Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 29 August 2006 04:35 PM

ರಕ್ಷಣಾ ವೇದಿಕೆ: ಸ್ವಾಭಿಮಾನಿ ಕನ್ನಡಿಗರ ಸಮಾವೇಶ ವರದಿ

ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ಒಂದಾದ ಬಳ್ಳಾರಿಯಲ್ಲಿ ಆಗಸ್ಟ್ ತಿಂಗಳ ೧೯ ಮತ್ತು ೨೦ರಂದು ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಕನ್ನಡಿಗರ ಐದನೇ ಸಮಾವೇಶವು ಅಭೂತಪೂರ್ವವಾಗಿತ್ತು. ಬಳ್ಳಾರಿಯ ಇತಿಹಾಸದಲ್ಲೇ ಇದು ಬೃಹತ್ ಸಮಾರಂಭವಾಗಿತ್ತು. ನಾಡಿನ ಮೂಲೆಮೂಲೆಗಳ ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚುತ್ತಾ, ಕನ್ನಡ - ಕನ್ನಡಿಗ - ಕರ್ನಾಟಕದ ಏಳಿಗೆಯ ಸಂಕಲ್ಪದ ಕಂಕಣ ಕಟ್ಟುತ್ತಾ ಕನ್ನಡಿಗರಲ್ಲಿ ಹೊಸ ಹುರುಪು ತುಂಬುತ್ತಿರುವ ರಕ್ಷಣಾ ವೇದಿಕೆ ಸಮಾವೇಶವನ್ನು ಆಯೋಜಿಸಿತ್ತು.

ಬಳ್ಳಾರಿ ಜಿಲ್ಲೆ - ಕನ್ನಡಿಗರ ಸರ್ವಕಾಲಿಕ ಉತ್ಕೃಷ್ಟತೆಯ ಪ್ರತೀಕವಾದ, ಇಡಿಯ ದಕ್ಷಿಣ ಭಾರತವನ್ನು ಪರಕೀಯರ ದಾಳಿಯಿಂದ ಮೂರು ದಶಕಗಳ ಕಾಲ ಸಂರಕ್ಷಿಸಿದ, ರಾಷ್ಟ್ರೀಯತೆಯ ಉಜ್ವಲ ದೀಪ ಬೆಳಗಿದ ಅನೇಕ ಸಾಹಸಿ ಸಾಮ್ರಾಜ್ಯ ಮತ್ತು ಹೋರಾಟಗಾರರಿಗೆ ಸ್ಫೂರ್ತಿಯ ಸೆಲೆಯಾದ, ಧಾರ್ಮಿಕ-ಅಧ್ಯಾತ್ಮಿಕ-ಸೈನಿಕ- ತಂತ್ರಜ್ಞಾನಗಳ ಉನ್ನತ ಸಾಧನೆಯ ತಾಣವಾದ, ಶ್ರೀ ಕೃಷ್ಣದೇವರಾಯನಂತಹ ಧೀರೋದ್ಧಾತ್ತ ದೊರೆಗಳ ಬೀಡಾದ ವಿಜಯನಗರ ಸಾಮ್ರಾಜ್ಯದ ಮತ್ತು ಅದಕ್ಕೆಲ್ಲ ಸಾಕ್ಷಿಯಾಗಿ ನಿಂತಿರುವ ಹಂಪಿಯ ತವರು. ಕರ್ನಾಟಕದ ಏಕೀಕರಣವಾಗುವ ಮುನ್ನಿನಿಂದಲೂ ನೆರೆಯ ಆಂಧ್ರದ ಕೈವಶವಾಗುವ ಭೀತಿಯಲ್ಲೇ ಇದ್ದು, ಕನ್ನಡದ ಸಾರ್ವಭೌಮತ್ವಕ್ಕೆ ಕುಂದುಂಟಾಗುವಂತಹ ಘಟನಾವಳಿಗಳಿಗೆ ಮೂಕಸಾಕ್ಷಿಯಾಗಿ ನಿಂತ ಬಳ್ಳಾರಿಯ ಕನ್ನಡಿಗರಲ್ಲಿ ಸ್ವಾಭಿಮಾನದ ಜಾಗೃತಿ, ಇಡಿಯ ನಾಡು ನಿಮ್ಮೊಂದಿಗಿದೆ ಎನ್ನುವ ಭರವಸೆ ನೀಡುತ್ತಾ, ಅದೇ ಸಮಯದಲ್ಲಿ ಕನ್ನಡ ದ್ರೋಹಿ ಕೆಲಸಗಳಲ್ಲಿ ತೊಡಗುವ ವಿಚ್ಚಿದ್ರಕಾರಿಗಳಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಈ ಸಮಾವೇಶ ಅತ್ಯಂತ ಅರ್ಥಪೂರ್ಣವಾಗಿಯೂ ಪರಿಣಾಮಕಾರಿಯೂ ಆಗಿತ್ತು.

