ತಂಪುಪಾನೀಯ ಮಾರಾಟದಲ್ಲಿಶೇ೬೦ರಷ್ಟು
ಇಳಿಕೆ
ಹಂಚಿಕೆದಾರರಿಗೆ ನಷ್ಟ
ನವದೆಹಲಿ : ಲಘು
ಪಾನೀಯಗಳಲ್ಲಿ ಕೀಟನಾಶಕ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿದೇಶದಾದ್ಯಂತ
ತಂಪು ಪಾನೀಯ ಮಾರಾಟದಲ್ಲಿ ಶೇ.೧೫ ರಿಂದ ಶೇ. ೬೦ ರಷ್ಟು ಇಳಿಮುಖ ಕಂಡಿದೆ.
ಕಳೆದ ಮೂರು
ದಿನಗಳಿಂದ ತಂಪು ಪೇಯದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವ ವಿಜ್ಞಾನ ಹಾಗೂ
ಪರಿಸರ ಕೇಂದ್ರದ ವಿಸ್ತೃತ ತಾಜಾ ವರದಿಯಿಂದಾಗಿ ತಮ್ಮ ವ್ಯಾಪಾರದ ಮೇಲೆ ಗಂಭೀರ
ಸ್ವರೂಪದ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ತಂಪು ಪೇಯ
ತಯಾರಕರುಗಳ ಹಂಚಿಕೆದಾರರು ತಮ್ಮ ಸಂಸ್ಥೆಗಳಿಗೆ ತಿಳಿಸಿದ್ದಾರೆ.
`ವಿವಾದವನ್ನು ಒಂದೇ
ಬಾರಿಗೆ ಬಗೆಹರಿಸಿದರೆ ತಮ್ಮತಮ್ಮ ಸಂಸ್ಥೆಗಳ ವ್ಯಾಪಾರಕ್ಕೆ ಸೂಕ್ತ ಪರಿಸರ ಕಲ್ಪಿಸಿಕೊಟ್ಟಂತಾಗುತ್ತದೆ'
ಎಂದು ಹಂಚಿಕೆದಾರರು ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.
ಹಂಚಿಕೆದಾರರ ಮನವಿ
ಪತ್ರಕ್ಕೆ ಸೂಕ್ತ ಉತ್ತರ ನೀಡುವ ಮುನ್ನವೇ, ಸುಪ್ರೀಂ ಕೋರ್ಟ್ ನೀಡಿರುವ ತಂಪು
ಪೇಯಗಳಲ್ಲಿ ಸೇರಿಸಲಾಗುವ ಎಲ್ಲ ತರಹದ ಪದಾರ್ಥಗಳನ್ನು ನ್ಯಾಯಾಲಯದ
ಎದುರು ಬಹಿರಂಗ ಪಡಿಸಬೇಕೆಂದು ಆದೇಶಿಸಿ ನೀಡಿರುವ ನೋಟಿಸ್‌ನಿಂದಾಗಿ ಲಘು ಪೇಯ
ತಯಾರಕ ಸಂಸ್ಥೆಗಳು ಇನ್ನಷ್ಟು ಕಂಗಾಲಾಗಿವೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ
ಲಘು ಪೇಯ ತಯಾರಕ ಸಂಸ್ಥೆಗಳ ಅಧಿಕಾರಿಗಳನ್ನು ಸಂಪರ್ಕಿಸಿದಾಗ ವಿವಾದದ ಬಗ್ಗೆ
ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಲ್ಲದೇ, ಲಘು ಪೇಯಗಳ ಮಾರಾಟ ಇಳಿಮುಖ
ಆಗಿರುವುದಕ್ಕೆ ಪ್ರಮುಖ ಕಾರಣ ಋತುಗಳ ಬದಲಾವಣೆಯಷ್ಟೇ ಎಂದು
ಸಮರ್ಥಿಸಿಕೊಂಡಿದ್ದಾರೆ.