂದ ಲೋಕಲ್ ಟ್ರೈನಿನಲ್ಲಿ ವಿಲೆಪಾರ್ಲೆ ಸ್ಟೇಷನ್ನಿಗೆ ಬಂದರೆ, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಆಟೋವಿನಲ್ಲಿ ಹೋಗಬಹುದು. ಅದಕ್ಕೆ ತೆಗೆದುಕೊಳ್ಳುವ ಸಮಯ ಹೆಚ್ಚೆಂದರೆ ಎರಡು ತಾಸು. ಹಾಗಾಗಿ ಚರ್ಚ್‌ಗೇಟಿಗೆ ಬಂದೆ. ಆಗ ಸಮಯ ೧.೩೦ ಆಗಿದ್ದಿತು. ಅಂಧೇರಿಗೆ ಹೋಗುವ ಲೋಕಲ್ ಟ್ರೈನ್ ಹೊರಟಿತ್ತು. ಪೂರ್ತಿ ಖಾಲಿಯಾಗಿದ್ದ ಟ್ರೈನಿನಲ್ಲಿ ಕುಳಿತು ಹೊರಟೆ. ವಿಲೇಪಾರ್ಲೆ ಸ್ಟೇಷನ್ ತಲುಪುವ ವೇಳೆಗೆ ಸಮಯ ೨.೧೦ ಆಗಿದ್ದಿತು. ಅಲ್ಲಿಂದ ಆಟೋವಿನಲ್ಲಿ ಕುಳಿತು ೧ ಕಿಲೋಮೀಟರ್ ದೂರವಿರುವ ವಿಮಾನ ನಿಲ್ದಾಣ ಸೇರುವ ಹೊತ್ತಿಗೆ ೨.೨೦ರ ಸಮಯವಾಗಿತ್ತು. ಕೌಂಟರಿಗೆ ಹೋಗಿ ಟಿಕೆಟ್ ತೋರಿಸಿದ್ದಕ್ಕೆ, ೩.೨೦ರ ವಿಮಾನ ತಯಾರಾಗಿದೆಯೆಂದೂ, ಅದರಲ್ಲಿ ಇನ್ನೂ ರಿಕ್ತ ಸ್ಥಳವಿರುವ ಕಾರಣ ನಾನು ಪ್ರಯಾಣಿಸಬಹುದೆಂದೂ ಹೇಳಿದರು. ೨ ಘಂಟೆಗಳ ಮೊದಲೇ ಚೆನ್ನೈ ತಲುಪಿದರೆ, ನನ್ನ ಮುಂದಿನ ಕೆಲಸಗಳಿಗೆ ಅನುಕೂಲವಾಗುವುದೆಂದು ಅದರಲ್ಲಿಯೇ ಪ್ರಯಾಣಿಸಲು ಹೊರಟೆ.
 

ಇಲ್ಲಿಯವರೆವಿಗೆ ಬರುವುದಕ್ಕೆ ಟ್ರಾಫಿಕ್‌ನಿಂದ ತಡವಾಗಬಹುದೆಂದುಕೊಂಡಿದ್ದ ನನ್ನ ನಿರೀಕ್ಷೆ ಸುಳ್ಳಾಗಿತ್ತು. ವಿಮಾನ ಪ್ರಯಾಣ ಒಂದೂವರೆ ಘಂಟೆಗಳಾಗಿದ್ದು, ಅಲ್ಲಿ ನಾನು ತಲುಪಬೇಕಿದ್ದ ಸ್ಥಳಕ್ಕೆ ಟ್ಯಾಕ್ಸಿ ಅಥವಾ ಆಟೋವಿನಲ್ಲಿ ಹೆಚ್ಚೆಂದರೆ ಅರ್ಧ ತಾಸಿನ ಪ್ರಯಾಣ. ಸಂಜೆ ೫.೩೦ಕ್ಕೆ ಮುಂಬಯಿಯಿಂದ ಹೊರಡಬೇಕಿದ್ದವನು, ಅದೇ ಸಮಯಕ್ಕೆ ಚೆನ್ನೈನಲ್ಲಿ ನನ್ನ ಕೆಲಸ ಪ್ರಾರಂಭಿಸುವೆನೆಂದರೆ ಸಂತಸವಲ್ಲವೇ? ಆದರೆ ವಿಧಿಯಾಟವೇ ಬೇರೆಯಾಗಿತ್ತು.
 

