|
ಸಾಹಿತ್ಯ ಗೋಷ್ಠಿಯಲ್ಲಿ ಕಾವೇರಿ
ನ್ಯಾಯಮಂಡಳಿಯ ತೀರ್ಪಿನ ಬಗ್ಗೆ ವಿಚಾರ ಸಂಕಿರಣ
ದಿನಾಂಕ ೩.೩.೨೦೦೭ ರ ಶನಿವಾರದಂದು ಮಧ್ಯಾಹ್ನ ೨:೩೦ಕ್ಕೆ ಸೇರಲಾದ
ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯ ಗೋಷ್ಠಿಯು ಒಂದು
ಅತ್ಯುತ್ತಮ ವಿಚಾರಗೋಷ್ಠಿಯಾಗಿ, ಎಲ್ಲ ಕನ್ನಡ ಬಂಧುಗಳಿಗೆ
ಹೃದಯಸ್ಪರ್ಶಿ ಅನುಭವವನ್ನು ನೀಡಿತು. ಶ್ರೀವತ್ಸ ದುಗ್ಲಾಪುರ
ಅವರ ಸುಂದರ ಪ್ರಾರ್ಥನೆಯೊಂದಿಗೆ ಗೋಷ್ಠಿ ಆರಂಭವಾಯಿತು. ನಂತರ
ಉದಯಶಂಕರ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಸಭೆಯ
ಅಧ್ಯಕ್ಷತೆಯನ್ನು ವಿಶ್ವನಾಥ್ ಹುಲಿಕಲ್ ಅವರು ವಹಿಸಿದ್ದರು.
ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಗಣೇಶ್ ಕಡಬರವರು ನಾ
ಡಿಸೋಜಾರವರ ದ್ವೀಪ ಕಾದಂಬರಿಯ ವಿಮರ್ಶೆ ಮಾಡಿದರು. ಪ್ರಾರಂಭದಲ್ಲಿ
ಲೇಖಕರ ಪರಿಚಯವನ್ನೂ, ಕಥೆಯ ಹಿನ್ನೆಲೆಯನ್ನೂ ಸಂಕ್ಷಿಪ್ತವಾಗಿ
ಮಾಡಿಕೊಟ್ಟ ಗಣೇಶ್ ಕಡಬರವರು, ಇಡೀ ಕಾದಂಬರಿಯನ್ನು ಅತ್ಯಂತ
ಸಮರ್ಥವಾಗಿ, ಎಳೆ ಎಳೆಯಾಗಿ, ಕಣ್ಣಿಗೆ ಕಟ್ಟುವಂತೆ ಸಭಿಕರ ಮುಂದಿಡುವುದರಲ್ಲಿ
ಯಶಸ್ವಿಯಾದರು. ಈ ಕಾದಂಬರಿಯ ಪ್ರಮುಖ ಪಾತ್ರಗಳಾದ ಗಣಪಯ್ಯ,
ನಾಗಿ ಮತ್ತು ಕೃಷ್ಣ ಇವರುಗಳನ್ನು
ಕೇಂದ್ರೀಕರಿಸಿ, ಪಾತ್ರ ವಿವೇಚನೆ/ವಿಶ್ಲೇಶಣೆ ಮಾಡುತ್ತ,
ನಾಟಕೀಯವಾಗಿ ಕಥೆಯ ಹಂದರವನ್ನು ನೀಡಿದರು.
ದ್ವೀಪ ಕಾದಂಬರಿಯಲ್ಲಿ ಮೂಡಿಬಂದ ನೈಜತೆ, ಕಥೆಯ ಬೆಳವಣಿಗೆ,
ನಾ. ಡಿಸೋಜಾರವರಿಗಿದ್ದ ಹಿಡಿತಕ್ಕೆ ಕಾರಣ, ಅವರ ಸ್ವಾನುಭವ.
