Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಸಿಎಂ ವಿರುದ್ಧ ರೆಡ್ಡಿಯಿಂದ ಮಾನನಷ್ಟ ಮೊಕದ್ದಮೆ

ಅಮಾವಾಸ್ಯೆ ಮುಗಿದ ನಂತರ ರೆಡ್ಡಿ ವಿರುದ್ಧ ಮೊಕದ್ದಮೆ -ಸಿಎಂ

 

ಬಳ್ಳಾರಿ : ತಮ್ಮನ್ನು ಮಾನಸಿಕ ಅಸ್ವಸ್ಥ ಎಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಗೃಹಸಚಿವ ಎಂ.ಪಿ.ಪ್ರಕಾಶ್ ಹಾಗೂ ಅರಣ್ಯ ಸಚಿವ ಸಿ.ಚೆನ್ನಿಗಪ್ಪ ಅವರ ಮೇಲೆ ಭಾರತೀಯ ಜನತಾಪಕ್ಷದ ವಿಧಾನ ಪರಿಷತ್ ಸದಸ್ಯ ಜನಾರ್ಧನ ರೆಡ್ಡಿ ಸೋಮವಾರ ಸಾಯಂಕಾಲ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

 

ತಮ್ಮ ಬೆಂಬಲಿಗ ಪಡೆಯೊಂದಿಗೆ ನ್ಯಾಯಾಲಯದ ಆವರಣದಲ್ಲಿ ಸಾಯಂಕಾಲ ೪:೩೦ಕ್ಕೆ ಬಂದಿಳಿದ ರೆಡ್ಡಿ ತಮ್ಮ ವಕೀಲರಾದ ಕೆ.ವೆಂಕಟೇಶಲು ಜೊತೆ ಜೆಎಂಎಫ್‌ಸಿ-೧ ನ್ಯಾಯಾಲಯದಲ್ಲಿ ತಮ್ಮ ಅರ್ಜಿಯನ್ನು ದಾಖಲಿಸಿದರು.

 

ಗಣಿ ಲಂಚ ಪ್ರಕರಣ ಕುರಿತು ವಿಧಾನ ಪರಿಷತ್ತಿನಲ್ಲಿ ನೇರ ಆರೋಪ ಮಾಡಿ ಹೊರ ನಡೆದಿದ್ದ ರೆಡ್ಡಿ ಆಂಧ್ರ ಪ್ರದೇಶದ ಶ್ರೀಶೈಲ ಮತ್ತಿತರ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ ನೆನ್ನೆ ಮಧ್ಯಾಹ್ನ ಬಳ್ಳಾರಿಗೆ ಆಗಮಿಸಿದ ನಂತರ ಹಿರಿಯ ಅನುಭವಿ ವಕೀಲರು ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕವೇ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

 

ಅರ್ಜಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ ಅವರು ಕುಮಾರ ಸ್ವಾಮಿ ಹಾಗೂ ಅವರ ಸಹೋದ್ಯೋಗಿಗಳು ತಮ್ಮನ್ನು ಮಾನಸಿಕ ಅಸ್ವಸ್ಥ ಎಂದು ಹೀಗೆಳೆದಿದ್ದಲ್ಲದೇ ತಮ್ಮನ್ನು ಸಾರ್ವಜನಿಕರೆದುರು ಅವಹೇಳನ ಮಾಡಿದ್ದಾರೆ, ಹೀಗಾಗಿ ಇಂತಹ ಆರೋಪಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಾನನಷ್ಟ ಮೊಕದ್ದಮೆ ಹೂಡದೆ ಬೇರೆ ದಾರಿ ಇರಲಿಲ್ಲ ಎಂದರು.

 

ಇದಲ್ಲದೇ, ಗೃಹ ಸಚಿವ ಎಂ.ಪಿ.ಪ್ರಕಾಶ್ ಹಾಗೂ ಅರಣ್ಯ ಸಚಿವ ಸಿ.ಚೆನ್ನಿಗಪ್ಪ ಅವರು ಸಹ ತೀರ ಹಗುರವಾಗಿ ಮಾತನಾಡಿದ್ದಾರೆ ಹೀಗಾಗಿ ಈ ಮೂವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಬೇಕಾದಂತಹ ಪರಿಸ್ಥಿತಿ ಉದ್ಭವವಾಗಿದೆ ಎಂದು ಅವರು ತಿಳಿಸಿದರು.

 

ಗಣಿ ಲಂಚ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗಿಂತ ಸಿಬಿಐ ತನಿಖೆಯೇ ಸೂಕ್ತ ಎಂದು ಅವರು ಅಭಿಪ್ರಾಯ ಪಟ್ಟರು.

 

ಕಡೇ ಮಾತು : ತಮ್ಮ ವಿರುದ್ಧ ಲಂಚ ಆರೋಪ ಮಾಡಿದ ಜನಾರ್ದನ ರೆಡ್ಡಿ ವಿರುದ್ಧ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೂಡ ಮಾನನಷ್ಟ ಮೊಕದ್ದಮೆ ಸಲ್ಲಿಸಲಿದ್ದಾರೆ. ಆದರೆ ಅಮಾವಾಸ್ಯೆ ದಿನ ಮಾಡುವ ಕೆಲಸಕ್ಕೆ ಫಲವಿಲ್ಲ ಎಂಬ ನಂಬಿಕೆ ಪ್ರಚಲಿತವಿರುವುದರಿಂದ ಕುಮಾರಸ್ವಾಮಿ ಶ್ರಾವಣ ಆರಂಭವಾದ ಮೇಲೆ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಸಲಿದ್ದಾರಂತೆ !

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com