ಚಾಮುಂಡೇಶ್ವರಿ
ಕ್ಷೇತ್ರಕ್ಕೇ ಬದ್ಧ -ಸಿದ್ಧರಾಮಯ್ಯ
ಬೇರೆಡೆ ಚುನಾವಣೆಗೆ ನಿಲ್ಲುವ ಮಾತಿಲ್ಲ
ಬೆಂಗಳೂರು :
ನಾನು ಚುನಾವಣೆ ಎದುರಿಸುವುದಾದರೆ ನನ್ನ ಸ್ವಕ್ಷೇತ್ರವಾದ ಚಾಮುಂಡೇಶ್ವರಿ
ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ
ನೂತನವಾಗಿ ಸೇರ್ಪಡೆಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಕ್ಷೇತ್ರದ
ಬದಲಾಗಿ ಬೇರೆ ಕಡೆಗೆ ನಿಲ್ಲುವುದರ ಬಗ್ಗೆ ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ಅಂತಿಮ
ತೆರೆ-ಎಳೆದಿದ್ದಾರೆ.
ನೂತನವಾಗಿ
ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
``ಇತ್ತೀಚೆಗೆ ನನ್ನ ಸ್ವಕ್ಷೇತ್ರ ಬದಲಾಯಿಸಿ ಬೇರೆಡೆಗೆ ಚುನಾವಣೆಗೆ ನಿಲ್ಲುತ್ತೇನೆಂಬ
ವದಂತಿಗಳನ್ನು ಕೆಲವರು ಸೃಷ್ಟಿಸುತ್ತಿದ್ದಾರೆ. ಆದರೆ ನಾನ್ಯಾವತ್ತೂ ಅದರ ಬಗ್ಗೆ
ಚಿಂತಿಸಿದವನಲ್ಲ'' ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಹರಿಹಾಯ್ದಿದ್ದಾರೆ.
ತಾವು ಯಾವತ್ತೂ
ತಮ್ಮೆದುರು ಯಾರು ಸ್ಪರ್ಧಿಸುತ್ತಾರೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡು
ರಾಜಕಾರಣ ಮಾಡಿದವನಲ್ಲ ಎಂದು ಪ್ರಶ್ನೆಯೊಂದಕ್ಕೆ ತಮ್ಮ ಎಂದಿನ ಧಾಟಿಯಲ್ಲೇ
ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಇತ್ತೀಚಿನ ದಿನಗಳಲ್ಲಿ
ರಾಜ್ಯ ರಾಜಕಾರಣ ಕವಲು ದಾರಿಯಲ್ಲಿ ನಿಂತಿರುವ ಹಿನ್ನೆಲೆಯಲ್ಲಿ ತಾವು ಕಾಂಗ್ರೆಸ್ ಪಕ್ಷಕ್ಕೆ
ಸೇರಿರುವುದಾಗಿ ಹಾಗೂ ಇದರಿಂದ ಕೋಮುವಾದಿ ಶಕ್ತಿಗಳ ಬೆಳವಣಿಗೆಯನ್ನು
ಕುಂಠಿತಗೊಳಿಸುವುದೇ ತಮ್ಮ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಕರ್ತರ ಪ್ರಶ್ನೆಗಳ
ಸುರಿಮಳೆಯನ್ನು ಸಮರ್ಪಕವಾಗೇ ಎದುರಿಸಿದ ಸಿದ್ದರಾಮಯ್ಯ, ತಾವು ಪಕ್ಷಕ್ಕೆ ಸೇರಿರುವುದು
ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸುವುದಕ್ಕಾಗಿಯೇ ವಿನಾ ಬೇರೆಯಾವ ಕಾರಣಕ್ಕೂ ಅಲ್ಲ,
ಆದರೆ ತಾವು ಮೂಲತಃ ರಾಜಕಾರಣಿಯಾಗಿರುವುದರಿಂದ ಮಹತ್ವಾಕಾಂಕ್ಷಿಯಾಗಿದ್ದೇನೆ
ಎನ್ನುವ ಮೂಲಕ ತಾವೂ ಕೂಡ ಮುಖ್ಯಮಂತ್ರಿಯಾಗುವ ಕನಸನ್ನು ನೋಡಿದ್ದಾಗಿ ಸೂಕ್ಷ್ಮವಾಗಿ
ತಿಳಿಸಿದರು.