ಬಳ್ಳಾರಿಯ ನಾಡದೇವತೆ ಕನಕ ದುರ್ಗಮ್ಮನ ಗುಡಿಯ ಪ್ರಾಂಗಣದಿಂದ ಬೆಳಗ್ಗೆ ೧೧:೦೦ ಗಂಟೆಗೆ ಕನ್ನಡಿಗರ ಸ್ವಾಭಿಮಾನಿ ಜಾಥ ಆರಂಭವಾಯಿತು. ಬಳ್ಳಾರಿಯ ಲೋಕಸಭಾ ಸದಸ್ಯ ಕರುಣಾಕರ ರೆಡ್ಡಿ ಈ ಜಾಥಕ್ಕೆ ಹಸಿರು ನಿಶಾನೆ ತೋರಿದರು. ಇಡಿಯ ಊರಿನ ತುಂಬ ಕೆಂಪು, ಹಳದಿ ಬಾವುಟಗಳ ತೋರಣ ಕಂಗೊಳಿಸುತ್ತಿತ್ತು. ನಾಡಿನ ನಾನಾ ಪ್ರಕಾರದ ಜಾನಪದ ನೃತ್ಯಗಳು ಜಾಥಕ್ಕೆ ಮೆರುಗು ತಂದವು. ಸುಮಾರು ಮೂರು ತಾಸುಗಳ ಸಮಯ, ಸಾವಿರಾರು ಕನ್ನಡಿಗರು ಸಾಗಿದ ಜಾಥ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಿತ್ತು. ಕನ್ನಡ ಪರ ಘೋಷಣೆಗಳು ಬಳ್ಳಾರಿಯ ಬೀದಿ ಬೀದಿಗಳಲ್ಲಿ ಮೊಳಗಿದವು. ಕನ್ನಡ ಕಣ್ಮಣಿ ಡಾ. ರಾಜಕುಮಾರ್ ಹೆಸರಿನ ವೇದಿಕೆಗೆ ಹಂಪೆಯ ವಿರೂಪಾಕ್ಷ ದೇಗುಲದ ಮಾದರಿಯ ದ್ವಾರ ಸ್ವಾಗತ ಕೋರುತ್ತಿತ್ತು.

ಬೆಳಗಿನ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡರು ಪ್ರಾಸ್ತಾವಿಕ ಭಾಷಣ ಮಾಡಿದರು. ತಮ್ಮ ಕಂಚಿನ ಕಂಠದ, ಸ್ಪೂರ್ತಿದಾಯಕವಾದ ನುಡಿಗಳಲ್ಲಿ ಪರಭಾಷಿಕರು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯಲೇಬೇಕೆಂದು ಆಗ್ರಹಿಸಿದರು. ನಾಡು ನುಡಿಯ ರಕ್ಷಣೆ ಮಾಡುವಲ್ಲಿ ಹಿಂದೇಟು ಹಾಕುವ ಜನಪ್ರತಿನಿಧಿಗಳಿಗೆ ನೇರ ಎಚ್ಚರಿಕೆ ನೀಡಿದ ಗೌಡರು ಕನ್ನಡಿಗರ ಸೌಮ್ಯ ಸ್ವಭಾವದ ದುರುಪಯೋಗಕ್ಕೆ ಯತ್ನಿಸಿದರೆ ತಕ್ಕ ಶಾಸ್ತಿಯಾದೀತೆಂದು ಗುಡುಗಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧಲಿಂಗಯ್ಯನವರು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುತ್ತಾ ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸಿದರು. ಬಳ್ಳಾರಿ ಜಿಲ್ಲೆಯ ಅನೇಕ ಹಿರಿಯರನ್ನು, ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಲಸಿಗರು ಮುಖ್ಯವಾಹಿನಿಯಲ್ಲಿ ಬೆರೆಯಲೇಬೇಕೆಂದು ಕರುಣಾಕರ ರೆಡ್ಡಿಯವರು ನುಡಿದರು. ಇದೇ ಸಂದರ್ಭದಲ್ಲಿ ಸೊಂಡೂರು ವಿರಕ್ತ ಮಠದ ಸ್ವಾಮಿಗಳು ಆಶೀರ್ವಚನ ನೀಡಿದರು. ಅಮೇರಿಕದ ಅಕ್ಕ ಕನ್ನಡ ಕೂಟದ ಪ್ರಮುಖರಾದ ಅಮರನಾಥ ಗೌಡರನ್ನೂ ಈ ಸಂದರ್ಭದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.