ಕಣ್ಣಿಗೆ ಕಾಣದ ಲೋಕವನ್ನು ಅವರು ಸೃಷ್ಟಿಸಲಿಲ್ಲ. ಶರಾವತಿ
ಅಣೆಕಟ್ಟು ಕಟ್ಟುವಾಗ, ಮುಳುಗಡೆಯ ಸಂಧರ್ಭದಲ್ಲಿ, ಸಾಮಾನ್ಯ
ಕುಟುಂಬಗಳು ಅನುಭವಿಸಿದ ನೋವು, ಸಂಕಟ, ಸರ್ಕಾರ ನೀಡಿದ ಪರಿಹಾರ
ಸೃಷ್ಟಿಸಿದ ಸಮಸ್ಯೆಗಳು, ಹೇಗೆ ಅನಕ್ಷರಸ್ಥ ಸಮಾಜವನ್ನು ಹಿಂಡಿದವು.
ಇವುಗಳ ಬಲೆಯಲ್ಲಿ ಸಿಲುಕಿದ ಸಾಮಾನ್ಯವರ್ಗ ತನ್ನ ವ್ಯಕ್ತಿತ್ವವನ್ನು
ಹೇಗೆ ದಿನೇದಿನೇ ಕಳೆದುಕೊಂಡು, ಕೊನೆಯಲ್ಲಿ ಬಲಿಪಶುವಾಯಿತು ಎನ್ನುವುದನ್ನು
ಕಾದಂಬರಿ ಸಮರ್ಥವಾಗಿ ಚಿತ್ರಿಸುವುದಷ್ಟೇ ಅಲ್ಲದೆ, ಓದುಗರನ್ನು ವಿಚಾರಲೋಕಕ್ಕೆ
ಎಳೆದೊಯ್ಯುತ್ತದೆ. ಮುಳುಗಡೆಯಲ್ಲಿ
ದ್ವೀಪವಾಗಿ ಪರಿವರ್ತನೆಯಾದ ನೆಲೆಯಷ್ಟೆ ಅಲ್ಲ, ವ್ಯಕ್ತಿತ್ವಗಳು
ಕೂಡ ಹೇಗೆ ಪರಿತಪಿಸುತ್ತವೆ ಎಂಬುದನ್ನು ಗಣೇಶ್ ಕಡಬರವರು ಸ್ವಾರಸ್ಯಕರವಾಗಿ
ಶ್ರೋತೃಗಳ ಮುಂದಿರಿಸಿದರು. ಗಣೇಶ್ ಕಡಬರವರು ನೀಡಿದ ಪಾತ್ರವಿಮರ್ಶೆಯ
ಬಗ್ಗೆ ಸ್ಪಂದಿಸಿದ ಸಭಿಕರು ಚರ್ಚೆಯಲ್ಲಿ ಪಾಲ್ಗೊಂಡು, ಸಭೆಗೆ
ಜೀವಂತಿಕೆಯನ್ನು ನೀಡಿದರು. ಶ್ರೋತೃಗಳ ಸಮಸ್ಯೆಗಳಿಗೆ/ಪ್ರಶ್ನೆಗಳಿಗೆ
ಗಣೇಶ್ ಕಡಬರವರು ಉತ್ತರಿಸಿದರು.
ಕಾರ್ಯಕ್ರಮದ ಉತ್ತರಾರ್ಧ ಗಹನವಾದ
ಚರ್ಚೆಯನ್ನೊಳಗೊಂಡಿತ್ತು. ಚರ್ಚೆಯ ವಿಷಯ ಕಾವೇರಿ ಜಲವಿವಾದದ
ಬಗ್ಗೆ ನ್ಯಾಯಮಂಡಳಿ ನೀಡಿದ ತೀರ್ಪು. ಸಭಾಧ್ಯಕ್ಷರಾದ ವಿಶ್ವನಾಥ್‌ರವರು
ಕರ್ನಾಟಕದಲ್ಲಿ ಭುಗಿಲೆದ್ದಿರುವ ಜಲವಿವಾದದ ಸಮಸ್ಯೆಯ ಮತ್ತು
