ಗಡಿ ವಿವಾದ: ಮಹಾರಾಷ್ಟ್ರಕ್ಕೆ ಹಿನ್ನಡೆ
ಬೆಂಗಳೂರು: ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ನಡುವಿನ
ಗಡಿ ವಿವಾದಕ್ಕೆ ಕೇಂದ್ರ ಸರ್ಕಾರದ ನಿರ್ಣಯದಿಂದ ಹೊಸ ತಿರುವು
ಸಿಕ್ಕಿದೆ. ಮಹಾರಾಷ್ಟ್ರದ ವಿಲಾಸರಾವ್ ದೇಶ್‌ಮುಖ್ ಸರ್ಕಾರ ಕೇಂದ್ರ ಸರ್ಕಾರವನ್ನು
ಗಡಿವಿವಾದ ಬಗೆಹರಿಸಲು ಮಧ್ಯವರ್ತಿಯಾಗುವಂತೆ ಕೋರಿತ್ತು.
ಆದರೆ ಕೇಂದ್ರವು ಇದಕ್ಕೆ ಸ್ಪಷ್ಟ ನಕಾರವನ್ನು ಸೂಚಿಸಿದೆ ಮತ್ತು
ಪರಸ್ಪರ ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು
ಹೇಳಿದೆ.
ಕರ್ನಾಟಕ ರಾಜ್ಯದಲ್ಲಿ ಮರಾಠಿಗರಿಗೆ ಅನ್ಯಾಯವಾಗುತ್ತಿದೆ ಹಾಗೂ ಅಧಿಕ
ಮರಾಠಿಗರಿರುವ ಪ್ರಾಂತ್ಯವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು
ಎಂದು ಕೇಂದ್ರ ಸರ್ಕಾರದ ಮಾಜಿ ಮಂತ್ರಿ ಜಿ. ಬಿ. ಪಾಟೀಲ್
ಹೇಳಿದ್ದರು. ಭಾಷಾವಾರು ರಾಜ್ಯ ವಿಭಜನೆಯಂತೆ ಒಂದೇ ಭಾಷೆಯ
ಅಧಿಕ ಜನರಿರುವ ಪಟ್ಟಣ, ಹಳ್ಳಿಗಳನ್ನೂ ಗಣನೆಗೆ
ತೆಗೆದುಕೊಳ್ಳಬೇಕು ಎಂದು ಮಹಾರಾಷ್ಟ್ರದ ವಾದಿಸಿತ್ತು.
ಕೇಂದ್ರ ಗೃಹ ಸಚಿವಾಲಯ ಈ ಮೇಲಿನ ವಾದಗಳನ್ನು ತಿರಸ್ಕರಿಸಿ ಸರ್ವೋಚ್ಚ
ನ್ಯಾಯಲಯಕ್ಕೆ ಅಫಿಡವಿಟ್ ಸಲ್ಲಿಸಿದೆ.
ಮಹಾರಾಷ್ಟ್ರವು ತನ್ನ ಯಾವುದೇ ವಾದಕ್ಕೆ ಸಮರ್ಥನೀಯವಾದ
ದಾಖಲೆಗಳನ್ನು ಒದಗಿಸಿಲ್ಲ ಮತ್ತು ವಿಳಂಬವಾಗಿ ದೂರು ನೀಡಿದೆ. ಮಹಾರಾಷ್ಟ್ರದ
ಕೋರಿಕೆ ಪರಿಶೀಲನೆಗೆ ಅರ್ಹವಲ್ಲ ಎಂದು ಅಫಿಡವಿಟ್‌ನಲ್ಲಿ ವಿವಸಲಾಗಿದೆ.
ಕೇಂದ್ರದ ನಿಲುವಿಗೆ ರಾಜ್ಯ ಸಂತಸ ವ್ಯಕ್ತಪಡಿಸಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ
ದೇಶಮುಖ್ ಕಾನೂನು ರೀತಿಯಲ್ಲಿ ಪ್ರತಿಭಟನೆ ಮುಂದುವರೆಯುತ್ತದೆ
ಎಂದಿದ್ದಾರೆ.