Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಮಹಾತಾಯಿ

ವೀಣಾ ಗೌಡ

ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ, vshivaraj@hotmail.com

 

(ನಾನು ಏನಾದರೂ ಹೇಳಬೇಕು ಅನ್ನುವಷ್ಟರಲ್ಲಿ ಆ ಪುಟ್ಟ ಸೆಲ್ವಿ ಓಡಿ ಬಂದು ತನ್ನ ಅಮ್ಮನ ಕೊರಳಿಗೆ ತೆಕ್ಕೆ ಬಿದ್ದು, ಒಂದು ಮುತ್ತು ಕೊಟ್ಟು, ಹೂನಗೆ ಮಿಂಚಿಸಿ ಮಾಯವಾಯ್ತು. ಆಗ ಆ ತಾಯಿಯ ಮುಖದಲ್ಲಿ ತುಳುಕಿದ ಸಂತೋಷ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ.)

 

ಸುಮಾರು ನಾಲ್ಕು ವರ್ಷಗಳ ಹಿಂದೆ ನನ್ನ ಮಕ್ಕಳಿಬ್ಬರ ಜೊತೆ ಬೇಸಿಗೆ ರಜೆ ಕಳೆಯಲು ಬೆಂಗಳೂರಿಗೆ ಹೋಗಿದ್ದೆ. ಬೆಂಗಳೂರಿನ ಅಜ್ಜಿ ಮನೆಯಲ್ಲಿ ಟಿ.ವಿ. ನೋಡಿ ನೋಡಿ ಬೇಸತ್ತ ಮಕ್ಕಳು `ಇಂಡಿಯಾ ಈಸ್ ಬೋರಿಂಗ್ ಎಂಬ ಮಾಮೂಲಿ ರಾಗ ಶುರು ಮಾಡಿದರು. ನನಗೂ ಒಂದು ಚೇಂಜ್ ಬೇಕೆನಿಸಿ, ನಮ್ಮ ಹಳ್ಳಿ, ಕೊಪ್ಪಲಿಗೆ ಹೋಗುವುದೆಂದು ತೀರ್ಮಾನಿಸಿದೆವು.

 

ಇಲ್ಲಿ ನಮ್ಮೂರು ಕೊಪ್ಪಲಿನ ಬಗ್ಗೆ ಹೇಳಲೇಬೇಕು. ಮೈಸೂರಿನ ಹತ್ತಿರದ ಪಾಂಡವಪುರದಿಂದ ಸ್ವಲ್ಪವೇ ದೂರದಲ್ಲಿ, ಇನ್ನೂ ಪಟ್ಟಣದ ಗಾಳಿ ಬಹಳಷ್ಟು ಬೀಸದೇ ಇರುವ ಒಂದು ಪುಟ್ಟ ಹಳ್ಳಿ ಈ ಕೊಪ್ಪಲು. ಊರಾಚೆ ತೋಟದ ಮಧ್ಯೆ ಇರುವ ನಮ್ಮ ವಿಶಾಲವಾದ ಮನೆಯ ಉಪ್ಪರಿಗೆಯ ಮೇಲೆ ನಿಂತರೆ ಕಣ್ಣಿಗೆ ಹಬ್ಬ. ಸುತ್ತಲೂ ಮೈಚಾಚಿ ನಿಂತಿರುವ ಹಚ್ಚನೆಯ ಹಸಿರಿನ ಭತ್ತದ ಗದ್ದೆ, ನಳನಳಿಸುವ ಕಬ್ಬು, ತೂಗಾಡುವ ತೆಂಗು, ಅಡಿಕೆ, ಭೂದೇವಿಯೇ ಹಸಿರು ಸೀರೆ ಹೊದ್ದಂತೆ... ದೂರದಲ್ಲಿ ಕಾಣುವ ಕುಂತಿ ಬೆಟ್ಟ, ಅದರ ತಪ್ಪಲಿನಲ್ಲಿ ಮಲಗಿರುವ ಪುಟ್ಟ ಪುಟ್ಟ ಹಳ್ಳಿಗಳು, ಜಳಜಳನೆ ಹರಿಯುವ ನಾಲೆಯ ನೀರಿನ ಶಬ್ದ, ದೂರದಲ್ಲೆಲ್ಲೋ ಕೇಳಿಸುವ ಆಲೆಮನೆಯ ಕಿರ್ರ್ ಕಿರ್ರ್ ಸದ್ದು, ಗಾಳಿಯಲ್ಲಿ ತೇಲಿಬರುವ ಹಿತವಾದ ಎಳೆಬೆಲ್ಲದ ವಾಸನೆ. ವಾಹ್! ನೀವು ಕೊಪ್ಪಲಿನ ಸೊಬಗನ್ನು ಅನುಭವಿಸಿಯೇ ಸವಿಯಬೇಕು.

