Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

 ಬೇಸರದ ಸಂಜೆಯಿದು

ಪ್ರಶಾಂತ್ ಬೀಚಿ,

ತಾನ್ಜಾನಿಯಾ

prashanth_bc@yahoo.com

 

 

ಕೆಲವು ಸಾರಿ ಹಾಗೆ.

ಇದ್ದಕ್ಕಿದ್ದಂತೆ ಬೇಸರ ಎನ್ನುವುದು ಬಂದು ಅವಚಿಕೊಂಡು ಬಿಡುತ್ತದೆ. ನಮ್ಮನ್ನು ಚಡ್ಡಿ ದೋಸ್ತಿನ ಹಾಗೆ ಆವರಿಸಿಕೊಳ್ಳುತ್ತದೆ.  ಹೋಗು ಎನ್ನಲು ಮನಸ್ಸಿರುವುದಿಲ್ಲ, ಇಟ್ಟುಕೊಳ್ಳಲು ಅದೇ ಬೇಸರ. ಏಕೆ ಹೀಗೆ ಎಂದು ಯಾರಿಗೂ ಗೊತ್ತಿಲ್ಲ. ಯಾವಾಗ ಬರುತ್ತದೊ ಗೊತ್ತೇ ಆಗುವುದಿಲ್ಲ. ಅದಕ್ಕೆ ಕಾರಣವೂ ಇರುವುದಿಲ್ಲ. ಸುಮ್ಮನೆ ಬೇಸರಅಷ್ಟೆ. ಏನೂ ಮಾಡಲು ಮನಸ್ಸಿಲ್ಲ. ಎಲ್ಲಿಗೆ ಹೋಗಲೂ ಆಸೆ ಇಲ್ಲ. ಸಿಗರೇಟು ಬೇಡ, ಪುಸ್ತಕ ಬೇಡ, ಗೆಳಯರು ಬೇಡ, ಗೆಳತಿಯ ನೆನೆಪೂ ಬೇಡ, ಪಾನಿ ಪುರಿ - ವಾಕಿಂಗ್ ಬೇಡ, ಸಿನಿಮಾ ಬೇಡ, ಮನೆಯಾಗಲೀ, ಕೆಲಸವಾಗಲೀ ಬೇಡ, ಬರೀ ಬೇಡಗಳೇ. ಯಾವುದೂ ಬೇಡ ಅನ್ನಿಸುತ್ತಾ ಜೀವನವೆ ಬೇಡವಾಗುತ್ತದೆ. ಪ್ರಾಣ ತೆಗೆದುಕೊಳ್ಳುವಂತ ಬೇಸರವಲ್ಲದಿದ್ದರೂ, ಜೀವನ ಬೇಡವೆಂಬ ಹುಸಿ ಬೇಸರ !

 

