ರಘು ಇಂದು ತುಂಬ ಖುಷಿಯಲ್ಲಿದ್ದ ತುಂಬಾ
ವರುಷಗಳ ನಂತರ ಅವನ ಜೀವನದಲ್ಲಿ ಮತ್ತೆ ವಸಂತ ಋತುವಿನ
ಆಗಮನವಾಗಿತ್ತು. ಬರಡಾದ ಮನದಲ್ಲಿ ಆಸೆಯ ಕಾರಂಜಿ
ಚಿಮ್ಮುತ್ತಿತ್ತು. ಕಾಗೆಗಳ ಧ್ವನಿಯಲ್ಲಾ ಕೋಗಿಲೆಯ ರಾಗದಂತೆ,
ಅಕ್ಕಪಕ್ಕದ ಕರ್ಕಶ ಶಬ್ಧಗಳೆಲ್ಲಾ ಸುಮಧುರ ಸಂಗೀತದ
ಅಲೆಗಳಂತೆ ತೋರುತ್ತಿತ್ತು. ತನ್ನ ಮೂವತ್ತಾರನೇ ವರ್ಷದ ಬದುಕಿನಲ್ಲಿ
ಇಷ್ಟೋಂದು ಸಂತಸದ ಕ್ಷಣಗಳನ್ನು ಅವನೆಂದೂ ಅನುಭವಿಸಿದ್ದಿಲ್ಲ.
ಒಂದೇ ಕಾಲಕ್ಕೆ ಇಷ್ಟೋಂದು ಸಂತೋಷವನ್ನು ಅರಗಿಸಿಕೊಳ್ಳುವ
ತಾಕತ್ತೂ ಅವನಿಗಿದ್ದಿಲ್ಲ.
ಹೌದು! ರಘುಗೆ ಈಗ ಮೂವತ್ತಾರರ ಹರೆಯ.
ಮದುವೆಯಾಗಿಲ್ಲವಾದ್ದರಿಂದ ಹರೆಯ ಅಂತ ಕರೀಬಹುದು. ಅವನಿಗೂ
ಎಲ್ಲರಂತೆ ಬೇಗ ಮದುವೆಯಾಗಿ ಸಂಸಾರ ಸಾಗಿಸಬೇಕೆಂಬ ಆಸೆಯಿತ್ತು.
ಆದರೆ ಮನೆಯ ಪರಿಸ್ಥಿತಿ ಅದಕ್ಕೆ ಅನುಗುಣವಾಗಿರಲಿಲ್ಲ. ಇಬ್ಬರು
ತಂಗಿಯರ ಮದುವೆಯ ಜವಬ್ದಾರಿ, ಅವನನ್ನು ಮೆತ್ತಗೆ ಮಾಡಿತ್ತು.
ಕಷ್ಟಪಟ್ಟು ಇಂಜಿನಿಯರಿಂಗ್ ಓದಿ, ಮುಂಬೈನಲ್ಲಿ ಕೆಲಸ ಹಿಡಿದು,
ತಂಗಿಯರ ಮದುವೆ ಮಾಡಿ, ಮನೆಯ ಆರ್ಥಿಕ ಮಟ್ಟವನ್ನು ಒಂದು
ಮಟ್ಟಕ್ಕೆ ಒಯ್ಯಲು ಅವನು ಮಾಡಿದ ತ್ಯಾಗ ದೊಡ್ಡದು. ಆ ತ್ಯಾಗ
ಅವನನ್ನು ಮೂವತ್ತಾರರ ಹೊಸ್ತಿಲಲ್ಲಿ ನಿಲ್ಲಿಸಿತ್ತು.
ಪೂನಾ ಸ್ಟೇಷನ್‌ನಲ್ಲಿ ಬೆಳಗಿನ ಜಾವ ಏಳು
ಗಂಟೆಯ ಹೊತ್ತಿಗೆ ರಘು ಪ್ಲಾಟ್‌ಫಾರಂ ಮೇಲೆ ಅತ್ತಿಂದಿತ್ತ
ಅಡ್ಡಾಡುತ್ತಿದ್ದ. ಮನಸ್ಸು ಚಡಪಡಿಸುತ್ತಿತ್ತು. ಹನ್ನೊಂದು ಗಂಟೆಗೆ
ದಾದರ್ ಹೋಗಬೇಕಿತ್ತು. ಬಹುದಿನದ ಅವನ ಬಯಕೆ ಈಡೇರುವ ಹಂತದಲ್ಲಿತ್ತು.
ದೂರದಲ್ಲಿ ರೈಲು ಕಂಡಾಕ್ಷಣ ಎದೆ ಬಡಿತ ಜೋರಾಯಿತು. ಬಂದ ರೈಲಿಗೆ
ಹತ್ತಿ ಒಳಗೆ ಕುಳಿತುಕೊಂಡ. ರೈಲು ಚಲಿಸಲು ಪ್ರಾರಂಭಿಸಿತು. ಹಾಗೆಯೇ
ಸೀಟಿಗೊರಗಿ ಕಣ್ಣುಮುಚ್ಚಿದ, ಹನ್ನೊಂದು ಗಂಟೆಗೆ ಅವಳನ್ನು ಭೇಟಿಯಾಗುವ
ಬಗ್ಗೆ ಯೋಚಿಸತೊಡಗಿದ. ಮುಖದ ಮೇಲೆ ಮಂದಹಾಸ
ತೇಲತೊಡಗಿತು. ಅವನ ಮನ ಕಳೆದ ವಾರದ ಘಟನೆಗಳನ್ನು ಮೆಲಕು
ಹಾಕತೊಡಗಿತ್ತು.
***
ಅಂದು ಫ್ಲಾಟ್‌ಗೆ ಬಂದ ಅರವಿಂದ ಇವನನ್ನು ಬಿಡಲೇ
ಇಲ್ಲ. ಸುಮಾರು ಎರಡು ಗಂಟೆ ಪ್ರೀತಿ, ಪ್ರೇಮದ, ಮದುವೆ
ಬಾಂಧವ್ಯಗಳ ಬಗ್ಗೆ ಕೊರೆದ. ಕೊನೆಗೆ ಸಿಟ್ಟಿನಿಂದ,
`ಇನ್ನೂ ಕಾಲ ಮಿಂಚಿಲ್ಲ ರಘು, ಮದುವೆಯಾಗು,
ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ಅಂದ,
`ನನಗಾಗ್ಲೇ ಮೂವತ್ತಾರು ವರ್ಷ ವಯಸ್ಸು,
ಈ ವಯಸ್ಸಿನಲ್ಲಿ ಇನ್ನೇನು ಮದುವೆ. ರಘು ಅಂದ,
`ಇದ್ಯಾವ ಮಹಾ ವಯಸ್ಸೋ, ಅರವತ್ತಕ್ಕೇ
ಮದುವೆ ಆಗ್ತಾರೆ. ನೀನಿನ್ನು ಅದರ ಸುಖಾ ಕಂಡಿಲ್ಲ. ಅದಕ್ಕೆ ಹೀಗೆ ಮಾತಾಡ್ತಿದ್ದೀಯಾ.
ನೀನು ಹೂಂ ಅನ್ನು. ಹುಡುಗಿಯರನ್ನ ಕರೆದುಕೊಂಡು ಬರೋ ವಿಷಯ
ನನಗಿರ್‍ಲಿ.
`ಹಾಗಲ್ಲಾ ಅರವಿಂದ್, ನನ್ನ ಮಾತು ಕೇಳು,
ನನಗೂ ಆಸೆ ಇದೆ. ಮದುವೆ ಆಗ್ಬೇಕೂಂತ ಅನಿಸುತ್ತೆ, ಇನ್ನೂ ಏನೇನೋ
ಕನಸುಗಳಿವೆ. ಆದ್ರೆ ಆಗ್ಲೇ ಅರ್ಧ ವಯಸ್ಸಾಗಿದೆ, ಇನ್ನು ಮದುವೆಗೆ
ಸಿಗುವ ಹೆಣ್ಣು ಕೂಡ ಯಾವ್ದಾದ್ರೂ ಬಲವಂತಕ್ಕೆ ನನ್ನ ಮದುವೆ
ಆಗಬಹುದು. ಬಲವಂತದ ಮದುವೆ ನನಗಿಷ್ಟವಿಲ್ಲ. ಯಾರ್‍ದೋ ಮುಲಾಜಿಗೆ
ಮದುವೆಯಾಗಿ ನಾನು ನನ್ನ ಸ್ವಾತಂತ್ರ್ಯ ಕಳೆದುಕೊಳ್ಳಲು
ಸಿದ್ಧನಿಲ್ಲ ರಘು ಅಂದ.
`ನೋಡು ರಘು, ನನಗೊತ್ತು ನಿನಗೂ
ಆಸೆಗಳಿವೆ ಅಂತ. ಅದಕ್ಕೆ ಒಂದು ಕೆಲಸ ಮಾಡು ಟೈಮ್ಸ್‌ನಲ್ಲಿ ಒಂದು
ಜಾಹೀರಾತು ಕೊಡೋಣ. ನಿನಗಿಷ್ಟವಿದ್ದರೆ ಸೆಲೆಕ್ಟ್ ಮಾಡಿ ಮದುವೆ
ಆಗು. ಇಲ್ಲದಿದ್ದರೆ ಬೇಡ, ಆದ್ರೆ, ನಿನ್ನ ಜೀವನಕ್ಕೆ ಹೆಂಡತಿ ಅಂತ
ಹೇಳದಿದ್ರೂ ಸರಿ, ಒಬ್ಬ ಸಂಗಾತಿ ಅಥವಾ ಒಬ್ಬ ಸ್ನೇಹಿತೆಯ ಅವಶ್ಯಕತೆ
ಖಂಡಿತ ಇದೆ, ಖಾರವಾಗಿ ಹೇಳಿದ ಅರವಿಂದ್.
ಅರವಿಂದನ ಮಾತುಗಳಲ್ಲಿ ಸತ್ಯ ಇದೆ ಅಂತ
ಅನಿಸ್ತು ರಘುಗೆ. ತಂದೆಯ ಅನಾರೋಗ್ಯ, ನಂತರ ಸಾವು, ಹಣಕಾಸಿನ
ವ್ಯವಸ್ಥೆ, ಅವನನ್ನು ನಿಷ್ಕ್ರಿಯನನ್ನಾಗಿಸಿತ್ತು. `ಹೌದು, ಅರವಿಂದ ನಿಜ
ಹೇಳ್ತಿದ್ದಾನೆ. ಒಂದು ಬಾರಿ ಪ್ರಯತ್ನ ಮಾಡುವ, ಮುಂದೇನಾಗುತ್ತೋಂತ
ನೋಡೋಣ ಅಂದುಕೊಂಡು `ಸರಿ, ಹಾಗೆ ಮಾಡೋಣ ಅಂತಂದ.
ಇಬ್ಬರೂ ಸೇರಿ ಟೈಮ್ಸ್‌ನಲ್ಲಿ ಒಂದು ಜಾಹೀರಾತು
ಹಾಕಿದರು. ಜಾಹೀರಾತಿನಲ್ಲಿ ಸರಿಯಾದ ಶಬ್ಧಗಳನ್ನು ಜೋಡಿಸಲು
ಇಬ್ಬರೂ ಸೇರಿ ಅರ್ಧದಿನ ಕಷ್ಟಪಟ್ಟರು.
`ಮುಂಬೈನ ಪ್ರತಿಷ್ಟಿತ ಸಾಪ್ಟ್‌ವೇರ್ ಕಂಪನಿಯಲ್ಲಿ
ಪ್ರೋಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಮೂವತ್ತಾರು
ವರ್ಷ ವಯಸ್ಸಿನ, ಕನ್ನಡಿಗನೊಬ್ಬನಿಗೆ ಸಂಗಾತಿಯ ಅವಶ್ಯಕತೆಯಿದೆ.
ಸಂಗಾತಿಯಾಗುವವರಲ್ಲಿ ಇಚ್ಛೆಪಡುವ ಗುಣಗಳು,
ಕನ್ನಡ ಭಾಷೆ ಮಾತನಾಡಲು ಬರೆಯಲು ಬರುತ್ತಿರಬೇಕು.