ಇತ್ತೀಚಿನ ಕಾವೇರಿ ನ್ಯಾಯಮಂಡಳಿಯ ತೀರ್ಪಿನ ಬಗ್ಗೆ ಸಭಿಕರಿಗೆ
ವಿವರಣೆಯನ್ನು ನೀಡಿ, ಈ ಸಮಸ್ಯೆಯ ಪರಿಹಾರಕ್ಕೆ ಸಭಿಕರಿಂದ
ಅಭಿಪ್ರಾಯಗಳನ್ನು ಆಹ್ವಾನಿಸಿದರು. ಈ ಆಹ್ವಾನವನ್ನು ಮನ್ನಿಸಿ ಸದಾನಂದ್,
ಜಗದೀಶ್ ವಾಸುದೇವಮೂರ್ತಿ, ಶ್ರೀನಾಥ್ ಈಶ್ವರಹಳ್ಳಿ, ಆನಂದ್
ರಾಮಮೂರ್ತಿ, ಗಣೇಶ್ ಕಡಬ, ಯಶೋದಮ್ಮ, ಮಹಾಬಲಶಾಸ್ತ್ರಿ, ಸುರೇಶ್‌ಬಾಬು,
ರವಿರೆಡ್ಡಿ, ಜಿ.ಎಸ್.ಸತ್ಯ ಮತ್ತುಕುಮಾರಸ್ವಾಮಿ ಇವರುಗಳು
ತಮ್ಮ ವಿಚಾರಗಳನ್ನು ಮಂಡಿಸಿದರು. ಇವುಗಳ ಮಧ್ಯೆ ಶ್ರೀಮತಿ
ಕಲಾವತಿಯವರು ತಾವು ಕಾವೇರಿಯ ಬಗ್ಗೆ ಬರೆದ ಕವನವನ್ನು ಓದಿದರು.
(ಇದನ್ನು ಅನುಬಂಧ ೧ ರಲ್ಲಿ ಲಗತ್ತಿಸಲಾಗಿದೆ.) ಸಭೆಯಲ್ಲಿ ಮಂಡನೆಯಾದ
ವಿಚಾರಗಳನ್ನು ಹೀಗೆ ಸಂಗ್ರಹಿಸಲಾಗಿದೆ:
ಮಳೆ ಇಲ್ಲದ ಅಭಾವಕಾಲದಲ್ಲಿಯೂ ನ್ಯಾಯ ಮಂಡಳಿಯ ತೀರ್ಪಿನಂತೆ
ಆಯಾ ತಿಂಗಳಿನಲ್ಲಿ ನಿಗದಿಯಾದ ನೀರನ್ನು ತಮಿಳುನಾಡಿಗೆ ಬಿಡುವುದು
ಕರ್ನಾಟಕದ ರೈತರ ಹಿತಾಸಕ್ತಿಗೆ ವಿರುದ್ಧವಾದುದು. ಇದರ ಪುನರ್‌ಪರಿಶೀಲನೆಯಾಗಬೇಕು.
ನ್ಯಾಯಮಂಡಳಿಯ ಮೇಲೆ ತಮಿಳುನಾಡಿನ ಡಿ.ಎಂ.ಕೆ. ಪಕ್ಷದ ಪ್ರಭಾವ,
ಕೈಚಳಕ ಇರುವುದು ಸ್ಪಷ್ಟವಾಗಿದೆ. ತಮಿಳುನಾಡಿನ ಜನ
ಸಮಸ್ಯೆಗಳು ಬಂದಾಗ ಸರ್ಕಾರದ ಮೇಲೆ ತಮ್ಮ ಒತ್ತಡ
ತಂದಾದರೂ ಸಮಸ್ಯೆ ನಿವಾರಿಸಿಕೊಳ್ಳುವ ಶಕ್ತಿಶಾಲಿಗಳು.
ದುರದೃಷ್ಟವಶಾತ್ ಕರ್ನಾಟಕದಲ್ಲಿ ಇಂತಹ ಒಗ್ಗಟ್ಟು ಇಲ್ಲ. ಈಗ
ಎಲ್ಲರೂ ಒಂದಾಗಿ ಪ್ರತಿಭಟಿಸುವ ಸಮಯ ಬಂದಿದೆ.