ಮಧ್ಯಾಹ್ನ ಆಯೋಜಿಸಲಾಗಿದ್ದ ವಿಚಾರ ಸಂಕಿರಣ, ಸಭಿಕರಲ್ಲಿ ಚಿಂತನೆಯ ಹೊಸ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಯಿತು. ಸವಿಗನ್ನಡ ಬಳಗದ ರಾಜಕುಮಾರ್‌ರವರು ಹಿಂದಿ ಹೇರಿಕೆಯ ನಾನಾ ರೂಪಗಳು, ವಿಧಾನಗಳ ಬಗ್ಗೆ, ಕೇಂದ್ರ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಒಂದು ಭಾಷೆಯ ಪರವಾಗಿ ತೋರುತ್ತಿರುವ ಪಕ್ಷಪಾತತನಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಶಾಲಾ ಹಂತದಿಂದಲೇ ವ್ಯವಸ್ಥಿತವಾಗಿ ಹಿಂದಿ ಹೇರುತ್ತಿರುವ ಬಗೆಯನ್ನು ಗುರುತಿಸಿ, ಈ ದುರಾಚಾರವನ್ನು ವಿರೋಧಿಸದಿದ್ದರೆ ಕನ್ನಡ ಹೇಗೆ ಸರ್ವನಾಶವಾಗುತ್ತದೆಯೆಂದು ವಿವರಿಸಿದರು. ನಾಡಿನ ಜನಪದ, ಸಂಸ್ಕೃತಿಯ ಉಳಿವಿನಲ್ಲಿ ಮಹಿಳೆಯ ಪಾತ್ರದ ಬಗ್ಗೆ ಪ್ರತಿಭಾ ನಂದಕುಮಾರ್, ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನ ವಿಳಂಬಕ್ಕೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯ ಬಗ್ಗೆ ಮೃತ್ಯುಂಜಯ ರುಮಾಲೆಯವರು, ರಾಜ್ಯದ ಅಖಂಡತೆಯನ್ನು ಪ್ರಶ್ನಿಸುತ್ತಿರುವ ಗಡಿ ಸಮಸ್ಯೆಗಳ ಕುರಿತು ಕುಂ. ವೀರಭದ್ರಪ್ಪನವರು, ಜಾಗತೀಕರಣದ ಹಿನ್ನಲೆಯಲ್ಲಿ ರೈತ ಕನ್ನಡ ಕಾರ್ಮಿಕನ ಉಳಿವಿನ ಬಗ್ಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ರವರುಗಳು ಸಭಿಕರ ಮನ ಮುಟ್ಟುವಂತೆ ವಿಷಯ ಮಂಡನೆ ಮಾಡಿದರು.

ಸಂಜೆಯ ಸಮಾರೋಪ ಸಮಾರಂಭಕ್ಕೆ ಶಾಸಕರುಗಳಾದ ಶ್ರೀರಾಮುಲು, ಜನಾರ್ದನರೆಡ್ಡಿ, ಕೆ.ಎಸ್.ಎಲ್ ಸ್ವಾಮಿ . . ಮುಂತಾದ ಗಣ್ಯರು ಆಗಮಿಸಿದ್ದರು. ಜೀವಮಾನದ ಕನ್ನಡ ಸಾಧನೆಗಾಗಿ ಹಿರಿಯರಾದ, ಬೆಳಗಾವಿ ನಗರ ಪಾಲಿಕೆಯ ಮೊದಲ ಕನ್ನಡ ಮೇಯರ್ ಆಗಿದ್ದಂತಹ ಸಿದ್ಧನಗೌಡ. ಚ. ಪಾಟೀಲರನ್ನು ಸ್ವಾಭಿಮಾನಿ ಕನ್ನಡಿಗ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಪಾಟೀಲರು ಮತ್ತೊಮ್ಮೆ ಕನ್ನಡದ ಮೇಯರ್‌ಗಳು ಬೆಳಗಾವಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ನೋಡಬೇಕೆನ್ನುವುದೇ ತಮ್ಮ ಜೀವಮಾನದ ಆಶಯ ಎಂದು ನುಡಿದು ನಾಡಿನ ಸಮಸ್ತ ಕನ್ನಡಿಗರ ಜವಾಬ್ದಾರಿಯನ್ನು ನೆನಪು ಮಾಡಿಕೊಟ್ಟರು.

ಕರ್ನಾಟಕ ರಕ್ಷಣಾ ವೇದಿಕೆಯ ಈ ಸಮಾರಂಭಕ್ಕೆ ನಾಡಿನ ಮೂಲೆ ಮೂಲೆಗಳಿಂದ ಕನ್ನಡ ಸೋದರರು ಆಗಮಿಸಿದ್ದು, ಗಡಿ ಪ್ರದೇಶದ ಬಳ್ಳಾರಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸುವಲ್ಲಿ ಯಶಸ್ವಿಯಾಯಿತು. ಕರ್ನಾಟಕ ರಕ್ಷಣಾ ವೇದಿಕೆ ನಾಡು - ನುಡಿಯ ರಕ್ಷಣೆಯೆಡೆಗಿನ ತನ್ನ ಬದ್ಧತೆ, ಸಾಮರ್ಥ್ಯಗಳನ್ನು ಈ ಸಮಾವೇಶದ ಮೂಲಕ ಮತ್ತೊಮ್ಮೆ ಪ್ರಕಟಿಸಿತು. ಕನ್ನಡಿಗರು ಸಂಘಟಿತರಾದರೆ ನಮ್ಮ ನಾಡನ್ನು ಸ್ವರ್ಗ ಸದೃಶಗೊಳಿಸುವುದು ಸಾಧ್ಯವೆಂಬ ನಂಬಿಕೆ ನಾಡ ಕನ್ನಡಿಗರ ಮನ ಮನಗಳಲ್ಲಿ ಹುಟ್ಟುಹಾಕಿತು.

Print This PagePಡಿiಟಿಣ ಣhis ಠಿಚಿge

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com