ಹೊನ್ನ ರಾಶಿಯಲ್ಲ; ಬೊಗಸೆ ಪ್ರೀತಿ
(೮ ಸೆಪ್ಟೆಂಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಆತ ಬಹು ದೊಡ್ಡ ಕಾದಂಬರಿಕಾರ. ಆತನ
ಬರಹಗಳು ಜನರ ಭಾವನೆಗಳನ್ನು ಕೆಣಕುವುದರ ಜತೆಗೆ, ಪ್ರಖರ
ವೈಚಾರಿಕತೆಯನ್ನು ಹೊಮ್ಮಿಸುತ್ತ ಇಡೀ ಸಾರಸ್ವತ ಲೋಕವನ್ನು
ಬೆರುಗುಗೊಳಿಸಿದ್ದವು. ಅಷ್ಟರವರೆಗೆ ಒಂದು ದಿಕ್ಕಿನಲ್ಲಿ ಸಾಗುತ್ತಿದ್ದ ಮರಾಠಿ
ಸಾಹಿತ್ಯವನ್ನು ತನ್ನ ಐತಿಹಾಸಿಕ ಕಾದಂಬರಿಗಳ ಮೂಲಕ; ಅತ್ಯಂತ
ಆಧುನಿಕ ಚಿಂತನೆಯ ಕ್ರಮದಲ್ಲಿ ಅವುಗಳನ್ನು ವಿಶ್ಲೇಷಿಸುವ ಮೂಲಕ
ಇಡೀ ಮರಾಠಿ ಸಾಹಿತ್ಯದಲ್ಲಿ ತಲ್ಲಣ ಎಬ್ಬಿಸಿದ ಲೇಖಕ. ಇಡೀ ನವ್ಯ ಸಾಹಿತ್ಯಕ್ಕೆ
ಹೊಸ ಭಾಷ್ಯ ಬರೆದ ಹರಿಕಾರ ಎಂಬಂತೆ ಆತನ ಬರಹಗಳ ಜನಪ್ರಿಯತೆ
ಇಡೀ ದೇಶದ ಚರ್ಚೆಗೆ ಒಳಗಾಗಿತ್ತು. ಆತನ ಹೆಸರು ರಣಜಿತ್ ದೇಸಾಯಿ.
ದೇಸಾಯಿ ಮೂಲತಃ ಜಮೀನ್ದಾರಿ ಮನೆತನದಿಂದ
ಬಂದ ಆಗರ್ಭ ಶ್ರೀಮಂತ. ಆಧುನಿಕ ಶಿಕ್ಷಣ, ಹೊಸ ಚಿಂತನೆಯ
ಸವಲತ್ತುಗಳು ದೇಸಾಯಿಗೆ ಸಹಜವಾಗಿಯೇ ದಕ್ಕಿದ್ದವು. ಆತನ
ಕಾದಂಬರಿಗಳಿಗೆ ದೇಶದ ಅತ್ಯುನ್ನತ ಪ್ರಶಸ್ತಿ ದಕ್ಕಿದ್ದು ಆತನ
ಸಿರಿವಂತಿಕೆಯ ಕಾರಣದಿಂದ ಎಂದು ಯಾರೂ ಹೇಳುವಂತಿರಲಿಲ್ಲ. ಪ್ರಭಾವ,
ವಶೀಲಿ ಯಾವುದೂ ಅಗತ್ಯ ಇಲ್ಲದಷ್ಟು ಪ್ರತಿಭಾವಂತಿಕೆ
ಅವರಿಗಿದ್ದುದು ನಿಜ.
ಹತ್ತಾರು ವರ್ಷಗಳ ಬಳಿಕ ದೇಸಾಯಿಯ
ಕೋಟೆಯಂಥ ಮನೆಯ ಒಳಗಿಂದ ಒಂದೊಂದೇ ಸಂಗತಿಗಳು ಹೊರಗೆ
ಇಣುಕಿ ಬರಲಾರಂಭಿಸುತ್ತವೆ. ಅವುಗಳಲ್ಲಿ ಪ್ರಮುಖವಾದುದು ಆತನ ಪತ್ನಿ
ಮಾಧವಿ ದೇಸಾಯಿ ಆತನಿಂದ ವಿಚ್ಛೇದನ ಪಡೆದು ಹೊರಬಂದರು
ಎಂಬುದು. ಪಾಳೇಪಟ್ಟಿನ ಉಕ್ಕಿನ ಕೋಟೆಯಿಂದ ಏಕಾಂಗಿಯಾಗಿ ಹೊರಬಿದ್ದ
ಮಾಧವಿ ದೇಸಾಯಿ ಸೀದಾ ಸಾದಾ ಹೆಂಗಸಿನಂತೆ, ತನ್ನದೇ ಆದ ಸರಳ
ಭಾಷೆಯಲ್ಲಿ ಆತ್ಮಕಥೆ ಬರೆಯತೊಡಗುತ್ತಾರೆ.
