|
ಕಾರ್ಗಿಲ್ : ಕದನ ಕಾರ್ಮುಗಿಲಿನ ಕದಡಿದ ನೆನಪು
ಹೆಪ್ಪುಗಟ್ಟಿರುವ
ಕಹಿ ನೆನಪುಗಳಿಗೆ ಮತ್ತೆ ತಿಲಕವಿಟ್ಟು ಸ್ವಾಗತಿಸುವ ಕಾಲ.
ಕಾರ್ಗಿಲ್! ಹೆಸರೊಂದೇ
ಸಾಕು, ಎದೆಎದೆಯಲ್ಲೂ ಸಣ್ಣದೊಂದು ಕಂಪನ ಉಂಟಾಗುತ್ತದೆ. ತ್ರಿವರ್ಣವನ್ನು ಹೊದ್ದು
ಮಲಗಿರುವ ಶವಗಳ ಸಾಲು, ಭೂಮಿಯುದ್ದಕ್ಕೂ ರಕ್ತದ ಕೋಡಿಯ ಸಾಲು ಅದರ ನಡುವೆಯೂ
ಸಣ್ಣದೊಂದು ನಗು ಮಿಂಚಿ ಮರೆಯಾಗುತ್ತದೆ. ದೇಶದ ಐಕ್ಯತೆಗೆ ಮತ್ತೊಂದು ಹೆಸರು
ಮತ್ತದೇ ಕಾರ್ಗಿಲ್!
ಐವತ್ತು
ವರ್ಷಗಳಿಂದ ಕಾಶ್ಮೀರ ಸಮಸ್ಯೆ ನಿವಾರಣೆಗೆ, ಕದನ ವಿರಾಮಕ್ಕೆ ಖರ್ಚು ಮಾಡಿದ ಹಣದಲ್ಲಿ
ಹೊಸದೊಂದು ದೇಶ ಕಟ್ಟಬಹುದಿತ್ತು. ಕಾರ್ಗಿಲ್‌ಗಾಗಿ ಈವರಗೆ ಎರಡೂ ರಾಷ್ಟ್ರಗಳ ಒಟ್ಟು
೧೧೦೩ ಯೋಧರು ಪ್ರಾಣ ತೆತ್ತಿದ್ದಾರೆ. ದಿನವೊಂದಕ್ಕೆ ೧೫ ಕೋಟಿಗಳಂತೆ ೧೧೧೦ ಕೋಟಿ
ಖರ್ಚಾಗಿದೆ.
ಗುಂಡಿನ ಸದ್ದಿನಿಂದಲೇ
ದಿನ ಬೆಳಗಿಸುವ ಕಾರ್ಗಿಲ್ ಸಮಸ್ಯೆಯ ಆರಂಭವೇ ಒಂದು ದುರಂತ. ೧೯೪೭ರ ದೇಶ
ವಿಭಜನೆಯೇ ಇದಕ್ಕೆ ನಾಂದಿ. ಸಮಸ್ಯೆಯ ಮೂಲ ಕಾಶ್ಮೀರ, ಕಾರ್ಗಿಲ್ ಅಲ್ಲಿನ ಅವಿಭಾಜ್ಯ
ಅಂಗ. ಇದನ್ನು ವಶಪಡಿಸಿಕೊಳ್ಳುವುದು ಪಾಕಿಸ್ಥಾನದ ಅಗತ್ಯತೆ. ಅದನ್ನು
ಉಳಿಸಿಕೊಳ್ಳುವುದು ಭಾರತದ ಅನಿವಾರ್ಯ.
ಕದನ ಕಾಶ್ಮೀರದಲ್ಲಿ
ಕ್ಲೀಷೆಯಾಗಿಬಿಟ್ಟಿದೆ. ೧೯೪೭ರಿಂದೀಚೆಗೆ ಕಾರ್ಗಿಲ್ ಕದನಕ್ಕೆ ವಿರಾಮ ದೊರೆತಿದ್ದೇ ಇಲ್ಲ.