 

ನಾನು, ಮಕ್ಕಳು, ಅಂತೂ ಇಂತೂ ಕೊಪ್ಪಲಿಗೆ ಬಂದಿಳಿದಾಗ, ಪ್ರಯಾಣದ ಆಯಾಸವನ್ನೂ ಮರೆತ ಮಕ್ಕಳು, `ದಿಸ್ ಈಸ್ ಕೂಲ್, ಲೆಟ್ಸ್ ಸ್ಟೇ ಹಿಯರ್! ಎಂದು  ಚಿಗರೆ ಮರಿಗಳಂತೆ ಕುಣಿದು ಕುಪ್ಪಳಿಸಿದರು. ಈ ಸುಂದರವಾದ ಪರಿಸರದಲ್ಲಿ ಮಕ್ಕಳಿಗೆ ಆಡಲು ಕೋಳಿಮರಿ, ಕುರಿಮರಿ, ಹಸು, ಕರು, ಎತ್ತಿನಗಾಡಿ! ಸದ್ಯ, ಮಕ್ಕಳು ಹಳೇ ರಾಗ ಹಾಡದೆ ಖುಷಿಯಾಗಿದ್ದಾರಲ್ಲಾ ಅಂತ ನನಗೂ ಸಮಾಧಾನ. ಸದಾ ಕಾಲ ಹೊರಗಡೆ ಆಡುತಿದ್ದ ಮಕ್ಕಳ ಮೇಲೆ ಒಂದು ಕಣ್ಣಿಡಲು, ಅಲ್ಲೇ ಪಡಸಾಲೆಯ ಮೇಲೆ ಕುಳಿತಿರುತ್ತಿದ್ದ ನನಗೆ ಸುಧಾ, ಮಯೂರ ಹಾಗೂ ಅಡಿಕೆಲೆ ಕೇಳಿಕೊಂಡು ಮೆಲ್ಲಲು ಬರುತ್ತಿದ್ದ ಹಳ್ಳಿಯ ಮುದುಕಿಯರೇ ಸಂಗಾತಿಗಳು. ಜೊತೆಗೆ ನನ್ನ ಚಿಕ್ಕತ್ತೆ, ಮಾವನವರ ಆತಿಥ್ಯ, ಊಟೋಪಚಾರಗಳಲ್ಲಿ ಹೊತ್ತು ಹೋಗುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ.

 

ಆಗ ಕಬ್ಬಿನ ಕೊಯ್ಲಿನ ಕಾಲ. ಸುಮಾರು ಆರಡಿ ಎತ್ತರದ ಒತ್ತಾಗಿ ಬೆಳೆದು ನಿಂತಿರುವ ಕಬ್ಬಿನ ಕೊಯ್ಲು ಬಹಳ ಕಷ್ಟದ ಕೆಲಸವೇ ಸರಿ. ಗದ್ದೆ ಒಳಗೆ ನುಗ್ಗಿ, ಹುಳಹುಪ್ಪಟೆಗಳ ಕೈಲಿ ಕಡಿಸಿಕೊಳ್ಳದೇ, ಹರಿತವಾದ ಎಲೆಗಳಿಂದ ಮೈಕೈ ತುರಿಸಿಕೊಳ್ಳದೇ, ಆ ಧಗೆಯಲ್ಲಿ ಕಬ್ಬನ್ನು ಹುಷಾರಾಗಿ ಕುಯ್ದು ಪೇರಿಸುವುದೆಂದರೆ ಒಂದು ಸಾಹಸವೇ ಸರಿ!