ಕರ್ನಾಟಕಕ್ಕೆ ನೆರೆರಾಜ್ಯಗಳಿಂದ ಮೊದಲಿನಿಂದಲೂ ವಂಚನೆಯಾಗುತ್ತಿದೆ
ಕಾರಣ ನಮ್ಮವರ ದೌರ್ಬಲ್ಯ, ಅವರುಗಳ ಪ್ರಾಬಲ್ಯ. ಈಗಿನ
ಸಮಸ್ಯೆಯ ಪರಿಹಾರಕ್ಕೆ ದೇಶೀಯ ಸಮಿತಿಗಳಿಂದ ವಂಚನೆ, ಪಕ್ಷಪಾತ
ಆಗುತ್ತಿದೆ. ಆದ್ದರಿಂದ ತಜ್ಞ ವಿದೇಶೀಯರನ್ನು ನೇಮಕಮಾಡಿ,
ಯಾರಿಗೂ ಅನ್ಯಾಯವಾಗದಂತೆ ಪರಿಹರಿಸುವುದು ಸರ್ಕಾರದ ಹೊಣೆ.
ನ್ಯಾಯಾಧಿಕರಣ ಸಮಿತಿಯ ಮುಂದೆ ನಮ್ಮವರು ಸಮರ್ಪಕವಾಗಿ
ಅಂಕಿ-ಅಂಶಗಳನ್ನು ನೀಡಿಲ್ಲದಿರುವುದರಿಂದ ಈ ಅನ್ಯಾಯ ಆಗಿದೆ. ನಮಗೆ
ಕಾವೇರಿ ನೀರು ಬರೀ ವ್ಯವಸಾಯಕ್ಕೆ ಮಾತ್ರವಲ್ಲ, ನಗರಗಳ ನೀರುಪೂರೈಕೆ,
ಉದ್ಯಮ ಎಲ್ಲಕ್ಕೂ ಅಗತ್ಯವಿದೆ. ತೀರ್ಪಿನ ಪುನರ್‌ಪರಿಶೀಲನೆಗೆ ಅವಕಾಶ
ದೊರೆತಾಗ, ಇವುಗಳನ್ನು ಸಮಿತಿಯ ಮುಂದೆ ಸ್ಪಷ್ಟವಾಗಿ
ಬಿಡಿಸಿಹೇಳಬೇಕು.
ಈ ಸಮಸ್ಯೆಯ ಹಿಂದೆ ಕೇಂದ್ರಸರ್ಕಾರದ ಮಲತಾಯಿ ಧೋರಣೆ
ಕಂಡುಬರುತ್ತಿದೆ. ೧೮೯೨ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ
ಕಾಲದ ಒಪ್ಪಂದದಂತೆ ಕರ್ನಾಟಕ ೧೧ ಲಕ್ಷ ಎಕರೆ ಸಾಗುವಳಿಗೆ ಬದ್ಧವಾಯಿತು.
ಆದರೆ ತಮಿಳುನಾಡು ಒಪ್ಪಂದಕ್ಕಿಂತಲೂ ೨೮ ಲಕ್ಷ ಎಕರೆ ಹೆಚ್ಚಾಗಿ
ಸಾಗುವಳಿ ಮಾಡಿದಾಗ, ಕರ್ನಾಟಕ ಪ್ರತಿಭಟಿಸಲಿಲ್ಲ, ಕೇಂದ್ರ ಸರ್ಕಾರ
ಕಣ್ಮುಚ್ಚಿ ಕುಳಿತಿತ್ತು. ನಮ್ಮ ದೌರ್ಬಲ್ಯದ/ತಾಳ್ಮೆಯ ದುರುಪಯೋಗವಾಗುತ್ತಿದೆ.
ಮೂರನೆಯವರು ಹಸ್ತಕ್ಷೇಪವಾಗದೆ, ಮಂಡ್ಯದ ರೈತರು ಹಾಗೂ
ತಮಿಳುನಾಡಿನ ರೈತರು ಒಟ್ಟಾಗಿ ಈ ಸಮಸ್ಯೆಯ ಬಗ್ಗೆ ಚರ್ಚಿಸಬೇಕು.
ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಮೊದಲಿನಿಂದಲೂ ಬಲಿಷ್ಠ
ಸರ್ಕಾರಗಳು ಆಡಳಿತ ನಡೆಸುತ್ತಾ, ಕೇಂದ್ರ ಸರ್ಕಾರಕ್ಕೆ ಹೊರಗಿನ
ಬೆಂಬಲ ನೀಡುವ ನೆಪದಲ್ಲಿ ಕೇಂದ್ರದ ಮೇಲೆ ಹಿಡಿತವಿರಿಸಿಕೊಂಡು,
ರಾಜ್ಯದ ಜನತೆಯ ಹಿತ ಸಾಧಿಸಿದ್ದಾರೆ. ಬರಗಾಲ ಬಂದಾಗ,
ಕೇಂದ್ರಸರ್ಕಾರ ಆಂಧ್ರಕ್ಕೆ ಸಾವಿರಾರು ಕೋಟಿ ಪರಿಹಾರವನ್ನೂ, ಕರ್ನಾಟಕಕ್ಕೆ
ಅತ್ಯಂತ ಕಡಿಮೆ ಪರಿಹಾರವನ್ನೂ ಒಂದೇ ಸಂದರ್ಭದಲ್ಲಿ ನೀಡಿದ್ದು
ಇದಕ್ಕೆ ದೃಷ್ಟಾಂತ. ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಹೊಡೆದಾಡುವಂಥ
ಬಲವಾದ ಪ್ರಾದೇಶಿಕ ಪಕ್ಷದ ಕೊರತೆಯೇ ಇದಕ್ಕೆ ಕಾರಣ.
ಕಾವೇರಿ ವಿಚಾರದಲ್ಲಿ ರಾಜಕೀಯಮಾಡದೆ, ಕಷ್ಟಕ್ಕೆ ಸ್ಪಂದಿಸಬೇಕು.
ನ್ಯಾಯಾಧಿಕರಣದ ತೀರ್ಪಿನಂತೆ ಆಯಾಯ ತಿಂಗಳಿನಲ್ಲಿ ನಿರ್ದಿಷ್ಟ ಪ್ರಮಾಣದ
ನೀರು ಬಿಡಲು, ನೀರಿನ ಕೊರತೆ ಇದೆಯೇ ಎಂಬುದನ್ನು ಪರಿಶೀಲಿಸಿ, ಸರ್ಕಾರ
ಮಧ್ಯವರ್ತಿಯಾಗಿ ಸರಿಯಾದ ತೀರ್ಮಾನ ನೀಡಬೇಕು. ಮೊದಲು
ತನ್ನ ಮನೆಯ ಯೋಗಕ್ಷೇಮ, ನಂತರ ಪಕ್ಕದಮನೆಯವರದು.
ದೈವದತ್ತವಾದ ಜಲವನ್ನು ಸಹ ನಾವು ಪಡೆದನಂತರವೇ ಮುಂದಿನ
ಊರಿಗೆ ಬಿಡುವುದು ನೈಸರ್ಗಿಕ ನಿಯಮ. ನಮಗೆ ಅಗತ್ಯವಿದ್ದಾಗಲೂ ಮುಂದಿನ
ಊರಿಗೆ ನೀರು ಬಿಡುವುದರಲ್ಲಿ ನ್ಯಾಯವಿಲ್ಲ.
ಆಗಿರುವ ಅನ್ಯಾಯವನ್ನು ಸೂಕ್ತ ಮಾರ್ಗಗಳಿಂದ ಪರಿಹರಿಸುವ ಬಗ್ಗೆ
ಆಲೋಚಿಸಬೇಕು.
ಕರ್ನಾಟಕ ತಂತ್ರಜ್ಞಾನ, ವಿಜ್ಞಾನಗಳಲ್ಲಿ ಇಡೀ ದೇಶ ಯಾಕೆ, ಪ್ರಪಂಚದಲ್ಲಿಯೇ
ಹೆಸರು ಮಾಡಿದೆ. ಕಾವೇರಿ ಸಮಸ್ಯೆಗೆ ನ್ಯಾಯಾಧಿಕರಣದ ತೀರ್ಪನ್ನು
ಒಪ್ಪಿಕೊಂಡು, ನಮ್ಮ ಜಲಸಮಸ್ಯೆಗೆ ಬೇರೆಯೇ ಪರಿಹಾರ
ಕಂಡುಕೊಳ್ಳುವುದರತ್ತ ಸರ್ಕಾರ ಗಮನ ಹರಿಸಬೇಕು.
