ಟಿಪ್ಪು ಕನ್ನಡ ವಿರೋಧಿ ಎಂದು ಸಾಬೀತುಪಡಿಸಲಿ: ಕಾರ್ನಾಡ್
ಬೆಂಗಳೂರು: ಟಿಪ್ಪು ಕನ್ನಡ ವಿರೋಧಿ
ಎಂದು ಉನ್ನತ ಶಿಕ್ಷಣ ಸಚಿವ ಶಂಕರಮೂರ್ತಿ ಹೇಳಿಕೆ ಕೊಟ್ಟಹಾಗಲ್ಲ,
ಅವರು ಅದನ್ನು ಸಾಕ್ಷಿಗಳೊಂದಿಗೆ ಸಾಬೀತು ಪಡಿಸಲಿ ಎಂದು ಗಿರೀಶ್ ಕಾರ್ನಾಡ್
ಸವಾಲು ಹಾಕಿದ್ದಾರೆ.
ಶಂಕರಮೂರ್ತಿ ಒಂದು ಜವಾಬ್ದಾರಿಯುತ ಸಚಿವ
ಸ್ಥಾನದಲ್ಲಿದ್ದು ಈ ರೀತಿಯ ಹೇಳಿಕೆ ನೀಡಬಾರದು. ತಮ್ಮ ಹೇಳಿಕೆ ವಿವಾದ
ಹುಟ್ಟು ಹಾಕುತ್ತಿದೆ ಎಂದು ಗೊತ್ತಾದ ತಕ್ಷಣ ಇದು ತಮ್ಮ ವೈಯಕ್ತಿಕ
ಅಭಿಪ್ರಾಯ ಎಂದು ತಿರುಚುತ್ತಿದ್ದಾರೆ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ
ಕಾರ್ನಾಡ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಕೆ. ಮರುಳಸಿದ್ಧಪ್ಪ,
ಮಾಜಿ ಸಚಿವ ಬಿ.ಕೆ. ಚಂದ್ರಶೇಖರ್ ಉಪಸ್ಥಿತರಿದ್ದರು.
ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಶಂಕರಮೂರ್ತಿಯವರನ್ನು
ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಒಕ್ಕಲಿಗರ ಹಿತರಕ್ಷಣಾ ಸಮಿತಿ,
ಕರ್ನಾಟಕ ಪ್ರಗತಿ ರಂಗ, ಕರ್ನಾಟಕ ರಾಜ್ಯಹಿಂದುಳಿದ ವರ್ಗಗಳ ಸಂಘರ್ಷ
ಸಮಿತಿ ಮುಂತಾದ ಸಂಘಟನೆಗಳು ಆಗ್ರಹಿಸಿವೆ.