 

ಈ ಕೆಲಸ ಮಾಡಲು ಕೊಪ್ಪಲಿಗೆ ಬಂದಿಳಿಯಿತೊಂದು ಕೆಲಸಗಾರರ ತಂಡ. ವಿಚಾರಿಸಲಾಗಿ ಇವರು ತಮಿಳುನಾಡಿನಿಂದ ವಲಸೆ ಬಂದು, ವ್ಯವಹರಿಸುವಷ್ಟು ಕನ್ನಡ ಕಲಿತು, ಕೊಯ್ಲಿನ ಕೆಲಸಕ್ಕಾಗಿ ಊರೂರು ತಿರುಗುವ ಅಲೆಮಾರಿಗಳೆಂದು ತಿಳಿಯಿತು. ಸುಮಾರು ಇಪ್ಪತ್ತು ಮಂದಿಯಿಂದ ಕೂಡಿದ ಈ ತಂಡ ಕೊಪ್ಪಲಿಗೆ ಬಂದಿಳಿದಾಗ ಮಧ್ಯಾಹ್ನದ ಸಮಯ. ಗಂಡಸರು, ಹೆಂಗಸರು, ಮಕ್ಕಳು ಮರಿಗಳು, ಜೊತೆಗೆ ನಾಲ್ಕೈದು ದೊಡ್ಡ ದೊಡ್ಡ ಗಂಟು ಮೂಟೆ ಬೇರೆ. ಬಂದೊಡನೆಯೇ ಕಾಲಹರಣ ಮಾಡದೆ ಹಿತ್ತಲಿನ ಬಳಿಯ ನೆಲವನ್ನು ಸಮಗೊಳಿಸಿ, ತೆಂಗಿನ ತೋಟದಲ್ಲಿ ಬಿದ್ದಿದ್ದ ರೆಕ್ಕೆಗಳನ್ನು ಆಯ್ದು ತಂದು, ಚಾಪೆ ಹೆಣೆದು, ಕಲ್ಲು ಮಣ್ಣು ಸೇರಿಸಿ, ನಾನು ನೋಡುನೋಡುತಿದ್ದಂತೆಯೇ ಕಟ್ಟೇಬಿಟ್ಟರು ನಾಲ್ಕು ಗುಡಿಸಲುಗಳನ್ನು ಆ ಗುಂಪಿನ ಗಂಡಸರು. ಹೆಂಗಸರು ನೆಲವನ್ನು ಸಗಣಿಯಲ್ಲಿ ಸಾರಿಸಿ ಶುದ್ಧ ಮಾಡಿದರು. ಗುಡಿಸಿಲಿನ ಹೊರಗೆ ನಾಲ್ಕು ಮಣ್ಣಿನ ಒಲೆಗಳನ್ನು ಕಟ್ಟಿಕೊಂಡರು. ಹೀಗೆ ತಯಾರಾಯ್ತು ಇವರ ಕ್ಯಾಂಪಿಂಗ್ ಸೈಟು!

 

