ಇತಿಹಾಸದ ಗಾಯ ಕೆರೆಯುವ ಮುನ್ನ
(೦೬ ಅಕ್ಟೋಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಅದೇಕೋ ಗೊತ್ತಿಲ್ಲ. ಇತಿಹಾಸ ಅಂದಕೂಡಲೇ ನಮಗೆಲ್ಲ
ಆವೇಶ ಆವರಿಸಿಕೊಳ್ಳುತ್ತದೆ. ಇತಿಹಾಸ ಎಂದರೆ ದೇಶಪ್ರೇಮ, ಇತಿಹಾಸ
ಎಂದರೆ ವೈಭವವನ್ನು ಮೆರೆದ ರಾಜ- ಹೀಗೆ ನಮಗರಿವಿಲ್ಲದಂತೆ
ಒಂದು ಬಗೆಯ ಆವೇಶಭರಿತ ಆತ್ಮಾಭಿಮಾನಕ್ಕೆ ನಮ್ಮನ್ನು ನಾವು
ಸಜ್ಜುಗೊಳಿಸಿಕೊಳ್ಳುತ್ತೇವೆ. ಹಾಗಾಗಿಯೇ ಇತಿಹಾಸ ಪುನರಾವರ್ತನೆ
ಆಗುವ ಬಗ್ಗೆ, ಇತಿಹಾಸ ಸೃಷ್ಟಿಸುವ ಬಗ್ಗೆ ಎಲ್ಲರೂ ಹುಂಬತನದ
ಮಾತುಗಳನ್ನು ಆಡುತ್ತಲೇ ಇರುತ್ತೇವೆ. ಹಾಗೆಯೇ ನಮ್ಮ ಮಾತನ್ನು
ಸಮರ್ಥಿಸಿಕೊಳ್ಳಲು ನಮ್ಮ ಅರಿವಿಗೆ ದಕ್ಕಿದ ಸಂಗತಿಗಳನ್ನಷ್ಟೇ
ಉದಾಹರಿಸುತ್ತ ರಾಜಾರೋಷವನ್ನು ಮೆರೆಯುತ್ತೇವೆ. ಕಳೆದವಾರ ಮಂತ್ರಿ
ಶಂಕರಮೂರ್ತಿಯವರು ಮಾಡಿದ್ದೂ ಅದನ್ನೇ. ಅದೇನು ಆವೇಶ ಬಂತೋ
ಏನೋ, ಯಾವುದೋ ಶಾಲೆಯ ಸಮಾರಂಭದಲ್ಲಿ ಮಾತನಾಡುತ್ತ,
ಎದುರಿಗಿರುವವರು ಮಕ್ಕಳು ಎಂಬುದನ್ನೂ ಮರೆತು ಟಿಪ್ಪು ಸುಲ್ತಾನನ
ಬಗ್ಗೆ ಹಿಗ್ಗಾಮುಗ್ಗಾ ಬೈದಾಡತೊಡಗಿದರು. ಅವತ್ತು ಅವರ ರೋಷ ಎಷ್ಟಿತ್ತೆಂದರೆ,
ನಿನ್ನೆ ಮೊನ್ನೆ ತಾನೆ ಟಿಪ್ಪು ಸುಲ್ತಾನ್ ಏನೋ ಮಾಡಬಾರದ್ದು ಮಾಡಿ
ಹೋಗಿದ್ದಾನೆ ಅನ್ನಿಸುವಂತಿತ್ತು. ಮಕ್ಕಳು ಬೆಚ್ಚಿಬಿದ್ದು ಸಚಿವರ ಸಿಟ್ಟಿನ
ಪರಾಕಾಷ್ಠೆಯನ್ನು ಬಾಯಿ ಬಿಟ್ಟು ನೋಡುತ್ತಿದ್ದರು.
ಟಿಪ್ಪು ಸುಲ್ತಾನ್ ಈ ರಾಜ್ಯದ ನಿತ್ಯ ವಿವಾದದ ವ್ಯಕ್ತಿಯಾಗಿರುವುದನ್ನು
ಕೆಲವು ವರ್ಷಗಳಿಂದ ನೋಡುತ್ತಲೇ ಬಂದಿದ್ದೇವೆ. ಒಂದು ಕಡೆ ಆತ ಮತಾಂತರ
ಮಾಡಿಸಿದ ಎಂಬ ಬೊಬ್ಬೆ ಏಳುತ್ತಿರುವಂತೆಯೇ ಇನ್ನೊಂದು ಕಡೆ ಖಂಡಿತಾ
ಇಲ್ಲ ಎಂಬ ಮರುಕೂಗು ಕೇಳುವುದು ನಿತ್ಯದ ಸಂಗತಿಯಾಗಿ ಹೋಗಿದೆ.