ಮೃದುಭಾಷಿಯಾಗಿರಬೇಕು.
ಸಂಗೀತ, ಸಾಹಿತ್ಯ, ಕಾದಂಬರಿ, ಕವನ, ಇತಿಹಾಸ
ಇವುಗಳ ಬಗ್ಗೆ ಜ್ಞಾನವಿರದಿದ್ದರೂ ಸರಿ, ಆಸಕ್ತಿ ಇರಬೇಕು.
ವಯಸ್ಸಿನ ಮಿತಿ ಇಲ್ಲ, ಜಾತಿಯ ನಿರ್ಬಂಧ ಇಲ್ಲ.
ಆಸಕ್ತರು ಈ ಕೆಳಗಿನ ಮೊಬೈಲ್‌ನಲ್ಲಿ ಸಂಪರ್ಕಿಸಬಹುದು
ಎಂದು ರಘು ತನ್ನ ಮೊಬೈಲ್ ನಂಬರ್ ಕೊಟ್ಟಿದ್ದ. ಮರುದಿನ ಪೇಪರ್‌ನಲ್ಲಿ
ಜಾಹೀರಾತು ಬಂತು. ರಘುಗೆ ಪರಿಚಯದವರೊಬ್ಬರು, `ಅಲ್ರೀ ರಘು,
ನಿಮ್ಮ ಮೊಬೈಲ್ ನಂಬರ್ ಇರೋ ಜಾಹೀರಾತು ನೋಡಿದೆ, ವಿಚಿತ್ರವಾಗಿದೆ. ನೀವು
ಹಾಕಿರೋ ಕಂಡಿಷನ್ನು ನಿಮ್ಮ ವಯಸ್ಸು ನೋಡಿದ್ರೆ ನನಗೇನೋ ನಿಮಗೆ
ಸಂಗಾತಿ ಸಿಗೋದು ಡೌಟೇ ಅಂತಂದುಬಿಟ್ಟರು. ರಘು ಮತ್ತೊಮ್ಮೆ ಪೇಪರ್
ತರಿಸಿ ಜಾಹೀರಾತು ಓದಿದ. ವ್ಯತ್ಯಾಸ ಅರ್ಥವಾಯಿತು. ಮನದ ಮೂಲೆಯಲ್ಲಿ
`ಹೌದು, ನನಗೆ ಸಂಗಾತಿ ಸಿಗುವುದು ಕಷ್ಟ ಅಂತಂದುಕೊಂಡ.
ಜಾಹೀರಾತು ಪೇಪರ್‌ನಲ್ಲಿ ಬಂದು ಎರಡು ದಿನಗಳಾದ್ರೂ ಯಾವ್ದೇವ್ದ
ಕಾಲ್ ಬರಲಿಲ್ಲ. ಪ್ರತೀಸಾರಿ ಮೊಬೈಲ್‌ನಲ್ಲಿ ಅಪರಿಚಿತ ನಂಬರ್ ಬಂದಾಗ ಖುಷಿಯಾಗುತ್ತಿದ್ದ.
`ಹಲೋ, ಅಂದು ಎತ್ತಿದಾಗಲೆಲ್ಲ ತನ್ನ ಕಂಪನಿಯ ಕೆಲಸದ ಬಗೆಗಿನ
ಕಾಲ್ ಆಗಿರುತ್ತಿತ್ತು. ಉತ್ಸಾಹ ಜರ್ರನೆ ಇಳಿಯುತ್ತಿತ್ತು.
ಅವನಿಗಿನ್ನೂ ನೆನಪಿದೆ. ಸರಿಯಾಗಿ ಮೂರು
ದಿನದ ಹಿಂದೆ ಅವನ ಮೊಬೈಲ್‌ಗೆ ಕಾಲ್ ಬಂತು. ನಂಬರ್ ಪರಿಚಯದಲ್ಲ
ಯಥಾರೀತಿ ಎತ್ತಿದ, ಅತ್ತಕಡೆಯಿಂದ.
`ಹಲೋ, ಹೆಣ್ಣು ಧ್ವನಿ! ರಘುಗೆ ಖುಷಿಯಿಂದ
ಕೂಗಬೇಕೆನಿಸಿತು.
`ಹಲೋ, ಇದು ರಘು ಅವರ ಮೊಬೈಲ್ ಫೋನಾ?
ರಘುಗೆ ತನ್ನ ಜೀವನದ ಕಷ್ಟಗಳೆಲ್ಲ ಬಗೆಹರಿದಂತಾಯಿತು.
ಉತ್ಸಾಹದಿಂದ
`ಹೌದು, ನಾನು ರಘು ಮಾತಾಡೋದು, ನೀವ್ಯಾರು?
ನಿಮಗೆ ಯಾರು ಕೊಟ್ರು ಈ ನಂಬರ್
`ನಿಮ್ಮ ಬಗ್ಗೆ ಟೈಮ್ಸ್‌ನಲ್ಲಿ ಓದಿದೆ. ಅದಕ್ಕೆ ಮಾತಾಡ್ತಾ
ಇದ್ದೀನಿ ಅಂದ್ಳು.
`ಹಲೋ, ಹೇಳಿ.....ಅನ್ನುತ್ತಿದ್ದಂತೆಯೇ ಫೋನ್
ಕಟ್ ಆಯಿತು. ರಘುಗೆ ಸಂತೋಷ ತಡೆಯಲಿಕ್ಕಾಗಲಿಲ್ಲ. ಮತ್ತೆ ತಾನೆ
ಆ ನಂಬರ್‌ಗೆ ಡಯಲ್ ಮಾಡಿದ.
`ಹಲೋ, ನಾನು ರಘು ಮಾತಾಡೋದು,
ಟೈಮ್ಸ್‌ನಲ್ಲಿ ಜಾಹೀರಾತು ಕೊಟ್ಟಿದ್ದು ನಾನೇ. ನೀವ್ಯಾರು ಹೇಳಿ ಅಂದ.
ನಾನು ಜಾಸ್ತಿ ಉದ್ವೇಗಗೊಳ್ಳಬಾರದು ನಿಧಾನವಾಗಿ ಪರಿಸ್ಥಿತಿಯನ್ನು
ನಿಭಾಯಿಸಿಸೋಣ ಎಂದುಕೊಂಡ.
ಅತ್ತಕಡೆಯಿಂದ ಶಾಂತವಾಗಿ,
`ನೋಡಿ ರಘು, ಮೊದಲನೆಯದಾಗಿ ನಿಮ್ಮ
ಜಾಹೀರಾತು ನನಗೆ ತುಂಬಾ ಇಷ್ಟವಾಯಿತು. ನೀವು ಉಪಯೋಗಿಸಿದ ಶಬ್ಧ
`ಸಂಗಾತಿತುಂಬಾ ಚೆನ್ನಾಗಿದೆ. ನಿಮ್ಮ ಆಸಕ್ತಿಗಳ ಬಗ್ಗೆಯೂ ನನಗೆ ಹೆಮ್ಮ
ಅನಿಸ್ತು ನಿಮಗಿಷ್ಟವಾಗೋದಾದ್ರೆ ನಾವಿಬ್ಬರೂ ಎಲ್ಲಾದ್ರೂ, ಒಂದು ಕಡೆ ಸೇರಿ
ಮಾತಾಡೋಣ ಅಂದ್ಳು.
ಅವಳ ಯೋಚನೆ ಇವನಿಗೂ ಸರಿ ಅನಿಸ್ತು `ಆಯ್ತು
ಹಾಗಾದ್ರೆ, ಒಂದು ದಿನ ಫಿಕ್ಸ್‌ಮಾಡಿ ಎಲ್ಲಾದ್ರೂ ಮಾತಾಡೋಣ ಅಂದ, ಸ್ವಲ್ಪ
ಹೊತ್ತು ವಿಚಾರ ಮಾಡಿ,
`ಮತ್ತೆ ಸಾಯಂಕಾಲ ಫೋನ್ ಮಾಡಿ
ಹೇಳ್ತೇನೆ, ಅಂದು ಫೋನ್ ಕಟ್ ಮಾಡಿದ. ಅವನಿಗರಿವಿಲ್ಲದಂತೆಯೇ
ಅವನ ಎದೆಬಡಿತ ಜೋರಾಗಿತ್ತು. ಖುಷಿಯಿಂದ ಅರವಿಂದ್‌ಗೆ ವಿಷಯ ತಿಳಿಸಿದ.
ಇವನ ಅವಸರವನ್ನು ನೋಡಿ ಛೇಡಿಸುತ್ತ ಅರವಿಂದ್,
`ಈಗ ಗೊತ್ತಾಯ್ತೇನೋ ಹೆಣ್ಣಿನ ಮಹಿಮೆ
ಅಂದ.
ಸಾಯಂಕಾಲದವರೆಗೂ ಸಮಯ
ತಳ್ಳುವುದೇ ಕಷ್ಟವಾಯ್ತು ರಘುಗೆ, ಕೊನೆಗೆ ತಡೆಯಲಾರದೆ
ಐದೂವರೆಗೆ ಫೋನ್ ಮಾಡಿದ.
`ಹಲೋ, ನಾನು ರಘು, ಬೆಳಗ್ಗೆ ನಿಮ್ಮ
ಜೊತೆ ಮಾತನಾಡಿದ್ದೆ. ಸರಿ ಈಗ ಹೇಳಿ ಎಲ್ಲಿಸೇರೋಣ ಅಂತ ಅಂದ
`ಅದಕ್ಯಾಕೆ ಇಷ್ಟೋಂದು ಅವಸರ ಮಾಡ್ತೀರಾ
ರಘು, ಈ ವೀಕೆಂಡ್ ಎಲ್ಲಿಯಾದ್ರೂ ಭೇಟಿಯಾಗೋಣ. ಆದ್ರೆ ಒಂದು ಮಾತು,
ನೀವು ನನ್ನ ಪೂರ್ವಾಪರ ಜಾಸ್ತಿ ಕೇಳಬಾರದು. ನನಗೆ ಇಷ್ಟ
ಆದದ್ದು ನಿಮ್ಮ ಆಸಕ್ತಿಗಳು, ನೀವು ಕನ್ನಡವರು ಅಂತ. ನಿಮಗೆ ಮೂವತ್ತಾರು
ವರ್ಷ ವಯಸ್ಸಾದ್ರೂ ಮದುವೆ ಆಗಿಲ್ಲ ಅಂತಂದ್ರೆ, ನೀವು ತುಂಬಾ
ಕಷ್ಟ ಅನುಭವಿಸಿದ್ದೀರಾ, ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು
ಕಂಡಿದ್ದೀರಾ? ನಾನ್ಹೇಳಿದ್ದು ಸರಿನಾ? ಪ್ರಶ್ನಿಸಿದಳು. ಅವಳ ಯೋಚನಾಲಹರಿಗೆ
ಮೆಚ್ಚಿದ. `ಹೌದು ಅಂದ.
`ನಾನು ನಿಮ್ಮ ಇತಿಹಾಸದ ಬಗ್ಗೆ ಒಂದು ಚೂರು
ಪ್ರಶ್ನಿಸೋದಿಲ್ಲ, ಅದೇ ರೀತಿ ನೀವು ಕೂಡ ಅಂತ ಅಂದಳು.
`ಅದೆಲ್ಲಾ ಸರಿ, ಆದ್ರೆ ಸ್ವಲ್ಪನಾದ್ರೂ ನಿಮ್ಮ ಮಾಹಿತಿ
ಕೊಡಬಹುದಲ್ಲ? ಮತ್ತೆ ಕೇಳಿದ.
`ನಾನು ನಿಮಗಿಂತ ವಯಸ್ಸಿನಲ್ಲಿ ಸ್ವಲ್ಪ
ಚಿಕ್ಕವಳು. ಇಷ್ಟು ವರ್ಷ ಆದ್ರೂ ಮದುವೆ ಯಾಕೆ ಆಗಿಲ್ಲ? ಅಂತ
ಕೇಳ್ತೀರಾ, ನಾನಿಷ್ಟನ್ನ ಮಾತ್ರ ಹೇಳಬಲ್ಲೆ, ಮದುವೆ ಆಗಿತ್ತು ಆದ್ರೆ
ಈಗ ಆ ಸಂಬಂಧ ಸರಿ ಇಲ್ಲ. ಅದಕ್ಕಾಗಿ ನಾನು ಇನ್ನೊಬ್ಬ ಒಳ್ಳೆಯ ಸಂಗಾತಿಯನ್ನು
ಹುಡುಕ್ತಾ ಇದ್ದೀನಿ. ನಾನು ಒಂದು ಕಂಪನಿಯ ಅಕೌಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ.