ಏನೂ ಕೆಲಸ ಇಲ್ಲದೆ  ರಿಲ್ಯಾಕ್ಸ್ ಮಾಡುತ್ತಿದ್ದ ನನಗೆ ಈ ತಂಡವನ್ನು ಗಮನಿಸುವುದೇ ಒಂದು ಸೋಜಿಗ. ನಸುಕಿನಲ್ಲೇ ಎದ್ದು ಗಂಜಿ ಕಾಯಿಸಿ, ಎಲ್ಲರೂ ಕುಡಿದು, ದೊಡ್ಡವರೆಲ್ಲಾ ಕೆಲಸಕ್ಕೆ ಹೊರಟರೆಂದರೆ ಬರುವುದು ಮಧ್ಯಾಹ್ನದ ಊಟದ ಹೊತ್ತಿಗೇ. ಈ ಸಮಯದಲ್ಲಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ತಂಡದ ಅಫೀಶಿಯಲ್ ಬೇಬಿ ಸಿಟ್ಟರ್ಸ್ ಆದ ಆರರಿಂದ ಎಂಟು ವರುಷದ ಆ ಚಿಣ್ಣರ ಅಣ್ಣ ಅಕ್ಕಂದಿರದು. ಈ ಚಿಕ್ಕ ವಯಸ್ಸಿನಲ್ಲೇ ಇವರಿಗೆ ಎಷ್ಟೊಂದು ಜವಾಬ್ದಾರಿ ಎನ್ನಿಸಿತು. ಆ ಮಕ್ಕಳಲ್ಲಿ ನನ್ನ ಮನಸೆಳೆದದ್ದು ದುಂಡುದುಂಡುಗಿನ, ಚುರುಕಾಗಿ ಓಡಿಯಾಡಿಕೊಂಡಿದ್ದ ಸುಮಾರು ಎರಡು ವರುಷದ ಒಂದು ಹೆಣ್ಣು ಮಗು. ಹೆಸರು ಕೇಳಿದ್ದಕ್ಕೆ ಚೆವ್ವಿ ಎಂದು ಮುದ್ದಾಗಿ ಉಲಿಯಿತು. ಅಲ್ಲೇ ಇದ್ದ ಅವಳಣ್ಣ ಸೆಲ್ವಿ ಎಂದು ಸರಿಮಾಡಿದ. ಅತ್ಯಂತ ಚುರುಕಾಗಿದ್ದ ಸೆಲ್ವಿಯನ್ನು, ಆರು ವರುಷದ ಅವಳಣ್ಣ ಹಾಗೂ ಎಂಟು ವರುಷದ ಅವಳಕ್ಕ ಎಷ್ಟು ಹುಷಾರಾಗಿ ನೋಡಿಕೊಂಡರೂ ಸಾಲದು. ಬಹಳ ತುಂಟಾಟ ಮಾಡುತ್ತಿತ್ತು. ಆಟ ಆಡಿ ಸಾಕಾಗಿ ಸೆಲ್ವಿ ಅತ್ತರೆ, ಅವಳಕ್ಕ ನೀರು, ಬಿಸ್ಕತ್ತು ಕೊಟ್ಟು ಸಮಾಧಾನ ಮಾಡುತ್ತಿದ್ದಳು. ಪುಟ್ಟ ಸೆಲ್ವಿಯ ಮಧ್ಯಾಹ್ನದ ನ್ಯಾಪ್ ನಡೆಯುತ್ತಿದ್ದುದು ಅಲ್ಲೇ ನಿಲ್ಲಿಸಿದ್ದ ಎತ್ತಿನಗಾಡಿಯಲ್ಲಿ. ಕಾವಲಿಗೆ ಪಕ್ಕದಲ್ಲಿ ಅವಳಣ್ಣ! ಮಧ್ಯಾಹ್ನದ ಊಟಕ್ಕೆ ಬರುವ ಅಪ್ಪ ಅಮ್ಮಂದಿರು ಹಿಂದಿನ ದಿನ ಉಳಿದುದನ್ನೇ ತಿಂದು, ಮಕ್ಕಳನ್ನು ವಿಚಾರಿಸಿಕೊಂಡು ಹೊರಟರೆಂದರೆ ಇನ್ನು ಬರುವುದು ಸಂಜೆ ಐದು ಘಂಟೆಗೇ. ಬಂದ ಕೂಡಲೇ ದೊಡ್ಡ ಪಾತ್ರೆಗಳಲ್ಲಿ ನೀರು ಕಾಯಿಸಿ, ಮಕ್ಕಳಿಗೆಲ್ಲಾ ಮೀಯಿಸಿ, ತಾವೂ ಮಿಂದು, ಅಡಿಗೆ ಶುರು ಮಾಡುತ್ತಿದ್ದರು ಆ ಗುಂಪಿನ ಹೆಂಗಸರು. ಆಮೇಲೆ ಎಲ್ಲರೂ ಕುಳಿತು ಊಟ ಮಾಡಿ, ನಂತರ ನಮ್ಮ ಮನೆಯ ಮಂದ ಬೆಳಕಿನ ಪಡಸಾಲೆಯಲ್ಲಿ ಎಲ್ಲಾ ಸೇರಿ, ಕಷ್ಟ ಸುಖ ಮಾತಾಡಿಕೊಳ್ಳುತ್ತಾ ದಣಿವಾರಿಸಿಕೊಳ್ಳುತ್ತಿದ್ದರು ಈ ಕಷ್ಟಜೀವಿಗಳು. ಅಮೇರಿಕಾದಲ್ಲಿನ ಆರಾಮವಾದ ಜೀವನಕ್ಕೆ ಹೊಂದಿಕೊಂಡಿದ್ದ ನನ್ನ ಮಕ್ಕಳಿಗೆ ಇವರನ್ನು ನೋಡಿ ಆಶ್ಚರ್ಯ, ಜೊತೆಗೆ ಪ್ರಶ್ನೆಗಳ ಸರಮಾಲೆ. `ವ್ಹೈ ಡೋಂಟ್ ದೀಸ್ ಕಿಡ್ಸ್ ಗೊ ಟು ಸ್ಕೂಲ್? ಇಸ್ ಇಟ್ ನಾಟ್ ಇಲ್ಲೀಗಲ್ ಟು ಲೀವ್ ದ ಕಿಡ್ಸ್ ಅಲೋನ್?..... ಅಲ್ಲಾ ಶಾಲೆಗೇ ಹೋಗದೆ ಜೀವನದ ನಿಜವಾದ ಅನುಭವಗಳಿಂದ ಪಾಠ ಕಲೀತಿಲ್ವಾ ಈ ಮಕ್ಕಳು ಅಂತ ನನಗನ್ನಿಸದೇ ಇರಲಿಲ್ಲ.

