ಕಳೆದ ಹಲವಾರು
ದಿನಗಳಿಂದ ಪ್ರತಿಪಕ್ಷ ಕಾಂಗ್ರೆಸ್‌ನ ಸದಸ್ಯರು `ಗಣಿಲಂಚ' ಪ್ರಕರಣವನ್ನು ಉಲ್ಲೇಖಿಸಿ
ಮಾಡುತ್ತಿರುವ ಧರಣಿಯಿಂದ ವೃಥಾ ಕಾಲಾಹರಣವಾಯಿತೇ ವಿನಃ ಯಾವುದಕ್ಕೂ ಪ್ರಯೋಜನವಾಗಲಿಲ್ಲ
ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತ
ಅಲವತ್ತುಕೊಂಡಿದ್ದಾರೆ.
ವಿಧಾನಸಭೆಯಲ್ಲಿ
ಪ್ರಸಕ್ತ ಸಾಲಿನ ಬಜೆಟ್‌ಅನ್ನು ಚರ್ಚೆ ಇಲ್ಲದೇ ಅಂಗೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು ತಮ್ಮ ನೇತೃತ್ವದಲ್ಲಿ ಸರ್ಕಾರ ರಚನೆಯಾದ ದಿನದಿಂದಲೂ ಕಾಂಗ್ರೆಸ್ ಪಕ್ಷದವರು
ಕಲಾಪ ಸರಿಯಾಗಿ ನಡೆಸಲು ಅವಕಾಶವೇ ಕೊಟ್ಟಿಲ್ಲ ಮತ್ತು ಕೇವಲ ಧರಣಿಯಲ್ಲಿಯೇ
ಹೆಚ್ಚಿನ ಸಮಯ ಕಳೆದಿದೆ ಎಂದು ಆರೋಪಿಸಿದರು.
ತೀವ್ರ ಚರ್ಚೆಗೆ
ಗ್ರಾಸವಾಗಿರುವ ಗಣಿ ಲಂಚಕ್ಕೆ ಸಂಬಂಧಿಸಿದಂತೆ ನಾವು ಸದನದಲ್ಲಿ ಉತ್ತರ ನೀಡಲು
ಸಿದ್ಧರಾಗಿದ್ದರೂ ಸಹ ಧರಣಿ ನಿರತ ಕಾಂಗ್ರೆಸ್ ಶಾಸಕರಿಂದಾಗಿ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ,
ಎಂದು ಅವರು ಟೀಕಿಸಿದರು.
"ಗಣಿ ಲಂಚ ಪ್ರಕರಣದಲ್ಲಿ
ನನಗಿಂತಲೂ ಹೆಚ್ಚಾಗಿ ಭಯಪಡುತ್ತಿರುವುದು ಕಾಂಗ್ರೆಸ್ ಪಕ್ಷ. ಯಾಕೆಂದರೆ ನನ್ನ
ಉತ್ತರದಿಂದ ಅವರ ಹುಳುಕು ಎಲ್ಲಿ ಹೊರಬೀಳುವುದೋ ಎನ್ನುವ ಭಯದಿಂದಲೇ
ಅವರು ಈ ರೀತಿ ವರ್ತಿಸುತ್ತಿದ್ದಾರೆ" ಎಂದು ಕಟಕಿಯಾಡಿದ್ದಾರೆ.