|
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಬೆಳಗಿದ ಕನ್ನಡದ ದೀಪ
ಅಶೋಕ
ಹಂದಿಗೋಳ
handigol@yahoo.com
ಹ್ವಾದ ಶನಿವಾರ ನವೆಂಬರ್ ೧೮ರಂದು ಸನ್ನಿವೇಲ್ ದೇವಾಲಯದ
ಸಭಾಂಗಣದೊಳಗ ಹಬ್ಬದ ಸಡಗರಾನ ಸಡಗರ.
ಉತ್ತರ
ಕ್ಯಾಲಿಫೋರ್ನಿಯಾ ಕನ್ನಡಕೂಟದ ಸದಸ್ಯ ಕುಟುಂಬದವರೆಲ್ಲ
ಸೇರಿ ಒಂದಲ್ಲ... ಎರಡು ಹಬ್ಬಾನ ಒಟ್ಟಿಗೇ ವಿಜೃಂಭಣೆಯಿಂದ
ಆಚರಿಸಿದರು. ಮನಿ ಮತ್ತ ಮನಸ್ಸಿನ್ಯಾಗಿನ ಕತ್ತಲಾ ಓಡಿಸಿ ಜ್ಞಾನದ
ಜ್ಯೋತಿಯನ್ನ ಬೆಳಗೋ ದೀಪಾವಳಿ ಸಂಭ್ರಮಾ ಒಂದು ಕಡೆ ಆದ್ರ
ಹರಿದ ಹಂಚಿಹೋಗಿದ್ದ ಕನ್ನಡನಾಡಿನ ಪ್ರಾಂತಗಳೆಲ್ಲ `ಅಖಂಡ
ಕರ್ನಾಟಕ' ಅಂತ ಏಕೀಕರಣಗೊಂಡ ಸುವರ್ಣ ಮಹೋತ್ಸವದ ವರ್ಷದ
ರಾಜ್ಯೋತ್ಸವ ಇನ್ನೊಂದು ಕಡೆ. ಅದಕ್ಕ ಇರ್‌ಬೇಕು ಕೂಟದವರು
`ದೀಪೋತ್ಸವ'ಅಂತ ಬರೊಬ್ಬರಿ ಹೆಸರಿಟ್ಟಿದ್ದು.
 
ಮಧಾಹ್ನ ೩:೩೦ ಹೊಡಿತಿದ್ಧಂಗ ಸಭಾಂಗಣಕ್ಕ ಬರ್ಲಿಕ್ಕೆ ಹತ್ತಿದ
ಹುರುಪಿನ ಸದಸ್ಯರಿಂದ ಹಬ್ಬದ ವಾತಾವರಣಕ್ಕ ಕಳೀ ಏರ್ಲಿಕ್ ಹತ್ತು.
ಕೂಟದ ಸಮಿತಿಯ ಪರವಾಗಿ ಉತ್ಸಾಹೀ ಸ್ವಯಂಸೇವಕರಿಂದ ಆತ್ಮೀಯ
ಸ್ವಾಗತ. ಹಬ್ಬ ಅಂದಮ್ಯಾಲೆ ಕೇಳಬೇಕ.. ಮಹಿಳಾಮಣಿಗಳ
ಬಣ್ಣಬಣ್ಣದ ರೇಶ್ಮೀಸೀರಿ, ಸಣ್ಣಸಣ್ಣ ಹುಡುಗಿಯರ ಜರತಾರಿ ಲಂಗ ಎಲ್ಲಾ
ಝಗಝಗ ಮಿಂಚತಿದ್ವು.
