ವಿಶ್ವಕನ್ನಡ ಮೇಳದಲ್ಲಿ ಆಧ್ಯಾತ್ಮಿಕ ಉಪನ್ಯಾಸಗಳು
ಅಕ್ಕ ಸಮ್ಮೇಳನವೆಂದರೆ ಅಲ್ಲಿ ರಂಗುರಂಗಿನ ಕಾರ್ಯಕ್ರಮಗಳಿಂದ ಕಣ್ಣುಗಳಿಗೆ ಹಬ್ಬ,
ರಾಗಬದ್ಧ ಸಂಗೀತದಿಂದ ಕಿವಿಗಳಿಗೆ ಹಬ್ಬ, ರುಚಿರುಚಿಯಾದ ಊಟದಿಂದ ಹೊಟ್ಟೆಗೂ ಹಬ್ಬ...
ಇಷ್ಟು ಮಾತ್ರ ಎಂದುಕೊಂಡಿರಾ?
ಈ
ಬಾರಿಯ ಸಮ್ಮೇಳನದಲ್ಲಿ ಇವೆಲ್ಲದರ ಜತೆಗೆ ಮನಸ್ಸಿಗೆ ಹೊಸ ಹೊಳಪು ಕೊಡುವ,
ಚಿಂತನೆಯನ್ನು ಒರೆಗೆ ಹಚ್ಚಿ ಹರಿತವಾಗಿಸುವ ಆಧ್ಯಾತ್ಮಿಕ ಉಪನ್ಯಾಸಗಳು ಮತ್ತು ವಿಚಾರ
ಸಂಕಿರಣಗಳನ್ನೂ ಹಮ್ಮಿಕೊಳ್ಳಲಾಗಿದೆ. ಕನ್ನಡ ನಾಡಿನ ಪ್ರಖ್ಯಾತ ಧಾರ್ಮಿಕ ಮುಖಂಡರು,
ವಾಗ್ಮಿಗಳು, ವಿದ್ವಾಂಸರು ಸರಳಗನ್ನಡದಲ್ಲಿ ಆಧ್ಯಾತ್ಮತತ್ತ್ವಗಳ ಉಪನ್ಯಾಸ
ಕೊಡುತ್ತಿದ್ದಾರೆ - ಅಮೆರಿಕದ ನೆಲದಲ್ಲಿ ಇಂಥ ಅವಕಾಶಗಳು ನಿಜಕ್ಕೂ ಅಪರೂಪವೇ. ಈ ನಿಟ್ಟಿನಲ್ಲೂ
ಇದೊಂದು ಅಭೂತಪೂರ್ವ ಸಮ್ಮೇಳನವಾಗಲಿದೆ!
ಸಮ್ಮೇಳನದ ಎರಡು ದಿನಗಳಲ್ಲೂ (ಸಪ್ಟೆಂಬರ್ ೨ ಮತ್ತು ೩) ಸಮಾನಾಂತರ ಅಧಿವೇಶನಗಳಲ್ಲಿ
ಈ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನದ ಕಾರ್‍ಯಕ್ರಮದ
ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು
ವಹಿಸುತ್ತಾರೆ. ಅಂದಿನ ಕಾರ್ಯಕ್ರಮದಲ್ಲಿ ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಪಕ್ಷಿನೋಟ
ಪರಿಚಯ ಪ್ರೊ| ಶ್ರೀಧರ್ ಅವರಿಂದ, ಕರ್ನಾಟಕಕ್ಕೆ ದಾಸಸಾಹಿತ್ಯದ ಕೊಡುಗೆ ಎಂಬ ವಿಷಯದ
ಬಗ್ಗೆ ಪ್ರೊ| ಲಕ್ಷ್ಮೀದೇವಿಯವರ ಭಾಷಣ ಮತ್ತು `ಅಧ್ಯಾತ್ಮ' ಕುರಿತು ಶ್ರೀ ಸಿದ್ದೇಶ್ವರ
ಸ್ವಾಮಿಗಳ ಉಪನ್ಯಾಸವಿದೆ. ಅದೇ ಕಾರ್ಯಕ್ರಮದಲ್ಲಿ ದೈವಜ್ಞ ಕೆ.ಎನ್.ಸೋಮಯಾಜಿಯವರು
`ವಾಸ್ತು' ಬಗ್ಗೆ ಮತ್ತು ಜಯಕೃಷ್ಣ ಅವರು `ಜ್ಞಾನ'ದ ಬಗ್ಗೆಯೂ ಮಾತಾಡಲಿದ್ದಾರೆ.
ಎರಡನೆ ದಿನದ ಅಧಿವೇಶನಕ್ಕೆ ಖ್ಯಾತ ಸಾಹಿತಿ ಎಸ್.ಎಲ್.ಬೈರಪ್ಪ ಅಧ್ಯಕ್ಷತೆ ವಹಿಸುತ್ತಾರೆ.
ಅಂದು ಪ್ರೊ| ಜಿ. ಅಶ್ವತ್ಥನಾರಾಯಣ ಅವರಿಂದ `ಕರ್ನಾಟಕಕ್ಕೆ ಜೈನಧರ್ಮದ ಕೊಡುಗೆ'
ಎಂಬ ವಿಷಯದಲ್ಲಿ ಹಾಗೂ ರೋಹಿತ್ ಶೆಟ್ಟಿ ಅವರಿಂದ `ಕರ್ನಾಟಕದಲ್ಲಿ ಬೌದ್ಧ ಧರ್ಮ'
ಕುರಿತ ಭಾಷಣಗಳಿವೆ. ಡಾ. ಶಿವಾನಂದ ಶಿವಾಚಾರ್ಯರಿಂದ `ಶೂನ್ಯ ಸಂಸ್ಕೃತಿ'ಯ ಬಗ್ಗೆ
ಉಪನ್ಯಾಸ, `ಸಮಯದ ಕರೆ - ಆಧ್ಯಾತ್ಮಿಕ ಜ್ಞಾನ' ಎಂಬ ವಿಷಯದ ಬಗ್ಗೆ ಬಿ.ಕೆ.ಮೃತ್ಯುಂಜಯ
ಅವರಿಂದ ಭಾಷಣ ಹಾಗೂ ಕರ್ನಾಟಕದ ಸಂತರ ಬಗ್ಗೆ ಆಧ್ಯಾತ್ಮಿಕ ಸಮಿತಿಯ ಪ್ರಸ್ತುತಿ -
ಇವು ಸಹ ಎರಡನೆ ದಿನದ ಕಾರ್ಯಕ್ರಮದ ಮುಖ್ಯಾಂಶಗಳಾಗಿರುತ್ತವೆ.
ಸಮ್ಮೇಳನದಲ್ಲಿ ಭಾಗವಹಿಸುವವರೆಲ್ಲ
ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವುಗಳ ಪ್ರಯೋಜನವನ್ನು ಪಡೆಯಬೇಕೆಂದು
ಆಧ್ಯಾತ್ಮಿಕ ಕಾರ್ಯಕ್ರಮ ಸಮಿತಿ ಕೋರಿದೆ.