ನ್ಯಾಯಾಧಿಕರಣದ ವ್ಯವಸ್ಥೆಗಾಗಿ ನೂರಾರು ಕೋಟಿ ವೆಚ್ಚ ಮಾಡಿರುವ
ಕರ್ನಾಟಕ ಸರ್ಕಾರ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಪರಿಹಾರಸೂತ್ರವನ್ನು
ಕಂಡುಹಿಡಿಯಲು ಹಣ ವೆಚ್ಚಮಾಡಲು ಹಿಂದೆಮುಂದೆ ನೋಡಬಾರದು.
ಇದಕ್ಕಾಗಿ ಟಾಟಾ ವಿಜ್ಞಾನ ಕೇಂದ್ರ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್
ಮುಂತಾದ ತಾಂತ್ರಿಕ ಹಾಗೂ ವೈಜ್ಞಾನಿಕ ಕೇಂದ್ರಗಳು ಶೀಘ್ರದಲ್ಲಿ ಪರಿಹಾರ
ಕಂಡು ಹಿಡಿಯುವಂತೆ ಒಪ್ಪಿಸಬೇಕು.
ಕರ್ನಾಟಕದಲ್ಲಿ ಬಲಿಷ್ಠ ಸರ್ಕಾರ ಇದ್ದಾಗಲೂ, ಕೇಂದ್ರ ಮತ್ತು ರಾಜ್ಯ
ಸರ್ಕಾರಗಳೆರಡೂ ಒಂದೇ ಪಕ್ಷದ್ದಾಗಿದ್ದಾಗಲೂ, ಪ್ರಧಾನಮಂತ್ರಿಗಳೇ
ಕನ್ನಡಿಗರಾಗಿದ್ದಾಗಲೂ, ಕಾವೇರಿ ಜಲಸಮಸ್ಯೆಯ ಪರಿಹಾರದ ಕಡೆಗೆ
ಗಮನ ಕೊಡದಿದ್ದುದು ದುರ್ದೈವದ ಸಂಗತಿ. ಈ ತೀರ್ಪಿನಿಂದ ಆಗಿರುವ
ಅನ್ಯಾಯದ ಬಗ್ಗೆ ಜನತೆಯ ಮುಂದೆ ಸರಿಯಾದ ಚಿತ್ರಣವನ್ನು ಸರ್ಕಾರವಾಗಲೀ,
ಮಾಧ್ಯಮಗಳಾಗಲೀ ನೀಡಿಲ್ಲ. ಸಮಸ್ಯೆಯನ್ನೂ, ಅದರ ಪರಿಹಾರವನ್ನೂ
ಸರಿಯಾಗಿ ಅರ್ಥ ಮಾಡಿಕೊಳ್ಳದೆ ದುಡುಕುವುದರಲ್ಲಿ ಅರ್ಥವಿಲ್ಲ. ಸರ್ಕಾರ,
ಮಾಧ್ಯಮಗಳು ಪಾರದರ್ಶಕವಾದ ಚಿತ್ರಣ ನೀಡಿದಲ್ಲಿ ಪರಿಹಾರಸೂತ್ರ
ಸುಲಭ.
ಕಾವೇರಿ ಜಲಸಮಸ್ಯೆಗೆ ಪರಿಹಾರವಾಗಿ ಇದುವರೆಗೆ ಆಗಿರುವ ಅಭಿವೃದ್ಧಿಯನ್ನು
ಗಮನದಲ್ಲಿರಿ ಸಿಕೊಳ್ಳಬೇಕು. ಜಲಸಂಪನ್ಮೂಲದ ಕೊರತೆಯಾದಲ್ಲಿ,
ಬೇರೆ ಸಂಪನ್ಮೂಲಗಳನ್ನು ಶೋಧಿಸಿ, ನಮ್ಮ ಅಭಿವೃದ್ಧಿಪರ
ಕಾರ್ಯಗಳನ್ನು ಆ ನಿಟ್ಟಿನಲ್ಲಿ ಹೊರಳಿಸಬೇಕು. ಉತ್ತರ ಭಾರತದ,
ಹಾಗೂ ದಕ್ಷಿಣ ಭಾರತದ ನದಿಗಳನ್ನು ಸೇರಿಸುವ ನಿಟ್ಟಿನಲ್ಲಿ ಗಮನ
ಹರಿಸಬೇಕು. ಕಡಿಮೆ ನೀರಿನಲ್ಲಿ ಭತ್ತಕ್ಕಿಂತ ಬೇರೆಯೇ ಬೆಳೆಗಳನ್ನು
ತೆಗೆಯುವ ವಿಧಾನಗಳನ್ನು ಸಂಶೋಧಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ,
ಜನಸಮುದಾಯ, ವಿಜ್ಞಾನ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕು.
