Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ನಕಲಿಗೆ ಹಾಳಾದ ಅಸಲೀ ಸಮಯ

(೧೩ ಅಕ್ಟೋಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

 

S.M. Anandu Editor, Vikranta Karnataka Weekly

ಸತ್ಯಮೂರ್ತಿ ಆನಂದೂರು

ಬೆಂಗಳೂರು

smanandur@vikrantakarnataka.com

`ಗಡಿಯಲ್ಲಿರುವ ಶತ್ರುಗಳನ್ನು ಎದುರಿಸಬಹುದು; ಗಡಿ ಒಳಗಿನ ಶತ್ರುಗಳನ್ನು ನಾಶ ಮಾಡುವವರ್‍ಯಾರು?'ಯಾವುದೋ ಹಿಂದಿ ಚಿತ್ರದ ಸಂಭಾಷಣೆಯಿದು. ಜೀವದ ಹಂಗು ತೊರೆದು ಗಡಿಯಲ್ಲಿ ಹೋರಾಡುವ ಸೈನಿಕನೊಬ್ಬ ದೇಶದ ಒಳಗಿನ ಭ್ರಷ್ಟರನ್ನು ಕುರಿತು ಹೇಳುವ ಮಾತಿದು. ಮೊನ್ನೆ ಬೆಳಗಾವಿಯಂಥ ಗಡಿನಾಡಿನಲ್ಲಿ ವಿಧಾನ ಮಂಡಲದ ಐತಿಹಾಸಿಕ ಸಮಾವೇಶ ನಡೆದಾಗ ಎರಡನೇ ದಿನ ಕಲಾಪ ಯಕಃಶ್ಚಿತ್ ವಿಚಾರವೊಂದರ ಸಲುವಾಗಿ ಪೂರ್ತಿ ನಾಶವಾದಾಗ ನೆನಪಿಗೆ ಬಂದ ಮಾತುಗಳಿವು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬೆಳಗಾವಿಯಲ್ಲಿ ಇಂಥದೊಂದು ಅಧಿವೇಶನ ನಡೆಸಲು ನಿರ್ಧರಿಸಿದಾಗ ಇಡೀ ರಾಜ್ಯವೇ ಅವರ ಬಗ್ಗೆ ತಲೆದೂಗಿತು. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಭಾಷಾವಾರು ವಿಂಗಡಣೆಯ ನಂತರ ಬೆಳಗಾವಿ ಮತ್ತು ಕಾಸರಗೋಡು ನಿತ್ಯದ ವಿವಾದಿತ ಕೇಂದ್ರಗಳಾಗಿಯೇ ಉಳಿದು ಕೊನೆಗೂ ಕಾಸರಗೋಡು ನಮ್ಮ ಕೈತಪ್ಪಿ ಹೋಯಿತು. ಕಾಸರಗೋಡಿನ ಗತಿಯೇ ಬೆಳಗಾವಿಗೂ ಆಗಬಾರದೆಂದು ಸಾಹಿತಿಗಳು, ರಾಜಕಾರಣಿಗಳು ಅದರಲ್ಲೂ ಉತ್ತರ ಕರ್ನಾಟದಕ ಪ್ರಜ್ಞಾವಂತರು ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರವನ್ನು ಚುಚ್ಚುತ್ತ, ಸಮಯ ಬಂದಾಗೆಲ್ಲ ಎಚ್ಚರಿಸುತ್ತಲೇ ಬಂದಿದ್ದಾರೆ.

ಆದರೆ ಗಡಿಯ ಸಮಸ್ಯೆ ಗಡಿಯಲ್ಲೇ ಉಳಿಯಿತು; ಗಡಿಯ ಒಳಗಿನ ಭ್ರಷ್ಟತೆ ಅಗಾಧವಾಗಿ ಬೆಳೆಯುತ್ತಲೇ ಬಂತು. ಕಡೆಯ ಪಕ್ಷ ಗಡಿಯ ಭಾಗದ ಕನ್ನಡಿಗರಿಗಾದರೂ ವಿಶೇಷ ಸವಲತ್ತು ಒದಗಿಸುವ, ಅಲ್ಲಿಯ ನೆಲವನ್ನು ಸಮೃದ್ಧಗೊಳಿಸುವ ಪ್ರಯತ್ನವನ್ನು ಇದುವರೆಗೂ ಯಾವುದೇ ಸರ್ಕಾರ ಮಾಡಲಿಲ್ಲ. ನವೆಂಬರ್ ತಿಂಗಳ ಕೂಗಾಟ ಬಿಟ್ಟರೆ ಬೆಳಗಾವಿಯನ್ನು ಕನ್ನಡದ ಆತ್ಮದೊಳಗೆ ಸೇರಿಸಿಕೊಳ್ಳುವ ಪ್ರಯತ್ನವೇ ನಡೆದಿಲ್ಲ.

ಈ ಕಾರಣದಿಂದ ಬೆಳಗಾವಿಯಲ್ಲಿ ನಡೆದ ವಿಶೇಷ ಅಧಿವೇಶನ ಅತ್ಯಂತ ಮಹತ್ವ ಪೂರ್ಣವಾದುದು. ಬೆಳಗಾವಿಯಿಂದ ದೆಹಲಿಯ ಪ್ರಭುಗಳಿಗೆ ಕಳಿಸಬೇಕಾದ ಸಂದೇಶವಷ್ಟೇ ಈ ಅಧಿವೇಶನದ ಪ್ರಮುಖ ಉದ್ದೇಶವಾದರೂ ಅದೊಂದೇ ಆಗಿರಲಿಲ್ಲ. ಗಡಿಯ ಭಾಗದ ಜನರ ಆತ್ಮವಿಶ್ವಾಸ, ಹೃದಯ ಶ್ರೀಮಂತಿಕೆ, ಕೆಚ್ಚು ಬೆಳೆಸುವ ಅಗತ್ಯವಿತ್ತು. ಆದರೆ ಅದು ಆಯಿತೆ?