 
ಪ್ರಾಂಗಣದೊಳಗ ಕಾಲಿಡತಿದ್ಧ್ಂಗ ಎಲ್ಲಾರ ಕಣ್ಣು ಸೆಳದಿದ್ದು ಸುವರ್ಣ
ಕರ್ನಾಟಕದ ವಿಶೇಷ ಅಲಂಕಾರ. ನೂರಾರು ವಿದ್ಯುದ್ದೀಪಗಳ ನಡುವ
ಕಂಗೊಳಿಸೋ ಕನ್ನಡಾಂಬೆ ಭುವನೇಶ್ವರಿ, ಅಕೀಸುತ್ಲೂ ಸಂಗೀತ
ಮತ್ತ ಸಾಹಿತ್ಯದ ಮುಖೇಣ ಕನ್ನಡಮ್ಮನಿಗೆ ಸೇವಾ ಸಲ್ಲಿಸಿದ
ಹಲವಾರು ಗಣ್ಯರ ಭಾವಚಿತ್ರಗಳು. ಪುರಂದರ, ಕನಕ, ಬಸವ,
ವೀಣೆ ಶೇಷಣ್ಣ, ದೊರೆಸ್ವಾಮಿ ಅಯ್ಯಂಗಾರ್ರು, ಟಿ. ಚೌಡಯ್ಯ
ಮುಂತಾದ ಸಂಗೀತ ರತ್ನರು, ಬೇಂದ್ರೆ, ಕುವೆಂಪು, ಮಾಸ್ತಿ
ಮುಂತಾದ ಸಾಹಿತ್ಯರತ್ನರು (ಇವರೆಲ್ಲ ಜ್ಞಾನಪೀಠ ಪ್ರಶಸ್ತಿ
ವಿಜೇತರು ಅನ್ನೂದು ವಿಶೇಷ), ಸಂಗೊಳ್ಳಿ ರಾಯಣ್ಣ, ಚೆನ್ನಮ್ಮ
ಮುಂತಾದ ಸ್ವಾತಂತ್ರ್ಯ ಹೋರಾಟಗಾರರು, ಎರಡೂ ಬಾಜೂ
ಬೇಲೂರು-ಹಳೇಬೀಡಿನ ಶಿಲಾಬಾಲಿಕೆಯರು. ಕುಸುಮಾ ಅರಕಲಗೂಡು
ಮತ್ತ ತಂಡದವರ ಪರಿಶ್ರಮ ಎದ್ದುಕಾಣ್ತಿತ್ತು. ಈ ಅಲಂಕಾರಕ್ಕ
"ಎಷ್ಟು ಭಂಗಾರದ ಬಣ್ಣ ಬಂದದಲ್ಲಾ!" ಅಂತ ನಾ ಅಂದಾಗ ನನ್ನ ಜೋಡಿ
ನಿಂತಿದ್ದ ನನ್ನ ಮಗಳು "ಅಪ್ಪಾ, ಅಲ್ಲಿ ಬರೋಬರಿ ನೋಡು, ಎಲ್ಲಾ ಕಡೆ
ಭಂಗಾರದ ಗಟ್ಟಿ ಸುರುವ್ಯಾರ..ಅದಕ್ಕ ಇಷ್ಟು ಭಂಗಾರದ್‌ಹಂಗ
ಹೊಳೀಲಿಕ್ಕೆಹತ್ತೇದ" ಅಂತ ಉದ್ಗರಿಸಿದ್ಲು.
 
ವೇದಿಕಿ ಮ್ಯಾಲೆ ಕಾರ್ಯಕ್ರಮಗಳು, ಸಣ್ಣಮಕ್ಕಳು `ಹಚ್ಚೇವು
ಕನ್ನಡದ ದೀಪಾ' ಅಂತ ಹಾಡುವುದರ ಕೂಡ ಚಾಲೂ ಆದ್ವು. ಅದು
ಮುಗದಮ್ಯಾಲೆ ಸ್ಟೇಜು ತುಂಬ ಓಡಾಡ್ಕೋತ ಕಾಯಿಪಲ್ಲೆಗಳು
ಕುಣಿಲಿಕ್ಕೆ ಹತ್ತಿದಾಗ ಎಲ್ಲಾ ಸಭಿಕರ ಕುತೂಹಲ ಕೆರಳಿತ್ತು. ಸವಿತಾ
ಚಂದ್ರಶೇಖರ್ ಅವ್ರು ನಿರ್ದೇಶನಾ ಮಾಡಿದ ಮಕ್ಕಳ ನೃತ್ಯ
ಬ್ಯಾರ್‌ಬ್ಯಾರೆ ತರಕಾರಿಗಳ ಬಣ್ಣನಾ ಮಾಡ್ತು.