 

ಅದೇ ಪಡಸಾಲೆಯಿಂದ ನನ್ನ ಕಣ್ಣು ಮತ್ತೆ ಅಲ್ಲೇ ಓಡಿಯಾಡಿಕೊಂಡಿದ್ದ ಪುಟ್ಟ ಸೆಲ್ವಿಯ ಕಡೆ ಹರಿಯಿತು. ಅವರಮ್ಮನ  ತೊಡೆಯೇರಿ  ಕುಳಿತ ಸೆಲ್ವಿಗೆ ಆ ಹೆಂಗಸು ತಲೆಗೆ ಎಣ್ಣೆ ಹಚ್ಚಿ, ನೀಟಾಗಿ ತಲೆ ಬಾಚಿ, ಬಣ್ಣದ ಟೇಪು  ಬಿಗಿದು  ಜುಟ್ಟು ಕಟ್ಟಿದಳು.   ಎಷ್ಟಪ್ಪಾ ಪೇಷೆನ್ಸ್  ಈಕೆಗೆ ಅನ್ನಿಸಿತು. ಆ ಹೆಂಗಸಿನ ಇನ್ನೆರಡು  ಮಕ್ಕಳು ಹಾಗೂ ಗಂಡ ಆಚೀಚೆ ಕುಳಿತಿದ್ದರು. ಆ ಇಡೀ ಗುಂಪಿನ ಕಣ್ಮಣಿ ಈ ಪುಟ್ಟ ಸೆಲ್ವಿ, ಅವಳ ತೊದಲು ನುಡಿಗಳಿಂದ ಎಲ್ಲರನ್ನೂ ರಂಜಿಸುತಿದ್ದಳು.  ಏನನ್ನಿಸಿತೋ ತಡೆಯಲಾರದೇ ನಾನು ಸೆಲ್ವಿಯ ಅಮ್ಮನನ್ನು ಕೇಳಿಯೇಬಿಟ್ಟೆ, `ಅಲ್ಲಮ್ಮಾ ಇಷ್ಟೊಂದು ಕಷ್ಟ  ಪಟ್ಟು ದುಡೀತಿದ್ದೀಯಲ್ಲಾ, ನಿನಗೆ ಮೂರು ಮಕ್ಕಳು ಯಾಕೆ  ಬೇಕಿತ್ತು? ಅಂತ. `ದೇವ್ರು ದೊಡ್ಡೋನು,  ಎಂಗೋ ನಡೀತೈತೆ ಎಂದು ಹೇಳಿ ಸುಮ್ಮನಾದ ಆಕೆಯನ್ನು  ಕಂಡು, ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಹೆಂಗಸು, `ಇಲ್ಲ ಕಣ್ರವ್ವಾ, ಇವ್ಳಿಗೆ ಎರಡೇ ಮಕ್ಕಳು ಉಟ್ಟಿದ್ದು. ಓದ್ವರ್ಸ ಮೈಗೆ ಉಸಾರಿಲ್ಲ ಅಂತ ಆಸ್ಪತ್ರೆಗೆ ಓಗಿದ್ಲು, ಅಲ್ಲಿ ಯಾರೋ ಬಿಟ್ಟೋದ ಒಂದು ಎಣ್ಮಗು ಅಳ್ತಾ ಇತ್ತು. ಪೋಲೀಸ್ ಕರ್ಸಿ ಅನಾಥಾಶ್ರಮಕ್ಕೆ ಕಳಿಸ್ತೀನಿ ಅಂತ ಏಳ್ತಿದ್ದ ಡಾಕಟ್ರನ್ನ ಒಪ್ಸಿ ಅಯ್ಯೋ ಪಾಪ ಅಂತ ಕರ್ಕೊಂಡ್ಬಂದು ಸಾಕ್ತಾ ಅವ್ಳೇ, ನಾವೆಲ್ಲಾ ಬೈದ್ರೂ ಕೇಳ್ದೇನೇ ಅಂತಂದಳು.