ಇದಕ್ಕೆ ಒಂದೇ ಒಂದು ಕಾರಣ ಇರುವುದಿಲ್ಲ.  ಯಾಕೆಂದರೆ ಇದು ಒಂದೇ ಕಾರಣಕ್ಕೆ ಬಂದಿರುವುದಿಲ್ಲ. ಬಹಳ ಹಳೆಯ ಸೋಲು ನೆನಪಿಗೆ ಬಂದಿದ್ದರೆ, ಯಾವತ್ತೋ ಯಾರೋ ಹೀಯಾಳಿಸಿದ ಕಾರಣಕ್ಕೆ ಬಂದಿರುತ್ತದೆ. ಕೆಲಸವಿಲ್ಲದಾಗ ದುಡ್ಡು ಕೊಡಲು ಹಿಂಜರಿದ ಸ್ನೇಹಿತನ ನೆನಪು, ಬಡವ ಎಂದು ತಿಳಿದ ಮೇಲೆ, ನಮ್ಮದು ಬರಿ ಸ್ನೇಹ ಪ್ರೀತಿಯಲ್ಲ ಎಂದ ಗೆಳತಿಯ ಬಿಳುಪು. ಕೆಲಸ ಕೊಡಿಸೇ ಕೊಡಿಸುತ್ತಾರೆ ಎಂದು ಬಂದಾಗ, ನೀನು ಯಾರಪ್ಪ ಎಂದು ಕೇಳಿದ ದೂರದಲ್ಲಿದ್ದ `ಹತ್ತಿರದ ಸಂಬಂಧಿ ಹೇಳಿದ ಮಾತು. ಹೆತ್ತ ತಂದೆ ತಾಯಿ ಕೂಡ ಕತ್ತೆ ವಯಸ್ಸಾದರೂ ದುಡಿಯದೆ ಮನೆಯಲ್ಲೆ ಇದ್ದಾನೆ ಎಂದಿದ್ದ ಚುಚ್ಚು ಮಾತು. ಇವೆಲ್ಲ ಒಟ್ಟಾಗಿ ಬಂದು ಬೇಸರದ ರೂಪದಲ್ಲಿ ಕುಳಿತಿದೆಯೆ? ಗೊತ್ತಿಲ್ಲ. ಕಾರಣವೇ ಇಲ್ಲದೆ ಕರೆಯದೆ ಬಂದ ಅತಿಥಿಯಂತೆ ಲಜ್ಜೆ ಬಿಟ್ಟು ಕೂತಿರುತ್ತದೆ ಮನಸ್ಸಿನಲ್ಲಿ. ಎಲ್ಲರಿಗೂ ಒಂದಲ್ಲಾ ಒಂದು ಸಾರಿ ಹೀಗೆ ಆಗಿರಲೆ ಬೇಕು ಅಲ್ವ ?

 

ಬೇಸರ ತಂದುಕೊಳ್ಳದ ಮನಸು, ಕಣ್ಣೀರು ಸುರಿಸದ ಕಣ್ಣು, ಬಡತನ ಕಾಣದ ಜೀವನ, ಕಷ್ಟ ಕಾಣದ ಬದುಕು, ವಿರಹ ಕಾಣದ ದಾಂಪತ್ಯ ಇವೆಲ್ಲ ಇರುವುದಕ್ಕಿಂತ ಇಲ್ಲದಿರುವುದೆ ಮೇಲು ಅನ್ನಿಸಿದ್ದೂ ಉಂಟು. ಆದರೆ ಬೇಸರ, ಕಣ್ಣೀರು, ಬಡತನ, ಕಷ್ಟ, ವಿರಹ ಬಂದಾಗ ಏಕಾದರೂ ಬಂದಿತೊ ಅನ್ನಿಸುವುದೂ ಸುಳ್ಳಲ್ಲ.

 

ಹೇಳುತ್ತಾರಲ್ಲ, ಸುಖ ಮಿಂಚಿನ ಹಾಗೆ, ಕಷ್ಟ ಮಳೆಯ ಹಾಗೆ ಅಂತ.  ಎಷ್ಟೇ ಸಮಾಧಾನಿಯಾದರೂ, ತಿಳುವಳಿಕೆ ಇದ್ದರೂ ಕಷ್ಟ ಕಾಲದಲ್ಲಿ ವಿಚಲಿತಗೊಳ್ಳುವುದು ಸರ್ವೇ ಸಾಮಾನ್ಯ. ಬರುವ ಬೇಸರವನ್ನು ಸಂತೋಷದಿಂದ ಬರಮಾಡಿಕೊಳ್ಳುವುದಾದರೂ ಹೇಗೆ? ಸಂತೋಷಗೊಂಡ ಮೇಲೆ ಬೇಸರವಾದರು ಏಕೆ ಬರುತ್ತದೆ, ಅನುಭವಿಸಿದ ಬೇಸರವೆಲ್ಲ ಸುಳ್ಳು ಎಂಬಂತೆ ಸಂತಸ ಬಂದು ಕೂತಿರುತ್ತದೆ.  