ಮುಂಬಯಿ ವಿಮಾನ ನಿಲ್ದಾಣ ಮತ್ತು ವಿಮಾನ ಪ್ರಯಾಣ ಬೆಂಗಳೂರಿನ ಕಲಾಸಿಪಾಳ್ಯದ ನೆನಪನ್ನು ನೀಡಿತ್ತು. ವಿಮಾನದೊಳಗೆ ಕುಳಿತ ಅನತಿ ಕಾಲದಲ್ಲಿಯೇ ಬಾಗಿಲು ಹಾಕಿದ್ದರು. ಹವಾನಿಯಂತ್ರಣ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲವಂತೆ. ಮೈಯೆಲ್ಲಾ ಧಾರಾಕಾರವಾಗಿ ಬೆವರು ಸುರಿಯುತ್ತಿತ್ತು. ಸ್ವಲ್ಪ ಕಾಲ ಗುರ್ ಗುರ್ ಎಂದು ಕೂಗಿದ ವಿಮಾನ, ಚಲಿಸತೊಡಗಿತು. ಸ್ವಲ್ಪ ದೂರ ಹೋದ ಮೇಲೆ ನಿಂತಿತು. ಹತ್ತು ನಿಮಿಷಗಳ ಕಾಲ ಕರಾಳ ಮೌನ. ಗಗನಸಖಿಯರೂ ಎಲ್ಲೋ ಅವಿತುಕೊಂಡಿದ್ದರು ಎನಿಸುತ್ತದೆ. ನಂತರ ಧ್ವನಿವರ್ಧಕದ ಮೂಲಕ ಘೋಷಿಸಲಾಯಿತು, `ಮುಖ್ಯ ರನ್‌ವೇಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ನಮ್ಮ ವಿಮಾನ ಸರಿತಿಯ ಸಾಲಿನಲ್ಲಿ ನಿಂತಿದೆ'. ಅರೆಕ್ಷಣದಲ್ಲಿ ಈ ವಿಮಾನದ ಪಕ್ಕದಲ್ಲಿ ಇನ್ನೊಂದು ವಿಮಾನ ಬಂದು ನಿಂತಿತು. ನಿಂತ ಕೂಡಲೇ ಅದರ ಚಕ್ರದ ಭಾಗದಲ್ಲಿ ಕೆಲವರು ಬಂದು ಕೆಲಸ ಮಾಡಹತ್ತಿದರು. ನಂತರ ತಿಳಿದದ್ದೇನೆಂದರೆ, ಆ ವಿಮಾನದ ಚಕ್ರ ಒಡೆದು ಹೋಗಿತ್ತಂತೆ. ಅದಕ್ಕಾಗಿ ಚಕ್ರವನ್ನು ಬದಲಿಸುತ್ತಿದ್ದರು. ಹೇಗೆ ನಮ್ಮೂರಿನ ಬಸ್ಸುಗಳು ಅರ್ಧ ರಸ್ತೆಯಲ್ಲಿ ಚಕ್ರ ಪಂಕ್ಚರ್ ಆಗಿ ನಿಂತು, ಡ್ರೈವರ್ ಕ್ಲೀನರುಗಳು ಸೇರಿ ಸ್ಟೆಪ್ನಿಯನ್ನು