Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಆ. ೨೭: ಕ್ಯಾಲಿಫ್ ಕನ್ನಡಿಗರ ಅಭಿನಯದ ಚಿತ್ರಪ್ರದರ್ಶನ

  • ಕನ್ನಡದಾಸ

  • ಬಹು ಕಾಲದಿಂದ ನಿರೀಕ್ಷಿಸುತ್ತಿದ್ದ, ಕ್ಯಾಲಿಫೋರ್ನಿಯಾ ಕನ್ನಡ ಕಲಾವಿದರು ಅಭಿನಯಿಸಿರುವ, "ಅಮೇರಿಕಾ-ಅನುಬಂಧ" ಚಲನಚಿತ್ರ, ಆಗಸ್ಟ್ ೨೭, ಭಾನುವಾರ ೨ ಘಂಟೆಗೆ ಮನ್ರೋವಿಯಾದಲ್ಲಿರುವ ಕ್ರಿಕೋರಿಯನ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಅಮೇರಿಕಾದಲ್ಲಿ ಕರ್ನಾಟಕದ ವಿದ್ಯಾರ್ಥಿಯೊಬ್ಬನ ಕಷ್ಟ-ಸುಖಗಳನ್ನು ಹಿನ್ನೆಲೆಯಲ್ಲಿ ಹೆಣೆದಿರುವ ಈ ಕಥೆಯಲ್ಲಿ, ಕನ್ನಡಾಭಿಮಾನದ ಪ್ರದರ್ಶನ ಸವಿಸ್ತಾರವಾಗಿ ಚಿತ್ರದ ಜಾಯಮಾನವಾಗಿ ಮೂಡಿಬಂದಿದೆ. ಅಮೇರಿಕಾದಲ್ಲಿ ಕನ್ನಡಕ್ಕೆ ಕೈಂಕರ್‍ಯವನ್ನು ಸಲ್ಲಿಸುತ್ತಿರುವ ಅಮೇರಿಕನ್ನಡಿಗರಾದ, ಹೆರಾಲ್ಡ್ ಶಿಫ್ಮನ್ ಮತ್ತು ಮಾರ್ಥಾ ಆಷ್ಟನ್‌ರವರ ಪರಿಚಯವನ್ನು, ಹಾಗೂ ಬ್ರಿಟಿಷರ ಕಾಲದಲ್ಲಿ ಕಟ್ಟಾ ಕನ್ನಡಾಭಿಮಾನಿಗಳಾಗಿ ಮೆರೆದ ಆಂಗ್ಲ ಮಹನೀಯರಾದ ಸರ್ ಥಾಮಸ್ ಮನ್ರೋ, ಮೇಡೋಸ್ ಟೇಲರ್, ಮಾರ್ಕ್ ಕಬ್ಬನ್, ಟಿ.ಜಿ.ಕ್ಲಾರ್ಕ್, ಜೇಮ್ಸ್ ಕ್ಯಾಸ್ಮೆಜಾರಿ, ಕಿಟ್ಟೆಲ್, ರೈಸ್, ಮೊದಲಾದವರ ಕನ್ನಡ ಪ್ರೇಮವನ್ನು ಹಾಡಿನ ರೂಪದಲ್ಲಿ ಸಾರಲಾಗಿದೆ.

    ಹಾಗೆಯೇ, ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರು, ಟಿ.ಪಿ.ಕೈಲಾಸಮ್, ಜಿ.ಪಿ.ರಾಜರತ್ನಮ್, ಕುವೆಂಪು, ಅಣ್ಣಾವ್ರು, ಮುಂತಾದವರನ್ನೂ ರಾಜ್ಯೋತ್ಸವದ ಸಂಭ್ರಮದಲ್ಲಿ ಸ್ಮರಿಸಲಾಗಿದೆ. ಇಂದಿನ ಕನ್ನಡದ ಚಿಂತನಕಾರರ ಪಾತ್ರದಲ್ಲಿ ವಲ್ಲೀಶ ಶಾಸ್ತ್ರಿಯವರು ಕನ್ನಡದ ಸ್ಥಿತಿಗತಿಗಳನ್ನು ವಿಶ್ಲೇಷಿಸಿ, "ಕರ್ನಾಟಕದಲ್ಲಿ ಏನಾದರೂ ಆಗು, ಮೊದಲು ಕನ್ನಡಿಗನಾಗು" ಎಂದು ಕನ್ನಡ ಕಹಳೆಯನ್ನು ಮೊಳಗಿದ್ದಾರೆ.