 
ಅದಾದಮ್ಯಾಲೆ `ಉಪಾಯದಿಂದ ಅಪಾಯ ಪರಿಹಾರ' ಎಂಬೋ ಮಕ್ಕಳ
ನೃತ್ಯ ನಾಟಕಾನ್ನ ಉಮಾ ಕಳಸಾಪೂರ್ ಅವ್ರು ನಾನಾ ನಮೂನಿ
ಬಣ್ಣಬಣ್ಣದ ಹಕ್ಕಿಗಳ ವೇಷಾ ಹಾಕ್ಕೊಂಡು, ರೆಕ್ಕಿ ಬೀಸ್ಕೋಂತ,
ಸುಮಧುರ ಕಲರವ ಮಾಡ್ಕೋಂತ ಮಕ್ಕಳು ಒಂದು ಛೆಂದನ
ಲೋಕಾನ ಸೃಷ್ಟಿಸಿದ್ರು.

ನಮ್ಮ ಯುವಜನಾಂಗದೊಳಗ ಕರ್ನಾಟಕದ ಚರಿತ್ರಿ, ಸಾಂಸ್ಕೃತಿಕ
ಶ್ರೀಮಂತಿಕಿ ಬಗ್ಗೆ ಆಸಕ್ತಿ ಮೂಡಿಸೋ ಸುವಿಚಾರದಿಂದ ಕೂಟ ಮಕ್ಕಳ
ಪ್ರಬಂಧ ಸ್ಪರ್ಧಾ ನಡಿಸಿದ್ರು. ಅದರೊಳಗ ಅತ್ಯುತ್ತಮವಾಗಿ ಬರೆದ
ಮಕ್ಕಳಿಗೆ ಬಹುಮಾನ ವಿತರಣಾ ಮಾಡಲಾಯ್ತು.
ಕನ್ನಡ ಕಲಿ ಅನ್ನೂದು ಕನ್ನಡಕೂಟ ಈ ವರ್ಷ ಸುರೂಮಾಡಿದ ಒಂದು
ಹೆಮ್ಮೆಪಡೋ ಸಫಲ ಪ್ರಯತ್ನ ಅನ್ನಬಹುದು. ಎಪ್ಪತ್ತಕ್ಕೂ
ಹೆಚ್ಚು ಮಕ್ಕಳು ಪ್ರತಿ ಶನಿವಾರಕ್ಕೊಮ್ಮೆ ಕನ್ನಡಾನ್ನ
ಮಾತಾಡ್ಲಿಕ್ಕೆ, ಬರೀಲಿಕ್ಕೆ ಎಷ್ಟು ಹುರುಪಲೇ ಬರ್ತಾರ ಅಂತ
ಪ್ರಾಂಶುಪಾಲರಾದ ಸಂಧ್ಯಾ ರವೀಂದ್ರನಾಥ್ ಅವರು ವಿವರಿಸಿದರು. ಆ
ಎಲ್ಲಾ ಮಕ್ಕಳು ವಿಶಾಲ ವೇದಿಕಿಯನ್ನ ಆವರಿಸಿ ಸುಮಧುರವಾಗಿ
ಒಂದರಮ್ಯಾಲೆ ಒಂದು ಕನ್ನಡಪದ್ಯಗಳ್ನ ನಿರರ್ಗಳವಾಗಿ ಹಾಡ್ದಾಗ,
ಅನೇಕ ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರ ಮೆಹನತ್ತು ನಮ್ಮ
ಮುಂದಿನ ಪೀಳಿಗಿಯ ಕನ್ನಡ ಭಾಷಾ ಮತ್ತ ಸಂಸ್ಕೃತಿಯ
ಬೇರುಗಳ್ನ ಎಷ್ಟು ಮಜಬೂತು ಮಾಡ್ಲಿಕ್ಕೆ ಹತ್ತೇದ ಅನ್ನೂದು ಖಾತ್ರಿ
ಆತು.