ಕನ್ನಡ ಚೆನ್ನಾಗಿ ಬರುತ್ತೆ. ನಾನು ಕರ್ನಾಟಕದವಳು. ಸಂಗೀತ ಸೀನಿಯರ್
ಆಗಿದೆ. ಚೆನ್ನಾಗಿ ಹಾಡು ಕೂಡ ಹಾಡುತ್ತೇನೆ. ಸಾಹಿತ್ಯ, ಕವಿ, ಕವನಗಳ
ಬಗ್ಗೆ ತುಂಬಾ ಆಸಕ್ತಿ ಇದೆ. ಇಷ್ಟು ಸಾಕಾ ನನ್ನ ಬಯೋಡಾಟಾ? ನಗುತ್ತಾ
ಕೇಳಿದಳು.
ಗಡಿಬಿಡಿಯಿಂದ ಮರೆತಿದ್ದ ಮುಖ್ಯವಾದ ವಿಷಯವನ್ನು
ಕೇಳಲೆಂದು ರಘು,
`ಅದೆಲ್ಲಾ ನನಗೆ ಒಪ್ಪಿಗೆ, ನಿಮ್ಮ ಹೆಸರು ಏನು?
`ನನ್ನ ಹೆಸರು `ಶ್ರೀ ಅಂತ, ಇಲ್ಲೇ ಮುಂಬೈನಲ್ಲಿ
ಇರ್‍ತೀನಿ. ಹಾಗಾದ್ರೆ ನಾವು ಮುಂದಿನ ರವಿವಾರ ಎಲ್ಲಿಯಾದ್ರೂ ಸೇರೋಣವಾ?
ನನಗೆ ನಮ್ಮ ಅಥವಾ ನಿಮ್ಮ ಮನೆಯಲ್ಲಿ ಸೇರುವುದಕ್ಕಿಂತ
ಯಾವುದಾದ್ರೂ ಬೇರೆ ಸ್ಥಳದಲ್ಲಿ ಸೇರೋದು ಸರಿ ಅನಿಸುತ್ತೆ. `ನಿಮಗೆ
ದಾದರ್‌ನಲ್ಲಿರೋ ಶಿವಾಜಿ ಪಾರ್ಕ್ ಗೊತ್ತಾ? ಅಂತ ಕೇಳಿದಳು.
`ಗೊತ್ತಿದೆ ಅಂದ ರಘು, ರವಿವಾರ ಹನ್ನೊಂದು
ಗಂಟೆಗೆ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಸೇರುವುದು ಅಂತ ತೀರ್ಮಾನಿಸಿದರು.
ಅವಳ ದಿಟ್ಟತನಕ್ಕೆ ಅವಳ ಮಾತನಾಡುವ ಶೈಲಿಗೆ ಮಾರುಹೋಗಿದ್ದ
ರಘು. ಮನಸ್ಸು ಹುಚ್ಚೆದ್ದು ಕುಣಿಯತೊಡಗಿತು. ಅವಳ ಧ್ವನಿ
ಮನದ ತುಂಬೆಲ್ಲಾ ಮಾರ್ಧನಿಸಿದಂತಾಗುತ್ತಿತ್ತು. ಅವನಿಗೆ
ತಿಳಿಯದಂತೆಯೇ ಅವಳನ್ನು ಪ್ರೀತಿಸತೊಡಗಿದ್ದ. ಅಂದಿನಿಂದ ದಿನಾಗ್ಲೂ
ಕನಿಷ್ಟ ಐದು ಬಾರಿ ಅವಳೊಂದಿಗೆ ಮಾತನಾಡುತ್ತಿದ್ದ. ಹರಟುತ್ತಿದ್ದ, ನಗುತ್ತಿದ್ದ.
ಜೀವನ ರಂಗುರಂಗಾಗಿತ್ತು. ಬರಬರುತ್ತಾ ಅವಳನ್ನು ಏಕವಚನದಲ್ಲಿ
ಕರೆಯಲು ಪ್ರಾರಂಭಿಸಿದ್ದ, ಕೊನೆಗೊಮ್ಮೆ ಅವಳೇ, `ಅಷ್ಟೋಂದು ಭಾವಾವೇಶ
ಒಳ್ಳೆಯದಲ್ಲ ರಘು, ನೀವಿನ್ನು ನನ್ನ ನೋಡಿಯೇ ಇಲ್ಲ. ನಾವಿಬ್ಬರೂ
ಒಬ್ಬರನ್ನೊಬ್ಬರು ಅರಿತೇ ಇಲ್ಲ. ಜೀವನ ತುಂಬ ವಿಶಾಲವಾಗಿದೆ. ಜಾಸ್ತಿ
ಎಮೋಷನಲ್ ಆಗ್ಬೇಡಿ, ಹೇಗಿದ್ರೂ ನಾಳೆ ದಾದರ್‌ನಲ್ಲಿ ಸಿಕ್ಕೇ
ಸಿಗ್ತೀವಲ್ಲಾ ಅಂತ ಎಚ್ಚರಿಸಿದ್ದಳು.
`ಏನಾದ್ರೂ ಆಗ್ಲಿ `ಶ್ರೀ ನಿನ್ನ ಧ್ವನಿಯಿಂದಾನೇ ನಾನು
ತೀರ್ಮಾನ ಮಾಡಿಬಿಟ್ಟಿದ್ದೇನೆ, ನೀನೇ ನನ್ನ ಸಂಗಾತಿ.
`ನನಗೂ ನಿಮ್ಮ ಮಾತು ಕೇಳಿ ಇಷ್ಟ ಆಗಿದೆ,
ನಾಳೆ ಇಬ್ಬರೂ ಸೇರಿ ಮಾತನಾಡಿ ಮುಂದಿನದನ್ನ ನಿರ್ಧರಿಸೋಣ ಅಂತ
ಅಂದಳು.
***
ದಿಗ್ಗನೆ ಎದ್ದು ಕುಳಿತ ರಘು, ಸ್ಟೇಷನ್‌ನಲ್ಲಿನ
ಗಲಾಟೆಯಿಂದಾಗಿ ಎಚ್ಚರಗೊಂಡಿದ್ದ. ಹೊರಗೆ ಪ್ಲಾಟ್‌ಫಾರಂನಲ್ಲಿ ನೋಡಿದ,
ಕಲ್ಯಾಣ್ ಬಂದಿತ್ತು. ಇನ್ನೊಂದೆರಡು ಗಂಟೆಗಳಲ್ಲಿ ಹೋಗಬಹುದು
ಅಂದುಕೊಂಡ. ನಡೆದಿದ್ದನ್ನೆಲ್ಲ ಮೆಲುಕು ಹಾಕಿದ್ದರಿಂದ ಮನಸ್ಸು ಶಾಂತವಾಗಿತ್ತು.
ವಾತಾವರಣ ಆಹ್ಲಾದಮಯವಾಗಿತ್ತು. ಸ್ವಲ್ಪ ಅಡ್ಡಾಡೋಣವೆಂದುಕೊಂಡು
ಕೆಳಗಿಳಿದು ಪ್ಲಾಟ್‌ಫಾರಂ ಮೇಲೆ ಅತ್ತಿಂದಿತ್ತ ತಿರುಗಿದ. ಒಂದೆರಡು ಬಿಸ್ಕತ್ತಿನ
ಪ್ಯಾಕೆಟ್ ಹಾಗೂ ನೀರು ತೆಗೆದುಕೊಂಡು ಮತ್ತೆ ತನ್ನ ಜಾಗದಲ್ಲಿ ಬಂದು
ಕುಳಿತ. ಖಾಲಿಯಿದ್ದ ಬೋಗಿಯೆಲ್ಲ ತುಂಬಿ ಹೋಗಿತ್ತು. ಏನೋ ಮಿಂಚಿದಂತಾಗಿ
ಎದುರಿನ ಸೀಟಿನ ಕೊನೆಯಲ್ಲಿ ನೋಡಿದ. ಅಲ್ಲೊಬ್ಬ ಹೆಂಗಸು
ಕುಳಿತಿದ್ದಳು. ಒಂದು ಕ್ಷಣ ಅವಳೂ ಇವನೆಡೆಗೆ ನೋಡಿದಳು. ಇಬ್ಬರ
ದೃಷ್ಟಿ ಸಂಧಿಸಿದವು. ಅವಳನ್ನು ನೋಡಿ ರಘುಗೆ ಏನೋ ಕಸಿವಿಸಿ ಪ್ರಾರಂಭವಾಯಿತು.
ತಕ್ಷಣ ದೃಷ್ಟಿ ಬೇರೆ ಕಡೆ ತಿರುಗಿಸಿದ. ಮನಸ್ಸಿನಲ್ಲಿ ಒಂದು ತರಹದ
ಉದ್ವೇಗ ಪ್ರಾರಂಭವಾಯಿತು. `ಇವಳನ್ನೆಲ್ಲೋ ನೋಡಿದ್ದೇನೆ
ಅಂದುಕೊಂಡ, ಇನ್ನೊಮ್ಮೆ ಅವಳತ್ತ ದೃಷ್ಟಿ ಹಾಯಿಸಿದ. ದೀರ್ಘವಾಗಿ ಮತ್ತೊಮ್ಮೆ
ನೋಡಿದ. ಮತ್ತೊಮ್ಮೆ ಅವಳೂ ಇವನತ್ತ ತಿರುಗಿದಳು. ಮತ್ತೆ
ಇಬ್ಬರ ನೋಟ ಒಂದಾದವು. ಅವಳ ದೃಷ್ಟಿ ಎದುರಿಸಲಾಗದೆ ಕಿಟಕಿಯ ಹೊರಗಡೆ
ನೋಡತೊಡಗಿದ.
ರಘುನ ಮನಸ್ಸು ತನ್ನೆಲ್ಲ ಫ್ಲಾಷ್‌ಬ್ಯಾಕ್
ತಿರುವಿಹಾಕತೊಡಗಿತು. ಇವಳನ್ನೆಲ್ಲೋ ನೋಡಿದ್ದೇನೆ. ಅಥವಾ ಅವಳ
ಥರಾನೆ ಇವಳೂ ಇದ್ದಾಳೆ. ಮುಖ ಕಿಟಕಿಯ ಕಡೆಗಿದ್ದರೂ ಕಿವಿ ಅವಳ
ಕಡೆಗೇ ಇತ್ತು. ಅವಳು ತನ್ನ ಪಕ್ಕದ ಹೆಂಗಸಿನೊಂದಿಗೆ ಹಿಂದಿಯಲ್ಲಿ
ನಿರರ್ಗಳವಾಗಿ ಮಾತನಾಡುತ್ತಿದ್ದಳು. ರಘುವಿಗೆ ಪರಿಹಾರ ಸಿಗದೇ
ತಲೆ ಕೆಟ್ಟಂತಾಯಿತು. ಒಂದ್ಹತ್ತು ನಿಮಿಷ ವಿಚಾರ ಮಾಡಿದ ನಂತರ
ಹೊಳೆಯಿತು. `ಹೌದು, ಇವಳು ಚಿನ್ನಿನೇ ಅಂದುಕೊಂಡ. ಹಾಗಂತ ನಿರ್ಧಾರ
ಮಾಡಿ ಮತ್ತೆ ಅವಳ ಕಡೆ ತಿರುಗಿದ. ಸ್ವಲ್ಪ ದಪ್ಪಗೆ ಇದ್ದಳು, ಸೀರೆ
ಉಟ್ಟಿದ್ದಳು, ತಲೆಯಲ್ಲಿ ಅಲ್ಲಲ್ಲಿ ಒಂದೊಂದು ಬಿಳಿ ಕೂದಲು ಕಾಣುತ್ತಿತ್ತು.
