೧೫, ೦೦೦ ಸಸಿಗಳ ನೆಡಲು ಮೆಟ್ರೋ ಯೋಜನೆ
ಬೆಂಗಳೂರು: ಮೆಟ್ರೋ
ಯೋಜನೆಗಾಗಿ ನಗರದಲ್ಲಿ ಸಾಕಷ್ಟು ಮರಗಳನ್ನು ಕತ್ತರಿಸಬೇಕಾಗಿರುವುದರಿಂದ, ಮೆಟ್ರೋಯೋಜನೆಯ
ನಂತರ ಸುಮಾರು ೧೫,೦೦೦ ಕ್ಕೂ ಹೆಚ್ಚು ಸಸಿ ನೆಡುವುದಕ್ಕೆ ಅರಣ್ಯ ಇಲಾಖೆ,
ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನೆಯನ್ನು
ರೂಪಿಸಿದೆ.
ಇದಕ್ಕೂ ಮುನ್ನ
ಮರಗಳ ಮಾಹಿತಿ ಸಂಗ್ರಹ ಕಾರ್‍ಯ ನಡೆಯಲಿದೆ. ಅಲ್ಲದೆ ಕತ್ತರಿಸಲಿರುವ ಕೆಲ
ಮರಗಳ ವಿಶೇಷತೆ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸವನ್ನು ಒಂದು ತಿಂಗಳಲ್ಲಿ ಮುಗಿಸಲಾಗುವುದು
ಎಂದು ಬೆಮಪಾ ಅಧಿಕಾರಿ ಕೃಷ್ಣ ಉಡಪಾಡಿ ಹೇಳಿದ್ದಾರೆ. ಇದಕ್ಕಾಗಿ ೮ ಲಕ್ಷ ರೂ. ಮಂಜೂರು
ಮಾಡಲಾಗಿದೆ.
ಅಂಜನಾಪುರ ಬಿಡಿಎ ಬಡಾವಣೆಯಲ್ಲಿ
ಸಸಿ ನೆಡುವ ಕಾರ್ಯ ಪ್ರಾರಂಭಿಸಲಾಗುವುದು. ರಸ್ತೆ ಬದಿ, ಶಾಲಾ ಆವರಣ ಮುಂತಾದೆಡೆ
ಸಸಿ ನೆಡಲಾಗುವುದು.
ಮೆಟ್ರೋ ಯೋಜನೆಗೋಸ್ಕರ
ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನಲ್ಲಿ ಕತ್ತರಿಸಲಾಗುವ ಮರಗಳ ಸಂಖ್ಯೆ ಹೀಗಿದೆ :
ಎಂಜಿ ರಸ್ತೆಯಲ್ಲಿ ೮೨
ಮರಗಳು, ಸಿಎಂಹೆಚ್ ರಸ್ತೆಯಲ್ಲಿ ೭೨ ಮರಗಳು, ಉತ್ತರ ಹಾಗೂ ದಕ್ಷಿಣ ಕಾರಿಡಾರ್‌ನ
ಕುವೆಂಪು ರಸ್ತೆಯಲ್ಲಿ ೫೭ ಮರಗಳು ಹಾಗೂ ಕೆಆರ್ ರಸ್ತೆಯಲ್ಲಿ ೧೩೨ ಮರಗಳನ್ನು
ಕತ್ತರಿಸಲಾಗುವುದು. ಸಸಿ ನೆಡುವ ಕಾರ್ಯವನ್ನು ಸೆಪ್ಟಂಬರ್ ಒಳಗೆ ಮುಗಿಸಲಾಗುವುದು
ಎಂದು ಬೆಮಪಾ ಅಧಿಕಾರಿಗಳು ತಿಳಿಸಿದ್ದಾರೆ.