ವಿಕ್ರಾಂತ ಕರ್ನಾಟಕ ವಾರಪತ್ರಿಕೆ ಮೊದಲ ಸಂಚಿಕೆಯ
ಸಂಪಾದಕೀಯ
ಹಾರುವ ಕುದುರೆಯ ಬೆನ್ನ ಏರಿ ...

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಹೀಗೊಂದು ಪತ್ರಿಕೆ ಆರಂಭ ಆಗಬಹುದೆಂದು ನಾವ್ಯಾರೂ
ಅಂದುಕೊಂಡಿರಲಿಲ್ಲ. ಆರು ತಿಂಗಳ ಹಿಂದೆಯಂತೂ ಇಂಥ ಕಲ್ಪನೆಯ ಸಣ್ಣ
ತುಣುಕೂ ನಮ್ಮ ಮನದಲ್ಲಿ ಸುಳಿಯಲು ಜಾಗವಿರಲಿಲ್ಲ. ಕಾರಣ ಕನ್ನಡ
ಪತ್ರಿಕೋದ್ಯಮದ ಜತೆ ಎರಡು ದಶಕಗಳ ಕಾಲ ಸಾಗಿ ಬಂದ ನನ್ನಂಥವರಿಗೆ
ಇಂಥ ದುಬಾರಿ ಕನಸು ಕಾಣುವುದು ಅಸಾಧ್ಯ ಮಾತ್ರವಲ್ಲ, ಇಂಥ ಸಾಹಸದೊಂದಿಗೆ
ಮೈಮನಸ್ಸುಗಳನ್ನು ಜೋಡಿಸುವ ದೂರದ ಆಸೆಯೂ ಇರಲಿಲ್ಲ. ನಾಲ್ಕು
ತಿಂಗಳ ಹಿಂದೆ ದೂರದ ಅಮೇರಿಕಾದಿಂದ ರವಿ ಕೃಷ್ಣಾ ರೆಡ್ಡಿ ಮಾತನಾಡಿದಾಗ,
ಇಂಥ ಪತ್ರಿಕೆ ರೂಪಿಸುವ ಬಗ್ಗೆ ಚರ್ಚಿಸಿದಾಗ ವಾಸ್ತವದ ಸ್ಥಿತಿಯನ್ನು,
ಅದರ ಬಹುತೇಕ ನೆಗೆಟಿವ್ ಅಂಶಗಳನ್ನು ಮನದಟ್ಟು ಮಾಡುವುದು
ನನ್ನ ಕರ್ತವ್ಯ ಎಂಬಂತೆ ವಿವರಿಸತೊಡಗಿದೆ. ಆದರೂ ಅವರು ಬಿಡಲಿಲ್ಲ.
ಪ್ರತಿಬಾರಿ ಮಾತಾಡಿದಾಗಲೂ ಮತ್ತೊಮ್ಮೆ ಪತ್ರಿಕೋದ್ಯಮದತ್ತ ಆಸೆ
ಚಿಗುರಿಸುತ್ತಲೇ ಬಂದರು. ಕೊನೆಗೊಮ್ಮೆ ಇಂಥ ದುಸ್ಸಾಹಸಕ್ಕೆ ಬೇರೆಯದೇ
ಆದ ತಯಾರಿಯ ಅಗತ್ಯವಿದೆ; ಕನ್ನಡ ಪತ್ರಿಕೋದ್ಯಮದಲ್ಲಿ
ಅಂಥದೊಂದು ತಯಾರಿಗೆ ದೇಹ, ಮನಸ್ಸು, ಹಣದ ಜೊತೆಗೆ ಇನ್ನೂ
ಬಹಳಷ್ಟು ಪರಿಕರಗಳ ಅಗತ್ಯವಿದೆ ಎಂದರೂ ರವಿ ಹೆದರಲಿಲ್ಲ.
ತಮ್ಮನ ಧೈರ್ಯದ ನಡಿಗೆಗೆ ಸೋದರ ಸುರೇಶ್ ಅವರೂ ಸೇರಿಕೊಂಡರು.
ರಂಗಭೂಮಿಯ ಹಿನ್ನೆಲೆಯ, ಪತ್ರಿಕೋದ್ಯಮದಲ್ಲಿ ಅಪಾರ ಅನುಭವವಿರುವ
ವಿದ್ಯಾರಣ್ಯ ಈ ಪುಟ್ಟ ತಂಡಕ್ಕೆ ಭದ್ರ ಬೆನ್ನೆಲುಬಾಗಿ ನಿಂತರು... ಇದು
ಪುಟ್ಟ ಹಿನ್ನೆಲೆ.