ಆದರೆ ಯುದ್ಧದ ಇತಿಹಾಸದ ಪುಟ ತೆರೆದರೆ ಯುದ್ಧ ಅಧಿಕೃತವಾಗಿ ನಡೆದದ್ದು ಮಾತ್ರ
ನಾಲ್ಕೇ ಬಾರಿ! ೧೯೪೮ರಲ್ಲಿ ನಡೆದ ಯುದ್ಧದಲ್ಲಿ ದೇಶ ವಿಜಯಿಯಾಯಿತೆನ್ನುವಷ್ಟರಲ್ಲಿ
ರಾಷ್ಟ್ರ ನಾಯಕರೇ ಅದಕ್ಕೆ ಮುಳುವಾದರು. ೧೯೬೫ರಲ್ಲಿ ಮತ್ತೆ ಆಕ್ರಮಿಸಿದ ಪಾಕ್
ಯೋಧರನ್ನು ಧೂಳಿಪಟಗೊಳಿಸಿ ಸಂಭ್ರಮಿಸಬೇಕೆನ್ನುವಷ್ಟರಲ್ಲಿ ಲಾಲ್ ಬಹದ್ದೂರ್
ಶಾಸ್ತ್ರಿ `ತಾಷ್ಕೆಂಟ್' ಒಪ್ಪಂದಕ್ಕೆ ಸಹಿ ಹಾಕಿ ಕಾಶ್ಮೀರವನ್ನು ಧಾರೆ ಎರೆದು ಬಿಟ್ಟರು.
ಮತ್ತೆ ೧೯೭೧ರಲ್ಲಿ ನಡೆದ
ಯುದ್ಧದಲ್ಲಿ ೯೩,೦೦೦ ಪಾಕ್ ಯೋಧರು ಭಾರತಕ್ಕೆ ಶರಣಾದರು. ತನ್ನ ಶತ್ರು ಪಡೆಯ
ಯೋಧರೊಂದಿಗೆ ಪಾಕಿಸ್ತಾನದ ಅಧಿಕಾರಿಗಳು ಶರಣಾಗತಿಗೆ ಸಹಿ ಹಾಕಿದರು. ಇದಕ್ಕಿಂತ
ಇನ್ನೇನು ಬೇಕು?
ಅಂದು ೧೯೯೯ ಮೇ
೨೬! ಕಾರ್ಗಿಲ್ ಕಣಿವೆಯಲ್ಲಿ ಯುದ್ಧದ ಕಾರ್ಮುಗಿಲು ಪಾಕಿಸ್ತಾನದ ಬಾಡಿಗೆ ಬಂಟರು ಮುಜಾಹಿದ್ದೀನ್‌ಗಳು
ಅಲ್ಲಿ ಜಮಾಯಿಸಿದಾಗ ಯೋಧರು ಜಾಗೃತರಾದರು. ದೇಶಕ್ಕೆ ದೇಶವೇ ಬಂದು ನಿಂತಿತು.
೭೪ ದಿನ ಸುಮಾರು ೧೫೦ಕಿ.ಮೀ ಯುದ್ಧಭೂಮಿಯಲ್ಲಿ ಭೀಕರ ಕದನವೇ ನಡೆದು ಹೋಯಿತು.
ಅಂತೂ ಜುಲೈ ೧೪ಕ್ಕೆ ಭಾರತ ವಿಜಯ ಸಾಧಿಸಿತು. ಯುದ್ಧ ಮುಗಿದು ಆರು
ವರ್ಷಗಳೇ ಕಳೆದಿವೆ. ಇಂದಿಗೂ ಲಷ್ಕರ್-ಇ-ತೊಯಿಬಾ ಮುಜಾಹಿದ್ದೀನ್ ಸೈನಿಕರು
ಕಾಶ್ಮೀರದ ಮುಗ್ಧ ನಾಗರೀಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಲೇ ಇದ್ದಾರೆ.
ದೇಶಕ್ಕೆ ಹೊಸ
ಇತಿಹಾಸ ಬರೆದುಹೋದ ಆ ಧೀರ ಯೋಧರನ್ನು ಇಂದು ನೆನಪಿಸಿಕೊಳ್ಳುವ ದಿನ.
ಭೂಮಿಯೊಳಗೆ ಬೆಚ್ಚನೆ ಮಲಗಿರುವ ಸಾವಿರಾರು ಯೋಧರು ಮತ್ತೆ ಹುಟ್ಟಿ ಬರಲಿ.
ಎದುರಾಗಿರುವ ಅಸಂಖ್ಯ ಸಮಸ್ಯೆಗಳಿಗೆ ಉತ್ತರವಾಗಲಿ. ನೆನಪುಗಳು ಚಿರಾಯು. |