ಈ ನಡಕ ಕ್ಯಾರಿಯೋಕಿ ಸಂಗೀತದ ಜೋಡಿ ಸುಮುಖ್ ಶೇಖರ್ ಹಾಡಿದ
`ಆರಾಧಿಸುವೆ ಮದನಾರಿ' ಹಾಡು ಕೇಳ್ದಾಗ ಅಣ್ಣಾವ್ರನ್ನ ಇತ್ತೀಚೆಗೆ
ಕಳಕೊಂಡ್ವೆಲ್ಲಾ ಅಂತ ಮನಸ್ಸಿನ್ಯಾಗ ಹಳಾಹಳೀ ಆತು.
ಮುಂದ ಏನಪಾ ಕಾರ್ಯಕ್ರಮ ಅಂತ ನೋಡೂದ್ರೊಳಗ ಬದರಿ
ಪ್ರಸಾದ್ ಅವ್ರು ತಯಾರು ಮಾಡಿದ ಯುವರಾಗ ಸಂಗೀತ
ಕಾರ್ಯಕ್ರಮ ಎಲ್ಲಾರ ಮನಸ್ಸು ಸೆಳೀತು. ಹಾರ್ಮೋನಿಯಂ,
ತಬಲಾ, ಮೃದಂಗ, ಕೀಬೋರ್ಡ್, ಪಿಟೀಲು ಇನ್ನೂ ರಗಡ ವಾದ್ಯಗಳನ್ನ
ಎಷ್ಟು ಛೆಂದ ನುಡಿಸಿದ್ರು ಅನ್ನೂದಕ್ಕ ಮ್ಯಾಲಿಂದಮ್ಯಾಲೆ ಬಿದ್ದ
ಸಭಿಕರ ಚಪ್ಪಾಳೀನ ಸಾಕ್ಷಿ ಆಗಿತ್ತು. `ಭಾಗ್ಯದ ಬಳೆಗಾರ', `ದೋಣಿ
ಸಾಗಲಿ', `ಜೀವ ವೀಣೆ', ಸ್ವೀಡನ್ನಿನ ಜಾನಪದ ಗೀತೆಗಳ್ನ ಕೇಳ್ದಾಗ ಆ
ಹುಡುಗ್ರಿಗೆ ಛೊಲೋ ಭವಿಷ್ಯ ಕಾದದ ಅನ್ನುಸ್ತು. ನಮ್ಮ
ಭೀಮಣ್ಣಾವ್ರು ಜನಪ್ರಿಯಗೊಳಿದ `ಭಾಗ್ಯದ ಲಕ್ಷ್ಮೀ ಬಾರಮ'
ಕೇಳಿದಾಗ್ಲಂತೂ ಎಂಥಾ ಮನಸ್ಸಿಲ್ಲದ ಲಕ್ಷ್ಮೀನೂ ಓಡಿ ಬರತಾಳ ಅಂತ ನಾ
ಅಂದ್ಕೊಂಡೆ.
ಕರ್ನಾಟಕದ ತುಳುನಾಡಿನ ವಿಶಿಷ್ಟ ಧಾರ್ಮಿಕ ಸಂಪ್ರದಾಯವನ್ನ
ಬಿಂಬಿಸೋ ಭೂತದ ಕೋಲ ಭಾಳ ಮಂದಿಗೆ ಕುತೂಹಲಕಾರಿ ಅಷ್ಟ ಅಲ್ಲ,
ಮನರಂಜನಾಕರವಾಗಿಯೂ ಇತ್ತು. ರಘುರಾಂ ಶೆಟ್ಟಿಯವರು ರಚಿಸಿ,
ನಿರ್ದೇಶಿಸಿ, ಖರೇವಂದ್ರೂ ದೆವ್ವ ಮೈಮ್ಯಾಲೆ ಬಂದವರ್-ಹಾಂಗ
ಸಭಾಂಗಣದ ತುಂಬ ಓಡಾಡಿ ಕುಣಿದಿದ್ದು ಎಲ್ಲಾರ ಮೆಚ್ಚಿಗಿ ಗಳಿಸಿದ್ರು.