ಮತ್ತೊಮ್ಮೆ ತನ್ನ ಕಣ್ಣನ್ನು ನಂಬದಂತಾಗಿ `ಅಲ್ಲಲ್ಲ ಇವಳು ಚಿನ್ನಿಯ
ಹಾಗಿದ್ದಾಳೆ ಅಂದುಕೊಂಡ. ಕಣ್ಣ ತುದಿಯಲ್ಲಿ ಅವಳು ನಗುವ ಶೈಲಿ,
ಅವಳು ಮೂಗುತಿಯನ್ನು ಸರಿಮಾಡಿಕೊಳ್ಳುವ ರೀತಿ, ಕಿರುಬೆರಳನ್ನು
ಕಡಿಯುವ ರೀತಿ, ಎಲ್ಲಾ ಅವನಿಗೆ `ಚಿನ್ನಿಯ ನೆನಪನ್ನು
ತಂದುಕೊಟ್ಟವು.
***
ಬಳ್ಳಾರಿಯಲ್ಲಿ ರಘು ತಂದೆ ನೀರಾವರಿ
ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ರಘು ಹುಟ್ಟಿದ. ಎರಡು ಹೆಣ್ಣು
ಮಕ್ಕಳ ನಂತರ ಗಂಡು ಹುಟ್ಟಿತ್ತು. ರಘು ನಾಲ್ಕು ವರ್ಷದವನಿದ್ದಾಗ
ಪಕ್ಕದ್ಮನೆಗೆ ಒಂದು ಕುಟುಂಬ ವರ್ಗವಾಗಿ ಬಂತು. ಅದೇ ಚಿನ್ನಿಯದು,
ಚಿನ್ನಿಯ ತಂದೆ ಸರಕಾರಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು.
ರಘುಗೆ ನೆನಪಿರುವಂತೆ ಅವನ ಚಿನ್ನಿಯ ಸ್ನೇಹ ಬಹಳ ಮೊದಲಿನದು.
ಅವನಿಗೆ ತಿಳುವಳಿಕೆ ಬಂದಾಗಿನಿಂದ ಅವಳೊಂದಿಗೆ ಸ್ಕೂಲಿಗೆ ಹೋಗುತ್ತಿದ್ದ.
ಅವಳೊಂದಿಗೆ ಆಟವಾಡುತ್ತಿದ್ದ. ಅವಳು ಇವನ ಮನೆಗೆ, ಇವನು ಅವಳ
ಮನೆ ಹೋಗಿ ಗಲಾಟೆ ಮಾಡುವುದು, ಊಟ ಮಾಡುವುದು, ಇದ್ದೇ
ಇತ್ತು. ಅಕ್ಕಪಕ್ಕದ ಎಲ್ಲ ಮನೆಯವರಲ್ಲಿ ಇವರಿಬ್ಬರೇ ಅತ್ಯಂತ
ಚಿಕ್ಕ ವಯಸ್ಸಿನವರಾಗಿದ್ದರು. ಹೀಗಾಗಿ ಎಲ್ರೂ ಇವರಿಬ್ಬರನ್ನು ಅತ್ಯಂತ
ಮುದ್ದು ಮಾಡುತ್ತಿದ್ದರು.
ದಿನ ಕಳೆದಂತೆ ಇಬ್ಬರ ಸ್ನೇಹ ಬಹಳ ಹತ್ತಿರವಾಗ್ತಾ
ಬಂತು. ಒಬ್ಬರನ್ನಗಲಿ ಒಬ್ಬರು ಇರುತ್ತಿರಲಿಲ್ಲ, ಇಬ್ಬರದೂ ನಿಷ್ಕಲ್ಮಷ ಸ್ನೇಹ.
ಜಗಳವಾಡೋದು, ಒಂದೆರಡು ವಾರ ಮಾತು ಬಿಡೋದು, ಮತ್ತೆ
ರಾಜಿಯಾಗಿ ಪುನಃ ಮೊದಲಿನಂತಾಗುವುದು ಸರ್ವೇ ಸಾಧಾರಣವಾಗಿತ್ತು.
ಚಿನ್ನಿಗೆ ಸ್ವಲ್ಪ ಸಿಟ್ಟು ಜಾಸ್ತಿ ಅವಳ ಮೂಗಿನ ನೇರಕ್ಕೇ ಎಲ್ಲ
ಕೆಲಸವಾಗಬೇಕು. ಪ್ರತಿಯೊಂದು ಅವಳಂದಂತೆಯೇ ಆಗಬೇಕು.
ರಘು ಮೊದಲಿನಿಂದಲೂ ಮೃದು ಸ್ವಭಾವದ ಹುಡುಗ. ಅವಳ ಸ್ನೇಹ,
ಅವಳೊಂದಿಗಿನ ಮಾತು, ಅವನಿಗಿಷ್ಟವಾಗುತ್ತಿತ್ತು. ಇಬ್ಬರೂ ಒಂದೇ ಸ್ಕೂಲಿಗೆ
ಹೋಗುತ್ತಿದ್ದರಿಂದ ಗೆಳೆತನ ಗಾಢವಾಗಿತ್ತು.
ರಘು ದೊಡ್ಡವನಾದ ಹಾಗೆಲ್ಲ ಗೆಳೆತನಕ್ಕೇನೂ
ಧಕ್ಕೆಯಾಗಲಿಲ್ಲ. ಎರಡು ಕುಟುಂಬದವರು ಇಬ್ಬರ ಸ್ನೇಹಕ್ಕೆ ಪ್ರೋತ್ಸಾಹಿಸುತ್ತಿದ್ದರು.
ಬರಬರುತ್ತ ಸ್ನೇಹಕ್ಕೆ ಪ್ರೀತಿಯ ಸಿಂಚನವಾಗತೊಡಗಿತು. ಇಬ್ಬರಲ್ಲಿ
ಆತ್ಮೀಯತೆ ಮೊಳಕೆಯೊಡೆಯತೊಡಗಿತು. ಅದನ್ನು `ಇನ್‌ಫ್ಯಾಚುಯೇಷನ್
ಅನ್ನಬಹುದು, ಮುಗ್ಧಪ್ರೀತಿ ಅಂತನೂ ಕರೆಯಬಹುದು, ಅವರಿಬ್ಬರಿಗೆ
ತಿಳಿಯದಂತೆಯೇ ಮಧುರ ಬಾಂಧವ್ಯದ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ರಘುಗೆ ಇನ್ನೂ ಚೆನ್ನಾಗಿ ನೆನಪಿದೆ. ಆಗ ಅವನು
ಪಿಯುಸಿ ಸೆಕೆಂಡ್ ಇಯರ್‌ನಲ್ಲಿದ್ದ. ಚಿನ್ನಿ (ಎಸ್.ಎಸ್.ಎಲ್.ಸಿ) ಹತ್ತನೇ
ತರಗತಿಯಲ್ಲಿದ್ದಳು. ಇಬ್ಬರೂ ಜೊತೆಯಾಗಿ ಶಾಲೆಗೆ ಹೋಗುತ್ತಿದ್ದರು.
ಒಂದು ದಿನ ಶಾಲೆಗೆ ಹೋಗುವಾಗ ಬೀದಿಯ ನಾಯಿಯೊಂದು ಚಿನ್ನಿಯನ್ನು
ನೋಡಿ ಗುರ್ರೆಂದು ಕಚ್ಚಲು ಬಂತು. ತಕ್ಷಣ ರಘು ಅವಳ ಕೈಹಿಡಿದು
ಪಕ್ಕಕ್ಕೆ ಸರಿಸಿ, ತಾನೇ ನಾಯಿಯ ಮುಂದೆ ನಿಂತ. ಇವನನ್ನು ನೋಡಿ
ನಾಯಿ ಮತ್ತೆ ಗುರ್ರೆಂದು ರಘುವನ್ನು ಕಚ್ಚಲು ಬಂತು. ಎಲ್ಲಿನ
ಆಕ್ರೋಶವೋ ಏನೋ ತನ್ನ ಕೈಯಲ್ಲಿದ್ದ ಕಾಲೇಜ್ ಬ್ಯಾಗಿನಿಂದ
ಜೋರಾಗಿ ಅದರ ಮುಖಕ್ಕೆ ಬೀಸಿದ. ನಾಯಿ ಆ ಹೊಡೆತದ ನೋವಿಗೆ
ಚೀರುತ್ತಾ ಓಡಿ ಹೋಯಿತು. ಚಿನ್ನಿಯ ಎದೆ ಜೋರಾಗಿ ಬಡಿದುಕೊಳ್ಳುತ್ತಾ
ಇತ್ತು, ಗಟ್ಟಿಯಾಗಿ ರಘುವನ್ನು ಅವಚಿಕೊಂಡಿದ್ದಳು. ಅವಳಿಂದ
ಬಿಡಿಸಿಕೊಂಡು, ಎದೆಯುಬ್ಬಿಸಿ ಧೈರ್ಯದಿಂದ ಹೇಳಿದ `ನಾನಿದ್ದೀನಲ್ಲ
ಯಾಕ್ ಹೆದರ್‍ತೀಯಾ ಅಂತ. ಗಟ್ಟಿಯಾಗಿ ಅವನ ಕೈ ಹಿಡಿದ ಚಿನ್ನಿಗೆ
ಒಂದು ಕ್ಷಣ ರೋಮಾಂಚನವಾಗಿತ್ತು.
`ಚಿನ್ನಿ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು,
ಹಾಗೆಯೇ ರಘುಗೆ `ನಂದು ಅಂತ ಎಲ್ಲ ಕರೆಯುತ್ತಿದ್ದರು. ಅವನ
ಪೂರ್ತಿ ಹೆಸರು `ರಘುನಂದನ್. ಬಹಳ ದಿನಗಳ ನಂತರ `ಚಿನ್ನಿಯ
ನಿಜವಾದ ಹೆಸರನ್ನು ತಿಳಿಯಬೇಕೆಂದು ಅವಳ ಪುಸ್ತಕದ ಮೇಲಿನ ಹೆಸರನ್ನೊಮ್ಮೆ
ಓದಿದ್ದ. ಅದರಲ್ಲಿ ಮೇಘ. ಎಸ್. ಅಂತ ಇತ್ತು. ಅದರ ಮರುದಿನಾನೇ
ಅವಳಿಗೆ ಹೇಳಿದ್ದ. ನಿನ್ನ ಮೇಘ ಅನ್ನೋ ಹೆಸರಿಗಿಂತ `ಚಿನ್ನಿನೇ ಚೆನ್ನಾಗಿದೆ
ಅಂತ.
ಒಮ್ಮೆ ಸಾಯಂಕಾಲ ಬರುವಾಗ ಜೊತೆಯಲ್ಲಿ ಬರಲಿಲ್ಲ
ಅಂತ ಚಿನ್ನಿ ಮಾತು ಬಿಟ್ಟಳು. ರಘುಗೆ ಕೂಡ ಸ್ವಾಭಿಮಾನದಿಂದ ಮಾತನಾಡಲಾಗಲಿಲ್ಲ.
ಒಂದು ವಾರ ಇಬ್ಬರೂ ಮಾತೇ ಆಡಲಿಲ್ಲ. ಇದ್ದಕ್ಕಿದ್ದ ಹಾಗೆ ಒಂದು ದಿನ
ರಘು ತಂದೆಗೆ ಹಾರ್ಟ್ ಅಟ್ಯಾಕ್ ಆಯಿತು. ಎಲ್ಲ ಸೇರಿ ಬೆಂಗಳೂರಿಗೆ
ಆಸ್ಪತ್ರೆಗೆ ಕರೆದುಕೊಂಡು ಹೋದರು. ಬೆಂಗಳೂರಿನಿಂದ ರಘು ವಾಪಸ್
ಬರುವಷ್ಟರಲ್ಲಿ ಚಿನ್ನಿ ತಂದೆಗೆ ಟ್ರಾನ್ಸ್‌ಫರ್ ಆಗಿ ರಾಯಚೂರಿಗೆ ಹೋಗಿಬಿಟ್ಟಿದ್ದರು.
