|
ದೇವೇಗೌಡರಿಗೆ ಕಾಂಗ್ರೆಸ್ ಸಮಿತಿಯ ಸವಾಲು
ಬೆಂಗಳೂರು :
ಇತ್ತೀಚಿನ ಗಣಿ ಲಂಚ ಪ್ರಕರಣ ಹಾಗೂ ಬಿಎಂಐಸಿ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ
ಪ್ರಧಾನಿ ದೇವೇಗೌಡರ ಮಗ ಹಾಗೂ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಸಾಕಷ್ಟು
ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ
ಕಾಂಗ್ರೆಸ್ ಸಮಿತಿಯು ಜಾತ್ಯಾತೀತ ಜನತಾದಳ ಮುಖಂಡ ದೇವೇಗೌಡರಿಗೆ ತಾವು
ಕೇಳಿರುವ ಹತ್ತು ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸುವಂತೆ ಪಕ್ಷದ ಮುಖಂಡರು
ಸವಾಲೆಸೆದಿದ್ದಾರೆ.
ದೇವೇಗೌಡರೇ
ಉತ್ತರಿಸುವಿರಾ? ಎಂದು ಕೇಳಿರುವ ಮುಖಂಡರು ಈ ಕೆಳಗಿನ ಹತ್ತು ಪ್ರಶ್ನೆಗಳನ್ನು
ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.
ಅವರು ಕೇಳಿರುವ ಪ್ರಶ್ನೆಗಳು
ಈ ಕೆಳಗಿನಂತಿವೆ:-
೧. ಈಗಿನ ಸಮ್ಮಿಶ್ರ ಸರ್ಕಾರದ
ಬಗ್ಗೆ ಸಮಾಧಾನವಿಲ್ಲವೆಂದಾದರೆ ಬೆಂಬಲ ವಾಪಸ್ಸು ಯಾಕೆ ಪಡೆಯುತ್ತಿಲ್ಲ?
೨. ನಿಮ್ಮ ಪಕ್ಷದ
ತತ್ವ, ಸಿದ್ಧಾಂತಕ್ಕೆ ಕಳೆದ ಚುನಾವಣೆಯಲ್ಲಿ ಜನಬೆಂಬಲ ದೊರೆಯಿತು ಎಂದು ಹೇಳುವ
ನೀವು, ಇಂದು ನಿಮ್ಮದು ಸಿದ್ಧಾಂತದ ರಾಜಕಾರಣವೋ? ಅಥವಾ ಸಮಯ ಸಾಧಕತನದ
ಅಧಿಕಾರ ದಾಹವೋ?
೩. ಬಳ್ಳಾರಿಯಲ್ಲಿ
ಅಕ್ರಮ ಸಂಪತ್ತಿನ ಮೇಲಾಟ ಎಂದು ಹೇಳುವ ನೀವು, ಸಿಬಿಐ ತನಿಖೆಯಿಂದ ಅಕ್ರಮ ಪತ್ತೆ
ಮಾಡಲು ಯಾಕೆ ಒಪ್ಪುತ್ತಿಲ್ಲ?
೪. ಕದಡಿದ ನೀರಿನಲ್ಲಿ
ಮೀನು ಹಿಡಿಯುವ ಕಾಂಗ್ರೆಸ್ ಪ್ರಯತ್ನದಲ್ಲಿ ಕೆಲವು ಬಿಜೆಪಿ ವ್ಯಕ್ತಿಗಳು ಸೇರಿದ್ದಾರೆ
ಎಂದು ಹೇಳುವ ನೀವು ಅವರ ಹೆಸರನ್ನೇಕೆ ಬಹಿರಂಗ ಪಡಿಸುತ್ತಿಲ್ಲ?
೫. ಕಾವಲು ನಾಯಿ
ಕಳ್ಳತನ ಮಾಡಿದರೆ ಹಿಡಿದು ಶಿಕ್ಷಿಸಬೇಕಾದುದು ಪ್ರತಿ ಪಕ್ಷದ ಕರ್ತವ್ಯವಲ್ಲವೇ?
೬. ಆಪಕ್ಷ- ಈಪಕ್ಷ
ಭೇದವಿಲ್ಲದೆ ಮುಖ್ಯಮಂತ್ರಿಯನ್ನು ಕಾಡುತ್ತಿರುವ ಪಕ್ಷಗಳ ಹೆಸರನ್ನೇಕೆ
ಹೇಳುತ್ತಿಲ್ಲ?
೭. ನಿಮ್ಮ ಅಂತಿಮ ಹೋರಾಟ
ಅನೈತಿಕ ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿಯೋ? ಅಥವಾ ಭ್ರಷ್ಟಾಚಾರದ ವಿರುದ್ಧವಾಗಿಯೋ?
ಅಥವಾ ಸಿದ್ಧಾಂತ ಪ್ರತಿಪಾದಿಸಲಿಕ್ಕಾಗಿಯೋ?
೮. ಐದು ದಶಕಗಳ
ಹೋರಾಟ ಎಂದು ಹೇಳುವ ನೀವು ೧೫೦ ಕೋಟಿ ಭಷ್ಟಾಚಾರದ ನೇರ ಆಪಾದನೆಗೆ ಸಿಬಿಐ ತನಿಖೆಗೆ
ಏಕೆ ಒಪ್ಪುತ್ತಿಲ್ಲ?
೯. ಹಿಂದಿನ ಸರ್ಕಾರದ
ಭಷ್ಟಾಚಾರ, ಸ್ವಜನ ಪಕ್ಷಪಾತದ ಬಗ್ಗೆ ಸಾಕಷ್ಟು ಗೊಂದಲವೆಬ್ಬಿಸಿದ ನೀವು ಈ ಸರ್ಕಾರದ
ಭ್ರಷ್ಟಾಚಾರದ ಬಗ್ಗೆ ನಿಗೂಢ ಮೌನವಹಿಸಿರುವುದೇಕೆ?
೧೦. ಭ್ರಷ್ಟಾಚಾರದ
ವಿರುದ್ಧ ನಿಮ್ಮದು ಆಯ್ದ ಹೋರಾಟವೇ? |