ಬಿಕ್ಕಟ್ಟು ನಿವಾರಿಸಲು ವರಿಷ್ಠರು ನಗರಕ್ಕೆ
ಬೆಂಗಳೂರು :
ರಾಜ್ಯ ಭಾರತೀಯ ಜನತಾ ಪಕ್ಷದಲ್ಲಿ ವಿಧಾನ ಪರಿಷತ್ ಸದಸ್ಯ ಜನಾರ್ಧನ ರೆಡ್ಡಿ ಮಾಡಿದ
ಆರೋಪದ ಹಿನ್ನೆಲೆಯಲ್ಲಿ ಉಧ್ಬವಿಸಿರುವ ಪಕ್ಷದ ಆಂತರಿಕ ಬಿಕ್ಕಟ್ಟನ್ನು ನಿವಾರಿಸಲು ವರಿಷ್ಠರು
ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಸರ್ಕಾರದ ಅಂಗ
ಪಕ್ಷಗಳಾಗಿರುವ ಭಾರತೀಯ ಜನತಾಪಕ್ಷ ಹಾಗೂ ಜಾತ್ಯಾತೀತ ಜನತಾದಳ ಮೈತ್ರಿಕೂಟ
ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಠಿಸಿರುವ `ಗಣಿ ಲಂಚ ಪ್ರಕರಣ' ಬೆಳಕಿಗೆ ಬಂದ ನಂತರ
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಹಾಗೂ ರಾಜ್ಯ ಬಿಜೆಪಿ
ಉಸ್ತುವಾರಿ ಕಾರ್ಯದರ್ಶಿ ಧಾವರ್ ಚಂದ್ ಗೆಹ್ಲೋಟ್ ಅವರು ನಗರಕ್ಕೆ ರಾಜ್ಯ
ಕಾರ್ಯಕಾರಿಣಿ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ.
ರೆಡ್ಡಿ ಅವರನ್ನು
ಅಮಾನತ್ತುಗೊಳಿಸಿರುವ ಕ್ರಮದ ಪರ ಮತ್ತು ವಿರೋಧ ಇರುವ ಎರಡೂ ಬಣಗಳ ನಡುವಿನ
ಭಿನ್ನಮತ ಈ ಸಭೆಯಲ್ಲಿ ಸ್ಫೋಟಗೊಳ್ಳುವ ಸಂಭವವಿದೆ.
ಮಿತ್ರಪಕ್ಷ ಜೆಡಿಎಸ್‌ನ್ನು
ತೃಪ್ತಿ ಪಡಿಸುತ್ತಾ ಹೋದಲ್ಲಿ ಬಳ್ಳಾರಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ರೆಡ್ಡಿ ಸಹೋದರರು
ಹಾಗೂ ಸಚಿವ ಶ್ರೀರಾಮುಲು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಪಕ್ಷದ
ವರ್ಚಸ್ಸಿಗೆ ಧಕ್ಕೆ ಬರಲಿದೆ ಎಂದು ರೆಡ್ಡಿ ಪರ ಗುಂಪು ವಾದಿಸುತ್ತಿದೆ.