 

ಇವತ್ತು ನಂಗೂ ಇದ್ದಕ್ಕಿದ್ದಂತೆ ಬೇಸರವಾಯಿತು. ನನಗೆ ಗೊತ್ತಿಲ್ಲ ಏಕೆ ನಾನು ಹೀಗೆ ಬೇಸರವಾಗಿದ್ದೇನೆ ಎಂದು. ಏನು ಮಾಡಲು ಮನಸ್ಸಿಲ್ಲ. ಕುಂತರೆ ಕೂರಲಾಗದು, ನಿಂತರೆ ನಿಲ್ಲಲಾಗದು. ಎಲ್ಲೂ ಹೋಗಲು ಇಚ್ಚೆ ಇಲ್ಲ, ಮಲಗಿದರೆ ನಿದ್ದೆ ಇಲ್ಲ, ಕೂರಲು ತಾಳ್ಮೆ ಇಲ್ಲ. ಏಕೆ ಹೀಗೆ? ತಿಳಿಯುತ್ತಿಲ್ಲ. ಬೇಸರವೆಂಬುದು ದರಿದ್ರ. ನಾನು ಹೀಗೆ ಇರಬಾರದು ಅಂತ ಅಂದುಕೊಂಡರೂ ಏನೂ ಮಾಡಲಾಗುತ್ತಿಲ್ಲ.  ಎಲ್ಲೊ ಯಾವತ್ತೊ ಏನೊ ಕಳೆದುಕೊಂಡ ನೆನಪು. ಪ್ರೀತಿಸಿದವರು ದೂರವಿರುವ ನೆನಪು, ನನಗೆ ನಾನೆ ಮೋಸಮಾಡಿಕೊಂಡ ನೆನಪು, ಯಾರಿಗೊ ತಪ್ಪೆಸಗಿದ ನೆನೆಪು ಎಲ್ಲವೂ ಮರುಕಳಿಸಿ ದುಃಖ ಎನ್ನುವುದು ಎದೆಯಿಂದ ಮುಕ್ಕಳಿಸುತ್ತಿದೆ.

 

ಸದ್ಯ ನನಗೇನು ಕಷ್ಟಗಳಿಲ್ಲ ಹೇಳಿಕೊಳ್ಳುವಂತಹ ಕೆಲಸ, ಸಾಕಾಗುವಷ್ಟು ಸಂಬಳ, ಪ್ರೀತಿಸುವ ಮಡದಿ, ದಾರಿ ತೋರಿಸುವಂತಹ ತಂದೆ ತಾಯಿ, ಎಲ್ಲಾ ಸಮಯಕ್ಕೂ ಸಿಗುವಂತಹ ಸ್ನೇಹಿತರು. ಇಷ್ಟೆಲ್ಲಾ ಇದ್ದರೂ ಈ ಬೇಸರ ಎನ್ನುವುದು ಹೀಗೆ ಇದ್ದಕ್ಕಿದ್ದಂತೆ ನನ್ನ ಮೇಲೆ ಆಕ್ರಮಣ ಏಕೆ ಮಾಡುತ್ತಿದೆ? ಬೇಸರದ ಬಗ್ಗೆ ನನಗೆ ಬೇಸರವಿಲ್ಲ, ಆದರೆ ಒಮ್ಮೆ ಬಂದರೆ ಹೋಗುವ ತನಕ ನನ್ನನ್ನು, ನನ್ನ ಜೀವನವನ್ನು ಕಾಲ ಕಸದಂತೆ ಅದು ಹೊಸಕಿ ಹಾಕಿಬಿಡುತ್ತದೆ.

 

ಬೇಸಿಗೆಯ ಮುಸ್ಸಂಜೆ, ಸರಿಯಾಗಿ ಗಾಳಿಯೂ ಇಲ್ಲ, ಸುಡುವಂತ ಬಿಸಿಲಿಲ್ಲ. ಸೆಖೆಯೂ ಇಲ್ಲ, ಚಳಿಯೂ ಇಲ್ಲ. ಮನಸ್ಸಿನಲ್ಲಿ ಒಂದು ನೇರ ಭರವಸೆಯೂ ಇಲ್ಲ. ಇದ್ದಕ್ಕಿದ್ದಂತೆ ಬಂದ ಈ ಬೇಸರ ಜೀವನವನ್ನೆ ಮುದುಡಿ ಎಸೆದುಬಿಡುತ್ತೇನೊ ಭಯವಾಗತೊಡಗಿತ್ತು. ಸುಮ್ಮನೆ ಇದ್ದ ನನ್ನ  ಮುಂದೆ ಬಂದು ಚಕ್ಕಳಮಕ್ಕಳ ಹಾಕಿ ಕೂತ ಬೇಸರ ಹೋಗೆಂದರೂ ಹೋಗುತ್ತಿಲ್ಲ.