ಎರಡನೇ ದಿನದ ಕಲಾಪ ನೋಡಿದವರಿಗೆಲ್ಲ ಇಂಥದು ನಡೆಸಲು ಬೆಳಗಾವಿಯೇ ಬೇಕಿತ್ತೇ ಎಂದು ಸಹಜವಾಗಿಯೇ ಅನ್ನಿಸಿತು. ಯಾರೋ ಒಬ್ಬ ಶಾಸಕರು ಬೇಜವಾಬ್ದಾರಿಯಿಂದ ತೋರಿಸಿದ ಭಾವಚಿತ್ರದ ಸಲುವಾಗಿ ಇಡೀ ಸದನ ರಗಳೆಗಳ ಗೂಡಾಯಿತು. ಆ ಭಾವಚಿತ್ರ ನಕಲಿಯೇ? ಅಥವಾ ತಾಂತ್ರಿಕವಾಗಿ ಜೋಡಿಸಿದ್ದೇ? ಎನ್ನುವ ತರ್ಕ, ವಾದ, ಗದ್ದಲಗಳಿಗೆ ಬೆಳಗಾವಿಯ ಈ ಅಧಿವೇಶನದ ಸಮಯ ಪೂರ್ತಿಯಾಗಿ ಆಹುತಿಯಾಯಿತು. ಶಾಸಕರೊಬ್ಬರು ಇಡೀ ಅಧಿವೇಶನವನ್ನು ತಪ್ಪುದಾರಿಗೆ ಎಳೆದ ಪ್ರಕರಣ ಅದಾಯಿತು. ಕಡೆಯಪಕ್ಷ ಮುಖ್ಯಮಂತ್ರಿಯವರಾದರೂ ತಮ್ಮ ಕಡೆಯ ಶಾಸಕರಿಗೆ ತಿಳಿಹೇಳುವ ಕೆಲಸ ಮಾಡಲಿಲ್ಲ.

***

ಅದಿರಲಿ, ಬೆಳಗಾವಿಯ ಅಧಿವೇಶನ ನಡೆಯುವ ದಿನವೇ ಮರಾಠಿಗರ ಬೃಹತ್ ಸಭೆಯನ್ನುದ್ದೇಶಿಸಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆರ್.ಆರ್. ಪಾಟೀಲ್ ಒಂದು ಸೂಚನೆ ನೀಡಿದರು; ಅವರ ಪ್ರಕಾರ ಈಗ ಮರಾಠಿ ಮಾತನಾಡುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಬಿಡುವುದು, ಕನ್ನಡ ಮಾತನಾಡುವ ಪ್ರದೇಶಗಳನ್ನು ಕರ್ನಾಟಕಕ್ಕೆ ಮರಳಿಸುವುದು- ಸದ್ಯ ಈ ಪುಣ್ಯಾತ್ಮ ಪ್ರದೇಶಗಳ ಹೆಸರು ಸೂಚಿಸಿಲ್ಲ.

ಭಾಷಾವಾರು ವಿಂಗಡಣೆಯ ನಂತರ ಪ್ರತಿರಾಜ್ಯಕ್ಕೂ ಸಂವಿಧಾನಾತ್ಮಕ ಹಕ್ಕು ನೀಡಿದ ನಂತರ ಜವಾಬ್ದಾರಿಯುತ ಉಪಮುಖ್ಯಮಂತ್ರಿಯೊಬ್ಬರು ಆಡಿದ ಇಂಥ ಮಾತುಗಳನ್ನಾದರೂ ನಮ್ಮ ವಿಧಾನ ಮಂಡಲ ಒಕ್ಕೊರಲಿನಿಂದ ಖಂಡಿಸಬೇಕಿತ್ತು. ಆದರೆ ಯಾರೊಬ್ಬರಿಗೂ ಅದು ಅಸಂವಿಧಾನಾತ್ಮಕ ಎಂದಾಗಲೀ, ಅವೈಜ್ಞಾನಿಕ ಎಂದಾಗಲೀ ಕಾಣಲೇ ಇಲ್ಲ.

ಎಲ್ಲರೂ ನಕಲಿಯ ಹಿಂದೆ ಬಿದ್ದರು; ಅಸಲೀ ಪ್ರಜ್ಞೆ ಮರೆತರು.

ಇನ್ನಷ್ಟು

ಇತಿಹಾಸದ ಗಾಯ ಕೆರೆಯುವ ಮುನ್ನ

ಎಲ್ಲ ತತ್ವದ ಎಲ್ಲೆ ಮೀರಿ...

ಮಾಗಿದ ಮನಸ್ಸು; ಹರೆಯದ ಹುಮ್ಮಸ್ಸು

ಸಿದ್ಧರಾಮಯ್ಯ ಕಷ್ಟಗಳು ನೂರೆಂಟು...

ಹೊನ್ನ ರಾಶಿಯಲ್ಲ; ಬೊಗಸೆ ಪ್ರೀತಿ

ನಿಮ್ಮ ಪತ್ರಿಕೆಯ ಸ್ಪೆಷಾಲಿಟಿ ಏನು?

ಹಾರುವ ಕುದುರೆಯ ಬೆನ್ನ ಏರಿ ...

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com