|
ವಿಕ್ರಾಂತ ಕರ್ನಾಟಕದ ಗೌರವ ಸಂಪಾದಕರಾಗಿ ರವೀಂದ್ರ ರೇಷ್ಮೆ
ಒಂದು ಸಂತಸದ ಸುದ್ದಿ! ವಿಕ್ರಾಂತ ಕರ್ನಾಟಕ
ವಾರಪತ್ರಿಕೆಗೆ
ಗೌರವ ಸಂಪಾದಕರಾಗಿ ಪ್ರಸಿದ್ಧ ಪತ್ರಕರ್ತ ರವೀಂದ್ರ
ರೇಷ್ಮೆಯವರು ಬಂದಿದ್ದಾರೆ. ಕರ್ನಾಟಕದ ರಾಜಕಾರಣಿಗಳ,
ಅಧಿಕಾರಿಗಳ, ಸಾರ್ವಜನಿಕ ಜೀವನದ, ಪ್ರಸ್ತುತ ಸಮಕಾಲೀನ
ವಿಷಯಗಳ ಬಗ್ಗೆ ಆಸಕ್ತಿ ಇರುವ ಜನರ ವಲಯದಲ್ಲೆಲ್ಲ
ಜನಜನಿತವಾದ ಹೆಸರು ರೇಷ್ಮೆಯವರದು. ಕಳೆದ ೨೬
ವರ್ಷಗಳಿಂದಲೂ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ
ಛಾಪನ್ನು ಮೂಡಿಸಿರುವವರು. ಹೆಗಡೆಯವರ ಕಾಲದ ಬಾಟ್ಲಿಂಗ್,
ರೇವಜೀತು ಹಗರಣದಿಂದ ಹಿಡಿದು ತೀರಾ ಇತ್ತೀಚಿಗೆ ಗಣಿ ಹಗರಣಕ್ಕೆ
ಸಂಬಂಧ ಪಟ್ಟಂತೆ ಮುನ್ನಾಭಾಯಿ ಎಂ.ಬಿ.ಬಿ.ಎಸ್. ವರೆಗೂ ಅವರ
ತನಿಖಾ ವರದಿಗಳು ನೇರವಾದವು, ನಿಷ್ಠುರವಾದವು ಹಾಗೂ
ಧೈರ್ಯದಿಂದ ಕೂಡಿರುವಂತಹವು. ಅವು ಕರ್ನಾಟಕದ ರಾಜಕೀಯ
ಚರಿತ್ರೆಯಲ್ಲಿ ಉಂಟು ಮಾಡಿದ ಪಲ್ಲಟಗಳು, ಹುಟ್ಟು ಹಾಕಿದ
ಚರ್ಚೆಗಳು, ಹಾಗೂ ಜನಸಾಮಾನ್ಯರಲ್ಲಿ ತುಂಬಿದ ಧೈರ್ಯ
ಅಸಾಮಾನ್ಯವಾದದ್ದು.
ಕರ್ನಾಟಕದ ರಾಜಕೀಯ, ಪ್ರಜಾಪ್ರಭುತ್ವದ ಒಳ್ಳೆಯ
ಗುಣಗಳನ್ನು ಬಿಟ್ಟು ಅದರಲ್ಲಿನ ಕೆಟ್ಟದನ್ನು ಅತಿ ಕೆಟ್ಟದಾಗಿ
ಮೈಗೂಡಿಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಪ್ರಜ್ಞಾವಂತರು
ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸಿನಿಕರಾಗುತ್ತಿರುವ ಈ ಗಳಿಗೆಯಲ್ಲಿ,
ಜನಜೀವನಕ್ಕೆ ಸಂಬಂಧಿಸಿದ ಪ್ರತಿ ಸುದ್ದಿಯನ್ನೂ ಜನ
ಮನರಂಜನೆಯ ದೃಷ್ಟಿಕೋನದಿಂದ ನೋಡುತ್ತಿರುವ ಈ ಚಾರಿತ್ರಿಕ
ಸಂದರ್ಭದಲ್ಲಿ ರೇಷ್ಮೆಯಂತಹವರು ನಮ್ಮ ಸಮಾಜಕ್ಕೆ
ಹಿಂದೆಂದಿಗಿಂತಲೂ ಪ್ರಸ್ತುತರಾಗುತ್ತಿದ್ದಾರೆ. ಬೆಂಗಳೂರಿನ
ಕಾಲೇಜೊಂದರಲ್ಲಿ ಸಸ್ಯಶಾಸ್ತ್ರದ ಅಧ್ಯಾಪಕರಾದ ರವೀಂದ್ರ
ರೇಷ್ಮೆಯವರು ಎಂದಿನಂತೆ ತಮ್ಮ ಸಾಮಾಜಿಕ ಕಾಳಜಿಯನ್ನು
ಮೆರೆಯುತ್ತ, ಎಲ್ಲರಲ್ಲೂ ಜೀವನ ಪ್ರೀತಿಯನ್ನು ಹುಟ್ಟಿಸುತ್ತ,
ಆರೋಗ್ಯವಂತ ಸಮಾಜದ ಬಗ್ಗೆ ಆಶಾವಾದವನ್ನು ಬೆಳೆಸುತ್ತ
ನಮಗೆಲ್ಲ ಮಾರ್ಗದರ್ಶನ ನೀಡಲಿ ಎಂದು ವಿಕ್ರಾಂತ ಕರ್ನಾಟಕ
ಆಶಿಸುತ್ತದೆ; ಅವರಿಗೆ ವಿಕ್ರಾಂತ ಬಳಗ ತುಂಬು ಹೃದಯದ
ಸ್ವಾಗತವನ್ನು ಕೋರುತ್ತದೆ.
ರೇಷ್ಮೆಯವರನ್ನು ಸಂಪರ್ಕಿಸಬೇಕಾದರೆ, ನೀವು ಈ ವಿಳಾಸಕ್ಕೆ
ಇಮೇಯ್ಲ್ ಕಳುಹಿಸಬಹುದು:
reshme@vikrantakarnataka.com
ಮೊಬೈಲ್ :
93412 71653
|