ನಿಮ್ಮೆಲ್ಲರಿಗೆ ಈ ಸಂದರ್ಭದ ತುಡಿತ, ಆತಂಕ,
ಭಯ ಹಾಗು ಅನಿವಾರ್ಯ ಒತ್ತಡಗಳ ಅರಿವಿರಬಹುದು. ಹೊಸ ಸಹಸ್ರಮಾನ
ಆರಂಭವಾಗಿ ಆರು ವರ್ಷಗಳು ತುಂಬುತ್ತಿವೆ. ಈ ಆರೇ ವರ್ಷಗಳಲ್ಲಿ
ಬೆಂಗಳೂರಂಥ ಬೆಂಗಳೂರಿನ ಚಹರೆಯೇ ಬದಲಾಗಿದೆ; ನೂರು
ವರುಷಗಳಲ್ಲಾಗುವ ಬದಲಾವಣೆಗಳು ಕೇವಲ ಆರು ವರ್ಷಗಳಲ್ಲೇ
ಘಟಿಸುವಷ್ಟು ವೇಗದ ಓಟದಲ್ಲಿ ಬೆಂಗಳೂರಿನಂಥ ನಗರಗಳು
ಯಾರ ಊಹೆಗೂ ಸಿಗದಷ್ಟು ದೂರ ಸಾಗುತ್ತಿದೆ. ಕಾಲವನ್ನು ಮೀರಿದ ವೇಗ
ಈಗ ಈ ನಗರದ ದೈತ್ಯಕಾಲುಗಳನ್ನು ಪ್ರೇರೇಪಿಸುತ್ತ ಇನ್ನಷ್ಟು
ದೂರಕ್ಕೆ ಕೊಂಡೊಯ್ಯುತ್ತಿದೆ.
ಇಂಥ ವೇಗೋತ್ಕರ್ಷದ ಬದುಕಿನಲ್ಲಿ, ದಿನನಿತ್ಯ
ಉಸಿರಾಡಲೂ ಪುರುಸೊತ್ತಿಲ್ಲದ ಪರಿಸ್ಥಿತಿಯಲ್ಲಿ ಜನರಿಗೆ ಪತ್ರಿಕೆ
ಕೊಳ್ಳುವ-ಓದುವ ವ್ಯವಧಾನ ಇರಲು ಸಾಧ್ಯವೇ? ನಮಗರಿವಿಲ್ಲದಂತೆ
ನಮ್ಮ ಕಿವಿತುಂಬುವ ಎಫ್‌ಎಂ ರೇಡಿಯೋಗಳು, ಬೆರಳತುದಿಯಲ್ಲೇ
ಸಿಗುವ ನೂರಾರು ಚಿತ್ರವಿಚಿತ್ರ ಚಾನಲ್‌ಗಳು, ಕೊಳ್ಳುಗರ
ಮಾಲ್‌ಗಳು; ಮಾರುವವರ ಕಮಾಲ್‌ಗಳು, ಬೇಸರ ಕಳೆಯಲು
ವಾಟರ್ ಪಾರ್ಕ್, ರೆಸಾರ್ಟ್‌ಗಳು... ಇಂಥ ಮಾಯಾಲೋಕದ ನಿಬ್ಬೆರಗಾಗುವ
ಬೆಳಕಿನ ಮುಂದೆ ಅಕ್ಷರದ ಹಣತೆ ಮಿನುಗಲು ಸಾಧ್ಯವೆ? ಇವೆಲ್ಲ
ಪತ್ರಿಕೆ ಆರಂಭಿಸಲು ಸಕಲ ತಯಾರಿ ಮಾಡಿಕೊಳ್ಳುವ ಮೊದಲು ಮನದ
ಮೇಲೆ ಆವರಿಸಿದ್ದ ಕಾರ್ಮೋಡ.
