|
ಬಳ್ಳಾರಿಯಲ್ಲಿ ಸುಷ್ಮಾರಿಂದ
ವರಮಹಾಲಕ್ಷ್ಮಿಪೂಜೆ
ಪೂಜಾ ಕಾರ್‍ಯಕ್ರಮದಲ್ಲಿ ಜನಾರ್ದನ ರೆಡ್ಡಿ ಹಾಜರು
ಬಳ್ಳಾರಿ : ಮಾಜಿ ಸಚಿವೆ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಶುಕ್ರವಾರ ಬಳ್ಳಾರಿಯ ಡಾ. ಬಿ.
ಕೆ. ಶ್ರೀನಿವಾಸಮೂರ್ತಿಯವರ ನಿವಾಸದಲ್ಲಿ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಷ್ಮಾ ರಾಜ್ಯದ ಸಮ್ಮಿಶ್ರ
ಸರಕಾರದಲ್ಲಿ ಅಪಸ್ವರವಾಗಿ ಪರಿಣಮಿಸಿರುವ ಗಣಿಲಂಚ ಪ್ರಕರಣ ಇನ್ನೆರಡು ದಿನಗಳಲ್ಲಿ
ಬಗೆಹರಿಯಲಿದೆ. ಹಿರಿಯ ನಾಯಕರೊಂದಿಗೆ ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು
ಎಂದು ಭರವಸೆ ನೀಡಿದ್ದಾರೆ.
ಕಳೆದ ಏಳು ವರ್ಷಗಳಿಂದ ವರಮಹಾಲಕ್ಷ್ಮಿ ವ್ರತ ಪೂಜೆಯನ್ನು ಬಳ್ಳಾರಿಯಲ್ಲಿ
ಆಚರಿಸುತ್ತಾ ಬಂದಿರುವ ಸುಷ್ಮಾ ಸ್ವರಾಜ್ ಈ ಬಾರಿಯೂ ಬಳ್ಳಾರಿಗೆ ಆಗಮಿಸುವ ಮೂಲಕ ಮಾತು
ಉಳಿಸಿಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಆಗಮಿಸಿದ ಸುಷ್ಮಾ, ಲಕ್ಷ್ಮೀ ದೇವಿಗೆ
ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಅರವಿಂದ ಲಿಂಬಾವಳಿಯವರ ಜೊತೆಗೆ ಅಮಾನತುಗೊಂಡಿರುವ
ಬಿಜೆಪಿ ಸಚಿವ ಜನಾರ್ದನ ರೆಡ್ಡಿ ಕೂಡ ಹಾಜರಿದ್ದುದು ಎಲ್ಲರ ಗಮನಸೆಳೆಯುವಂತಿತ್ತು.
೧೯೯೯ರ ಶ್ರಾವಣ ಮಾಸದಲ್ಲಿ ಬಳ್ಳಾರಿಯಲ್ಲಿ ನಡೆದ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್,
ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ವರ ಮಹಾಲಕ್ಷ್ಮೀ ಪೂಜೆಯನ್ನು
ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲೇ ನಡೆಸಿದ್ದು, ಚುನಾವಣೆಯಲ್ಲಿ ತಾನು ಸೋತರೂ,
ಗೆದ್ದರೂ ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಯಲ್ಲಿ ಬಳ್ಳಾರಿಯಲ್ಲೇ ನಡೆಸುವುದಾಗಿ ಮಾತುಕೊಟ್ಟಿದ್ದರು. |