ಹಾಕುತ್ತಾರೆ ಹಾಗೆ ಇಲ್ಲಿಯೂ ಕೆಲಸ ನಡೆಯುತ್ತಿತ್ತು. ನಮ್ಮ ದೇಶ ಮುಂದುವರಿಯುತ್ತಿದೆ ಎಂದು ನಿಮಗೆ ಎನಿಸುವುದಿಲ್ಲವೇ? ಎರಡೆರಡು ನಿಮಿಷಗಳಿಗೊಂದರಂತೆ ವಿಮಾನಗಳು ಏರುತ್ತಿದ್ದವು, ಹಿಂದೆಯೇ ಒಂದೊಂದು ಇಳಿಯುತ್ತಿದ್ದವು. ನಮ್ಮ ವಿಮಾನಕ್ಕಿಂತ ಮೊದಲೇ ಹಲವು ವಿಮಾನಗಳು ಬಂದು ಸಾಲಿನಲ್ಲಿ ನಿಂತಿದ್ದವು. ಹೀಗೆ ಮುಕ್ಕಾಲು ತಾಸು ಕಳೆಯಲು, ನಾನು ಕುಳಿತಿದ್ದ ವಿಮಾನಕ್ಕೆ ಮುಂದೆ ಹೋಗಲು ಅನುಮತಿ ಸಿಕ್ಕಿತು. ಮುಂದೆ ಏನೂ ತೊಂದರೆ ಇಲ್ಲದೇ ವಿಮಾನ ಮೇಲೇರಿತು. ಅರ್ಧ ತಾಸಿನ ಬಳಿಕ ಮತ್ತೆ ನಿಧಾನವಾಯಿತು. ಆಗ ಫೋಷಿಸಿದ್ದೇನೆಂದರೆ, ಹೊರಗೆ ಹವಾಮಾನ ಪ್ರಕ್ಷುಬ್ಧವಾದ ಕಾರಣ, ವಿಮಾನ ಹತ್ತು ನಿಮಿಷಗಳು ತಡವಾಗಿ ಚೆನ್ನೈ ತಲುಪುತ್ತಿದೆ ಎಂದು. ಹೀಗೇ ಮುಂದೆ ಹೋಗಿ, ಇನ್ನೇನು ಚೆನ್ನೈ ಬಂತೆನ್ನುವ ವೇಳೆಗೆ, ಚೆನ್ನೈನಲ್ಲಿ ವಿಪರೀತ ಮಳೆ ಇರುವುದರಿಂದ, ಒಂದೆರಡು ಸುತ್ತು ಹಾಕಿ ನಂತರ ಕೆಳಗಿಳಿಯುವುದೆಂದು ಫೋಷಿಸಿದ್ದರು. ಅಂತೂ ಇಂತೂ ವಿಮಾನ ಕೆಳಗೆ ಇಳಿಯುವ ಹೊತ್ತಿಗಾಗಲೇ ಸಂಜೆ ೭ ಘಂಟೆ ಆಗುತ್ತಿತ್ತು. ಆ ಚೆನ್ನೈನಲ್ಲೋ ಸ್ವಲ್ಪ ಮಳೆ ಬಂದರೂ, ರಸ್ತೆಯಲ್ಲೆಲ್ಲಾ ನೀರು ನಿಂತು ಕೊಚ್ಚೆ ಆಗುವುದು. ಆ ಪರಿಸ್ಥಿತಿಯನ್ನು ಒಂದು ಕವನದ ಮೂಲಕ ಈ ಕೆಳಗೆ ಪ್ರಸ್ತುತಪಡಿಸಿರುವೆ.

ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು
ಬೀದಿಬೀದಿಯಲೂ ಕಾಣಬರುವುದು ಬೀರು ಬಾರು
ಆಗಿಲ್ಲಿ ನಡೆದಿತ್ತು ಅಮ್ಮನವರ ದರಬಾರು
ಈಗ ಸಾಗುತಿಹುದು ಅಣ್ಣನವರ ಕಾರುಬಾರು

ತಂಬಿ ತಂಗಚ್ಚಿಗಳು ಮತ ಯಾಚನೆಗಾಗಿಹ ಗೊಂಬೆಗಳು
ನನ್ನ ಕಣ್ಣಿಗೆ ಮಾತ್ರ ಅವರು ಉಸಿರಾಡುತಿಹ ಜೀವಿಗಳು
ಕೊಚ್ಚೆಯಲೂ ರಚ್ಚೆ ಹಿಡಿಯದ ಹಸುಗೂಸುಗಳು
ಮತ ಚಲಾಯಿಸದೇ ಸೂತ್ರ ಹಿಡಿವ ಶ್ರೀಮಂತ ಜಿಗಣೆಗಳು

ಸಣ್ಣ ಮಳೆ ಬರಲೂ ಈ ಊರಾಗುವುದೊಂದು
ದೊಡ್ಡ ಕೊಚ್ಚೆ ಗುಂಡಿ
ಸುಭಿಕ್ಷದಲಿ ಭೂಗರ್ಭ ಸೀಳಿ ಭೋರ್ಗರೆವುದು
ದುರ್ನಾತದ ಮಲನೀರೆಂಬ ಪ್ರಚಂಡಿ

ತಾನೇನು ಕಡಿಮೆ ಇಲ್ಲವೆಂದು ಎತ್ತಿ ಬಿಸಾಕುವುದು
ಸತ್ತ ಜಲಚರಗಳ ಆ ಸಮುದ್ರ ದೇವತೆ
ಇವೆಲ್ಲದರ ಗೊಡವೆ ಇಲ್ಲದ್ದೆ ಸುಖಿಸುವರು
ತಂಬಿ ತಂಗಚ್ಚಿಗಳು ನಿರ್ಲಿಪ್ತರಂತೆ

ಕೆರೆ ಕಟ್ಟೆ ಒಡೆಯೆ ಊರೊಳಗೆ ಹರಿ ಬಿಟ್ಟರು
ನೀರೊಂದಿಗೆ ಶತಮಾನದ ಗಲೀಜು
ಊರ ತುಂಬಾ ಎಲ್ಲೆಲ್ಲಿ ನೋಡಲೂ ಕೊಳಚೇ ನೀರು
ಆದರೂ ಕುಡಿಯಲು ಸಿಗಲೊಲ್ಲದು ಹನಿ ಶುದ್ಧ ನೀರು
 

ವಿಮಾನ ನಿಲ್ದಾಣದಲ್ಲಿ ಪ್ರೀಪೇಯ್ಡ್ ಟ್ಯಾಕ್ಸಿಯ ಸೌಲಭ್ಯವಿದ್ದು, ಒಂದು ಟ್ಯಾಕ್ಸಿಯಲ್ಲಿ ಕುಳಿತು ಹೊರಟೆ. ಗಿಂಡಿಯವರೆವಿಗೆ ಸರಿಯಾಗಿ ಹೋದ ಟ್ಯಾಕ್ಸಿ, ಟ್ರಾಫಿಕ್‌ನಲ್ಲಿ ನಿಂತಿತು. ಅಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಲುವಾಗಿ ಮೇಲ್ಸೇತುವೆ ಕಟ್ಟುತ್ತಿದ್ದಾರೆ. ವರುಷದಿಂದ ಈ ಕೆಲಸ ನಡೆಯುತ್ತಿದೆಯಂತೆ. ಆದರೂ ಇನ್ನೂ ಮುಗಿದಿಲ್ಲ. ಇದರಿಂದಾಗಿ ವಾಹನ ಚಾಲನೆಯಲ್ಲಿ ಅಸ್ತವ್ಯಸ್ತವಾಗಿತ್ತು. ಅದೂ ಅಲ್ಲದೇ ಮಳೆ ಬಂದ ಕಾರಣ, ರಸ್ತೆಯಲ್ಲೆಲ್ಲಾ ರಾಡಿ ನೀರು ತುಂಬಿದ್ದು, ಸರಿಯಾದ ಫುಟ್‌ಪಾತ್ ಇಲ್ಲದ ಕಾರಣ ಜನಗಳೂ ರಸ್ತೆಯಲ್ಲಿ ಹೋಗುತ್ತಿದ್ದರು. ೨೦ ನಿಮಿಷಗಳು ಅಲ್ಲಿ ಟ್ಯಾಕ್ಸಿ ನಿಂತಿತ್ತು ಎಂದರೆ ನೀವು ನಂಬುವಿರಾ? ನಾನು ತಲುಪಬೇಕಿದ್ದ ಸ್ಥಳ ತಲುಪುವ ಹೊತ್ತಿಗಾಗಲೇ ರಾತ್ರಿಯ ೮ ಘಂಟೆ ದಾಟಿತ್ತು. ವಿಚಾರಣೆಯ ಮೂಲಕ ತಿಳಿದ ವಿಷಯವೇನೆಂದರೆ, ಸಂಜೆ ೫ರ ವಿಮಾನ ಮುಂಬಯಿಯಿಂದ ಹೊರಡಲೇ ಇಲ್ಲವಂತೆ. ರಸ್ತೆಯ ಮೂಲಕ ಪ್ರಯಾಣಿಸುವುದು ತಡವೆಂದರಿತು, ಆಕಾಶದ ಮೂಲಕ ಪ್ರಯಾಣಿಸುವುದು ಜಾಸ್ತಿಯಾಗಿ, ನಮ್ಮ ದೇಶವನ್ನು ಮುಂದುವರೆಯುತ್ತಿರುವ ದೇಶವೆನ್ನುವ ಸಂದರ್ಭದಲ್ಲಿ, ರಸ್ತೆಯ ಪ್ರಯಾಣವೇ ಆಕಾಶ ಪ್ರಯಾಣಕ್ಕಿಂತ ಮಿಗಿಲು ಎಂದರಿತಾಗ ದೇಶದ ಪರಿಸ್ಥಿತಿಯನ್ನು ಏನೆಂದು ಕರೆಯಬಹುದು. ಊಹಿಸಿ?
 

