ಯೋಗ್ಯತೆ ಇಲ್ಲದ ಮಂತ್ರಿಗಳ ವಿರುದ್ಧ ವೆಂಕಟಾಚಲ ಕಿಡಿ
`ಯಾವ
ಮಂತ್ರಿಯೂ ಲಂಚ ನಿಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದೇ
ಇಲ್ಲ. ಅಷ್ಟೂ ಯೋಗ್ಯತೆ ಇಲ್ಲದ ಮಂತ್ರಿಗಳು ಯಾಕೆ ಅಧಿಕಾರಕ್ಕೆ ಬರಬೇಕು'
ಎಂದು ಮಾಜಿ ಲೋಕಾಯುಕ್ತ ಎನ್. ವೆಂಕಟಾಚಲ ಗುಡುಗಿದ್ದು
ಗುರುವಾರ ನಡೆದ ವಿಕ್ರಾಂತ ಕರ್ನಾಟಕ ವಾರಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ.
ವಾರಪತ್ರಿಕೆಯನ್ನು
ಪತ್ರಿಕಾಲೋಕಕ್ಕೆ ಸಮರ್ಪಿಸಿದ ನಂತರ ಮಾತನಾಡುತ್ತಿದ್ದ ವೆಂಕಟಾಚಲ
ಅವರ ಮಾತುಗಳು :
-
ಜನರ ಸೇವಕರಾಗಿರಬೇಕಾದ ರಾಜಕಾರಣಿಗಳು ಜನರ ರಕ್ತವನ್ನೇ
ಹೀರುತ್ತಿದ್ದಾರೆ. ಸ್ವತಂತ್ರ ಸಿಕ್ಕಿ ೫೯ ವರ್ಷ ಕಳೆದರೂ ೧೯೪೭ರಲ್ಲಿ
ಇದ್ದ ಹಳ್ಳಿಗಳ ಸ್ಥಿತಿ ಸುಧಾರಿಸಿಲ್ಲ, ಬದಲಾಗಿ ಇನ್ನೂ ಅಧೋಗತಿಗೆ
ಇಳಿದಿವೆ.
-
ಪ್ರತಿ ತಿಂಗಳು ಸಿಗಬೇಕಾದ ೧೦೦ ರೂಗಳ ಪಿಂಚಣಿ ಮಂಜೂರು
ಮಾಡಿಸಿಕೊಳ್ಳಲು ಅಧಿಕಾರಿಗಳಿಗೆ ಸಾವಿರಾರು ರೂ. ಲಂಚ
ಕೊಡಬೇಕಾಗಿದೆ.
-
ನಾನು ಕಂಡಿರುವ ೨೦೦ ಮಂದಿ ಸಬ್‌ರಿಜಿಸ್ಟ್ರಾರ್‌ಗಳಲ್ಲಿ ಇಬ್ಬರನ್ನು ಹೊರತುಪಡಿಸಿದರೆ
ಉಳಿದವರೆಲ್ಲರೂ ಲಂಚಕೋರರು. ಮಂತ್ರಿಗಳಿಗೆ ಲಂಚ
ಕೊಡುವುದಕ್ಕೆ ದುಡ್ಡು ಹೊಂದಿಸುವ ಸಲುವಾಗಿಯೇ ಲಂಚ
ಸ್ವೀಕರಿಸುವ ಅಧಿಕಾರಿಗಳು ಅನೇಕರಿದ್ದಾರೆ. ಆದ್ದರಿಂದ ಮಂತ್ರಿಗಳು
ಮನಸ್ಸು ಮಾಡಿದರೆ ಲಂಚ ನಿಲ್ಲಿಸಬಹುದು.
-
ನಾನು ಲೋಕಾಯುಕ್ತನಾಗಿದ್ದಾಗ ಮಾಧ್ಯಮದವರು ನನ್ನ
ಜೊತೆಗೆ ಬಂದರು. ಮಂತ್ರಿಗಳ ಅನ್ಯಾಯಗಳನ್ನು ಬಹಿರಂಗ ಪಡಿಸಲು
ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಅಂಗವಾದ ಮಾಧ್ಯಮ ಸಹಕಾರಿ.
