ತದಡಿ ವಿದ್ಯುತ್
ಯೋಜನೆಯಲ್ಲಿ ಬದಲಾವಣೆಯಿಲ್ಲ
ಇಂಧನ ಸಚಿವ
ರೇವಣ್ಣ ಸ್ಪಷ್ಟನೆ
ಬೆಂಗಳೂರು:
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಂಜೂರಾಗಿರುವ ಉದ್ದೇಶಿತ ನಾಲ್ಕು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ
ವಿದ್ಯುತ್ ಘಟಕವನ್ನು ತದಡಿಯಲ್ಲೇ ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ
ಎಚ್.ಡಿ.ರೇವಣ್ಣ ಸ್ಪಷ್ಟೀಕರಿಸಿದ್ದಾರೆ.
ಭವಿಷ್ಯದ ವಿದ್ಯುತ್
ಅಗತ್ಯವನ್ನು ಪೂರೈಸಬೇಕಾದರೆ ಮೊದಲು ವಿದ್ಯುತ್ ಉತ್ಪಾದನೆಗೆ ಗಮನ ಹರಿಸಬೇಕು.
ಉದ್ದೇಶಿತ ತದಡಿ ಯೋಜನೆಗೆ ಹಲವು ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ವಿರೋಧವಿದ್ದರೂ
ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು. ಯೋಜನೆಯನ್ನು
ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸದನದಲ್ಲಿ
ಅವರು ಹೇಳಿದ್ದಾರೆ.
ಕೆ.ಪ್ರತಾಪ್ ಚಂದ್ರ
ಶೆಟ್ಟಿ ಹಾಗೂ ಬಿ.ಎಂ.ಡಿಸೋಜಾ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು `ಪವನ' ಅಂದರೆ
ಗಾಳಿ ವಿದ್ಯುತ್ ಉತ್ಪಾದನೆಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಒಟ್ಟು
೧೫೦೦ ಮೆ.ವ್ಯಾ. ಪವನ ವಿದ್ಯುತ್ ಉತ್ಪಾದನೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು.
ರಾಜ್ಯದ ಐದು
ಜಿಲ್ಲೆಗಳಲ್ಲಿ ಈ ಯೋಜನೆ ಆರಂಭವಾಗಲಿದ್ದು, ರಾಜ್ಯದಲ್ಲಿರುವ ೭೦೩ ಗಾಳಿಯಂತ್ರಗಳಿಂದ
ಒಟ್ಟು ೯೧೦.೯೯೨ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಇದರ ಒಟ್ಟು ಸಾಮರ್ಥ್ಯ
೫೯೪.೭೪ ಮೆ.ವ್ಯಾ ಎಂದು ಅವರು ತಿಳಿಸಿದರು.
ಪವನ ಶಕ್ತಿ
ಚಟುವಟಿಕೆ ರಾಜ್ಯದ ೨೩ ಜಿಲ್ಲೆಗಳಲ್ಲಿ ಜಾರಿಯಾಗಲಿದ್ದು, ಒಟ್ಟು ೧೬ ಜಿಲ್ಲೆಗಳಲ್ಲಿ ಈ
ಚಟುವಟಿಕೆ ಶೀಘ್ರವಾಗಿ ಆಂಭಗೊಳ್ಳಲಿದೆ. ಆದರೆ ವಿದ್ಯುತ್ ಕೇಂದ್ರದಿಂದ ಖರೀದಿಸುವ ವಿದ್ಯುತ್
ಪ್ರತಿ ಯೂನಿಟ್ ಲೆಕ್ಕದಲ್ಲಿ ಬೆಲೆ ನಿಗದಿಯನ್ನು ಸರ್ಕಾರ ಮಾಡುತ್ತಿಲ್ಲ ಎಂದರು.