ಸುಮಾರು ಹದಿನೈದು ದಿನ ಒಬ್ಬನೇ ಕುಳಿತು ಅತ್ತಿದ್ದ ರಘು. ಚಿನ್ನಿಯೊಂದಿಗೆ
ಕಳೆದ ಆ ವರ್ಷಗಳು ಅವನ ಜೀವನದ ಅಮರ ಕ್ಷಣಗಳಾಗಿದ್ದವು.
`ಚಿನ್ನಿ ಅವನ ಬದುಕಿನ ಪ್ರಥಮ ಪ್ರೇಮದ ಅಧ್ಯಾಯ. ಹಾಗೆಯೇ
ಇಲ್ಲಿಯವರೆಗೆ ಅದು ಕೊನೆಯದೂ ಕೂಡ.
***
ಹಿಂದಿನದೆಲ್ಲಾ, ನೆನಪಿಸಿಕೊಳ್ಳುತ್ತಾ ರಘು ಕಣ್ಣು
ತುಂಬಿ ಬಂದವು. ಕಿಟಕಿಯಿಂದ ಮುಖ ಒಳಗಡೆ ತಿರುಗಿಸಿದ. ಅವಳು ತನ್ನನ್ನೇ
ದಿಟ್ಟಿಸಿ ನೋಡುತ್ತಿದ್ದುದ್ದು ಕಾಣಿಸಿತು. ಧೈರ್ಯದಿಂದ ಅವಳನ್ನೇ
ದಿಟ್ಟಿಸಿ ನೋಡಿದ. ಇವನ ಕಣ್ಣ ಮಂಜಾಗಿದ್ದಕ್ಕೋ ಏನೋ ಅವಳ ಕಣ್ಣಲ್ಲೂ
ನೀರು ಕಂಡಂತಾಯಿತು. ಈ ಬಾರಿ ಇಬ್ಬರ ನೋಟ ಸ್ವಲ್ಪ ಜಾಸ್ತಿ ಹೊತ್ತು ಸಂಧಿಸಿದ್ದವು.
`ಠಾಣಾ ಸ್ಟೇಷನ್ ಬಂದಿದ್ದರಿಂದ ಮತ್ತೆ ಟ್ರೇನ್‌ನಲ್ಲಿ ಗಲಾಟೆ ಪ್ರಾರಂಭವಾಯಿತು.
ಒಬ್ಬ ವಯಸ್ಸಾದ ಮನುಷ್ಯ ಟ್ರೇನ್ ಏರಿದ. ಅವಳ ಮುಖವನ್ನೊಮ್ಮೆ
ನೋಡಿ ಮೆಲುವಾಗಿ ನಕ್ಕ. `ರವಿವಾರದ ದಿನ ಎಲ್ಲಿಗೆ ಹೋಗ್ತಾ ಇದ್ದೀಯಾ
ಅಂತ ಕೇಳಿದ.
`ದಾದರ್‌ನಲ್ಲಿ ನಮ್ಮ ಚಿಕ್ಕಪ್ಪನ ಮನೆ `ಗೃಹ
ಪ್ರವೇಶ ಇದೆ. ಅದಕ್ಕೆ ಹೋಗ್ತಾ ಇದ್ದೀನಿ ಅಂದ್ಳು. ಅವಳ ಮಾತು
ಕೇಳಿ ರಘುಗೆ ಎಲ್ಲಿಲ್ಲದ ಖುಷಿಯಾಯಿತು. `ಓಹೋ, ಇವಳು ಕನ್ನಡದವಳು.
ಆದ್ರೆ ಇವಳು ನನ್ನ ಚಿನ್ನಿ ಮಾತ್ರ ಅಲ್ಲ ಅಂತಂದುಕೊಂಡ. ಚಿನ್ನಿಯ
ಹಳೆಯ ಮುಖವನ್ನೊಮ್ಮೆ ಜ್ಞಾಪಿಸಿಕೊಳ್ಳುತ್ತಾ ಈಗ ಹೇಗಾಗಿರಬಹುದೆಂದು
ಅವಳ ಮುಖ ನೋಡುತ್ತ ಊಹಿಸತೊಡಗಿದ. ಮತ್ತೆ ಸಂಶಯ ಪ್ರಾರಂಭವಾಯಿತು.
ಇವಳೇ `ಚಿನ್ನಿಯಿರಬಹುದಾ ಅಂತ. ಅವಳೂ ಇವನೆಡೆಗೆ ದಿಟ್ಟಿಸಿ
ನೋಡುತ್ತಿದ್ದಳು. ಅವಳ್ಯಾಕೆ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾಳೆ
ಅಂದುಕೊಂಡು ಮತ್ತೆ ಬೇರೆ ಕಡೆ ನೋಟ ತಿರುಗಿಸಿದ. ಅಷ್ಟರಲ್ಲಿ ಕುದಿಸಿದ
ಶೇಂಗಾ ಮಾರುವವನೊಬ್ಬ ಟ್ರೇನ್‌ನಲ್ಲಿ ಬಂದ. ರಘುವಿಗೆ ಅದು
ತುಂಬಾ ಇಷ್ಟ. ಎದ್ದು ತೆಗೆದುಕೊಳ್ಳಲು ಹೋಗುವಷ್ಟರಲ್ಲಿ ಅವಳು ಬೇಗನೆ
ಎದ್ದು ಅವನ ಹತ್ತಿರ ಮಾತನಾಡಿ ಶೇಂಗಾ ತೆಗೆದುಕೊಂಡಳು. ಮನದಾಳದಲ್ಲಿ
`ಹೌದು ಚಿನ್ನಿಗೂ ಈ ಶೇಂಗಾ ತುಂಬಾ ಇಷ್ಟ ಅಂದಂತಾಯಿತು. ಕಸಿವಿಸಿ
ತಡೆದುಕೊಳ್ಳಲಾಗಲಿಲ್ಲ. ಎದ್ದು ಮಾತನಾಡೋಣವೆಂದು ಹೊರಟ
ಧೈರ್ಯ ಸಾಲದೇ ಹಾಗೆಯೇ ನೇರವಾಗಿ ಹೋಗಿ ಬಾಗಿಲ ಹತ್ತಿರ ನಿಂತುಕೊಂಡ.
ಅವಳ ನೋಟ ಇವನನ್ನೇ ಹಿಂಬಾಲಿಸುತ್ತಿತ್ತು. ಅವಳೂ ಅವನನ್ನೇ ನೋಡುತ್ತಾ
ಎದ್ದು ಬಾಗಿಲ ಹತ್ತಿರ ಬರಲಾರಂಭಿಸಿದಳು. ಇವನ ಹತ್ತಿರ ಬಂದು `ಥೋಡಾ
ಆಪ್‌ಕಾ ಪೆನ್ ದೀಜಿಯೇ ಅಂದ್ಳು. ರಘು ಸುಧಾರಿಸಿಕೊಳ್ಳುತ್ತಾ
`ತಗೊಳ್ಳಿ ನಾನು ಕರ್ನಾಟಕದವನು ಅಂದ. ಅವಳು ಇವನನ್ನೊಮ್ಮೆ ಮೇಲಿಂದ
ಕೆಳಗೆ ಧೀರ್ಘವಾಗಿ ನೋಡುತ್ತಾ `ನೀನು ಬಳ್ಳಾರಿಯ ನಂದು ಅಲ್ವಾ?
ಅಂದಳು. ಅವನೆದೆ ಬಡಿತ ಜೋರಾಗಿ `ಚಿನ್ನಿ ಅಂತ ಕೂಗಿದ.
ಕಣ್ಣುಗಳೆರಡು ತುಂಬಿ ಬಂದಿದ್ದವು. ಅವಳೂ ಒಂದು ಕ್ಷಣ ಭಾವೋದ್ವೇಗಕ್ಕೆ
ಒಳಗಾದಳು. ಸುತ್ತಲಿನ ಜನ ಎಲ್ಲ ತಮ್ಮನ್ನೇ ನೋಡುತ್ತಿರುವುದರ
ಅರಿವಾಯಿತು. ಅವಳೇ ಹಿಂದು ಮುಂದು ನೋಡದೇ ಅವನ ಕೈ
ಗಟ್ಟಿಯಾಗಿ ಹಿಡಿದುಕೊಂಡು ಎದುರಿನ ಬಾಗಿಲಿಗೆ ಹೋಗಿ ಒಬ್ಬರಿಗೊಬ್ಬರು
ಒರಗಿಕೊಂಡು ನಿಂತುಬಿಟ್ಟರು. ಸ್ವಲ್ಪ ಹೊತ್ತು ಇಬ್ಬರೂ ಏನೂ ಮಾತನಾಡಲಿಕ್ಕಾಗಲಿಲ್ಲ.
ನಾಲಿಗೆ ಆನಂದಕ್ಕೆ ಒಣಗಿತ್ತು. ಇಬ್ಬರ ಕಣ್ಣುಗಳು ತೇವಗೊಂಡು
ಕಣ್ಣಿರು ಹರಿಯೋದಕ್ಕೆ ಪ್ರಾರಂಭವಾಗಿತ್ತು. ವೇಗವಾಗಿ ಹೊರಟ ರೈಲಿನ
ಬಾಗಿಲಿನಿಂದ ಗಾಳಿ ಜೋರಾಗಿ ಬೀಸುತ್ತಿತ್ತು. ಚಿನ್ನಿ ಕೈ ಗಟ್ಟಿಯಾಗಿ
ಹಿಡಿದಿದ್ದಳು. ಸಮಾಧಾನದಿಂದ ಮೊದಲು ಅವಳೇ ಮಾತು
ಪ್ರಾರಂಭಿಸಿದಳು.
`ಹೇಗಿದ್ದೀ? ನಂದೂ
`ಚೆನ್ನಾಗಿದ್ದೇನೆ, ನನಗೇನಾಗಿದೆ, ವಯಸ್ಸಾಗಿದೆ
ಅಷ್ಟೇ ಅಂದ ರಘು, ಮತ್ತೆ ಅವಳತ್ತ ತಿರುಗಿ
`ನೀನು? ಅಂದ
`ಪರ್‍ವಾಗಿಲ್ಲ, ಹೀಗಿದ್ದೇನೆ. ಆರಕ್ಕೇರಿಲ್ಲ,
ಮೂರಕ್ಕಿಳಿದಿಲ್ಲ ಅಂದಳು.
`ಬಳ್ಳಾರಿಯ ಬಿಟ್ಟು ಹದಿನೆಂಟು ವರ್ಷ ಆಗ್ತಾ ಬಂತು.
ಬದುಕು ಎಷ್ಟೋಂದು ಫಾಸ್ಟ್ ಆಗಿಹೋಗ್ತಾ ಇದೆ ನೋಡು. ಇನ್ನು ಜೀವನದಲ್ಲಿ
ನಿನ್ನ ನೋಡ್ತೀನೋ ಇಲ್ವೋ ಅಂತ ಅಂದುಕೊಂಡಿದ್ದೆ. ಆದ್ರೆ ಇವತ್ತು ನೀನು
ಸಿಕ್ಕಿದ್ದು, ಜಗತ್ತು ಎಷ್ಟು ಚಿಕ್ಕದಿದೆ ಅಂತ ಅನಿಸ್ತಾ ಇದೆ. ಅಂದ ಅವಳನ್ನು
ಇನ್ನೊಮ್ಮೆ ನೋಡಿ `ಚಿನ್ನಿ, ತಲೆಯಲ್ಲಿ ಬಿಳಿಕೂದಲಾಗಿದೆ, ತಂಬಾ ದಪ್ಪಾನೂ
ಆಗಿದ್ದೀಯಾ, ಎಷ್ಟು ಜನ ಮಕ್ಕಳು ಗಂಡ ಏನ್ಮಾಡ್ತಾರೆ? ಕೇಳಿದ.
ದೀರ್ಘವಾಗಿ ಉಸಿರೆಳೆದು ಚಿನ್ನಿ `ಮದುವೆ ಆಗಿ ಎಂಟು
ವರ್ಷ ಆಯ್ತು ಮಕ್ಕಳಿನ್ನೂ ಇಲ್ಲ ಅಂದ್ಳು. ಮತ್ತೆ ಮುಂದುವರೆಸುತ್ತಾ
ಅಪ್ಪ, ಅಮ್ಮ ಈಗ ಬೆಂಗಳೂರಿನಲ್ಲಿದ್ದಾರೆ. ನಮ್ಮ ಮನೆ ಕಲ್ಯಾಣ್‌ದಲ್ಲಿದೆ.