ಸ್ಪೈಡರ್‌ಮ್ಯಾನ್, ಸುಪರ್‌ಮ್ಯಾನ್ ಅಂಥವರನ್ನ ಆರಾಧಿಸೋ ಇಲ್ಲೀ
ಹುಡುಗ್ರು ಪಂಜುರ್ಲಿ ಭೂತ ನೋಡಿ `ಕೂಲ್' ಅಂತ ಉದ್ಗರಿಸಿದ್ದು
ಆಶ್ಚರ್ಯ ಏನಲ್ಲ ಬಿಡ್ರಿ.
ಊಟದ ವಿರಾಮದ ನಂತರ `ಕನ್ನಡದ ಋಷಿಗಳೇ ತಲೆಬಾಗಿ ನಮಿಪೆ';
ಕನ್ನಡದ ಐವರು ಪ್ರಸಿದ್ಧ ಕವಿಗಳ ಕವಿತೆಗಳನ್ನಾಧರಿಸಿದ
ಸುಂದರ ಕಾರ್ಯಕ್ರಮ. ಅಗದೀ ಜನಪ್ರಿಯವಾದ `ಕೋಳಿಕೆ ರಂಗ',
`ಇಳಿದು ಬಾ', `ಬ್ರಹ್ಮ ನಿಂಗೆ', `ನಟನವಾಡಿದಳ್' ಮತ್ತ `ಎಲ್ಲಾದರು
ಇರು' ಕವನಗಳಿಗೆ ಧ್ವನಿಮುದ್ರಿತ ಸಂಗೀತದ ಜೋಡಿ ಕಣ್ಸೆಳೆಯೋ
ನೃತ್ಯಗಳು. ಕುಸುಮಾ ಅರಕಲಗೂಡು ಅವರು ನಿರ್ವಹಿಸಿಕೊಟ್ಟ
ಕಾರ್ಯಕ್ರಮ ಕನ್ನಡದ ಋಷಿಗಳಿಗೆ ಒಪ್ಪುವಂಥ ನಮನ ಆಗಿತ್ತು.
೨೦೦೬ ವರ್ಷದ ಕನ್ನಡ ಕೂಟದ ಕಾರ್ಯಕಾರಿ ಸಮಿತಿ ಭಾಳ ಛೊಲೋ
ಕೆಲಸಾ ಮಾಡೇದ ಅನ್ನೂದು ಹೊಗಳಿಕಿ ಅಂತಲ್ಲ ಒಂದು ಹೆಮ್ಮಿ ವಿಷಯ.
ಕೂಟ ಹಮ್ಮಿಕೊಂಡ ಹಲವಾರು ಚಟುವಟಿಕೆಗಳಿಗೆ ವರ್ಷಪೂರ್ತಿ
ಅವಿರತವಾಗಿ ಸೇವಾ ಸಲ್ಲಿಸಿದ ಸಮಿತಿಯ ಸದಸ್ಯರೆಲ್ಲ ವೇದಿಕೆಯ
ಮ್ಯಾಲೆ ಒಟ್ಟಿಗೆ ಬಂದು `ಜಯ ಭಾರತ ಜನನಿಯ ತನುಜಾತೆ' ಅಂತ
ಕನ್ನಡಮ್ಮನಿಗೆ ಜೈಕಾರ ಹಾಕಿದ್ದು ವಿಶಿಷ್ಟ ಆಗಿತ್ತು. ಈ ವರ್ಷದ
ಸಮಿತಿಯೊಳಗ ಅಧ್ಯಕ್ಷರಾಗಿ ಮೊದಲು ರಮೇಶ್ ಜಾವಗಲ್ ಮತ್ತ
ಅವರು ಬೆಂಗಳೂರಿಗೆ ಹೋದ್ಮ್ಯಾಲೆ ನರೇನ್ ಕುನ್ಹೋಡಿಯವರು
ಭಾಳ ಛೊಲೋ ಮುಂದಾಳತ್ವವಹಿಸಿದರು.