 

ನಾನು ಏನಾದರೂ ಹೇಳಬೇಕು ಅನ್ನುವಷ್ಟರಲ್ಲಿ ಆ ಪುಟ್ಟ ಸೆಲ್ವಿ ಓಡಿ ಬಂದು ತನ್ನ ಅಮ್ಮನ ಕೊರಳಿಗೆ ತೆಕ್ಕೆ ಬಿದ್ದು, ಒಂದು ಮುತ್ತು ಕೊಟ್ಟು, ಹೂನಗೆ ಮಿಂಚಿಸಿ ಮಾಯವಾಯ್ತು. ಆಗ ಆ ತಾಯಿಯ ಮುಖದಲ್ಲಿ ತುಳುಕಿದ ಸಂತೋಷ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ.

 

`ಅಲ್ಲಾ, ಕಿತ್ತು ತಿನ್ನುವ ಬಡತನದ ನಡುವೆಯೂ ಒಂದು ಅನಾಥ ಮಗುವಿಗೆ ತಾಯಾಗಿ, ತನ್ನ ಪ್ರೀತಿ ವಾತ್ಸಲ್ಯಗಳನ್ನು ನೀಡಿ ಆ ಮಗುವನ್ನು ಸಾಕುವ ಜವಾಬ್ದಾರಿ ಹೊತ್ತಿರುವಳಲ್ಲಾ ಈ ತಾಯಿ, ಹ್ಯಾಟ್ಸ್ ಆಫ್ ಟು ಹರ್ ಎಂದು ಮನದಲ್ಲೇ ಆಕೆಗೆ ವಂದಿಸಿದೆ. ಆ ರಾತ್ರಿ ಕಣ್ಣಿಗೆ ನಿದ್ದೆ ಹತ್ತದೇ ಎದ್ದು ಕುಳಿತಿದ್ದ ನನಗೆ ಆ ಸೆಲ್ವಿ ಹಾಗೂ ಅವಳಮ್ಮನ ಚಿತ್ರವೇ ಕಣ್ಮುಂದೆ. ಜೊತೆಗೆ ಮನಸ್ಸಿನ ತುಂಬಾ ಬಗೆಹರಿಯದ ದ್ವಂದ್ವಗಳು. ಅನುಕೂಲಸ್ಥರಾಗಿರೋ ನಮಗೇ ಇಲ್ಲದ ಆ ಧೈರ್ಯ, ವಿಶಾಲ ಮನೋಭಾವ ಈ ಬಡ ಹೆಂಗಸಿಗೆ ಯಾವ ಸಂಸ್ಕೃತಿಯಿಂದ ಬಂತು, ಹೇಗೆ ಬಂತು? ಅವಳ ಹಾಗೆ ಈ ಮಹಾಕಾರ್ಯವನ್ನು ನಾನೂ ಯಾಕೆ ಮಾಡಬಾರದು? ಹೇಳೋದಕ್ಕೇನೋ ಸುಲಭ, ಆದ್ರೆ ನಿಜವಾಗಿ ಮಾಡಿ ತೋರ್ಸೋದಕ್ಕೆ ದಂ ಇಲ್ವಲ್ಲಾ. ಛೇ ಛೇ. ಹೀಗೆ ಹತ್ತು ಹಲವಾರು ಯೊಚನೆಗಳು ಕಾಡಿದವು. ಬೆಳಿಗ್ಗೆ ಎದ್ದು ಆ ತಾಯಿಯ ಕೈಗೆ ನನ್ನ ಕೈಲಾದಷ್ಟು ನೋಟು ತುರುಕಿ ಇದು ಸೆಲ್ವಿಗೆ ಎಂದು ಹೇಳಿದಾಗಲೇ ಮನಸ್ಸಿಗೆ ಒಂದು ಬಗೆಯ ಸಮಾಧಾನ.