ಕರ್ನಾಟಕದ ಜನತೆಯಲ್ಲಿ ಸಾಮಾನ್ಯವಾಗಿ ಕಂಡುಬರುವ
ತಾಮಸಗುಣವೇ ನಮ್ಮ ಇಂದಿನ ಪರಿಸ್ಥಿತಿಗೆ ಕಾರಣ. ಇಂದಿನ ನಮ್ಮ
ತುರ್ತು ಅಗತ್ಯವೆಂದರೆ, ನಮ್ಮ ಜನರಲ್ಲಿ ಕ್ಷಾತ್ರ ತೇಜಸ್ಸನ್ನು
ಬೆಳೆಸಬೇಕು. ಆಗ ನಾವು ನಮ್ಮ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ
ಅನ್ಯಾಯವನ್ನು ತಡೆಯಲು ಸಾಧ್ಯ. ಜನರನ್ನು ನಿವೃತ್ತಿಮಾರ್ಗದಿಂದ
ಪ್ರವೃತ್ತಿಮಾರ್ಗಕ್ಕೆ ತನ್ಮೂಲಕ ಸಾಹಸಮಾರ್ಗಕ್ಕೆ
ಕರೆದೊಯ್ಯುವ ಅಗತ್ಯವನ್ನು ವಿವೇಕಾನಂದರ ವಾಣಿಯಿಂದ, ಬೇಂದ್ರೆಯವರ
ಕವನದಿಂದ ಸಾದೋಹರಣಸಹಿತವಾಗಿ ವಿವರಿಸಿದರು (ಅನುಬಂಧ ೨ ಅನ್ನು
ನೋಡಿರಿ.)
ಸಭಾಧ್ಯಕ್ಷರಾದ ವಿಶ್ವನಾಥ್‌ರವರು ಎಲ್ಲರ ಅಭಿಪ್ರಾಯಗಳನ್ನು
ಕ್ರೋಢೀಕರಿಸಿ ಮಂಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ
ಉದಯಶಂಕರ್‌ರವರು ವಂದನಾರ್ಪಣೆ ಮಾಡಿದರು. ಆಗಮಿಸಿದ್ದ ಸಭಿಕರು
ಸಾಹಿತ್ಯ ಗೋಷ್ಠಿ ಆಯೋಜಿಸಿದ್ದ ಇನ್ನೊಂದು ಉತ್ತಮ ಕಾರ್ಯಕ್ರಮದ
ಗುಂಗಿನಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಅನುಬಂಧ ೧:
ಕಾವೇರಿ ಎಂದೆಂದು ನಮ್ಮವಳು
ಕೆ.ಜಿ.ಕಲಾವತಿ
ಕನ್ನಡ ನಾಡನು ಪಾವನಗೊಳಿಸುವ ಹರಿವ ಗಂಗೆಯಿವಳು
ಬೆಟ್ಟಗುಡ್ಡಗಳ ಕಣಿವೆಕಾನನವ ತಣಿಸಿ ಬಂದಳಿವಳು
ಕಾವೇರಿ ನಮ್ಮವಳು . . . ಎಂದೆಂದು ನಮ್ಮವಳು . . .
ಅದೋ ಅಲ್ಲಿ ಭೋರ್ಗರೆಯುತಿರುವ ರೋಷದ ಅವತಾರ
ಇದೋ ಇಲ್ಲಿ ಶ್ರೀರಂಗನಾಥನಿಗೆ ಕಾಲ್‌ಬೆರಳ ಅಲಂಕಾರ
ಕಾವೇರಿ ನಮ್ಮವಳು . . . ಎಂದೆಂದು ನಮ್ಮವಳು . . .