 

ಬೇಸರಿದು...

ತಂಗಾಳಿ ತಂಪನ್ನೂ ಚೆಲ್ಲಾಡಿ...

ಪ್ರೀತಿಯ ಒಂದು ಸಣ್ಣ ಗಾಳಿ ಎಲ್ಲಿಂದಲೊ ಬೀಸಿತು. ಮನಸ್ಸಿಗೆ ಹಾಯಾಗಿ ಕಣ್ಣು ತಾನಾಗಿಯೆ ಮುಚ್ಚಿತು. ಆನಂದದಿಂದ ಮನಸ್ಸು ಅರಳಿತು, ಕಣ್ಣು ತೆಗೆದು ನೋಡಿದಾಗ ಮನದಲ್ಲಿ ಕೂತಿದ್ದ ಬೇಸರ ಮಾಯವಾಗಿತ್ತು, ದೂರದಲ್ಲಿ ಅಸ್ಪಷ್ಟವಾಗಿ ಕಂಡಿದ್ದು ನನ್ನ ಸ್ನೇಹಿತರು !

 

ಬೇಸರಿನ ಸಂಜೆಯಿದು

ಬೇಕೆನಗೆ ನಿನ್ನ ಜೊತೆ...

ಸುಮ್ಮನೆ ಪಕ್ಕದಲ್ಲಿ ನೋಡಿದರೆ ಹೆಂಡತಿ !

 

ಅನತಿ ದೂರದಲ್ಲೆ ಕೂತಿದ್ದ ತಂದೆ ತಾಯಿ. ಕಣ್ಣು ಮುಚ್ಚಿ ಬಿಡುವುದರೊಳಗೆ ಎಲ್ಲರೂ ಒಟ್ಟಿಗೆ ಕೂತಿದ್ದೆವು. ಕಾಫಿಯ ಲೋಟಗಳು ಎದುರಿಗಿದ್ದವು. ಮಾತು ಎನ್ನುವುದು ಮನೆಯ ಆಭರಣವಾಗಿತ್ತು. ಎಲ್ಲರಲ್ಲೂ ಸಂತೋಷ ಎನ್ನುವುದು ಪುಷ್ಕರಣಿಯಿಂದ ಕಾವೇರಿ ಉಕ್ಕಿದಂತೆ ಎದೆಯಾಳದಿಂದ ಚಿಮ್ಮುತ್ತಿತ್ತು.

 

ಬೇಸರವಿಲ್ಲದ ಜೀವನವೆ ಇಲ್ಲ, ಪ್ರೀತಿಸುವವರು ಮಡದಿಯಾಗದಿದ್ದರೇನಂತೆ, ಮಡದಿಯಾದವರನ್ನು ಪ್ರೀತಿಸಬಹುದಲ್ಲವೆ, ದೂರಾಗುವ ಸ್ನೇಹಿತರು ಇದ್ದರೇನಂತೆ, ಹತ್ತಿರವಿದ್ದವರು ಸ್ನೇಹಿತರಾಗಬಹುದಲ್ಲವೆ, ತಂದೆ-ತಾಯಿ ದೂರಿದರೇನಂತೆ, ದೂರುವ ತಂದೆ-ತಾಯಿಯನ್ನು ಮೆಚ್ಚಿಸಿಕೊಳ್ಳಬಹುದಲ್ಲವೆ. ಜೀವನವನ್ನು ಕಸವನ್ನಾಗಿಸುವ ಬೇಸರವನ್ನು ದೂಡಲು ಪ್ರೀತಿಯ ಹೂವನ್ನು ಎತ್ತಬಹುದಲ್ಲವೆ. ಹೂವನ್ನು ಎತ್ತಲಾಗದ ಹುಲು ಮಾನವರು ನಾವಲ್ಲ ಅಲ್ವಾ ?

 

ನೀವೇನಂತೀರಿ ?

 

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com