ಕನ್ನಡಕೂಟದ ಬೋರ್ಡ್ ಆಫ್ ಟ್ರಸ್ಟೀಸ್‌ಗೆ ಮುಂದಿನ ಎರಡು
ವರ್ಷಗಳ ಅವಧಿಗೆ ರಮೇಶ್ ಶಿರ್ಸಿ ಚೇರ್‌ಮನ್, ಅಲಮೇಲು
ಅಯ್ಯ್ಂಗಾರ್ ವೈಸ್‌ಚೇರ್‌ವುಮನ್ ಮತ್ತ ಸತೀಶ್ ಸ್ವಾಮಿ, ನರೇನ್
ಕುನ್ಹೋಡಿ, ಕಾವ್ಯ ಕುರುಬುರ್ ಟ್ರಸ್ಟೀಸ್ ಆಗಿದ್ದಾರೆಂದು ಹಾಲಿ
ಚೇರ್‌ಮನ್ ರವಿ ರವೀಂದ್ರನಾಥ್ ಘೋಷಣಾ ಮಾಡಿದ್ರು. ಅಷ್ಟ ಅಲ್ಲದ
ಕನ್ನಡಕೂಟದ ೨೦೦೭ನೇ ವರ್ಷಕ್ಕ ಕಾವ್ಯ ಕುರುಬರ್ ಅಧ್ಯಕ್ಷಿಣಿ
ಆದದ್ದನ್ನು ಘೋಷಿಸಲಾಯ್ತು.
`ಬೇಂದ್ರೆ ನಮನ' ಎಲ್ಲಾರೂ ಕಾದು ಕೂತಂಥ, ಆ ಸಂಜೀ ಕಡೀ
ಕಾರ್ಯಕ್ರಮ. ಕನ್ನಡ ಸಾಹಿತ್ಯರತ್ನರೊಳಗ ಒಬ್ಬರಾದ ದ.ರಾ.
ಬೇಂದ್ರೆಯವರ ಇಪ್ಪತ್ತೈದನೇ ಪುಣ್ಯತಿಥಿ ಸ್ಮರಣಾರ್ಥ
`ಮೂಡಲಮನೆ' ಮೂಲಕ ಮನೀ ಮಾತಾಗಿರೋ ವಿಜಯಾ
ಯಕ್ಕುಂಡಿಯವರು ನಿರ್ದೇಶಿಸಿದ ಸಂಗೀತ, ಸಾಹಿತ್ಯ, ನೃತ್ಯಗಳ
ಅಪೂರ್ವ ಸಂಗಮವಾದ ಆ ಕಾರ್ಯಕ್ರಮ ದತ್ತೂಮಾಸ್ತರರ ಊರಾದ
ಧಾರವಾಢದ ಪೇಢೆ ಹಾಂಗ ಸಿಹಿ, ಕಂಪು ಮತ್ತ ಮಧುರತನಾನ್ನ
ಎಲ್ಲಾರಿಗೂ ಹಂಚಿತ್ತು. ಚುಮುಚುಮು ನಸುಕಿನ ಮಂಜುಕವಿದ
ದೃಶ್ಯದೊಳಗ `ಮೂಡಲ ಮನೆಯ ಮುತ್ತಿನ ನೀರಿನ' ಹಾಡಿನಿಂದ
ಸುರುವಾದ ಆ ರಸದೌತಣ `ಶ್ರಾವಣ ಬಂತು', `ನಾರೀ ನಿನ್ನ ಮಾರಿ
ಮ್ಯಾಲ', `ಕುಣಿಯೋಣುಬಾರಾ'ದಂಥ ಅಮೋಘ ಕವನಗಳ ಕೂಡ
ಮುಂದುವರೀತು. `ಬೆಳದಿಂಗಳಾ ನೋಡ' ಹಾಡನ್ನ
ಸವಿಯುವಾಗ್ಲಂತೂ ನಮ್ಮೆಲ್ಲರ ಹೃದಯಗಳು ಮಂತ್ರ-ಮುಗ್ಧ