-
ನಮ್ಮ ನ್ಯಾಯಾಂಗ, ಕಾರ್‍ಯಾಂಗ, ಶಾಸಕಾಂಗಗಳು `ಅಡ್ಜಸ್ಟ್' ಮಾಡಿಕೊಂಡು
ಕೆಲಸ ನಿರ್ವಹಿಸುತ್ತಿವೆ. ಈ ಹಾನಿಕರ `ಅಡ್ಜಸ್ಟ್'ನ್ನು ಮಾಧ್ಯಮದವರಷ್ಟೇ
ನಿಯಂತ್ರಿಸಲು ಸಾಧ್ಯ. ಮಾಧ್ಯಮ ಇಲ್ಲಾಂದ್ರೆ ಈ ರಾಜಕಾರಣಿಗಳು
ಜನರನ್ನು ತಿಂದೇ ಬಿಡುತ್ತಾರೆ.
-
ಅನ್ಯಾಯದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಯುವಕರು ಪಣತೊಟ್ಟು
ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕೈಲಾದ ಸಹಾಯ ಮಾಡಿ.
ಪತ್ರಿಕೋದ್ಯಮದಲ್ಲಿ
ವಾರಪತ್ರಿಕೆಯನ್ನು ನಡೆಸುವ ಕಷ್ಟಗಳ ಬಗ್ಗೆ ಎಚ್ಚರಿಕೆಗಳನ್ನು
ನೀಡಿದವರು ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿ ಅಧ್ಯಕ್ಷ
ವಿ. ಎನ್. ಸುಬ್ಬರಾವ್. ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಪ್ರಥಮ
ಸಂಚಿಕೆಯನ್ನು ಗಮನಿಸಿದಾಗ ಭಾಷೆ ಮೃದುವಾಗಿ ಚೆನ್ನಾಗಿರುವಂತೆ
ಕಾಣಿಸುತ್ತದೆ. ಅದನ್ನೇ ಮುಂದುವರೆಸಿಕೊಂಡು ಹೋಗಿ ಎಂಬ ಕಿವಿ ಮಾತನ್ನೂ
ವಿ. ಎನ್. ಸುಬ್ಬರಾವ್ ವಿಕ್ರಾಂತ ಪ್ರಕಾಶನದ ಬಳಗಕ್ಕೆ ನೀಡಿದರು.
ಕರ್ನಾಟಕಕ್ಕೆ
ಎನ್ನಾರೈಗಳು ನೀಡಿದ ಕೊಡುಗೆ ತುಂಬಾ ಕಡಿಮೆಯೇ. ಈ ಬಗ್ಗೆ
ಅಮರನಾಥ ಗೌಡರು ಅಕ್ಕ ಸಮ್ಮೇಳನದಲ್ಲಿ ಪ್ರಸ್ತಾಪ ಮಾಡುವುದಾಗಿ
ಹೇಳಿದ್ದಾರೆ. ಆದರೆ ಈ ನಡುವೆ ಎನ್ನಾರೈ ರವಿಕೃಷ್ಣಾ ರೆಡ್ಡಿಯವರು
ಕರ್ನಾಟಕಕ್ಕಾಗಿ ಹೊಸ ಪತ್ರಿಕೆಯನ್ನು ಆರಂಭಿಸಿದ್ದಾರೆ. ವಿಕ್ರಾಂತ ಕರ್ನಾಟಕ
ಎಂಬ ಕ್ರಾಂತಿಕಾರಿ ಹೆಸರಿರುವ ಈ ಪತ್ರಿಕೆ ಕ್ರಾಂತಿಕಾರಿಯಾಗಿ ಬೆಳೆಯಲಿ
ಎಂದು ಸುಬ್ಬರಾವ್ ಹಾರೈಸಿದರು.

ವಿಕ್ರಾಂತ ಕರ್ನಾಟಕ.ಕಾಂ ವೆಬ್‌ಸೈಟನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟಿ
ತಾರಾ ಔಪಚಾರಿಕವಾಗಿ ಉದ್ಘಾಟಿಸಿ, ಸತ್ಯಮೂರ್ತಿ ಆನಂದೂರು ಮತ್ತು ವಿಕ್ರಾಂತ
ಬಳಗಕ್ಕೆ ಶುಭ ಹಾರೈಸಿದರು. ಪ್ರಕಾಶಕರಾದ ಬಿ.ಕೆ. ಸುರೇಶ್, ಮಾಜಿ
ಸಚಿವ ರಾಮಲಿಂಗಾ ರೆಡ್ಡಿ ವೇದಿಕೆಯಲ್ಲಿದ್ದರು.
ಪೂರಕ ಓದಿಕೆ
ಪತ್ರಿಕೆಗಳ
ಲೋಕಕ್ಕೊಂದು ಹೊಸ ಮ್ಯಾಗಜೀನ್