ಕೊಡಗವೀರರೆದೆಗುಂಡಿಗೆಯೊಳಗೆ ಶಕ್ತಿಯಾಗಿ ಹರಿದೇ
ಭಾಗಮಂಡಲದ ಭಾವತರಂಗಿಣಿ ಕಾವೇರಿ ಕ್ಷೇತ್ರವಾದೇ
ಕಾವೇರಿ ನಮ್ಮವಳು . . . ಎಂದೆಂದು ನಮ್ಮವಳು . . .
ಹಸಿರು ಸೀರೆ ಮುತ್ತೈದೆ ಬೆಡಗಿನಲಿ ಹರಿದಳೋ ನಮ್ಮ ತಾಯಿ
ಹಸಿದ ಹೊಟ್ಟೆಗೆ ತುತ್ತನಿತ್ತು ಬರೆದಳೋ ನಮ್ಮವರ ದಾರಿ
ಕಾವೇರಿ ನಮ್ಮವಳು . . . ಎಂದೆಂದು ನಮ್ಮವಳು . . .
ಹಸಿರ ನಾಡಿಗೆ ಉಸಿರೆ ಆಗುತ ಸಕ್ಕರೆಯ ನೀಡಿದವಳು
ಹೊಲದ ಬದುಕೆ ಉಸಿರಾದ ಜನಕೆ ನಗುವ ತಂದಳಿವಳು
ಕಾವೇರಿ ನಮ್ಮವಳು . . . ಎಂದೆಂದು ನಮ್ಮವಳು . . .
ನಾವೆಂದು ಸಹಿಸೆವು ಈ ತಾಯಮೇಲೆ ಅನ್ಯರ ಬಲಾತ್ಕಾರ
ಅಂದು ಆಂಗ್ಲರು ಇಂದು ತಮಿಳರು ಇದೆಂಥ ಅಪಚಾರ
ಕಾವೇರಿ ನಮ್ಮವಳು . . . ಎಂದೆಂದು ನಮ್ಮವಳು . . .
ಸತ್ಯ ಶಾಂತಿ ಮೆರೆದ ದೇಶವಿದು ಕೆಡಿಸಬೇಡಿ ಹೆಸರ
ಮಿತಿಯು ನಮಗಿರಲಿ ಮರೆಯಬೇಡಿ ಇದುವರೆಗಿನ ಉಪಕಾರ
ಕಾವೇರಿ ನಮ್ಮವಳು . . . ಎಂದೆಂದು ನಮ್ಮವಳು . . .
ಏಳು ಕನ್ನಡಿಗ ಪರಿಹರಿಸು ಇಂದೆ ಹೆತ್ತೊಡಲ ಬಗೆವ ತಾಪ
ಉತ್ತರ ದಕ್ಷಿಣಗಳೊಂದಾಗಿ ಭುಗಿಲೇಳಿ ತೋರಿ ಕೆಚ್ಚೆದೆಯ ರೂಪ
ಕಾವೇರಿ ನಮ್ಮವಳು . . . ಎಂದೆಂದು ನಮ್ಮವಳು . . .
ಅನುಬಂಧ ೨:
ಸತ್ತಿರುವುದೆದೆ ಸೇರು...
ದ.
ರಾ. ಬೇಂದ್ರೆ
ಸತ್ತಿರುವುದೆದೆಸೇರು ಸುತ್ತಿರುವ ವಿಷ ಹೀರು
ಬತ್ತಿರುವುದಮೃತಝರಿ ಮತ್ತೆ ತೋರು
ಸತ್ತುಳ್ಳ ನೂರಾರು ಬಿತ್ತುಗಳ ನೀನೂರು
ಕಿತ್ತು ಭಯ ಬಿತ್ತ ಬೇರು.
ನೀನು ನೆಲೆಸಿದ ಕಾಡು ಮಾನಿಸುವರೌ ನಾಡು
ಧ್ಯಾನಿಸುವರೈ ನಿನ್ನ ಹಾದಿ ಹಾದು
ಈ ನಾಡಿನೊಳು ಮಾಡು ಪ್ರಾಣಪುತ್ರರ ಬೀಡು
ಏನೀ ನಂದನದ ಪಾಡು.
|