ನಿನಗೆಷ್ಟು ಜನ ಮಕ್ಕಳು? ಕೇಳಿದಳು.
`ನನಗೆ ನಾನೇ ಮಗು. ದೇಶದ ಫ್ಯಾಮಿಲಿ ಪ್ಲಾನಿಂಗ್‌ಗೆ
ನಾನೊಬ್ಬ ಉದಾಹರಣೆ. ಮದುವೆ ಇನ್ನೂ ಆಗಿಲ್ಲ. ಅಂದ್ಹಾಗೆ ಈಗ ಮದುವೆ
ಆಗೋ ಮೂಡ್ ಬಂದಿದೆ. ಬಹುಶಃ ಇನ್ನೊಂದೆರಡು ವಾರದಲ್ಲಿ ಒಂದು
ತೀರ್ಮಾನಕ್ಕೆ ಬರ್‍ತೇನೆ ಅಂದ. ಮುಂದೆ ಮಾತನಾಡಲು
ವಿಷಯಗಳನ್ನು ಹುಡುಕತೊಡಗಿದರು. ರೇಲ್ವೇ ಕ್ರಾಸಿಂಗ್ ಬಂದಿದ್ದರಿಂದ
ಒಂದಿಪ್ಪತ್ತು ನಿಮಿಷ ತಡವಾಗ್ತಾ ಇತ್ತು. ಮತ್ತೆ ಚಿನ್ನಿಯೇ ನಗುತ್ತಾ
`ಆ ನಿನ್ನ ಬೀದಿ ನಾಯಿ ಹೇಗಿದೆ? ನನಗೆ
ಕಚ್ಚೋದಕ್ಕೆ ಬಂದಿತ್ತು ಅಂದಳು.
`ಇಲಿ ಕಂಡ ಬೆಕ್ಕಿನ ಹಾಗಾಗಿತ್ತು ನಿನ್ನ ಮುಖ
ರಘು ಅಂದ.
`ಅದರ ಶಬ್ಧಕ್ಕೆ ನಿನ್ನ ಕಾಲು ಕೂಡಾ ನಡುಗ್ತಾ
ಇದ್ವು, ನಾನು ನೋಡಿದ್ದೇನೆ ಮತ್ತೆ ಚಿನ್ನಿ ಛೇಡಿಸಿದಳು. ಇಬ್ಬರೂ
ಜೋರಾಗಿ ನಗಲು ಪ್ರಾರಂಭಿಸಿದರು. ಇದರೊಂದಿಗೆ ಮುಚ್ಚಿ ಹೋಗಿದ್ದ
ಒಂದು ನೆನಪುಗಳ ಬುತ್ತಿಯೇ ತೆರೆದಂತಾಯಿತು. ಸುಪ್ತಭಾವನೆಗಳೆಲ್ಲಾ
ಹೊರಬರಲು ಪ್ರಾರಂಭ ಮಾಡಿದವು. ಗತ ಜೀವನದ ಪುಟಗಳನ್ನು
ಒಂದೊಂದಾಗಿ ಮೆಲುಕಕು ಹಾಕತೊಡಗಿದರು. ಕುತ್ತಾ ಜೋರಾಗಿ ನಗುತ್ತಿದ್ದರು.
ಒಬ್ಬರಿಗೊಬ್ಬರು ಗುದ್ದುತ್ತಿದ್ದರು. ಒಬ್ಬರ ತಲೆಗೊಬ್ಬರು ಮೊಟಕುತ್ತಿದ್ದರು.
ಹಾಕುತ್ತಿದ್ದರು. ಹದಿನೆಂಟು ವರ್ಷದ ಹಿಂದಿನ `ನಂದು, `ಚಿನ್ನಿಯರಂತಾಗಿಬಿಟ್ಟಿದ್ದರು.
ಇಬ್ಬರ ಮನಸ್ಸುಗಳು ಹಗುರವಾಗಿತ್ತು.
`ನೀನೇನೇ ಹೇಳು ಚಿನ್ನಿ, ನಮ್ಮ ತಂದೆನ್ನ
ಬೆಂಗಳೂರಿನಿಂದ ವಾಪಸ್‌ಕರೆದುಕೊಂಡು ಬರುವ ತನಕನಾದ್ರೂ ನೀವು
ಬಳ್ಳಾರಿ ಬಿಡಬಾರದಾಗಿತ್ತು. ಒಂದು ಅಡ್ರೆಸ್, ಫೋನ್ ಯಾವ್ದಾದ್ರೂ
ಕೊಟ್ಟು ಹೋಗಿದ್ರೆ ಏನಾಗಿತ್ತು ಸಿಟ್ಟಿನಿಂದ ಕೇಳಿದ ರಘು.
`ನಾನು ಪತ್ರ ಬರೆದಿದ್ದೆ ನಂದು, ಆದ್ರೆ ಅದು ಪುನಃ
ನನಗೇ ವಾಪಸ್ ಬಂತು. ಆಮೇಲೆ ನಮ್ಮ ತಂದೆ ಹೇಳಿದ್ರೂ ನೀವೆಲ್ಲಾ
ಪುಣೆಗೆ ಹೋಗಿದ್ದೀರಿ ಅಂತ ಚಿನ್ನಿ ಹೇಳಿದಳು.
`ಜೊತೆಗೆ ಇಬ್ರೂ ಮಾತು ಬೇರೆ ಬಿಟ್ಟಿದ್ದೆವಲ್ಲ
ಅಂದ ರಘು ಮತ್ತೆ ಕಣ್ತುಂಬಿ ಬಂದವು.
`ಎಷ್ಟೋಂದು ಚೆನ್ನಾಗಿ ನೆನಪಿಟ್ಟಿದ್ದೀಯಾ ನಂದು,
ಏನೇನೋ ಆಸೆಗಳನ್ನ ಇಟ್ಟುಕೊಂಡಿದ್ವಿ, ಜೀವನ ಇಷ್ಟೋಂದು
ಕ್ರೂರವಾಗುತ್ತೆ ಅನ್ನೋ ಕಲ್ಪನೆ ಕೂಡ ಇರಲಿಲ್ಲ ಚಿನ್ನಿ ಅಂದಳು.
`ನೀನು ಹೇಳಿದ್ದು ನಿಜ ಚಿನ್ನಿ, ನಮಗೆಷ್ಟು
ದಕ್ಕಬೇಕೋ ಅಷ್ಟೇ ದೊರಕುವುದು ಅಂದ.
`ಅದ್ಸರಿ ಈಗ ನೀನೆಲ್ಲಿದ್ದೀಯಾ? ಈಗ ಎಲ್ಲಿಗೆ ಹೋಗ್ತಿದ್ದೀಯಾ?
ಕೇಳಿದಳು.
`ನಾನು ಇಲ್ಲೇ ಕೆಲಸ ಮಾಡ್ತಾ ಇದ್ದೀನಿ, ಪುಣೆಯಲ್ಲಿ
ಅಮ್ಮ ಇದ್ದಾರೆ. ಇಬ್ಬರು ಅಕ್ಕಂದಿರ ಮದುವೆ ಆಯ್ತು, ಈಗ ನಾನು
ಆಗ್ಬೇಕು ಅಷ್ಟೇ. ಅಂತ ಹೇಳುತ್ತಾ ಸ್ವಲ್ಪ ವಿಚಾರ ಮಾಡಿದ ಇವಳು
ದಾದರ್‌ನಲ್ಲಿ ಇಳೀತಾಳೆ, ನಾನೂ ಅಲ್ಲಿಯೇ ಇಳಿಯಬೇಕು. ಇಳಿದರೆ
ಈಗವಳ ಜೊತೆಗೆ ಹೋಗಬೇಕಾಗುತ್ತದೆ ಅಂದುಕೊಳ್ಳುತ್ತಾ
`ನೀನು ದಾದರ್‌ನಲ್ಲಿ ಇಳಿಬೇಕಲ್ವಾ? ನನಗೆ ಸ್ವಲ್ಪ
ಕೆಲಸ ಇದೆ. ನಾನು ಪರೇಲ್‌ನಲ್ಲಿ ಇಳಿತೀನಿ ಅಂದ. ಮುಂದಿನ ಸ್ಟೇಷನ್‌ನಲ್ಲಿ
ಇಳಿದು ದಾದರ್‌ಗೆ ಮತ್ತೆ ಬಂದರಾಯಿತು ಅಂದುಕೊಂಡ. ಮತ್ತೆ
ಅವಳತ್ತ ತಿರುಗಿ
`ನಿಮ್ಮ ಯಜಮಾನ್ರು ಏನ್ಮಾಡ್ತಿದ್ದಾರೆ? ಅಂತ
ಕೇಳಿದ.
`ಅವ್ರು ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದಾರೆ
ಚುಟುಕಾಗಿ ಉತ್ತರಿಸಿದಳು. ಅವಳ ಪ್ರತಿಕ್ರಿಯೆ ನೀರಸವಾಗಿದ್ದನ್ನು
ಕಂಡು ರಘು,
`ಯಾಕೆ ಗಂಡನ ಜೊತೆ ಏನಾದ್ರೂ ಜಗಳ ಆಡಿದ್ದೀಯಾ?
ಮೊದಲೇ ನಿನಗೆ ಸಿಟ್ಟು ಜಾಸ್ತಿ, ಎಲ್ರೂ ನೀನ್ ಹೇಳಿದ ಹಾಗೆ ಕೇಳಬೇಕು.
ಹಟ ಮಾಡೋದನ್ನ ಸ್ವಲ್ಪನಾದ್ರೂ ಕಡಿಮೆ ಮಾಡಿದ್ದೀಯೋ ಇಲ್ವೋ?
ಅಂತಂದ. ಅವನಂದ ಮಾತಿಗೆ ಅವಳಿಗೆ ದುಃಖ ತಡೆಯಲಾಗಲಿಲ್ಲ.
`ಎಲ್ರೂ ನನ್ನನ್ನೇ ಬಯ್ತಾರೆ. ಮನೆಯಲ್ಲಿ
ಅಪ್ಪ, ಅಮ್ಮ ಕೂಡ ತಪ್ಪು ನಂದೇ ಅಂತ ವಾದಿಸ್ತಾರೆ. ಆದ್ರೆ ನಾನು ನಿರ್ಧಾರ
ಮಾಡಿದ್ದೀನಿ. ಇನ್ನು ಮೇಲೆ ಆ ಪ್ರಾಣಿಯ ಜೊತೆ ಸಂಸಾರ ಮಾಡುವುದಿಲ್ಲ.
ನಾನು ಡೈವೋರ್ಸಿಗೆ ಆಗ್ಲೆ ಅರ್ಜಿ ಕೂಡ ಕೊಟ್ಟೀದ್ದೀನಿ. ಅನ್ನುತ್ತಾ ಅಳಲು
ಪ್ರಾರಂಭಿಸಿದಳು. ರಘುಗೆ ಏನು ಮಾಡಬೇಕೆಂದು ತಿಳಿಯಲಿಲ್ಲ.
ಆದ್ರೂ ಅವಳನ್ನು ಸಂತೈಸುವ ರೀತಿಯಲ್ಲಿ
`ಸಾರಿ ಚಿನ್ನಿ, ನಾನು ಆ ಮಾತು ಆಡಬಾರದಿತ್ತು.
ಎಲ್ಲಾ ಸರಿಹೋಗುತ್ತೆ. ಸಮಾಧಾನ ಮಾಡ್ಕೋ ಅಂತಂದ.
ಇಬ್ಬರ ಕೈಗಳು ಒಂದನ್ನೋಂದು ಬಲವಾಗಿ ಹಿಡಿದಿದ್ದವು.
ಇಬ್ಬರಿಗೂ ಮನದಲ್ಲಿ ಏನೋ ತಳಮಳ, ಅರಿಯದ ಆನಂದಭಾವ.