ನನ್ನ ಕೆಲಸ ಮುಗಿದ ಬಳಿಕೆ ಬೆಂಗಳೂರಿಗೆ ಬಂದು ಅಲ್ಲಿ ಆಗಬೇಕಿದ್ದ ಸಣ್ಣ ಕೆಲಸವನ್ನು ಮುಗಿಸಿ, ಅಲ್ಲಿಂದ ಮುಂಬಯಿಗೆ ಮರಳಿ ಹೊರಟಿದ್ದೆ. ಹಾಗೆ ಬರುವಾಗ ಮಧ್ಯೆ ಕೋರಮಂಗಲದಲ್ಲಿರುವ ನನ್ನ ಅಣ್ಣನ ಮನೆಗೆ ಹೋಗಿದ್ದೆ. ಅಲ್ಲಿ ಹಿರಿಯರೊಬ್ಬರು ಹೀಗೆ ಕೇಳಿದ್ದರು. ಏನಪ್ಪಾ ವಿಮಾನದಲ್ಲಿ ಸೀಟು ಮೆತ್ತಗಿರತ್ತಂತೆ. ಸುಖದ ಸುಪ್ಪತ್ತಿಗೆ ಅಂದ್ರೆ ಅದೇನಾ? ಸುಖ ಎಲ್ಲಿದೆ ಸ್ವಾಮಿ. ಹುಡುಕುತ್ತಾ ಹೋದಷ್ಟೂ ದುಃಖವೇ ಸಿಗೋದು. ಹುಡುಕದಿದ್ದರೆ ಮಾತ್ರ ಸುಖ. ಆದರೆ ಅದು ಗೊತ್ತಾಗುವುದು ಆ ಹುಡುಕುವಿಕೆ ಇಲ್ಲದ ಕ್ಷಣ ಕಳೆದ ಬಳಿಕ, ನಂತರ ಹುಡುಕುವ ಕಾಲ ಪ್ರಾರಂಭವಾದಾಗ. ಆ ಹಿರಿಯರಿಗೆ ಈ ವಿಷಯವನ್ನು ಹೇಗೆ ಮನದಟ್ಟು ಮಾಡಿಸುವುದು ಎಂದು ಯೋಚಿಸುತ್ತಲೇ ಇರುವಾಗ ಮುಂಬಯಿಗೆ ಬಂದು ತಲುಪಿದ್ದೆ. ಈಗಲೂ ಇನ್ನೂ ಯೋಚಿಸುತ್ತಿದ್ದೇನೆ.

 

ಇನ್ನಷ್ಟು

ಬಿಜೆಪಿ ನಾಯಕನ ಹತ್ಯೆ: ಮರುಕಳಿಸಿದ ಹಿಂಸೆ

ಸಿದ್ಧು ಮೇಲಿದ್ದ ಕೊಲೆ ಆರೋಪ ಸಾಬೀತು

ಜನರಿಗೆ ಹೊರೆಯಾದ ಸರ್ಕಾರದ `ಕಡ್ಡಾಯಗಳು'

ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ

ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ

ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ

ಕರ್ನಾಟಕ ಪ್ರಿಂಟರ್‍ಸ್ ಜೊತೆ ಜೆರಾಕ್ಸ್ ಒಪ್ಪಂದ 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com