ಟಿಪ್ಪು ಪರ್ಷಿಯನ್ ಭಾಷೆಯನ್ನು ಪತ್ರ ಬರೆಯಲು
ಉಪಯೋಗಿಸಿದ್ದ ಎಂತಲೂ, ಆತ ದೇಶದ್ರೋಹಿ ಎಂತಲೂ ಮೊನ್ನೆ ಸಚಿವರು
ಖಂಡತುಂಡವಾಗಿ ಹೀಗೆಳೆದರು. ಅದರ ಬೆನ್ನ ಹಿಂದೆಯೇ ಕಾರ್ನಾಡ್,
ಚಿಕ್ಕರಂಗೇಗೌಡ ಮೊದಲಾದವರು ಟಿಪ್ಪುವಿನ ದೇಶಪ್ರೇಮದ ಬಗ್ಗೆ
ಕೊಂಡಾಡಿದರು. ಸಾಮಾನ್ಯವಾಗಿ ವರ್ಷಕ್ಕೆ ಮೂರ್ನಾಲ್ಕು ಬಾರಿಯಾದರೂ
ಹೀಗೆ `ಟಿಪ್ಪು' ವಿವಾದ ಕನ್ನಡಿಗರ ಮೇಲೆ ಅಪ್ಪಳಿಸುತ್ತಲೇ
ಇರುತ್ತದೆ.
ಮೊನ್ನೆ ಶಂಕರಮೂರ್ತಿಯವರೇನೋ ಕ್ಷಮೆ
ಕೋರಿ ವಿವಾದಕ್ಕೆ ತೆರೆ ಎಳೆದರು. ಆದರೆ ಮಳೆನಿಂತರೂ ಮರದ ಹನಿಗಳು
ಉದುರುವುದು ಮಾತ್ರ ನಿಂತಿಲ್ಲ. ಈಗಂತೂ ಬುದ್ಧಿಜೀವಿಗಳ ಸಮೂಹದಲ್ಲಿ
ಟಿಪ್ಪು ಎಂಥ ರಾಜನಾಗಿದ್ದ ಎನ್ನುವುದೇ ಪ್ರಮುಖ ಚರ್ಚೆಯ ವಿಷಯವಾಗಿದೆ.
ನಿಮಗೆ ನೆನಪಿರುವಂತೆ ಟಿಪ್ಪುವಿನ ಕುರಿತಂತೆ
ಇತಿಹಾಸದ ಪುಟಗಳು ನೀಡುವ ಅಂಶಗಳನ್ನೇ ಗಮನಿಸಿದರೂ ಟಿಪ್ಪು
ಬಹುದೊಡ್ಡ ರಾಜತಾಂತ್ರಿಕನಾಗಿದ್ದ ಎಂಬುದು ತಿಳಿಯುತ್ತದೆ. ಭಾರತದ
ರಾಜರೆಲ್ಲ ಬ್ರಿಟಿಷರಿಗೆ ಶರಣಾಗತರಾದರೂ ಟಿಪ್ಪು ಮತ್ತು ಹೈದರ್
ಕೊನೆಯವರೆಗೂ ಹೋರಾಡಿದ ದಾಖಲೆಗಳು, ತನ್ನ ಮಕ್ಕಳನ್ನು
ಒತ್ತೆ ಇಡುವಂಥ ಹೃದಯಸ್ಪರ್ಶಿ ಘಟನೆಗಳೂ ಟಿಪ್ಪುವಿನ
ಚರಿತ್ರೆಯಲ್ಲಿವೆ. ಹಾಗೆಯೇ ಮಲಬಾರಿನಲ್ಲಿ ಮತಾಂತರಿಸಿದ
ಸಂಗತಿಗಳು ದಾಖಲಾಗಿವೆ.