ದಾದರ್ ಸ್ಟೇಷನ್ ಹತ್ತಿರ ಬಂತು. ಅವನನ್ನು ನೇರವಾಗಿ ನೋಡುತ್ತಾ
ಚಿನ್ನಿ
`ಮತ್ತೆ ಯಾವಾಗ ಸಿಗ್ತೀಯಾ ನಂದು?
ಅಂತ ಕೇಳಿದಳು.
`ನೀನು ಯಾವಾಗ ಹೇಳ್ತೀಯೋ ಆವಾಗ ಅಂದ
ರಘು.
`ಇವತ್ತು ಸಾಯಂಕಾಲ ಫ್ರೀ ಇರ್‍ತೀಯಾ? ಎಲ್ಲಿಯಾದ್ರೂ
ಡಿನ್ನರ್‌ಗೆ ಹೋಗೋಣ. ನಿನ್ನ ಜೊತೆ ಮಾತಾಡೋದು ತುಂಬಾ ಇದೆ
ಅಂದ್ಲು. ರಘು ಆಯ್ತು ಅಂದ.
`ಇಲ್ಲೇ ಪ್ರಭಾದೇವಿ ಹತ್ತಿರ ಗಣೇಶನ ಗುಡಿ
ಇದೆ. ನೋಡಿದೆಯಲ್ಲಾ ಅಲ್ಲಿ ಸರಿಯಾಗಿ ಆರು ಗಂಟೆಗೆ ಸೇರೋಣ ಎನ್ನುತ್ತಾ
ಗಡಿಯಾರ ನೋಡಿಕೊಂಡಳು.
ದಾದರ್‌ನಲ್ಲಿ ಇಳಿದು ಕೈ ಬೀಸುತ್ತಾ ಹೊರಟಳು.
ರಘುಗೆ ಒಂದು ರೀತಿ ಶೂನ್ಯ ಆವರಿಸಿತು ಮನದಲ್ಲಿ. ಆದ್ರೆ ಇಷ್ಟು ಮಾತ್ರ
ನಿಜ ಅವಳ ಭೇಟಿಯಿಂದ ಉತ್ಸಾಹ ಇಮ್ಮಡಿಯಾಗಿತ್ತು.
ಪರೇಲ್ ಸ್ಟೇಷನ್‌ನಲ್ಲಿ ಇಳಿದು ಬೇಗ ಒಂದು
ಟ್ಯಾಕ್ಸಿ ಹಿಡಿದು ದಾದರ್‌ನ ಶಿವಾಜಿ ಪಾರ್ಕ್ ಕಡೆ ಹೊರಟ. ಈಗ ಮತ್ತೆ ಹೊಸದೊಂದು
ಉದ್ವೇಗ ಪ್ರಾರಂಭವಾಯಿತು. ನನ್ನವಳನ್ನು ನೋಡಲು ಹೋಗ್ತಾ
ಇದ್ದೇನೆ ಅಂದುಕೊಂಡ. ಕಲ್ಪನೆ ಗರಿಗೆದರಲು ಪ್ರಾರಂಭವಾಯಿತು. ಹೇಗಿರಬಹುದು
ಅವಳು ನೋಡಲು? ಧ್ವನಿಯೇನೋ ಚೆನ್ನಾಗಿದೆ, ಆದ್ರೆ ಹೇಗಿದ್ದಾಳೋ
ಏನೋ? ಚಿಂತೆ ಕಾಡಲು ಶುರುವಾಯಿತು. ಪಾರ್ಕಿನಿಂದ ಸ್ವಲ್ಪ ದೂರದಲ್ಲೇ
ಟ್ಯಾಕ್ಸಿ ನಿಲ್ಲಿಸಿದ. ನಿಧಾನವಾಗಿ ನಡೆಯುತ್ತಾ ಹೊರಟ. ಜೇಬಿನಲ್ಲಿದ್ದ ಬಾಚಣಿಗೆಯಿಂದ
ಕೂದಲನ್ನೊಮ್ಮೆ ಬಾಚಿ ಅವಳನ್ನೆದುರಿಸಲು ಸಿದ್ಧನಾದ. ನಿಧಾನವಾಗಿ ಪಾರ್ಕಿನ
ಒಳಗೆ ಹೆಜ್ಜೆ ಹಾಕುತ್ತಿದ್ದ. ಎಲ್ಲಾ ಕಡೆ ಕಣ್ಣು ಹಾಯಿಸಿದ.
ಗಡಿಯಾರದಲ್ಲಿ ಸಮಯ ನೋಡಿಕೊಂಡ ಆಗ್ಲೇ ಹನ್ನೊಂದುವರೆಯಾಗಿತ್ತು,
ಒಂದು ದೊಡ್ಡಗಿಡದ ಹತ್ತಿರ ತಿರುಗುವಾಗ ಎದುರಿನ ಹೆಣ್ಣನ್ನು ನೋಡಿ
ಬೆಚ್ಚಿಬಿದ್ದ. ಟ್ರೇನ್‌ನಲ್ಲಿನ `ಚಿನ್ನಿ ! ಅವನಿಗೆ ಬೆನ್ನು ಮಾಡಿಕೊಂಡು
ನಿಂತಿದ್ದಳು, ಇವನಿಗೆ ಆಶ್ಚರ್ಯವಾಯಿತು. ಶ್ರೀ ಏನಾದರೂ ಬಂದ್ರೆ ನನ್ನ
ಗತಿ ಏನೂಂತ ಗಾಬರಿಯಾದ. ಹಾಗೆಯೇ ಗಿಡಕ್ಕೆ ಮರೆಯಾಗಿ ನಿಂತು
ಅವಳನ್ನೇ ನೋಡತೊಡಗಿದ.
ಚಿನ್ನಿ ಅತ್ತಿಂದಿತ್ತ ತಿರುಗಾಡುತ್ತಿದ್ದಳು. ಕೈಯಲ್ಲಿ
ಮೊಬೈಲ್ ಬೇರೆ ಇತ್ತು. ಯಾವುದಕ್ಕೋ ಚಡಪಡಿಸುವಂತಿತ್ತು ಪ್ರತಿಸಲ
ಇತ್ತ ತಿರುಗುವಾಗ ಗೇಟಿನ ಕಡೆಗೆ ದೃಷ್ಟಿ ಹಾಯಿಸುತ್ತಿದ್ದಳು.
ಒಂದರ್ಧಗಂಟೆ ಹೀಗೆಯೇ ನಡೆಯಿತು. ರಘುಗೆ ಏನೂ ಮಾಡಲಿಕ್ಕೂ
ತೋಚಲಿಲ್ಲ. ಅವನೂ ಗೇಟ್‌ನ ಕಡೆಗೆ ಆಗೊಮ್ಮೆ ಈಗೊಮ್ಮೆ ನೋಡುತ್ತಾ
ಮರದ ಹಿಂದೆ ಅವಿತುಕೊಂಡಿದ್ದ.
ಈ ಬಾರಿ ತಿರುಗಿ ಗೇಟಿನ ಕಡೆಗೆ ನೋಡಿದಾಗ ಒಬ್ಬ
ಗಂಡಸು ಗೇಟಿನಿಂದ ಚಿನ್ನಿಯ ಕಡೆಗೆ ನಡೆದು ಬರುತ್ತಿದ್ದ. ಶಾಂತವಾಗಿದ್ದ
ಚಿನ್ನಿಯ ಮುಖ ಉಗ್ರವಾಯಿತು. ಅವನನ್ನು ನೋಡುತ್ತಲೇ
ಕಣ್ಣುಗಳು ಕಿಡಿಕಾರಲು ಪ್ರಾರಂಭಿಸಿದವು. ಹತ್ತಿರ ಬಂದ ಅವನ್ನು ನೋಡಿ
ಚಿನ್ನಿ ಜೋರಾಗಿ
`ಇಲ್ಲಿಗೆ ಬರಲಿಕ್ಕೆ ಯಾರು ಹೇಳಿದ್ರು ನಿಂಗೆ?
ಕೇಳಿದಳು.
`ನೀನು ಎಲ್ಲಿಗೆ ಹೋಗ್ತೀಯಂತ ನನಗೆ
ಗೊತ್ತಾಗೊದಿಲ್ವಾ, ಬಾ ಇಲ್ಲಿ ನಿನ್ನ ಹತ್ತಿರ ಮಾತನಾಡಬೇಕು ಅಂತ ಅನ್ನುತ್ತಾ
ಅವಳ ಕೈ ಹಿಡಿದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋದ. ಅವಳು
ಕೊಸರಿಕೊಳ್ಳಲು ಪ್ರಯತ್ನಿಸಿದರೂ ಹಾಗೆಯೇ ಗಟ್ಟಿಯಾಗಿ ಹಿಡಿದು
ಕರೆದುಕೊಂಡು ಹೋದ. ಅಲ್ಲಿಂದ ಅವರ ಮಾತುಗಳು ಕೇಳಿಸುತ್ತಿದ್ದಿಲ್ಲ
ರಘುವಿಗೆ. ಮರದ ಸಂಧಿಯಿಂದ ಅವರಿಬ್ಬರನ್ನೇ ನೋಡುತ್ತಿದ್ದ. ಸುಮಾರು
ಅರ್ಧಗಂಟೆ ಜಗಳವಾಡಿದರು. ಚಿನ್ನಿ ಅಳಲು ಪ್ರಾರಂಭಿಸಿದ ಹಾಗೆ
ಕಾಣಿಸಿತು. ಅವನು ಅವಳನ್ನು ಈಗ ಸಂತೈಸುತ್ತಿದ್ದ. ಸ್ವಲ್ಪ ಹೊತ್ತಿನ
ನಂತರ ಸ್ವಲ್ಪ ಗೆಲುವಾದಳು ಚಿನ್ನಿ. ಇಬ್ಬರೂ ಮತ್ತೆ ದೀರ್ಘವಾಗಿ
ಸೀರಿಯಸ್ ಆಗಿ ಮಾತನಾಡಿದರು. ರಘು ನೋಡುತ್ತಿದ್ದಂತೆಯೇ
ಇಬ್ಬರೂ ಒಂದು ನಿರ್ಧಾರಕ್ಕೆ ಬಂದಂತೆ ತೋರಿತು. ಅತ್ತಇತ್ತ ನೋಡಿ ಚಿನ್ನಿ
ಗಲ್ಲಕ್ಕೊಂದು ಮುತ್ತುಕೊಟ್ಟನವನು. ಚಿನ್ನಿ ನಾಚಿಕೆಯಿಂದ ಕೆಂಪಾದಳು.
ಸ್ವಲ್ಪ ಗೆಲುವಾದಂತೆ ಕಾಣಿಸಿತು. ಇಬ್ಬರೂ ಕೈ ಹಿಡಿದುಕೊಂಡು ನಿಧಾನವಾಗಿ
ಹೊರಗೆ ಹೆಜ್ಜೆ ಹಾಕಿದರು. ಅವನು ತಂದಿದ್ದ ಕಾರ್‌ನಲ್ಲಿ ಚಿನ್ನಿ ಅವನೊಂದಿಗೆ
ಹೋದಳು.