ಆಗಿಬಿಟ್ಟಿದ್ವು. `ಒಂದೇ ಒಂದೇ ಕರ್ನಾಟಕ ಒಂದೇ' ಅನ್ನೂ
ಅಂಬಿಕಾತನಯದತ್ತರ ಧೀರ ಘೋಷಣಾ ಸುವರ್ಣ ಕರ್ನಾಟಕದ
ವಿಜೃಂಭಣೆಯ ತೇರಿಗೆ ವಜ್ರದ ಕಳಸ ಇಟ್ಟಾಂಗಿತ್ತು. ನಚಿಕೇತ
ಶರ್ಮ ಹಾಗು ಸಂಗಡಿಗರ ಸಂಗೀತ ಸಂಯೋಜನಾ ಮತ್ತ ಗಾರ್ಗಿ
ಪಂಚಾಂಗಂ ಹಾಗೂ ವೃಂದದವರ ಮನೋಹರ ನೃತ್ಯಗಳಿಗೆ
ತಲೆದೂಗಿ `ಶಾಬ್ಬಾಷ್' ಅನ್ನದವರು ಯಾರೂ ಇರ್ಲಿಕ್ಕಿಲ್ಲ.
ಆ ಸಂಜೆಯ ಎಲ್ಲ ಕಾರ್ಯಕ್ರಮಗಳನ್ನ ನಿರೂಪಿಸಿ ಕೊಟ್ರು ಉತ್ಸಾಹೀ
ದಂಪತಿಗಳಾದ ಶುಭಾ ಮತ್ತು ಶ್ರೀನಾಥ್. ಮಕ್ಕಳು ಹಾಡಿದ
ಅಮೇರಿಕಾ ಮತ್ತ ಭಾರತದ ರಾಷ್ಟ್ರಗೀತೆಗಳೊಂದಿಗೆ ಎಲ್ಲರೂ
ಶುಭರಾತ್ರಿ ಹೇಳುತ್ತ ಬೀಳ್ಕೊಂಡ್ರು. ಇಂಥಾ ಒಂದು ಸುಂದರ
ಸಂಜೆಯನ್ನ ಸೃಷ್ಟಿಸಿದ್ದಕ್ಕ, ಭಾಳದಿನಾ ನೆನಪಿಡುವಂಥಾ ಛೆಂದನ
ಕಾರ್ಯಕ್ರಮಗಳನ್ನ ರೂಪಿಸಿದ್ದಕ್ಕ, ದೀಪಾವಳಿ ಮತ್ತ
ರಾಜ್ಯೋತ್ಸವ ಹಬ್ಬಗಳನ್ನ ಸಾವಿರಾರು ಮೈಲಿ ಕನ್ನಡನಾಡಿನಿಂದ ದೂರ
ಇರೋ ಕನ್ನಡದ ಕಂದಮ್ಮಗಳು ಒಟ್ಟಿಗೇ ಸೇರಿ ಆಚರಿಸೋ ಅವಕಾಶ
ಮಾಡಿಕೊಟ್ಟಿದ್ದಕ್ಕ ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟ ಹೆಮ್ಮೆ
ಪಡಬೇಕು. `ಎಲ್ಲಾದರು ಇರು, ಎಂತಾದರೂ ಇರು, ಎಂದೆಂದಿಗೂ ನೀ
ಕನ್ನಡವಾಗಿರು' ಅನ್ನೋ ಕವಿವಾಣೀನ ಖರೇ ಮಾಡೂದಕ್ಕ ಕನ್ನಡದ
ಋಷಿಗಳ ಆಶೀರ್ವಾದ ನಮ್ಮ ಮ್ಯಾಲೆ ಯಾವಾಗಲೂ ಇರ್ಲಿ ಅಂತ ಆಶಾ
ಮಾಡೂಣಂತ!
ಇನ್ನಷ್ಟು
ವಿದೇಶದಲ್ಲೂ ವಿಜೃಂಭಿಸುವ ಕನ್ನಡದ ದೀಪ
|