|
ಆಸ್ತಿ
ತನಿಖೆ ಎದುರಿಸಲು ಎಚ್.ಡಿ.ರೇವಣ್ಣ ಸಿದ್ಧ
ಬೆಂಗಳೂರು : ತಮ್ಮ ಕುಟುಂಬದ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ
ಕಾಂಗ್ರೆಸ್ ಮಾಡಿರುವ ಟೀಕೆಗೆ ಅಸ್ಪಷ್ಟವಾಗಿ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಹಾಗೂ
ಇಂಧನ ಖಾತೆ ಸಚಿವ ಎಚ್.ಡಿ.ರೇವಣ್ಣ ತಾವೂ ಕೂಡ ಬೇರೆಯವರೆಲ್ಲರಂತೆಯೇ
ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಸೇರಿದಂತೆ ಮಾಜಿ ಪ್ರಧಾನಿ
ದೇವೇಗೌಡರ ಕುಟುಂಬದ ಸದಸ್ಯರು ವೈಟ್‌ಫೀಲ್ಡ್ ಬಳಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ
ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಮಾಡಿದ ಆರೋಪಗಳಿಗೆ ನೇರವಾಗಿ
ಸ್ಪಂದಿಸದೇ ``ನಾನಂತೂ ನನ್ನೆಲ್ಲ ಆಸ್ತಿಗಳ ವಿವರವನ್ನು ಪ್ರತಿವರ್ಷ ಲೋಕಾಯುಕ್ತರ
ಎದುರು ಸಲ್ಲಿಸುತ್ತಿದ್ದೇನೆ, ಹೀಗಾಗಿ ನನಗೇನು ಯಾವುದೇ ತನಿಖೆ ಕುರಿತಂತೆ ಹಿಂಜರಿಕೆಯೂ
ಇಲ್ಲ, ಹೆದರಿಕೆಯೂ ಇಲ್ಲ'' ಎಂದು ಹೇಳಿರುವ ರೇವಣ್ಣ ಅದೇ ಮಾತನ್ನು ತಮ್ಮ
ಕುಟುಂಬದ ಇತರೆ ಸದಸ್ಯರ ಬಗ್ಗೆ ಹೇಳಲಿಲ್ಲ.

``ವಿಧಾನ ಮಂಡಲದ ಅಧಿವೇಶನ ನಡೆದಾಗ ಏನನ್ನೂ ಹೇಳದ
ಪ್ರತಿಪಕ್ಷದ ನಾಯಕರು ಈಗೆಲ್ಲ ಒಂದಾದ ಮೇಲೆ ಇನ್ನೊಂದರಂತೆ ಆರೋಪ ಮಾಡುತ್ತಿದ್ದಾರೆ.
ವಿಧಾನ ಸಭೆಯಂತಹ ಪರಮೋಚ್ಛ ಸಂಸ್ಥೆ ಬೇರೆ ಯಾವುದಾದರೂ ಇದೆಯೆ ಈ ದೇಶದಲ್ಲಿ?
ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. |