ಧೀರ್ಘವಾದ ನಿಟ್ಟುಸಿರು ಬಿಡುತ್ತಾ ರಘು ಮರದ
ಮರೆಯಿಂದ ಹೊರಕ್ಕೆ ಬಂದ. ಭಾರವಾದ ಹೆಜ್ಜೆ ಇಡುತ್ತಾ ಪಾರ್ಕಿನಿಂದ ಹೊರಗಡೆ
ಬಂದ. ಗಡಿಯಾರ ನೋಡಿದ ಒಂದೂವರೆಯಾಗಿತ್ತು. ಇನ್ನೂ ಅವಳನ್ನು
ಭೇಟಿ ಮಾಡುವ ಮನಸ್ಸು ಇರಲಿಲ್ಲ. ಆದ್ರೂ ಒಂದು ಬಾರಿ ಪ್ರಯತ್ನಿಸೋಣವೆಂದುಕೊಂಡು
ಅವಳ ಮೊಬೈಲ್‌ಗೆ ಫೋನ್ ಮಾಡಿದ. ಸ್ವಿಚ್ ಆಫ್ ಆಗಿತ್ತು. ಮನದಲ್ಲೇ
ಅಂದುಕೊಂಡ ನನ್ನ ಅದೃಷ್ಟ ಸರಿಯಿಲ್ಲ ಅಂತ. ಎಲ್ಲಿಗೆ ಹೋಗಬೇಕು
ಅನ್ನುವುದೂ ತಿಳಿಯದಾಯಿತು ಅವನಿಗೆ. ಮತ್ತೆ ಪುನಃ ಪಾರ್ಕಿನಲ್ಲಿ ಹೋಗಿ
ಕುಳಿತ. ಎಲ್ಲ ಘಟನೆಗಳನ್ನು ಪುನಃ ಕಣ್ಣಮುಂದೆ ತಂದುಕೊಂಡ,
ರೈಲಿನಲ್ಲಿ ಚಿನ್ನಿಯ ಭೇಟಿಯ ಸಂದರ್ಭವನ್ನು ನೆನಪು ಮಾಡಿಕೊಂಡು
ನಕ್ಕ. ಅವಳ ನೆನಪಿನಿಂದ ಮತ್ತೆ ಜಗತ್ತು ವಿಷವಾದಂತೆ
ತೋರತೊಡಗಿತು. ಮತ್ತೊಮ್ಮೆ ಅವಳೊಂದಿಗೆ ಮಾತನಾಡಬೇಕು
ಅಂತ ಅನ್ನಿಸತೊಡಗಿತ್ತು. ಹೇಗಿದ್ರೂ ಆರುವರೆಗೆ ಗಣೇಶನ ಗುಡಿಯ
ಹತ್ತಿರ ಹೋದ್ರೆ ಸಿಗ್ತಾಳೆ. ಮಾತನಾಡಿ ಅವಳ ಅಡ್ರೆಸ್ ತಗೊಂಡ್ರೂ ಸಾಕು,
ಚೆನ್ನಾಗಿರುತ್ತೆ. ಆಗಾಗ ಮಾತನಾಡಿ ಮನಸ್ಸು ಹಗುರ
ಮಾಡಿಕೊಳ್ಳಬಹುದು ಅಂದುಕೊಂಡ.
***
ಸರಿಯಾಗಿ ಆರೂವರೆಗೆ ದೇವಸ್ಥಾನದ ಹತ್ತಿರ
ಬಂದ ರಘು. ಒಳಗಡೆ ಹೋಗಿ ನಮಸ್ಕಾರ ಮಾಡಿ ಹೊರಬರುವಷ್ಟರಲ್ಲಿ
ಅಲ್ಲೇ ಮೂಲೆಯಲ್ಲಿ ನಿಂತಿದ್ದಳು ಚಿನ್ನಿ. ಆ ಗಂಡಸೂ ಅವಳೊಂದಿಗಿದ್ದ, ನಗುತ್ತಾ
ಹತ್ತಿರ ಹೋದ ರಘು. ರಘುಗೆ ಆ ಗಂಡಸನ್ನು ಪರಿಚಯಿಸುತ್ತಾ,
`ನಂದು, ಇವ್ರು ನಮ್ಮೆಜಮಾನ್ರು, ನಿನ್ನ ಬಗ್ಗೆ
ಎಲ್ಲಾ ಹೇಳಿದ್ದೀನಿ ಅಂತಂದಳು.
`ನಿಮ್ಮ ಬಗ್ಗೆ ಬಹಳ ಹೇಳ್ತಿರ್‍ತಾಳೆ. ಆದ್ರೆ ಇದೇ
ಫಸ್ಟ್ ಟೈಂ ನಿಮ್ಮನ್ನ ನೋಡ್ತಿರೋದು ಅಂದ ಅವನು.
`ಎಲ್ಲರ ದೇವರ ಇಚ್ಛೆ, ನನಗೂ ಕೂಡ
ಇವತ್ತು ಇವಳನ್ನು ಭೇಟಿಯಾಗುತ್ತೇನಂತ ಅನ್ನಿಸಿರಲಿಲ್ಲ ಅಂದ
ರಘು.
`ನನಗೆಷ್ಟು ಖುಷಿಯಾಗಿದೆ ಅಂತ ವ್ಯಕ್ತಪಡಿಸೋದಕ್ಕೆ
ಆಗ್ತಾ ಇಲ್ಲ ನನಗೆ, `ನಂದು ಇವತ್ತು ನೀನು ಸಿಕ್ಕಿರೋದು ಇವರೊಂದಿಗೆ
ಪುನಃ ಜೊತೆಯಾದದ್ದೂ ನಿಜಕ್ಕೂ ಇದು ಸಾಧ್ಯಾನಾ? ಅಂತ ಅನಿಸ್ತಾ ಇದೆ
ಅಂದ್ಳು.
`ಬನ್ನಿ ಇಲ್ಲೇ ಹೋಟೆಲ್‌ನಲ್ಲಿ ಟೀ ಕುಡಿಯುತ್ತಾ
ಮಾತಾಡೋಣ ಅನ್ನುತ್ತಾ ಅವಳ ಗಂಡ ಪಕ್ಕದ ಹೋಟೆಲ್‌ಗೆ
ಕರೆದುಕೊಂಡು ಹೋದ. ಹೋಟೆಲ್‌ನಲ್ಲಿ ಕುಳಿತು ಎದುರಿಗಿದ್ದ
ಅವರಿಬ್ಬರ ಜೋಡಿಯನ್ನು ನೋಡುತ್ತಾ ವಿಚಾರ ಮಾಡುತ್ತಿದ್ದ.
ಜಗಳವಾಡಿದ ಗಂಡ-ಹೆಂಡತಿ ಎಷ್ಟು ಬೇಗ ಮತ್ತೆ ಒಂದಾದರು ಅಂತ.
ಚಿನ್ನಿ ರಘುವನ್ನು ಮಾತಿಗೆಳೆಯುತ್ತಾ ತನ್ನ ಗಂಡನ ಕಡೆ
ತೋರಿಸುತ್ತಾ
`ನಂದು, ಇವತ್ತೊಂದು ಅನಾಹುತವಾಗ್ತಿತ್ತು,
ಇವರ ಜೊತೆ ಜಗಳ ಆಡಿ-ಆಡಿ ಸಾಕಾಗಿತ್ತು. ಅದಕ್ಕೆ ಬೇರೆಯವರನ್ನ ಮದುವೆಯಾಗೋಣ
ಅಂದ್ಕೊಂಡಿದ್ದೆ. ಇವರ ಪುಣ್ಯ ಚೆನ್ನಾಗಿದೆ. ಸರಿಯಾದ ಸಮಯಕ್ಕೆ
ಅಲ್ಲಿಗೆ ಬಂದ್ರು. ಇಲ್ಲಾಂದ್ರೆ ಇಷ್ಟೋತ್ತಿಗಾಗಲೇ ಎಲ್ಲೋ ಓಡಿ ಹೋಗಿರುತ್ತಿದ್ದೆ
ಅನ್ನುತ್ತಾ ಗಂಡನಿಗೆ ತಮಾಷೆ ಮಾಡಿದಳು. ರಘುಗೆ ಶಾಕ್ ಹೊಡೆದಂತಾಯಿತು.
`ಏನಾಯ್ತು? ಏನಾಯ್ತು? ಅಂತ ಮತ್ತೊಮ್ಮೆ ಕೇಳಿದ. `ಪೇಪರ್‌ನಲ್ಲಿ
ಜಾಹಿರಾತು ಬಂದಿತ್ತು, ಯಾರೋ ರಘು ಅಂತೆ. ನಾನು ಕೂಡ ನನ್ನ ಹೆಸರನ್ನು
`ಮೇಘಶ್ರೀ ಬದಲಿಗೆ ಕೇವಲ `ಶ್ರೀ ಅಂತ ಹೇಳಿದ್ದೆ. ಯಾಕೋ ಏನೋ
ಅವನು ಬರಲೇ ಇಲ್ಲ. ಫೋನಿನಲ್ಲಿ ಮಾತ್ರ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದ.
ಇವರ ಅದೃಷ್ಟ, ನನ್ನ ಹುಡುಕಿಕೊಂಡು ಅಲ್ಲಿಗೆ ಬಂದ್ರು ಅದಕ್ಕೆ
ಸಿಕ್ಕಿಬಿದ್ದೆ. ಇಲ್ಲಾಂದ್ರೆ ಅವನ ಜೊತೆ ದೂರ ಹೋಗಿಬಿಡ್ತಿದ್ದೆ ಅಂದಳು.
ರಘುಗೆ ನೆಲವೆಲ್ಲಾ ಬಿರಿದಂತಾಯುತು. ಕೈಕಾಲುಗಳಲ್ಲಿ ಶಕ್ತಿಯೇ
ಇಲ್ಲದಂತಾಯಿತು. ಪರಿಸ್ಥಿತಿಯ ಅರಿವಾಗಿ ಮನಸ್ಸು ಖಾಲಿಯಾದಂತಾಗಿತ್ತು.
ಮತ್ತೇ ಅವಳೇ, `ಪಾಪ ಅವನಿಗೆ ಫೋನ್ ಮಾಡಿ ಹೇಳಬೇಕು
ಎಂದು ಮೊಬೈಲ್‌ನಲ್ಲಿ ಡಯಲ್ ಮಾಡತೊಡಗಿದಳು. ನಿಧಾನವಾಗಿ
ರಘು ಮೊಬೈಲ್ ಆಫ್ ಮಾಡಿದ. ಒಮ್ಮೆ ದೀರ್ಘವಾಗಿ
ಉಸಿರೆಳೆದುಕೊಂಡು.
`ಚಿನ್ನಿ ಬರ್‍ತೀನಿ ನಾನು ಅಂದ.
`ಇನ್ನು ಸ್ವಲ್ಪ ಹೊತ್ತು ಇರೋ ಅಂದಳು ಚಿನ್ನಿ.
ಸ್ವಲ್ಪ ಹೊತ್ತು ಯೋಚಿಸಿ ಗಡಿಯಾರ ನೋಡುತ್ತಾ
`ಇಲ್ಲ ಈಗಾಗ್ಲೇ ಒಂದು ಟ್ರೈನ್ ಮಿಸ್ ಆಗಿದೆ. ಮುಂದಿನದಕ್ಕಾದರೂ
ಹೋಗಲೇಬೇಕು ಚಿನ್ನಿಯತ್ತ ನೋಡುತ್ತ ಮಾರ್ಮಿಕವಾಗಿ ಅಂದ.
ಇಬ್ಬರಿಗೂ ಕೈಕುಲುಕಿ ಎದ್ದು ಹೊರಡಲನುವಾದ.
`ನಿನ್ನ ಮೊಬೈಲ್ ನಂಬರ್ ಆದ್ರೂ ಕೊಡೋ
ಅಂದಳು ಚಿನ್ನಿ.
`ಇಲ್ಲ ಇದು ಯಾಕೋ ಸರಿಯಾಗಿ
ಕೆಲಸಮಾಡ್ತಿಲ್ಲ. ನಾಳೆ ಬೇರೆ ನಂಬರ್ ತಗೋತೀನಿ. ಅದನ್ನ ನಿನಗೆ
ಕೊಡ್ತೀನಿ ಅನ್ನುತ್ತಾ ಒಂದು ಕ್ಷಣ ಯೋಚಿಸಿ `ನಿನ್ನ ನಂಬರ್ ನನ್ನ ಹತ್ರ
ಇದೆ. ನಾನೇ ಮಾಡ್ತೀನಿ ಅನ್ನುತ್ತಾ ಕಿರುನಗೆಯೊಂದಿಗೆ ಸರಸರನೆ ಹೊರಟ.
ಚಿನ್ನಿ `ಪಾಪ ಒಂಟಿ ಜೀವನ ಅವನದು ಅನ್ನುತ್ತಾ ಮರುಗಿದಳು...
ಪೂರಕ ಓದಿಗೆ :
ಸಂಪನ್ನರ ಭರದ್ವಾಜ ಕಾದಂಬರಿಗೆ
ಬಹುಮಾನ
ಅಕ್ಕಆನ್‌ಲೈನ್.ಕಾಂ