ಮಧವಿ ದೇಸಾಯಿ ಬರೆದ ಆತ್ಮಕಥೆಯಲ್ಲಿ ಬರುವ
ರಣಜಿತ್ ದೇಸಾಯಿಯ ಅರಮನೆಯ ಒಂದೊಂದು ಪ್ರಸಂಗವೂ ಜನರ
ಹೃದಯಕ್ಕೆ ಕೊಳ್ಳಿ ಇಟ್ಟಂತಾಗುತ್ತದೆ. ಆಕೆ ಆತನಿಂದ ಬಯಸಿದ್ದು ಸ್ವರ್ಗದ
ಸಿರಿಯನ್ನಲ್ಲ, ಬೊಗಸೆಯಷ್ಟು ಪ್ರೀತಿಯನ್ನು ಮಾತ್ರ. ಆದರೆ
ಅದು ದಕ್ಕದಾದಾಗ ಆಕೆಗೆ ದೇಸಾಯಿಯ ಕೋಟಿ, ಶ್ರೀಮಂತಿಕೆ
ಕಾಲಕಸವಾಗಿತ್ತದೆ. ಇದೆಲ್ಲಾ ಅಕ್ಷರವಾಗಿ ಹೊರ ಹೊಮ್ಮಿದಾಗ ಪುರುಷನೊಬ್ಬನ
ಅಹಮಿಕೆಯ ಪೊಳ್ಳುತನದ ಪರದೆ ಕಳಚಿ ಬೀಳುತ್ತದೆ.
ಇದು `ನಾಚ್‌ಮಾ ಘುಮಾ' ಎಂಬ ಆತ್ಮಕಥೆ ರೂಪುಗೊಂಡ
ವೃತ್ತಾಂತ. ಮರಾಠಿ ಅಕ್ಷರಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ ಮಾಧವಿ
ದೇಸಾಯಿಯವರ ಈ ಆತ್ಮಕಥಾನಕ ಮರಾಠಿಯಲ್ಲಿ ಹೊಸ ಸಂವೇದನೆ
ಸೃಷ್ಟಿಸುತ್ತದೆ. ಮಹಿಳಾ ಚಿಂತನೆಗೆ ಹೊಸ ಅರ್ಥವನ್ನು ಸಾಧ್ಯವಾಗಿಸುತ್ತದೆ.
ಸ್ವಾತಂತ್ರ್ಯಕ್ಕೆ ಬೇರೆಯದೇ ನುಡಿಗಟ್ಟು, ಅರ್ಥ ಬರುತ್ತದೆ.
ಈ ವಾರದ ಮುಖಪುಟದ ಲೇಖನವಾಗಿ ಭಾಮಿನಿ ಬರೆದಿರುವ
`ನಾವು ಹುಡುಗಿಯರೇ ಹೀಗೆ...' ಸಿದ್ಧಪಡಿಸುವಾಗ ಥಟ್ಟನೆ ನೆನಪಿಗೆ
ಬಂದದ್ದು ಮಾಧವಿ ದೇಸಾಯಿ ಕತೆ. ಅಕ್ಷರ ಸಾಮ್ರಾಜ್ಯದ
ಒಳಗಿಂದಲೇ ಚಿಮ್ಮಿದ್ದು ಮಾಧವಿ ಎಂಬ ಕಿಡಿ. ನಮ್ಮೆಲ್ಲರ ಹೆಮ್ಮೆಯ ಲೇಖಕಿ
ಕಮಲಾದಾಸ್, ಪಂಜಾಬ್‌ನ ಅಪ್ರತಿಮ ಬರಹಗಾರ್ತಿ ದಿಲೀಪ್ ಕೌರ್ ತಿವಾನಾರಂಥವರ
ಬರಹಗಳು ನಮಗಿನ್ನೂ ಅರ್ಥವಾಗುತ್ತಿಲ್ಲ. ಅದಿರಲಿ ಕರ್ನಾಟಕದಲ್ಲಿ ಹನ್ನೆರಡನೆಯ
ಶತಮಾನದಲ್ಲೇ ಸ್ವಾಭಿಮಾನದ ಕಿಡಿ ಹೊತ್ತಿಸಿದ, ಎಲ್ಲರ ಆತ್ಮಸಾಕ್ಷಿಗೆ
ಸವಾಲು ಹಾಕಿದ ಅಕ್ಕಮಹಾದೇವಿಯ ಸ್ವಾತಂತ್ರ್ಯದ ಅರ್ಥವನ್ನು ನಾವೆಲ್ಲ
ಮರೆತಿದ್ದೇವೆ.
ಈ ಸಂದರ್ಭದಲ್ಲೂ ಸ್ತ್ರೀ ಸ್ವಾತಂತ್ರ್ಯವನ್ನು
ಸಮಾಜ ಒಪ್ಪುವುದಿಲ್ಲ. ಬೇರೆ ಬೇರೆ ನೆಲೆಯಲ್ಲಿ ಪುರುಷಾಕಾರದ
ಕೋಟೆ ಕಟ್ಟಲು ಯತ್ನಿಸುತ್ತದೆ. ಸ್ವಾತಂತ್ರ್ಯ ಕಲ್ಪನೆಗೂ ಚೌಕಟ್ಟು
ಹಾಕುತ್ತಿದೆ. ಆದರೆ ಈ ತಲೆಮಾರಿನ ಹುಡುಗಿಯರು ಸ್ವಾತಂತ್ರ್ಯ ಬೇಡುತ್ತಿಲ್ಲ.
ಅದನ್ನು ಪಡೆಯುವ ವಿದ್ಯೆ
ಅವರಿಗೂ ಗೊತ್ತಿದೆ.
ಯಾಕೆಂದರೆ
ಇಂದಿನ ಹುಡುಗಿಯರೇ ಹಾಗೆ... ಬೋಲ್ಡ್, ಬ್ಯೂಟಿಫುಲ್.
ಹಾಗೆಯೇ ಶಿಸ್ತುಬದ್ಧ ಪ್ರೊಫೆಷನಲ್ಸ್!
ಇನ್ನಷ್ಟು
ನಿಮ್ಮ
ಪತ್ರಿಕೆಯ ಸ್ಪೆಷಾಲಿಟಿ ಏನು?
ಹಾರುವ
ಕುದುರೆಯ ಬೆನ್ನ ಏರಿ ...