 

ಈ ಘಟನೆ ನಡೆದ ಎರಡು ವರ್ಷಗಳ ನಂತರ, ಸ್ಯಾನ್ ಹೋಸೆಯಲ್ಲಿ ಮಾಮೂಲಿನಂತೆ ಯಾಂತ್ರಿಕ ಜೀವನ ನಡೆಸುತ್ತಾ ಇದ್ದ ನನಗೆ, ಆಪ್ತ ಗೆಳತಿಯೊಬ್ಬಳಿಂದ ಬಂದ ಈ ಮೇಲ್ ಹಳೆಯ ನೆನಪುಗಳನ್ನು ಕೆದಕಿತು. ಆ ಈ ಮೇಲ್‌ನ ಒಕ್ಕಣೆ, ನಮ್ಮ  ಆಪ್ತರಲ್ಲಿ ಹಂಚಿಕೊಳ್ಳಬೇಕಾದ ಒಂದು ಸಂತೋಷದ ವಿಷಯವೇನೆಂದರೆ, ಹೋದವಾರ ತಾನೇ ನಾವು ಒಂದು ಮಗುವನ್ನು ದತ್ತು ತೆಗೆದುಕೊಂಡೆವು. ನಮ್ಮ ಹಿರಿಯ ಮಗಳಿಗೆ ಜೊತೆಯಾಗಿ ಆಡಲು ಪುಟ್ಟ ತಂಗಿ ಹಾಗೂ ನಮ್ಮ ಮನೆ ಬೆಳಗಲು ಇನ್ನೊಬ್ಬಳು ಮಗಳು ಸಿಕ್ಕಳೆಂದು ನಮಗೆಲ್ಲಾ ತುಂಬಾ ಸಂತೋಷವಾಗಿದೆ. ಪೇಪರ್‌ವರ್ಕ್ ಮುಗಿದ ಕೂಡಲೇ ಎಲ್ಲರೂ ಹೊರಟುಬರುವೆವು. ಜೊತೆಗೆ ಒಂದು ಮುದ್ದಾದ ಹೆಣ್ಣು ಮಗುವಿನ ಚಿತ್ರ. ನನಗೆ ಕೂಡಲೇ ಸೆಲ್ವಿಯ ನೆನಪಾಯ್ತು. ಜೊತೆಗೆ ಅವಳಮ್ಮ ಸಹ. ಈ ನನ್ನ ಗೆಳತಿಯ ಬಗ್ಗೆ ಹೆಮ್ಮೆಯೆನಿಸಿ ಆನಂದದಿಂದ ಕಣ್ಣೀರು ತುಳುಕಿತು. ಇಂತಹ ಸಹೃದಯೀ ಮಹಾತಾಯಂದಿರು ಇರುವ ತನಕ ಈ ಪ್ರಪಂಚದಲ್ಲಿ ಯಾವ ಮಕ್ಕಳೂ ಅನಾಥರಲ್ಲ. ಅಲ್ಲವೇ?

 

(ಈ ಲೇಖನ ಉತ್ತರ ಕ್ಯಾಲಿಫೋರ್ನಿ೦ii ಕನ್ನಡ ಕೂಟದ ವಾರ್ಷಿಕ ಸಂಚಿಕೆ ಸ್ವರ್ಣಸೇತು-೨೦೦೫ ರಲ್ಲಿ ಪ್ರಕಟಿತವಾದದ್ದು.)

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com