ಕೆಪಿಸಿಸಿ ಕಚೇರಿಯಲ್ಲಿ
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡ
ಸಂದರ್ಭದಲ್ಲಿ ಪಕ್ಷದ ಮುಖಂಡರು ಮಾತನಾಡುತ್ತಿದ್ದರು.
ಮಾಜಿ ಪ್ರಧಾನಿ
ದೇವೇಗೌಡರ ವಿರುದ್ಧವೇ ಕೇಂದ್ರೀಕೃತವಾದ ಆರೋಪಗಳ ಸುರಿಮಳೆಯನ್ನೇ
ಸುರಿಸಿದ ಮಾಜಿ ಮುಖ್ಯಮಂತ್ರಿ ಧರಂಸಿಂಗ್, ೨೦೦೪ರಲ್ಲಿ ಎಲ್ಲ ರಾಜಕೀಯ ಪಂಡಿತರ
ಲೆಕ್ಕಾಚಾರಗಳು ತಲೆಕೆಳಗಾಗಿ ಕೇಂದ್ರದಲ್ಲಿ ಸೋನಿಯಾ ಗಾಂಧಿ ನೇತೃತ್ವದ ಸರ್ಕಾರ
ಆಡಳಿತಕ್ಕೆ ಬಂದರೆ, ಇಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಬೇಕಾದಂತಹ ಪರಿಸ್ಥಿತಿ
ಉದ್ಭವವಾದ ಸನ್ನಿವೇಶವನ್ನು ಬಹಳ ಚಾಣಾಕ್ಷತನದಿಂದ ದೇವೇಗೌಡರು ಕಾಂಗ್ರೆಸ್‌ನೊಂದಿಗೆ
ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನೇ ತಮ್ಮ ಗುಲಾಮರನ್ನಾಗಿಸಿಕೊಳ್ಳಲು
ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನ ಕೈಗೂಡಿ ಬರಲಿಲ್ಲ.
``ಇದೇ ಕಾರಣದಿಂದಲೇ
ಅವರು ತಮ್ಮ ಮಗನ ಸಹಾಯದಿಂದ ಜಾತ್ಯಾತೀತ ಶಕ್ತಿಗಳನ್ನು ಒಡೆಯುವ ಮೂಲಕ
ಹಾಗೂ ಪ್ರತಿಕ್ರಿಯಾವಾದಿ ಶಕ್ತಿಗಳೊಡನೆ ಕೈಜೊಡಿಸುವ ಮೂಲಕ ಬಿಜೆಪಿಗೆ ರಾಜ್ಯದಲ್ಲಿ ಭದ್ರಸ್ಥಾನ
ಕಲ್ಪಿಸುವಲ್ಲಿ ಮಹಾ ಪಾತ್ರ ವಹಿಸಿದ್ದಾರೆ'' ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ
ಕಾರ್ಯಕರ್ತರು ದೇವೇಗೌಡರು ಮಾಡಿರುವ ಪ್ರತಿಯೊಂದು ಕುತಂತ್ರಗಳನ್ನು
ಎಳೆ-ಎಳೆಯಾಗಿ ಜನರ ಮುಂದೆ ಬಿಡಿಸಿಡುವ ಪ್ರಯತ್ನ ಮಾಡಬೇಕೆಂದು ಧರಂ ಸಿಂಗ್
ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ
ಅವರ ಸೇರ್ಪಡೆಯಿಂದಾಗಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ, ಹೀಗಾಗಿ ಪಕ್ಷದ
ಕಾರ್ಯಕರ್ತರು ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ
ಮತನಾಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಮುಖ್ಯಮಂತ್ರಿ
ಎಚ್.ಡಿ.ಕುಮಾರ ಸ್ವಾಮಿಯವರ ಮೇಲೆ ಅವರ ಸರ್ಕಾರದ ಅಂಗ ಪಕ್ಷದ ಸದಸ್ಯರೇ
ಒಬ್ಬರಾದ ಮೇಲೆ ಇನ್ನೊಬ್ಬರಂತೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿರುವಾಗ ವಿರೋಧ
ಪಕ್ಷದಲ್ಲಿರುವ ನಾವು ಸುಮ್ಮನೆ ಕೂರಲು ಹೇಗೆ ಸಾಧ್ಯ?
``ತಮ್ಮ ಸರ್ಕಾರದಲ್ಲಿರುವ
ಅಧಿಕಾರಿಗಳನ್ನು ಹಾಗೂ ಬೆಂಬಲ ಪಡೆದ ಪಕ್ಷದ ಸದಸ್ಯರನ್ನು ನಿಯಂತ್ರಿಸಲು ವಿಫಲಗೊಂಡಿರುವ
ಮುಖ್ಯಮಂತ್ರಿ ಸ್ಥಾನದಲ್ಲಿ ಏಕೆ ಮುಂದುವರೆಯಬೇಕೆಂದು'' ಖಾರವಾಗಿ ಪ್ರಶ್ನಿಸಿದ್ದಾರೆ.
ಅಧಿಕಾರಕ್ಕೆ ಬಂದ
ಕೆಲವೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪದ ಸರಮಾಲೆಯನ್ನೇ ಹೊತ್ತುಕೊಂಡು
ತಿರುಗುವ ಬದಲು ತಮ್ಮ ಸ್ಥಾನವನ್ನು ತೆರವುಗೊಳಿಸಿ ಮಧ್ಯಂತರ ಚುನಾವಣೆಯನ್ನೆದುರಿಸುವುದೇ
ಸೂಕ್ತ ಎಂದು ಅವರು ಛೇಡಿಸಿದರು.
ಗಣಿ ಲಂಚ ಪ್ರಕರಣ
ಕುರಿತಂತೆ ಸರ್ಕಾರ ನೇಮಕ ಮಾಡಿರುವ ನ್ಯಾಯಾಂಗ ತನಿಖೆಯಲ್ಲಿ ತಮ್ಮ ಪಕ್ಷ
ಯಾವತ್ತೂ ಬೆಂಬಲ ನೀಡಿಲ್ಲದಿರುವುದರಿಂದ ಯಾವುದೇ ಕಾರಣಕ್ಕೂ ಪಕ್ಷದ
ಕಾರ್ಯಕರ್ತರು ನ್ಯಾಯಾಂಗ ತನಿಖೆಯ ವಿಚಾರದಲ್ಲಿ ಸ್ವಯಂ ಪ್ರೇರಿತ ಹೇಳಿಕೆಗಳನ್ನು
ನೀಡುವಂತಿಲ್ಲ ಎಂದು ಅವರು ಆದೇಶಿಸಿದರು.