ಕನ್ನಡದಲ್ಲಿ ಓದುಗರಿಲ್ಲ ಎನ್ನುವುದು
ಹಳೆಯ ಮಾತು. ಆದರೆ ಈ ವೇಗೋತ್ಕರ್ಷದ ಆರು ವರ್ಷಗಳಲ್ಲಿ
ಕನ್ನಡದ ಪತ್ರಿಕೆಗಳನ್ನು ಓದುವವರ ಸಂಖ್ಯೆಯೂ ಹುಬ್ಬೇರಿಸುವಷ್ಟು
ಬೆಳೆದಿರುವುದು ಇತ್ತೀಚಿನ ಇತಿಹಾಸ. ಆರೇಳು ವರ್ಷಗಳ ಹಿಂದೆ ಕನ್ನಡದ
ಎಲ್ಲ ದಿನಪತ್ರಿಕೆಗಳ ಒಟ್ಟು ಪ್ರಸಾರ ಸುಮಾರು ಹತ್ತು ಲಕ್ಷದ ಆಸುಪಾಸಿನಲ್ಲಿದ್ದರೆ,
ಈಗ ಆ ಸಂಖ್ಯೆ ಇಪ್ಪತ್ತೆರಡು ಲಕ್ಷಕ್ಕೂ ಮೀರಿ ಇನ್ನೂ
ಬೆಳೆಯುತ್ತಲೇ ಇದೆ. ಒಂದು ಪತ್ರಿಕೆಗೆ ಕನಿಷ್ಠ ಐದು ಜನ
ಓದುಗರು ಎಂದಿಟ್ಟುಕೊಂಡರೂ ದಿನಂಪ್ರತಿ ಒಂದು ಕೋಟಿ ಜನ ಓದುಗರು
ಬರೀ ದಿನಪತ್ರಿಕೆ ಓದುತ್ತಾರೆ ಎಂಬುದು ಸರಳ ಲೆಕ್ಕಾಚಾರ. ಇನ್ನು ಸಾಪ್ತಾಹಿಕ,
ಮಾಸಿಕ, ಸಿನಿಮಾ ಪತ್ರಿಕೆಗಳು, ಇವನ್ನೆಲ್ಲ ಗಮನಿಸಿದರೆ ಕನ್ನಡದಲ್ಲಿ
ಓದುವಿಕೆಯ ಪ್ರಮಾಣ ಅಗಾಧವಾಗಿ ಬೆಳೆದಿದೆ ಎಂಬುದು ಸುಳ್ಳಲ್ಲ.
ಗೆಳೆಯರೊಡನೆ ಚರ್ಚಿಸಿದ ನಂತರ ಕೊನೆಗೆ
ಹಳೆಯ ಮನಸ್ಸಿನೊಂದಿಗೆ ಹೊಸ ಕನಸಿನ ಓದುವಿಕೆಗೆ ಕನ್ನಡದ
ಓದುಗರು ತೆರೆದುಕೊಳ್ಳಬಲ್ಲರು ಎಂಬ ಸೂಕ್ಷ್ಮ ಸಂವೇದನೆಯೊಂದಿಗೆ
ಪತ್ರಿಕೆಯ ಮೊದಲ ಸಂಚಿಕೆಯನ್ನು ನಾಡಿನ ಮುಂದಿಡುತ್ತಿದ್ದೇವೆ.
ರಾಜಕೀಯ, ಸಾಮಾಜಿಕ, ಕ್ರೀಡೆ, ಸಿನಿಮಾ, ಕಥೆ ಹಾಗೂ ಆಗಸದ
ಕೆಳಗಿನ ಭೂಮಿಯ ಮೇಲಿನ ಎಲ್ಲಾ ಕೌತುಕಗಳೂ `ವಿಕ್ರಾಂತ ಕರ್ನಾಟಕದ
ಹೂರಣದಲ್ಲಿ ಅಡಕವಾಗಲಿ ಎಂಬ ನಿರ್ಧಾರದೊಂದಿಗೆ ವಿಶಿಷ್ಟ ವಾರಪತ್ರಿಕೆ
ಸಿದ್ಧಗೊಳಿಸಿದ್ದೇವೆ.
ಎಡವುತ್ತ ನಡೆಯಬೇಕು; ನಡೆಯುತ್ತಾ
ಓಡಬೇಕು ಎನ್ನುವುದು ಹಳೆಯ ಮಾತು. ಇಲ್ಲಿ ನಡೆಯುವಿಕೆ,
ಓಡುವಿಕೆ ಎರಡಕ್ಕೂ ಸಜ್ಜಾದ ತಂಡವಿದೆ. ಅನುಭವದ ಹಳೆಯ ಮನಸ್ಸುಗಳಿವೆ;
ಯುವ ಪೀಳಿಗೆಯ ಉತ್ಸಾಹದ ಕನಸಿದೆ...
ಎಡವಿದಾಗ ಎಚ್ಚರಿಸಿ, ಓಡುತ್ತ ಬೆಳೆಯುವ ನಮ್ಮನ್ನು
ಬೆನ್ನುತಟ್ಟಿ ಎಂದು ವಿನಂತಿಸುತ್ತ...
- ಸತ್ಯಮೂರ್ತಿ ಆನಂದೂರು