ಆದರೆ ಇವೆಲ್ಲ ಪದೇಪದೇ ಕೆದಕಿ
ಗಾಯಮಾಡುತ್ತ ಹೋಗುವ ಸಂಗತಿಗಳೇ? ಚರಿತ್ರೆಯನ್ನು
ಚರಿತ್ರೆಯಾಗಿ ನೋಡುವ ಪರಿಪಾಠ ನಮಗಿನ್ನೂ ಬೆಳೆಯದೇ
ಇರುವುದು ಆತಂಕಕಾರಿಯಲ್ಲವೆ? ಯಾವ ರಾಜನೇ ಆಗಲಿ, ತನ್ನ
ರಾಜ್ಯ, ತನ್ನ ಸಿಂಹಾಸನದ ಉಳಿವಿಗೆ ಬೇಕಾದ ರೀತಿಯಲ್ಲಿ ರಾಜಿ ಮಾಡಿಕೊಂಡಿರುವುದು
ನಮ್ಮ ಕಣ್ಣೆದುರಿಗೇ ಇರುವಾಗ ಪ್ರತಿವರ್ಷ ಟಿಪ್ಪುವನ್ನು ಎಳೆದು
ಒಂದಷ್ಟು ಗಲಾಟೆ ಎಬ್ಬಿಸುವುದು ವಿಚಿತ್ರ ಅನಿಸುತ್ತದೆ. ಎಲ್ಲ
ರಾಜರುಗಳೂ ಒಳ್ಳೆಯವರಾಗಿದ್ದಷ್ಟೇ ಕೆಟ್ಟತನಗಳೂ ಅವರಲ್ಲಿದ್ದವು
ಎಂಬ ಪಾಠವನ್ನು ಕಲಿಸಿದ್ದೇ ನಮಗೆ ಇತಿಹಾಸ. ಆದರೆ ಇತಿಹಾಸದಿಂದ ಪಾಠ
ಕಲಿಯುವ ಬದಲು ಕೆರಳಿ ಕೆಂಡವಾಗುತ್ತಿದ್ದೇವೆ.
ಮೊನ್ನೆ ಮೈಸೂರಿಗೆ ಹೋಗಿದ್ದಾಗ
ಚಿತ್ರದುರ್ಗದ ಮಿತ್ರ ಶಿವಕುಮಾರ್ ಕೇಳಿದರು; `ಹೈದರಾಲಿ
ಒಳ್ಳೆಯವನೋ ಮದಕರಿ ನಾಯಕನೋ?' ನಾನು ಉತ್ತರಿಸಲಾಗಲಿಲ್ಲ.
`ನಾನೇಕೆ ಈ ಪ್ರಶ್ನೆ ಕೇಳಿದೆನೆಂದರೆ ಹೈದರಾಲಿ
ಪದೇಪದೇ ಚಿತ್ರದುರ್ಗದ ಮೇಲೆ ದಾಳಿ ಮಾಡಿದ್ದಾನೆ. ಒನಕೆ ಓಬವ್ವ ಹೈದರಾಲಿ
ಕಡೆಯವರನ್ನು ಸೆದೆ ಬಡಿದಳು. ನನಗೆ ಹೈದರ್‌ಗಿಂತ ಮದಕರಿ ನಾಯಕ
ಇಷ್ಟ. ಹೈದರ್ ನಮಗೆ ವೈರಿ; ಓಬವ್ವ ನಮಗೆ ಆದರ್ಶ ನಾರಿ.' ಆತನ
ಮಾತೂ ಸರಿ ಎನಿಸಿತು.
ಇತಿಹಾಸಕ್ಕೆ ಎಷ್ಟು ಮುಖಗಳಿವೆ ಅಲ್ಲವೆ?
ಇನ್ನಷ್ಟು
ಎಲ್ಲ
ತತ್ವದ ಎಲ್ಲೆ ಮೀರಿ...
ಮಾಗಿದ
ಮನಸ್ಸು; ಹರೆಯದ ಹುಮ್ಮಸ್ಸು
ಸಿದ್ಧರಾಮಯ್ಯ
ಕಷ್ಟಗಳು ನೂರೆಂಟು...
ಹೊನ್ನ
ರಾಶಿಯಲ್ಲ; ಬೊಗಸೆ ಪ್ರೀತಿ
ನಿಮ್ಮ
ಪತ್ರಿಕೆಯ ಸ್ಪೆಷಾಲಿಟಿ ಏನು?
ಹಾರುವ
ಕುದುರೆಯ ಬೆನ್ನ ಏರಿ ...