    ಪಕ್ಷಿನೋಟದಲ್ಲಿ ಅಮೇರಿಕಾದಲ್ಲಿ ಕನ್ನಡ ಸಾಹಿತ್ಯವನ್ನು ಬೆಳೆಸುತ್ತಿರುವ ಕವಿಗಳನ್ನೂ ಮತ್ತು ಕನ್ನಡಕ್ಕೆ ಹೋರಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಸಾಧನೆಗಳನ್ನೂ ತೋರಿಸಲಾಗಿದೆ.

    ಈ ಚಿತ್ರದಲ್ಲಿ ಅಭಿನಯಿಸುವುದಕ್ಕೋಸ್ಕರವೇ ಕನ್ನಡವನ್ನು (ಸಂಭಾಷಣೆಗಳನ್ನು) ಕಲಿತು ನಾಯಕ, ಕೃಷ್ಣಾ ರೆಡ್ಡಿಯ ಪಾತ್ರವನ್ನು ಆಂಧ್ರಮೂಲದ ಮಯೂರ್ ರೆಡ್ಡಿ ಅಭಿನಯಿಸಿದ್ದಾರೆ. ಹಾಗೆಯೆ, ನಾಯಕಿ, ದಿವ್ಯಪ್ರಭ ಪಟೇಲ್, ಪಾತ್ರವನ್ನು ಉತ್ತರ ಭಾರತೀಯ ಅಮೇರಿಕನ್, ಕುಮಾರಿ ಮೇನಕಾ ಮದನ್ ಅಭಿನಯಿಸಿದ್ದಾರೆ.

    ಇವರೊಂದಿಗೆ, ಸುಮಾರು ೧೫ ಜನ ಅಮೇರಿಕನ್ನರು, ಮೂವರು ರಷಿಯನ್ನರು, ಇಬ್ಬರು ಬ್ರೆಜಿಲಿಯನ್ನರು, ಈಜಿಪ್ಟಿಯನ್, ಜರ್ಮನ್ ನಟರೂ ಸಹ ಕನ್ನಡದಲ್ಲಿಯೇ ಸಂಭಾಷಣೆಗಳನ್ನು ಒಪ್ಪಿಸಿ ಕನ್ನಡಕ್ಕೆ ಗೌರವವನ್ನು ಸಲ್ಲಿಸಿದ್ದಾರೆ.

    ಸಾಕ್ಷ್ಯಚಿತ್ರದ ಶೈಲಿಯಲ್ಲಿ ಚಿತ್ರಿತವಾಗಿರುವ ಈ ಹವ್ಯಾಸಿ ಕಲಾವಿದರ ಈ ತಯಾರಿಕೆ, ದೃಶ್ಯಗ್ರಹಣದಿಂದ ಪ್ರದರ್ಶನದವರೆಗೂ ಸಂಪೂರ್ಣವಾಗಿ ವಿದ್ಯುನ್ಮಾನ ಮಾಧ್ಯಮದಲ್ಲಿಯೇ ರೂಪಿತಗೊಂಡಿದೆ. ದಕ್ಷಿಣ ಕ್ಯಾಲಿಫೋರ್ನಿಯಾ, ಅರಿಜೋನ, ಯೂಟಾ, ನ್ಯೂ ಮೆಕ್ಸಿಕೋ, ಸಿಯಾಟಲ್, ಲಾಸ್ ವೇಗಸಿನಲ್ಲಿ ಚಿತ್ರಿತಗೊಂಡು, ದೃಶ್ಯವೈಭವದ ಮೆರಗನ್ನು ಪಡೆದಿದೆ. ಈ ಚಿತ್ರವನ್ನು ನೀವು ನೋಡಿ ಆನಂದಿಸುತ್ತೀರೆಂದು ಆಶಿಸುತ್ತೇನೆ.

    ಹೆಚ್ಚಿನ ಮಾಹಿತಿಗೆ : ragureddy@hotmail.com

    Print This PagePrint this page

     

    Email this Page

    ಮುಖಪುಟ

    Copyright Vikranta Prakashana 2006. All rights reserved.
    Site best viewed in 800x600 resolution.

    Email : feedback@vikrantakarnataka.com